ಮಿಲ್‌ ಕ್ಲೌಸ್‌ ಫುಕ್ಸ್‌ ಜರ್ಮನಿಯ ನಾಗರಿಕ. ಲುಥೆರನ್‌ದ ಪಾಸ್ಟರ್‌ ಒಬ್ಬರ ಮಗ. 1911ರ ಡಿಸೆಂಬರ್‌ 29ರಂದು ಜನಿಸಿದ ಅವರು ಐಸೆನಾಚ್‌ ಎಂಬಲ್ಲಿ ತಮ್ಮ ಒಡಹುಟ್ಟಿದವರೊಂದಿಗೆ ಶಾಲೆಗೆ ಹೋಗಿದ್ದರು. ಅಲ್ಲಿ ಅವರ ತಂದೆಯ ಜನಪ್ರಿಯವಲ್ಲದ ರಾಜಕೀಯ ನಿಲವುಗಳಿಗಾಗಿ ಇವರನ್ನು ರೆಡ್‌ ಫಾಕ್ಸಸ್‌ ಎಂದು ಸ್ನೇಹಿತರು ಹೀಗಳೆಯುತ್ತಿದ್ದರು. ಫುಕ್ಸ್‌ ಎಂಬುದು ಫಾಕ್ಸ್‌ ಎಂಬುದರ ಜರ್ಮನ್‌ ಪದ. ಫುಕ್ಸ್‌ ಲೀಪ್‌ಝಿಗ್‌ ಯುನಿವರ್ಸಿಟಿಗೆ ಹೋಗಿದ್ದರು. ಅವರು ಜರ್ಮನ್‌ ಕಮ್ಯುನಿಸ್ಟ್‌ ಪಾರ್ಟಿಯನ್ನು 1930ರಲ್ಲಿ ಸೇರಿದರು. ನಾಝಿಗಳು ಅಧಿಕಾರಕ್ಕೆ ಬಂದಾಗ ಅವರು 1933ರಲ್ಲಿ ಬಲವಂತವಾಗಿ ಬ್ರಿಟನ್ನಿಗೆ ಪಲಾಯನ ಮಾಡಬೇಕಾಯಿತು. ಅವರು ಎಡಿನ್‌ಬರೋ ಯುನಿವರ್ಸಿಟಿಯಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿಯನ್ನು ಪಡೆದರು. 1939ರಲ್ಲಿ ಎರಡನೆ ಮಹಾಯುದ್ಧ ಆರಂಭವಾದಾಗ ಶತ್ರುದೇಶದ ಪ್ರಜೆ ಎಂದು ಅವರನ್ನು ಬಂಧಿಸಲಾಯಿತು ಮತ್ತು ಅವರನ್ನು ಕೆನಡಾಕ್ಕೆ ಸಾಗಿಸಲಾಯಿತು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಬಳಿಕ ಅವರು 1941ರಲ್ಲಿ ಎಡಿನ್ಬರೋಗೆ ಮರಳಿದರು. ವಿಜ್ಞಾನದಲ್ಲಿಯ ಇವರ ಪರಿಣತಿಯು ಬ್ರಿಟನ್ನಿನ ಮಹತ್ವಾಕಾಂಕ್ಷೆಯ ಪರಮಾಣು ಬಾಂಬ್‌ ಕಾರ್ಯಕ್ರಮ ಟ್ಯೂಬ್‌ ಅಲಾಯ್ಸ್‌ ಯೋಜನೆಗೆ ನೇಮಕಗೊಳ್ಳಲು ನೆರವಾಯಿತು. ಬ್ರಿಟನ್ನಿನ ಈ ಯೋಜನೆಯು ಅಮೆರಿಕದ ಮ್ಯಾನ್‌ಹಟ್ಟನ್‌ ಯೋಜನೆಗೆ ಸರಿಸಮನಾದುದಾಗಿತ್ತು.
