ಆಷಾಢ ಕಳೆದೇ ಬಿಟ್ಟಿತು, ಬಂತು ಶ್ರಾವಣ. ಇನ್ನೇನು ಹಬ್ಬಗಳದೇ ಸುಗ್ಗಿ. ಜಿನುಗುವ ಮಳೆ, ಇಳೆಯೊಡಲಿಗೆ ಹಸಿರ ಉಡುಗೆ, ತಂಪು ಗಾಳಿ. ಪ್ರಕೃತಿಯ ಸಂದಿ ಸಂದಿಗಳಲ್ಲೂ ಜೀವ ಚೈತನ್ಯದ ಚಿಲುಮೆ. ಹೊರಗೆಲ್ಲ ಆಹ್ಲಾದ ತುಂಬಿರಲು ಮನೆಯೊಳಗೂ ಖುಷಿ ಅನ್ನುವುದು ಬೇಡವೆ? ಅದಕ್ಕಾಗಿಯೇ ಸಾಲುಸಾಲು ಹಬ್ಬಗಳು.
ಹಾಗೆ ನೋಡಿದರೆ ಆಷಾಢವೇ ಹಬ್ಬಗಳಿಗೆ ಖೋ ಕೊಟ್ಟಿರುತ್ತದೆ. ಆಷಾಢದ ಅಮಾವಾಸ್ಯೆಯೇ ಅಳಿಯನ ಅಮಾವಾಸ್ಯೆ. ಹೊಸದಾಗಿ ಮದುವೆಯಾದವರಿಗೆ ಇದು ದೊಡ್ಡ ಹಬ್ಬ. ಈ ಹಬ್ಬವನ್ನು ತಪ್ಪಿಸುವ ಅಳಿಯಂದಿರು ಕಡಿಮೆ. ಮಾವನ ಮನೆಗೆ ಹೋಗಿ ಹಬ್ಬದ ಊಟ ಉಂಡು ಉಡುಗೊರೆ ಹೊದ್ದು ಬರುವುದು ಎಂದರೆ ಮನಸ್ಸಿಗೆ ಅದೆಷ್ಟು ಖುಷ್ ಅಲ್ವಾ. ಅಳಿಯತನ ಅನುಭವಿಸಿದವರಿ ಮಾತ್ರ ಈ ಸಮತೋಷ ಗೊತ್ತು. ಅಳಿಯ ಮಗಳು ಬರುವರೆಂದು ಮಾವ, ಅತ್ತೆಗೆ, ಅಕ್ಕ ಭಾವ ಬರುವರೆಂದು ಮನೆಯ ಮಕ್ಕಳಿಗೆ ಸಡಗರವೋ ಸಡಗರ. ಅಳಿಯನ ಅಮಾವಾಸ್ಯೆ, ಅತ್ತೆಗೆ ತಮಾಚೆ, ಮಾವ ದಿವಾಳಿ ಎಂಬ ಪಡೆನುಡಿ ಚಾಲ್ತಿಯಲ್ಲಿದೆ.
