ಕಾದಂಬರಿ

ಬಲೆ ನಾನು ಬರೆದ ಮೊದಲ ಕಾದಂಬರಿ. ಎಂ.ಎ. ಅಂತಿಮ ವರ್ಷದಲ್ಲಿ ಸೃಜನ ಸಾಹಿತ್ಯದ ಪತ್ರಿಕೆಗೆ ಡೆಸರ್ಟೇಷನ್‌ಗಾಗಿ ಬರೆದ ಕಾದಂಬರಿ ಇದು. ನಮ್ಮ ಗುರುಗಳಾಗಿದ್ದ ಡಾ.ಬುದ್ದಣ್ಣಹಿಂಗಮಿರೆಯವರ ಪ್ರೋತ್ಸಾಹ ಇದಕ್ಕೆ ಕಾರಣ. ನಮ್ಮ ಗುರುಗಳೂ ಮತ್ತು ವಿಭಾಗದ ಮುಖ್ಯಸ್ಥರೂ ಆಗಿದ್ದ ಡಾ.ಎಂ.ಎಂ. ಕಲಬುರ್ಗಿಯವರೂ ಇದನ್ನು ಮೆಚ್ಚಿಕೊಂಡಿದ್ದರು.. ಇದು 1984ರಲ್ಲಿ. ನಂತರ ಇದನ್ನು ಹೊನ್ನಾವರ ಕಾಲೇಜಿನಲ್ಲಿ ನನ್ನ ಗುರುಗಳಾಗಿದ್ದ ಜಿ.ಎಸ್. ಅವಧಾನಿಯವರ ಸಹಾಯದಿಂದ, ಹಿರಿಯ ಪತ್ರಕರ್ತ ಜಿ.ಯು.ಭಟ್‌ ಅವರ ಪ್ರೋತ್ಸಾಹದಿಂದ ಕರಾವಳಿ ಗ್ರಾಮವಿಕಾಸ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ನಂತರ ಇದನ್ನು ಬೆಳಗಾವಿಯಲ್ಲಿ ಹಿರಿಯ ಪತ್ರಕರ್ತ ಭೀಮಸೇನ ತೋರಗಲ್‌ ಅವರ ಪ್ರೀತಿಯಿಂದಾಗಿ ಅವರ ಅಮೋಘ ವಾಙ್ಮಯದಿಂದ ಪ್ರಕಟವಾಯಿತು. ಪ್ರಕಟಣೆ ವರ್ಷ 1999.


ಭಾಗ 1
ಬೆನ್ನು
1

ಪಾತಿ, ಪೊಂಗಯ, ಕೊಂತ್ಲ, ಕೋಲುದೋಣಿ, ಕಂಡಿ, ದೋಣಿ, ಪಡಾವು, ಹಲಗೆದೋಣಿ, ಪಾಂಡಿ, ಮಚ್ವೆ ಇವೆಲ್ಲ ಏರಿಕೆಯ ಕ್ರಮದಲ್ಲಿ ಹೇಳುವ ಒಳನಾಡ ಜಲಸಂಚಾರದ ವಾಹನಗಳು. ಪಾತಿ ಅಂದರೆ ಅತಿ ಚಿಕ್ಕದು. ಅದರಲ್ಲಿ ಒಬ್ಬನೇ ಕುಳಿತುಕೊಳ್ಳಬಹುದು. ಈ ಪಾತಿಯನ್ನು ಉಪಯೋಗಿಸುವವರು ಗಾಳದವರು. ಇದರ ಮಧ್ಯದಲ್ಲಿ ಕುಳಿತು ಒಂದು ಕೈಯಲ್ಲಿ ಹುಟ್ಟನ್ನು ಇನ್ನೊಂದು ಕೈಯಲ್ಲಿ ಗಾಳವನ್ನು ಹಿಡಿದಿಡುತ್ತಾರೆ. ಇದರಲ್ಲಿ ಕುಳಿತುಕೊಳ್ಳುವುದೇ ಒಂದು ದೊಡ್ಡ ಸರ್ಕಸ್‌ ಮಾಡಿದ ಹಾಗೆ ಆಗುತ್ತದೆ. ಪಾತಿ ತುಂಬ ಹೊಡಕುತ್ತದೆ. ಪಾತಿಗಿಂತ ಸ್ವಲ್ಪ ದೊಡ್ಡದು ಪೊಂಗಯ. ಇದರಲ್ಲಿ ಎರಡು ಜನ ಹೋಗಬಹುದು. ಬಲೆ ಬೀಸಲು ಹೋಗುವವರು ಇದನ್ನು ಉಪಯೋಗಿಸುತ್ತಾರೆ. ಅಂದರೆ, ಬಲೆ ಬೀಸಲು ಎರಡು ಜನರು ಅತಿ ಅವಶ್ಯ ಎಂದೇನೂ ಅಲ್ಲ. ಕಸಬುದಾರಿಗಳು ಒಬ್ಬರೇ ಬಲೆ ಬೀಸುವುದು ದೋಣಿ ನಡೆಸುವುದು ಎರಡನ್ನೂ ಒಟ್ಟಿಗೆ ಮಾಡುತ್ತಾರೆ. ಕೊಂತ್ಲ ಅಂದರೆ ಅದಕ್ಕೂ ಸ್ವಲ್ಪ ದೊಡ್ಡದು. ಇದರ ಬಾಣಿಗೆ ಪೊಂಗಯಕ್ಕಿಂತ ನಾಲ್ಕು ಬೆರಳು ಎತ್ತರ ಇರುತ್ತದೆ. ನಾಲ್ಕೂರು ಜನರು ಅದರ ಮೇಲೆ ಸಲೀಸಾಗಿ ನಿಂತು ಬೇಕಾದರೂ ಹೋಗಬಹುದು. ಚಿಕ್ಕ ತಾರಿ ದಾಟಿಸಲು, ಬೆಪ್ಪಿಗೆ ಹೋಗುವವರು, ಕಂಟ್ಲಿ ಬಿಡುವವರು ಇಂಥದನ್ನು ಉಪಯೋಗಿಸುತ್ತಾರೆ. ಕೋಲು ದೋಣಿ ಉದ್ದದಲ್ಲಿ ಕೊಂತ್ಲದ ಎರಡು ಪಟ್ಟು ಇರುತ್ತದೆ. ಇದಕ್ಕೆ ಸುಂಕಾಣಿ ವ್ಯವಸ್ಥೆ ಇರುತ್ತದೆ. ಇದನ್ನು ಜನರ ಸಾಗಾಟಕ್ಕೆ ಮಾತ್ರ ಬಳಸುತ್ತಾರೆ. ಆದರೆ ಸರಕು ತುಂಬಲು ಅದು ಅಷ್ಟೊಂಜು ಲಾಯಕ್ಕು ಅಲ್ಲ. ಕಂಡಿ ದೋಣಿಯ ಹೊಟ್ಟೆ ಕೋಲು ದೋಣಿಯ ಹೊಟ್ಟೆಗಿಂತ ಅಗಲವಾಗಿರುತ್ತದೆ. ಮತ್ತು ಬಾಣಿಗೆಯೂ ಕೂಡ ಅದಕ್ಕಿಂತ ಅರ್ಧ ಫೂಟು ಎತ್ತರವಾಗಿರುತ್ತದೆ. ಇದನ್ನು ಸಾಮಾನು ತುಂಬಲಿಕ್ಕೂ ಜನರನ್ನು ಸಾಗಿಸಲಿಕ್ಕೂ ಉಪಯೋಗಿಸುತ್ತಾರೆ. ಪಡಾವು, ಹಲಗೆದೋಣಿ, ಪಾಂಡಿ ಇವುಗಳ ರಚನೆಯ ರೀತಿಯೇ ಬೇರೆಯಾದುದು. ಇವುಗಳು ಎಷ್ಟು ದೊಡ್ಡದೆಂದರೆ ಇವುಗಳ ಹೊಟ್ಟೆಯಲ್ಲಿ ಎರಡು ಮೂರು ಲಾರಿಗಳ ಸಾಮಾನು ಬಹಳ ಸುಲಭದಲ್ಲಿ ಹಿಡಿಯುತ್ತದೆ. ನದಿಯ ಆಳ ಇತ್ತೀಚೆಗೆ ಬಹಳ ಕಡಿಮೆ ಆದಮೇಲೆ ಮಚ್ವೆಗಳು ನದಿಯಲ್ಲಿ ಓಡಾಡುವುದಿಲ್ಲ. ಇವು ಸಾಮಾನು ತುಂಬಿಕೊಂಡು ಸಮುದ್ರದಲ್ಲಿ ಪ್ರಯಾಣಿಸುತ್ತವೆ. ಇದಕ್ಕೇನು ಯಂತ್ರದ ಸಹಾಯವಿಲ್ಲ. ಈಗಲೂ ಗಾಳಿಯನ್ನೇ ಅವಲಂಬಿಸಿ ಇದ್ದಂಥದ್ದು.