1941ರ ನಂತರದ ಭಾಗದಲ್ಲಿ ಜರ್ಮನಿಯು ಸೋವಿಯತ್‌ ಒಕ್ಕೂಟದ ಮೇಲೆ ದಾಳಿ ಮಾಡಿದಾಗ ಫುಕ್ಸ್‌ ದೇಶಭ್ರಷ್ಟರಾಗಿದ್ದ ಜರ್ಮನಿಯ ಕಮ್ಯುನಿಸ್ಟ್‌ ಪ್ರಮುಖ ಜರ್ಗನ್‌ ಕುಜಿನ್‌ಸ್ಕಿಯನ್ನು ಸಂಪರ್ಕಿಸಿದರು. ರಷ್ಯಾಕ್ಕೆ ಟ್ಯೂಬ್‌ ಅಲಾಯ್ಸ್‌ ಯೋಜನೆಯ ಮಾಹಿತಿಯನ್ನು ಒದಗಿಸುವುದಾಗಿ ಹೇಳಿದರು. ಈ ಮೂಲಕ ಅವರು ರಷ್ಯಾದ ಬೇಹುಗಾರಿಕೆ ಸಂಸ್ಥೆ ಜಿಆರ್‌ಯುದ ಸಂಪರ್ಕಕ್ಕೆ ಬಂದರು. ರಷ್ಯಾಕ್ಕೆ ಪರಮಾಣು ಬಾಂಬ್‌ ಮಾಹಿತಿಯನ್ನು ನೀಡುತ್ತ ಬಂದರು.
ಫುಕ್ಸ್‌ ಇದನ್ನು ನಂತರ ಸಮರ್ಥಿಸಿಕೊಳ್ಳುತ್ತಾರೆ. ಪರಮಾಣು ಬಾಂಬ್‌ ಯೋಜನೆಯ ಬಗ್ಗೆ ತಿಳಿದುಕೊಳ್ಳುವುದು ಸೋವಿಯತ್‌ನ ಹಕ್ಕಾಗಿತ್ತು ಎಂಬ ನಂಬಿಕೆಯು ತಮ್ಮನ್ನು ಹೀಗೆ ಮಾಡುವುದಕ್ಕೆ ಪ್ರೇರೇಪಿಸಿತು ಎಂದು ಹೇಳಿಕೊಂಡರು. 1950ರಲ್ಲಿ ಎಂಐ5ನ ಪ್ರಧಾನ ನಿರ್ದೇಶಕರಾದ ಡಿಕ್‌ ವೈಟ್‌ ಈ ಹೇಳಿಕೆಯನ್ನು ತಿರಸ್ಕರಿಸುತ್ತಾರೆ. ಹಣಕ್ಕೋಸ್ಕರವೇ ಹೀಗೆ ಮಾಡಿದ್ದು, ಫುಕ್ಸ್‌ ರೀತಿ ಹಲವರು ಹೀಗೆ ಮಾಡಿದ್ದಾರೆ ಎಂದು ಹೇಳಿದರು. ಆದರೆ ಫುಕ್ಸ್‌, ಅಮೆರಿಕ ಮತ್ತು ಬ್ರಿಟನ್‌ ಪ್ರಮುಖ ಮಾಹಿತಿಯೊಂದನ್ನು ತಮ್ಮೊಂದಿಗೆ ಜೊತೆಯಾಗಿ ಸಮಾನ ವೈರಿಯ ವಿರುದ್ಧ ಹೋರಾಡುತ್ತಿರುವ ದೇಶವೊಂದರಿಂದ ಮುಚ್ಚಿಟ್ಟಿದ್ದು ಸರಿಯಲ್ಲ ಎಂದು ಹೇಳಿದರು.
