ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರವು ಮಹಾಕಾದಂಬರಿಯ ರೂಪಕ್ಕೆ ಹಿಗ್ಗಿಕೊಂಡ ಗಳಿಗೆಯಲ್ಲಿಯೇ ಸಾಹಿತ್ಯವೆನ್ನುವುದು ತಲೆಮಾರುಗಳ ಶತಮಾನಗಳ ದೀರ್ಘ ಹರಹಿನ ಚಿತ್ರಣ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಂಡಿತು. ಮಹಾಕಾದಂಬರಿಗೆ ವ್ಯಾಖ್ಯೆಯೊಂದನ್ನು ರೂಪಿಸಿಕೊಡುವ ಪರ್ವಕಾಲ ಈಗ ಪ್ರಾಪ್ತವಾದಂತೆ ಕಾಣುತ್ತಿದೆ. ಏಕೆಂದರೆ ವಿಸ್ತಾರವಾದ ವಸ್ತುವಿನ್ಯಾಸದ ಹಲವು ಕೃತಿಗಳು ಈಗ ಬರುತ್ತಿವೆ. ಕುವೆಂಪು ಅವರ ಎರಡು ಮಹಾಕಾದಂಬರಿಗಳು, ಕಾರಂತರ ಮರಳಿ ಮಣ್ಣಿಗೆ, ಗೋಕಾಕರ ಸಮರಸವೇ ಜೀವನ, ರಾವ್‌ಬಹಾದ್ದೂರ್‌ ಅವರ ಗ್ರಾಮಾಯಣ, ಮಾಸ್ತಿಯವರ ಚಿಕವೀರ ರಾಜೇಂದ್ರ, ಭೈರಪ್ಪನವರ ದಾಟು, ಶ್ರೀಕೃಷ್ಣ ಅಲನಹಳ್ಳಿಯವರ ಭುಜಂಗಯ್ಯನ ದಶಾವತಾರಗಳು, ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ, ಕುಂವೀಯವರ ಶ್ಯಾಮಣ್ಣ ಹೀಗೆ ಮಹಾಕಾದಂಬರಿಗಳ ದೊಡ್ಡ ಪರಂಪರೆಯೇ ನಮ್ಮಲ್ಲಿ ಬಂದಿದೆ. ಕಥೆಯೊಳಗೊಂದು ಕಥೆ, ಕಥೆಗೊಂದು ಉಪಕಥೆ, ನವರಸಗಳ ಉನ್ಮೀಲನಕ್ಕೆ ಒಂದು ವೇದಿಕೆಯಾಗುವ ಇದರ ಲಕ್ಷಣಗಳನ್ನೆಲ್ಲ ನಾವು ಮಹಾಭಾರತದಲ್ಲಿಯೇ ಹುಡುಕಬಹುದೇನೋ. ಮಹಾಕಾವ್ಯವನ್ನೋ ಮಹಾಕಾದಂಬರಿಯನ್ನೋ ರಚಿಸುವುದು ಅಪಾರವಾದ ಅಖಂಡವಾದ ಜೀವನ ವ್ಯಾಮೋಹಿಗಳಿಂದ ಮಾತ್ರ ಸಾಧ್ಯ. ಇಷ್ಟೆಲ್ಲ ಪೀಠಿಕೆ ಡಾ.ನಾ. ಮೊಗಸಾಲೆಯವರ ಮಹಾಕಾದಂಬರಿ ಉಲ್ಲಂಘನೆಯ ಸಂದರ್ಭದಲ್ಲಿ ಹೇಳಬೇಕಾಯಿತು. 580 ಪುಟಗಳಲ್ಲಿ ಐದು ತಲೆಮಾರುಗಳ ಒಂದು ಕುಟುಂಬದ ನೂರಕ್ಕೂ ಹೆಚ್ಚು ವರ್ಷಗಳ ಕತೆಯನ್ನು ಕಟ್ಟಿಕೊಡುವ ಸಾಹಿತ್ಯ ಯಜ್ಞ ಅದು. ಮೊಗಸಾಲೆಯವರು ಆಯ್ದುಕೊಂಡದ್ದು ತಾವು ಬದುಕಿ ಬೆಳೆದ ಪರಿಸರದಲ್ಲಿಯ ಒಂದು ಬಂಟರ ಕುಟುಂಬವನ್ನು. ಬಂಟರಲ್ಲಿ ಅಳಿಯಕಟ್ಟಿನ ಸಂಪ್ರದಾಯವಿದೆ. ಭಾರತದಲ್ಲಿಯೇ ಅತಿ ವಿಶಿಷ್ಟವಾದ ಅಳಿಯಕಟ್ಟಿನ ಕುಟುಂಬ ವ್ಯವಸ್ಥೆಯು ಆಶ್ಚರ್ಯಕರ ಎನ್ನುವಂತೆ ದಕ್ಷಿಣ ಮತ್ತು ಮಧ್ಯ ಅಮೆರಿಕದ ಮೂಲನಿವಾಸಿಗಳಾದ ಅಪಾಚೆ ಜನಾಂಗದಲ್ಲಿಯೂ ಇರುವುದು. ಅವರಲ್ಲಿಯ ಮಾತೃಪ್ರಧಾನ ವ್ಯವಸ್ಥೆ ಮತ್ತು ಹಲವು ಆಚರಣೆಗಳು ಬಂಟರಲ್ಲಿಯ ಆಚರಣೆಗಳೊಂದಿಗೆ ಹೋಲುತ್ತವೆ. ತೌಲನಿಕ ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಇದೊಂದು ಉತ್ತಮ ಸರಕು. ಮೊಗಸಾಲೆಯವರು ಕಾದಂಬರಿಯ ವಸ್ತುವಿಗೆ ಸಂಬಂಧಿಸಿದಂತೆ ಯಾವ ಸಣ್ಣ ವಿವರಗಳನ್ನೂ ಬಿಟ್ಟಿಲ್ಲ. ಮದುವೆ, ಸಾವು, ಗಡಿ ಹಿಡಿಯುವುದು, ಜನನ, ಜಾತ್ರೆ, ಕಂಬಳ, ಯಕ್ಷಗಾನ, ವ್ಯಾಪಾರ ವಹಿವಾಟು, ಷಡ್ಯಂತ್ರ, ಹರೆಯದ ಉನ್ಮಾದ, ಮಧ್ಯವಯಸ್ಕನ ಸಮಾಧಾನ, ವೃದ್ಧಾಪ್ಯದ ದೈನ್ಯತೆ ಹೀಗೆ ಎಲ್ಲವೂ ಕಥಾ ಸಂವಿಧಾನ ಮತ್ತು ಪಾತ್ರದ ಪೋಷಣೆಗೆ ಪೂರಕವಾಗಿಯೇ ಬಂದಿವೆ. ಇವೆಲ್ಲ ಮೊಗಸಾಲೆಯವರಿಗೆ ಸಹಜವಾಗಿಯೇ ಸಿದ್ಧಿಸಿದೆ. ಏಕೆಂದರೆ ಅವರು ಉಸಿರಾಡಿದ ಪರಿಸರದಿಂದಲೇ ಈ ವಸ್ತು ಮತ್ತು ಪಾತ್ರಗಳು ಎದ್ದು ಬಂದಿವೆ. ಕಾದಂಬರಿಯನ್ನು ನಾವು ಓದುತ್ತ ಹೋದಂತೆ ನಾವೂ ಅದರಲ್ಲಿಯ ಒಂದು ಪಾತ್ರವಾಗಿಬಿಡುತ್ತೇವೆ. ಸರಿ ತಪ್ಪು, ನ್ಯಾಯ ಅನ್ಯಾಯಗಳ ವಿವೇಚನೆಗೆ ಬೀಳುತ್ತೇವೆ, ಪಕ್ಷ ವಹಿಸಿ ತೀರ್ಪು ಹೇಳುವವರಾಗಿಬಿಡುತ್ತೇವೆ. ಇದೇ ಕಾದಂಬರಿಯ ಹೆಚ್ಚುಗಾರಿಕೆ. ಕಥೆ ನಡೆಯುವುದು ಐದು ತಲೆಮಾರುಗಳಲ್ಲಿ- ಮಧ್ಯದವರಾದ ಅಂಬಕ್ಕೆ ಮತ್ತು ಸಂಕಪ್ಪ ಹೆಗ್ಡೆಯವರ ಪ್ರಜ್ಞಾಪ್ರವಾಹ ಮತ್ತು ಸಾಕ್ಷಿ ಪ್ರಜ್ಞೆಯಲ್ಲಿ. ಅಂಬಕ್ಕೆಯ ಹಿಂದೆ ಶಾಂತಕ್ಕೆ, ಶೀನಪ್ಪ ಹೆಗ್ಡೆ, ಅವರ ಹಿಂದೆ ತುಂಗಕ್ಕೆ- ವೆಂಕಪ್ಪ ಹೆಗ್ಡೆ ಮುಂದೆ ಶಾರದೆ, ಸುಂದರ ಹೆಗ್ಡೆ, ಅವರ ಮುಂದೆ ಪ್ರಜ್ಞಾ, ಪ್ರಶಾಂತ. ಈ ಐದು ತಲೆಮಾರುಗಳಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದ ಅರ್ಧ ಶತಮಾನ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಅರ್ಧ ಶತಮಾನ ಒಂದು ಪ್ರದೇಶದಲ್ಲಿ ತಂದ ಸಾಮಾಜಿಕ ಆರ್ಥಿಕ ಬದಲಾವಣೆಗಳ ಸಮಗ್ರ ಚಿತ್ರಣವನ್ನು `ಉಲ್ಲಂಘನೆ’ ಕಾದಂಬರಿ ನೀಡುತ್ತದೆ. ಮಾಧವ ಕುಲಕರ್ಣಿಯವರು ವಿಸ್ತಾರವಾದ ಮುನ್ನುಡಿಯನ್ನು ಅದಕ್ಕೆ ಬರೆದಿರುವರು. ಆದರೆ ಸಾಂತೇರು ಗುತ್ತಿನ ವಂಶಾವಳಿಯನ್ನು ಅವರು ತಪ್ಪಾಗಿ ನಮೂದಿಸಿದ್ದಾರೆ. ವೆಂಕಪ್ಪ ಹೆಗ್ಡೆಯ ಮಡದಿ ತುಂಗಕ್ಕೆ ಎಂದು ಅವರು ಬರೆದಿರುವರು. ಆದರೆ ತುಂಗಕ್ಕೆ ಮತ್ತು ವೆಂಕಪ್ಪ ಹೆಗ್ಡೆ ಸಹೋದರ ಮತ್ತು ಸಹೋದರಿ. ತಲೆಮಾರಿನ ವಿವರಗಳನ್ನು ನೀಡುವಾಗ ತುಂಗಕ್ಕೆಯ ಮಗಳು ಶಾಂತಕ್ಕೆಯ ಮತ್ತು ಶೀನಪ್ಪ ಹಗ್ಡೆಯ ತಾಯಿ ತುಂಬಪ್ಪೆ ಮತ್ತು ಅವಳ ಪತಿಯ ವಿವರಗಳು ಎಲ್ಲಿಯೂ ಬರುವುದಿಲ್ಲ. ಹೀಗಾಗಿ ಒಂದು ತಲೆಮಾರು ತಪ್ಪಿಹೋದಂತೆ ಅನ್ನಿಸುವುದು. ಕೊರಪೊಳು ಮದುವೆಯ ಪ್ರಸಂಗದಲ್ಲಿ ಮಾತ್ರ ತುಂಬಪ್ಪೆಯ ಪ್ರಸ್ತಾಪ ಒಂದು ಬಾರಿ ಆಗುವುದು. ಉಲ್ಲಂಘನಂಯ ಮಜಲುಗಳು ಏನೇನು? ಉಲ್ಲಂಘನೆ ಕೆಲವೊಮ್ಮೆ ಸಹಜ ಕ್ರಿಯೆಯಾದರೆ ಕೆಲವೊಮ್ಮೆ ಅದು ಪ್ರೇರಿತ ಕ್ರಿಯೆ. ಇನ್ನು ಕೆಲವೊಮ್ಮೆಅದು ಬಲವಂತದ ಕ್ರಿಯೆ. ಉಲ್ಲಂಘನೆಯ ಅನುಸಂಧಾನ ಒಂದು ಲೇಖನದಲ್ಲಿ ಮುಗಿದು ಹೋಗುವಂಥದ್ದಲ್ಲ. ಸಮಾಜಶಾಸ್ತ್ರೀಯವಾಗಿ, ಸಾಂಸ್ಕೃತಿಕವಾಗಿ, ಸ್ತ್ರೀವಾದಿ ನೆಲೆಯಲ್ಲಿ, ಗಾಂಧಿವಾದದ ನೆಲೆಯಲ್ಲಿ, ಒಂದೊಂದು ತಲೆಮಾರು ಮುಖಾಮುಖಿಯಾಗುವ ಸಂಘರ್ಷದ ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಬದಲಾವಣೆಯ ಗತಿಯನ್ನು ಗುರುತಿಸುವ ನೆಲೆಯಲ್ಲಿ ಹೀಗೆ ಉಲ್ಲಂಘನೆಯ ಅನುಸಂಧಾನ ಮಾರ್ಗ ಹಲವು. ಲೇಖಕರನ್ನು ಬಹುವಾಗಿ ಆಕರ್ಷಿಸಿದ್ದು ಮಹಾತ್ಮಾ ಗಾಂಧಿ. ಗಾಂಧಿ ಮತ್ತು ಅವರ ತತ್ವಗಳು ಇಂದಿಗೂ ಪ್ರಸ್ತುತ ಎಂಬ ದೃಢವಾದ ನಂಬಿಕೆ ಅವರದು. ಈ ಹಿನ್ನೆಲೆಯಲ್ಲಿಯೇ ಸಂಕಪ್ಪ ಹೆಗ್ಡೆಯವರ ಪಾತ್ರ ಸೃಷ್ಟಿಯಾಗಿದ್ದು. ಗಾಂಧಿವಾದ ಆಗಾಗ್ಗೆ ಇಲ್ಲಿ ಪರೀಕ್ಷೆಗೆ ಒಳಗಾಗುತ್ತದೆ. ಕಾದಂಬರಿಯ ಕೊನೆಯಲ್ಲಿ ಗಾಂಧಿವಾದವೇ ಗೆಲ್ಲುವುದು. ಭೂಸುಧಾರಣೆ ಕಾಯ್ದೆ ಜಾರಿಗೆ ಬಂದಾಗ ಸಂಕಪ್ಪ ಹೆಗ್ಡೆ ರೈತರ ಪರವಾಗಿ ಅವರಿಗೆ ಭೂಮಿಯನ್ನು ಬಿಟ್ಟುಕೊಡುವುದರಲ್ಲಿ ತಪ್ಪಿಲ್ಲ ಎಂದು ವಾದಿಸಿದರೆ ಅಂಬಕ್ಕೆ ಅದನ್ನು ವಿರೋಧಿಸುತ್ತಾಳೆ. ಈ ಮಾಜಿ ಒಕ್ಕಲುಗಳ ಅವಶ್ಯಕತೆ ಗುತ್ತಿನ ಮನೆಗೆ ಈಗಲೂ ಇತ್ತು. ಅವರೆಲ್ಲ ಭೂಮಸೂದೆಯ ರೀತ್ಯಾ ತಾವು ಗೇಣಿದಾರರಾಗಿ ಉತ್ತುಬಿತ್ತಿದ ಜಮೀನಿನ ಹಕ್ಕುಪತ್ರ ನೀಡಬೇಕು ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಹೊರಟಾಗ ಗುತ್ತಿನ ಯಜಮಾನಿ, ಅದು ಸಾಧ್ಯವಿಲ್ಲ, ನೀವು ಭೂಮಿಯ ಮೌಲ್ಯ ನೀಡಿ ಸ್ವಂತ್ರರಾಗಿ ಇಲ್ಲವೆ ಅರ್ಧಾಂಶದಷ್ಟು ಭೂಮಿಯನ್ನು ಗುತ್ತಿನ ಮನೆಗೆ ಬಿಟ್ಟುಕೊಡಿ ಎಂದು ಆಗ್ರಹಿಸಿದ್ದರು. ಆದರೆ ಈ ಮಾತು ಬೇಡ, ಇದು ತರವಲ್ಲ, ತಲೆತಲಾಂತರದಿಂದ ಅವರು ಬೆವರು ಸುರಿಸಿ ನಮ್ಮ ಗುತ್ತಿನ ಮನೆ ಉಳಿಸಿದ್ದಾರೆ. ಈಗಲಾದರೂ ಅವರು ಸ್ವತಂತ್ರವಾಗಿ ಬಾಳಿ ಬದುಕಲಿ ಎಂದು ಸಂಕಪ್ಪ ಹೆಗ್ಡೆಯವರು ತಂಗಿಯ ವಿರುದ್ಧವಾಗಿ ಗೇಣಿದಾರರ ಪರವಾಗಿ ನಿಂತಿದ್ದರು. ಅಂಬಕ್ಕೆಗೆ ಸಂಕಪ್ಪಣ್ಣ ತನ್ನ ಖಾಸಾ ಅಣ್ಣನಾಗಿರದಿದ್ದರೆ ಆಗ ಕಡಿದು ಕೊಂದುಬಿಡಬೇಕು ಅನ್ನುವಂಥ ಸಿಟ್ಟು ಬಂದಿತ್ತು.(27). ಊಳಿಗಮಾನ್ಯ ವ್ಯವಸ್ಥೆಯ ಪ್ರತಿಪಾದಕಳು ಅಂಬಕ್ಕೆ. ಅದನ್ನು ವಿರೋಧಿಸುವವರು ಸಂಕಪ್ಪ ಹೆಗ್ಡೆ. ನಾವು ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳದಿದ್ದರೆ, ಬದುಕುವ ಹಕ್ಕನ್ನು ಕಳೆದುಕೊಂಡವರು ಅಂತ ಅರ್ಥ ಎಂಬ ವಾಸ್ತವ ಪ್ರಜ್ಞೆ ಹೆಗ್ಡೆಯವರದು (21). ನಮ್ಮ ಸಂಕಪ್ಪಣ್ಣ ಒಂಬತ್ತು ಕೆರೆಯ ಗಾಂಧಿ ಆಗಲು ಹೋಗಿ, ಗುತ್ತಂತೂ ಇನ್ನು ಮುಳಿಗಿದ ಹಾಗೆ (23) ಎಂಬ ಅಂಬಕ್ಕೆಯ ಮಾತಿನಲ್ಲಿ ಈ ಮುಖಾಮುಖಿಯ ತೀವ್ರತೆಯನ್ನು ನಾವು ಗುರುತಿಸಬಹುದು. ಗಾಂಧೀಜಿಯ ಇನ್ನೊಂದು ತತ್ತ್ವ ಅಸ್ಪೃಶ್ಯತೆಗೆ ವಿರೋಧ. ಸಂಕಪ್ಪ ಹೆಗ್ಡೆಯವರು ಅದನ್ನು ತಮ್ಮ ಮನೆಯಲ್ಲಿಯೇ ಮೊದಲು ಜಾರಿಗೆ ತರುವರು. ಇದಕ್ಕೂ ಅಂಬಕ್ಕೆಯ ವಿರೋಧವಿತ್ತು. ನೀರು ಗಾಳಿ ಬೆಂಕಿಗಳಿಗೆ ಮೈಲಿಗೆ ಮೊದಲಾದವುಗಳೆಲ್ಲ ಇಲ್ಲದ ಮೇಲೆ ತಾಂಬೂಲದ ಹರಿವಾಣ ಮುಟ್ಟಿದರೆ ಏನಾದೀತು ಮಣ್ಣು ಎಂದು ಒಮ್ಮೆ ಹೆಗ್ಗಡ್ತಿಯವರ ಎದುರೇ, `ಮಂಗ್ರ ನೋಡು ತಾಂಬೂಲ ಬೇಕು ಅಂದಿದ್ದಿಯಲ್ಲ, ತಗೋ ಈ ಹರಿವಾಣದಿಂದ’ ಎಂದು ಅವನನ್ನು ಒಳಗೆ ಕರೆದು ಅವನಿಗೆ ಹರಿವಾಣವನ್ನು ಕೈ ಎತ್ತಿ ಕೊಟ್ಟಾಗ ಅಂಬಕ್ಕೆ ಈ ಗಾಂಧಿ ಇಡೀ ಧರ್ಮವನ್ನೇ ನಾಶಮಾಡಿಬಿಟ್ಟ ಎಂದು ಅಣ್ಣನಲ್ಲಿ ಆಡಲಾರದೇ, ಮಂಗ್ರು ಹರಿವಾಣವನ್ನು ಮುಟ್ಟುವುದನ್ನು ನೋಡಲಾರದೇ ಒಳ ನಡೆದಿದ್ದರು.(25) ಭೂಸುಧಾರಣೆ ಕಾಯ್ದೆ ಬಂದು ಇದ್ದ ಜಮೀನಿನ ಬಹುಭಾಗ ಒಕ್ಕಲ ಪಾಲಾಗಿ ಹೋಗಿ ಕೆಲಸಕ್ಕೆ ಜನ ಸಿಗದೆ ಸಂಕಪ್ಪ ಹೆಗ್ಡೆ ಬಸವಳಿದಾಗ, “ಸಂಕಪ್ಪಣ್ಣ ಬಂಟ ಯಾವತ್ತೂ ಸೋಲುವುದು ಅಂತ ಇಲ್ಲ. ಒಕ್ಕಲುತನ ಕೈಬಿಟ್ಟರೆ ಏನಾಯ್ತು ಇನ್ನೊಂದು ಉದ್ಯೋಗ ಹಿಡಿದರಾಯಿತು. ಎಂಥ ಕಾನೂನೇ ಬರಲಿ, ಯಾರೇ ನಮ್ಮ ಚಂದ ನೋಡಲು ಪ್ರಯತ್ನಿಸಲಿ ಅದಕ್ಕೆಲ್ಲ ನಾವು ಜಗ್ಗುವುದರಲ್ಲಿ ಅರ್ಥ ಇಲ್ಲ…” (32) ಎನ್ನುವ ಅಂಬಕ್ಕೆಯ ಮಾತುಗಳಲ್ಲಿ ಉಲ್ಲಂಘನೆಯ ಇನ್ನೊಂದು ನೆಲೆಯನ್ನು ಗುರುತಿಸಬಹುದು. ಕೃಷಿಕರಾದ ಗುತ್ತಿನ ಮನೆಯ ಸುಂದರ ಹೆಗ್ಡೆ ಮುಂಬಯಿಗೆ ಹೋಗಿ ಹೋಟೆಲ್‌‌ ಉದ್ಯಮಿಯಾದಾಗ ಈ ಮಾತು ಸತ್ಯವಾಗುತ್ತದೆ. ಗುತ್ತು ಇರುವುದು ಜನರಿಗಾಗಿ ಅಲ್ಲ ಸಂಕಣ್ಣ, ಜನರು ಇರುವುದು ಗುತ್ತಿಗಾಗಿ ಎಂಬ ಹಿಂದಿನವರ ಧೋರಣೆಯನ್ನೇ ಹೊಂದಿದ್ದ ಅಂಬಕ್ಕೆ, ನಿನ್ನಂತೆ ನಾನೂ ಆಗಿದ್ದರೆ ಜನ ಗುತ್ತನ್ನು ಅಡವು ಇಡುತ್ತಿದ್ದರು ಎಂದು ಹೇಳುವಷ್ಟು ಸ್ವಾತಂತ್ರ್ಯವನ್ನು ಹೊಂದಿದ್ದರು. ಸಂಕಪ್ಪ ಹೆಗ್ಡೆಯವರಿಗೆ, ಈಗ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಅಂತ ಹೇಳಬೇಕೆನಿಸಿತ್ತು. ಆದರೆ ಹಾಗೆ ಹೇಳಿದರೆ ಅಂಬಕ್ಕೆ, ಸಾಕು ನಿನ್ನ ಗಾಂಧಿ ಸಿದ್ಧಾಂತ ಎಂದು ಲೇವಡಿ ಮಾಡುತ್ತಾಳೆ ಎಂದುಕೊಂಡು ಹೇಳದೆ ಉಳಿದಿದ್ದರು (52). ಅದು ಗೇಣಿದಾರರ ಹಕ್ಕು. ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಹಾಗೆ ಅವರೂ ಅವರ ಹಕ್ಕನ್ನು ಕೇಳುವುದರಲ್ಲಿ ತಪ್ಪಿಲ್ಲ ಎಂದು ಸುಮ್ಮನಿದ್ದರು. ಅದಕ್ಕೆ ಅಂಬಕ್ಕೆ ಮಾತ್ರ ಸಂಕಪ್ಪನ ಕಾಲದಲ್ಲಿ ಗುತ್ತಿನ ಮನೆಯೇ ಇಲ್ಲವಾದ ಹಾಗಾಗುತ್ತದೆ ಎಂದು ಒಳಗೊಳಗೇ ಕೊರಗುತ್ತಾ ಸಾಂದರ್ಭಿಕವಾಗಿ ಸಂಕಪ್ಪ ಹೆಗ್ಡೆಯವರನ್ನು ಚುಚ್ಚುತ್ತಲೇ ಬಂದರು. ಒಟ್ಟಾರೆಯಾಗಿ ಅಂದು ಈ ದೇಶದಲ್ಲಿ ಆಗುತ್ತಿದ್ದ ಎಲ್ಲ ಪರಿವರ್ತನೆಗೆ ಗಾಂಧೀಜಿಯೇ ಕಾರಣ ಎಂದು ಅಂಬಕ್ಕೆ ಬಲವಾಗಿ ನಂಬಿದ್ದರು. ಆದರೆ, ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್‌ ಪಕ್ಷದಲ್ಲಿರುವವರೆಲ್ಲ ಜಮೀನ್ದಾರಿಕೆಯ ಮನೋಸ್ಥಿತಿಯಲ್ಲೇ ಇದ್ದವರು. ಅದಕ್ಕಾಗಿಯೇ ಭೂಸುಧಾರಣೆ ಕಾಯ್ದೆ ತಡವಾಗಿ ಜಾರಿಯಾಯ್ತು ಎಂದು ಸಂಕಪ್ಪ ಹೆಗ್ಡೆ ನಂಬಿದ್ದರು. ತಮ್ಮ ಅಳಿಯ, ಅಂಬಕ್ಕೆಯ ಪುತ್ರ ಸುಂದರ ಹೆಗ್ಡೆಗೆ ಗಾಂಧೀಜಿಯ ಸ್ವರಾಜ್ಯ ಕಲ್ಪನೆಯನ್ನು ವಿವರಿಸುವ ಸಂಕಪ್ಪ ಹೆಗ್ಡೆಯವರು, ಗಾಂಧೀಜಿ ಸ್ವರಾಜ್ಯಕ್ಕಾಗಿ ಹೋರಾಡಿದ್ದು ಅಧಿಕಾರದ ಆಸೆಗಲ್ಲ. ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂಬುದನ್ನು ನಾವು ಅರ್ಥ ಮಾಡಿಕೊಂಡು ಬಾಳಬೇಕು ಎಂಬುದಕ್ಕಾಗಿ. ಆದರೆ ಗಾಂಧೀಜಿಯ ಸ್ವರಾಜ್ಯ ಕಲ್ಪನೆ, ಅವರ ಸಾವಿನೊಂದಿಗೇ ಅಸ್ತಂಗತವಾಯಿತು. ಅವರು ಮನಸ್ಸು ಮಾಡಿದ್ದರೆ ಈ ದೇಶದ ಯಾವುದೇ ಅತ್ಯುನ್ನತ ಹುದ್ದೆಯನ್ನೂ ಅವರು