*ಉಲ್ಲಂಘಿಸಬಾರದ ಗಡಿ ಗೆರೆ

ನಾವು ಲಕ್ಷ್ಮಣ ರೇಖೆಯನ್ನು ದಾಟುವುದಿಲ್ಲ ಎಂದು ಎರಡು ರಾಜಕೀಯ ಪಕ್ಷಗಳು ಹೇಳಿಕೊಳ್ಳುವುದನ್ನು ಕೇಳಿದ್ದೇವೆ. ಲಕ್ಷ್ಮಣ ರೇಖೆ ದಾಟಿದ್ದೇ ಅವನ ಅಧೋಗತಿಗೆ ಕಾರಣವಾಯಿತು ಎಂದು ಯಾರ ಬಗ್ಗೆಯೋ ಯಾರೋ ಹೇಳಿದ್ದು ಕಿವಿಯ ಮೇಲೆ ಬಿದ್ದಿರುತ್ತದೆ. ಈ ಲಕ್ಷ್ಮಣ ರೇಖೆ ಎನ್ನುವುದು ಮೀರಲೇ ಬಾರದ ಮಿತಿಯಾಗಿರುತ್ತದೆ. ಅದನ್ನು ಮೀರಿದರೆಂದರೆ ಗಂಡಾಂತರ.
ಏನಿದು ಲಕ್ಷ್ಮಣ ರೇಖೆ? ರಾಮಾಯಣದಲ್ಲಿ ಸೀತಾಪಹರಣದ ಘಟನೆ ಗೊತ್ತಲ್ಲವೆ? ಚಿನ್ನದ ಜಿಂಕೆಯ ಬೇಟೆಗೆ ಶ್ರೀರಾಮ ಹೋಗುತ್ತಾನೆ. ಮಾರೀಚನನ್ನು ಬಾಣದಿಂದ ಕೊಲ್ಲುತ್ತಾನೆ. ಮಾರೀಚ ಸಾಯುವಾಗ ಓ ಲಕ್ಷ್ಮಣಾ, ಓ ಸೀತಾ ಎಂದು ಕೂಗಿ ಸಾಯುತ್ತಾನೆ. ಸೀತೆ ರಾಮನ ರಕ್ಷಣೆಗೆ ಹೋಗುವಂತೆ ಲಕ್ಷ್ಮಣನಿಗೆ ಒತ್ತಾಯಿಸುತ್ತಾಳೆ. ಲಕ್ಷ್ಮಣನಿಗೆ ಉಭಯಸಂಕಟ. ಹೋಗಲಾರ ಹೋಗದೆಯೂ ಇರಲಾರ.
ಕೊನೆಗೆ ಕುಟೀರದ ಸುತ್ತಲೂ ಒಂದು ರೇಖೆಯನ್ನು ಎಳೆದು, ಈ ರೇಖೆಯ ಈಚೆ ಬರಬೇಡವೆಂದು ಸೀತೆಗೆ ಹೇಳಿ ಹೋಗುತ್ತಾನೆ. ಇದೇ ಲಕ್ಷ್ಮಣ ರೇಖೆ.
ರಾವಣ ಸೀತೆಯನ್ನು ಅಪಹರಿಸಲು ಸನ್ಯಾಸಿ ರೂಪದಲ್ಲಿ ಭಿಕ್ಷೆಗೆ ಬಂದಾಗ ಅವನಿಗೆ ಲಕ್ಷ್ಮಣ ರೇಖೆಯನ್ನು ದಾಟಲು ಆಗುವುದಿಲ್ಲ. ಸೀತೆ ಲಕ್ಷ್ಮಣನ ಮಾತನ್ನು ಮೀರಿ ರೇಖೆಯನ್ನು ದಾಟಿದಾಗ ರಾವಣ ಅವಳನ್ನು ಅಪಹರಿಸುತ್ತಾನೆ.