ಹುಲ್ಲು ಬೆಳೆಯುಲ್ಲಿ ಮರ ನೆಟ್ಟರೆ ನಮಗೆ ನೊಬೆಲ್ ಪ್ರಶಸ್ತಿ ಬರುವುದು ಕಡಿಮೆ, ಒಲಿಂಪಿಕ್ಸ್‌ನಲ್ಲಿ ಪದಕ ಬರುವುದು ಬೆರಳೆಣಿಕೆಯಷ್ಟು ಎಂದು ಅವನು ಹೇಳುತ್ತಿದ್ದ. ಎಲ್ಲಿಂದೆಲ್ಲಿಯ ಸಂಬಂಧ? ———- ಅವನೊಬ್ಬ ಹುಡುಕಾಟದಲ್ಲಿ ತೊಡಗಿದ್ದ ವ್ಯಕ್ತಿಯಾಗಿದ್ದ. ತಾನು ಏನನ್ನು ಹುಡುಕುತ್ತಿದ್ದೇನೆ ಎಂಬುದು ಸ್ವತಃ ಅವನಿಗೂ ಸ್ಪಷ್ಟವಿರಲಿಲ್ಲ. ಎದುರಿಗೆ ಬಂದವರನ್ನೆಲ್ಲ ಗುಮಾನಿಯಿಂದ ಎಂಬಂತೆ ನೋಡುತ್ತಿದ್ದ. ಅವನ ದೃಷ್ಟಿ ಎಷ್ಟು ತೀಕ್ಷ್ಣವಾಗಿತ್ತು ಎಂದರೆ ಅದೆಲ್ಲಿ ತಾಗಿದವರ ಮೈಯಲ್ಲಿ ಹುಣ್ಣನ್ನು ಮಾಡುವುದೋ ಎಂಬ ಆತಂಕ ಕಾಡುತ್ತಿತ್ತು. ಅವರ ಚಿತ್ತದಲ್ಲಿ ಮೂಡಿದ ಎಲ್ಲ ಆಲೋಚನೆಗಳನ್ನು ತಾನು ಓದಬಲ್ಲೆ ಎಂಬ ಆತ್ಮವಿಶ್ವಾಸದಿಂದ ಸಾಗಿ ಬರುತ್ತಿರುವಂತೆ ಆತ ಕಾಣುತ್ತಿದ್ದ. ಯಾರಾದರೂ ಆತನೊಂದಿಗೆ ಮಾತಿಗೆ ತೊಡಗಿದರೆ ಅವರು ಮಾತನಾಡುತ್ತಲೇ ಇರುವ ಹಾಗೆ ಒಂದೊಂದೇ ಪ್ರಶ್ನೆಗಳ ಹುಳುವನ್ನು ಬಿಡುತ್ತಿದ್ದ. ಅವರು ಹೇಳಿದ್ದಕ್ಕೆ ಹೂಂಗುಡುತ್ತಿದ್ದ. ಆಗೆಲ್ಲ ಅವನ ಇಂದ್ರಿಯಗಳಲ್ಲಿ ಕಿವಿಯೊಂದೇ ಜಾಗ್ರತವಾಗಿರುತ್ತಿತ್ತು. ಅವನ ಮೈಯೆಲ್ಲ ಕಿವಿಯಾಗಿರುತ್ತಿತ್ತು ಎಂದೂ ಹೇಳಬಹುದು. ಅವರ ಮಾತುಗಳಲ್ಲಿ ಎಲ್ಲಿಯಾದರೂ ತಾನು ಹುಡುಕುತ್ತಿದ್ದದ್ದು ಸಿಗುವುದೋ ಎಂಬ ಆಸೆ ಅವನ ಅಂತರಂಗದಲ್ಲೆಲ್ಲೋ ಮಿಣುಕುತ್ತಿತ್ತು. ಇವತ್ತೇಕೆ ಹಕ್ಕಿಗಳೊಂದೂ ಕೂಗುತ್ತಿಲ್ಲ ಎಂದು ಚಿಂತಿಸುತ್ತಿದ್ದ. ಬೀದಿ ನಾಯಿಗಳು ತನ್ನೊಂದಿಗೇಕೆ ಸ್ನೇಹದಿಂದ ವರ್ತಿಸುತ್ತವೆ? ತಾನೇನು ಅವುಗಳಿಗೆ ಬಿಸ್ಕೆಟ್ ಹಾಕುತ್ತಿಲ್ಲವಲ್ಲ ಎಂದು ತನ್ನಷ್ಟಕ್ಕೇ ಆಶ್ಚರ್ಯಪಡುತ್ತಿದ್ದ. ಬೇಸಿಗೆಯಾದರೆ ಯಾರ ಮನೆಯ ಬಾವಿಯಲ್ಲಿ ನೀರು ಬತ್ತಿದೆ ಮತ್ತು ಯಾರ ಮನೆಯ ಬಾವಿಯಲ್ಲಿ ಇನ್ನೂ ನೀರಿದೆ ಎಂಬುದನ್ನು