ನಮ್ಮ ತಿಮ್ಮ ಇವುಗಳಲ್ಲಿ ಒಂದಾದ ಪೊಂಗಯದ ಮೇಲೆ ನಿಂತಿದ್ದ. ಸಮಯ ಸುಮಾರು ಒಂದೂವರೆ ಗಂಟೆ ಮಧ್ಯಾಹ್ನ. ಅಡ್ಡ ಹಿಡಿದ ಮುಂಗೈ ಮೇಲೆ ತೂಗಿ ಬಿದ್ದ ಬಲೆಯ ತುದಿಯಲ್ಲಿ ಪೋಣಿಸಿದ ಸೀಸದ ಮಣಿಗಳ ಮೂಲಕ ನೀರಿಳಿಯುತ್ತಿತ್ತು. ತಿಮ್ಮನ ಎದೆ, ಬೆನ್ನು, ಬಗಲು, ಕೆನ್ನೆಗಳ ಮೇಲೂ ಬೆವರು ಸುರಿಯುತ್ತಿತ್ತು. ಬೆಳಿಗ್ಗೆ ಹೊತ್ತು ಮೂಡಿ ಎರಡು ಮಾರು ಮೇಲೇರುವ ಹೊತ್ತಿಗೆ ಮನೆ ಬಿಟ್ಟವನು ಇಲ್ಲಿಯವರೆಗೆ ಏನಿಲ್ಲವೆಂದರೂ ಸುಮಾರು ಎಪ್ಪತ್ತು ಎಪ್ಪತ್ತೈದು ಸಲವಾದರೂ ಆ ಬಲೆಯನ್ನು ಬೀಸಿರಬೇಕು. ಕೈಗೂ ಸ್ವಲ್ಪ ಸೋಲು ಬಂದ ಹಾಗೆ ಕಾಣುತ್ತದೆ. ಹಾಗಾಗಿ ಆತನ, ಬಲೆಯ ನೆರಿಗೆಯನ್ನು ಸರಿಪಡಿಸುವುದು, ಪೊಂಗಯದಲ್ಲಿ ತುಂಬಿದ ನೀರನ್ನು ಮಡಿಸಿ ದೊನ್ನೆಯಾಕಾರ ಮಾಡಿದ ಹಾಳೆಯಿಂದ ತೆಗೆದು ಹೊಳೆಗೆ ಚೆಲ್ಲುವುದು, ನೀರಿನಲ್ಲಿ ಚಲಿಸುವ ಮೀನನ್ನು ಗ್ರಹಿಸುವುದು ಇತ್ಯಾದಿ ಕ್ರಿಯೆಗಳು ಸೂಕ್ಷ್ಮವಾಗತೊಡಗಿದ್ದವು. ತಿಮ್ಮ ಪೊಂಗಯದ ಎರಡು ಬಾಣಿಗೆಗೂ ಒಂದೊಂದು ಕಾಲನ್ನು ಒತ್ತಿ ನಿಂತು ಸ್ವಲ್ಪ ದೂರದಲ್ಲಿ ತಾನು ತಂದಿದ್ದ ಕಲ್ಲು ಗುಂಡುಗಳಲ್ಲಿ ಎರಡನ್ನು ಎಸೆದನು. ತಿಳಿಯಾಗಿ ಸಮತಳದಲ್ಲಿದ್ದ ಮೀನು ಅಲೆಯಾಗಿ ಅಲೆಯಾಗಿ ವರ್ತುಳ ವರ್ತುಳವಾಗಿ ತಿಮ್ಮನನ್ನೂ ಪೊಂಗಯವನ್ನೂ ದಾಟಿ ಇನ್ನೂ ದೊಡ್ಡದು ದೊಡ್ಡದು ದೊಡ್ಡದು ಆಗುತ್ತ ನಡೆದಿತ್ತು. ಮೀನುಗಳು ಅಲ್ಲಿ ಆಕರ್ಷಿಸಲ್ಪಟ್ಟು ನೆರೆದಿರಬೇಕು ಎಂದು ಭಾವಿಸಿ ತಿಮ್ಮ, ಮುಖವನ್ನು ಒಮ್ಮೆ ಹಿಂದಕ್ಕೆ ಹೊರಳಿಸಿ ಬಲೆಯನ್ನು ತಿರುಗಿಸಿ ಬೀಸಿದ. ತುದಿಯಲ್ಲಿ ಕಟ್ಟಿದ ಸೀಸದ ಮಣಿಗಳ ಭಾರಕ್ಕೆ ಬಲೆ ನೀರಿನಲ್ಲಿ ಆಳಕ್ಕೆ ಇಳಿಯಿತು. ಮಧ್ಯದಲ್ಲಿ ಕಟ್ಟಿದ ಬಳ್ಳಿ ಇವನ ಕೈಯಲ್ಲಿ ಇತ್ತು.
ತಿಮ್ಮ ನಾಲ್ಕು ಮಾರು ಇನ್ನೊಂದು ದಿಕ್ಕಿಗೆ ಚಲಿಸಿ ಜಲ್ಲವನ್ನು ಕೆಸರಿನಲ್ಲಿ ಹುಗಿದು ಕಾಲಿನಿಂದ ಅದಕ್ಕೂ ಪೊಂಗಯಕ್ಕೂ ಸಂಬಂಧ ಕಲ್ಪಿಸಿ ಚಲಿಸದಂತೆ ಮಾಡಿ ತನ್ನ ಕೈಯಲ್ಲಿರುವ ದಾರದ ಸಹಾಯದಿಂದ ಬಲೆಯನ್ನು ಜಗ್ಗತೊಡಗಿದ. ತೊಡಗುವಾಗ ಇದ್ದ ಆಸೆ, ನಿರೀಕ್ಷೆಗಳು ನಂತರ ಉಳಿಯಲಿಲ್ಲ. ಮೇಲೆ ಬಂದ ಬಲೆಯನ್ನು ಒಮ್ಮೆ ಅಲುಬಿ ಕೆಸರು ತೊಳೆದನು. ಇಡಿ ಬಲೆಗೂ ಸಿಕ್ಕಿದ್ದು ಒಂದೇ ಒಂದು ಚೋಟುದ್ದದ ಮಡ್ಳೆ. ಈ ಮಡ್ಳೆ ಜಬ್ಬು ಬರೀ ಮಣ್ಣನ್ನು ಮಾತ್ರ ತಿಂದು ಬೆಳೆಯುತ್ತದೆಯಂತೆ. ಸಾರು ಮಾಡಿದ್ದಾಗಿನಕ್ಕಿಂತ ಇದನ್ನು ಎಣ್ಣೆ ಹಚ್ಚಿ ಹುರಿದಾಗ ತಿನ್ನಲು ತುಂಬಾ ರುಚಿ.
ಬೆಳಿಗ್ಗೆಯಿಂದಇಲ್ಲಿಯ ವರೆಗೆ ಅವನು ಎಂಟು ಕೊವೆಗಳನ್ನು ಮಾರಿದ್ದನು. ಕೊವೆ ಅಂದರೆ ತೆಂಗಿನ ಗರಿಯ ಹಸಿ ಕಡ್ಡಿಯಿಂದ ಪೋಣಿಸಿದ ಮೀನಿನ ಸರ. ಹತ್ತಾರು ಮೀನುಗಳನ್ನು ಸುರಿದು ದರ ಹೇಳುವ ಅನುಕೂಲಕ್ಕಾಗಿ ಆ ರೀತಿ ಮಾಡಿರುತ್ತಾರೆ. ಕೆಲವರು ಇದಕ್ಕೆ ಕೊಗೆ ಎಂದೊ ಕಡ್ಡಿ ಎಂದೊ ಕರೆಯುತ್ತಾರೆ. ಹೇಗೆ ಕೇಳಿದರೂ ಅದನ್ನು ಮಾರುವವರಿಗೆ ಬೇಗನೆ ಅರ್ಥವಾಗಿ ಬಿಡುತ್ತದೆ.
ಈ ರೀತಿ ಕೊವೆ ಮಾಡುವುದರಲ್ಲೂ ಹಿಕಮತ್ತು ಇದೆ. ಕಡ್ಡಿಯನ್ನು ತಲೆಯ ಚಿಪ್ಪಿನಲ್ಲಿ ತೂರಿಸಿ ಸುರಿಯುವುದು ಒಂದು ರೀತಿ. ಒಂದೇ ಕಡ್ಡಿಯಲ್ಲಿ ಬಹಳ ಮೀನು ಸುರಿಯಬಹುದು. ಈ ಕೊವೆ ಕಾಣುವವರ ನದರಿಗೆ ಸಣ್ಣ ಕಾಣುತ್ತದೆ. ಇನ್ನೊಂದು ರೀತಿಯ ಕೊವೆ ಮಾಡಲೂ ಬರುತ್ತದೆ. ಮೀನಿನ ಅರ್ಧಕ್ಕೆ ಹೊಟ್ಟೆಯ ಭಾಗದಲ್ಲಿ ಕಡ್ಡಿಯನ್ನು ಚುಚ್ಚಿ ಬಾಯಿಂದ ಹೊರ ತೆಗೆದು ಸುರಿಯುವುದು. ಈ ರೀತಿಯಿಂದ ಐದಾರು ಮೀನಿಗೇ ಒಂದು ಕೊವೆ ಆಗಿಬಿಡುತ್ತದೆ.
ತಿಮ್ಮ ಬೆಳಿಗ್ಗೆ ಶಾಂತಯ್ಯ ನಾಯಕರಿಗೆ ಎರಡು ಕೊವೆ ಕೊಟ್ಟು ಬೋಣಿಗೆ ಮಾಡಿದ್ದ. ಯಾರು ನಗದಿ ಕಡುತ್ತಾರೋ, ಯಾರು ಜಾಸ್ತಿ ಚವುಕಸಿ ಮಾಡುವುದಿಲ್ಲವೋ ಅಂಥ ಹತ್ತಾರು ಕಾಯಂ ಗಿರಾಕಿ ತಿಮ್ಮನಿಗಿದ್ದರು. ಶಾಂತಯ್ಯ ನಾಯಕರಿಗೆ ಕೊವೆ ಒಂದಕ್ಕೆ ಒಂದೂವರೆ ಮಾಡಿ ಕೊಟ್ಟಿದ್ದ. ಹಾಗೇ ಸೀದಾ ಗಣಪತಿ ನಾಯಕರ ಚಾದಂಗಡಿಗೆ ಹೋಗಿ ಅವಲಕ್ಕಿ ಕರೆ ಒಂದು ಪ್ಲೇಟು, ಸಂಕರಪೊಳೆ ಒಂದು ಪ್ಲೇಟು ತಿಂದು ಎರಡು ಕಪ್ಪು ಚಾ ಕುಡಿದಿದ್ದ. ಮತ್ತೊಂದು ತಾಸು ತಡೆದು ಸಿಂಜಾವನ ಶೇಂದಿ ಅಂಗಡಿಗೆ ಹೋಗಿ ಅರ್ಧ ಬಾಟ್ಲಿ ಶೇಂದಿ ಕುಡಿದು ಎರಡು ಕೊವೆ ಅವನಿಗೆ ಕೊಟ್ಟಿದ್ದ. ಆಗ ಒಂದು ಗಳಿಗೆ ಮೊದಲು ತಿಮ್ಮಪ್ಪ ಗೌಡರಿಗೆ ನಾಲ್ಕು ಕೊವೆ ಕೊಟ್ಟಿದ್ದ. ಜಬ್ಬು ಚೆನ್ನಾಗೇ ಇತ್ತು ಮತ್ತು ಗೌಡರು ಸಿಕ್ಕಾಪಟ್ಟೆ ಚವುಕಸಿ ಮಾಡುವ ಜನರೂ ಅಲ್ಲ. ಇವನು ನಾಲ್ಕು ಕೊವೆಗೆ ಹತ್ತು ರೂಪಾಯಿ ಕೊಡಬೇಕು ಅಂದ. ಅವರು ಎಂಟು ಕೊಡುತ್ತೇನೆ ಅಂದರು. ಅವರಿಗೆ ನಾಲ್ಕು ಕೊವೆನೂ ನೆಗೆದು ಕೊಟ್ಟಿದ್ದ. ಅವರು ಕೊಟ್ಟ ಎಂಟು ರೂಪಾಯಿ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ.
ಸಿಕ್ಕಿದ ಆ ಮಡ್ಳೆಯನ್ನು ತೆಗೆದು ಪೊಂಗಯದ ತುದಿಯಲ್ಲಿ ಇಟ್ಟ ಗೊರಿಯಲ್ಲಿ ಎಸೆದ. ಈ ಮಡ್ಳೆ ಯಾವಾಗಲೂ ಬೀಸು ಬಲೆಗೆ ಸಿಕ್ಕುವುದಿಲ್ಲ. ಬೆಪ್ಪಿನವರಾಗಲಿ, ಕಂಟ್ಲಿ ಬಿಟ್ಟವರಾಗಲಿ ಹಿಡಿಯುತ್ತಾರೆ. ಬೆಳಿಗ್ಗೆಯಿಂದ ಅಷ್ಟೊಂದು ಸಲ ಬೀಸಿದರೂ ಅವನು ಹಿಡಿದ ಮೊದಲನೆಯ ಮಡ್ಳೆಯೇ ಅದಾಗಿತ್ತು. ಇಡೀ ಬಲೆಗೆ ಅದೊಂದೇ ಸಿಕ್ಕಿದರೂ ಒಂದು ರೀತಿಯಿಂದ ಅವನಿಗೆ ಸಂತೋಷವೂ ಆಗಿತ್ತು.