ಸೋವಿಯತ್‌ಗಾಗಿ ಬೇಹುಗಾರಿಕೆ-
ಫುಕ್ಸ್‌ಗೆ ರೆಸ್ಟ್‌ ಎಂಬ ಸಂಕೇತ ನಾಮವನ್ನು ನೀಡಲಾಗಿತ್ತು. ಸೋನ್ಯಾ ಎಂಬ ಸಂಕೇತ ಹೆಸರಿನ ಜಿಆರ್‌ಯು ಏಜೆಂಟ್‌ ಉರ್ಸುಲಾ ಬೆರ್ಟನ್‌ ಎಂಬವನ ಸಂಪರ್ಕವನ್ನು ಫುಕ್ಸ್‌ಗೆ ಒದಗಿಸಲಾಯಿತು. ಇವರಿಬ್ಬರೂ ನಿಯಮಿತವಾಗಿ ಬ್ಯಾನ್‌ಬರಿ, ಆಕ್ಸ್‌ಫರ್ಡ್‌ಷೈರ್‌ನಲ್ಲಿ ಭೇಟಿಯಾಗುತ್ತಿದ್ದರು. ಅಲ್ಲಿ ಫುಕ್ಸ್‌ ರಹಸ್ಯ ದಾಖಲೆಗಳನ್ನು ಬೆರ್ಟನ್‌ಗೆ ನೀಡುತ್ತಿದ್ದರು. 1943ರಲ್ಲಿ ಫುಕ್ಸ್‌ರನ್ನು ಬ್ರಿಟಿಷ್‌ ವಿಜ್ಞಾನಿಗಳ ತಂಡದ ಸದಸ್ಯರನ್ನಾಗಿ ಮ್ಯಾನ್‌ಹಟ್ಟನ್‌ ಯೋಜನೆಯನ್ನು ಸೇರುವುದಕ್ಕೆ ಕಳುಹಿಸಲಾಯಿತು. ಮುಂದಿನ ಮೂರು ವರ್ಷಗಳ ವರೆಗೆ ಆ ಯೋಜನೆಯಲ್ಲಿ ಫುಕ್ಸ್‌ ಮಹತ್ವದ ಕೆಲಸವನ್ನು ಮಾಡಿದರು. ಹಲವು ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿದರು. ಹಲವು ಸಮೀಕರಣಗಳು ಮತ್ತು ತಂತ್ರಜ್ಞಾನಗಳನ್ನು ಪ್ರಥಮ ಪರಮಾಣು ಬಾಂಬನ್ನು ಸಿದ್ಧಪಡಿಸುವಲ್ಲಿ ಕಂಡುಹಿಡಿದರು. ಪ್ರಥಮ ಹೈಡ್ರೋಜನ್‌ ಬಾಂಬ್‌ ಮಾದರಿಗಳನ್ನು ಸಿದ್ಧಪಡಿಸುವಲ್ಲಿಯೂ ಫುಕ್ಸ್‌ ಅವರ ಕೊಡುಗೆ ಗಣನೀಯವಾಗಿಯೇ ಇದ್ದಿತ್ತು.
ಈ ಅವಧಿಯಲ್ಲಿ ಫುಕ್ಸ್‌ ಅವರು ರೇಮಂಡ್‌ ಎಂಬ ಸಂಕೇತ ಹೆಸರಿನ ಜಿಆರ್‌ಯು ಏಜೆಂಟ್‌ನ ಸಂಪರ್ಕದಲ್ಲಿದ್ದರು. ಈ ಏಜೆಂಟ್‌ ಒಬ್ಬ ಅಮೆರಿಕದ ನಾಗರಿಕ ಆಗಿದ್ದನು. ಹೆಸರು ಹ್ಯಾರಿ ಗೋಲ್ಡ್‌. ಸಂಕೇತ ನಾಮ ಗಸ್‌ (ರಷ್ಯಾದಲ್ಲಿ ಇದರ ಅರ್ಥ ಗೂಸ್‌). ಆತ 1934ರಿಂದಲೂ ಸೋವಿಯತ್‌ಗಾಗಿ ಕೆಲಸ ಮಾಡುತ್ತಿದ್ದನು. ನ್ಯೂಯಾರ್ಕ್‌ ಸಿಟಿ ಮತ್ತು ಸಾಂಟಾ ಫೆ, ನ್ಯೂ ಮೆಕ್ಸಿಕೋ ಮೊದಲಾದವುಗಳಲ್ಲಿ ಇವರು ಹಲವು ಬಾರಿ ಭೇಟಿಯಾಗಿದ್ದರು. ಅಲ್ಲಿ ಫುಕ್ಸ್‌ ಪರಮಾಣು ಬಾಂಬ್‌ನ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ, ವಿನ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿದ್ದರು. ಇತರ ಕಡೆಗಳಿಂದಲೂ ಮಾಹಿತಿಯನ್ನು ಕಲೆಹಾಕಿದ್ದ ರಷ್ಯಾಕ್ಕೆ ತನ್ನ ಪರಮಾಣು ಬಾಂಬ್‌ ಯೋಜನೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವುದಕ್ಕೆ ಇದರಿಂದ ಸಹಾಯವಾಯಿತು. ರಷ್ಯಾ ತಯಾರಿಸಿದ ಪರಮಾಣು ಬಾಂಬ್‌ ಅಮೆರಿಕದ ಪರಮಾಣು ಬಾಂಬ್‌ನ ವಿನ್ಯಾಸದ ಪ್ರತಿರೂಪವಾಗಿತ್ತು.
