ಕನ್ನಡದಲ್ಲಿ ಹನಿಗವನಗಳು ಸಾಹಿತ್ಯದ ಒಂದು ಪ್ರಕಾರವಾಗಿ ಈಗಾಗಲೆ ಮನ್ನಣೆಯನ್ನು ಪಡೆದುಕೊಂಂಡಿವೆ. ಯಾವುದೋ ಒಂದು ಸುಂದರ ಕ್ಷಣವನ್ನು ಪಕ್ಕನೆ ಹಿಡಿದು ಅಕ್ಷರಗಳಲ್ಲಿ ಮೂಡಿಸುವುದಕ್ಕೆ ವಿಶೇಷ ಪ್ರತಿಭೆಯೇ ಬೇಕು. ಸಂಸ್ಕೃತ ಸಾಹಿತ್ಯದಲ್ಲಿ ಮುಕ್ತಕಗಳ ಪರಂಪರೆಯೇ ಇದೆ. ರಾಮಾಯಣದಂಥ ಮಹಾಕಾವ್ಯವನ್ನೇ ಅನುಷ್ಟುಪ್ ಎಂಬ ದ್ವಿಪದಿಯ ಛಂದಸ್ಸಿನಲ್ಲಿ ಬರೆಯಲಾಗಿದೆ. ಸುಭಾಷಿತಗಳ ದೊಡ್ಡ ಗಣಿಯೇ ಅಲ್ಲಿದೆ. ಉರ್ದುದಲ್ಲಿಯೂ ಇಂಥ ಹನಿಗವನಗಳ ಪರಂಪರೆ ಇದೆ. ಕನ್ನಡದಲ್ಲಿಯೂ ಭಾವನೆಗಳನ್ನು ಆರೆಂಟು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ನಡೆದಿದೆ. ಜಪಾನಿನ ಹೈಕುಗಳ ಪ್ರಭಾವ ಇದರ ಮೇಲಿದೆ. ಈ ಪ್ರಭಾವ ಅವುಗಳ ಸ್ವರೂಪದ ಮೇಲಷ್ಟೆ. ಅದರ ತಿರುಳು ಮಾತ್ರ ಈ ನೆಲದ್ದೇ ಆಗಿದೆ. ಬಹಳ ವರ್ಷಗಳ ಕಾಲ ನ್ಯಾಯಾಂಗದ ಸೇವೆಯಲ್ಲಿದ್ದು ಈಗ ನಿವೃತ್ತಾಗಿರುವ ಜಿನದತ್ತ ದೇಸಾಯಿಯವರ ಸಮಗ್ರ ಹನಿಗವನಗಳ ಸಂಕಲನ ‘ಸಹಸ್ರ ಚಂದ್ರ’ ಇದೀಗ ಬಂದಿದೆ. ಅವರಿಗೆ ಎಂಬತ್ತು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಈ ಕೃತಿ ಬಂದಿರುವುದು ಹಾಗೂ ಅದರಲ್ಲಿ ಸಾವಿರ ಹನಿಗವನಗಳಿರುವುದು ವಿಶೇಷವಾಗಿದೆ. ಇಲ್ಲಿಯ ಹನಿಗವನಗಳಲ್ಲಿ ವಿಷಯ ವೈವಿಧ್ಯವಿದೆ. ಜಿನದತ್ತ ದೇಸಾಯಿಯವರು ಕಣವಿ, ಶಿವರುದ್ರಪ್ಪ ಮೊದಲಾದವರು ಕಾವ್ಯಕೃಷಿಯಲ್ಲಿ ತೊಡಗಿದ ಸಮಯದಲ್ಲಿಯೇ ತಾವೂ ಕನವಗಳನ್ನು ಬರೆಯಲು ಆರಂಭಿಸಿದ್ದರು. ನ್ಯಾಯಾಂಗ ಇಲಾಖೆಯಲ್ಲಿ ಅವರು ಕೆಲಸಕ್ಕೆ ಸೇರಿದ ಬಳಿಕ ಜನಸಾಮಾನ್ಯರೊಂದಿಗೆ ಅವರ ಒಡನಾಟ ಸ್ವಲ್ಪ ಕಡಿಮೆಯಾಯಿತು. ನಿವೃತ್ತಿಯ ಬಳಿಕ ಅವರು ತಮ್ಮ ಕಾವ್ಯಕೃಷಿಗೆ ಮರಳಿದರು. ಈಗ ಬಂದಿರುವ ಫಸಲು ಘನವಾಗಿಯೇ ಇದೆ. ಹನಿಗವನಗಳು ಹರೆಯದವರಿಗೆ ಪ್ರೇಮದ ಅಭಿವ್ಯಕ್ತಿಯಾದರೆ, ಸಾಮಾಜಿಕ ಕಾಳಜಿ ಇರುವವರಿಗೆ ಅದೊಂದು ಬದಲಾವಣೆಯ ಸಾಧನ. ಸಮಾಜದ ಕೊಳೆಯನ್ನು ತೊಳೆಯಬೇಕು ಎನ್ನುವವರಿಗೆ ಹನಿಯೂ ಹೊಳೆಯೇ. ಅವರ ಹನಿಗಳಲ್ಲಿ ಭಾವುಕತೆ ಇದೆ, ಬೌದ್ಧಿಕತೆಯೂ ಇದೆ, ವ್ಯಂಗ್ಯವೂ ಇದೆ, ಗಾಂಭೀರ್ಯವೂ ಇದೆ, ಆಸೆಯೂ ಇದೆ ವಿಷಾದವೂ ಇದೆ. ಓದುಗನನ್ನು, ಕೇಳುಗನನ್ನು ಆಲೋಚನೆಗೆ ಹಚ್ಚುವ, ಆತನ ಸಾಕ್ಷಿಪ್ರಜ್ಞೆಯನ್ನು ಕೆಣಕುವ ಶಕ್ತಿ ಇದೆ. ಸದಾಕಾಲವೂ ಸಮಾಜದ ಹಿತವನ್ನೇ ಬಯಸುವ ಕವಿಗೆ ಯಾವುದೇ ಸಾಹಿತ್ಯ ಚಳವಳಿಯ ಹಂಗಿರುವುದಿಲ್ಲ. ಆಯಾ ಕಾಲದ ಸಾಹಿತ್ಯದ ಅಂತಃಸತ್ವವನ್ನು ತಾನೂ ಅರಗಿಸಿಕೊಂಡು ಕಾವ್ಯವನ್ನು ಸೃಷ್ಟಿಸುತ್ತಾನೆ. ರಾಮಾಯಣಕ್ಕೆ ಸಂಬಂಧಿಸಿದ ಅವರ ಒಂದು ಹನಿಯನ್ನು ನೋಡಿ: ‘ಸೀತೆಯನು ಬೆಂಕಿಗೆಸೆದ ರಾಮನ ಯಾರು ಶಿಕ್ಷಿಸಿದರು? ಗಾಳಿಯ ಮಾತು ಕೇಳಿ ಅವಳನ್ನಡವಿಗಟ್ಟಿದ. ಯಾವ ನ್ಯಾಯಾಲಯ ಶಿಕ್ಷಿಸಿತು? ಆಗಲೂ ಈಗಲೂ ಆಳರಸರು ಶಿಕ್ಷಾರ್ಹರಲ್ಲ, ಅದೆಲ್ಲ ಜನಹಿತ ಕಾರ್ಯ, ಜನಹಿತಕ್ಕೆ ಜಯವಾಗಲಿ?’ ಒಬ್ಬ ನ್ಯಾಯಾಧೀಶನ ಆಲೋಚನೆ ಇಲ್ಲಿ ಕೆಲಸ ಮಾಡಿದೆ. ರಾಮನು ಹೇಗೆ ಶಿಕ್ಷೆಯಿಂದ ತಪ್ಪಿಸಿಕೊಂಡ ಎಂದು ಅವರು ಚಿಂತಿಸುತ್ತಾರೆ. ಅದರ ಮುಂದುವರಿಕೆಯಂತೆ ಕಾಣುವ ಇದನ್ನು ನೋಡಿ- ಸೀರೆಯ ಕದ್ದ ಶ್ರೀಹರಿ ಪರಾರಿಯಾದ, ಸೀತೆಯ ಕದ್ದ ರಾವಣ ಸಿಕ್ಕಿ ಬಿದ್ದ. ಇಬ್ಬರೂ ಕಳ್ಳರೆ, ಒಬ್ಬನು ದೇವನಾದ, ಇನ್ನೊಬ್ಬ ದಾನವನಾದ, ಇದು ನ್ಯಾಯವೇ ಮುರಾರಿ? ಹಾಗೆಯೇ, ದೀನರ ಸೇವೆ ಭಗವಂತನ ಸೇವೆ ಎಂಬುದನ್ನು ತುಂಬ ಸುಂದರವಾಗಿ ಹೇಳಿದ್ದಾರೆ.- ‘ಬಿದ್ದವನೆಬ್ಬಿಸಲು ಬಾಗಲೇ ಬೇಕು, ಬಾಗುವುದಿಲ್ಲವೇ ದೇವನ ಮುಂದೆ?’ ಕಾಮವೆನ್ನುವುದು ಸಾರ್ವಕಾಲಿಕ ಸತ್ಯ ಎಂಬುದನ್ನು ಅವರು ‘ಅಮರ ಅಮೃತಮತಿ’ ಹನಿಯಲ್ಲಿ ಹೇಳುವುದು ಹೀಗೆ- ‘ಅಮೃತಮತಿ ಸತ್ತಳೆಂದು ಅದಾರು ಹೇಳಿದರು ಕವಿ ಜನ್ನಗೆ? ಅದವನ ಭ್ರಮೆ, ಅಂದು ಸತ್ತಿದ್ದರೆ ಅಮೃತಮತಿ ಇಂದೆಲ್ಲಿಂದ ಬರುತ್ತಿದ್ದಳು ನಮ್ಮ ಕೇರಿಯ ಪದ್ಮಾವತಿ?’ ಹಾಗೆಯೇ ಆಸೆ ದುಃಖಕ್ಕೆ ಮೂಲ. ನಿಜ. ಆದರೆ ಆಸೆ ಬದುಕಿಗೂ ಮೂಲ ಎಂಬ ಸತ್ಯವನ್ನು ಅವರು ಹೇಳುತ್ತಾರೆ. ನೂರೊಂದು ಮಾತುಗಳನ್ನು ಹುಚ್ಚೆದ್ದು ಎಸೆಯುವುದಕ್ಕಿಂತ ಮೊನೆಯುಳ್ಳ ಒಂದು ಮಾತನಾಡುವುದರಲ್ಲಿ ಜಿನದತ್ತರಿಗೆ ಶ್ರದ್ಧೆ ಇದೆ ಎಂಬ ಮಾತನ್ನು ವಿ.ಕೃ.ಗೋಕಾಕರೇ ಇವರ ಕಾವ್ಯಾರಂಭದ ದಿನಗಳಲ್ಲಿ ಹೇಳಿದ್ದರು. ಆ ಮಾತು ಸತ್ಯ ಎನ್ನುವುದು ಈ ಕೃತಿಯಲ್ಲಿ ಸಾಬೀತಾಗಿದೆ. ಸೂಕ್ಷ್ಮ ಸಂವೇದನಾಶೀಲವೂ, ಸುಸಂಸ್ಕೃತವೂ ಆದ ಮನಸ್ಸೊಂದು ತನ್ನ ಗ್ರಹಿಕೆಯ ಲೋಕಾನುಭವವನ್ನು ಮೆಲುದನಿಯಲ್ಲಿ ತನ್ನ ಆಪ್ತರೊಂದಿಗೆ ಮಾತನಾಡಿದ ಹಾಗಿರುವ ಧಾಟಿಯಲ್ಲಿ ಮಂಡಿಸುವ ಕ್ರಮವು ಚೇತೋಹಾರಿಯಾಗಗಿದೆ ಎಂಬ ಜಿ.