ಇನ್ನು ಮೇಲೆ ಸಿಗುವ ಮೀನನ್ನು ಮಾರುವ ಯೋಚನೆ ಬಿಟ್ಟ. ಮನೆಗೆ ಹೋಗಿ ಊಟ ಮಾಡುವ ಮನಸ್ಸು ಆಯಿತು. ಮತ್ತೂ ನಾಲ್ಕಾರು ಸಲ ಬಲೆ ಬೀಸಿದೆ. ಐದಾರು ಕರ್ಸಿ, ಎಂಟ್ಹತ್ತು ಬೆಳ್ಳೆಂಟೆ ಜಬ್ಬು ಸಿಕ್ಕಿದವು. ಒಂದಿಪ್ಪತ್ತೈದು ಚಟ್ಲಿ ಇತ್ತು. ಎಲ್ಲ ಸೇರಿಸಿ ಕಮ್ಮಗೆ ಒಂದು ಹುಳಿ ಮಾಡಬಹುದೆಂದು ಲೆಕ್ಕ ಹಾಕಿದ. ಬಲೆಯನ್ನು ಎರಡು ಸಲ ಝಾಡಿಸಿ ನೀರು ಕಳೆದು ಗೊರಿಯ ಒಳಗೆ ಮುದ್ದೆ ಮಾಡಿ ಇಟ್ಟ. ಜಬ್ಬನ್ನೆಲ್ಲ ಒತ್ತಟ್ಟಿಗೆ ಸೇರಿಸಿ ಗುಪ್ಪೆ ಮಾಡಿ ಹಾಳೆ ಕವುಂಚಿ ಇಟ್ಟು ವಿಷ್ಣು ಶಾನಭಾಗರ ಅಂಗಡಿಯ ಕಡೆಗೆ ದೋಣಿ ನಡೆಸಿದ. ಬೆಳಗಾಮುಂಚೆ ಮಗಳು ಗೌರಿ ತರಲು ಹೇಳಿದ ಸಾಮಾನಿನ ಪಟ್ಟಿ ನೆನಪಾಯಿತು. ಒಂದು ಸಲ ಸೊಂಟವನ್ನು ಮುಟ್ಟಿ ನೋಡಿ ನೋಟು ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಂಡ.
ಓ ತಿಮ್ಮSS, ಎಂಥಾದ್ದು ಅದೆಯೇನೋ?’ ಎಂದು ಯಾರೋ ಒದರಿದರು. ತಿಮ್ಮ ಉತ್ತರಿಸುವ ಗೋಜಿಗೆ ಹೋಗದೆ ಕೇಳಿಸದವನಂತೆ ಮಾಡಿಕೊಂಡು ದೋಣಿ ನಡೆಸಿಯೇ ಬಿಟ್ಟ.
ಈ ಅಂಬೀರ ಮಕ್ಳಿಗೆ ಎಂಥಾ ಸೊಕ್ಕು ನೋಡು' ಎಂದು ಬೈದದ್ದೂ ಕೇಳಿಸಿತು ಇವನಿಗೆ. ಅಂಥ ಮಾತು ಕೇಳಿಸಿಕೊಂಡು ಕೇಳಿಸಿಕೊಂಡೇ ಇವನ ಗಡ್ಡ ನೆರೆತದ್ದು. ಬಾಯಿದ್ದವರು ಬೇಕಾದ್ದು ಬೊಗಳುತ್ತಾರೆ ಅಂದುಕೊಂಡು ಎಲ್ಲವನ್ನೂ ಸ್ವೀಕರಿಸುತ್ತಲೇ ಬಂದಿದ್ದ. ಅಂಥದ್ದನ್ನು ಖಂಡಿಸುವ ಅವಕಾಶ ಒದಗಿ ಬಂದರೆ ಮಾತ್ರ ಎಂದೂ ಬಿಟ್ಟುಕೊಡುತ್ತಿರಲಿಲ್ಲ! ತಿಮ್ಮ, ವಿಷ್ಣು ಶಾನಭಾಗರ ಅಂಗಡಿ ಹೊಳೆ ಬಾಗಿಲಲ್ಲಿ ಪೊಂಗಯ ನಿಲ್ಲಿಸಿ ಫಾಜಿ ಮೆಟ್ಟಲಿನ ಮೇಲೆ ನಂಗಲಕಲ್ಲು ಒಗೆದು ಮೇಲೆ ಹತ್ತಿದ. ಅಲ್ಲೇ ಎಡಕ್ಕೆ ಕುಳಿತ ಕೆಲಸಿ ಸುಬ್ಬ ಯಾರದೋ ಗಡ್ಡಕ್ಕೆ ಸಾಬೂನು ಬಳಿಯುತ್ತಿದ್ದವನು ಬಾಯಲ್ಲಿ ಇದ್ದ ಕವಳ ಪಕ್ಕಕ್ಕೆ ಪಿಚಕ್ಕನೆ ಉಗುಳಿ, ತಿಂಭಾವ ಏನರೂ ತಂದ್ಯೇನೋ?’ ಎಂದು ಕೇಳಿದ.
ತರೂದು ಎಲ್ಲಿಂದೋ ಸುಬ್ಬಣ್ಣ. ಬೀಸಿ ಬೀಸಿ ರಟ್ಟೆ ಸೋಲಬೇಕೆ ಹೊರತು ಒಂದ ಕೊವೆ ಮಾಡಲಿಕ್ಕೆ ಆಗಲಿಲ್ಲ. ಎದ್ದಂವ ಇವತ್ತು ಯಾರ ಮೊಖ ನೋಡಿ ಬಂದಿದ್ನೋ ಏನೋ, ಒಂದು ಪಳ್ದಿಗೆ ನಾಲ್ಕು ಜಬ್ಬು ಮಾಡಬೇಕಿದ್ದರೆ ಏಳು ರಾಮನ ಕರ್ದೆ' ಅಂದ ತಿಮ್ಮ. ಅಲ್ಲ, ಹೊಳಿಗೆ ದೆವ್ವ ಹೊಕ್ಕಿದ್ಯೊ ಇಲ್ಲ ನಿನ್ನ ಬಲೆಗೆ ದೆವ್ವ ಹೊಕ್ಕದ್ಯೋ? ಈ ವಾರ ನೀನು ಸುರೇಶ ಭಟ್ಟರ ಮನೆಗೆ ಹೋಗಲಿಲ್ಲವಾ?’
ಹೋಗೋದಾದ್ರೂ ಹೆಂಗೋ? ಸುಬ್ಬಣ್ಣ ಮನಿಲಿ ಅದಂತೂ ಹಾಗೆ ಬಿದ್ದಿದೆ. ಇಬ್ಬರು ಕೆಲ್ಸಕ್ಕೆ ಹೋಗ್ತಾರೆ. ನಾ ಇದ್ದಂವ ಒಬ್ಬ ಎಲ್ಲಂತ ತಿರುಗೂದು. ಈ ಸಂಸಾರಾನೆ ಸಾಕಾಗಿ ಹೋಗಿದೆ. ಬೀಸೂಕೆ ಹೋಗದೆ ನಾಲ್ಕು ದಿನ ಆಗಿತ್ತು. ಅದ್ಕೆ ಹೊರಗಿಂದು ಪರಿಮಳ ಇಲ್ದಿದ್ರೆ ಊಟಾನೆ ಸೇರುದಿಲ್ಲ. ಎಲ್ಲ ಹಣೆಬರ' ಎಂದು ಹೇಳುತ್ತಲೇ ಶಾನಭಾಗರ ಅಂಗಡಿಯ ಮೆಟ್ಟಿಲು ಏರಿದ್ದ. ಕನ್ನಡಕ ಮೂಗಿಗೇರಿಸಿ ಏನೋ ಲೆಕ್ಕ ನೋಡುತ್ತಿದ್ದ ಶ್ಯಾನಭಾಗರು, ಎಂಥದೊ ತಿಮ್ಮ ಅದು ಅಂದರು. ಏನೂ ಇಲ್ಲ ಒಡೆಯಾ, ಒಂದು ನಾಲ್ಕು ಸಾಮಾನು ಬೇಕಾಗಿತ್ತು’ ಅಂದ.
ಏನೋ, ಒಂದು ಕಡ್ಡಿನಾದ್ರಾ ಅದೆಯೇನೋ?' ಅಂದರು. ಇದ್ದಿದಾದ್ರೆ ನೀವು ಹೇಳಬೇಕಾಗಿತ್ತ ಒಡೆಯ, ನಾನು ಮೇಲೆ ಬರುವವನೇ ತಕ್ಕೊಂಡು ಬರ್ತಿದ್ದೆ. ಇಲ್ಲ ಅಂತ ಸುಳ್ಳು ಹೇಳೂದಿಲ್ಲ. ನಾಲ್ಕು ಜಬ್ಬು ಅದೆ. ನಮ್ಮ ಕಡೆಯವಳದ್ದು ನಿಮಗೆ ಗೊತ್ತದೆ ಅಲ್ರಾ. ಶಣಿಯಾರ, ಸೋಮಾರ ಎಲ್ಲ ಬಿಟ್ಟದೆ ಅದು.’
ತಿಮ್ಮನ ಮಾತಿಗೆ ಶ್ಯಾನಭಾಗರು ಏನೂ ಉತ್ತರಿಸದೆ ಅವನು ಹೇಳಿದ ಸಾಮಾನು ಒಂದೊಂದಾಗಿ ಕಟ್ಟತೊಡಗಿದರು. ತಿಮ್ಮ, ಬೆವರಿನಿಂದ ತೊಯ್ದ ತಲೆಗೆ ಸುತ್ತಿದ ಪಂಚೆಯನ್ನೇ ನೆಲದ ಮೇಲೆ ಹಾಸಿ ಅಕ್ಕಿ ಮೆಣ್ಸು, ಕುತ್ತುಂಬರಿ, ಅರಸಿಣ, ಚಾಪುಡಿ, ರಾಗಿ ಎಲ್ಲ ಕಟ್ಟಿಕೊಂಡು ಎಂಟು ರೂಪಾಯಿಗಳನ್ನು ಟೇಬಲ್ಲಿನ ಮೇಲೆ ಇಟ್ಟ. ಲೆಕ್ಕ ಮಾಡಿ ಶ್ಯಾನಭಾಗರು ನಲವತ್ತು ಪೈಸೆ ಹಿಂದಕ್ಕೆ ಕೊಟ್ಟರು.
ತಿಮ್ಮ ಅಲ್ಲೇ ಬುಡದಲ್ಲೇ ಇದ್ದ ಗಣಪತಿ ನಾಯ್ಕನ ಚಾದಂಗಡಿಗೆ ಹೋಗಿ ನಂಬರು ಎಷ್ಟು ಬಂದಿದೆ ಎಂದು ಕೇಳಿ ನಿನ್ನೆ ಕಟ್ಟಿದ ಎರಡು ರೂಪಾಯಿ ಹೋಗಿದ್ದಕ್ಕೆ ವ್ಯಥೆಪಟ್ಟ. ರಾತ್ರೆ ಬಿದ್ದ ಯಾವುದೋ ಕನಸನ್ನು ನೆನಪುಮಾಡಿಕೊಂಡು ಏನೇನೋ ಲೆಕ್ಕಾಚಾರ ಮಾಡಿ ನಲವತ್ತು ಪೈಸೆಯೊಳಗೆ ನಾಲ್ಕಾಣೆಯನ್ನು ಎಂಬತ್ನಾಲ್ಕನೆಯ ನಂಬರಿಗೆ ಕಟ್ಟಿ ಹೊರಟಿದ್ದ.`ಸುಬ್ಬಣ್ಣಾ ಬತ್ನೋ’ ಎಂದ ತಿಮ್ಮ ಫಾಜಿ ಮೆಟ್ಲು ಇಳಿದು ಪೊಂಗಯವನ್ನು ಮನೆ ಕಡೆ ತಿರುಗಿಸಿದ.

2

ಈ ಮನೆ ತಿಮ್ಮನದೇ ಎಂದು ಗುರುತು ಹಿಡಿಯುವಂಥ ವಿಶೇಷ ವೈಶಿಷ್ಟ್ಯಗಳನ್ನೇನೂ ಅವನ ಮನೆ ಹೊಂದಿರಲಿಲ್ಲ. ಅದೇ ರೀತಿಯ ಇನ್ನೆಷ್ಟೋ ಮನೆಗಳು ಆ ಕೇರಿಯಲ್ಲಿದ್ದವು. ಎರಡಂಕಣದ ಜಾಗೆಯಲ್ಲಿ ಒಂದೇ ಮೊಳ ಎತ್ತರದ ಗುಂದದ ಮೇಲೆ ಕಟ್ಟಿದಬಿಡಾರ’ ಅದು. ಮನೆ' ಎಂಬ ಶಬ್ದ ಅದಕ್ಕೆ ಅಷ್ಟು ಲಾಯಕ್ಕು ಅಲ್ಲವೇನೋ? ನಾಲ್ಕು ಜಂಬೆ ಕಂಬದ ಮೇಲೆ ನಾಲ್ಕು ಮಾಡು ಮಾಡಿ ಅದಕ್ಕೆ ಅಡಕೆ ಮರದ ಸೋಗೆ ಹೊದಿಸಿದ್ದ. ಬೆಟ್ಟದಲ್ಲಿ ಸಿಗುವ ವಾಂಟೆ ಗಳವನ್ನು ತಂದು ನೇಯ್ದು ಅದಕ್ಕೆ ದಪ್ಪಗೆ ಮಣ್ಣು ಮೆತ್ತಿ ಸಗಣಿಯಿಂದ ಸಾರಿಸಿ ಗೋಡೆ ಮಾಡಿದ್ದ. ಬಾಗಿಲ ಹೊರಗೆ ಒಂದು ಸಣ್ಣ ಹಕ್ಕೆ ಜಗುಲಿ ಒಂದಿತ್ತು. ಮುಂದಿನ ಮಾಡನ್ನು ಬಾಗಿಲಿನಿಂದೀಚೆಗೆ ಎರಡು ಮಾರು ಬೆಳೆಸಿದ್ದ. ಹಾಗಾಗಿ ಸುಮಾರು ನಾಲ್ಕೂವರೆ ಫೂಟು ಎತ್ತರವಿದ್ದವರೂ ಬಗ್ಗಿಯೇ ಒಳಗೆ ಹೋಗಬೇಕಿತ್ತು. ಅದೇ ಮಾಡಿನ ಒಂದು ಬದಿಯಲ್ಲಿ ತುಳಸಿಕಟ್ಟೆ ಇತ್ತು. ಅದಕ್ಕೆ ಆನಿಸಿ ಇಟ್ಟ ಪೂಜಿಸುವ ಎರಡು ಮೂರ್ತಿಗಳು, ಒಂದು ಸಣ್ಣ ಗಿಂಡಿ ಇತ್ತು. ಮನೆಯನ್ನು ನೋಡಿದ ತಕ್ಷಣ ಇದು ಅಂಬಿಗರ ಮನೆ ಎಂದು ಯಾರಾದರೂ ತಿಳಿಯುವಂತೆ ಹೊರಗೆ ಬಿಸಿಲಿಗೆ ಹರಗಿದ ಬಲೆ, ಮೂಲೆಯಲ್ಲಿ ಬಿದ್ದ ಗೊರೆ, ಇರುಕುಳಿ, ಬೆಂಡು ಇತ್ಯಾದಿ ಅಲ್ಲಲ್ಲಿ ಇದ್ದವುಹಗಲಲ್ಲೂ ಚಿಮಣಿ ಹಚ್ಚಬೇಕಾದಂಥ ಆ ಬಿಡಾರದ ಒಳಗೆ ತಿಮ್ಮ ಬಗ್ಗಿ ಪ್ರವೇಶಿಸಿದ. ಕತ್ತಲಲ್ಲೇ ಕಣ್ಣಾಡಿಸಿದ. ಮಗಳು ಗೌರಿ ಕಣ್ಣಿಗೆ ಬೀಳಲಿಲ್ಲ. ಮೂಲೆಯಲ್ಲಿ ಕಿರುಜಗುಲಿಯ ಮೇಲೆ ದೇವಿ ಮಲಗಿಕೊಂಡಿದ್ದಳು. ಬಿಸಿಲಿನಿಂದ ಬಂದು ಒಳ ಹೊಕ್ಕಿದ ತಿಮ್ಮನಿಗೆ ಈಗ ಸ್ವಲ್ಪ ಸ್ವಲ್ಪ ಸ್ಪಷ್ಟ ಚಿತ್ರಗಳು ಕಾಣಲಾರಂಭಿಸಿದವು. ಕುತ್ತಿಗೆಯ ವರೆಗೆ ಹರಕು ಸೀರೆ ಹೊದೆದುಕೊಂಡಿದ್ದ ದೇವಿ ಏನನ್ನೋ ಅಸ್ಪಷ್ಟವಾಗಿ ಹೇಳುತ್ತಿದ್ದಳು. ಏನೆಂದು ಇವನಿಗೆ ಅರ್ಥವಾಗಲಿಲ್ಲ. ಓ ಗೌರಿ, ಬಾ ಇಲ್ಲಿ’ ಎಂದು ಜೋರಾಗಿ ಒದರಿದ. ಅಡುಗೆ ಮನೆಯ ತಟ್ಟಿ ಮರೆಯಲ್ಲಿ ಇದ್ದ ಗೌರಿ ಎದುರು ಬಂದಳು.