ಫುಕ್ಸ್‌ 1946ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿದಾಗ ಹಾರ್ವೆಲ್‌ನಲ್ಲಿದ್ದ ಇಂಗ್ಲೆಂಡ್‌ ಪರಮಾಣು ಶಕ್ತಿ ಸಂಶೋಧನ ಸಂಸ್ಥೆಯಲ್ಲಿ ಪ್ರತಿಷ್ಠಿತ ಹುದ್ದೆಯನ್ನು ನೀಡಲಾಯಿತು. ಅಲ್ಲಿ ಅವರು ಪರಮಾಣು ಇಂಧನವನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದರು. ಆ ಕೇಂದ್ರದ ಮಹತ್ವ ಮತ್ತು ರಹಸ್ಯ ಎಷ್ಟು ಮುಖ್ಯವಾಗಿತ್ತೆಂದರೆ ಅದನ್ನು ಸಂಕ್ಷಿಪ್ತವಾಗಿ ದಿ ಹೋಲಿ ಆಫ್ ಹೋಲೀಸ್‌ ಎಂದು ಕರೆಯಲಾಗುತ್ತಿತ್ತು. ಸುರಕ್ಷತೆಯನ್ನು ತೀವ್ರ ಹೆಚ್ಚಿಸಲಾಗಿತ್ತು. ಎಂಐ5 ಫುಕ್ಸ್‌ ಅವರ ದಾಖಲೆಗಳನ್ನು ಪರಿಶೀಲಿಸಿತು. ಯುದ್ಧಪೂರ್ವದಲ್ಲಿ ಅವರು ಕಮ್ಯುನಿಸ್ಟ್‌ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು ಎಂಬುದನ್ನು ಕಂಡುಕೊಂಡಿತು. ಆದರೆ ಅವರನ್ನು ಸಂಶಯಿಸುವಂಥದ್ದು ಏನೂ ಕಂಡುಬರಲಿಲ್ಲ. ಅಂತಿಮವಾಗಿ 1949ರಲ್ಲಿ ಅವರ ರಹಸ್ಯವನ್ನು ಬಯಲುಮಾಡುವವರೆಗೂ ಅವರು ಬೇಹುಗಾರಿಕೆ ಕೆಲಸವನ್ನು ಮುಂದುವರಿಸಿಯೇ ಇದ್ದರು.
