*ದುಷ್ಟ ಸಂತತಿಗೆ ಸಾವಿಲ್ಲವಂತೆ

ಮಾಜಕ್ಕೆ ಸದಾ ಕೆಡುಕನ್ನು ಮಾಡುತ್ತಿರುವ ಜನರು ಇರುತ್ತಾರೆ. ಅವರಿಂದ ಎಂದಿಗೂ ಯಾರಿಗೂ ಒಳಿತು ಆಗುವುದಿಲ್ಲ. ಅವನು ಸಾಯಲಿ ಎಂದು ಜನ ದಿನವೂ ಬಯಸುತ್ತಿರುತ್ತಾರೆ. ಒಬ್ಬ ದುಷ್ಟ ಹೋದರೆ ಅವನ ಹೆಜ್ಜೆಯಲ್ಲೇ ಕಾಲಿಟ್ಟು ಇನ್ನೊಬ್ಬ ದುಷ್ಟ ಬರುತ್ತಾನೆ. ಇಂಥ ದುಷ್ಟ ಪರಂಪರೆ ಮುಂದುವರಿಯುವುದನ್ನು ಕಂಡಾಗ ನೊಂದವರು ರಕ್ತಬೀಜಾಸುರ ಸಂತತಿ ಎಂದು ಕರೆಯುತ್ತಾರೆ.
ಯಾರೀತ ರಕ್ತಬೀಜಾಸುರ? ದೇವೀಪುರಾಣದಲ್ಲಿ ಈ ರಕ್ತಬೀಜಾಸುರನ ಪ್ರಸ್ತಾಪ ಬರುತ್ತದೆ. ಮಹಿಷಾಸುರನ ಸೇನಾಪತಿಗಳಲ್ಲಿ ಒಬ್ಬ ಈ ರಕ್ತಬೀಜಾಸುರ. ಇವನ ಮೈಯಿಂದ ಬಿದ್ದ ಹನಿ ರಕ್ತದಿಂದ ಮತ್ತೊಬ್ಬ ರಕ್ತಬೀಜಾಸುರ ಹುಟ್ಟಿ ಬರುತ್ತಿದ್ದ. ಅವನ ನಾಶ ಸಾಧ್ಯವೇ ಇರಲಿಲ್ಲ.
ಆಗ ದೇವಿ ಉಪಾಯ ಮಾಡಿ ತನ್ನ ನಾಲಿಗೆಯನ್ನು ಉದ್ದಕ್ಕೆ ಚಾಚಿ ರಕ್ತಬೀಜಾಸುರನ ಹನಿ ರಕ್ತವೂ ನೆಲದ ಮೇಲೆ ಬೀಳದಂತೆ ಕುಡಿದುಬಿಡುತ್ತಾಳೆ. ರಕ್ತ ಕಳೆದುಕೊಂಡ ರಕ್ತಬೀಜಾಸುರ ಸಾವನ್ನಪ್ಪುತ್ತಾನೆ.
ಅವನೇನೋ ಸತ್ತ. ಆದರೆ ದುಷ್ಟ ಸಂತತಿಯನ್ನು ಇಲ್ಲದಂತೆ ಮಾಡುವುದು ಸಾಧ್ಯವೆ?