*ಯೋಗ್ಯತೆಯನ್ನು ಗುರುತಿಸುವುದೂ ಒಂದು ವಿಶೇಷ ಕಲೆ

ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟರೆ ಅದು ಏನು ಮಾಡುತ್ತದೆ? ಒಮ್ಮೆ ಅದನ್ನು ಮೂಸಿ ನೋಡಿ ಎಸೆದುಬಿಡುತ್ತದೆ. ಮಾಣಿಕ್ಯದ ಮೌಲ್ಯ ಅದಕ್ಕೇನು ಗೊತ್ತಿದೆ? ಅಥವಾ ಮಾಣಿಕ್ಯದಿಂದ ಅದಕ್ಕೆ ಆಗಬೇಕಾದದ್ದು ಏನೂ ಇರುವುದಿಲ್ಲ.
ಮಂಗನಿಗೆ ಉಪಯುಕ್ತವಾದದ್ದು ಮಾವಿನ ಹಣ್ಣೋ ಇನ್ನೇನೋ ಆಗಿದ್ದರೆ ಅದು ಅದನ್ನು ಮಾತ್ರ ತಿನ್ನುತ್ತಿತ್ತು. ವಸ್ತು ಎಷ್ಟೇ ಅಮೂಲ್ಯವಾದದ್ದು ಆಗಿರಬಹುದು. ಆದರೆ ಅದು ಉಪಯೋಗಕ್ಕೆ ಬರದಿದ್ದರೆ ಅದು ಕಸಕ್ಕಿಂತ ನಿಕೃಷ್ಟ ಎಂಬುದು ಈ ಹೇಳಿಕೆಯ ಒಂದು ಮುಖ. ಇದಕ್ಕೆ ಇನ್ನೊಂದು ಮುಖವೂ ಇದೆ.
ಎಷ್ಟೋ ಬಾರಿ ಅಮೂಲ್ಯವಾದ ವಸ್ತುಗಳು ಯಾರಯಾರದೋ ಕೈಯಲ್ಲಿ ಇರುತ್ತವೆ. ಅದರ ಪ್ರಯೋಜನ ಗೊತ್ತಿದ್ದರೆ ತಾನೆ ಉಪಯೋಗ? ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಎಂಬ ಮಾತು ಹೆಚ್ಚುಕಡಿಮೆ ಇದಕ್ಕೆ ಹೋಲುತ್ತದೆ. ಓದು ಬಾರದವನ ಮನೆಯಲ್ಲಿ ಅಮೂಲ್ಯವಾದ ಗ್ರಂಥ ಭಂಡಾರ ಇದ್ದರೆ ಏನು ಪ್ರಯೋಜನ ಹೇಳಿ?
ಯೋಗ್ಯತೆಯನ್ನು ಗುರುತಿಸುವುದೂ ಒಂದು ವಿಶೇಷ ಕಲೆ. ಹತ್ತಾರು ಜನರು ಒಂದು ಗುಂಪಿನಲ್ಲಿ ಇರುವಾಗ ಆ ಗುಂಪಿನ ನಾಯಕನಾದವನು ಯಾರಿಂದ ಯಾವ ಕೆಲಸ ಸಾಧ್ಯ ಎಂಬುದನ್ನು ಅರಿತು ಅವರಿಂದ ಆ ಕೆಲಸವನ್ನೇ ಮಾಡಿಸಿದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ವ್ಯಕ್ತಿಯಲ್ಲಿಯ ಯೋಗ್ಯತೆಯನ್ನು ಅರಿಯುವಲ್ಲಿ ತಪ್ಪು ಮಾಡಿದರೆ ಆತನ ಸೂಕ್ತ ಬಳಕೆಯಾಗದೆ ಪ್ರತಿಭೆ ಕಮರಿ ಹೋಗುತ್ತದೆ. ಆ ಪ್ರತಿಭೆಯನ್ನುವುದು ಮಂಗನ ಕೈಯಲ್ಲಿಯ ಮಾಣಿಕ್ಯದಂತಾಗುತ್ತದೆ.
ಇದನ್ನೇ ಪ್ರಾಜ್ಞರು ನಿಧಿ ಕಾಲಡಿಯಲ್ಲಿಯೇ ಇದ್ದರೂ ಕಾಣದೆ ಹೋಗುವ ಮೂರ್ಖನಿಗೆ ಹೋಲಿಸುತ್ತಾರೆ. ಈ ಕಾಣುವ ಶಕ್ತಿ ಎಲ್ಲರಲ್ಲಿಯೂ ಇರುವುದಿಲ್ಲ. ಅಂಥ ಶಕ್ತಿ ಇದ್ದವರು ನಾಯಕರೆನ್ನಿಸಿಕೊಳ್ಳುತ್ತಾರೆ.