ಸೋವಿಯತ್‌ ಸುರಕ್ಷತೆಯಲ್ಲಿಯ ಲೋಪದ ಕಾರಣವಾಗಿಯೇ ಫುಕ್ಸ್‌ ಬಂಧನಕ್ಕೆ ಒಳಗಾಗಬೇಕಾಯಿತು. ಇಂಗ್ಲೆಂಡ್‌ ಮತ್ತು ಅಮೆರಿಕಗಳು ಸೋವಿಯತ್‌ನ ರಹಸ್ಯ ಸಂಕೇತಗಳನ್ನು ಭೇದಿಸುವುದಕ್ಕಾಗಿ ವೆನೋನಾ ಎಂಬ ಸಂಕೇತ ನಾಮದ ಯೋಜನೆಯೊಂದನ್ನು 1943ರಿಂದಲೇ ಆರಂಭಿಸಿತ್ತು. ಸೋವಿಯತ್‌ನ ಸುಭದ್ರವಲ್ಲದ ಸುರಕ್ಷಾ ವ್ಯವಸ್ಥೆಯು ಅದರ ಹಲವು ಸಂಕೇತಗಳನ್ನು ಅಮೆರಿಕವು ಭೇದಿಸಲು ಅನುಕೂಲವಾಯಿತು. ಇದರಲ್ಲಿ ಕೆಲವು ಫುಕ್ಸ್‌ ಅವರು ಗೋಲ್ಡ್‌ ಜೊತೆ ಮಾಡಿದ ಭೇಟಿಯ ವಿವರಗಳನ್ನು ಒಳಗೊಂಡಿತ್ತು. ಇದರಿಂದಾಗಿ ಮ್ಯಾನ್‌ಹಟ್ಟನ್‌ ಯೋಜನೆಯಲ್ಲಿ ಸೋವಿಯತ್‌ನ ಒಬ್ಬ ದೊಡ್ಡ ಬೇಹುಗಾರನೇ ಇದ್ದಾನೆ ಎಂಬುದು ಅಮೆರಿಕಕ್ಕೆ ಖಚಿತವಾಯಿತು. ಆ ವ್ಯಕ್ತಿ ಯಾರು ಎಂಬುದನ್ನು ಕಂಡುಹಿಡಿಯುವುದು ಇಂಗ್ಲೆಂಡ್‌ ಮತ್ತು ಅಮೆರಿಕದ ತನಿಖೆಯ ಕೇಂದ್ರ ವಿಷಯವಾಯಿತು. ಆರಂಭದಲ್ಲಿ ರೆಸ್ಟ್‌ ಎಂಬ ಸಂಕೇತ ನಾಮದ ಏಜೆಂಟ್‌ ಫುಕ್ಸ್‌ ಎನ್ನುವುದಕ್ಕೆ ಅವರಿಗೆ ಯಾವುದೇ ಪುರಾವೆ ಸಿಗಲಿಲ್ಲ. ಅನುಮಾನಿತರನ್ನು ಕಡಿಮೆಗೊಳಿಸುತ್ತ ಬಂದಾಗ ಉಳಿದವರು ಇಬ್ಬರೇ ಆಗಿದ್ದರು. ಒಬ್ಬರು ಸ್ವತಃ ಫುಕ್ಸ್‌, ಮತ್ತೊಬ್ಬರು ಜರ್ಮನ್‌ ಸಂಜಾತ ವಿಜ್ಞಾನಿ ರುಡಾಲ್ಫ್‌ ಪಿಯರ್ಲ್ಸ್‌. 1949ರ ವೇಳೆಗೆ ಆ ಕಳಂಕಿತ ಫುಕ್ಸ್‌ ಎಂಬುದು ಸ್ಪಷ್ಟವಾಗಿಹೋಗಿತ್ತು.
ಒತ್ತಡ ತಂತ್ರ-
ಫುಕ್ಸ್‌ರನ್ನು ಶಿಕ್ಷೆಗೆ ಗುರಿಪಡಿಸಲು ವೆನೋನಾದಿಂದ ದೊರೆತ ಪುರಾವೆಗಳನ್ನು ಬಳಸಿಕೊಳ್ಳುವುದು ಸಾಧ್ಯವಿರಲಿಲ್ಲ. ಏಕೆಂದರೆ ವೆನೋನಾ ಎಂಬುದು ಅತ್ಯಂತ ರಹಸ್ಯದ ಯೋಜನೆಯಾಗಿತ್ತು. ಅಲ್ಲಿ ದೊರೆತ ಸಂಭಾಷಣೆಗಳನ್ನು ನ್ಯಾಯಾಲಯದಲ್ಲಿ ಬಹಿರಂಗಪಡಿಸುವಂತಿರಲಿಲ್ಲ. 1949ರ ಜುಲೈದಿಂದ ಎಂಐ5 ಫುಕ್ಸ್‌ರ ದೂರವಾಣಿ ಸಂಭಾಷಣೆಗಳನ್ನುಕೇಳಿಸಿಕೊಳ್ಳುವುದು, ಪತ್ರಗಳನ್ನು ಓದಿ ನೋಡುವುದನ್ನು ಆರಂಭಿಸಿತು. ಆದರೆ ಅವುಗಳಲ್ಲೆಲ್ಲೂ ಅವರ ಮೇಲೆ ಆರೋಪ ಹೊರಿಸುವಂಥದ್ದು ಏನೂ ಸಿಗಲಿಲ್ಲ. ಆಗ ಫುಕ್ಸ್‌ ತಾವೇ ತಪ್ಪನ್ನು ಒಪ್ಪಿಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರುವುದಕ್ಕೆ ನಿರ್ಧರಿಸಿತು.
