‘‘ಅಸ್ತ್ರಗಳಿಗೆ ತಮ್ಮದೇ ಆದ ಶಕ್ತಿ ಎಲ್ಲಿದೆ? ಅವುಗಳಿಗೆ ಸಾಮರ್ಥ್ಯ ಬರುವುದು ಅವುಗಳನ್ನು ಬಳಸುವ ಕೈಗಳಿಂದ. ಆ ಕೈಗಳಿಗೆ ಪ್ರಯೋಗ ನೈಪುಣ್ಯ ಬರುವುದು ಮನೋಬಲದಿಂದ. ಮಿತ್ರಾ ನಿನ್ನ ಈ ಶಕ್ತಿ ಸಾಮರ್ಥ್ಯಗಳು ನಿನ್ನ ಅಂತರಂಗದ ಮೈತ್ರಿ ಕರುಣೆಗಳಿಗಿಂತ ಬಲಶಾಲಿಗಳಲ್ಲ. ಅವು ಕೇವಲ ಅನ್ಯರ ಬಲಹೀನತೆಯನ್ನು ಅವಲಂಬಿಸಿವೆ.’’ ಇದು ಗೌತಮಬುದ್ಧನು ಅಂಗುಲಿಮಾಲನಿಗೆ ಹೇಳುವ ಮಾತುಗಳು. ಬುದ್ಧ ಗೊತ್ತಿದ್ದಾನೆ ಎಂದ ಮೇಲೆ ಅಂಗುಲಿಮಾಲನೂ ಗೊತ್ತಿರಲಿಕ್ಕೇ ಬೇಕು. ಬುದ್ಧನ ಮಹಾತ್ಮೆಯನ್ನು ಹೇಳುವುದಕ್ಕೆ ಅಂಗುಲಿಮಾಲ ಬೇಕೇಬೇಕು. ಅಂಗುಲಿಮಾಲ ಬುದ್ಧನ ಹಾಗೆ ಐತಿಹಾಸಿಕ ವ್ಯಕ್ತಿಯೋ ಅಥವಾ ಕಾಲ್ಪನಿಕ ವ್ಯಕ್ತಿಯೋ ಗೊತ್ತಿಲ್ಲ. ಆದರೆ ಅಂಗುಲಿಮಾಲನ ಮೂಲಕ ಬುದ್ಧನ ಕಾರುಣ್ಯ ಹಾಗೂ ಪ್ರೀತಿಯನ್ನು ಖಚಿತಗೊಳಿಸುವ ಪ್ರಯತ್ನದ ಸಾಹಿತ್ಯ ಕೃತಿಗಳು ಭಾರತೀಯ ಭಾಷೆಗಳಲ್ಲಿ ಮೂಡಿಬರುತ್ತಲೇ ಇವೆ. ಈ ಅಂಗುಲಿಮಾಲನನ್ನೇ ಪ್ರಮುಖ ಪಾತ್ರವನ್ನಾಗಿಸಿಕೊಂಡು ಹಿರಿಯ ಸಾಹಿತಿ, ಜಾನಪದ ತಜ್ಞ ದಿವಂಗತ ಮುದೇನೂರು ಸಂಗಣ್ಣ ಬರೆದಿರುವ ನಾಟಕ ‘ಕರುಣೆಯ ಕಂದ’. ಭಯೋತ್ಪಾದಕ ನರಹಂತಕ ಅಂಗುಲಿಮಾಲ ಬೌದ್ಧಭಿಕ್ಷುವಾದ ನಾಟಕ ಇದು ಎಂದು ಅವರು ಹೇಳಿದ್ದಾರೆ. ಅವರ ನಿಧನದ ಏಳು ವರ್ಷಗಳ ಬಳಿಕ ಈ ಕೃತಿ ಪ್ರಕಟಗೊಂಡಿದೆ. ಆರಂಭದಲ್ಲಿ ಹೇಳಿದ ಮಾತು ಇದೇ ನಾಟಕದ್ದು. ಈ ನಾಟಕವನ್ನು ಅವರು ಸುಮಾರು ಐವತ್ತು ವರ್ಷಗಳ ಹಿಂದೆಯೇ ‘ಅಂಗುಲಿಮಾಲ’ ಎಂಬ ಹೆಸರಿನಲ್ಲಿ ರಚಿಸಿದ್ದರು. ಅದನ್ನು ಅವರು ಹಲವು ಬಾರಿ ಪರಿಷ್ಕರಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ಬೌದ್ಧ ಸಾಹಿತ್ಯವನ್ನು, ಬೌದ್ಧ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ. ಇದರಿಂದ ಮೂಲ ನಾಟಕವು ವಿಶೇಷ ರೀತಿಯ ಹೊಳಪನ್ನು ಪಡೆದುಕೊಂಡಿದೆ. ಸಮಾಜದಲ್ಲಿ ಮನುಷ್ಯ ಒಳ್ಳೆಯವನಾಗುವುದು