ರಾಷ್ಟ್ರಕವಿ ಪದವಿ ಮತ್ತು ಜನಸಾಮಾನ್ಯ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ನಿಧನರಾಗಿ ಬಹು ದಿನಗಳಾಗಿಹೋದವು. ಅವರ ನಿಧನದೊಂದಿಗೆ ರಾಷ್ಟ್ರಕವಿ ಎಂಬ ಗೌರವ ಹಾಗೆಯೇ ಉಳಿದುಬಿಟ್ಟಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಮೂವರು ರಾಷ್ಟ್ರಕವಿಗಳು ಆಗಿಹೋಗಿದ್ದಾರೆ. ಎಂ.ಗೋವಿಂದಪೈಯವರು ಮದ್ರಾಸ್ ಸರ್ಕಾರದಿಂದ ರಾಷ್ಟ್ರಕವಿ ಗೌರವವಕ್ಕೆ ಪಾತ್ರರಾಗಿದ್ದರು. ಅವರ ಬಳಿಕ ಕುವೆಂಪು ಅವರು ಕರ್ನಾಟಕ ಸರ್ಕಾರದಿಂದಲೇ ರಾಷ್ಟ್ರಕವಿಯಾದರು. ಅವರ ನಿಧನದ ಬಳಿಕ ಜಿ.ಎಸ್.ಶಿವರುದ್ರಪ್ಪನವರಿಗೆ ಆ ಗೌರವ ಬಂತು. ಈಗ ಅವರೂ ನಿಧನರಾಗಿದ್ದಾರೆ. ಈಗ ಆ ಗೌರವವನ್ನು ಯಾರಿಗೆ ನೀಡಬೇಕು? ಇದು ಇನ್ನೂ ಸಾರ್ವಜನಿಕರ ಚರ್ಚೆಯ ವಿಷಯವಾಗಿಲ್ಲ. ನಮ್ಮಲ್ಲಿ ರಾಷ್ಟ್ರಕವಿ ಗೌರವವನ್ನು ಹೊಂದಿದ ವ್ಯಕ್ತಿ ನಿಧನರಾದ ಬಳಿಕವಷ್ಟೇ ಮತ್ತೊಬ್ಬರನ್ನು ಆ ಗೌರವಕ್ಕೆ ಆಯ್ಕೆ ಮಾಡುವ ಪರಿಪಾಠವಿದೆ. ಈ ಗೌರವವನ್ನು ಪಡೆಯಲು ಅರ್ಹರಾದ ಹಲವರು ನಮ್ಮಲ್ಲಿದ್ದಾರೆ. ನಾಡು ನುಡಿಗೆ ತಮ್ಮ ಜೀವನ ಪೂರ್ತಿ ಒಬ್ಬ ಸಾಹಿತಿ ಸಲ್ಲಿಸಿದ ಸೇವೆಯೇ ಈ ಗೌರವವನ್ನು ಪಡೆಯುವುದಕ್ಕೆ ಅರ್ಹತೆ. ರಾಷ್ಟ್ರಕವಿ ಎಂಬ ಗೌರವದಲ್ಲಿ ‘ಕವಿ’ ಎಂಬ ಪದ ಸೇರಿಕೊಂಡಿದೆ. ಈ ಹಿಂದಿನ ಮೂವರು ಮಹನೀಯರೂ ಕಾವ್ಯವನ್ನು ರಚಿಸಿರುವುದರ ಜೊತೆಗೆ ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಕೃಷಿ ಮಾಡಿದವರೇ. ಕವಿ ಎನ್ನುವುದಕ್ಕೆ ಕಾವ್ಯಮೀಮಾಂಸೆಯಲ್ಲಿ ವಿಶಾಲವಾದ ಅರ್ಥವಿದೆ. ಕಾವ್ಯದಲ್ಲಿ ನಾಟಕವು ಶ್ರೇಷ್ಠ ಎಂಬಂಥ ಉಕ್ತಿಗಳು ಏನನ್ನು ಹೇಳುತ್ತವೆ? ಕವಿತೆಗಳನ್ನು ಬರೆದವರು ಮಾತ್ರವೇ ಕವಿಗಳಲ್ಲ. ಸಾಹಿತ್ಯದ ಯಾವ ಪ್ರಕಾರದಲ್ಲಿ ಕೃಷಿ ಮಾಡಿದರೂ ಆತ ಕವಿಯೇ. ಕಾವ್ಯ ಮೀಮಾಂಸೆಯಲ್ಲಿ ಕವಿ ಎಂದರೆ ಸಾಹಿತಿ ಎಂಬ ವಿಶಾಲಾರ್ಥವಿರುವುದು ಕಂಡುಬರುತ್ತದೆ. ನಮ್ಮ ಮುಂದಿನ ರಾಷ್ಟ್ರಕವಿಯನ್ನು ಆಯ್ಕೆ ಮಾಡುವಾಗ ಅಥವಾ ಆಯ್ಕೆ ಮಾಡುವುದಿದ್ದರೆ ಕೇವಲ ಕವಿತೆ ಬರೆದವರನ್ನು ಮಾತ್ರ ಆಯ್ಕೆ ಮಾಡಬೇಕಾಗಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೆಲಸ ಮಾಡಿದವರನ್ನು ಪರಿಗಣಿಸುವುದು ಸೂಕ್ತ. ಹೀಗೆ ರಾಷ್ಟ್ರಕವಿ ಗೌರವವನ್ನು ಆ ವ್ಯಕ್ತಿಯ ಜೀವಮಾನದ ಕೊನೆಯ ವರೆಗೆ ಉಳಿಸುವ ಬದಲು ಕೆಲವು ವರ್ಷಗಳ ವರೆಗೆ ನಿಗದಿ ಮಾಡಬಹುದಾಗಿದೆ. ನ್ಯೂಯಾರ್ಕ್‌ಟೈಮ್ಸ್ ಪತ್ರಿಕೆಯಲ್ಲಿ ಇತ್ತೀಚೆ ಬಂದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ಅಮೆರಿಕದ ಉತ್ತರ ಕೆರೋಲಿನಾದ ಹೊಸದಾಗಿ ನೇಮಕಗೊಂಡ ರಾಷ್ಟ್ರಕವಿ ವಲೆರಿ ಮ್ಯಾಕೊನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅವರ ನೇಮಕದ ಬಗ್ಗೆ ತೀವ್ರ ಸ್ವರೂಪದ ಟೀಕೆ ಕೇಳಿ ಬಂದಿತ್ತು. ಇದಕ್ಕೆ ಕಾರಣ ಇಲ್ಲದಿಲ್ಲ. ವಲೆರಿ ಮ್ಯಾಕೊನ್ ಸರ್ಕಾರಿ ನೌಕರಿಯಲ್ಲಿ ಇದ್ದವರು. ಮತ್ತು ಅವರು ಎರಡೇ ಪುಸ್ತಕಗಳನ್ನು ತಾವೇ ಪ್ರಕಾಶಿಸಿಕೊಂಡವರು. ತಮ್ಮ ವಿರುದ್ಧ ಟೀಕೆಗಳು ಬಂದಾಗ ವಲೆರಿ ಆ ಗೌರವವನ್ನು ತ್ಯಜಿಸಿಬಿಟ್ಟರು. ರಾಷ್ಟ್ರಕವಿಯೆಂಬ ಗೌರವ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಕಡೆಯೂ ಇದ್ದದ್ದು ಈ ಮೂಲಕ ನನ್ನ ಅರಿವಿಗೆ ಬಂತು. ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ರಾಷ್ಟ್ರಕವಿಗಳಿದ್ದಾರೆ. ಅವರನ್ನ ಅಲ್ಲಿ ‘ಸ್ಟೇಟ್ ಪೋಯೆಟ್ಸ್ ಲೌರೇಟ್ಸ್ ’ ಎಂದು ಕರೆಯುತ್ತಾರೆ. ಈ ಗೌರವವನ್ನು ಪಡೆದ ಹಲವು ಹಳಬರೂ ವಲೆರಿಯ ಟೀಕಾಕಾರರಲ್ಲಿ ಸೇರಿದ್ದರು. ಈ ರಾಷ್ಟ್ರಕವಿ ಆಯ್ಕೆ ಪ್ರಕ್ರಿಯೆಯ ಕುರಿತೇ ಅಲ್ಲಿ ವಾಗ್ವಾದಗಳು ಆರಂಭವಾದವು. ಸಾಹಿತಿಗಳು ಕರ್ನಾಟಕವಾದರೂ ಅಷ್ಟೇ ಅಮೆರಿಕವಾದರೂ ಅಷ್ಟೇ, ವಿವಾದಗಳು ಅವರನ್ನು ಗಟ್ಟಿಯಾಗಿ ಹಿಡಿದುಬಿಡುತ್ತವೆ ಎಂದು ಅನ್ನಿಸಿತು. ಅಮೆರಿಕದಲ್ಲಿ ರಾಷ್ಟ್ರಕವಿಯಾಗಿ ನೇಮಕವಾದವರಿಗೆ ಕೆಲವು ಜವಾಬ್ದಾರಿಗಳು ಇರುತ್ತವೆ. ಪ್ರತಿ ರಾಜ್ಯಕ್ಕೂ ಅಧಿಕೃತವಾದ ಪಕ್ಷಿಗಳು, ಬಂಡೆಗಳು ಮತ್ತು ವೃಕ್ಷಗಳು ಇವೆ. ಅದೇ ರೀತಿಯಲ್ಲಿ ರಾಷ್ಟ್ರ ಕವಿಗಳನ್ನೂ ಅವರು ಹೊಂದಿದ್ದಾರೆ. ಅಮೇರಿಕದ ೪೪ ರಾಜ್ಯಗಳಲ್ಲಿ ಮತ್ತು ಕೊಲಂಬಿಯಾ ಜಿಲ್ಲೆಯಲ್ಲಿ ಪೊಯೆಟ್ ಲೌರೇಟ್ ಅಥವಾ ಆಸ್ಥಾನ ಕವಿಗಳು ಇದ್ದಾರೆ. ಈ ರಾಷ್ಟ್ರಕವಿ ಹುದ್ದೆ ಪುಕ್ಕಟೆಯದೇನಲ್ಲ. ಅದಕ್ಕೆ ವಾರ್ಷಿಕ ೩೫ ಸಾವಿರ ಡಾಲರ್‌ಗಳಷ್ಟು ಸ್ಟೈಫಂಡ್ ಇದೆ. ಇದು ೧೯೩೭ನೆ ಇಸ್ವಿಯಿಂದಲೇ ನಡೆದುಕೊಂಡು ಬಂದ ಪರಂಪರೆಯಾಗಿದೆ. ಈ ಮೊತ್ತ ಒಂದೇ ರೀತಿಯಾಗಿಲ್ಲ. ವಿಸ್ಕಾನ್ಸಿನ್‌ನಲ್ಲಿ ಲೌರೇಟ್‌ಗೆ ೨ ಸಾವಿರ ಡಾಲರ್‌ಗಳಷ್ಟು ಪ್ರಯಾಣ ವೆಚ್ಚವನ್ನು ಮಾತ್ರ ನೀಡಲಾಗುತ್ತಿದೆ. ಲೈಬ್ರರಿಯನ್ ಆಫ್ ಕಾಂಗ್ರೆಸ್ ಈ ಗೌರವಾನ್ವಿತರನ್ನು ಆಯ್ಕೆಮಾಡುತ್ತಿತ್ತು. ಈ ರೀತಿ ಗೌರವಕ್ಕೆ ಪಾತ್ರರಾದ ಕೆಲವರು ತಮ್ಮ ಕೃತಿಗಳು ಎಲ್ಲ ಗ್ರಂಥಾಲಯಗಳು, ಹೊಟೇಲ್ ರೂಮುಗಳಲ್ಲಿ ಇರಬೇಕೆಂದು ಬಯಸುತ್ತಿದ್ದರು. ಈ ಗೌರವ ನಮ್ಮಲ್ಲಿರುವಂತೆ ಆಜೀವ ಪರ್ಯಂತವೂ ಅಲ್ಲ. ಕೇವಲ ಎರಡು ವರ್ಷಗಳ ಅವಧಿಯದು. ಅಮೆರಿಕದ ಮಾದರಿಯನ್ನು ಇಟ್ಟುಕೊಂಡು ನಮ್ಮಲ್ಲೂ ಎರಡು ವರ್ಷಗಳ ಅವಧಿಗೆ ರಾಷ್ಟ್ರಕವಿ ಗೌರವವನ್ನು ನೀಡಬಹುದಾಗಿದೆ. ಇದು ಕೇವಲ ಗೌರವವಾಗಿರದೆ ಅಮೆರಿಕದಂತೆ ಇಲ್ಲಿಯೂ ಅವರಿಗೆ ಒಂದು ಮೊತ್ತವನ್ನು ನೀಡಬೇಕು. ಹಣದ ವಿಷಯ ಬಂದಾಗ ಪೈಪೋಟಿಯಂತೂ ಇದ್ದೇ ಇರುತ್ತದೆ. ತಮಗೆ ಸಿಗಲಿಲ್ಲವೆಂದು ಪದವಿ ದೊರಕಿದವರನ್ನು ಟೀಕಿಸುವವರೂ ಇರುತ್ತಾರೆ. ಯಾವುದೇ ಪ್ರಶಸ್ತಿ, ಗೌರವ ಬಂದರೂ ಅದಕ್ಕೆ ಅಪಸ್ವರ ಇದ್ದೇ ಇರುತ್ತದೆ. ಅದರಲ್ಲೂ ಸರ್ಕಾರದ ಗೌರವವಾದರಂತೂ ಮುಗಿದೇ ಹೋಯಿತು. ಮತ್ತೆ ಅದರಲ್ಲಿ ಹಣದ ಕೊಡುಗೆ ಇದ್ದರಂತೂ ಕೇಳುವುದೇ ಬೇಡ. ರಾಷ್ಟ್ರಕವಿ ಪದವಿ ಕೇವಲ ಅಲಂಕಾರಿಕವಾಗಿ ಮಾತ್ರ ಇರಕೂಡದು. ಅವರಿಗೆ ನಿರ್ದಿಷ್ಟವಾದ ಕಾರ್ಯಸೂಚಿ ಇರಬೇಕು. ಅವರನ್ನು ಆ ಪದವಿಗೆ ಆಯ್ಕೆಮಾಡುವಾಗ ಅವರ ಕಾರ್ಯಸೂಚಿ ಏನೇನು ಎಂಬುದರ ಬಗ್ಗೆ ಅವರಿಂದ ವಿವರಣೆಯನ್ನು ಪಡೆದುಕೊಳ್ಳಬೇಕು. ಅಮೆರಿಕದಲ್ಲಿ ರಾಷ್ಟ್ರಕವಿ ಗೌರವ ಪಡೆದ ಒಬ್ಬ ಕವಯತ್ರಿ ಮೈಕ್ ಹಿಡಿದು ಲಾಂಜ್‌ನಲ್ಲಿ ಕವಿತೆಗಳನ್ನು ಓದುತ್ತಿದ್ದರು. ಕ್ಯಾಲಿಫೋರ್ನಿಯಾದ ರಾಷ್ಟ್ರಕವಿಯಾಗಿದ್ದ ಜುಆನ್ ಫೆಲಿಪ್ ಹೆರ್ರೆರಾ ಅವರು ಇ-ಮೇಲ್, ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕ ಜನರನ್ನು ಸಂಪರ್ಕಿಸಿ ಜಾಗತಿಕ ಭಾವೈಕ್ಯತೆ ಸಂಬಂಧದಲ್ಲಿ ನಂಬಲಸದಳವೆನ್ನಿಸುವ ರೀತಿಯಲ್ಲಿ ಅತಿ ದೊಡ್ಡದಾದ ಕವಿತೆಯೊಂದನ್ನು ರೂಪಿಸಿದರು. ಅದನ್ನು