ಕನ್ನಡದ ಈಗಿನ ಗದ್ಯ ಬರೆಹಗಾರರಲ್ಲಿ ಕೆ.ಸತ್ಯನಾರಾಯಣ ಅವರು ಪ್ರಮುಖರು. ಗದ್ಯ ಬರೆಹಗಾರರು ಎಂದು ಉದ್ದೇಶಪೂರ್ವಕವಾಗಿ ನಾನು ಇಲ್ಲಿ ಹೇಳಿದ್ದೇನೆ. ಅವರು ಕವಿತೆ ಬರೆದಿಲ್ಲ. ಆದರೆ ಇದುವರೆಗೆ ಒಂಬತ್ತು ಕಾದಂಬರಿ, ಹದಿನಾಲ್ಕು ಕಥಾಸಂಕಲನಗಳು, ಆರು ಪ್ರಬಂಧ ಸಂಕಲನಗಳು, ವಿಮರ್ಶೆ-ಸಾಂಸ್ಕೃತಿಕ ಬರೆಹ ಎಂದು ಆರು ಸಂಕಲನಗಳು, ನಾಲ್ಕು ಅಂಕಣ ಬರೆಹಗಳ ಕೃತಿಗಳು, ಒಂದು ಪ್ರವಾಸ ಕಥನ, ಒಂದು ವ್ಯಕ್ತಿ ಚಿತ್ರ, ಮೂರು ಆತ್ಮಚರಿತ್ರೆ ಹೀಗೆ ಇಷ್ಟೊಂದು ವೈವಿಧ್ಯಮಯ ಬರೆಹಗಳನ್ನು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಮೂರು ಸಂಪಾದನೆ ಕೃತಿಗಳನ್ನು ಪ್ರಕಟಿಸಿದ್ದಾರೆ. ಇಷ್ಟೊಂದು ವೈವಿಧ್ಯಮಯ ಬರೆಹ ಸಾಧ್ಯವಾಗುವುದಕ್ಕೆ ದಟ್ಟವಾದ ವೈವಿಧ್ಯಮಯ ಅನುಭವದ ಸರಕು ಇರಬೇಕಾಗುತ್ತದೆ. ಸತ್ಯನಾರಾಯಣ ಅವರು ಏನೇ ಬರೆಯಲಿ ಅದರಲ್ಲೊಂದು ಹೊಸತನ ಓದುಗನನ್ನು ಎದುರುಗೊಳ್ಳುತ್ತದೆ. ಏನೋ ಒಂದು ಹೊಸತನ್ನು, ಇತರರಿಗಿಂತ ಭಿನ್ನವಾದುದನ್ನು ಕೊಡಬೇಕೆಂಬ ತುಡಿತ ಇದಕ್ಕೆ ಕಾರಣ. ಅವರ ಹೊಸ ಕಾದಂಬರಿ “ಲೈಂಗಿಕ ಜಾತಕ” ಇದಕ್ಕೊಂದು ತಾಜಾ ಉದಾಹರಣೆ.
ಹಲವು ಕಟ್ಟಳೆಗಳಿಗೆ ಒಳಗಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಲೈಂಗಿಕ ಸಂಬಂಧ ಎಂಬುದು ಬಹಿರಂಗ ಚರ್ಚೆಯ ವಿಷಯವಲ್ಲ. ಆ ಕುರಿತು ಯಾರಾದರೂ ಬಹಿರಂಗದಲ್ಲಿ ಮಾತನಾಡಿದರೆ, ಚರ್ಚಿಸಿದರೆ ಆತ ಲಂಪಟ ಎಂಬ ಬಿರುದನ್ನು ಧರಿಸಬೇಕಾಗುತ್ತದೆ. ಲೈಂಗಿಕತೆ ಗಂಡು ಮತ್ತು ಹೆಣ್ಣಿನ ನಡುವೆ ಇರುವ ತೀರ ಖಾಸಗಿಯಾದ ಸಂಬಂಧ ಎಂದು ನಮ್ಮ ಸಮಾಜ ಪರಿಗಣಿಸುತ್ತ ಬಂದಿದೆ. ಇದರಿಂದ ಸ್ವಲ್ಪ ಆಚೆಗೆ ಹೋದರೂ ಸಮಾಜದ ಟೀಕೆಗೆ ಗುರಿಯಾಗಬೇಕಾಗುತ್ತದೆ. `ಪ್ರತಿಯೊಂದು ಸಂಬಂಧವೂ ಬಲಿದಾನವೂ ಹೌದು, ಬಂಧನವೂ ಹೌದು. ಏಕೆಂದರೆ, ನಮ್ಮ ಸಂಬಂಧಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮನ್ನು ಅವನಿಗೆ ಬೇಕಾದ ರೀತಿಯಲ್ಲಿ ಮಾತ್ರ ನೋಡಲು ಬಯಸುತ್ತಾನೆ. ಇದರಿಂದ ಬಿಡುಗೆಯೇಇಲ್ಲವೇನೋ ಮುಷ್ಯನಿಗೆ?’ ಎಂದು ಲೇಖಕರು ಪಾತ್ರವೊಂದರ ಮೂಲಕ ಇಲ್ಲಿ ಹೇಳಿಸಿದ್ದಾರೆ. ಇಂಥದರಲ್ಲಿ ಸಲಿಂಗರತಿಯಂಥ ವಿಷಯವನ್ನು ಎತ್ತಿಕೊಂಡು ಮನುಷ್ಯ ಸಂಬಂಧದ ಸೂಕ್ಷ್ಮಗಳನ್ನು ಬಹಿರಂಗ ಚರ್ಚೆಗೆ ಎತ್ತಿಕೊಳ್ಳುವ ಸತ್ಯನಾರಾಯಣರು ಈ ಕಾದಂಬರಿಯಲ್ಲಿ ಓದುಗರನ್ನು ಚಿಂತನೆಗೆ ಹಚ್ಚುತ್ತಾರೆ.
ಕೃತಿಯೊಂದರ ಓದಿನಲ್ಲಿ ಮೊದಲು ಕಣ್ಣಿಗೆ ಬೀಳುವುದು ಅದರ ವಸ್ತು. ಕಾದಂಬರಿಕಾರ ಏನನ್ನು ಹೇಳಲು ಹೊರಟಿದ್ದಾರೆ ಎಂಬುದು. ಏನಾದರೂ ಕತೆ ಎಂಬುದು ಇದರಲ್ಲಿ ಇದೆಯೇ ಎಂಬುದು. ಹಾಗೆ ನೋಡಿದಾಗ ಇದರಲ್ಲಿ ಸರಳವಾದ ಯಾವುದೇ ಕತೆ ಇಲ್ಲ. ಕತೆಗಳು ಆಗಬಹುದಾದ ಹಲವು ಘಟನೆಗಳು ಸೇರಿಕೊಂಡಿವೆ. ಆ ಮೂಲಕ ಒಂದು ವಿಷಯವನ್ನು ಪ್ರತಿಪಾದಿಸಲು ಯತ್ನಿಸಲಾಗಿದೆ. ಆ ಕಾರಣಕ್ಕಾಗಿಯೇ ಇದು ಕಾದಂಬರಿಯ ಒಳಗೊಂದು ಪಾತ್ರವಾಗಿರುವ ಶ್ರೀನಿವಾಸ ಎಂಬವರು ತಮ್ಮ ಕಾದಂಬರಿಯ ಬಗೆಗೆ ಹೇಳಿಕೊಂಡ Novel and also Journal For a Novel ಎಂಬ ಮಾತು ಈ ಕೃತಿಗೂ ಸರಿಹೊಂದುತ್ತದೆ. ಅಲ್ಲದೆ ಈ ಪುಟ ಮುಂದಿನ ಪುಟದ journal ಎಂಬ ಮಾತನ್ನು ಶ್ರೀನಿವಾಸನ ಮೂಲಕ ತಮ್ಮ ಕೃತಿಯ ಬಗ್ಗೆ ಲೇಖಕರೇ ಹೇಳಿಸಿರುವಂತಿದೆ.
