*ಸಿಕ್ಕಿಯೇ ಬಿಟ್ಟಿತು ಎನ್ನುವಂತಿರುತ್ತದೆ, ಆದರೆ ಸಿಗದು

ಬೆಲ್ಲವೆಂದರೆ ಬಾಯಲ್ಲಿ ನೀರೂರದೆ ಇರುತ್ತದೆಯೇ? ತಿನ್ನಬೇಕೆಂಬ ಆಸೆ. ಬೆಲ್ಲದ ವಾಸನೆಯೇ ತಿನ್ನುವ ಆಸೆಯನ್ನು ಹುಟ್ಟಿಸುತ್ತದೆ. ಆದರೆ ಬೆಲ್ಲ ಇರುವುದು ಎಲ್ಲಿ? ಮೊಣಕೈಗೆ ಮೆತ್ತಿಕೊಂಡಿದೆ. ನಾಲಿಗೆಯನ್ನು ಚಾಚಿ ನೆಕ್ಕೋಣವೆಂದರೆ ನಾಲಿಗೆಯನ್ನು ಅಲ್ಲಿಗೆ ಒಯ್ಯುವುದು ಸಾಧ್ಯವೇ ಇಲ್ಲ.
ಮಾಯದ ಜಿಂಕೆಯ ಹಾಗೆ ಕಣ್ಣೆದುರಿಗೆ ಇರುತ್ತದೆ. ಆದರೆ ಕೈಗೆ ಎಟಕುವುದೇ ಇಲ್ಲ. ಅನೇಕ ವಿಷಯಗಳು ನಮ್ಮ ಜೀವನದಲ್ಲೂ ಇದೇ ರೀತಿ ಇರುತ್ತವೆ. ಯಾವುದಕ್ಕೋ ಪ್ರಯತ್ನಿಸುತ್ತಿರುತ್ತೇವೆ. ಸಿಕ್ಕಿಯೇ ಬಿಟ್ಟಿತು ಎನ್ನುವಂತಿರುತ್ತದೆ. ಆದರೆ ಅದು ಎಂದಿಗೂ ನಮಗೆ ಲಭ್ಯವಾಗುವುದೇ ಇಲ್ಲ. ಲಾಟರಿ ಲಕ್ಷ್ಮಿ ಗೊತ್ತಲ್ಲ? ಎಷ್ಟೋ ಜನ ಎರಡಂಕಿಯಲ್ಲಿ ತಪ್ಪಿತು, ಮೂರಂಕಿಯಲ್ಲಿ ತಪ್ಪಿತು ಎನ್ನುತ್ತಾರೆ. ಕೊನೆಗೂ ಅವರಿಗೆ ಲಾಟರಿ ಹತ್ತುವುದೇ ಇಲ್ಲ. ಒಂದು ರೀತಿಯಲ್ಲಿ ಇದು ಮೃಗಜಲ ಇದ್ದಂತೆ. ಮುಂದೆ ಮುಂದೆ ಕಾಣುತ್ತ ಹೋಗುತ್ತದೆ. ಯಾವತ್ತೂ ನಾವು ಅದನ್ನು ತಲುಪುವುದೇ ಇಲ್ಲ.
ಇನ್ನೊಂದು ರೀತಿಯಲ್ಲಿ ಇದು ಪಕ್ಕದ ಮನೆ ಹುಡುಗಿ ಇದ್ದ ಹಾಗೆ. ದಿನವೂ ನೋಡುತ್ತಿರುತ್ತೀರಿ. ಕೆಲವೊಮ್ಮೆ ಮಾತೂ ಆಡಿರುತ್ತೀರಿ. ಏನೇನೋ ನಿಮ್ಮೊಳಗೆ ಕನಸು ಕಂಡಿರುತ್ತೀರಿ. ಆದನ್ನು ಬಾಯಿಬಿಟ್ಟು ಹೇಳುವುದು ನಿಮ್ಮಿಂದ ಸಾಧ್ಯವೇ ಆಗಿರುವುದಿಲ್ಲ.
ಸದಾ ಹತ್ತಿರ ಆದರೂ ಎಷ್ಟೊಂದು ದೂರ? ಒಂಟೆ ಮತ್ತು ಹುಲ್ಲಿನ ಕತೆ ಗೊತ್ತಲ್ಲ? ಒಂಟೆಯ ಸವಾರ ಒಂದು ಕೋಲಿಗೆ ಹುಲ್ಲಿನ ಕಂತೆಯನ್ನು ಸಿಕ್ಕಿಸಿ ಒಂಟೆಯ ಮುಂದೆ ಬರುವಂತೆ ಹಿಡಿದಿರುತ್ತಾನೆ. ಹುಲ್ಲು ತಿನ್ನುವ ಆಸೆಗೆ ಒಂಟೆ ಮುಂದೆ ಸಾಗುತ್ತ ಇರುತ್ತದೆ. ಆದರೆ ಹುಲ್ಲು ಮಾತ್ರ ಅದಕ್ಕೆ ಸಿಗುವುದೇ ಇಲ್ಲ.