ಈ ಕೆಲಸಕ್ಕೆ ಮಾಜಿ ಪೊಲೀಸ್‌ ಸ್ಪೆಶಿಯಲ್‌ ಬ್ರ್ಯಾಂಚ್‌ ಆಫೀಸರ್‌ ವಿಲಿಯಂ ಜಿಮ್‌ ಸ್ಕಾರ್‌ಡೊನ್‌ ಅವರನ್ನು ಆಯ್ಕೆ ಮಾಡಲಾಯಿತು. ಕಮ್ಯುನಿಸ್ಟ್‌ ನಿಯಂತ್ರಣದಲ್ಲಿದ್ದ ಪೂರ್ವ ಜರ್ಮನಿಯಲ್ಲಿ ಲೀಪ್‌ಝಿಗ್‌ ಯುನಿವರ್ಸಿಟಿಯಲ್ಲಿ ಫುಕ್ಸ್‌ ತಂದೆ ವಾಸಿಸುತ್ತಿದ್ದರು. ಅವರಿಗೆ ಒಂದು ಪತ್ರವನ್ನು ಕಳುಹಿಸಲಾಯಿತು. ಆ ಪತ್ರವನ್ನು ಅವರು ಸ್ವೀಕರಿಸುತ್ತಾರೆ. ಇದರಿಂದ ಫುಕ್ಸ್‌ಗೆ ಸುರಕ್ಷಾ ಸಮಸ್ಯೆಗಳು ತಲೆದೋರುತ್ತವೆ. ಆ ಪತ್ರದಲ್ಲಿರುವ ವಿಷಯವನ್ನು ಅವರು ಹಾರ್ವೆಲ್‌ನಲ್ಲಿರುವ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಈ ಮೂಲಕ ಸ್ಕಾರ್‌ಡೊನ್‌ ಈ ವಿಜ್ಞಾನಿಯ ವೈಯಕ್ತಿಕ ಜೀವನದ ಕುರಿತು ಚರ್ಚಿಸಲು ಸರಣಿ ಸಭೆಗಳನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಂಡರು.
