ಮೊನ್ನಾಚಾರಿಯನ್ನು ನಿಮಗೆ ಪರಿಚಯಿಸಬೇಕು ಎಂದುಕೊಂಡು ಒಂದು ದಶಕವೇ ಕಳೆದುಹೋಯಿತು. ನನ್ನೆದೆಯ ಕವಾಟದಲ್ಲಿ ಗೂಡುಕಟ್ಟಿಕೊಂಡು ಹುರುಸಾನಹಕ್ಕಿಯ ಹಾಗೆ ಗುಟುರು ಗುಟುರು ಕೂಗುತ್ತ, ನನ್ನ ಮರೆಯಬೇಡ ಎಂದು ಆಗಾಗ ಎಚ್ಚರಿಸುತ್ತಲೇ ಇದ್ದ ಆತ. ಹೊಳೆಸಾಲಿನ ಹತ್ತೂರಲ್ಲಿ ಮೊನ್ನಾಚಾರಿಯ ಕಸಬುದಾರಿಕೆಗೆ ಯಾರೂ ಸಾಟಿಯೇ ಇರಲಿಲ್ಲ. ಅವನಿಂದ ಕೆಲಸ ಮಾಡಿಸಿಕೊಳ್ಳಲು ಆಜುಬಾಜಿನ ಊರಿನವರೂ ಅವನಲ್ಲಿಗೆ ಬರುತ್ತಿದ್ದರು.

ನಮ್ಮೂರಲ್ಲಿ ನಾಲ್ಕು ಕೇರಿಯ ಜನರಿಗೆ ಸಮಾನ ದೂರ ಇರುವ ಹಾಗೆ ಗುಡ್ಡದ ಬದಿಯಲ್ಲಿ ಮೊನ್ನಾಚಾರಿ ತನ್ನ ಸಾಲೆಯನ್ನು ತೆರೆದಿದ್ದ. ಅವನೊಬ್ಬನೇ ಅಲ್ಲಿ ಇರುತ್ತಿದ್ದುದು. ಅವನ ಸೋದರ ಸಂಬಂಧಿಗಳು ನಮ್ಮೂರಿನಿಂದ ಮೂರ್ನಾಲ್ಕು ಮೈಲು ದೂರದ ಇನ್ನೊಂದು ಊರಿನಲ್ಲಿ ಇರುತ್ತಿದ್ದರು. ಮೊನ್ನಾಚಾರಿಗೆ ಮಾತು ಬರುತಿಲ್ಲ ಎಂಬ ಕಾರಣಕ್ಕೇ ಇರಬಹುದು ಆತನಿಗೆ ಮದುವೆಯೂ ಆಗಿರಲಿಲ್ಲ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟವನ್ನು ತಾನೇ ಮಾಡಿಕೊಳ್ಳುತ್ತಿದ್ದ. ಮೊನ್ನಾಚಾರಿ ಮೈಗೆಲ್ಲ ಕರಿ ಚುಕ್ಕಿಗಳು ಇದ್ದವು. ಅವು ತಿದಿಯೂದಿದಾಗ ಸಿಡಿದ ಕಿಡಿಗಳು ಬಿದ್ದು ಆದ ಕಲೆಗಳು. ಸಣ್ಣಪುಟ್ಟ ಕಿಡಿಗಳು ಅವನ ಮೈಮೇಲೆ ಬಿದ್ದರೆ ಅವನಿಗೆ ಏನೂ ಅನ್ನಿಸುತ್ತಲೇ ಇರಲಿಲ್ಲ. ಚಳಿ ಇರಲಿ ಮಳೆ ಇರಲಿ ಸೊಂಟದಲ್ಲಿ ಮಾತ್ರ ಗಾಂಧೀ ಮಹಾತ್ಮನ ಹಾಗೆ ಎರಡಡಿ ಅಗಲದ ಮಗ್ಗದ ಪಂಚೆ. ಉಳಿದ ಮೈಯೆಲ್ಲ ಬರೀ ಬೆತ್ತಲೆ. ನಾನು ಅವನನ್ನು ನೋಡುವ ಹೊತ್ತಿಗೆ ಅವನ ಕರಿಯ ಮುಖದಲ್ಲಿ ಬಿಳಿಯ ಕೂದಲುಗಳು ಮೂಡಿದ್ದವು.

ನಮ್ಮೂರ ಭಟ್ಟರ ಕಿರಾಣಿ ಅಂಗಡಿಗೆ ಅವನು ಸಾಮಾನು ಕೊಳ್ಳಲು ಬರುತ್ತಿದ್ದ. ಅವನ ಮೂಕ ಭಾಷೆ ಅವರಿಗೆ ಚೆನ್ನಾಗಿ ಅರ್ಥವಾಗುತ್ತಿತ್ತು. ಅವನು ಊರ ಜನರು ತನಗೆ ಕೂಲಿಯ ಬದಲು ಕೊಡುತ್ತಿದ್ದ ಬತ್ತ, ತೆಂಗಿನ ಕಾಯಿ ಇತ್ಯಾದಿಯನ್ನು ಅಂಗಡಿಯವರಿಗೆ ಕೊಡುತ್ತಿದ್ದ. ಅಂಗಡಿಯಲ್ಲಿ ಸಿಗುತ್ತಿದ್ದ ಅತ್ಯುತ್ತಮ ದರ್ಜೆಯ ಅಕ್ಕಿ, ಬೇಳೆ, ಸೋಪು ಇತ್ಯಾದಿ ಕೊಳ್ಳುತ್ತಿದ್ದ. ನಮ್ಮೂರ ಜನರು ಮೊನ್ನಾಚಾರಿಗೆ ತಾವು ಮಾಡಿಸಿಕೊಂಡ ಕೆಲಸಕ್ಕೆ ದುಡ್ಡು ಕೊಡುತ್ತಿರಲಿಲ್ಲ. ವರ್ಷಕ್ಕೆ ಒಂದು ಬಾರಿ ಬೆಳೆ ಬಂದಾಗ ಅಕ್ಕಿಯನ್ನೋ, ಬತ್ತವನ್ನೋ, ತೆಂಗಿನ ಕಾಯನ್ನೋ ಹೀಗೆ ತಾವು ಬೆಳೆದುದನ್ನು ಒಂದು ಪ್ರಮಾಣದಲ್ಲಿ ಮೈಲಿ ಕೊಡುತ್ತಿದ್ದರು. ಮೊನ್ನಾಚಾರಿ ಕಾಸು ಬೇಕೆಂದರೆ ಅವನ್ನೇ ಮಾರಿಕೊಳ್ಳಬೇಕಿತ್ತು. ಮೊನ್ನಾಚಾರಿಯ ವಿಶೇಷವೆಂದರೆ ಆತನ ನಶ್ಯದ ಪ್ರೀತಿ. ಅವನಿಗೆಂದೇ ಭಟ್ಟರು ತಮ್ಮ ಅಂಗಡಿಯಲ್ಲಿ ನಶ್ಯದ ಡಬ್ಬವನ್ನು ತಂದಿಡುತ್ತಿದ್ದರು. ಒಂದು ಚಿಟಿಕೆ ನಶ್ಯವನ್ನು ಹೆಬ್ಬೆರಳ ಮತ್ತು ತೋರು ಬೆರಳುಗಳ ತುದಿಯಲ್ಲಿ ಹಿಡಿದು ಕತ್ತನ್ನು ನಲವತ್ತೈದು ಅಂಶದ ಕೋನಕ್ಕೆ ತಿರುಗಿಸಿಕೊಂಡು ಮೂಗಿನ ಹೊಳ್ಳೆಗೆ ಇಟ್ಟು ಒಂದು ದೀರ್ಘ ಶ್ವಾಸವನ್ನು ಎಳೆದುಕೊಳ್ಳುತ್ತಿದ್ದ ರೀತಿಯೇ ವಿಶಿಷ್ಟವಾದದ್ದು. ಅದನ್ನು ಮೊನ್ನಾಚಾರಿ ಸ್ಟೈಲ್ ಎಂದು ಬೇಕಾದರೆ ಕರೆಯಿರಿ. ನಶ್ಯ ಮೂಗಿನ ಮೂಲಕ ಮಸ್ತಿಸ್ಕ ಸೇರಿದಾಗ ಆಕ್ಷಿ ಎಂದು ಪಕ್ಕದಲ್ಲಿದ್ದವರು ನಡುಗುವ ಹಾಗೆ ಸೀನಿಬಿಡುತ್ತಿದ್ದ. ಬಂದ ಸುಂಬಳವನ್ನು ಹೆಗಲ ಮೇಲಿನ ಬೈರಾಸದಿಂದ ಒರಸಿಕೊಳ್ಳುತ್ತಿದ್ದ. ಅದನ್ನು ಯಾವಾಗ ತೊಳೆಯುತ್ತಿದ್ದನೋ ದೇವರೇ ಬಲ್ಲ. ನಶ್ಯ ಮಿಶ್ರಿತ ಸುಂಬಳದಿಂದಾಗಿ ಅವನ ಬೈರಾಸವೂ ಅದೇ ಬಣ್ಣಕ್ಕೆ ತಿರುಗಿತ್ತು.