ಒಂದೇ ಕತೆಯಿಲ್ಲದಿದ್ದರೂ ಒಂದು ವಸ್ತುವಿದೆ. ಸಲಿಂಗಿಗಳ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿ ಅಲ್ಲಿ ಇಲ್ಲಿ ಬಂದಿವೆ. ಆದರೆ ಅದೇ ಒಂದು ಕಾದಂಬರಿಯಾಗಿ ಬಂದಿರುವುದು ಇದೇ ಮೊದಲು ಇರಬಹುದು. ಆದರೆ ಇಂಗ್ಲಿಷಿನಲ್ಲಿ 19ನೆ ಶತಮಾನದಲ್ಲಿಯೇ ಈ ವಿಷಯದ ಮೇಲೆ ಕಾದಂಬರಿಗಳು ಬಂದಿವೆ. ಶೆರಿಡಾನ್ ಲೆ ಫನು ಅವರ “ಕಾರ್ಮಿಲ್ಲಾ”, ಅಲನ್ ಡೇಲ್ನ “ಎ ಮ್ಯಾರೇಜ್ ಬಿಲೋ ಝೀರೋ”, ಆಸ್ಕರ್ ವೈಲ್ಡ್ನ “ದಿ ಪಿಕ್ಚರ್ ಆಫ್ ಡೋರಿಯನ್ ಗ್ರೇ” ಮೊದಲಾದವು. ಬಹುಶಃ ಈ ವಿಷಯದ ಕುರಿತು ಬಹಿರಂಗವಾಗಿ ಮಾತನಾಡುವುದಕ್ಕೇ ಹಿಂಜರಿಯುವ ಮನಸ್ಥಿತಿಯ ಸಮಾಜ ಇದಾಗಿರುವಾಗ ಇದರ ಕುರಿತು ಯಾರೂ ಕೃತಿ ರಚಿಸಲು ಮುಂದೆ ಬರದಿರುವುದು ಸಹಜವಾಗಿಯೇ ಇದೆ. ಆದರೆ ಈ ಸಮಸ್ಯೆಯ ಸಿನಿಮಾಗಳು ಬಂದಿವೆ. ಇತ್ತೀಚೆಗೆ ಹಿಂದಿಯಲ್ಲಿ ಸೋನಂ ಕಪೂರ್, ಅನಿಲ್ ಕಪೂರ್ ಅಭಿನಯದ “ಏಕ್ ಲಡಕಿ ಕೋ ದೇಖಾ ತೋ ಐಸಾ ಲಗಾ” ಎಂಬ ಸಿನಿಮಾ ಇಡಿಯಾಗಿ ಇದೇ ವಸ್ತುವನ್ನು ಹೊಂದಿದೆ.
ಎರಡನೆಯದು ಕಾದಂಬರಿಯ ಶಿಲ್ಪ. ಸಲಿಂಗಿಗಳ ಬದುಕಿನ ಮೇಲೆ ಬೆಳಕು ಚೆಲ್ಲಬೇಕಾಗಿರುವುದರಿಂದ ಮತ್ತು ಅವರ ಕುರಿತು ಸಾರ್ವಜನಿಕವಾಗಿ ಸಹಾನೂಭೂತಿಯಿಂದ ನೋಡುವ ಒಂದು ಉದಾರ ಮನಸ್ಸು ಬೆಳೆಯಬೇಕೆಂಬ ಆಶಯ ಇರುವುದರಿಂದ ಇದನ್ನು ಒಂದು ಸಲಿಂಗಿಗಳ ಸಮ್ಮೇಳನದ ಮೂಲಕ ಪ್ರಾರಂಭಿಸಲಾಗಿದೆ. ಈಚಿನ ತಲೆಮಾರುಗಳಲ್ಲಿ ನಮ್ಮ ಸಮಾಜದಲ್ಲಿ, ಬದುಕಿನಲ್ಲಿ ಎರೋಟಿಕ್ ಇಂಪಲ್ಸ್ ಕ್ರಮೇಣವಾಗಿ, ಖಚಿತವಾಗಿ ಕ್ಷೀಣಿಸುತ್ತಿದೆ ಎಂಬ ಅನುಮಾನದೊಂದಿಗೆ ಅದಕ್ಕೆ ಉತ್ತರ ಹುಡುಕಿಕೊಳ್ಳುವ ಒಂದು ಪ್ರಯತ್ನದಂತೆ ಈ ಕೃತಿ ಮೂಡಿ ಬಂದಿದೆ. ಇಲ್ಲಿ ಈ ಸಂಬಂಧದ ಹಲವು ಸಮಸ್ಯೆಗಳನ್ನು ಉಪಕತೆಗಳ ಮೂಲಕ ಸಮ್ಮೇಳನದ ವೇದಿಕೆಯಲ್ಲಿ ಭಾಷಣಕಾರರ ನಿವೇದನೆಯ ಮೂಲಕ ಹೊರಹಾಕಿಸುವ ಕಥನ ತಂತ್ರ ಸೊಗಸಾಗಿದೆ. ದೇಹಕ್ಕೆ, ಮನಸ್ಸಿಗೆ, ಕನಸುಗಳು, ಸಾಧ್ಯತೆಗಳು, ಸಂಭ್ರಮ ಮೀರುವಿಕೆಯ ಅಗತ್ಯವೇ ಇಲ್ಲವೇನೋ ಎನ್ನುವಂತೆ ದುಡಿಮೆ, ದುಡ್ಡಿನ ಹಿಂದೆ ಬಿದ್ದಿರುವ ಇವತ್ತಿನ ಒಂದು ಹೊಸ ಪೀಳಿಗೆಯ ಅವನತಿಯನ್ನೂ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
ಕಾದಂಬರಿಯ ಒಡಲಲ್ಲಿ ಸೃಜನಶೀಲತೆಯ ಮೀಮಾಂಸೆ ತುಂಬ ಕುತೂಹಲಕಾರಿಯಾಗಿದೆ. ಬರವಣಿಗೆಯ ಫ್ರಾಂಕ್ನೆಸ್ ಬೇರೆ, ವಸ್ತು ಪ್ರಪಂಚದ, ಮನುಷ್ಯನ ಸತ್ಯ ಬೇರೆ. ಒಮ್ಮೊಮ್ಮೆ ಎರಡೂ ಒಂದೇ ಆಗಿರಬಹುದು, ಆಗಿರಬೇಕಾಗೂ ಇಲ್ಲ ಯಾವಾಗಲೂ ಎನ್ನುವ ಮಾತು ಬರೆದುದೆಲ್ಲವೂ ಲೇಖಕನ ಸ್ವಾನುಭವವೇ ಆಗಿರಬೇಕಾಗಿಲ್ಲ. ಇದು ಬೇರೆಯವರಿಂದ ಕೇಳಿದ್ದೂ ಆಗಿರಬಹುದು, ನೋಡಿದ್ದೂ ಆಗಿರಬಹುದು ಎಂಬ ವಿವರಣೆಯನ್ನು ಹೇಳುತ್ತದೆ. ಬರೆವಣಿಗೆಯಲ್ಲಿ ತೆರೆದುಕೊಳ್ಳುವುದಕ್ಕೂ ಒಂದು ಕೌಶಲ್ಯ, ಒಂದು ಹಿನ್ನೆಲೆ ಬೇಕು. ಹಾಗೆಯೇ ಮಾತಿನಲ್ಲಿ ಸುಮ್ಮನೆ ಆಪ್ತರ ಹತ್ತಿರ ನಮ್ಮನ್ನು ನಾವು ತೆರೆದುಕೊಂಡುಬಿಡಬಹುದೇನೋ ಬರೆವಣಿಗೆಯಲ್ಲಿ ತೆರೆದುಕೊಳ್ಳಲು, ಬರೆವಣಿಗೆಯ ಶಕ್ತಿ, ಒಲವು ಕೂಡ ಬೇಕಲ್ಲ. ತೆರೆದುಕೊಂಡೇಬಿಡುವ ಪ್ರಾಮಾಣಿಕವಾದ ಆಸೆ ಇದ್ದರೂ ಶಕ್ತಿ, ಕೌಶಲ್ಯ ಇಲ್ಲದೆ ಹೋದರೆ? ಇಂಥ ಸೃಜನಶೀಲತೆಯ ಸವಾಲುಗಳನ್ನು ಲೇಖಕರು ಕೃತಿಯಲ್ಲಿ ಗಮನಕ್ಕೆ ತರುತ್ತಾರೆ. ಬರೆವಣಿಗೆಯ ಮುಖ್ಯ ಗುಣ ಅಂದರೆ ಬರೆದವರನ್ನು ಅದು ತುಂಬ ಅಸಹಾಯಕರನ್ನಾಗಿ ಮಾಡುತ್ತದೆ. ಬರೆದೆ ಎಂದು ಗೆಲುವು ಬೀಗುವಾದಲೂ ಒಳಗಡೆ ಹಣ್ಣುಹಣ್ಣಾಗಿರುತ್ತೇವೆ, ಅಸಹಾಯಕರಾಗಿರುತ್ತೇವೆ. ಇದು ಸಂದಿಗ್ಧತೆಗೂ ಎಡೆಮಾಡುತ್ತದೆ ಎಂಬ ಮಾತು ಸೃಜನಶೀಲತೆಯ ತುಮುಲವನ್ನು ಕಟ್ಟಿಕೊಡುತ್ತದೆ.