ಇಕಾ, ಈ ಮೀನು ಒಳಗಿಡು. ನಿನ್ನ ಅವ್ವ ಊಟ ಮಾಡಿದ್ಳೋ ಇಲ್ಲ ಹಾಗೇ ಹಮ್ಮಕಂಡದೋ?' ಗೌರಿ ಅವನ ಕೈಯಿಂದ ಮೀನನ್ನು ತೆಗೆದುಕೊಂಡವಳು,ಎರಡು ಮೂರು ಸಲ ಕೇಳ್ದೆ. ಈಗ ಉಂಬೂದಿಲ್ಲ ಅಂದ್ಲು’ ಎಂದಳು.
ಅದ ಒಳಗೆ ಇಟ್ಟವಳು ನನಗೆ ಬಡ್ಸು. ರಾಮ ಕೂಸ ಬರಲಿಲ್ಲವೇನೆ?' ಇನ್ನೂ ತನಾ ಬರ್ಲಿಲ್ಲ. ಅವರ ದೋಣಿ ಗೇರಸಪ್ಪಿಗೆ ಹಂಚು ತುಂಬಿಕೊಂಡು ಹೋಗದೆ ಅಂದಿ ತುದಿಮನೆ ನಾಗಪ್ಪಣ್ಣ ಹೇಳ್ದ. ಇನ್ನ ಅವ್ರು ಇಳಿತದ ಮೇಲೆ ಬರಬೇಕು. ಹ್ಯಾಂಗ್ ಅಂದ್ರೂ ಇನ್ ಎರಡು ತಾಸು ಹೋಗುತ್ತದೆ.’
ತಿಮ್ಮನ ಇಬ್ಬರು ಗಂಡುಮಕ್ಕಳು ಮಾವಿನಕುರ್ವಿ ಹೆಂಚಿನ ಕಾರ್ಖಾನೆಗೆ ಮಣ್ಣು ಸಾಗಿಸುವ ಹಲಗೆ ದೋಣಿಗೆ ಕೆಲಸಕ್ಕೆ ಸೇರಿದ್ದರು. ಊಟ, ಆಸ್ರ ಬಿಟ್ಟು ಒಬ್ಬೊಬ್ಬರಿಗೆ ತಿಂಗಳಿಗೆ ನೂರೈವತ್ತು ರೂಪಾಯಿ ಸಿಗುತ್ತಿತ್ತು. ಕಾರ್ಖಾನೆಗೆ ಆದಿತ್ಯವಾರ ರಜೆ ಇರುವ ಕಾರಣ ಶನಿವಾರ ದಿನ ದೋಣಿಗೆ ಮಣ್ಣು ತುಂಬುತ್ತಿರಲಿಲ್ಲ. ಆ ದಿನ ಅವರು ಮನೆಗೆ ಬರುತ್ತಿದ್ದರು. ಇವರ ದೋಣಿ ಮಾಲೀಕ ಫರಾಸ್ಕ ಸ್ವಲ್ಪ ಅಬಲಾಶೆ ಮನುಷ್ಯ. ಹಾಗಾಗಿ ಶನಿವಾರ ಒಂದು ದಿನವೂ ದೋಣಿಯನ್ನು ಖಾಲಿ ಇಡುತ್ತಿರಲಿಲ್ಲ. ಏನಾದರೂ ಅಡ್ಡ ಬಾಡಿಗೆ ಹಿಡಿಯುತ್ತಿದ್ದ. ಆ ದಿನ ಪಗಾರದ ಹೊರತಾಗಿ ದೋಣಿ ನಡೆಸುವವರಿಗೆ ಹಣ ಕೊಡುತ್ತಿದ್ದ. ಹಾಗೆ ಕೊಡುವ ಹಣದ ಆಸೆಗಾಗಿ ಇವತ್ತು ಅವರು ಗೇರುಸಪ್ಪಾಗೆ ಹೆಂಚಿನ ಬಾಡಿಗೆಗೆ ನಡೆದಿದ್ದರು.
ತಿಮ್ಮ ನಿಧಾನವಾಗಿ ಊಟ ಮುಗಿಸಿ ತನ್ನ ಹೆಂಡಿತಿಗಾಗಿ ಒಂದಿಷ್ಟು ರಾಗಿ ಗಂಜಿ, ಸುಟ್ಟ ಒಣಅಂಬರಿಕೆ ಎರಡು ತಕ್ಕೊಂಡು ಆಕೆಯ ಬಳಿಗೆ ಬಂದು ಗೋಡೆಗೆ ಆನಿಸಿ ಕುಳ್ಳಿರಿಸಿ ಆಕೆಗೆ ತುತ್ತುತುತ್ತಾಗಿ ಬಾಯಿಗೆ ಹಾಕಿದ. ನಡುನಡುವೆ ಕಚ್ಚಿಕೊಳ್ಳಲು ಅಂಬರಿಕೆಯನ್ನು ಬಾಯಿಗೆ ಹಿಡಿದ. ಗಂಜಿ ಖಾಲಿ ಆದಮೇಲೆ ಬಾಯಿ ಮುಕ್ಕಳಿಸಿಬದಿಯಲ್ಲೇ ಇದ್ದ ಹಾಳೆ ಕೊಟ್ಟೆಯಲ್ಲಿ ಉಗಿದಳು. ದೇವಿಯ ಕಣ್ಣಲ್ಲಿ ನೀರು ಮಡುಗಟ್ಟಿತ್ತು. ತನ್ನ ಗಂಡನ ಪ್ರೀತಿಗೆ ಪ್ರತಿಯಾಗಿ ಬಂದ ಕೃತಜ್ಞತೆಯ ಕಣ್ಣೀರೋ ಅಥವಾ ತನ್ನ ಅಸಹಾಯಕತೆಯನ್ನು ನೆನೆದು ಬಂದ ಕಣ್ಣೀರೋ?