ಊರಿನ ಜನರು ಅವನ ಬಳಿಗೆ ಬರುತ್ತಿದ್ದುದು ತಮ್ಮ ಕತ್ತಿಗೆ ಹಿಡಿ ಹಾಕಿಸಿಕೊಳ್ಳಲು, ನೇಗಿಲನ್ನು ಸರಿಮಾಡಿಸಿಕೊಳ್ಳಲು, ಕೊಟಾರಿ, ಪಿಕಾಸು, ಕೊಡಲಿಗಳಿಗೆ ಕಾವು ಹಾಕಿಸಿಕೊಳ್ಳುವುದಕ್ಕೆ. ಗದ್ದೆ ಕೊಯ್ಲು ಬಂದಾಗ ಹೆಂಗಸರು ತಮ್ಮ ಕತ್ತಿಗಳಿಗೆ ಹಲ್ಲು ಹಾಕಿಸಿಕೊಳ್ಳಲು ಬರುತ್ತಿದ್ದರು. ಉಳುಮೆ ಪ್ರಾರಂಭವಾದಾಗ ರೈತರು ನೇಗಿಲು ಹೊತ್ತು ತರುತ್ತಿದ್ದರು. ಬರುವವರು ಬರಿಗೈಯಲ್ಲಿ ಬಂದರೆ ವಿಚಿತ್ರ ರೀತಿಯಲ್ಲಿ ಕೈ ತಿರುವಿ ಏನು ಎಂಬಂತೆ ಕೇಳುತ್ತಿದ್ದ. ಬರುವವರು ಸ್ವಲ್ಪ ಇದ್ದಲಿಯನ್ನು ತೆಗೆದುಕೊಂಡು ಬರಬೇಕಿತ್ತು. ಅವನ ಕುಲುಮೆ ಉರಿಸಲು ಅದು ಬೇಕಿತ್ತು. ಹಾಗೆ ಬಂದವರಿಂದಲೇ ತಿದಿಯೊತ್ತಿಸಿಕೊಳ್ಳುತ್ತಿದ್ದ. ಕತ್ತಿಗಳಿಗೆ ಹಿಡಿ ಹಾಕುವುದಕ್ಕೆ ಗೇರು ಮರದ ಇಲ್ಲವೆ ಕುರುಡುನಾಯಕನ ಮರದ ಕೊಂಬೆಗಳನ್ನು ಅವನು ಶಿಫಾರಸು ಮಾಡುತ್ತಿದ್ದ. ಅದನ್ನೂ ನಾವೇ ಒಯ್ಯಬೇಕಿತ್ತು. ಬೇರೆ ಜಾತಿಯ ಹಿಡಿಕೆಯನ್ನು ಒಯ್ದರೆ ಅದು ಬುರ್ನಾಸು ಎನ್ನುವಂತೆ ಸನ್ನೆ ಮಾಡುತ್ತಿದ್ದ. ಕುಟಾರಿ, ಪಿಕಾಸುಗಳಿಗೆ ಜುಮ್ಮನ ಮರದ ಕಾವು ತನ್ನಿ ಎನ್ನುತ್ತಿದ್ದ. ಜುಮ್ಮನ ಮರಕ್ಕೆ ಮೈಯೆಲ್ಲ ಮುಳ್ಳು. ತನ್ನ ತೋಳನ್ನು ಮುಂದಕ್ಕೆ ಚಾಚಿ ಅದರ ಮೇಲೆ ಮುಳ್ಳು ಬಂದಂತೆ ಸನ್ನೆ ಮಾಡಿ ಆ ಕಟ್ಟಿಗೆ ತರುವಂತೆ ಹೇಳುತ್ತಿದ್ದ.

