ಸತ್ಯಮೇವ ಜಯತೆ ಎಂಬುದು ಸನಾತನವಾದ ನುಡಿ. ನಮ್ಮ ನಂಬಿಕೆ, ಕ್ರಿಯೆಗಳು ಎಲ್ಲವೂ ಇದರ ಸುತ್ತಲೇ ಗಿರಕಿಹೊಡೆಯುತ್ತ ಇರುತ್ತವೆ. ಯಾವಾಗ ಈ ನಂಬಿಕೆಗೆ ಧಕ್ಕೆ ಉಂಟಾಗುತ್ತದೋ, ಅದಕ್ಕೆ ವ್ಯತಿರಿಕ್ತವಾಗಿ ಕ್ರಿಯೆಗಳು ಜರುಗಲಾರಂಭಿಸುತ್ತವೋ ಅದು ನಮ್ಮ ಪತನವನ್ನು ಸೂಚಿಸುತ್ತದೆ. ನಂಬಿಕೆ ಎಷ್ಟೊಂದು ಪರಿಣಾಮಕಾರಿ ಎಂದರೆ ವೈದ್ಯಕೀಯದಲ್ಲಿ ರೋಗಿಯ ಗುಣವಾಗುವಿಕೆಯಲ್ಲಿ ಶೇಕಡಾ ಮೂವತ್ತು ಭಾಗ ಈ ನಂಬಿಕೆಯನ್ನು ಅವಲಂಬಿಸಿರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಪ್ಲಾಸಿಬೋ ಎಫೆಕ್ಟ್ ಎಂದು ಹೇಳುತ್ತಾರೆ. ಕೆಲವರಿಗೆ ರೋಗವೇ ಇರುವುದಿಲ್ಲ. ತಮಗೆ ಯಾವುದೋ ರೋಗ ಬಂದಿದೆ ಎಂಬ ಭ್ರಮೆಯಲ್ಲಿ ಅವರು ಇರುತ್ತಾರೆ. ವೈದ್ಯರು ಇಂಥವರಿಗೆ ಯಾವುದೇ ರಾಸಾಯನಿಕಗಳಿಲ್ಲದ ಗುಳಿಗೆಗಳನ್ನೋ ಇಲ್ಲವೆ ಚುಚ್ಚುಮದ್ದನ್ನೋ ನೀಡುತ್ತಾರೆ. ಹಾಗೆ ಮಾಡಿದಾಗ ರೋಗಿ ಗುಣಮುಖನಾಗುತ್ತಾನೆ. ಇವೆಲ್ಲ ವೈದ್ಯಕೀಯದ ರಹಸ್ಯಗಳು. ಹೀಗೆ ವೈದ್ಯಕೀಯ ಒಳಹೊರಗನ್ನು ಪರಿಚಯಿಸುವ ಒಂದು ಅಮೋಘವಾದ ಕಾದಂಬರಿಯನ್ನು ಸ್ವತಃ ವೈದ್ಯರೂ ಆಗಿರುವ ಡಾ.ದಯಾನಂದ ಲಿಂಗೇಗೌಡ ಅವರು ‘ಸತ್ಯಮೇವ ಜಯತೇ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ‘ಎಷ್ಟು ಕಷ್ಟವೋ ನಂಬಿಕೆಯೆಂಬುದು’ ಎಂಬ ಟ್ಯಾಗ್‌ಲೈನ್ ಕೂಡ ಇದಕ್ಕಿದೆ. ಇದು ಲೇಖಕರ ಮೊದಲ ಕಾದಂಬರಿ ಕೂಡ. ಅವರಿಗೆ ಇದನ್ನು ಬರೆಯುವುದಕ್ಕೆ ಮೂಲ ಪ್ರೇರಣೆ, ನಟ ಅಮಿರ್ ಖಾನ್ ಅವರ ‘ಸತ್ಯಮೇವ ಜಯತೇ’ ಎಂಬ ಟೀವಿ ಎಪಿಸೋಡ್. ಅದರಲ್ಲಿ ವೈದ್ಯರ ಕುರಿತು ಒಮ್ಮೆ ಪ್ರಸಾರವಾಗಿತ್ತು. ಇಡೀ ವೈದ್ಯ ಸಮುದಾಯದ ಕುರಿತು ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ರವಾನೆಯಾಗುವ ಸಾಧ್ಯತೆಗಳು ಅಲ್ಲಿದ್ದವು. ಈ ಹಿನ್ನೆಲೆಯಲ್ಲಿ ಡಾ.