ಮತ್ತು ಕೆಟ್ಟವನಾಗುವುದು ಪರಿಸರ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ತನ್ನ ಪೂರ್ವಾಶ್ರಮದಲ್ಲಿ ‘ಅಹಿಂಸಕ’ ಎಂಬ ಹೆಸರನ್ನು ಹೊಂದಿದ್ದ ಅಂಗುಲಿಮಾಲ ಪರಿಸ್ಥಿತಿಯ ಫಿತೂರಿಯಿಂದಾಗಿ ನರಹಂತಕನಾಗುತ್ತಾನೆ. ಸ್ವತಃ ತಂದೆಯೇ ಆತನ ವಿರುದ್ಧವಾಗುತ್ತಾನೆ. ತಾಯಿ ಮಾತ್ರ ಆತನ ಪರವಾಗಿ ವಾದಿಸುತ್ತಾಳೆ. ಅಂಗುಲಿಮಾಲನ ಪೂರ್ವಾಶ್ರಮದ ಕತೆ ಬಹುತೇಕ ಅಪರಿಚಿತವಾಗಿಯೇ ಇದೆ. ಅವನು ಇತಿಹಾಸ ಪುರುಷನೋ ಕಾಲ್ಪನಿಕ ವ್ಯಕ್ತಿಯೋ ಗೊತ್ತಿಲ್ಲ. ಆದರೆ ಮುದೇನೂರು ಸಂಗಣ್ಣನವರು ಒಂದು ನಂಬಲರ್ಹವಾದ ಕಾರ್ಯಕಾರಣ ಸುಸಂಬದ್ಧವಾದ ಕತೆಯನ್ನು ಇಲ್ಲಿ ಜೋಡಿಸಿಕೊಟ್ಟಿದ್ದಾರೆ. ಮಹಾಕಾರುಣ್ಯದ ಎದುರು ತೀವ್ರತಮವಾದ ಕ್ರೌರ್ಯ ಕೂಡ ಮಂಡಿಯೂರುತ್ತದೆ ಎಂಬುದನ್ನು ಈ ನಾಟಕ ಸಾರಿ ಹೇಳುತ್ತದೆ. ಇದರಲ್ಲಿ ಹದಿನೇಳು ದೃಶ್ಯಗಳಿವೆ. ಮೊದಲ ಹತ್ತು ದೃಶ್ಯಗಳನ್ನು ಅಂಗುಲಿಮಾಲನ ಪೂರ್ವಾಶ್ರಮದ ಕತೆಗೆ ಸಂಬಂಧಿಸಿದ್ದು ಪೂರ್ವಾರ್ಧವಾಗಿದೆ. ನಂತರದ ಏಳು ದೃಶ್ಯಗಳಲ್ಲಿ ಬುದ್ಧನೊಂದಿಗೆ ಮುಖಾಮುಖಿ ಹಾಗೂ ಪರಿವರ್ತನೆಯ ಪರ್ವವಿದೆ. ಇದು ಉತ್ತರಾರ್ಧ. ಅಹಿಂಸಕ ಹಿಂಸಾಮೂರ್ತಿಯಾಗುವ ಪೂರ್ವಾರ್ಧದಲ್ಲಿ ಹಲವು ನಾಟಕೀಯ ಘಟನೆಗಳಿವೆ. ಇವೆಲ್ಲ ಮನುಷ್ಯ ಸ್ವಭಾವವನ್ನು ಬಿಚ್ಚಿ ಹೇಳುತ್ತವೆ. ಅಹಿಂಸಕ ಹೇಗೆ ಪರಿಸ್ಥಿತಿಯ ಕೈಗೊಂಬೆಯಾಗುತ್ತಾನೆ ಎಂಬುದನ್ನು ಇದು ಹೇಳುತ್ತದೆ. ದಾರಿ ತೋರಬೇಕಾದ ಗುರುವೇ ಹೇಗೆ ದಾರಿ ತಪ್ಪಿಸುತ್ತಾನೆ, ಸ್ನೇಹಿತರೇ ಹೇಗೆ ಮತ್ಸರದ ಮೊಟ್ಟೆಗಳಾಗುತ್ತಾರೆ, ನ್ಯಾಯಹೇಳಬೇಕಾದ ದೊರೆಯೇ ಹೇಗೆ ಅನ್ಯಾಯದ ಮಾರ್ಗ ತೋರಿಸುತ್ತಾನೆ ಎಂಬುದನ್ನೆಲ್ಲ ಇಲ್ಲಿ ಹೇಳುತ್ತಾರೆ. ಎಲ್ಲ ಸಂದರ್ಭದಲ್ಲಿಯೂ ಮಗನ ಪರ ನಿಲ್ಲುವವಳು ತಾಯಿ ಮಾತ್ರ. ಅಂದಿನ ಸಮಾಜ ವ್ಯವಸ್ಥೆಯಲ್ಲಿ ಇದೆಲ್ಲ ಸರಿಯೇ. ಆದರೆ ಸಮಕಾಲೀನ ಬದುಕಿನ ಸವಾಲುಗಳನ್ನು ಈ ಕೃತಿ ಒಳಗೊಂಡಿದೆಯೇ? ಗುರುವಿನ ಆದೇಶ, ರಾಜನ ಆದೇಶ ತಪ್ಪೆಂದು ಗೊತ್ತಿದ್ದರೂ ಅದನ್ನು ಮೀರದ ಅತಿಶಯ ನಿಷ್ಠೆ, ಪತಿಯನ್ನು ವಿರೋಧಿಸದ ಪತ್ನಿ ನಿಷ್ಠೆ. ನೈತಿಕ ಚೌಕಟ್ಟಿನ ಹೊಸ್ತಿಲು ದಾಟಲು ಯಾವ ಪಾತ್ರಗಳೂ ಪ್ರಯತ್ನಿಸುವುದಿಲ್ಲ. ಅಂಗುಲಿಮಾಲನ ಕ್ರೌರ್ಯ ಕೂಡ ಈ ಚೌಕಟ್ಟಿನ ಒಳಗೆಯೇ ನಡೆಯುವುದು. ಸಂಗಣ್ಣನವರಿಗೆ ಇಂಥ ಸಂಗತಿಗಳನ್ನು ಹೊಸ ಹೊಳಹಿನೊಂದಿಗೆ ನೋಡುವ ಅವಕಾಶವಿತ್ತು. ಅದನ್ನು ಅವರು ಒಂದು ಮಿತಿಯಲ್ಲಿ ಮಾಡಿದ್ದಾರೆ. ಅದು ಉದಾತ್ತವಾದ ಮಾನವೀಯ ನೆಲೆಯ ಮಾತು. ಬುದ್ಧ ಅಂಗುಲಿಮಾಲನಿಗೆ ಹೇಳುವ ಇನ್ನೊಂದು ಮಾತಿನಲ್ಲಿ ಅದನ್ನು ಗುರುತಿಸಬಹುದು. ‘‘ಅಂಗುಲಿಮಾಲ, ನೀನು ಬದುಕಬೇಕೆಂದಿದ್ದರೆ ಇತರ ಜೀವಾತ್ಮರನ್ನೂ ಬದುಕಕೊಡಬೇಕಾಗುತ್ತದೆ. ಅವರ ಸುಖದುಃಖಗಳೊಂದಿಗೆ ಸಮರಸಗೊಳ್ಳಬೇಕಾಗುತ್ತದೆ.’’ ಹೌದು, ಇಂದು ಜಗತ್ತು ಅಸಂತುಷ್ಟಿ.ಇಂದ ಹಿಂಸೆಯನ್ನು ಅಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ ಬುದ್ಧನ ಈ ಉಪದೇಶ ಜಗದ್ವ್ಯಾಪಕತೆಯನ್ನು ಪಡೆದುಕೊಂಡಿದೆ. ಕೇವಲ ಮನುಷ್ಯರಷ್ಟೇ ಅಲ್ಲ, ಸಕಲ ಜೀವರಾಶಿಯ ಬದುಕಿನ ಕುರಿತ ಕರುಣಾಮಯ ಮಾತು ಇದು. ಅಹಿಂಸಕನ ತಾಯಿ ಮಂತನಿಯ ಪಾತ್ರದ ಮೂಲಕ ಸ್ತ್ರೀತನಕ್ಕೆ ಒಂದು ಘನತೆಯನ್ನು ತಂದುಕೊಡಲು ಸಂಗಣ್ಣ ಪ್ರಯತ್ನಿಸಿದ್ದಾರೆ. ಆದರೆ ಇವರೆಲ್ಲ ತಮ್ಮ ತಮ್ಮ ಆ ಅನಾದಿಯ ಮರ್ಯಾದೆಯಲ್ಲಿಯೇ ವರ್ತಿಸುವವರು. ನಾಟಕಗಳೆಲ್ಲ ಸಾರ್ಥಕತೆ ಪಡೆಯುವುದು ಅವುಗಳ ಪ್ರಯೋಗದಲ್ಲಿ. ಪ್ರತಿಭಾವಂತ ನಿರ್ದೇಶಕ ಎಂಥ ನಾಟಕವನ್ನೇ ಆದರೂ ರಂಗದ ಮೇಲೆ ಪುನರ್‌ಸೃಷ್ಟಿಗೊಳಿಸಬಲ್ಲ. ಸಂಗಣ್ಣನವರ ಈ ನಾಟಕವೂ ಅಂಥ ನಿರ್ದೇಶಕನ ಬರುವನ್ನು ಎದುರು ನೋಡುತ್ತಿದೆ. ರಂಗದ ಮೇಲೆ ಬಂದಾಗಲೇ ಅದು ಇನ್ನಷ್ಟು ಜನಮುಖಿಯಾಗಿ ಬುದ್ಧನನ್ನು ಇಂದಿಗೂ ಪ್ರಸ್ತುತಗೊಳಿಸಬಲ್ಲುದು. ಪ್ರ: ಲೋಹಿಯಾ ಪ್ರಕಾಶನ, ಬಳ್ಳಾರಿ, ಪುಟಗಳು ೧೨೮ ಬೆಲೆ ₹ ೬೦