ಮೊನ್ನಾಚಾರಿಗೆ ಗಡಿಯಾರವೆಂದರೆ ಅವನ ಹೊಟ್ಟೆಯೇ. ಯಾವಾಗ ಹಸಿವಾಯಿತೋ ಹಿಡಿದ ಕೆಲಸ ಅಲ್ಲಿಗೇ ಬಿಟ್ಟು, ಬಂದವರು ಅಲ್ಲಿ ಕುಳಿತಿರುವಂತೆಯೇ ಕುಲುಮೆಯಲ್ಲಿಯೇ ಅನ್ನಕ್ಕೆ ಎಸರು ಎತ್ತುತ್ತಿದ್ದ. ಬಾವಿಯ ಬಳಿ ಹೋಗಿ ಎರಡು ಕೊಡ ನೀರೆತ್ತಿ ಮೈಮೇಲೆ ಸುರಿದುಕೊಳ್ಳುತ್ತಿದ್ದ. ಊಟ ಮಾಡಿದ ಮೇಲೆ ಅವನ ಮುಖದಲ್ಲಿ ಹೌದೋ ಅಲ್ಲವೋ ಎನ್ನುವಂತೆ ಒಂದು ಮಂದಹಾಸ ಮಿಂಚಿಮರೆಯಾಗುತ್ತಿತ್ತು. ಮೊನ್ನಾಚಾರಿಯ ಸಾಲೆಗೆ ಬಂದವರು ಏನೇನೋ ಊರಿನ ಗುಟ್ಟುಗಳನ್ನು ಮಾತನಾಡಿಕೊಳ್ಳುತ್ತಿದ್ದರು. ಅವನ ಕುರಿತೇ ಚೇಷ್ಟೆ, ಕುಹಕ, ಮೆಚ್ಚುಗೆ ಮಾತುಗಳನ್ನೆಲ್ಲ ಹೇಳುತ್ತಿದ್ದರು. ಆದರೆ ಅವು ಯಾವವೂ ಅವನಿಗೆ ತಲುಪುತ್ತಲೇ ಇರಲಿಲ್ಲ. ಮೊನ್ನಾಚಾರಿ ತಾನು ದುಡಿದ ಗಂಟನ್ನೆಲ್ಲ ಏನು ಮಾಡುತ್ತಾನೆ ಎಂಬ ಕುತೂಹಲ ಕೆಲವರಿಗೆ. ಮೊನ್ನಾಚಾರಿ ಬಳಿಗೆ ಯಾರೋ ಬರುತ್ತಾರೆ, ಅವರೇ ಅವನ ದುಡ್ಡನ್ನೆಲ್ಲ ಒಯ್ಯುತ್ತಾರೆ ಎಂದು ಅಂತೆಕಂತೆಯ ಮಾತನಾಡುವವರು ಇದ್ದರು. ಅವನಿಗೆ ಮಾರುಹೋಗುವವರು ಯಾರಪ್ಪ ಎಂಬ ಕುತೂಹಲ ಕೆಲವರಿಗೆ. ಮೊನ್ನಾಚಾರಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಸ್ವಲ್ಪ ಆಸ್ತಿ ಇತ್ತು. ಅವನು ಸತ್ತ ಮೇಲೆ ಅದು ಯಾರಿಗೆ ಹೋಗುತ್ತದೆ ಎಂಬ ಜಿಜ್ಞಾಸೆಯೂ ಹಲವರಲ್ಲಿತ್ತು. ಅವನ ದಾಯಾದಿಯೊಬ್ಬ ಒಂದು ದಿನ ಸ್ಟಾಂಪ್‌ಪೇಪರ್ ಮೇಲೆ ಇವನಿಂದ ಹೆಬ್ಬೆಟ್ಟನ್ನು ಒತ್ತಿಸಿಕೊಂಡಿದ್ದ. ಆತ ಸತ್ತಮೇಲೆ ಆ ಆಸ್ತಿ ತನ್ನದೇ ಎಂದು ಅವನು ಕನಸು ಕಂಡಿದ್ದ.