ಹಲವು ತಿಂಗಳುಗಳ ಸಂಪರ್ಕದ ಬಳಿಕ ಸ್ಕಾರ್‌ಡೊನ್ ನಿಧಾನವಾಗಿ ಫುಕ್ಸ್‌ ಅವರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 1949ರ ಡಿಸೆಂಬರ್‌ ಹೊತ್ತಿಗೆ ಎಐ5ಗೆ ಗೊತ್ತಿದ್ದ ಬೇಹುಗಾರಿಕೆ ವಿಷಯದಲ್ಲಿ ಅವರೊಂದಿಗೆ ಚರ್ಚಿಸುವ ಮಟ್ಟಕ್ಕೆ ಈ ವಿಶ್ವಾಸ ಬೆಳೆದಿತ್ತು. ಫುಕ್ಸ್‌ ಆರಂಭದಲ್ಲಿ ಆರೋಪಗಳನ್ನು ನಿರಾಕರಿಸಿದರು. ಆದರೆ ಒಂದು ತಿಂಗಳ ಬಳಿಕ ಅವರು ಸ್ಕಾರ್‌ಡೊನ್‌ಗೆ ತಮ್ಮ ಆತ್ಮಸಾಕ್ಷಿಯು ತಾವು ಪರಿಶುದ್ಧ ಎಂದು ಸಾಬೀತುಪಡಿಸಬಲ್ಲುದು ಎಂದು ಹೇಳಿದರು. ಫುಕ್ಸ್‌ ತಮ್ಮ ವಿಚಾರಣಾಧಿಕಾರಿಗೆ ಸುದೀರ್ಘವಾದ ಹೇಳಿಕೆಯನ್ನು ನೀಡಿದರು. ಅದು ಭಾಗಶಃ ತಪ್ಪೊಪ್ಪಿಗೆಯಂತೆ ಇದ್ದಿತ್ತು. 1942ರಿಂದ ತಾವು ಸೋವಿಯತ್‌ ಪರವಾಗಿ ಬೇಹುಗಾರಿಕೆಯನ್ನು ನಡೆಸುತ್ತಿರುವುದಾಗಿಯೂ, ಅದರಲ್ಲಿ ಪ್ರಮುಖವಾದದ್ದು ತಾವು ಪರಮಾಣು ಬಾಂಬ್‌ ಯೋಜನೆಯ ವಿವರಗಳನ್ನು ನೀಡಿರುವುದೂ ಸೇರಿದೆ ಎಂದು ಹೇಳಿದರು. ಆದರೆ ತಮ್ಮದು ಬೇಹುಗಾರಿಕೆಯ ಕೆಲಸವಾಗಿತ್ತು ಎಂಬುದನ್ನು ಹಲವು ನೆಲೆಗಳಲ್ಲಿ ಅವರು ನಿರಾಕರಿಸಿದರು. ಅಧಿಕೃತ ರಹಸ್ಯಗಳ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರನ್ನು ಅಲ್ಪ ಅವಧಿಯ ವಿಚಾರಣೆಗೆ ಒಳಪಡಿಸಲಾಯಿತು. ಎಷ್ಟು ಅಲ್ಪ ಅವಧಿ ಎಂದರೆ 90 ನಿಮಿಷಗಳಿಗೂ ಕಡಿಮೆ. ಅವರ ತಪ್ಪಿಗೆ ಆ ಕಾಯ್ದೆಯಲ್ಲಿ ವಿಧಿಸಬಹುದಾದ ಅತ್ಯಧಿಕ ಶಿಕ್ಷೆ ಹದಿನಾಲ್ಕ ವರ್ಷಗಳ ಜೈಲುವಾಸವನ್ನು ವಿಧಿಸಲಾಯಿತು. ಆಗ ರಷ್ಯಾ ಇನ್ನೂ ಅಮೆರಿಕದ ಮಿತ್ರ ದೇಶಗಳ ಪಟ್ಟಿಯಲ್ಲಿಯೇ ಇತ್ತು. ಈ ಪ್ರಕರಣದಿಂದಾಗಿ ಫುಕ್ಸ್‌ ಅವರ ಬ್ರಿಟಿಷ್‌ ನಾಗರಿಕತ್ವವನ್ನು ಕಿತ್ತುಕೊಳ್ಳಲಾಯಿತು. ಬ್ರಿಟನ್ನಿನ ಹೈಡ್ರೋಜನ್‌ ಬಾಂಬ್‌ ಯೋಜನೆಯ ಮುಖ್ಯಸ್ಥ ಸರ್‌ ವಿಲಿಯಂ ಪೆನ್ನಿಯವರು 1952ರಲ್ಲಿ ಫುಕ್ಸ್‌ರನ್ನು ಜೈಲಿನಲ್ಲಿ ಭೇಟಿ ಮಾಡಿದ್ದರು. ಒಂಬತ್ತು ವರ್ಷ ನಾಲ್ಕು ತಿಂಗಳುಗಳ ಜೈಲುವಾಸದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.