ಕೆಲವು ಸಂಗತಿಗಳನ್ನು ಭಾರತೀಯ ಸಮಾಜ ಬಹಿರಂಗವಾಗಿ ಚರ್ಚಿಸುವುದಕ್ಕೆ ಹಿಂಜರಿಯುತ್ತದೆ. ಅದೊಂದು ರೀತಿಯ ಮಡಿವಂತಿಕೆ. ಲೈಂಗಿಕ ವಿಷಯವೂ ಹೀಗೆಯೇ. ಜನ ಮನಬಿಚ್ಚಿ ಮಾತನಾಡುವುದಿಲ್ಲ. ಹಾಗೆ ಮಾತನಾಡಲು ಶುರುಮಾಡುವುದೂ ಒಂದು ಸಾಧನೆಯೇ. ಅಂಥ ಸಾಧನೆ ಈ ಕೃತಿಯಲ್ಲಿ ಕೋದಂಡರಾಮಪುರದಲ್ಲಿ ನಡೆಯುವ ಸಲಿಂಗಿರತಿಗಳ ಸಮ್ಮೇಳನದಲ್ಲಿ ಆಗುತ್ತದೆ. ಇಂಥವನ್ನು ಕಾದಂಬರಿಯ ವಸ್ತುವನ್ನಾಗಿ ಮಾಡಿಕೊಂಡಿರುವುದೂ ಒಂದು ಸಾಧನೆಯೇ.
ಯಾವ ಅನುಭವವೂ ಪೂರ್ಣವಲ್ಲ. ಅನುಭವ ಆಗುವಾಗ, ಅದಕ್ಕೆ ಹಾತೊರೆಯುವಾಗ ಅದೇ ಸರ್ವಸ್ವ ಎನಿಸುತ್ತದೆ. ಆದರೆ ಎಲ್ಲ ಅನುಭವವೂ ಕೊನೆಗೆ ಮುಂದೆ ಆಗಲಿರುವ ಅನುಭವದ ಇವತ್ತಿನ ಭಾಗ ಅಷ್ಟೇ. ಎಲ್ಲ ಮೆಟ್ಟಿಲುಗಳನ್ನೂ ಏರಿ ಬಂದಾಗ ಸಿಗುವ ಜಾಗ ಪ್ರಶಾಂತವಾಗಿಬಹುದು. ಇಲ್ಲದೆಯೂ ಇರಬಹುದು. ಆದರೆ ಪ್ರತಿಯೊಬ್ಬರೂ ಪ್ರತಿಯೊಂದು ಮೆಟ್ಟಿಲನ್ನು ಹತ್ತಲೇ ಬೇಕು, ಮೇಲೇರಲೇ ಬೇಕು ಅಂತ ನಿಯಮವೇನೂ ಇಲ್ಲವಲ್ಲ. ಈ ಅರಿವಿಗೆ ಮನುಷ್ಯ ಸ್ವಭಾವದ ಮೇಲಿರುವ ಸಹಾನುಭೂತಿ ಕಾರಣ. ಇದು ಲೇಖಕನಿಗೊಬ್ಬನಿಗೆ ಇರಬೇಕಾದ ಕನಿಷ್ಠ ಅರ್ಹತೆಯಾಗಿ ತೋರುತ್ತದೆ.