ಎಸ್.ಶಿವರುದ್ರಪ್ಪನವರ ಮಾತು ಮಹತ್ವದ್ದು. ಜಿನದತ್ತರ ಹನಿಗವನ ಓದುತ್ತಿದ್ದಂತೆ ತುಟಿಯಂಚಿನಲ್ಲಿ ನಗೆಯರಳುತ್ತದೆ ಎಂಬ ಡಾ.ಎಸ್.ವಿದ್ಯಾಶಂಕರ ಅವರು ಮಾತಿಗೆ ಇದರಲ್ಲಿ ಹಲವು ಪುರಾವೆ ಇದೆ. ಅವರು ನಿಸರ್ಗವನ್ನು ವರ್ಣಿಸುವ ರೀತಿಗೆ ಒಂದು ಉದಾಹರಣೆ ‘ಈ ಪರಿ ಮೊಸರನ್ನಾರು ಚೆಲ್ಲಿದರು ಮುಗಿಲಲ್ಲಿ, ಇದಾ ಕಳ್ಳ ಕೃಷ್ಣನ ಕೆಲಸವೇ ಶ್ರೀಹರಿಯ ಲೀಲೆ ಆ ದೇವರೇ ಬಲ್ಲ’. ಒಂದು ಸಹಜ ವ್ಯಂಗ್ಯ ಜಿನದತ್ತರಲ್ಲಿ ಅಭಿವ್ಯಕ್ತಿ ಪಡೆಯುವ ರೀತಿ ಹೀಗಿದೆ- ಹೆಂಗಸರಿಗೆ ವಯಸ್ಸು ಕದಿಯುವ ಚಟ, ಸರಿ, ಕದ್ದರೆ ಕದಿಯಲಿ, ಅವರಿಗೆ ಮನಸ್ಸು ಕದಿಯುವ ಚಟವೂ ಉಂಟಲ್ಲ, ಅದೇ ತೊಂದರೆ. ಜಿನದತ್ತರ ರಸಿಕತೆ ಹರಳುಗಟ್ಟಿದಂತಿರುವ ‘ಶಾಲಿನಿ’ ಎಂಬ ಈ ಹನಿ ನೋಡಿ. ವಡ್ಡರ ಜಕ್ಕವ್ವ ನಕ್ಕರೆಂಥ ಚೆಂದ ಎರಕಲ ಬೀಡ್ಯಾಗ ಕುಸುಬಿ ಬಿದ್ದಾಂಗ. ಕರಿ ಎಳ್ಳ ರಾಸ್ಯಾಗ ಅಳ್ಳ ಸುರದ್ಹಾಂಗ! ಮಲಿ ಎರಡು ಎದಿಮ್ಯಾಲ ಕಂತಿ ಮಾಡಿದ ಕಲ್ಲ! ಸೆರಗನೆಳದ ಮುಚ್ಚಿ ಒಳಗ ಇಡತಾಳಲ್ಲ! ಸ್ತ್ರೀಯ ಸ್ತನಗಳನ್ನು ಕಂತಿ ಮಾಡಿದ ಕಲ್ಲಿಗೆ ಹೋಲಿಸಿದ ಕಲ್ಪನೆ ಕನ್ನಡ ಸಾಹಿತ್ಯದಲ್ಲಿಯೇ ವಿನೂತನವಾದದ್ದು. ಇಂಥ ನೂರಾರು ಹೊಚ್ಚಹೊಸ ಕಲ್ಪನೆಗಳನ್ನು ನಾವು ದೇಸಾಯಿಯವರ ಈ ಕೃತಿಯಲ್ಲಿ ಕಾಣಬಹುದು. ಸಹಸ್ರ ಚಂದ್ರನ ದರ್ಶನ ಮಾಡಿರುವ ದೇಸಾಯಿಯವರು ಇನ್ನಷ್ಟು ಚಂದ್ರನನ್ನು ನೋಡಲಿ. ಪ್ರ: ಕಾರ್ತಿಕ್ ಎಂಟರ್‌ಪ್ರೈಸಸ್, ಬೆಂಗಳೂರು, ಪುಟಗಳು ೪೪೮, ಬೆಲೆ ₹೨೫೦