ಫುಕ್ಸ್‌ ಬೇಹುಗಾರಿಕೆ ಪ್ರಕರಣದಿಂದಾಗಿ ಬ್ರಿಟನ್ನಿಗೆ ಅಮೆರಿಕ ನಿರ್ಮಿತ ಪರಮಾಣು ಬಾಂಬನ್ನು ನೀಡುವ ಆಂಗ್ಲೋ-ಅಮೇರಿಕನ್‌ ಯೋಜನೆಯು ರದ್ದಾಯಿತು. ಬಿಡುಗಡೆ ಬಳಿಕ ಫುಕ್ಸ್‌ ಅವರು ಪೂರ್ವ ಜರ್ಮನಿಗೆ ಹೋದರು. ಅಲ್ಲಿ ಅವರು ವಿಜ್ಞಾನಗಳ ಅಕಾಡೆಮಿಗೆ ಮತ್ತು ಎಸ್‌ಇಡಿಯ ಕೇಂದ್ರ ಸಮಿತಿಗೆ ಆಯ್ಕೆಯಾದರು. ಅವರು ರೋಸೆನ್‌ಡರ್ಫ್‌ನಲ್ಲಿದ್ದ ಇನ್ಸ್‌ಟಿಟ್ಯೂಟ್‌ ಫಾರ್‌ ನ್ಯೂಕ್ಲಿಯರ್‌ ರಿಸರ್ಚ್‌ನ ಡೆಪ್ಯೂಟಿ ಡೈರೆಕ್ಟರ್‌ ಎಂದು ನೇಮಕಗೊಂಡರು. ಅದೇ ಹುದ್ದೆಯಲ್ಲಿ ಅವರು 1979ರಲ್ಲಿ ನಿವೃತ್ತರಾದರು. ಫುಕ್ಸ್‌ ಅವರು ಕ್ವಿಯಾನ್‌ ಸಾನ್‌ಕ್ವಿಯಾಂಗ್‌ ಮತ್ತು ಚೀನಾದ ಇತರ ಭೌತಶಾಸ್ತ್ರಜ್ಞರಿಗೆ ನೀಡಿದ ಟ್ಯುಟೋರಿಯಲ್‌ನಿಂದ ಚೀನಾ ಐದು ವರ್ಷಗಳ ಬಳಿಕ ತನ್ನ ಪ್ರಥಮ ಪರಮಾಣು ಬಾಂಬ್‌ ಸಿದ್ಧಪಡಿಸುವುದಕ್ಕೆ ನೆರವಾಯಿತು.
ಫುಕ್ಸ್‌ 1959ರಲ್ಲಿ ವಿದ್ಯಾರ್ಥಿ ಕಮ್ಯುನಿಸ್ಟ್‌ ಆಗಿದ್ದ ಕಾಲದಿಂದ ಸ್ನೇಹಿತೆಯಾಗಿದ್ದ ಮಾರ್ಗರೆಟೆ ಕೆಲ್ಸನ್‌ ಅವರನ್ನು ಮದುವೆಯಾದರು. ಅವರಿಗೆ ಪೆಟ್ರಿಯಾಟಿಕ್ ಆರ್ಡರ್‌ ಆಫ್‌ ಮೆರಿಟ್‌, ದಿ ಆರ್ಡರ್‌ ಆಫ್‌ ದಿ ಕಾರ್ಲ್‌ಮಾರ್ಕ್ಸ್‌ ಮತ್ತು ಪೂರ್ವ ಜರ್ಮನಿಯ ರಾಷ್ಟ್ರೀಯ ಪ್ರಶಸ್ತಿಗಳು ದೊರೆತಿದ್ದವು. ಒಬ್ಬ ಮಹಾನ್‌ ವಿಜ್ಞಾನಿಯಾಗಿ ತಾನು ನಂಬಿದ ತತ್ವಗಳಿಗಾಗಿ ಬೇಹುಗಾರಿಕೆ ನಡೆಸಿದ ಫುಕ್ಸ್‌ 1988ರ ಜನವರಿ 28ರಂದು ಬರ್ಲಿನ್‌ನಲ್ಲಿ ನಿಧನರಾದರು.