*ಹೊಗಳಿ ಅಟ್ಟಕ್ಕೇರಿಸುವುದು

ಹೊಗಳಿದವರೆನ್ನ ಹೊನ್ನಶೂಲದಲ್ಲಿಕ್ಕಿದರು ಎಂದು ಬಸವಣ್ಣನವರು ಹೇಳಿದ್ದು ಹಲವರಿಗೆ ಗೊತ್ತು. ಕೆಲಸವಾಗಬೇಕು ಎಂದರೆ ಹೊಗಳಬೇಕು ಅಥವಾ ಹೊಗಳಿದರಷ್ಟೇ ಕೆಲಸವಾಗುತ್ತದೆ ಎನ್ನುವ ಕಾಲ ಬಂದಿದೆ. ಇಂಥ ಸಂದರ್ಭದಲ್ಲಿ ಅಪಾತ್ರರಿಗೂ ಹೊಗಳಿಕೆ ಸಂದಾಯವಾಗುತ್ತದೆ.
ಅನೇಕರಿಗೆ ತಮ್ಮನ್ನು ಏಕೆ ಹೊಗಳುತ್ತಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಹೊಗಳಿದಾಗ ಉಬ್ಬಿಬಿಡುತ್ತಾರೆ. ಅಲ್ಲಿಗೆ ಹೊಗಳಿದವರ ಉದ್ದೇಶ ಈಡೇರಿದಂತೆ. ತಮ್ಮನ್ನು ಹೊಗಳಿದಾಗ ಆ ಹೊಗಳಿಕೆಗೆ ಅರ್ಹರಾದವರೆ ತಾವು ಎಂಬ ಆತ್ಮವಿಮರ್ಶೆಯಲ್ಲಿ ಕೆಲವರು ತೊಡಗುತ್ತಾರೆ. ಅದಕ್ಕೆ ತಾವು ಅರ್ಹರು ಎಂದು ಅನ್ನಿಸಿದರೆ ಸಂಭ್ರಮಪಡುತ್ತಾರೆ. ಇಲ್ಲದಿದ್ದರೆ ಅಪಮಾನ ಹೊಂದಿದವರಂತೆ ಕುಗ್ಗುತ್ತಾರೆ. ಇಲ್ಲವೇ ಹೊಗಳಿಕೆ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂಬ ಆತ್ಮಜ್ಞಾನವನ್ನು ಹೊಂದುತ್ತಾರೆ.
ಇಂಥ ಆತ್ಮಜ್ಞಾನ ಬಸವಣ್ಣನವರಿಗೆ ಇದ್ದುದರಿಂದಲೇ ಅವರು ಹೊಗಳಿಕೆಯನ್ನು ಹೊನ್ನಶೂಲ ಎಂದು ಕರೆದುದು. ಶೂಲ ಹೊನ್ನಿನದಾದರೇನು ಕಬ್ಬಿಣದಾದರೇನು? ಅದು ಉಂಟುಮಾಡುವ ನೋವಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗದು. ಹೊಗಳಿಕೆಗಿಂತ ಟೀಕೆಗೆ ಬಸವಣ್ಣ ಮಹತ್ವ ಕೊಟ್ಟರು.