ಕ್ಯಾಲಿಫೋರ್ನಿಯಾದ ನದಿ ದಂಡೆಯಲ್ಲಿ ಏರ್ಪಡಿಸಿದ್ದ ಐಕ್ಯತೆ ಕುರಿತ ಕಾವ್ಯೋತ್ಸವದಲ್ಲಿ ಹಾಡಲಾಯಿತು. ಹೆರ್ರೆರಾ ಅಮೆರಿಕದ ಕವಿಗಳ ಅಕಾಡೆಮಿಯ ಛಾನ್ಸಲರ್ ಆಗಿದ್ದವರು. ಅವರು ‘ಐ-ಪ್ರಾಮಿಸ್ ಜೊನ್ನಾ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದರ ಆಶ್ರಯದಲ್ಲಿ ಅವರು ಸ್ಥಳೀಯ ಕವಿಗಳನ್ನು ಶಾಲೆಗಳಿಗೆ ಕಳುಹಿಸಿದರು. ಶಾಲೆಯ ಮಕ್ಕಳು ಸಾಮೂಹಿಕವಾಗಿ ಕಲೆತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಉಂಟಾಗುವ ಗದ್ದಲ ಕೂಗಾಟಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಈಗಲೂ ಕೆಲವು ರಾಷ್ಟ್ರಕವಿಗಳಿಗೆ ಪದವಿ ಪ್ರದಾನ ಸಮಾರಂಭಗಳಿಗೆ, ಆಸ್ಪತ್ರೆ ಉದ್ಘಾಟನೆಯ ಸಮಾರಂಭಗಳಿಗೆ, ಇತರ ಕೆಲವು ಸಾರ್ವಜನಿಕ ಸಮಾರಂಭಗಳಿಗೆ ಹಾಡನ್ನು ಸಂಯೋಜಿಸಿಕೊಡುವಂತೆ ಬೇಡಿಕೆಗಳು ಬರುತ್ತಿವೆ. ಗಣ್ಯವ್ಯಕ್ತಿಗಳ ಜನ್ಮ ದಿನ ಪುಣ್ಯತಿಥಿಗಳ ಸಂದರ್ಭದಲ್ಲಿಯೂ ಅವರ ಬಗ್ಗೆ ಕವಿತೆ ರಚಿಸುವಂತೆ ಬೇಡಿಕೆಗಳು ಬರುತ್ತವೆ. ಇದು ಕೆಲವು ಸಲ ಪುಕ್ಕಟೆಯದಾಗಿರಬಹುದು ಇಲ್ಲ ಕೆಲವು ಸಲ ಇದರಿಂದ ಹಣವೂ ಬರಬಹುದು. ಪ್ರಸಿದ್ಧಿಯಂತೂ ಇದ್ದೇ ಇದೆ. ತಮ್ಮ ರಾಜ್ಯದ ವಿಶೇಷತೆಗಳನ್ನು ಹೇಳುವ ಮಕ್ಕಳಿಗೆ ಪಠ್ಯವಾಗುವಂಥ ಕವಿತೆಯನ್ನು ರಚಿಸಿಕೊಡುವಂತೆಯೂ ಅಲ್ಲಿಯ ರಾಷ್ಟ್ರಕವಿಗಳಿಗೆ ಬೇಡಿಕೆ ಬಂದಿದೆ. ನಮ್ಮಲ್ಲಿ ಕುವೆಂಪು ಅವರು ‘‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’’ ಕವಿತೆಯನ್ನು ಬರೆದು ಅಜರಾಮರರಾಗಿದ್ದಾರಲ್ಲವೆ? ನಮ್ಮಲ್ಲಿಯೂ ರಾಷ್ಟ್ರಕವಿ ಗೌರವಕ್ಕೆ ಪಾತ್ರರಾಗುವವರಿಗೆ ಕೆಲವು ಜವಾಬ್ದಾರಿಗಳನ್ನು ಹೊರಿಸಬೇಕು. ಸರ್ಕಾರದ ಕೆಲವು ಯೋಜನೆಗಳಿಗೆ ಘೋಷವಾಕ್ಯಗಳನ್ನು ಬರೆದುಕೊಡುವುದು, ಪುಟ್ಟಪುಟ್ಟ ಕವಿತೆಗಳನ್ನು ಸಾರ್ವಜನಿಕರ ಅರಿವಿನ ಪ್ರಚಾರಕ್ಕೆ ಬಳಸುವಂತೆ ಬರೆದುಕೊಡುವುದು ಇತ್ಯಾದಿ ಇತ್ಯಾದಿ. ಇದು ಕೆಲವರಿಗೆ ಇಷ್ಟವಾಗದೆ ಹೋಗಬಹುದು. ಸಮಾಜಮುಖಿ ಸಾಹಿತಿ ಸಮಾಜದ ಒಳಿತಿಗಾಗಿಯೇ ಚಿಂತಿಸಬೇಕಾದ ಅನಿವಾರ್ಯತೆ ಇರುವಾಗ ಇಂಥ ಕೆಲಸ ಸಾಹಿತಿಗಳಿಗೆ ಪ್ರಿಯವಾಗಬೇಕು. ಏಡ್ಸ್ ಮಾರಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂಥ ಒಂದು ಕವಿತೆ ಬರೆದುಕೊಟ್ಟರೆ ಅದನ್ನು ಪ್ರಸಾರ ಮಾಡುವುದಕ್ಕೆ ಇಂದು ಮಾಧ್ಯಮಗಳ ಕೊರತೆ ಏನಿಲ್ಲ. ಇದರಿಂದ ಬರುವ ಗೌರವವೂ ಕಡಿಮೆಯದಲ್ಲ. ಜನಪದ ಕಲೆಗಳನ್ನು ಈ ನಿಟ್ಟಿನಲ್ಲಿ ಈಗಾಗಲೆ ದುಡಿಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ರಾಷ್ಟ್ರಕವಿಯನ್ನು ಆಯ್ಕೆಮಾಡುವಾಗ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. ಕವಿಗಳೇ ಆಗಬೇಕೆಂದೇನಿಲ್ಲ. ಸಾಹಿತ್ಯದ ಯಾವ ಪ್ರಕಾರದಲ್ಲಿ ಕೆಲಸ ಮಾಡಿದವರೂ ಆಗಬಹುದು. ಇವರು ದಂತಗೋಪುರದ ವಾಸಿಯಾಗಿರಬಾರದು. ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯರಿರಬೇಕು. ಆಯ್ಕೆಯಾದ ಮೇಲೆ ಅವರು ಸಾಯುವವರೆಗೂ ಆ ಗೌರವ ಹೊಂದಿರಬೇಕಾಗಿಲ್ಲ. ಅವರಿಗೆ ಫೆಲೋಶಿಪ್ ಮಾದರಿಯಲ್ಲಿ ಗೌರವ ಧನ ನಿಗದಿ ಮಾಡಿ ಎರಡು-ಮೂರು ವರ್ಷಗಳ ಅವಧಿಯನ್ನು ನೀಡಬಹುದು. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಲಿ.