ಡೆಲ್ಲಿಯಲ್ಲಿ ದಲ್ಲಾಳಿಗಳು
ಅಂಗಡಿ ತೆರೆದಿದ್ದಾರೆ
ಅಳೆದಳೆದು ತೂಗಿ ತೂಗಿ
ರತ್ನಗಳನ್ನು ಮಾರುತ್ತಿದ್ದಾರೆ

ಕೂಗಿ ಕೂಗಿ ಕರೆಯುತ್ತಿದ್ದಾರೆ
ಬನ್ನಿ ಬನ್ನಿ
ಕೈ ಬದಲಾಯಿಸಿ ನೋಡಿ
ಬೆರಳು ಬೆರಳಿಗೂ
ಮುತ್ತು ರತ್ನ ಪಚ್ಚೆ ಪವನಿನ ಉಂಗುರ

ನಿಮ್ಮಲ್ಲಿ ಎಷ್ಟಿದೆಯೋ ಅಷ್ಟೇ ತನ್ನಿ
ಅದಕ್ಕೆ ತಕ್ಕಂತೆ
ನಿಮ್ಮ ಬೆರಳು ಕೊರಳು
ಅಳತೆಗೆ ಎರಕ ಹೊಯ್ದು
ಸ್ಥಳದಲ್ಲೇ ಸುಂದರ ರತ್ನದ ಹಾರ

ಅದನ್ನು ತೊಟ್ಟರೆ
ನಿಮ್ಮ ಗುರುತು ನಿಮಗೇ ಹತ್ತುವುದಿಲ್ಲ
ನಮ್ಮ ಆಭರಣವೇ ನಿಮಗೆ ಹೂರಣ
ಎಲ್ಲ ಕಡೆ ಸಲ್ಲುವ ನಿಮಗೆ
ಹೋದಕಡೆಗೆಲ್ಲ ತೋರಣ

ನೀವು ನಡೆವ ದಾರಿಯಲಿ
ತಾವರೆಯ ಪಕಳೆಗಳು
ಕಮಲ ಕೊಳದಲ್ಲಿ ಮುಳುಗೆದ್ದರೆ
ನೀವು ತುಳಿದ ಕೊಳಚೆಯೆಲ್ಲ
ಇಲ್ಲಿ ಮಡಿಯಾಗಿ ನೀವು ಶುದ್ಧವೋ ಶುದ್ಧ

ನೀವು ಏನೇ ಆಗಿರಿ
ನಾವು ಎನ್ನುವೆವು
ಕಮ್ಮಿ ಇಲ್ಲ ನೀವು ವಿಭೀಷಣಗೆ
ನೀಡುವೆವು ಭೂಷಣ, ವಿಭೂಷಣ
ಆಗಿರಿ ಭವಿಷ್ಯಕೆ ನೀವೇ ಕಾರಣ

ಡೆಲ್ಲಿಯ ದಲ್ಲಾಳಿಗಳ ಮನಸು ದೊಡ್ಡದು
ಹಿಂದಿನವರು ಕೊಡದಿದ್ದರೇನಂತೆ
ಕೊಡುವರು ಅವರು
ಅದಕ್ಕೇ ಮಾಡಿರುವರು ಸಂತೆ
ಸತ್ತು ಸಂವತ್ಸರಗಳು
ಉರುಳಿದರೇನಂತೆ
ಅವರಲ್ಲಿವೆ ರತ್ನಗಳ ಕಂತೆ ಕಂತೆ
ನಿಮ್ಮ ಅಪ್ಪ, ಅವರಪ್ಪ, ಅವರಪ್ಪನ ಅಪ್ಪ
ಯಾರಾದರೂ ಸರಿ ಕೊಡುವರು ಕಪ್ಪ

ನೀವು ಮಾಡಬೇಕಿರುವುದು ಇಷ್ಟೇ
ಕೈ ಬಿಟ್ಟು ಕೈ ಕಟ್ಟಿ ಬನ್ನಿ
ತಲೆ ಎತ್ತದೆ ನಡು ಬಗ್ಗಿಸಿ ಬನ್ನಿ