*ಈ ರಾಜ್ಯದಲ್ಲಿ ಸುಭಿಕ್ಷವೇ ಸುಭಿಕ್ಷ

ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ಸರ್ವಗುಣ ಸಂಪನ್ನನಾದ ಒಬ್ಬ ವ್ಯಕ್ತಿ ಪ್ರಸ್ತುತ ಕಾಲದಲ್ಲಿ ಯಾರು ಇದ್ದಾರೆ ಎಂದು ವಾಲ್ಮೀಕಿ ಮಹರ್ಷಿಯು ನಾರದ ಮುನಿಗಳನ್ನು ಪ್ರಶ್ನಿಸುತ್ತಾರಂತೆ. ಆಗ ನಾರದರು ವಾಲ್ಮೀಕಿಗೆ ಶ್ರೀರಾಮನ ಚರಿತ್ರೆಯನ್ನು ಹೇಳುತ್ತಾರಂತೆ.
ಶ್ರೀರಾಮನ ರಾಜ್ಯದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳು ಇರಲಿಲ್ಲವಂತೆ. ಎಲ್ಲರೂ ಸುಖಿಗಳಾಗಿದ್ದರಂತೆ. ಶ್ರೀರಾಮ ಸ್ವತಃ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದ. ಜನರ ಅಪವಾದಕ್ಕೆ ಅಂಜಿ ತನ್ನ ಪತ್ನಿ ಸೀತೆಯನ್ನು ತ್ಯಾಗ ಮಾಡಿದ್ದ.
ನ್ಯಾಯದಾನದಲ್ಲಿ ಶ್ರೀರಾಮನು ಅತ್ಯಂತ ಹೆಸರುವಾಸಿಯಾಗಿದ್ದ. ತನ್ನ ಕಾಲದ ರಾಜನೀತಿಯನ್ನು ಕರ್ತವ್ಯಪರನಾಗಿ ಜಾರಿಮಾಡಿ ಎಲ್ಲರಿಗೂ ಆದರ್ಶಪುರುಷನಾಗಿದ್ದ. ರಾಜನಾದವನು ಹೇಗೆ ಆಡಳಿತ ನಡೆಸಬೇಕೆಂದರೆ ಶ್ರೀರಾಮನಂತೆ ಎಂಬ ಮಾತು ಪ್ರಚಲಿತದಲ್ಲಿ ಬಂತು. ರಾಜರಿಗೆಲ್ಲ ಶ್ರೀರಾಮನ ರಾಜ್ಯವೇ ಮಾದರಿಯಾಯಿತು.
ಇಂದು ರಾಜರಿಲ್ಲ. ಪ್ರಜೆಗಳೇ ಪ್ರಭುಗಳು. ಇಂಥ ವ್ಯವಸ್ಥೆಯಲ್ಲೂ ಉತ್ತಮ ಆಡಳಿತವನ್ನು ಕಂಡಾಗ ಅದೊಂದು ರಾಮರಾಜ್ಯ ಎಂದು ವರ್ಣಿಸುವುದಿದೆ.
ಯಾವ ರಾಜ್ಯದಲ್ಲಿ ಸುಭಿಕ್ಷ ಇಲ್ಲವೋ, ಪ್ರಜೆಗಳು ಅಸುಖಿಗಳಾಗಿದ್ದಾರೋ, ಪ್ರಭುವಿನ ವಿರುದ್ಧ ಯಾವ ರಾಜ್ಯದಲ್ಲಿ ಪ್ರಜೆಗಳು ಗೊಣಗುತ್ತಾರೋ ಅಂಥ ರಾಜ್ಯವನ್ನು ರಾವಣ ರಾಜ್ಯ ಎಂದು ಕರೆಯುವುದಿದೆ.