ನಾಲ್ಕು ವರ್ಷಗಳ ಕೆಳಗೆ ಮೊನ್ನಾಚಾರಿ ಸತ್ತುಹೋದ ಎಂಬ ಸುದ್ದಿ ಸಿಕ್ಕಿತು. ನಾನು ಊರಿಗೆ ಹೋದಾಗ ಪ್ರತಿ ಬಾರಿಯೂ ಒಬ್ಬರಲ್ಲ ಒಬ್ಬರು ಸತ್ತ ಸುದ್ದಿಯನ್ನು ಕೇಳುವುದು ವಾಡಿಕೆಯಾಗಿತ್ತು. ಮೊನ್ನಾಚಾರಿ ಸಾವಿನ ಸುದ್ದಿಯನ್ನು ಮಾತ್ರ ನಮ್ಮಣ್ಣ ಸ್ವಲ್ಪ ವಿಶೇಷ ಎಂಬಂತೆ ಹೇಳಿದ. ಮೊನ್ನಾಚಾರಿ ಸತ್ತಮೇಲೆ ಅವನ ದಾಯಾದಿಯೇ ಅವನ ಅಂತ್ಯಸಂಸ್ಕಾರ ಎಲ್ಲ ಮಾಡಿದ್ದ. ಅವನ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಗ್ರಾಮಚಾವಡಿಗೆ ಅವನು ಹೋದಾಗಲೇ ಅವನಿಗೆ ಆಘಾತವಾಗಿದ್ದು. ಮೊನ್ನಾಚಾರಿ ಯಾರಿಗೂ ಗೊತ್ತಿಲ್ಲದ ಹಾಗೆ ಮದುವೆ ಮಾಡಿಕೊಂಡಿದ್ದನಂತೆ. ಅವನ ಹೆಂಡತಿ ಎನ್ನುವವಳು ಅವನ ಆಸ್ತಿಯನ್ನು ತನ್ನ ಹೆಸರಿಗೆ ಬರೆಯಿಸಲು ಅಲ್ಲಿ ಬಂದು ಕುಳಿತಿದ್ದಳಂತೆ. ಮೊನ್ನಾಚಾರಿಯ ದಾಯಾದಿಯು ಆತ ತನಗೆ ಬರೆದುಕೊಟ್ಟ ಸ್ಟಾಂಪ್ ಪೇಪರ್ ತೋರಿಸಿದರೂ ಏನೂ ಆಗಲಿಲ್ಲವಂತೆ. ಆತ ಕೋರ್ಟ್‌ಗೂ ಹೋಗಿದ್ದ. ಅವಳು ತಮ್ಮ ಮದುವೆಯಾಗಿದ್ದಕ್ಕೆ ನೊಂದಣಿ ಮಾಡಿಸಿದ್ದನ್ನು ಹಾಗೂ ತಾವಿಬ್ಬರೂ ಹಾರ ಹಾಕಿಕೊಂಡಿದ್ದ ಫೋಟೋ ತೋರಿಸಿದಳಂತೆ. ನಾನು ಕುತೂಹಲದಿಂದ ಕೇಳಿದೆ, ಅವನಿಗೆ ಮಕ್ಕಳು ಇದ್ದಾರಾ ಎಂದು. ಒಬ್ಬ ಮಗನಂತೆ. ನಮ್ಮೂರ ಶಾಲೆಯಲ್ಲೇ ಈಗ ಆರನೆ ಕ್ಲಾಸಿನಲ್ಲಿ ಓದುತ್ತಿದ್ದಾನೆ ಎಂದು ಅಣ್ಣ ಹೇಳಿದ. ಮೊನ್ನ ಮಾತನಾಡುತ್ತಿದ್ದ!