*ಶಿವಪೂಜೆಯಲ್ಲಿ ಕರಡಿ ಬಂದ ಹಾಗೆ ಅನ್ನುವುದು ತಪ್ಪು

ಶಿವಪೂಜೆಯನ್ನು ಎರಡು ರೀತಿಯಲ್ಲಿ ಮಾಡುತ್ತಾರೆ. ಒಂದು ಸ್ಥಾವರ ಲಿಂಗ ಪೂಜೆ, ಇನ್ನೊಂದು ಇಷ್ಟಲಿಂಗ ಪೂಜೆ. ಇಷ್ಟಲಿಂಗ ಪೂಜೆಯನ್ನು ವೀರಶೈವರು ರೂಢಿಗೆ ತಂದರು. ಅವರಲ್ಲಿ ಲಿಂಗದೀಕ್ಷೆ ಕೊಡುತ್ತಾರೆ. ಲಿಂಗಧಾರಣೆ ಮಾಡಿದ ವ್ಯಕ್ತಿಯ ಕೊರಳಲ್ಲಿ ಒಂದು ಕರಡಿಗೆಯಲ್ಲಿ ಇಷ್ಟಲಿಂಗವು ಇರುತ್ತದೆ. ಪೂಜೆಯ ವೇಳೆಯಲ್ಲಿ ಅದನ್ನು ತೆಗೆದು ಅಂಗೈ ಮೇಲೆ ಪ್ರತಿಷ್ಠಾಪಿಸಿಕೊಂಡು ಪೂಜೆಯನ್ನು ಮಾಡುತ್ತಾರೆ.
ಇಂಥ ಲಿಂಗಪೂಜೆಯ ವೇಳೆಯಲ್ಲಿ ಕರಡಿಗೆಯನ್ನೇ ಮರೆತರೆ ಪೂಜೆಯನ್ನು ಮಾಡುವುದು ಹೇಗೆ? ಯುದ್ಧಭೂಮಿಗೆ ತೆರಳಬೇಕಾದ ಸೈನಿಕ ಶಸ್ತ್ರಾಸ್ತ್ರಗಳನ್ನು ಒಯ್ಯದೆ ಬರಿಗೈಯಲ್ಲಿ ಹೋದಂತೆ ಅಲ್ಲವೆ? ಪರೀಕ್ಷೆಗೆ ತೆರಳುವ ವಿದ್ಯಾರ್ಥಿ ಅಭ್ಯಾಸವನ್ನೇ ಮಾಡದೆ ಹಾಗೆಯೇ ಹೋದರೆ ಹೇಗೆ? ಯಾವುದನ್ನೇ ಮಾಡಬೇಕಾದರೂ ಪೂರ್ಣ ಸಿದ್ಧತೆಯೊಂದಿಗೆ ಮಾಡಬೇಕು. ಅರೆಬರೆ ಸಿದ್ಧತೆ ಮಾಡಿಕೊಂಡವರನ್ನು ಕಂಡಾಗ ಈ ಮಾತನ್ನು ಹೇಳುತ್ತಾರೆ.
ಶಿವಪೂಜೆ, ಕರಡಿಗೆ ಇವು ಒಂದು ಪ್ರದೇಶ ಮತ್ತು ಒಂದು ನಿರ್ದಿಷ್ಟ ಸಮಾಜಕ್ಕೆ ಸೇರಿದ ಆಚರಣೆಯಾದುದರಿಂದ ಅದರ ಹೊರಗಿರುವವರಿಗೆ ಇದರ ಪರಿಚಯವಿರುವುದಿಲ್ಲ. ಕಾರಣ ಕರಡಿಗೆ ಕರಡಿಯಾಗಿ ಬದಲಾವಣೆಯಾಗಿ ಶಿವಪೂಜೆಯಲ್ಲಿ ಕರಡಿ ನುಗ್ಗಿದ ಹಾಗೆ ಎಂದು ತಪ್ಪಾಗಿ ಪ್ರಯೋಗವಾಗುತ್ತಿದೆ. ಬಳಕೆಯ ಸನ್ನಿವೇಶವೂ ಬೇರೆಯಾಗಿರುತ್ತದೆ. ಅನಪೇಕ್ಷಿತ ಅತಿಥಿಯಾಗಿ ಬಂದು ಕಾರ್ಯವನ್ನು ಹಾಳುಗೆಡವಿದವನು ಎನ್ನುವ ಅರ್ಥ ಇಲ್ಲಿ. ಆದರೆ ಶಿವಪೂಜೆಗೂ ಕರಡಿಗೂ ಸಂಬಂಧವಿರುವ ಯಾವುದೇ ವಿವರಣೆ ಇಲ್ಲ.