*ಕಟ್ಟುನಿಟ್ಟಾದ ಎಚ್ಚರಿಕೆಯ ಕಾವಲು

ನೋ ಗಲಾಟೆಯಾಗುತ್ತದೆ. ಯಾವುದೋ ಕಾರಣಕ್ಕೆ ಬಂದೋಬಸ್ತಿಯನ್ನು ಏರ್ಪಡಿಸಬೇಕಾಗುತ್ತದೆ. ಆಗ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ. ದುಷ್ಕರ್ಮಿಗಳು ನುಸುಳದಂತೆ ಪಹರೆ ಕಾಯುತ್ತಾರೆ. ಆ ಕಾವಲನ್ನು ಕುರಿತು, ಪೊಲೀಸರು ಸರ್ಪಗಾವಲು ಏರ್ಪಡಿಸಿದ್ದರು ಎಂದು ಹೇಳುವುದನ್ನು ಕೇಳಿದ್ದೇವೆ. ಸರ್ಪಗಾವಲು ಎಂದರೆ ಕಟ್ಟುನಿಟ್ಟಿನ, ಅತ್ಯಂತ ಎಚ್ಚರಿಕೆಯ ಕಾವಲು ಎಂದರ್ಥ.
ಸರ್ಪದ ಕಾವಲು ಅತ್ಯಂತ ಎಚ್ಚರಿಕೆಯದೆ? ಸರ್ಪವೆಂದರೆ ವಿಷದ ಪ್ರಾಣಿ. ಅದರ ಹತ್ತಿರ ಹೋಗುವುದಕ್ಕೇ ಜನ ಭಯ ಬೀಳುತ್ತಾರೆ. ಸರ್ಪದ ಇರುವೇ ಭದ್ರತೆಯನ್ನು ಒದಗಿಸುತ್ತದೆ.
ಸರ್ಪ ನಿಧಿಯನ್ನು ಕಾಯುತ್ತದೆ ಎಂಬ ನಂಬಿಕೆ ಇದೆ. ನಿಧಿ ಕೀಳಲು ಹೋಗಿ ಸಾವಿಗೀಡಾದವರ ಬಗ್ಗೆ ಕಥೆಯ ರೂಪದ ಸುದ್ದಿಗಳನ್ನು ಕೇಳಿರುತ್ತೇವೆ. ಸರ್ಪಕ್ಕೂ ನಿಧಿಗೂ ಏನು ಸಂಬಂಧ ಎಂಬುದಕ್ಕೆ ವೈಜ್ಞಾನಿಕ ಕಾರಣಗಳು ಯಾರಿಗೂ ಗೊತ್ತಿಲ್ಲ. ಆದರೆ ಜಾನಪದರಲ್ಲಿ ಹಾವು ನಿಧಿಯನ್ನು ಕಾಯುತ್ತದೆ ಎಂಬ ನಂಬಿಕೆ ಮಾತ್ರ ದಟ್ಟವಾಗಿದೆ.
ನಿಧಿಯೆಂದರೆ ಲಕ್ಷ್ಮಿಯ ರೂಪ. ನಿಧಿಯ ಅಪಹರಣವೆಂದರೆ ಲಕ್ಷ್ಮಿಯ ಅಪಹರಣವೇ ಸರಿ. ಲಕ್ಷ್ಮಿಯ ಅಪಹರಣವಾದರೆ ಆದಿಶೇಷ ಸುಮ್ಮನಿರುತ್ತಾನೆಯೆ? ನಿಧಿಗೂ ಸರ್ಪಕ್ಕೂ ಜಾನಪದರು ಕಂಡುಕೊಂಡ ಸಂಬಂಧ ಇದು.