ದಯಾನಂದ ಲಿಂಗೇಗೌಡ ಅವರು ವೈದ್ಯಕೀಯದ ವಸ್ತುವನ್ನು ಇಟ್ಟುಕೊಂಡು ಈ ಕಾದಂಬರಿಯನ್ನು ರಚಿಸಿದ್ದಾರೆ. ಡಾ.ವಿಶ್ವ ಎಂಬಾತ ಮಂಡ್ಯದ ಮದ್ದೂರು ಸಮೀಪದ ಒಂದು ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ಓದಿ, ನಂತರ ಕಷ್ಟಪಟ್ಟು ಆಂಗ್ಲ ಮಾಧ್ಯಮದಲ್ಲಿ ಓದಿ, ಸ್ವಪ್ರಯತ್ನದಿಂದ ಎಂಬಿಬಿಎಸ್ ಸೀಟನ್ನು ಪಡೆದು ವೈದ್ಯನಾಗಿ, ಮತ್ತೂ ಹೆಚ್ಚಿನ ಡಿಗ್ರಿಗಳನ್ನು ಪಡೆದು ಪ್ರಸಿದ್ಧ ವೈದ್ಯನಾಗುವುದು ಹಾಗೂ ತನ್ನ ಜೊತೆಯಲ್ಲಿ ಓದಿ, ವೈದ್ಯಳಾಗುವ ಕನಸು ಕಂಡು ಕಾರಣಾಂತರಗಳಿಂದ ಅದು ಸಾಧ್ಯವಾಗದೆ ಖಾಸಗಿ ರೇಡಿಯೋದಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ನಳಿನಿ ಎಂಬವಳನ್ನು ಮದುವೆಯಾಗುವ ವರೆಗೆ ಕಾದಂಬರಿಯ ಹರಹು ಇದೆ. ಕಾದಂಬರಿಯಲ್ಲಿ ೩೮ ಅಧ್ಯಾಯಗಳಿವೆ. ಪ್ರತಿಯೊಂದಕ್ಕೂ ಶೀರ್ಷಿಕೆಗಳಿವೆ. ಕಾದಂಬರಿಯ ತಂತ್ರ ಸರಳವಾಗಿದೆ. ಚಿಕ್ಕ ಮಗುವಿನಿಂದ ಕತೆ ಆರಂಭವಾಗಿ ಆತ ಬದುಕಿನಲ್ಲಿ ಒಂದು ಹಂತವನ್ನು ತಲುಪುವ ವರೆಗೆ ಒಂದೇ ನೇರದಲ್ಲಿ ಕಾದಂಬರಿಯ ಓಡುವುದು. ವಿಶ್ವ ಎಂಬವನ ಪ್ರಜ್ಞಾಪಾತಳಿಯಲ್ಲಿ ಕತೆಯು ಅರಳುತ್ತ ಹೋಗುತ್ತದೆ. ಲೇಖಕರು ಬಯಸಿದ್ದರೆ ತಂತ್ರವನ್ನು ಬದಲಿಸಬಹುದಿತ್ತು. ಬೇರೆಬೇರೆಯವರ ಮೂಲಕ ಕತೆಯನ್ನು ಹೇಳಿಸಬಹುದಿತ್ತು. ಆ ರಿಸ್ಕ್ ಅವರು ತೆಗೆದುಕೊಂಡಿಲ್ಲ. ಇದರಿಂದ ಓದುಗನ ಭಾರ ಕಡಿಮೆಯಾಗಿದೆ. ಹಳ್ಳಿಯಲ್ಲಿ ಹುಟ್ಟಿದ ವಿಶ್ವನನ್ನು ಚೆನ್ನಾಗಿ ಓದಿಸಿ ನೌಕರಿಗೆ ಸೇರಿಸಬೇಕು ಎಂಬುದು ಆತನ ತಂದೆಯ ಇಚ್ಛೆ. ಏಕೆಂದರೆ ಕೃಷಿಯಲ್ಲಿ ಲಾಭ ಕಡಿಮೆಯಾಗಿರುವುದು, ಕೆಲಸಕ್ಕೆ ಜನರು ಸಿಗದೆ ಇರುವುದು. ಅದಕ್ಕಾಗಿ ಆತನನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಾನೆ. ಆಂಗ್ಲ ಮಾಧ್ಯಮ ವಿಶ್ವನಿಗೆ ಅರಗುವುದೇ ಇಲ್ಲ. ಮತ್ತೆ ತಿರುಗಿ ಕನ್ನಡ ಮಾಧ್ಯಮದಲ್ಲಿಯೇ ಎಸ್ಸೆಸ್ಸೆಲ್ಸಿಯ ವರೆಗೆ ಓದು. ಶಾಲೆ ಬಿಡಬೇಕು ಅಂದುಕೊಂಡಿದ್ದವನು, ಚಿಕ್ಕಪ್ಪನ ಮಗನ ಪ್ರೇರಣೆಯಿಂದಾಗಿ ಓದು ಮುಂದುವರಿಸುತ್ತಾನೆ. ಪಿಯುಸಿ ಬಳಿಕ ವೈದ್ಯಕೀಯದ ಸೀಟು ಮೆರಿಟ್‌ನಲ್ಲಿ ಪಡೆಯುತ್ತಾನೆ. ವೈದ್ಯಕೀಯ ಕಾಲೇಜುಗಳಲ್ಲಿ ಯಾವ ರೀತಿಯ ಶೋಷಣೆ ನಡೆಯುತ್ತದೆ ಎಂಬುದರ ವಾಸ್ತವ ಚಿತ್ರಣವಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವನಿಗೆ ಸೀಟು ಸಿಕ್ಕಿದ್ದು. ಒಂದು ಸಂದರ್ಭದಲ್ಲಿ ಮ್ಯಾನೇಜ್‌ಮೆಂಟ್‌ನವರು ಹಣದ ನೆರವಿಗೆ ಪ್ರತಿಯಾಗಿ ಧರ್ಮವನ್ನು ಬದಲಿಸುವಂತೆ ಕೇಳುತ್ತಾರೆ. ಹಾಗೆಯೇ ಪ್ರ್ಯಾಕ್ಟಿಕಲ್ ಪರೀಕ್ಷೆಯಲ್ಲಿ ಅಂಕ ನೀಡುವುದಕ್ಕೂ ಹಣ ಕೇಳುವ ಪರೀಕ್ಷಕರು. ಸೀಟನ್ನು ಮ್ಯಾನೇಜ್‌ಮೆಂಟ್‌ಗೆ ಬಿಟ್ಟುಕೊಟ್ಟರೆ ಹಣ ನೀಡುವ ಆಮಿಷ ಒಡ್ಡುವವರು, ಎಂಡಿ ಸೀಟು ಪಡೆಯಲು ಕಳ್ಳಮಾರ್ಗ ಹೇಗೆ ಹಿಡಿಯಬೇಕು ಎಂದು ಹೇಳಿಕೊಡುವವರು, ಜೊತೆಗೆ ಪಾಠ ಮಾಡುವವರು ಇಲ್ಲದ ಗೋಳು, ರ‌್ಯಾಗಿಂಗ್ ಪಿಡುಗು, ಜೊತೆ ಓದುಗರ ಚಿತ್ರವಿಚಿತ್ರ ನಡೆಗಳು ಎಲ್ಲವನ್ನೂ ಲೇಖಕರು ವಿವರಿಸುವರು. ಇನ್ನು ವೈದ್ಯರಾದಬಳಿಕ ಆಸ್ಪತ್ರೆಯಲ್ಲಿ ಏನೇನು ನಡೆಯುತ್ತದೆ, ವೈದ್ಯೋ ನಾರಾಯಣೋ ಹರಿ ಎಂಬ ಆದರ್ಶ ಹೇಗೆ ಸ್ವಾರ್ಥದಿಂದ ಮಣ್ಣುಪಾಲಾಗಿದೆ ಎಂಬುದನ್ನು ಹೇಳುವರು. ಇವರು ಕೆಲಸ ಮಾಡುವ ನಾರದ ಆಸ್ಪತ್ರೆ, ಅಲ್ಲಿಯ ವೈದ್ಯ ಕವಿ ಕಟ್ಟಿ, ಊರ ಹೊರಗೆ ಸರ್ಕಾರದ ಭೂಮಿಯಲ್ಲಿ ಕಟ್ಟಿಕೊಂಡ ಆಸ್ಪತ್ರೆ, ಸರಿಯಾದ ವಿದ್ಯಾರ್ಹತೆ ಇಲ್ಲದೆ, ಕಡಿಮೆ ಸಂಬಳಕ್ಕೆ ದುಡಿಯುವ ಸಿಬ್ಬಂದಿ, ಔಷಧ ಕಂಪನಿಯವರ ಆಮಿಷಗಳು, ಅನಗತ್ಯವಾಗಿ ಆಪರೇಷನ್ ಮಾಡುವುದು, ರೋಗಿಗಳ ತರಲೆಯಿಂದ ಬಚಾವಾಗಲು ಅವರದೇ ಹಣದಲ್ಲಿ ವಿವಿಧ ತಪಾಸಣೆಗಳನ್ನು ನಡೆಸುವುದು, ಜೊತೆ ವೈದ್ಯೆಯೊಬ್ಬಳು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ವಿಶ್ವನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸುವುದು, ಕವಿ ಕಟ್ಟಿ ಬಡವರಿಗೆ ಚಿಕಿತ್ಸೆ ನೀಡುವ ಸರ್ಕಾರದ ಆರೋಗ್ಯ ವಿಮೆ ‘ಅಶ್ವಿನಿ’ ಯೋಜನೆಯನ್ನು ತನ್ನದೇ ಎಂದು ಪ್ರಚಾರ ಮಾಡಿಕೊಳ್ಳುವುದು, ಜನರ ಸೇವೆಗಾಗಿಯೇ ತಮ್ಮ ಆಸ್ಪತ್ರೆ ಇದೆ ಎಂದು ತೋರಿಸಿಕೊಳ್ಳುವುದು, ಆಸ್ಪತ್ರೆ ಒಂದು ಹಂತಕ್ಕೆ ಬಂದ ಮೇಲೆ ಈ ಬಡ ರೋಗಿಗಳನ್ನು ದೂರ ಮಾಡುವುದು, ಕೊನೆಗೆ ಶಿಕ್ಷೆ ಎಂಬಂತೆ ಸರಿಯಾದ ಚಿಕಿತ್ಸೆ ಇಲ್ಲದೆ ಕವಿ ಕಟ್ಟಿಯ ಅಣ್ಣನ ಮಗನೇ ಸಾಯುವುದು, ರೋಗಿಯೊಬ್ಬ ಸತ್ತಾಗ ಆತನ ಸಂಬಂಧಿಕರು ನಡೆಸಿದ ಹಲ್ಲೆಯಲ್ಲಿ ವೈದ್ಯರೊಬ್ಬರು ಸಾಯುವುದು, ದಾರಿಯಲ್ಲಿ ಅಸ್ವಸ್ಥನಾಗಿ ಬಿದ್ದ ವ್ಯಕ್ತಿಯೊಬ್ಬನನ್ನು ರಿಕ್ಷಾ ಚಾಲಕ ಈ ನಾರದ ಆಸ್ಪತ್ರೆಗೆ ತಂದು ಆತನನ್ನು ಸೇರಿಸುವುದಕ್ಕೆ ಐದು ಸಾವಿರ ರುಪಾಯಿ ಬೇಡುವುದು, ವೈದ್ಯರಂಗದಲ್ಲಿ ಕಾರ್ಪೋರೇಟ್ ವ್ಯವಸ್ಥೆ ಹೀಗೆ ವೈದ್ಯಕೀಯ ಜಗತ್ತಿನ ಎಲ್ಲ ಒಳಸುಳಿಗಳನ್ನು, ಹುಳುಕುಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಜೊತೆಗೆ ನಿಜವಾದ ಪ್ರಾಮಾಣಿಕ ವೈದ್ಯರೂ ಇದ್ದಾರೆ ಎಂಬುದನ್ನು ವಿಶ್ವನ ಉದಾಹರಣೆಯ ಮೂಲಕ ತೋರಿಸುವರು. ಸ್ವಾರ್ಥಿಯಾದ ಕವಿ ಕಟ್ಟಿಯ ಮನಃಪರಿವರ್ತನೆ ಹಾಗೂ ಆತ ನಿಜಾರ್ಥದಲ್ಲಿ ಸಮಾಜಸೇವೆಗೆ ಮನಸ್ಸು ಮಾಡುವುದು ಕಾದಂಬರಿಯ ಹೈಲೈಟ್. ಈ ಕಾದಂಬರಿಯ ಕೆಲವು ಪಾತ್ರಗಳು ನಮ್ಮ ಸಮಕಾಲೀನ ವ್ಯಕ್ತಿಗಳ ಹೋಲಿಕೆಯನ್ನು ಹೊಂದಿರುವುದು ಕೇವಲ ಕಾಕತಾಳೀಯ ಅಷ್ಟೇ. ವಿಶ್ವನ ತಾಯಿ ಸತ್ತ ಸಂದರ್ಭ ಹಾಗೂ ಈತ ಪ್ರೀತಿಸಿದ್ದ ಡಾ.ಗೌರಿ ಚಿಕಿತ್ಸೆ ನೀಡುವಾಗ ಎಚ್ಚರಿಕೆ ವಹಿಸದ ಕಾರಣಕ್ಕೆ ಏಡ್ಸ್‌ಗೆ ತುತ್ತಾಗುವುದು ಹಾಗೂ ಆಕೆ ಅಪಘಾತದಲ್ಲಿ ಸಾಯುವುದು ಇತ್ಯಾದಿ ಮನಕಲಕುವ ಸನ್ನಿವೇಶಗಳೂ ಇದರಲ್ಲಿವೆ. ವೈದ್ಯಲೋಕದ ದರ್ಶನದ ಜೊತೆಯಲ್ಲಿ ಕನ್ನಡದ ದುರ್ಗತಿ, ಅನ್ಯಭಾಷಿಕರಿಗೆ ಹೇಗೆ ಇಲ್ಲಿ ಮಣೆಹಾಕಲಾಗುತ್ತಿದೆ, ಕೃಷಿಕರ ಸ್ಥಿತಿ ಹೇಗೆ ಹೀನಾಯವಾಗಿದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದಕ್ಕೆ ಹೇಗೆ ಕಷ್ಟಪಡಬೇಕು ಎಂಬುದನ್ನೆಲ್ಲ ದಯಾನಂದ ಅವರು ಹೇಳಿದ್ದಾರೆ. ವೈದ್ಯಕೀಯ ರಂಗದ ಇಷ್ಟೊಂದು ದಟ್ಟ ವಿವರಗಳನ್ನು ಹೊಂದಿರುವ ಕೃತಿ ಕನ್ನಡದಲ್ಲಿ ವಿರಳ. ತಮ್ಮ ಮೊದಲ ಕೃತಿಯಲ್ಲಿಯೇ ತುಂಬ ಭರವಸೆಯನ್ನು ಲೇಖಕರು ಮೂಡಿಸಿದದ್ದಾರೆ. ಪ್ರ: ಶ್ರೀ ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ಪುಟಗಳು ೪೦೦, ಬೆಲೆ ೨೮೦