ನಾನಿನ್ನೂ ಆಗ ಚಿಕ್ಕವನು. ಏಳೆಂಟು ವರ್ಷಗಳು ಇರಬಹುದು. ನಮ್ಮ ಮನೆಗೆ ಒಂದು ಎಮ್ಮೆಯನ್ನು ತರಬೇಕು ಎಂಬ ವಿಷಯದಲ್ಲಿ ನನ್ನ ಅಪ್ಪ ಅಮ್ಮ ಚರ್ಚೆ ನಡೆಸಿದ್ದರು. ಗಂಟಿಗಳಿಗೂ ಕಾಲುಗುಣ ಎನ್ನುವುದು ಇರುತ್ತದೆ. ಎಂಥೆಂಥದ್ದೋ ತಳಿಗಳನ್ನು ತಂದು ಹೊಕ್ಕಿಸಿದರೆ ಇರುವ ದನಕರುಗಳೂ ನಾಶವಾಗುವವು ಎನ್ನುವ ಜನರಾಗಿದ್ದರು ಅವರು. ನೀವು ಮಾಡಿದ್ದು ಸರಿ ಎಂದು ಶಕುನದ ನುಡಿ ಅವರಿಗೆ ಹೇಳುವವರು ಯಾರು?
ಅದಕ್ಕೆ ಅವರೇನು ಮಾಡಿದರು ಗೊತ್ತೆ? ಒಂದು ಮೊರದಲ್ಲಿ ಎರಡು ಮೂಲೆಗಳಿಗೂ ಎರಡೆರಡು ಬೊಗಸೆ ಅಕ್ಕಿಯನ್ನು ಹಾಕಿದರು. ಒಂದರಲ್ಲಿ ಅವರು ಇದ್ದಲಿಯನ್ನೂ ಇನ್ನೊಂದರಲ್ಲಿ ಅರಸಿಣದ ತುಂಡನ್ನೂ ಹುದುಗಿಸಿದರು. ಮೊರವನ್ನು ಅಂಗಳದಲ್ಲಿಯ ತುಳಸಿ ಕಟ್ಟೆಯ ಎದುರು ಇಟ್ಟು ತಾವು ಮರೆಯಲ್ಲಿ ನಿಂತರು. ನನಗೆ ಕುತೂಹಲ. ಮುಂದೇನು… ಮುಂದೇನು ಎಂದು ನಾನೂ ಅಷ್ಟೇ ಕುತೂಹಲದಿಂದ ಅವರ ಬಳಿಯಲ್ಲಿ ನಿಂತಿದ್ದೆ. ಒಂದು ಕಾಗೆ ಬಂತು. ಮೊರದಲ್ಲಿಯ ಒಂದು ಮೂಲೆಯಲ್ಲಿ ಇದ್ದ ಅಕ್ಕಿಯನ್ನು ಚುಂಚಿಗೆ ಎಷ್ಟು ದಕ್ಕಿತೋ ಅಷ್ಟನ್ನು ಮುಕ್ಕಿ ಹಾರಿತು.
ಅಪ್ಪ ಅಮ್ಮ ಇಬ್ಬರೂ ಹೊರಗೆ ಓಡಿರದು. ಅವರ ಬೆನ್ನಿಗೆ ನಾನು. ಕಾಗೆ ಮುಕ್ಕಿದ ಅಕ್ಕಿಯನ್ನು ಸರಿಸಿ ನೋಡಿದರು. ಅದರಲ್ಲಿ ಅರಸಿಣದ ತುಂಡು ಇತ್ತು. ಅಂದರೆ ನಮ್ಮ ಮನೆಗೆ ಎಮ್ಮೆ ತರುವುದಕ್ಕೆ ಕರಿಯ ಕಾಗೆ ಹಸಿರು ನಿಶಾನೆಯನ್ನು ತೋರಿಸಿತ್ತು. ಒಂದುವೇಳೆ ಅದು ಇದ್ದಲಿಯನ್ನು ಇಟ್ಟಿದ್ದ ಅಕ್ಕಿಯ ಪಾಲನ್ನು ಮುಕ್ಕಿದ್ದರೆ ಎಮ್ಮೆ ನಮ್ಮ ಮನೆಗೆ ಬರುತ್ತಿರಲಿಲ್ಲ.