ಆಷಾಢ ಖೋ ಕೊಡುವ ಹಬ್ಬಗಳ ಸಾಲು ಒಂದೇ ಎರಡೇ. ಇದು ಹೀಗೇ ಶ್ರಾವಣ, ಭಾದ್ರಪದ, ಅಶ್ವಯುಜ, ಕಾತರ್ಿಕ, ಮಾರ್ಗಶಿರದ ವರೆಗೆ ಮುಂದುವರಿಯುವುದು. ಅಳಿಯನ ಅಮಾವಾಸ್ಯೆಯ ಬಳಿಕ ನಾಗರ ಪಂಚಮಿ, ನುಲು ಹುಣ್ಣಿಮೆ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುಥರ್ಿ, ದಸರಾ, ದೀಪಾವಳಿ, ತುಳಸಿ ಮದುವೆ, ಗೋಪೂಜೆ… ಹೀಗೆ ಸಾಲುಸಾಲು ಹಬ್ಬಗಳು. ಹಬ್ಬಗಳ ಆಚರಣೆಯ ಸಂತಸ ಒಂದು ರೀತಿಯದಾದರೆ ಈ ಹಬ್ಬಗಳಲ್ಲಿ ಮಾಡುವ ತಿನಿಸನ್ನು ಉಣ್ಣುವ, ತಿಂದು ಚಪ್ಪರಿಸುವ ಮಜಾ ಮಜಾ ಮತ್ತೊಂದು ರೀತಿಯದು. ಇಂದಿನ ಫಾಸ್ಟ್ಫುಡ್ ಯುಗದಲ್ಲಿ, ಜಟ್ಪಟ್ ಗಿರಮಿಟ್ ಕಾಲದಲ್ಲಿ, ಇಡ್ಲಿ ದೋಸೆಗಳ ಮಿಶ್ರಣವೂ, ಪುಳಿಯೋಗರದ ಮಸಾಲೆಯೂ ಅಂಗಡಿಗಳಲ್ಲಿ ಸಿಗುವ ಈ ಜಮಾನಾದಲ್ಲಿ ಹಳೆಯ ಕಾಲದ ತಿಂಡಿಗಳು ತಮ್ಮಜನಪ್ರಿಯತೆಯನ್ನೇನೂ ಕಳೆದುಕೊಂಡಿಲ್ಲ. ಕರಾವಳಿ ಭಾಗದಲ್ಲಂತೂ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸುವವರಿಗೆ ಇಂಥ ಹಬ್ಬಕ್ಕೆ ಇಂಥದ್ದೇ ಕಜ್ಜಾಯ ಮಾಡಬೇಕು ಎಂಬ ನಿಯಮವಿದೆ. ಅದನ್ನು ಬಿಟ್ಟು ಬೇರೆ ಮಾಡುವಂತಿಲ್ಲ. ಅದು ತಿಂಡಿಯಲ್ಲ, ಕಜ್ಜಾಯ ಎಂದು ಹೇಳುವುದು ಅರ್ಥಪೂರ್ಣವಾಗಿದೆ.
ಹೀಗೆ ಹಬ್ಬಕ್ಕೆ ಮಾಡುವ ತಿಂಡಿಗಳಲ್ಲಿ ಎರಡು ಥರ. ಒಂದು, ಹಬ್ಬದ ದಿನ ಮಾತ್ರವೇ ಊಟದೊಂದಿಗೆ ತಿಂದು ಮುಗಿಸುವ ಒಂದೇ ದಿನ ತಾಳುವ, ಇಟ್ಟರೆ ಹಳಸಿಹೋಗುವ ತಿಂಡಿಗಳು. ಎರಡನೆಯದು, ಹಬ್ಬಕ್ಕೆಂದು ಮಾಡಿ ಡಬ್ಬದಲ್ಲಿ ತುಂಬಿಟ್ಟು ನೆಂಟರು ಇಷ್ಟರು ಬಮದಾಗ ಕೊಟ್ಟು ಅವರು ತಿನ್ನುವಾಗ ನೋಡಿ, ಅವರಿಂದ ಹೊಗಳಿಕೆ ಕೇಳಿ ಖುಷಿ ಪಡುವುದು.
ಅಳಿಯನ ಅಮಾವಾಸ್ಯೆಗೆ ಸಾಮಾನ್ಯವಾಗಿ ಎಣ್ಣೆಯಲ್ಲಿ ಕರಿದ ತಿನಿಸನ್ನು ಮಾಡುವುದಿಲ್ಲ. ದೋಸೆ ಮತ್ತು ಬೆರೆ ತರಿಸಿದ ಕಾಳಿನ ಹುಳಿ, ಜೊತೆಯಲ್ಲಿ ಬಾಯಿ ಸಿಹಿ ಮಾಡುವುದಕ್ಕೆ ಪಾಯಸ. ಹೆಸರೇನೋ ಪಾಯಸ. ಮೂರೇ ಅಕ್ಷರ. ಆದರೆ ಅದನ್ನು ಮಾಡುವ ಬಗೆ ಮಾತ್ರ ಹದಿನೆಂಟು. ರವೆ ಪಾಯಸ, ಅಕ್ಕಿ ಪಾಯಸ, ಕಡ್ಲೆ ಬೇಳೆ ಪಾಯಸ, ಸಾಬುದಾನಿ ಪಾಯಸ, ಸೌತೆ ಬೀಜದ ಪಾಯಸ, ಹಾಲುಸೋರೆ ಪಾಯಸ, ಪಾಯಸ, ಪಾಯಸ, ಪಾಯಸ… ದೋಸೆಯ ಬದಲಿಗೆ `ಕೊಟ್ಟೆ’ಯನ್ನೂ ಮಾಡುತ್ತಾರೆ. ಕೊಟ್ಟೆ ಎಂದರೆ ಇಡ್ಲಿಗೆ ಮಾಡುವ ಹಾಗೆಯೇ ಹಿಟ್ಟನ್ನು ಬೀಸುತ್ತಾರೆ. ಹಲಸಿನ ಎಲೆಯಿಂದ ಕೊಟ್ಟೆಯನ್ನು ತಯಾರಿಸಿ ಅದರಲ್ಲಿ ಹಿಟ್ಟನ್ನು ತುಂಬಿ ಇಡ್ಲಿ ಪಾತ್ರೆಯಲ್ಲಿಯೇ ಇಟ್ಟು ಬೇಯಿಸುತ್ತಾರೆ. ಹಲಸಿನ ಎಲೆಯ ಮಧ್ಯೆ ಬೇಯುವುದರಿಂದ ಅದಕ್ಕೆ ವಿಶೇಷ ಕಂಪು ಮತ್ತು ರುಚಿ.
ನಾಗರ ಪಂಚಮಿಗೆ ಗೆಣಸಲಿ ಮಾಡಬೇಕು. ಇದಕ್ಕೆ ಪಾನಪತ್ತಾಳಿ, ಸೂಳಿರೊಟ್ಟಿ ಎಂದೂ ಹೇಳುತ್ತಾರೆ. ತೆಂಗಿನ ಕಾಯಿಯ ಹೂರಣ ಮಾಡಿ ಅಕ್ಕಿಯ ಹಿಟ್ಟು ಅಥವಾ ಗೋದಿಯ ಹಿಟ್ಟಿನ ಕಣಕದಲ್ಲಿ ಇಟ್ಟು ಅದನ್ನು ಅರಸಿಣದ ಎಲೆಯ ಮೇಲೆ ಲಟ್ಟಿಸಿ ಹಬೆಯಲ್ಲಿ ಬೇಯಿಸಬೇಕು. ಒಂದೆರಡು ದಿನ ಉಳಿಯುತ್ತದೆ ಅದು. ಇದಲ್ಲದೆ ನಾಗರ ಪಂಚಮಿಗೆ ಎರಡು ಮೂರು ರೀತಿಯ ಉಂಡಿಗಳನ್ನೂ ಮಾಡುತ್ತಾರೆ. ನೂಲುಹುಣ್ಣಿಮೆ ಹಬ್ಬಕ್ಕೆ ಅಕ್ಕಿಯಶ್ಯಾವಿಗೆ, ತೆಂಗಿನ ಕಾಯಿಯ ಹಾಲು ಮಾಡುವ ರಿವಾಜು. ಹೇಳಿಕೇಳಿ ಜನಿವಾರದ ಹಬ್ಬ ಅಲ್ಲವಾ ಅದು. ಜನಿವಾರದಂಥದ್ದೇ ತಿನಿಸು ಮಾಡುವುದು ಅರ್ಥಪೂರ್ಣ.
