ಒಂದು ಹೂವು ಹಾದಿಯಲ್ಲಿ ಬಿದ್ದಿದ್ದರೆ ಅದನ್ನು ಮೆಟ್ಟಿ ಮುಂದೆ ಹೋಗದಂಥ ಮಾರ್ದವತೆ, ತನ್ನತ್ತ ಕೆಕ್ಕರಿಸಿ ನೋಡಿದವನ ಕತ್ತು ಚೆಂಡಾಡುವಂಥ ಕೋಪ, ಹೆಣ್ಣಿನ ಮುಗುಳ್ನಗೆಯಲ್ಲಿ ಕರಗಿ ಹೋಗುವಂಥ ಆಪ್ತತೆ ಇಂಥ ಭಾವಗಳ ಮಿಶ್ರಣವಾಗಿದ್ದ ಹಾಗೂ ತನ್ನ ಕೃತಿಗಳಲ್ಲಿ ಅವನ್ನೇ ಚಿತ್ರಿಸಿದ ದೊಡ್ಡ ಲೇಖಕ ಚಾರ್ಲ್ಸ್ ಬೋದಿಲೇರ್ ತೀವ್ರವಾಗಿ ಅನುಭವಿಸಿ ಬರೆಯಬಲ್ಲವನಾಗಿದ್ದ. ಆತನ ಗದ್ಯರೂಪದ ಐವತ್ತು ಪದ್ಯಗಳನ್ನು, ಬೇಕಾದರೆ ಗಪದ್ಯವೆನ್ನಿ, ಎಸ್.ಎಫ್.ಯೋಗಪ್ಪನವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೋದಿಲೇರನ ಕವಿತೆಗಳನ್ನು ‘ಪಾಪದ ಹೂಗಳು’ ಹೆಸರಿನಲ್ಲಿ ಲಂಕೇಶ್ ಕನ್ನಡಕ್ಕೆ ತಂದಿದ್ದರು. ಅವರ ಗರಡಿಯಲ್ಲಿಯೇ ತಯಾರಾದ ಯೋಗಪ್ಪನವರ್ ಮೂಲಕ ಇದೀಗ ಮತ್ತೊಮ್ಮೆ ಬೋದಿಲೇರನ ಅನುಸಂಧಾನ ಕನ್ನಡಿಗರಿಗೆ ದಕ್ಕಿದೆ. ಹತ್ತೊಂಬತ್ತನೆ ಶತಮಾನದಲ್ಲಿ ಫ್ರಾನ್ಸ್ ದೇಶದಲ್ಲಿ ಬದುಕಿದ್ದ (ಕೇವಲ 46 ವರ್ಷ) ಬೋದಿಲೇರ್ ಆ ಕಾಲಕ್ಕೆ ವಿಕ್ಷಿಪ್ತವೆನ್ನಿಸಿದ ತನ್ನ ಬರೆಹಗಳಿಂದ ಸಮಕಾಲೀನ ಸಮಾಜದ ನೈತಿಕ ಪ್ರಜ್ಞೆಗೆ ಸವಾಲಾಗಿದ್ದ. ಬೋದಿಲೇರನಿಗೆ ಕಾವ್ಯವೆನ್ನುವುದು ಬಾಹ್ಯಸೌಂದರ್ಯ ಮಾತ್ರವಾಗಿರಲಿಲ್ಲ. ಪಕ್ಕದಲ್ಲಿಯೇ ಇರುವ ಪ್ರಾಯದ ಹೆಣ್ಣೊಬ್ಬಳು ಅಪಾರ ಸೌಂದರ್ಯವತಿಯಾಗಿದ್ದರೂ ವೃದ್ಧೆಯ ಮುಖದ ನೆರಿಗೆಗಳಲ್ಲಿ ತನ್ನ ಕವನದ ಸಾಲುಗಳನ್ನು ಹುಡುಕಲು ಆತ ತವಕಿಸುತ್ತಿದ್ದ. ಬೋದಿಲೇರನ ಆಸಕ್ತಿಯು ನಶ್ವರ ವಸ್ತುಗಳ ಮೇಲಿರಲಿಲ್ಲ. ನಿಸರ್ಗವನ್ನು ಆತ ಆಸಕ್ತಿಯಿಂದ ಅವಲೋಕಿಸುತ್ತಿದ್ದ. ನೀನು ಯಾರನ್ನಾದರೂ ಪ್ರೀತಿಸುವಿಯಾ ಎಂದು ಕೇಳಿದರೆ, ನಾನು ಮೋಡಗಳನ್ನು ಪ್ರೀತಿಸುವೆ… ತೇಲಿ ಮರೆಯಾಗುವ ಮೋಡಗಳನ್ನು… ಅಚ್ಚರಿ ತುಂಬಿದ ಮೋಡಗಳನ್ನು ಎಂದು ಉತ್ತರಿಸುತ್ತಿದ್ದ. ನಿಸರ್ಗ, ಕರುಣೆಯಿಲ್ಲದ ಮಾಟಗಾತಿ, ಸದಾ ಸೋಲುಣಿಸುವ ಎದುರಾಳಿ ಎಂದು ಆತ ಬಗೆದಿದ್ದ. ವಯಸ್ಸು ಹೇಗೆ ನಮ್ಮಲ್ಲಿ ಬದುಕಿನ ನಿರರ್ಥಕತೆಯನ್ನು ಢಾಳವಾಗಿ ಕವಿಸುತ್ತದೆ ಎಂಬುದನ್ನು ‘ವೃದ್ಧೆಯ ಪ್ರಲಾಪ’ದಲ್ಲಿ ಹೇಳುತ್ತಾನೆ. ಅಳುತ್ತಿದ್ದ ಚಿಕ್ಕ ಮಗುವನ್ನು ಸಂತೈಸಬೇಕು ಎಂದು ಹೋದರೆ ಆ ಮಗು ಕೂಡ ಮುದುಕಿಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ತುಂಬ ಆರ್ದ್ರವಾಗಿ ಬರೆದಿದ್ದಾನೆ. ಬೋದಿಲೇರನ ದೃಷ್ಟಿಯಲ್ಲಿ ಸೌಂದರ್ಯದ ಅಧ್ಯಯನವೆಂದರೆ ದ್ವಂದ್ವ ಕಾಳಗ. ಅಲ್ಲಿ ಕಲಾವಿದರು ಸೋಲುವ ಮೊದಲೇ ಭಯಭೀತರಾಗಿ ಚೀತ್ಕರಿಸಿ ನಿರ್ಗಮಿಸುತ್ತಾರೆ ಎಂದು ಆತ ವಿವರಣೆ ನೀಡಿದ್ದಾನೆ. ಬದುಕಿನ ಬಗ್ಗೆ ಬೋದಿಲೇರ್ ಸಿನಿಕನಂತೆ ಆಡಿದ್ದರೂ ‘ಚೆಲುವೆ ಡೊರೊಥಿಯಾ’ಳನ್ನು ಆತ ಮಹಾಕವಿಯಂತೆ ಪುರಾಣದ ಶೈಲಿಯಲ್ಲಿ ವರ್ಣಿಸುತ್ತಾನೆ. “ಆಕೆ ನಡೆದು ಹೋಗುತ್ತಿದ್ದರೆ, ಆಕೆಯ ತುಂಬಿದ ನಿತಂಬಗಳ ಮೇಲಿನ ತೆಳ್ಳಗಿನ ನಡು ಸಹಜವಾಗಿ ಬಳಕುತ್ತಿತ್ತು. ಆಕೆಯ ಗುಲಾಬಿ ವರ್ಣದ ರೇಷ್ಮೆಯ ಹೊರ ಉಡುಪು, ಆಕೆಯ ಮೈ ಬಣ್ಣಕ್ಕೆ ವಿಭಿನ್ನವಾದ ಉತ್ಕೃಷ್ಟ ವ್ಯತ್ಯಾಸವಾಗಿತ್ತು. ಆಕೆಯ ಬೆನ್ನ ಹಿಂದಿನ ಇಳಿಜಾರು ನಿಡಿದಾದ ನಡುವನ್ನು ಅಪ್ಪಿ ಹಿಡಿದಿತ್ತು. ಆಕೆಯ ನೆಟ್ಟಗಿನ ಮೊಲೆಗಳು ಮೊನಚಾಗಿ ಚುಚ್ಚುತ್ತಿದ್ದವು. ಆಕೆಯ ಕೈಯಲ್ಲಿ ಹಿಡಿದ ಕೆಂಪು ಛತ್ರಿಯಿಂದ ಬಿಸಿಲು ಸೋಸಿ ಬರುತ್ತಿತ್ತು. ಆಕೆಯ ಕಪ್ಪು ಮುಖಕ್ಕೆ ರಕ್ತದಂಥ ಕಿರಮಂಜಿ ಹಚ್ಚಿದಂತಾಗಿತ್ತು…..” ಹೀಗೆ ರಮ್ಯ ಶೈಲಿಯಲ್ಲಿ ಆತ ಹೇಳತೊಡಗಿದರೆ ಸುಂದರವಾದ ವರ್ಣಚಿತ್ರವೊಂದು ನಿಮ್ಮ ಕಣ್ಣಮುಂದೆ ಬರಬಹುದು ಇಲ್ಲವೆ ರಕ್ತಮಾಂಸ ಉಸಿರಿನಿಂದ ತುಂಬಿದ ಸುಂದರಿ ಪ್ರತ್ಯಕ್ಷವಾದಂತೆ ಅನ್ನಿಸಬಹುದು. ಇದು ಬೋದಿಲೇರನ ಸಹಜ ಶಕ್ತಿ. ಬೋದಿಲೇರ ಇಂಥ ಸೌಂದರ್ಯವನ್ನು ವರ್ಣಿಸುತ್ತ ಕೂಡಲಿಲ್ಲ. ಬದುಕಿನ ಕರಾಳ ಮುಖಗಳನ್ನೂ ಆತ ಹೇಳುತ್ತಾನೆ. ಅದು ನಿಮ್ಮ ಹೃದಯವನ್ನು ನೀರಾಗಿಸುತ್ತದೆ. ಆತನ ಸಿದ್ಧಾಂತಗಳು ನಿಮಗೆ ಇಷ್ಟವಾಗದೆ ಇರುವುದಕ್ಕೆ ಕಾರಣಗಳೇ ಇರುವುದಿಲ್ಲ. ‘ಖೋಟಾ ನಾಣ್ಯ’ದ ಕೊನೆಯಲ್ಲಿ ಆತ ಹೇಳುವುದು ಹೀಗೆ- ದುಷ್ಟತನವನ್ನು ಎಂದೆಂದಿಗೂ ಕ್ಷಮಿಸಲು ಸಾಧ್ಯವಿಲ್ಲವಾದರು, ನಾವು ದುಷ್ಟರಾಗಿದ್ದೇವೆ ಎಂದು ತಿಳಿಯುವುದರಲ್ಲಿ ಸಭ್ಯತೆ ಇದೆ. ಮೋಕ್ಷಕ್ಕೆ ಅರ್ಹವಲ್ಲದ ಒಂದೇ ಒಂದು ದುರ್ಮಾರ್ಗವೆಂದರೆ, ನಾವು ಮೂರ್ಖ ತರ್ಕದಲ್ಲಿ ಮಾಡುವ ದುಷ್ಟ ಕೆಲಸಗಳು.” ಇಂಥ ಬೋದಿಲೇರ ಖಂಡಿತವಾಗಿಯೂ ಹಲವು ಭಾರತೀಯ ಮನಸ್ಸುಗಳನ್ನು ಪ್ರಭಾವಿಸಿದ್ದಾನೆ. ಈತನನ್ನು ಕನ್ನಡಕ್ಕೆ ಸಮರ್ಥವಾಗಿ ಯೋಗಪ್ಪನವರ್ ತಂದಿದ್ದಾರೆ. ಅವರ ಅನುವಾದ ಕೃತಿಯನ್ನು ಕನ್ನಡದ್ದೇ ಎಂಬಷ್ಟು ಸಹಜವಾಗಿ ಓದುವುದಕ್ಕೆ ಸಾಧ್ಯಮಾಡಿದೆ. ಅನುವಾದಿಸಲು ಅವರು ಎಲ್ಲಿಯೂ ತಿಣುಕಾಡಿದ್ದು ಕಾಣಿಸುವುದಿಲ್ಲ. ಅದಕ್ಕಾಗಿ ಬೋದಿಲೇರನ ಅನುಯಾಯಿಗಳ ಅಭಿನಂದನೆಗೆ ಅವರು ಪಾತ್ರರು.