ದೇವಿಯ ಒಂದು ಕೈ ಮೊನ್ನೆಮೊನ್ನೆಯ ವರೆಗೂ ಸರಿ ಇತ್ತು. ಏನು ದುರ್ದೈವವೋ ಏನೋ ಒಂದು ದಿನ ರಾತ್ರೆ ಕಿರುಜಗುಲಿಯ ಮೇಲೆ ಹಮ್ಮಿದವಳು ನಿದ್ರೆಗಣ್ಣಿನಲ್ಲಿ ಕೆಳಗೆ ಬಿದ್ದುಬಿಟ್ಟಳು. ದುರ್ಬಲವಾಗಿದ್ದರೂ ಉಣ್ಣುವಷ್ಟು ಸಶಕ್ತವಾಗಿದ್ದ ಇನ್ನೊಂದು ಕೈಯೇ ಅಡಿಯಲ್ಲಿ ಸಿಕ್ಕಿ ಈ ಪರಿ ಆಗಿತ್ತು. ತಿಮ್ಮ ಮೊದಲು ಅದು ಇದು ಅಂತ ನಾಟಿ ಔಷಧ ಮಾಡಿದ. ಯಾರೋ ಹೇಳಿದರು ತೋಡುರು ಗೌಡನ ಔಷಧ ತಂದು ಹಾಕು ಎಂದು. ಇವನು ತಂದುಕೊಡುವವರೆಗೆ ಸಮಯ ಮೀರಿತ್ತು. ಔಷಧ ಫಲಕಾರಿಯಾಗಲಿಲ್ಲ. ಅಂದಿನ ಮೊದಲಾಗಿ ತಿಮ್ಮನೆ ಹೆಂಡತಿಗೆ ಉಣ್ಣಿಸುತ್ತಿದ್ದ.
ಕಷ್ಟವು ಬಂದವರಿಗೇ ಬರುತ್ತದೆ ಎನ್ನುವುದು ಸುಳ್ಳಲ್ಲ. ತಿಮ್ಮ ಅನುಭವಿಸಿದ ಕೋಟಲೆಗಳನ್ನು ಕೇಳಿದರೆ ಅದನ್ನು ಸಹಿಸಿಯೂ ಇವನು ಹೇಗೆ ಜೀವಂತ ಇದ್ದಾನಪ್ಪಾ ಎನ್ನಿಸದೆ ಇರದು.
3
ತಿಮ್ಮನಿಗೆ ಹದಿನಾರು ವರ್ಷ ತುಂಬುವ ಸಮಯಕ್ಕೆ ಅವನ ಅಪ್ಪ ದಾಸಪ್ರಭುರ ಕಂಡಿದೋಣಿ ಬಾಡಿಗೆಗೆ ಹಿಡಿದಿದ್ದ. ತಿಂಗಳಿಗೆ ಎಂಟು ರೂಪಾಯಿ ಬಾಡಿಗೆ ಮಾತಾಗಿತ್ತು. ಇವರ ಮನೆ ಹೊಳೆ ಈಚೆ. ಅವನ ಮನೆ ಹೊಳೆ ಆಚೆ. ಪ್ರಭುರು ಒಂದು ಸಲ ದೊಡ್ಡದಾಗಿ ಕರೆದರೆ ತಿಮ್ಮ ಬಿಡಾರದ ಒಳಗೆ ಕೂತಿದ್ದರೂ, ಅಲ್ಲಿಂದಲೇ ಜವಾಬು ಹೇಳಿದರೂ ಪ್ರಭುರಿಗೆ ಕೇಳಿಸುತ್ತಿತ್ತು. ಪ್ರಭುರು ತಿಮ್ಮನಿಗೆ ದೋಣಿ ಕೊಡಲು ಒಂದು ಕಾರಣವೂ ಇತ್ತು. ದೋಣಿ ಸದಾ ಇವರ ನದರಿನಲ್ಲೇ ಇರುತ್ತಿತ್ತಲ್ಲದೆ ದಿನಕ್ಕೆ ಒಂದು ಸಲ ಮನೆಗೆ ಬಂದು ಹೋಗಲು ತಾಕೀತು ಮಾಡಿದ್ದರು. ಅಲ್ಲದೆ ಇವರು ಯಾವುದೇ ತರಹದ ಬಾಡಿಗೆ ಮಾಡಿದರೂ ಗೊತ್ತಾಗುತ್ತಿತ್ತು. ತಿಮ್ಮನ ಕಡೆಯವರು ಬೇರೆಯವರ ಬಾಡಿಗೆ ಮಾಡಬಾರದೆಂದೇನೂ ಕರಾರು ಇರಲಿಲ್ಲ. ಆದರೆ ಹೆಚ್ಚಿನ ಹಣದ ಆಸೆಗೆ ಕಟ್ಟಿಗೆ ತುಂಬಲಿಕ್ಕೆ, ಕಳ್ಳನಾಟು ತುಂಬಲಿಕ್ಕೆ ಹೋಗಿ ಫೊರೆಸ್ಟರ್‌ ಹತ್ತಿರ ಸಿಕ್ಕಿಬಿದ್ದರೆ ದೋಣಿಯೇ ಜಪ್ತಾಗುತ್ತಿತ್ತು. ಆದಕಾರಣ ದೋಣಿ ಕೊಡಬೇಕಿದ್ದರೆ ಆ ರೀತಿಯ ಬಾಡಿಗೆ ಮಾಡದಿರುವಂತೆ ಜಬರದಸ್ತು ಹೇಳಿದರು.
ಮಳೆಗಾಲ ನಾಲ್ಕು ತಿಂಗಳು ಪ್ರಭುರ ಮನೆಯದೇ ತುಂಬಾ ಕೆಲಸ ಇರುತ್ತಿತ್ತು. ಹೊಳೆಯಲ್ಲಿ ಸಿಗುವ ಹೊಯ್ಗೆಯನ್ನು ದೋಣಿಯ ಮೇಲೆ ಹೇರಿಕೊಂಡು ಹೋಗಿ ಅವರ ತೋಟಕ್ಕೆ ಕೊಡಬೇಕಿತ್ತು. ದೋಣಿ ಒಂದಕ್ಕೆ ಒಂದು ರೂಪಾಯಿ ಸಿಗುತ್ತಿತ್ತು. ಅಪ್ಪ, ಮಗ ಇಬ್ಬರೂ ಕೆಲಸಕ್ಕೆ ಹೋದರೆ ನಾಲ್ಕು ಅಥವಾ ಐದು ದೋಣಿ ತುಂಬುತ್ತಿದ್ದರು. ಆ ಕೆಲಸ ಅವರಿಗೆ ಅನಿವಾರ್ಯವಾಗಿತ್ತು. ತಿಮ್ಮನ ಅವ್ವ ಬಳಚು ತೆರಿಯಲಿಕ್ಕೆ ಹೋಗುತ್ತಿದ್ದಳು. ಒಂದು ಕೊಳಗ ಬಳಚಿಗೆ ಒಂದಾಣಿ ಸಿಗುತ್ತಿತ್ತು. ಆಕೆ ಹೋದಾಗ ಏನಿಲ್ಲೆಂದರೂ ಹತ್ತು ಕೊಳಗದ ಕೆಳಗೆ ಹಿಂತಿರುಗಿ ಬರುತ್ತಿರಲಿಲ್ಲ.