ಅಲಂಕರಿಸಬಹುದಿತ್ತು…. ಗಾಂಧೀಜಿಯ ಗ್ರಾಮಸ್ವರಾಜ್ಯದ ಮೂಲ ಕಲ್ಪನೆಗಳಲ್ಲಿ ಒಂದು ಉಳುವವನೇ ಹೊಲದೊಡೆಯ….. ನಾವು ನಮ್ಮ ಜಮೀನ್ದಾರರ ಕೈಯಲ್ಲಿದ್ದ ಭೂಮಿಯನ್ನು ನಿಜವಾಗಿ ಯಾರು ಉತ್ತು ಬಿತ್ತು ಬೆಳೆ ಬೆಳೆಯುತ್ತಾರೋ ಅವನಿಗೆ ಆಗಲೇ ಕೊಡಬೇಕಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್‌ ಪಕ್ಷದಲ್ಲಿರುವವರೆಲ್ಲ ಜಮೀನ್ದಾರಿಕೆಯ ಮನೋಸ್ಥಿತಿಯಲ್ಲೇ ಇದ್ದವರು. ಹಾಗಾಗಿ ಈ ಮಸೂದೆ ತುಂಬ ತಡವಾಗಿ ಬಂತು (346) ಎಂದು ವಿವರಿಸುತ್ತಾರೆ. ಅಂಬಕ್ಕೆಯ ಮೇಲೆ ಸಂಕಪ್ಪ ಹೆಗ್ಡೆಯ ಪ್ರಭಾವ ಆಗದೆ ಇರಲಿಲ್ಲ. ಗಂಡ ಸತ್ತ ಕರ್ಗಿ ಕೊರಗನಿಗೆ ಬಸುರಾದಾಗ, ಕಾರಣಾಂತರದಿಂದ ಕೊರಗ ಊರು ಬಿಟ್ಟು ಓಡಿ ಹೋಗುತ್ತಾನೆ. ಕರ್ಗಿಯನ್ನು ಕಾಪಾಡುವ ಹೊಣೆ ಹೊತ್ತ ಅಂಬಕ್ಕೆ, ಉಳಿದ ಮೂಲದಾಳುಗಳಿಗೆ, “ನೋಡಿ ಕರ್ಗಿ ಈಗ ಬಸುರಿ. ಅವಳ ಹೊಟ್ಟೆಯಲ್ಲಿ ಕೊರಗನ ಪಿಂಡ ಬೆಳೆಯುತ್ತಿದೆ. ಅವಳಿಗೆ ಮದುವೆ ಆಗಿಲ್ಲ ನಿಜ. ಆದರೆ ನೀವು ಆಕೆ ಕರಗನ ಕೈಹಿಡಿದವಳು ಎಂದೇ ಭಾವಿಸಬೇಕು” ಯೆಂದು ಹೇಳುತ್ತಾರೆ. ರಾತ್ರೆಯ ಊಟದ ಹೊತ್ತಿನಲ್ಲಿ ಅಂಬಕ್ಕೆ ಸಂಕಪ್ಪಣ್ಣನಿಗೆ ಇದನ್ನು ಹೇಳಿದಾಗ ಅವರಿಗೆ ಅದು ಗಾಂಧೀಜಿಗೆ ಇಷ್ಟವಾದ ಕೆಲಸ ಎಂದು ಹೇಳಬೇಕೆನಿಸಿತು. ಅಂಬಕ್ಕೆಯ ಕಣ್ಣುಗಳಲ್ಲಿ ಮಿಂಚುತ್ತಿದ್ದ ಕರ್ಗಿಯ ಮೇಲಿನ ಪ್ರೀತಿಯನ್ನು ನೋಡಿದ ಅವರಿಗೆ ಅಂಬಕ್ಕೆಯ ಈ ನಿರ್ಧಾರ ಸುಖದ ಕ್ಷಣಗಳನ್ನು ನೀಡಿದವು (385) ಎಂದು ಲೇಖಕರು ವರ್ಣಿಸುತ್ತಾರೆ. ಗಾಂಧಿ ಪುಣ್ಯತಿಥಿ ದಿನವೇ ಸಂಕಪ್ಪ ಹೆಗ್ಡೆ ಸಾಯುವುದು, ಅವರ ಮಗನನ್ನು ಬುದ್ಧಿಮಾಂದ್ಯನನ್ನಾಗಿ ಚಿತ್ರಿಸಿರುವುದು ಸಾಂಕೇತಿಕವಾಗಿ ಗಾಂಧಿವಾದ ಹೇಗೆ ಸತ್ವ ಕಳೆದುಕೊಳ್ಳುತ್ತ ಹೋಗಿದೆ ಎಂಬುದನ್ನು ತೋರಿಸುವುದಕ್ಕೆ. ಪ್ರಜ್ಞಾಳು ಜೈನನಾದ (ಅಹಿಂಸಾವಾದಿ, ಶಾಕಾಹಾರಿ) ಮತ್ತು ಸಹಜ ಸಾವಯವ ಕೃಷಿಯಲ್ಲಿ ಪರಿಣತನಾದ ಶಾಂತಿರಾಜನನ್ನು ಪ್ರೀತಿಸುವುದು ಗಾಂಧಿವಾದದ ಪುನರುತ್ಥಾನದಂತೆಯೇ ಕಾಣುತ್ತದೆ. ಇವರಿಬ್ಬರ ಪ್ರೀತಿಯ ನಡುವಿನ ಜಾತಿಯ ಗೋಡೆಯನ್ನು ತೊಡೆದುಹಾಕಿಬಿಡಬುದಾದ ಮನಸ್ಥಿತಿಗೆ ಅಂಬಕ್ಕೆ ತಲುಪಿದ್ದು ಮತ್ತು ನವವಸಾಹತುಶಾಹಿಯ ವಿರುದ್ಧ ಅಡ್ಡಗೋಡೆಯಾಗುವ ಅಂಬಕ್ಕೆಯ ಸಂಕಲ್ಪ ಗಾಂಧಿವಾದದ ವಿಜಯವನ್ನೇ ಹೇಳುತ್ತದೆ. ಸಹಜ ಮಾನವೀಯ ನೆಲೆಯಲ್ಲೂ ಕಾದಂಬರಿಯು ಹಲವು ಎತ್ತರದ ಘಟನೆಗಳನ್ನು ಕಟ್ಟಿಕೊಡುತ್ತದೆ. ವೆಂಕಪ್ಪ ಹೆಗ್ಡೆ ತೀರಿಕೊಂಡಾಗ ಬ್ರಾಹ್ಮಣನಾದ ವೆಂಕಟ್ರಮಣಯ್ಯ ಶವಸಂಸ್ಕಾರಕ್ಕೆ ಹೋಗಿ ಬಂದು ತಣ್ಣೀರು ಸ್ನಾನ ಮಾಡಿ ಊಟ ಮಾಡದೆ ಮಲಗುತ್ತಾರೆ. ಇದಕ್ಕೆ ಕಾರಣ ವೆಂಕಪ್ಪ ಹೆಗ್ಡೆ ಅವರಿಗೆ ಮಾಡಿದ ಉಪಕಾರ. ವೆಂಕಪ್ಪ ಹೆಗ್ಡೆ ಅರ್ಧಾಂಗವಾಯು ಪೀಡಿತರಾಗಿ ಹಾಸುಗೆ ಹಿಡಿದಾಗ ಅವರಿಗೆ ಔಷಧ ಕೊಡಿಸಲು, ಪೂಜೆ ಮಾಡಿಸಲು ಓಡಾಡಿದ್ದು ವೆಂಕಟ್ರಮಣಯ್ಯನೇ. ಇಲ್ಲಿ ರಕ್ತಸಂಬಂಧಿಗಳಿಗಿಂತ ಮಾನವೀಯ ಸಂಬಂಧ ಮೇಲೆಂಬುದನ್ನು ಲೇಖಕರು ತೋರಿಸಿದ್ದಾರೆ. ವೆಂಕಟ್ರಮಣಯ್ಯನನ್ನು ಒಂದು ಕಾಲದಲ್ಲಿ ಟೀಕಿಸಿ ಅಪಮಾನ ಮಾಡಿದ್ದ ಆಗರ್ಭ ಶ್ರೀಮಂತ ಗೋವಿಂದಣ್ಣ ಅದೇ ವೆಂಕಟ್ರಮಣಯ್ಯನು ಪ್ರಸಿದ್ಧ ಭಾಗವತನಾಗಿ ಊರಿಗೆ ಬಂದಾಗ ತಾನು ಆಡಿದ ಮಾತಿಗೆ ಅನುಗುಣವಾಗಿ ಸಾಮಾನ್ಯ ಕೂಲಿಯಾಳಿನಂತೆ ದೀವಟಿಗೆ ಹಿಡಿದದ್ದು, ವೆಂಕಟ್ರಮಣಯ್ಯ ಆತನ ಕಾಲಿಗೆ ಬಿದ್ದದ್ದು (121) ಕೂಡ ಹೃದಯ ತುಂಬಿರುವ ಘಟನೆಯೇ. ಗುತ್ತಿನಾರ ವೆಂಕಪ್ಪ ಹೆಗ್ಡೆಯವರಿಗೆ ಸುಬ್ಬಣ್ಣ ಭಟ್ಟರು ಗುತ್ತಿನ ಮನೆಯಂಗಳದಲ್ಲಿ ಬಯ್ದು ಆರ್ಭಟಿಸಿದಾಗ ಗುತ್ತಿನ ಯಜಮಾನಿ ತುಂಗಕ್ಕೆ ಸುಬ್ಬಣ್ಣ ಭಟ್ಟರ ಮೇಲೆಯೇ ಎರಗಿ ಹೋಗಿದ್ದು ಮತ್ತು ಅವರು ಇದ್ದೆನೋ ಸತ್ತೆನೋ ಎಂದು ಕಾಲು ಕಿತ್ತು ಓಡಿಹೋಗಿದ್ದು (212) ತುಂಗಕ್ಕೆಯ ಯಜಮಾನಿಕೆಯ ಶಕ್ತಿಯನ್ನು ತೋರಿಸುತ್ತದೆ. ಅದೇ ರೀತಿ ಕರ್ಗಿ ತನ್ನ ಮಾನಹರಣಕ್ಕೆ ಬಂದ ಗಂಗಯ್ಯನ ಮೇಲೆ ಸೇಡು ತೀರಿಸಿಕೊಂಡ ರೀತಿಯೂ ಅನನ್ಯ.(381). ಮೇಲ್ವರ್ಗದ ಸಮುದಾಯಗಳಲ್ಲಿ ಹೀಗೆ ನಡೆದುಕೊಳ್ಳುವವರು ತೀರಾ ಕಡಿಮೆ. ಆದರೆ ಕೆಳವರ್ಗದವರಲ್ಲಿ ಇಂಥ ಶಿಕ್ಷಾ ಪ್ರಕರಣಗಳು ನಡೆಯುವುದು ಸಾಮಾನ್ಯ ಎಂದು ಲೇಖಕರು ಹೇಳುತ್ತಾರೆ. ಕೇಕುಣ್ಣಾಯರು ವೆಂಕಪ್ಪ ಹೆಗ್ಡೆಯವರು ಉಡುಪಿ ಮಠಕ್ಕೆ ಕೊಡುವುದಕ್ಕೆಂದು ತಂದಿದ್ದ ಬೆಳ್ಳಿ ರುಪಾಯಿಗಳು ತುಂಬಿದ್ದ ಥೈಲಿಯಿಂದ ಅಸಲಿ ನಾಣ್ಯ ತೆಗೆದು ನಕಲಿ ನಾಣ್ಯ ತುಂಬಿದ್ದು. ಅದನ್ನು ಅವರ ಪತ್ನಿ ಭಾಗೀರಥಿ ವಿರೋಧಿಸಿದ್ದು, ಗುತ್ತಿನಾರರು ಮರಳಿ ಹೊರಡುವಾಗ ಕೇಕುಣ್ಣಾಯರಿಗೆ ಹತ್ತು ಬೆಳ್ಳಿಯ ರುಪಾಯಿಗಳನ್ನು ಕೊಟ್ಟು ಮಕ್ಕಳಿಗೆ ಉಡಿದಾರ ಮಾಡಿಸಿ ಹಾಕಿ ಎಂದು ಹೇಳಿದ್ದು, ಕೇಕುಣ್ಣಾಯರ ಕಣ್ಣಲ್ಲಿ ಹರಿದ ನೀರು (256) ಇವೆಲ್ಲ ಒಳಿತು ಮತ್ತು ಕೆಡಕುಗಳ ನಿತ್ಯ ಸಂಘರ್ಷವನ್ನು ಮಾನವೀಯ ನೆಲೆಯಲ್ಲಿ ಮನದಟ್ಟು ಮಾಡಿಸುತ್ತವೆ. ಇವತ್ತಿನ ದಕ್ಷಿಣ ಕನ್ನಡವನ್ನು ಗಣನೆಗೆ ತಂದುಕೊಂಡಾಗ ಉಲ್ಲೇಖಿಸಬೇಕಾದ್ದು ಇದು. ಕೋಮುದ್ವೇಷಕ್ಕೆ ಕಾರಣವಾಗುವ ಒಂದು ಘಟನೆಯಲ್ಲಿ ಹಣ್ಣು ಹಣ್ಣು ಮುದುಕ ಮೂಸಬ್ಬನು ಮೊಮ್ಮಗನಿಗೆ, ಬದುಕಿನಲ್ಲಿ ತಾಳ್ಮೆ ಬೇಕು ಮಗನೇ, ಆವೇಶ ಅಲ್ಲ (486) ಎಂದು ಹೇಳುವುದು, ಗುತ್ತಿನ ಮನೆಯ ಋಣಭಾರ ತನ್ನ ಮೇಲೆ ಹೇಗೆ ಇದೆ ಎಂದು ವರ್ಣಿಸುವುದು, ಗುತ್ತಿನ ಮನೆಗೆ ಬಂದು ಸಂಕಪ್ಪ ಹೆಗ್ಡೆಯವರಿಗೆ ಯೌವನಕ್ಕೆ ಜಾತಿ ಧರ್ಮಗಳ ಕಟ್ಟುಪಾಡಿಲ್ಲ ಸ್ವಾಮಿ, ನಿಮ್ಮ ಅಳಿಯನನ್ನು ಈ ಗುತ್ತಿನ ಮನೆಯಲ್ಲಿ ಉಳಿಸಿಕೊಳ್ಳಬೇಡಿ. ಯಾಕೆ ಎಂದು ಕೇಳಬಾರದು ನೀವು (488) ಎಂದು ಹೇಳಿದ್ದು, ಅದೇ ಮುಂದೆ ಸುಂದರ ಹೆಗ್ಡೆ ಮುಂಬಯಿಗೆ ತೆರಳಿ ದೊಡ್ಡ ಹೋಟೆಲ್‌ ಉದ್ಯಮಿಯಾಗುವುದಕ್ಕೆ ಕಾರಣವಾಗುವುದು ಇವನ್ನೆಲ್ಲ ಯಾವುದೇ ಉತ್ಪ್ರೇಕ್ಷೆ ಉದ್ವೇಗಗಳಿಲ್ಲದೆ ಮೊಗಸಾಲೆಯವರು ವರ್ಣಿಸಿದ್ದಾರೆ. ಕಾದಂಬರಿಯು ಪ್ರಾದೇಶಿಕತೆಯ ವಿವರಗಳನ್ನು ಗಟ್ಟಿಯಾಗಿ ನೀಡುತ್ತಲೇ ಸಾರ್ವಕಾಲಿಕ ಮೌಲ್ಯಗಳ ಚಿಂತನೆಗೆ ಹಚ್ಚುತ್ತದೆ. ಊಳಿಗಮಾನ್ಯ ವ್ಯವಸ್ಥೆಯ ವೈಭವದ ದಿನಗಳ ಚಿತ್ರಣವನ್ನು ಕೊಡುವ ಕಾದಂಬರಿಯು ಭೂಸುಧಾರಣೆ ಬಂದಾಗ ಆ ವ್ಯವಸ್ಥೆಯಲ್ಲಾಗುವ ತಲ್ಲಣಗಳನ್ನು ಹೇಳುತ್ತದೆ. ಹೊಸ ಭೂಮಾಲೀಕರು ಜಾಗತೀಕರಣದ ಸಂದರ್ಭದಲ್ಲಿ ಹೇಗೆ ಅಲ್ಲಾಡಿ ಹೋಗುತ್ತಾರೆ ಎಂಬುದನ್ನೂ ಕಾದಂಬರಿಯು ದಾಖಲಿಸುತ್ತದೆ. ಈ ಎಲ್ಲ ಬದಲಾವಣೆಗಳ ನಡುವೆಯೂ ಮಾನವೀಯ ಮೌಲ್ಯ, ಗಾಂಧೀಜಿಯ ಮೌಲ್ಯಗಳು ಹೇಗೆ ಪುಟವಿಕ್ಕಿದ ಚಿನ್ನದಂತೆ ಹೊಳೆಯುತ್ತವೆ ಎನ್ನುವುದನ್ನು ಅನೇಕ ಘಟನೆಗಳ ಮೂಲಕ ಹೇಳುವಲ್ಲಿ ಕಾದಂಬರಿಯು ಯಶಸ್ವಿಯಾಗಿದೆ. ಆದೇ `ಉಲ್ಲಂಘನೆ’ಯ ಹಾಗೂ ಕಾದಂಬರಿಕಾರರ ಯಶಸ್ಸು ಕೂಡ. ಉಲ್ಲಂಘನೆ ಎನ್ನುವುದು ಬದುಕಿನ ಕ್ರಮವೇ ಆಗಿದೆ. ಆದರೆ ಆ ಕ್ರಮವು ಆಕ್ರಮಣದ ರೀತಿಯಲ್ಲಿ ಬರದೆ ಸಹಜ ಬಯಕೆಯಾಗಿ ಬಂದಾಗ ಸಹ್ಯವಾಗುತ್ತದೆ. ಇಲ್ಲದಿದ್ದರೆ ಅಸಹ್ಯವಾಗುತ್ತದೆ. ಇದನ್ನು ಹೇಳುವಲ್ಲಿ ಮೊಗಸಾಲೆಯವರು ಯಶಸ್ವಿಯಾಗಿದ್ದಾರೆ.