ಜನ್ಮಾಷ್ಟಮಿಗೆ ಉಂಡಿ, ಪಂಚಖಾದ್ಯ, ರಾಗಿಯ ಮಣ್ಣಿ. ಉಂಡಿಯಲ್ಲೂ ಹತ್ತೆಂಟು ವಿಧ. ನಾಲ್ಕಾರು ದಿನ ಇಟ್ಟು ಬಂದವರಿಗೆ ಕೊಡಲು ಬರುತ್ತದೆ. ಇವೆಲ್ಲ ಹಬ್ಬದ ದಿನವೇ ಮಾಡಿ ಮುಗಿಸಿಬಿಡುವಂಥವು. ಆದರೆ ಗಣೇಶನ ಹಬ್ಬಕ್ಕೆ ತಿನಿಸು ಮಾಡುವುದು ಹಾಗಲ್ಲ. ಇದಕ್ಕೆ ಎಂಟೆಂಟು ದಿನಗಳ ತಯಾರಿಯೇ ನಡೆಯುತ್ತದೆ. ಏಕೆಂದರೆ ಗಣೇಶನ ಹಬ್ಬ ಒಂದೇ ದಿನದ ಹಬ್ಬ ಅಲ್ಲವಲ್ಲಾ.
ಗಣೇಶನ ಹಬ್ಬಕ್ಕೆ ತಿಂಡಿಯನ್ನು ಮಾಡುವಾಗ ಒಬ್ಬೊಬ್ಬರೇ ಮಾಡುವುದಿಲ್ಲ. ನಾಲ್ಕಾರು ಮನೆಯ ಹೆಂಗಸರು ಸೇರಿ ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ತಿಂಡಿಯನ್ನು ಮಾಡುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ನಾಲ್ಕಾರು ಮನೆಯ ಹೆಂಗಸರು ಒಟ್ಟಿಗೆ ಸೇರಿದ ಮೇಲೆ ಕೇಳಬೇಕೆ? ಹತ್ತಾರು ಕಥೆಗಳು ಹುಟ್ಟಿಬರುತ್ತವೆ. ಹಾಡುಗಳು ಹರಿದು ಹೋಗುತ್ತವೆ. ಕೆಲವು ಅತ್ತೆಯರ ಚಾಡಿ ಸೊಸೆಯಂದಿರು, ಸೊಸೆಯಂದಿರ ಚಾಡಿ ಅತ್ತೆಯರು, ನಾದಿನಿಯರ ಚಾಡಿ ಅತ್ತಿಗೆಯಂದಿರು ಹೀಗೆ ಹೇಳಿಕೊಳ್ಳಲು ತೋಡಿಕೊಳ್ಳಲು ಇದೊಂದು ವೇದಿಕೆಯಾಗುತ್ತದೆ. ಬರಿಯ ಚಾಡಿ ಅಂತ ಅಲ್ಲ. ಕೆಲವು ತಮ್ಮ ದುಃಖ ಹೇಳಿಕೊಂಡು ಸಮಾಧಾನವನ್ನೂ ಪಟ್ಟುಕೊಳ್ಳುತ್ತಾರೆ. ಬಾಯಿ ಮಾತನಾಡುತಿದ್ದರೂ ಕೈಯಿಂದ ಕೆಲಸ ಸಾಗಿಯೇ ಇರುತ್ತದೆ. ಅದೇನು ಅಕ್ಕಿಯ ವಡೆಯೋ, ಕೋಡುಬಳೆಯೋ, ಚಕ್ಕುಲಿಯೋ ಒಂದೇ ಎರಡೇ, ಹತ್ತೆಂಟು ಬಗೆಯ ತಿಂಡಿಗಳು. ಅಕ್ಕಿಯ ಹಿಟ್ಟಿನಿಂದ ಮಾಡುವ ಅತ್ರಸ ನೆನೆಸಿಕೊಂಡರೆ ಬಾಯಲ್ಲಿ ನೀರು. ಅವರ ಮನೆಯಲ್ಲಿ ಮಾಡಿದ್ದಕ್ಕಿಂತ ತಮ್ಮ ಮನೆಯಲ್ಲಿ ಮಾಡಿದ್ದು ರುಚಿಯಾಗಿರಬೇಕು ಎಂಬ ಒಣಗಿನ ತುಡಿತ ತಿನಿಸಿಗೆ ಇನ್ನಷ್ಟು ಸವಿಯನ್ನು ಒದಗಿಸುತ್ತದೆ. ಮತ್ತೆ ಹಬ್ಬದ ದಿನ ನವವಿಧ ಅಡುಗೆ ಗಣಪತಿಗೆ. ಅದರಲ್ಲಿ ಅಗ್ರಸ್ಥಾನ ಮೋದಕಕ್ಕೆ. ಅಕ್ಕಿಯ ಮೋದಕ, ಗೋದಿಯ ಮೋದಕ ಹೀಗೆ ಅದರಲ್ಲೂ ಬಗೆಬಗೆ. ಕಡಲೆಬೇಳೆ ಹಾಯಗ್ರ (ಹಯಗ್ರೀವ?) ಚಪ್ಪರಿಸಿಯೇ ರುಚಿಯ ಅನುಭವಿಸಬೇಕು.
ಗಣಪತಿಯ ಹಬ್ಬದ ಬಳಿಕ ಅನಂತನ ನೋಪಿ. ನಂತರದ್ದು ದಸರೆ. ದಸರೆಯ ವೇಳೆಗೆ ದೊಡ್ಡ ಮಳೆ ಕಳೆದಿರುತ್ತದೆ. ಹೊರಗಿನ ವಾತಾವರಣದಲ್ಲಿ ಬದಲಾವಣೆಯಾಗಿರುತ್ತದೆ. ಪ್ರಕೃತಿಯಲ್ಲಿ ಫಲದ ಹೆರಿಗೆಯಾಗಿರುತ್ತದೆ. ಹೊಸ ಫಲದಿಂದ ಅಡುಗೆ ಮಾಡುವುದಕ್ಕೆ ಆದ್ಯತೆ. ಮೊಗೆಕಾಯಿ ಅಥವಾ ಸೌತೆಕಾಯಿ ಬಳಸಿ ಕಡಬು ಮಾಡುವರು. ಇದಕ್ಕೂ ಉಂಡಿಗಳನ್ನು ಮಾಡುವರು. ಜೊತೆಗೆ ಹೋಳಿಗೆ. ಕಾಯಿ ಹೋಳಿಗೆ, ಕಡ್ಲೆ ಹೋಳಿಗೆ, ಶೇಂಗಾ ಹೋಳಿಗೆ ಹೀಗೆ ಹೋಳಿಗೆಯಲ್ಲೂ ವೈವಿಧ್ಯ.
ನಂತರದ್ದು ದೀಪಗಳ ಹಬ್ಬ ದೀಪಾವಳಿ. ಇಲ್ಲಿಯೂ ಕಜ್ಜಾಯ ಮಾಡುವುದರಲ್ಲಿ ವೈವಿಧ್ಯ. ಮಿಂದ ದಿನ ಬಾಳೆಸಣ್ಣಿನ ಸೀಕರಣೆ ಅಥವಾ ರಸಾಯನ ಪ್ರಮೂಖ ತಿನಿಸು. ಜೊತೆಗೆ ಹೋಳಿಗೆ, ಕಡಬು, ನೇರಿಗೆ, ಚಕ್ಕುಲಿ, ಉಂಡೆ ಇತ್ಯಾದಿ ಇತ್ಯಾದಿ.
ಗೋಪೂಜೆಗೆ ಚರು, ತೆಳ್ಳವ್ವ, ಕಾಯಿಹಾಲು ಮತ್ತಿನ್ನೇನೋ. ಆ ಮೇಲೆ ಸಂಕ್ರಾಂತಿ. ಕುಸುರೆಳ್ಳು ಗೊತ್ತೇ ಇದೆಯಲ್ಲ. ಜೊತೆಗೆ ಎಳ್ಳುಂಡೆ.