ವಿಚಾರಿಸುತ್ತಿದ್ದ. ಇದಕ್ಕೆ ಏನು ಕಾರಣ ಎಂಬುದನ್ನು ಅವರ ಬಾಯಿಂದಲೇ ಕೇಳುತ್ತಿದ್ದ. ಈಗ ನಿಮಗೆ ಅರ್ಥವಾಯ್ತಾ? ಮುಂದಿನ ಬೇಸಿಗೆಯಲ್ಲಿ ನಿಮ್ಮ ಮನೆಯ ಬಾವಿಯಲ್ಲಿ ನೀರು ಬತ್ತದಂತೆ ಏನು ಮಾಡಬೇಕೋ ಅದನ್ನು ಮಾಡಿ ಅನ್ನುತ್ತಿದ್ದ. ಕೇರಿಯಲ್ಲಿ ಮನೆಯ ಜಗುಲಿಯ ಮೇಲೆ ವೃದ್ಧ ದಂಪತಿ ಕುಳಿತುಕೊಂಡಿದ್ದರೆ, ಇಷ್ಟುವರ್ಷವಾದರೂ ಅದೆಷ್ಟು ಹಚ್ಚಿಕೊಂಡು ಇರುತ್ತೀರಿ ನೀವು ಎಂದು ಅವರ ಕಾಲೆಳೆಯುತ್ತಿದ್ದ. ನಿಮ್ಮ ನಡುವೆ ಯಾವತ್ತೂ ಜಗಳವೇ ಆಗಿಲ್ಲವೆ ಎಂದು ಮುಗ್ಧನಂತೆ ಕೇಳುತ್ತಿದ್ದ. ನಿಮ್ಮ ಮದುವೆಯಾದ ವರ್ಷ ತೋಟದಲ್ಲಿ ಯಾವುದಾದರೂ ಗಿಡವನ್ನು ನೆಟ್ಟಿದ್ದೀರಾ? ಅದು ಈಗ ಎಲ್ಲಿದೆ ಎಂದು ಅರಸುವವನಂತೆ ಪ್ರಶ್ನೆ ಮಾಡುತ್ತಿದ್ದ. ನಿಮ್ಮ ಮನೆಯ ಹಲಸಿನ ಮರದ ಪೊಟರೆಯಲ್ಲಿ ಜೇನು ಕಟ್ಟಿದೆಯಲ್ಲ? ಅದನ್ನು ಹಿಡಿದು ಪೆಟ್ಟಿಗೆಗೆ ತುಂಬುವುದು ಯಾವಾಗ? ಮುಂದಿನ ವರ್ಷ ಆ ಜಾಗದಲ್ಲಿ ಹಳೆಯ ಬೆಲ್ಲದ ಗಡುಗೆಯನ್ನು ಇರಿಸಿ. ಜೇನು ಅದರಲ್ಲಿಯೇ ಬಂದು ಕುಳಿತುಕೊಳ್ಳುತ್ತದೆ. ಹಿಡಿದು ಪೆಟ್ಟಿಗೆಗೆ ತುಂಬುವುದು ಸರಳವಾಗುತ್ತದೆ ಎನ್ನುತ್ತಿದ್ದ. ಮೀನು ಹಿಡಿಯುವವನು ದಡಕ್ಕೆ ದೋಣಿಯನ್ನು ತಂದರೆ ದೋಣಿ ತೂತಾಗುವ ಹಾಗೆ ದೃಷ್ಟಿ ತೂರುತ್ತಿದ್ದ. ಯಾವುದಾದರೂ ಹೊಸ ಜಾತಿಯ ಮೀನು ಕಾಣುವುದೋ ಎಂದು ನೋಡುತ್ತಿದ್ದ. ಮೀನು ಹಿಡಿಯಲು ಇಷ್ಟೆಲ್ಲ ಕಷ್ಟಪಡಬೇಕೆ? ನಿಮ್ಮ ನಿಮ್ಮ ತೋಟದಲ್ಲೊಂದು ಮೀನು ಹೊಂಡವನ್ನು ಮಾಡಿ ಅದರಲ್ಲಿ ಮೀನು ಸಾಕಬಹುದಲ್ಲವೆ? ನಿಮ್ಮ ಇಷ್ಟದ ಜಾತಿಯ ಮೀನು ಮರಿಗಳನ್ನು ತಂದು ಸಾಕಬಹುದು ಎಂದು ಪುಕ್ಕಟೆ ಸಲಹೆ ಕೊಡುತ್ತಿದ್ದ. ನಿಮ್ಮ ಮಕ್ಕಳನ್ನು ಕಟ್ಟಿಹಾಕಬೇಡಿ. ಅವರಷ್ಟಕ್ಕೆ ಅವರನ್ನು ಹೊರಗೆ ಆಡುವುದಕ್ಕೆ ಬಿಡಿ. ಹೀಗೆ ಮಾಡಿದರಷ್ಟೇ ಅವರು ಸವಾಲುಗಳನ್ನು