*ಕುಟುಂಬದೊಳಗಿನ ಜಗಳ ಇದು

ಮ್ಮ ತಮ್ಮೊಳಗೇ ಬಡಿದಾಡುವವರನ್ನು ನೋಡಿ ಯಾದವಿ ಕಲಹ ಅವರದು ಎಂದು ಹೇಳುತ್ತಾರೆ. ಒಗ್ಗಟ್ಟೇ ಬಲ ನಿಜ. ಒಗ್ಗಟ್ಟಿಲ್ಲದಿದ್ದರೆ ಯಾದವರ ಹಾಗೆ ತಮ್ಮತಮ್ಮೊಳಗೇ ಬಡಿದಾಡಿ ನಾಶವಾಗುತ್ತಾರೆ.
ಶ್ರೀಕೃಷ್ಣ ಜನಿಸಿದ ಯಾದವ ಕುಲ ಅತ್ಯಂತ ಪ್ರಸಿದ್ಧ ಮತ್ತು ಅಜೇಯವಾಗಿತ್ತು. ಅವರನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಇದರಿಂದಾಗಿ ಸಹಜವಾಗಿಯೇ ಅವರಲ್ಲಿ ಅಹಂಕಾರವೂ ಮೂಡಿತ್ತು. ಯಾರನ್ನು ಬೇಕಾದರೂ ತಾವು ನಿಗ್ರಹಿಸಬಲ್ಲೆವು ಎಂಬ ಭಾವದಲ್ಲಿ ಅವರಿದ್ದಾಗ ದ್ವಾರಕೆಗೆ ಒಮ್ಮೆ ದೂರ್ವಾಸ ಮುನಿ ಆಗಮಿಸುತ್ತಾರೆ.
ಮದೋನ್ಮತ್ತರಾದ ಯಾದವರು ಕೃಷ್ಣನ ಮಗ ಸಾಂಬನಿಗೆ ಗರ್ಭಿಣಿಯ ವೇಷ ತೊಡಿಸಿ ಆ ಮುನಿಯ ಬಳಿಗೆ ಕರೆದೊಯ್ದು, ಸ್ವಾಮೀ, ಈಕೆ ಗಂಡು ಹಡೆಯುತ್ತಾಳೋ, ಹೆಣ್ಣು ಹಡೆಯುತ್ತಾಳೋ ಎಂದು ಪ್ರಶ್ನಿಸುತ್ತಾರೆ.
ಅವರ ಕುಚೋದ್ಯ ಅರಿತ ದೂರ್ವಾಸರು ಕೋಪದಿಂದ, ನಿಮ್ಮ ವಂಶವನ್ನು ನಾಶ ಮಾಡುವ ಒನಕೆಯ ತುಂಡನ್ನು ಈತ ಹೆರುತ್ತಾನೆ ಎಂದು ಶಾಪವಿತ್ತರು.
ಯಾದವರ ಅಹಂ ಇಳಿದು ಹೋಯಿತು. ಸಾಂಬನ ಸೀರೆಯನ್ನು ಬಿಚ್ಚಿದಾಗ ಕಬ್ಬಿಣದ ತುಂಡೊಂದು ಬಿತ್ತು. ಯಾದವರು ಅದನ್ನು ಪುಡಿಪುಡಿಯಾಗಿ ಅರೆದು ಸಮುದ್ರದಲ್ಲಿ ತೇಲಿ ಬಿಡುತ್ತಾರೆ. ಮತ್ತೆ ತೀರ ಸೇರಿದ ಆ ಒನಕೆಯ ಹುಡಿ ಜೊಂಡಗದ ಗಿಡವಾಗಿ ಬೆಳೆಯುತ್ತದೆ.
ಮುಂದೊಂದು ದಿನ ಯಾದವರು ಸಮುದ್ರ ಸ್ನಾನಕ್ಕೆ ಹೋದಾಗ ಕುಡಿದ ಮತ್ತಿನಲ್ಲಿ ಜಗಳಕ್ಕೆ ತೊಡಗುತ್ತಾರೆ. ಕೊನೆಯಲ್ಲಿ ಜೊಂಡಗದ ಗಿಡಗಳನ್ನೇ ಬೇರು ಸಹಿತ ಕಿತ್ತು ಬಡಿದಾಡಿ ಸಾಯುತ್ತಾರೆ.
ಯಾರಿಗೂ ಸೋಲದ ಯಾದವರು ತಾವುತಾವೇ ಬಡಿದಾಡಿ ಸತ್ತರು. ಇಂಥ ಜಗಳವೇ ಯಾದವೀ ಕಲಹವೆಂದು ಪ್ರಸಿದ್ಧವಾಗಿದೆ.