ಹಬ್ಬಗಳ ಸಂತೆ ಮುಗಿಯಿತು ಅನ್ನುತ್ತಿದ್ದಹಾಗೇ ಜಾತ್ರೆ ತೇರುಗಳ ಸಾಲು. ಅದಕ್ಕಾಗಿ ಮನೆಯಲ್ಲಿ ತಿಂಡಿ ಮಾಡುವವರೂ ಇದ್ದಾರೆ. ಇಲ್ಲ ಅಂಗಡಿಯಿಂದಲೇ ಬೆಂಡು ಬತ್ತಾಸು ಜಿಲೇಬಿ ಇತ್ಯಾದಿ ತಂದು ತಿನ್ನುವರು. ನೆಂಟರಿಷ್ಟರಿಗೆ ತೆಗೆಸಿಕೊಡುವ ಪದ್ಧತಿಯೂ ಇದೆ.
ಹಬ್ಬವಲ್ಲದ ದಿನಗಳಲ್ಲೂ ಮಾಡುವ ತಿಂಡಿಗಳು ಹಬಬ್ದ ವಾತಾವರಣ ಸೃಷ್ಟಿಸಿಬಿಡುತ್ತವೆ. ಕಬ್ಬಿನ ಹಾಲು ಸಿಗುವ ಸಿಗುವ ವೇಳೆಯಲ್ಲಿ ಮುಳಕ ಮಾಡುವರು. ಕಬ್ಬಿನ ಹಾಲಿನಲ್ಲಿ ಅಕ್ಕಿಯನ್ನು ರುಬ್ಬಿ ಮುಳಕದ ಬಂಡಿಯಲ್ಲಿ ಎರಕ ಹೊಯ್ಯುವರು. ಕಬ್ಬಿನ ಹಾಲಿನ ದೋಸೆಯನ್ನೂ ಮಾಡುವರು. ಕಬ್ಬಿನ ಹಾಲಿನಿಂದಲೇ ಮಾಡುವ ಇನ್ನೊಂದು ತಿಂಡಿ ತೊಡೆದೇವು. ಮಡಿಕೆಯ ಬೆನ್ನಿನ ಮೆಲೆ ಇದನ್ನು ಎರೆಯುವರು. ಸಬ್ಬಸಿಗೆ ಸೊಪ್ಪಿನ ದೋಸೆ ಇಡ್ಲಿಯ ರುಚಿಯು ಅಪರೂಪದ್ದೇ.
ಅಂಗಡಿಗಳಲ್ಲಿ ಸಿಗುವ ತಿಂಡಿಯ ಬಗೆಯೇ ಬೇರೆ. ಅದರ ರುಚಿಯೇ ಬೇರೆ. ತಿಂದು ಎದ್ದು ಬರುವಾಗ ಬಿಲ್ಲು ಕೊಡಲು ಜೇಬಿಗೆ ಕೈಹಾಕುತ್ತಿದ್ದಂತೆ ತಿಂದ ರುಚಿ ಮರೆತುಹೋಗಿಬಿಡುತ್ತದೆ. ಆದರೆ ಮನೆಯಲ್ಲಿ ಮಾಡುವ ತಿಂಡಿಗಳಲ್ಲಿ ಇರುವ ರುಚಿಯೇ ರುಚಿ. ಅದರ ಹದವೂ ಬೇರೆ. ಮಾಡುವ ಕೈಗಳಲ್ಲೇನೋ ಮಾಯಕ. ಸಾಕು ಮಾಕು ಎನ್ನುತ್ತಿದ್ದರೂ, `ಇರಲಿ ಇದೊಂದು ನೀಡುವೆ’ ಎನ್ನುವ ಪ್ರೀತಿಯ ಮಾತು ಹೊಟ್ಟೆ ತುಂಬಿದ ಮೇಲೂ ಒಂದೆರಡನ್ನು ಇಳಿಸಿಬಿಡುತ್ತದೆ. ಯಾರು ಎಷ್ಟೇ ನಿಗ್ರಹಿಗಳೆಂದರೂ ನಾಲಿಗೆಯ ದಾಸರೇ ಆಗಿರುತ್ತಾರೆ. ನಾಲಿಗೆ ಬೇಡ ಅಂದಿದ್ದನ್ನು ಸವಿಯುವುದು ಸಾಧ್ಯವೇ? ಓ ನಾಲಿಗೆಯೆ ನಿನ್ನ ಮಹಿಮೆ ಅಪಾರ!