ಕಾಗೆಯ ಶಕುನದ ಬಳಿಕ ನಮ್ಮಮ್ಮ ಮತ್ತು ಅಪ್ಪ ಇಬ್ಬರಿಗೂ ಯಾವುದೇ ತಲೆಬಿಸಿ ಇರಲಿಲ್ಲ. ಅವರು ನಿರುಂಬಳವಾಗಿದ್ದರು. ಮನೆಗೆ ಎಮ್ಮೆಯೂ ಬಂತು. ಇಂಥ ಶಕುನ ನೋಡುವ ಮಂದಿ ಸಾವಿರ ಇದ್ದಾರೆ. ಮನೆಯಿಂದ ಹೊರಗೆ ಬೀಳುವಾಗ ರಾಹುಕಾಲವೋ ಗುಳಿಕಕಾಲವೋ ಎಂದು ನೋಡುವವರು, ಎದುರಿಗೆ ಬೋಳುತಲೆಯ ವ್ಯಕ್ತಿ ಬಂದರೆ, ಖಾಲಿಕೊಡದೊಂದಿಗೆ ಯಾರಾದರೂ ಎದುರಾದರೆ ಅಂದು ತಮ್ಮ ಕೆಲಸವಾಗುವುದಿಲ್ಲ ಎಂದು ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸುವವರು ಎಷ್ಟಿಲ್ಲ?
ರಸ್ತೆಯಲ್ಲಿ ನಡೆಯುವಾಗಲೋ ಬಸ್ಸಿನಲ್ಲಿ ಪ್ರಯಾಣಿಸುವಾಗಲೋ ಸೂಕ್ಷ್ಮವಾಗಿ ಗಮನಿಸಿ; ದೇವಸ್ಥಾನವೊಂದು ಪಕ್ಕದಲ್ಲಿ ಕಂಡರೆ ಹಸ್ತವನ್ನು ಹಣೆಗೂ ಎದೆಗೂ ನಾಲ್ಕಾರು ಬಾರಿ ತಾಗಿಸಿಕೊಳ್ಳುವ ಮಂದಿ ನಿಮಗೆ ಕಂಡೇ ಕಾಣುತ್ತಾರೆ. ಹಲವರು, ಇತರರು ನೋಡುತ್ತಾರೆಂದು ಮುಜುಗರದಿಂದ ಹಾಗೆ ಮಾಡದಿದ್ದರೂ ಮನಸ್ಸಿನಲ್ಲಿಯೇ ನೂರು ನಮಸ್ಕಾರ ಹಾಕಿರುತ್ತಾರೆ.
ವ್ಯಕ್ತಿಯ ಎದುರು ಆಯ್ಕೆ ಇರುತ್ತದೆ. ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಲಾಗದ ಗೊಂದಲದಲ್ಲಿ ಅವನಿರುತ್ತಾನೆ. ಯಾರ ಮಾರ್ಗದರ್ಶನದಲ್ಲೂ ಅವನಿಗೆ ವಿಶ್ವಾಸ ಇರುವುದಿಲ್ಲ. ತಾನೇ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವೂ ಅವನಿಗೆ ಇರುವುದಿಲ್ಲ. ಆಗ ಆ ವ್ಯಕ್ತಿ ಮೊರೆಹೋಗುವುದು ಇಂಥ ಅತೀತ ಶಕ್ತಿಗಳ ಮಾರ್ಗದರ್ಶನಕ್ಕೆ.
ಅವರೇಕೆ ಇಂಥ ಅತೀತದ ಶಕ್ತಿಗಳನ್ನು ನಂಬುತ್ತಾರೆ? ಮನುಷ್ಯ ಶಕ್ತಿಗಿಂತ ಮಿಗಿಲಾದ ಶಕ್ತಿಯೊಂದು ಇದೆ ಎಂಬ ಅನುಭವ ಅವರಿಗಾಗಿರುತ್ತದೆ. ಕಾರ್ಯಕಾರಣ ಸಂಬಂಧಗಳನ್ನು ಮೀರಿದ, ಕಲ್ಪನೆ, ಊಹೆಗಳಿಗೆ ನಿಲುಕದ. ಅರ್ಥಕ್ಕೆ ವ್ಯಾಖ್ಯಾನಕ್ಕೆ ದಕ್ಕದ ಅಪೂರ್ವ ಅನುಭವ ಅವರಿಗಾಗಿರುತ್ತದೆ.
ಮೊನ್ನೆಮೊನ್ನೆ ಇರಾಣದ ವಿಮಾನವೊಂದು ಅಪಘಾತಕ್ಕೆ ಈಡಾಯಿತಲ್ಲ. ಅದೇ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ವ್ಯಕ್ತಿಯೊಬ್ಬ ಹೊಟೇಲಿನ ಕೋಣೆಯಲ್ಲಿ ನಿದ್ರಾವಶನಾಗಿ ವಿಮಾನವನ್ನು ತಪ್ಪಿಸಿಕೊಂಡಿದ್ದ. ಅದೇ ವಿಮಾನ ಅಪಘಾತಕ್ಕೀಡಾಗಿ ಒಬ್ಬರೂ ಬದುಕುಳಿಯದಿದ್ದಾಗ, ಅವನನ್ನು ತಡೆದು ನಿಲ್ಲಿಸಿದ ಶಕ್ತಿ ಯಾವುದು? ಸಾದೃಶ್ಯ ಪ್ರಸಂಗಗಳನ್ನು ನಾವು ನೀವೆಲ್ಲ ಕೇಳಿದ್ದೇವೆ ಓದಿದ್ದೇವೆ.
ಅಂಥ ಶಕ್ತಿ ಅರ್ಥದ ತೆಕ್ಕೆಗೂ ದಕ್ಕದು. ನಿರ್ವಚಿಸಲಾಗಲಾರದ್ದು ಅದು. ಆ ಶಕ್ತಿಯನ್ನೇ ದೇವರು, ಪರಮಾತ್ಮ, ಭಗವಂತ, ಓಂಕಾರಸ್ವರೂಪಿ ಎಂದೆಲ್ಲ ಅಂದುಕೊಂಡು ಅನನ್ಯ ಶರಣಾಗತಿಯನ್ನು ವ್ಯಕ್ತಪಡಿಸುವವರೂ ಇದ್ದಾರೆ.
ಕಾಗೆಯ ಶಕುನದ ಹಾಗೆ ಇನ್ನೂ ಹಲವು ರೀತಿಯಲ್ಲಿ ಶಕುನಗಳನ್ನು ನೋಡುವವರು ಇದ್ದಾರೆ. ಸೇಡಿ ಮಣ್ಣಿನ ಉಂಡೆಗಳನ್ನು ಮಾಡುತ್ತಾರೆ. ಉಂಡೆ ಕಟ್ಟುವಾಗಲೇ ಒಂದರಲ್ಲಿ ಕೆಂಪುದಾಸವಾಳ ಹೂವಿನ ಪಕಳೆಗಳನ್ನು ಮತ್ತು ಇನ್ನೊಂದರಲ್ಲಿ ಬಿಳಿ ದಾಸವಾಳ ಹೂವಿನ ಪಕಳೆಗಳನ್ನು ಸೇರಿಸುತ್ತಾರೆ. ಎರಡು ಉಂಡೆಗಳನ್ನು ನೀರಿನ ಪಾತ್ರೆಯಲ್ಲಿ ಇರಿಸುತ್ತಾರೆ. ಯಾವ ಉಂಡೆ ಮೊದಲು ಒಡೆಯುವುದೋ ಅದು ಶಕುನ. ಕೆಂಪಿದ್ದರೆ ಬೇಡ, ಬಿಳಿ ಇದ್ದರೆ ಬೇಕು.
ಅದೇ ರೀತಿ ಕೆಲವು ದೇವಾಲಯಗಳಲ್ಲಿ ಪ್ರಸಾದವನ್ನು ಕೇಳುತ್ತಾರೆ. ದೇವರ ಬಲಭಾಗ ಹೂವು ಬಿದ್ದರೆ ಸರಿ, ಎಡಭಾಗದ್ದು ಬಿದ್ದರೆ ಬೇಡ. ಅದೇ ರೀತಿ ದೇವರ ಪಾದಗಳ ಮೇಲೆ ತಾಡೋಲೆಯಲ್ಲಿ ವಿಷಯ ಬರೆದು ಅಂಟಿಸುತ್ತಾರೆ.
ಗಂಡು ಹೇಣ್ಣಿನ ಸಂಬಂಧ ಕೂಡಿಸುವುದು, ಜಮೀನು ಖರೀದಿಸುವುದು, ಮಕ್ಕಳ ವಿದ್ಯಾಭ್ಯಾಸ, ವಾಹನ ಕೊಳ್ಳುವುದು ಇವೆಲ್ಲವುಗಳಿಗೂ ದೇವರ ಪ್ರಸಾದ ಕೇಳುವವರು ಇರುತ್ತಾರೆ. ಸ್ವಂತ ನಿರ್ಧಾರಕೈಗೊಳ್ಳಲಾಗದ ಅತಂತ್ರ ಸ್ಥಿತಿಯಲ್ಲಿ, ಮನಸ್ಸಿನ ಭಾರವನ್ನು ಇಳಿಸಿಕೊಳ್ಳುವ ಸುಲಭ ವಿಧಾನ ಅದು. ಇಲ್ಲಿ ಯಾವ ಮನೊ ವೈದ್ಯರ ಅಗತ್ಯ ಅವರಿಗೆ ಇರುವುದಿಲ್ಲ.
ಕೆಲವರು ಪೇಚಿನ ಪ್ರಸಂಗಗಳಿಂದ ಪಾರಾಗಲು ಪ್ರಸಾದದ ನೆಪವನ್ನು ಹೇಳುವುದೂ ಇದೆ. ಒಂದು ಹೆಣ್ಣನ್ನು ಕುರಿತು ಸಂಬಂಧ ಬೆಳೆಸುವ ಒತ್ತಡ. ಎದುರಿಗೇ ಬೇಡವೆನ್ನಲು ಆಗದು. ಆಗ ದೇವರಲ್ಲಿ ಕೇಳುತ್ತೇವೆ ಕೇಳುತ್ತೇವೆ ಎಂದು ಹೇಳಿ, ನಂತರ ಪ್ರಸಾದ ಆಗಿಲ್ಲ ಎಂದು ಪಾರಾದವರೂ ಇದ್ದಾರೆ.
ಬಲ್ಲವರ ದೃಷ್ಟಿಯಲ್ಲಿ ಶಕುನ, ಪ್ರಸಾದಗಳು ಮೂಢನಂಬಿಕೆಯೇ ಇರಬಹುದು. ಆದರೆ ಅವರಿಗೆ ಅವರ ನಂಬಿಕೆಯೇ ಆತ್ಮಬಲವನ್ನು ತುಂಬುತ್ತದೆ. ಖಿನ್ನತೆ, ಗ್ಲಾನಿ ಅವರತ್ತ ಸುಳಿಯದು. ಮನೊವೈದ್ಯರು ಹೇಳು ಧ್ಯಾನ, ಮನನ, ಮಂತ್ರ ಪಠಣ ಇತ್ಯಾದುಗಳ ಅಗತ್ಯ ಅವರಿಗಿರುವುದಿಲ್ಲ. ಹೀಗಿಲ್ಲದಿದ್ದರೆ ಆತ್ಮಹತ್ಯೆಯ ಪ್ರಕರಣಗಳು ಇನ್ನಷ್ಟು ಹೆಚ್ಚುತ್ತಿದ್ದವು.
ಎಲ್ಲರ ಬಯಕೆಯೂ ತಮಗೆ, ತಮ್ಮನ್ನು ನಂಬಿದವರಿಗೆ ಒಳಿತಾಗಬೇಕು ಎನ್ನುವುದು. ಆ ಒಳಿತಿಗೆ ಎಲ್ಲಿ ಧಕ್ಕೆ ಬರುವುದೋ, ಸಾಮರಸ್ಯ ಎಲ್ಲಿ ಹದಗೆಡುವುದೋ ಎಂಬ ಆತಂಕದಲ್ಲಿ ನೆಮ್ಮುವುದಕ್ಕೆ ಒಂದು ಆಧಾರ ಬೇಕಾಗುತ್ತದೆ. ಆ ಆಧಾರವೇ ಈ ಶಕುನ. ಅದಕ್ಕೇ ಬೇಂದ್ರೆಯವರು `ಶುಭ ನುಡಿಯೇ ಶಕುನದ ಹಕ್ಕಿ’ ಎಂದು ಹಾರೈಸಿದ್ದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.