ಸಲಿಂಗಿಗಳಿಗೆ ಇಂದು ಬೇಕಾಗಿರುವುದು ಸಹಾನುಭೂತಿ ಮಾತ್ರವಲ್ಲ, ಸಮಾನತೆ. ಜೊತೆಗೆ ಗೌರವ. ಚತುರ್ವಿದ ಪುರುಷಾರ್ಥಗಳಲ್ಲಿ ಕಾಮವೂ ಒಂದು. ಪ್ರಾಚೀನರಲ್ಲಿ ಕಾಮ ಎಂಬುದು ವಂಶೋದ್ಧಾರಕ್ಕೆ ಪೂರಕವಾಗಿ ಇರುವಂಥದ್ದು. ಈ ವಂಶೋದ್ಧಾರ ಆಗಬೇಕು ಎಂದರೆ ಪರಸ್ಪರ ಭಿನ್ನ ಲಿಂಗಿಗಳೇ ಬೇಕು. ಸೃಷ್ಟಿಯ ನಿರಂತರತೆ ಮತ್ತು ಮುಂದುವರಿಕೆಗೆ ನೆರವಾಗದ ಸಲಿಂಗ ಕಾಮಕ್ಕೆ ಸಮಾಜ ವ್ಯವಸ್ಥೆಯಲ್ಲಿ ಪುರಸ್ಕಾರ ಇಲ್ಲದೆ ಇರುವುದು ಸಹಜವೇ ಆಗಿದೆ. ಇದರೊಂದಿಗೆ ಮನುಷ್ಯ ಸಾಧ್ಯತೆಗಳ ಶ್ರೇಣೀಕರಣ ಮನುಷ್ಯನನ್ನು ಬಂಧಿಯನ್ನಾಗಿ ಮಾಡಿದೆ. ಇವತ್ತು ನಮ್ಮನ್ನು ಕಾಡುತ್ತಿರುವ ಎಲ್ಲ ರೀತಿಯ ವಿಷಮತೆಯ ಮೂಲ ಹೆಂಗಸಿನ ದೇಹದ, ಮನಸ್ಸಿನ ಸಾಂಸ್ಕೃತಿಕ ಪರಾಧೀನತೆಯಲ್ಲಿದೆ. ನಮ್ಮ ಪರಂಪರೆ ಹೇಳುವ ಹಾಗೆ ಲೈಂಗಿಕ ಪ್ರವೃತ್ತಿ ಇರುವುದು ಗೆಲ್ಲುವುದಕ್ಕಲ್ಲ. ನಮ್ಮನ್ನು ನಾವು ಶೋಧಿಸುವುದಕ್ಕೆ, ಒಪ್ಪಿಕೊಳ್ಳುವುದಕ್ಕೆ, ಆಟವಾಡುವುದಕ್ಕೆ, ಗೆಲ್ಲುವುದಕ್ಕೆ, ಪ್ರಾರ್ಥಿಸುವುದಕ್ಕೆ, ಕನಸು ಕಾಣುವುದಕ್ಕೆ. ಪ್ರಾಣಿಲೋಕ ಕೂಡ ಇದನ್ನು ಒಪ್ಪಿದೆ, ಗೌರವಿಸಿದೆ. ನಾವು ಪ್ರಾಣಿಗಳಿಗಿಂತ ಹಿಂದೆ ಬೀಳಬೇಕೆ ಇವೇ ಮೊದಲಾದ ಚರ್ಚೆಗಳು ಕಾದಂಬರಿಯಲ್ಲಿ ಹರಳುಗಟ್ಟಿವೆ.
ಈ ರೀತಿಯ ವಸ್ತುವನ್ನು ಹೊಂದಿರುವ ಕೃತಿಗಳ ಸವಾಲು ಓದುಗ. ಮೀಮಾಂಸೆಯ ಪರಿಭಾಷೆಯಲ್ಲಿ ಸಹೃದಯ. ಅವರು ಅಂತರಂಗದ ಹೃದಯವನ್ನು ತೆರೆದಿಟ್ಟುಕೊಂಡು ಓದುವುದಾದರೆ, ಅಂತಹ ಬರೆವಣಿಗೆಯೂ ಕಷ್ಟ. ಅಂತಹ ಬರವಣಿಗೆಗಳನ್ನು ನಮ್ಮ ಅಂತರಂಗದ ನೆಲೆಗಳಿಂದ ಓದುವುದು ಇನ್ನೂ ಕಷ್ಟ. ಇದು ಕೃತಿಕಾರನ ಸವಾಲು. ಆದರೆ ನಾವು ಇಂತಹ ಕಾಲದಲ್ಲಿಯೇ ಬದುಕುತ್ತಿರುವುದು ಎಂಬ ಅರಿವು ಲೇಖಕರಿಗಿದೆ. ಕೆಲವರ ಪಾಲಿಗೆ ಅಸ್ಪೃಶ್ಯ ಎನಿಸುವ ಸಲಿಂಗಿಗಳ ಬದುಕಿನ ವಸ್ತುವನ್ನು ಎತ್ತಿಕೊಂಡು ಅದನ್ನು ಸಭ್ಯವಾಗಿ ಓದುವಹಾಗೆ ಮತ್ತು ಅದರ ಬಗ್ಗೆ ಚಿಂತಿಸುವ ಹಾಗೆ, ಅವರನ್ನು ಒಪ್ಪಿಕೊಳ್ಳುವಂತೆ ಪ್ರೇರೇಪಿಸುವ ಹಾಗೆ ಬರೆದಿರುವುದರ ಹಿಂದಿನ ಲೇಖಕರ ಕಾಳಜಿ ಮನಸ್ಸಿಗೆ ತಟ್ಟುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.