ಎದುರಿಸಲು ಕಲಿತುಕೊಳ್ಳುತ್ತಾರೆ. ಮರ ಏರುವವನಿಗೆ ನೀವು ಎಷ್ಟರ ತನಕ ನೆರವಾಗಬಹುದು? ನಿಮ್ಮ ಕೈ ನಿಲುಕುವ ತನಕ ಮಾತ್ರ ಅಲ್ಲವೆ? ನಿಮ್ಮ ಮಕ್ಕಳು ಪ್ರಚಂಡರಾಗಬೇಕೆಂದರೆ ಅವರ ಬಾಲಲೀಲೆಗಳಲ್ಲಿ ನೀವು ಮೂಗು ತೂರಿಸಬೇಡಿ ಎನ್ನುತ್ತಿದ್ದ. ನಿಮ್ಮ ಊರಿನ ಗುಡ್ಡದ ಮೇಲೆ ನಿಮ್ಮ ದನಕರು ಮೇಯುವಲ್ಲಿ ಗೇರುಗಿಡಗಳನ್ನು ನೀಲಗಿರಿ ಮರಗಳನ್ನು ಬೆಳೆಯುವುದರಿಂದ ನಿಮ್ಮ ಮಕ್ಕಳು ಬಡವಾಗುತ್ತಾರೆ ಎನ್ನುತ್ತಿದ್ದ. ಅದು ಹೇಗೆ ಎಂದು ಅವನು ಹೇಳುವುದು ಕುತೂಹಲಕಾರಿ. ಈ ನೀಲಗಿರಿ ಮತ್ತು ಗೇರು ಮರಗಳನ್ನು ಬೆಳೆಯುವುದರಿಂದ ಅವುಗಳ ಎಲೆಗಳು ಬಿದ್ದು ಆ ಜಾಗದಲ್ಲಿ ಹುಲ್ಲು ಹುಟ್ಟುವುದಿಲ್ಲ. ಹುಲ್ಲು ಹುಟ್ಟದಿದ್ದರೆ ಮೇವಿಲ್ಲದೆ ನಿಮ್ಮ ಹಾಲು ಕರೆಯುವ ಹಸು, ಬೆಳೆಯುವ ಅವುಗಳ ಕರುಗಳು ಬಡವಾಗುತ್ತವೆ. ಹೀಗೆ ನಿಮ್ಮ ಹಸು ಕೃಶವಾಗುವುದರಿಂದ ಹಾಲು ಕಡಿಮೆಯಾಗುತ್ತದೆ. ನಿಮ್ಮ ಮಕ್ಕಳು ಕುಡಿಯುವ ಹಾಲು ಕಡಿಮೆಯಾಗುತ್ತದೆ. ಆಸೆಗೆ ನೀವು ಹೆಚ್ಚು ಹಿಂಡುವುದರಿಂದ ಆಕಳ ಕರುವೂ ಬಡವಾಗುತ್ತದೆ. ನಿಮ್ಮ ಮಕ್ಕಳು ಕೃಶರಾಗುವುದರಿಂದ ಈ ದೇಶದ ಭಾವೀ ಪ್ರಜೆಗಳು ಬುದ್ಧಿಯಲ್ಲಿ, ಶಕ್ತಿಯಲ್ಲಿ ಬಡವಾಗುತ್ತಾರೆ. ಅದಕ್ಕೇ ನೋಡಿ ನಮಗೆ ನೊಬೆಲ್ ಪ್ರಶಸ್ತಿ ಬರುವುದು ಕಡಿಮೆ, ಒಲಿಂಪಿಕ್ಸ್‌ನಲ್ಲಿ ಪದಕ ಬರುವುದು ಬೆರಳೆಣಿಕೆಯಷ್ಟು ಎಂದು ಹೇಳುತ್ತಿದ್ದ. ಎಲ್ಲಿಂದೆಲ್ಲಿಯ ಸಂಬಂಧ? ಇತ್ತೀಚೆ ಅವನು ಎಲ್ಲಿಯೂ ಕಾಣಿಸುತ್ತಿಲ್ಲ. ಅವನೊಂದಿಗೆ ಮಾತನಾಡಬೇಕು ಎನ್ನಿಸುತ್ತದೆ, ಅವನ ಮಾತು ಕೇಳುತ್ತಲೇ ಇರಬೇಕು ಎನ್ನಿಸುತ್ತದೆ. ತನಗೆ ವಯಸ್ಸಾಯ್ತು ಅಂದುಕೊಂಡನೋ ಏನೋ, ಇವರೊಂದಿಗೆ ತನಗೆ ಹೊಂದಾಣಿಕೆಯಾಗುವುದಿಲ್ಲವೇನೋ ಅಂದುಕೊಂಡನೋ ಏನೋ? ಮತ್ತೆ ಅವನು ಬಂದೇ ಬರ್ತಾನೆ ಎಂದು ಮನಸ್ಸು ಹೇಳುತ್ತಿದೆ.