ಹೊಳೆಸಾಲಿನ ಎಲ್ಲ ಊರು ಕೇರಿಯವರಿಗೆ ಪುರವೆಂದರೆ ಹೊನ್ನಾವರವೇ. ಹೊಳೆ ಬಂದು ಸಮುದ್ರ ಕೂಡುವ ಅಳವೆಯಲ್ಲಿ ಈ ಪುರವಿದೆ. ಮೊದಲೆಂದರೆ ಪುರ ಸೇರಬೇಕೆಂದರೆ ಹೊಳೆಯ ಮೂಲಕವೇ ದೋಣಿಯಲ್ಲೋ ಲಾಂಚಿನಲ್ಲೋ ಬರಬೇಕಿತ್ತು. ಇಲ್ಲವೆಂದರೆ ಹತ್ತಿರದವರು ಕಾಲುನಡಿಗೆಯಲ್ಲೇ ಬಂದು ಹೋಗುತ್ತಿದ್ದರು. ತಾವು ಬೆಳೆದುದು ಸ್ವಂತಕ್ಕೆ ಬಳಸಿ ಹೆಚ್ಚಾಗಿದ್ದನ್ನು ತಂದು ಮಾರುವುದರಿಂದ ಹಿಡಿದು ತಾವು ಬೆಳೆಯದ ಜೀವನಾವಶ್ಯಕ ವಸ್ತುಗಳನ್ನು ಖರೀದಿಸುವುದರ ವರೆಗೆ ಹೊಳೆಸಾಲು ಮತ್ತು ಪುರಕ್ಕೆ ಹೊಕ್ಕು ಬಳಕೆ ಇತ್ತು. ಜೊತೆಗೆ ಪುರದವರ ಮನೆಗೆಲಸ, ಬಂದರದ ವಖಾರಗಳಿಗೆ ಟ್ರಕ್ಕುಗಳಿಂದ ಸಾಮಾನುಗಳನ್ನು ಇಳಿಸುವ ಕೂಲಿಯ ಕೆಲಸದ ವರೆಗೆ ಹೊಳೆಸಾಲಿನವರೇ ಪುರಕ್ಕೆ ಬರಬೇಕಿತ್ತು. ಹೊಳೆಸಾಲಿನವರು ತಂದುಹಾಕುವ ವಸ್ತುಗಳು ಪುರದವರಿಗೆ ಬೇಕೇಬೇಕಿತ್ತು. ಹರಿವೆ, ಬೆಂಡೆ, ಹೀರೆ, ಬಸಳೆ, ತೊಂಡೆ, ಕಲ್ಲಂಗಡಿಗಳಿಂದ ಹಿಡಿದು ಸಿಯಾಳ, ಅಡಕೆ, ಬಾಳೆಕಾಯಿಯ ವರೆಗೆ ಎಲ್ಲವೂ ಪುರದ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗುತ್ತಿತ್ತು. ಈ ಪುರದ ಬಂದರು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ದೊಡ್ಡ ಮಾರುಕಟ್ಟೆಯಾಗಿ ಬದಲಾಗುತ್ತಿತ್ತು. ಬೆಳಗಿನ ಹೊತ್ತು ಹೊಳೆಸಾಲಿನವರೆಲ್ಲ ತಮ್ಮ ಮಾರಾಟದ ಸಾಮಾನುಗಳನ್ನು ತಂದು ಬಂದರದಲ್ಲಿ ಇಳಿಸಿ ಮಾರಾಟ ಮಾಡುತ್ತಿದ್ದರು. ಉಡುಪಿ, ಕುಂದಾಪುರ, ಕುಮಟಾ, ಶಿರಸಿಗಳ ಕಡೆಯಿಂದ ವ್ಯಾಪಾರಿಗಳು, ದಲ್ಲಾಳಿಗಳು ಇಲ್ಲಿಗೆ ಬಂದು ಖರೀದಿ ಮಾಡುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಹೊಳೆಸಾಲಿನಿಂದ ದೋಣಿ, ಲಾಂಚುಗಳಲ್ಲಿ ಬಂದವರೆಲ್ಲ ತಮಗೆ ಬೇಕಾದ ಸರಕು ಸರಂಜಾಮುಗಳನ್ನು ಖರೀದಿಸಿ ಮರಳಿ ಹೊರಡುತ್ತಿದ್ದರು. ಈ ಪುರದ ಬಂದರೆಂದರೆ ನಿತ್ಯ ಜಾತ್ರೆ. ಹೊಳೆಸಾಲಿನವರಿಗೆ ಬಂದರವೇ ಪುರಬಾಗಿಲು. ಪುರಪ್ರವೇಶಕ್ಕೆ ಮೊದಲು ಅವರ ಪಾದ ಈ ಬಂದರಿನ ಮೇಲೆಯೇ ಬೀಳಬೇಕಿತ್ತು. ಈ ಬಂದರಿನ ಒಂದು ಮೂಲೆಯಿಂದ ಹೊಳೆಯಾಚೆಯ ಕಾಸರಕೋಡಿಗೆ ಮೈಲುದ್ದದ ಸೇತುವೆಯೊಂದನ್ನು ನಿರ್ಮಾಣ ಮಾಡಿದ್ದರು. ಸದಾಕಾಲ ಅದರ ಮೇಲೆ ವಾಹನ ಸಂಚಾರ. ಪುರುಸೊತ್ತಿಲ್ಲದ ಜಗತ್ತನ್ನು ಕಾಣಬೇಕೆಂದರೆ ಈ ಸೇತುವೆಯ ಮೇಲೆ ಒಂದ್ಹತ್ತು ನಿಮಿಷ ನಿಮ್ಮ ಕಣ್ಣನ್ನು ನೆಟ್ಟರೆ ಸಾಕು. ಅದೆಷ್ಟೋ ವಾಹನಗಳು ನಮನಮೂನೆಯ ಹಾರ್ನ್ ಮೊಳಗಿಸುತ್ತ ಬುರ್‌ಬುಶ್ ಅಂತ ಅಂತ್ತಿಂದ ಇತ್ತ ಇತ್ತಿಂದ ಅತ್ತ ನಿಮ್ಮ ಎಣಿಕೆಗೂ ಸಿಲುಕದೆ ಧಾವಿಸುತ್ತಲೇ ಇರುತ್ತವೆ. ಆದರೆ ಹೊಳೆ ಸಾಲಿನವರಿಗೋ ಪುರುಸೊತ್ತೋ ಪುರುಸೊತ್ತು. ಆರಾಮವಾಗಿ ದೋಣಿಯಲ್ಲಿ ಕಾಲು ನೀಡಿಕೊಂಡು ಕವಳದ ಸಂಚಿ ಬಿಚ್ಚಿ ಅದರೊಳಗಿನ ಎಲೆಯನ್ನು ಹೊರಗೆಳೆದು ತಮ್ಮ ತೊಡೆಯ ಮೇಲೆ ಆ ಎಲೆಯನ್ನು ಹೊರಗೊಮ್ಮೆ ಒಳಗೊಮ್ಮೆ ಎಳೆದುಕೊಂಡು, ಅದರ ಬೆನ್ನ ಮೇಲಿನ ನಾರನ್ನು ಸುಲಿದು ಎಳೆದು ಹರಿವ ಹೊಳೆಯಲ್ಲಿ ತೇಲಿಬಿಟ್ಟು, ಸುಣ್ಣದ ಡಬ್ಬದ ಮುಚ್ಚಳ ತೆಗೆದು ಸುಣ್ಣವನ್ನು ಅದರ ಮೇಲೆ ಸವರಿ, ಅಡಕ್ಕೊತ್ತಿನಿಂದ ಅಡಕೆಯನ್ನು ಸಣ್ಣ ಪುಡಿ ಮಾಡಿ, ಮಲಬಾರ ತಂಬಾಕಿನ ಸಣ್ಣದೊಂದು ತುಣುಕನ್ನು ಅದರಲ್ಲಿ ಹಾಕಿ ಆ ಎಂದು ಬಾಯನ್ನು ಅಗಲಿಸಿ ದವಡೆಗೆ ಆ ಎಲೆ ಅಡಕೆಯನ್ನು ಇಟ್ಟು ಅಗಿಯತೊಡಗಿದರೆಂದರೆ ಬಂದರು ಬಂದ ಮೇಲೆಯೇ ಅದನ್ನು ಉಗಿಯುವುದು. ಪಕ್ಕದಲ್ಲಿದ್ದವರು ಎಲೆ ಅಡಕೆಯವರಾದರೆ ಅವರಿಗೂ ತಮ್ಮ ಸಂಚಿಯಿಂದಲೇ ಕೊಡುವವರು. ಅವರ ಮನೆಯ ಕೇರಿಯ ಸುಖ ದುಃಖ ಕೇಳಿಸಿಕೊಳ್ಳುವವರು. ಬೇಕಿರಲಿ ಇಲ್ಲದಿರಲಿ ತಮ್ಮದೊಂದು ಸಲಹೆಯನ್ನು ಹೊಡಚಿಹಾಕುವವರು. ಲಾಂಚಿನಲ್ಲೂ ಇದೇ ಚಿತ್ರ. ಬಂದರಲ್ಲಿ ಇಳಿದ ಮೇಲೆ ತಮ್ಮ ಎಲ್ಲ ಕೆಲಸಕ್ಕೂ ಮೊದಲು ಅಲ್ಲಿಯ ವೆಂಕಟೇಶ ಪ್ರಭುಗಳ ಚಾದಂಗಡಿಯಲ್ಲಿ ಸಿಂಗಲ್ ಬನ್ಸ್ ತಿಂದು ಒಂದು ಚಾ ಕುಡಿಯದಿದ್ದರೆ ಹೊಳೆಸಾಲಿನವರ ಹೊಟ್ಟೆಯಲ್ಲಿ ಏನೋ ಒಂದು ತಳಮಳ. ಬನ್ಸ್‌ಗೆ ಆ ಹೊಟೇಲಿನಲ್ಲಿ ಮಾಡುವ ಕುರ್ಮ ವಿಶೇಷ ಗಮದಿಂದ ಕೂಡಿರುತ್ತಿತ್ತು. ಹೊಳೆಸಾಲಿನ ಹೆಂಗಸರು ಅಲ್ಲಿ ಅದನ್ನು ತಿಂದವರು ತಾವೂ ಮನೆಯಲ್ಲಿ ಅದೇ ರೀತಿ ಮಾಡಬೇಕೆಂದು ಅಲ್ಲಿಯ ಅಡುಗೆ ಭಟ್ಟರಲ್ಲಿ ಏನೇನು ಸಾಮಾನು ಹಾಕಿ ಇದನ್ನು ಮಾಡುತ್ತೀರಿ ಎಂದು ಕೇಳಿಕೊಂಡು ಹೋಗುವರು. ಆದರೆ ವೆಂಕಟೇಶ ಪ್ರಭುಗಳ ಹೊಟೇಲಿನ ಕುರ್ಮದ ರುಚಿ ಅವರು ಮಾಡಿದ್ದಕ್ಕೆ ಬರುತ್ತಲೇ ಇರಲಿಲ್ಲ. ಹೊಳೆಸಾಲಿನವರ ಅಗತ್ಯಕ್ಕೆ ಹೊನ್ನಾವರದಲ್ಲಿ ಹಲವು ಅಂಗಡಿಗಳಿದ್ದವು. ಕಿರಾಣಿ ಸಾಮಾನುಗಳು ಬೇಕು ಎಂದರೆ ಸಿದ್ಧಪ್ರಭುಗಳು ಮತ್ತು ಶ್ರೀನಿವಾಸ ಪ್ರಭುಗಳ ವಖಾರಗಳಿದ್ದವು. ಹೊನ್ನಾವರದ ಬಂದರಿನಲ್ಲಿ ಹಲವಾರು ಅಂಗಡಿಗಳು ವಖಾರಗಳಿದ್ದರೂ ಇವರ ಎರಡು ಅಂಗಡಿಗಳು ಗಿರಾಕಿಗಳಿಂದ ಗಿಜಿಗುಡುತ್ತಿದ್ದವು. ಉಳಿದವರು ಲೋಕಾಭಿರಾಮದ ಮಾತುಕತೆ ಆಡುತ್ತ ರಸ್ತೆಯಲ್ಲಿ ಆಕಡೆ ಈಕಡೆ ಸಾಗುವ ವ್ಯಕ್ತಿಗಳ ಹಾವಭಾವಗಳ ಮೇಲೆ ತಮ್ಮದೊಂದು ಟಿಪ್ಪಣಿ ಒಗಾಯಿಸಿ ತಮ್ಮ ತಮ್ಮಲ್ಲೇ ನಗುತ್ತ ಕುಳಿತಿರುತ್ತಿದ್ದರು. ಹೊಳೆಸಾಲಿನವರಿಗೆ ರೋಗ ಬಂದರೆ ಬಳಕೂರು ಡಾಕ್ಟರು ಇಲ್ಲವೆ ಅಚ್ಯುತ ಪಂಡಿತರ ದವಾಖಾನೆಗಳಿರುತ್ತಿದ್ದವು. ಔಷಧ ತೆಗೆದುಕೊಳ್ಳಬೇಕು ಎಂದರೆ ಕಲ್ಯಾಣಪುರ ಅಥವಾ ಕಾಮತರ ಔಷಧ ಅಂಗಡಿಗಳಿರುತ್ತಿದ್ದವು. ಹಾಗೆಯೇ ಬಟ್ಟೆ ಖರೀದಿಸುವವರಿಗೆ ಶಿಕಾರ ಪ್ರಭುಗಳು, ಕಾಮತರು, ಭಕ್ತರ ಅಂಗಡಿಗಳಿದ್ದವು. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುದಿದ್ದರೆ ಆಮಂತ್ರಣ ಪತ್ರಿಕೆ ಮುದ್ರಿಸುವುದಾದರೆ ಜೀಯು ಭಟ್ಟರ ಶ್ರೀಧರ ಪ್ರೆಸ್ಸಿಗೆ ಹೋಗಬೇಕಿತ್ತು. ಕೋರ್ಟು ಖಟ್ಲೆ ಅಂತಿದ್ದರೆ ಜಾಲಿಸತ್ಗಿ ವಕೀಲರ ಮನೆ ಇತ್ತು. ಬಂದರದ ಸೇತುವೆ ಮತ್ತು ದಕ್ಕೆಯ ನಡುವೆ ಒಂದು ದೀಪದ ಕಂಬ ಇತ್ತು. ಸಮುದ್ರದಿಂದ ಬರುವ ಲಾಂಚುಗಳು, ಮಚುವೆಗಳಿಗೆ ಈ ಕೆಂಪು ದೀಪದ ಸಂದೇಶ ಸಿಗುತ್ತಿತ್ತು. ಬಂದರದ ಒಂದು ಕಡೆ ಮೀನು ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿತ್ತು. ಮೀನು ಮಾರುವ ಹೆಂಗಸರು, ಅವರೊಂದಿಗೆ ಮೀನು ದರದ ಚೌಕಾಶಿಯಲ್ಲಿ ತೊಡಗುವ ಗ್ರಾಹಕರು, ಮಾಂಸಕ್ಕಾಗಿ ಬೀಡುಬಿಟ್ಟ ನಾಯಿಗಳು ಮತ್ತು ಅವುಗಳ ಸಂಸಾರ, ಆಗಸದಲ್ಲಿ ಸುತ್ತುಹಾಕುತ್ತಿರುವ ಗಿಡುಗಗಳು ಇವೆಲ್ಲವೂ ಬಂದರಿನಲ್ಲಿರುವ ಎಲ್ಲರ ಭೂತ ಭವಿಷ್ಯತ್ತುಗಳನ್ನು ಮರೆಸಿ ಕೇವಲ ಅಂದರೆ ಕೇವಲ ವರ್ತಮಾನವನ್ನು ಮಾತ್ರ ದಟ್ಟಣಿಸಿಬಿಡುತ್ತಿತ್ತು. ಈ ಪುರಬಾಗಿಲಿನ ನಾಲ್ಕೂವರೆ ದಶಕದ ಹಿಂದಿನ ಒಂದು ಘಟನೆ ನೆನಪಾದಾಗ ಎದೆಯ ಮೇಲೆ ಮಂಜುಗಡ್ಡೆ ಇಟ್ಟಹಾಗೆ ಆಗುತ್ತಿದೆ. ಅಂಥ ನಿಗಿನಿಗಿ ವರ್ತಮಾನದ ಆಗುಹೋಗುಗಳ ಭಾಗವಾಗಲು ಚೂಳಿ ತುಂಬ ತರಕಾರಿ ತುಂಬಿಕೊಂಡು ಕಾಸರಕೋಡಿನ ಕೆಳಗಿನೂರಿನಿಂದ ಗಂಡ ಹೆಂಡತಿ ಸೇತುವೆಯ ಮೇಲಿನಿಂದ ಓಡು ನಡಿಗೆಯಲ್ಲಿ ಬರುತ್ತಿದ್ದರು. ಬೆಳಗಿನ ಒಂಬತ್ತೂವರೆಯ ಸುಮಾರು. ಜೋರಾಗಿ ಗಾಳಿ ಬೀಸುತ್ತಿತ್ತು. ರುಂಯ್ ಎನ್ನುವ ಗಾಳಿಗೆ ಅಕ್ಕಪಕ್ಕ ಹಾದುಹೋಗುವ ವಾಹನದ ಸುದ್ದೂ ಅವರಿಗೆ ಕೇಳುತ್ತಿರಲಿಲ್ಲ. ಸೇತುವೆಯ ಅರ್ಧ ಭಾಗಕ್ಕೆ ಬಂದಾಗ ಗಾಳಿ ನೂಕಿದಂತಾಗಿ ಗಂಡ ಫುಟ್‌ಪಾತ್‌ನಿಂದ ಕೆಳಕ್ಕೆ ಇಳಿದ. ಅದೇ ಹೊತ್ತಿಗೆ ಬೈಂದೂರಿನಿಂದ ಶಿರಸಿಗೆ ಹೋಗುತ್ತಿದ್ದ ಬಸ್ ವೇಗದಿಂದ ಬಂದು ಆತನಿಗೆ ಅಪ್ಪಳಿಸಿತು. ಆ ಜೋಡಿಯಲ್ಲಿ ಒಂದರ ಪ್ರಾಣಪಕ್ಷಿ ಹಾರಿಹೋಗಿತ್ತು. ತರಕಾರಿ ಚೆಲ್ಲಾಪಿಲ್ಲಿಯಾಗಿತ್ತು. ಚೂಳಿ ಗಾಜನ್ನು ಒಡೆದು ಬಸ್ಸಿನ ಒಳಗೆ ಬಿದ್ದಿತ್ತು. ಅವನ ಹೆಂಡತಿಯ ಆರ್ತನಾದ ಬಂದರಿನ ಗಲಾಟೆಯಲ್ಲಿ ಯಾರಿಗೂ ಕೇಳಲಿಲ್ಲ. ಹನ್ನೆರಡು ವರ್ಷಗಳ ನಾನು ಆ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದೆ. ಸಂಜೆಯ ಹೊತ್ತಿಗೆ ಆತನ ವಿಷಯವೆಲ್ಲ ತಿಳಿದುಬಂತು. ಹೊಸದಾಗಿ ಮನೆಯನ್ನು ಕಟ್ಟಿಸಿದ್ದ ಅವರ ಮನೆಇರವಾಣ ಎರಡು ದಿನ ಬಿಟ್ಟು ಇತ್ತು. ತರಕಾರಿ ಮಾರಿ ಕಾರ್ಯಕ್ರಮಕ್ಕೆ ಸಾಮಾನು ತೆಗೆದುಕೊಂಡು ಹೋಗಲು ಅವರು ಬಂದಿದ್ದರು. ಮನೆಯೊಳಗೆ ಮನೆಯೊಡನಿಲ್ಲದ ಸ್ಥಿತಿ. ಆ ಒಬ್ಬೊಂಟಿಯ ಬದುಕಿನಲ್ಲಿ ಅದೆಂಥ ರಾಮಾಯಣ ನಡೆದುಹೊಗಿದೆಯೋ ಎಂದು ವಿಹ್ವಲಗೊಳ್ಳುತ್ತದೆ ಮನಸ್ಸು. ಪುರಬಾಗಿಲು ಇಂಥ ಸಾವಿರಾರು ಕತೆಗಳಿಗೆ ಸಾಕ್ಷಿಯಾಗಿದೆ