ತಿಮ್ಮ ಬೇಸಿಗೆಯಲ್ಲಿ ಹಾಯಿ ಬಿಡಿಸಿಕೊಂಡು ಹೊನ್ನಾವರಕ್ಕೆ ಹೋಗುತ್ತಿದ್ದ. ನಸುಕಿನಲ್ಲಿ ಹೋಗುವವರು, ಹೊನ್ನಾವರಕ್ಕೆ ವ್ಯಾಪಾರದ ಸಾಮಾನು ಒಯ್ಯುವವರು ಇವರದೆಲ್ಲ ಬಾಡಿಗೆ ಸಿಗುತ್ತಿತ್ತು ಅವನಿಗೆ. ಮಧ್ಯಾಹ್ನ ಗಾಳಿ ತಿರುಗಿದ ಮೇಲೆ ಬರುತ್ತಿದ್ದ. ತಿಮ್ಮನ ಅಪ್ಪನೂ ಒಂದೊಂದು ದಿನ ಮಗನೊಟ್ಟಿಗೆ ಬರುತ್ತಿದ್ದ. ಬಹುತೇಕ ಅವನು ಮನೆಯಲ್ಲೇ ಇರುತ್ತಿದ್ದುದು ಹೆಚ್ಚು. ಮನೆಯಲ್ಲಿ ಬಲೆ ನೇಯುವುದು, ಇರುಕುಳಿ ಮಾಡುವುದು, ಗೊರಿ ಮಾಡುವುದು ಇತ್ಯಾದಿ ಜಾತಿ ಕಸಬು ಮಾಡುತ್ತಿದ್ದ. ಹೊರಗಿನ ವಹಿವಾಟು ಎಲ್ಲ ತಿಮ್ಮನದೆ.
ಪ್ರಾಯದ ಪೋರರಿಗೆ ದೋಸ್ತಿಮಾಡುವಾಗ ಹಿಂದುಮುಂದಿನ ಅಕಲು ಇರುವುದಿಲ್ಲ. ಅವನು ಎಂಥವನು, ತನ್ನನ್ನು ಒಯ್ದು ಎಲ್ಲಿಗೆ ಮುಟ್ಟಿಸುತ್ತಾನೆ ಎನ್ನುವ ವಿಚಾರ ಮಾಡುವುದಿಲ್ಲ. ತಿಮ್ಮ ಮನೆಗೆ ದುಡಿದು ತರುತ್ತಿದ್ದ ಕಾರಣ ಮನೆಯಲ್ಲಿ ಅಪ್ಪನಿದ್ದಿದ್ದರೂ ಇವನು ಸಂಪೂರ್ಣ ಸ್ವತಂತ್ರನೇ ಆಗಿದ್ದ. ಮೇಲಾಗಿ ಪ್ರಾಯ ಒಂದಿತ್ತು. ಅದರ ಪ್ರಭಾವವೋ ಏನೋ, ಜಗತ್ತೆಲ್ಲ ಸುಂದರ, ಎಲ್ಲರೂ ಒಳ್ಳೆಯವರಾಗಿ ಕಾಣುತ್ತಿದ್ದರು. ಇವನು ಕುಡಿತವನ್ನು ಒಂದು ಚಟವಾಗಿ ಬೆಳೆಸಿಕೊಂಡಿದ್ದು ಅಂಥ ಒಳ್ಳೆಯ ಸ್ನೇಹಿತರ ಸಹವಾಸದಿಂದಲೇ. ಕದ್ದಿ ಮುಚ್ಚಿ ಜುಗಾರು ಆಡಲಿಕ್ಕೂ ಸುರು ಮಾಡಿದ್ದ. ಕೋಳಿಪಡೆಗೆ ಮೊದಲು ನೋಡಲಿಕ್ಕೆ ಅಂತ ಹೋಗುತ್ತಿದ್ದ. ನಂತರ ಒಡ್ಡ ಆಡಲಿಕ್ಕೂ ಸುರು ಮಾಡಿದ. ಮನೆಯಲ್ಲಿ ತಾನೂ ಕೋಳಿ ಸಾಕಿ ಒಂದು ಪಂಚರಂಗಿ ಹುಂಜವನ್ನು ತಯಾರು ಮಾಡಿಕೊಂಡಿದ್ದ.
ತಿಮ್ಮನ ಧ್ವನಿಯೇನು ಸಣ್ಣದಲ್ಲ. ಮನೆಯ ಮುಂದಿನ ಕೋಡಿಯಿಂದ ದೋಣಿಯನ್ನು ಹೊರಗೆ ಮಾಡಿ ಕೂsssಎಂದು ಕೂಗಿದರೆ ಸುಮಾರು ಒಂದೂವರೆ ಮೈಲು ದೂರದ ವರೆಗೂ ಕೇಳುತ್ತಿತ್ತು. ಮನೆಯಿಂದ ಹೊರಟವನು ಮೊದಲಿಗೆ ದಾಸಪ್ರಭುರ ಮನೆಯ ಹೊಳೆಬಾಗಿಲಿಗೆ ದೋಣಿಯನ್ನು ತಂದು ನಿಲ್ಲಿಸುತ್ತಿದ್ದ. ಅವರ ಮನೆಗೆ ಹೋಗಿ ಏನಾದರೂ ತಿಂಡಿ, ಚಾ ಕೊಟ್ಟರೆ ಮುಗಿಸಿ, ಯಾರಾದರೂ ಬರುವವರಿದ್ದರೆ ಕರೆದುಕೊಂಡು ಮುಂದೆ ದೋಣಿ ಬಿಡುತ್ತಿದ್ದ. ಈ ಪದ್ಧತಿ ಅವರು ದೋಣಿಯನ್ನು ಬಾಡಿಗೆಗೆ ಪಡೆದ ಲಾಗಾಯ್ತಿನಿಂದ ನಡೆದು ಬಂದದ್ದು.
ಹೀಗೆ ವರುಷದ ಮೇಲೆ ವರುಷ ಉರುಳುತ್ತಿತ್ತು. ತಿಮ್ಮನ ದಿನಚರಿ ಯಥಾಪ್ರಕಾರ ನಡೆಯುತ್ತಿತ್ತು. ಪ್ರಭುರ ತೋಟ- ಹೊಯ್ಗೆ- ಮನೆ; ಮನೆ- ಹೊನ್ನಾವರ ಬಾಡಿಗೆ- ಮನೆ.
ಹೀಗಿರುವಾಗಲೆ ಒಂದು ದಿನ ತಿಮ್ಮ ದೇವಿಯನ್ನು ನೋಡಿದ್ದು. ದಿನದಂತೆ ಗಾಳಿಗೆ ಹಾಯನ್ನು ಒಡ್ಡಿ ಕಾಲುಚಾಚಿ ಸುಂಕಾಣಿಗೆ ತಲೆ ಹಚ್ಚಿ ಒರಗಿಕೊಂಡ ತಿಮ್ಮನಿಗೆ ಕಳಸನಮೂಟೆ ಹತ್ತಿರ ಬಂದಾಗ ಯಾರೋ ಕೂs ಹಾಕಿದರು. ಈ ಕಳಸನಮೊಟೆ ಒಂದು ಕೂರ್ವೆ. ಕೂರ್ವೆ ಅಂದರೆ ಸುತ್ತುಗಟ್ಟಿ ನೀರಿದ್ದ ಒಂದು ನಡುಗಡ್ಡೆ. ಈ ಕಳಸನಮೊಟೆ ಜನರ ಬಾಯಲ್ಲಿ ಕಳಸನಮೂಟೆ, ಕಳಸನ ಮೊಟ್ಟೆ ಇತ್ಯಾದಿ ರೂಪಗಳನ್ನು ಪಡೆದುಕೊಂಡಿದೆ. ಮೂಲತಃ ಮೊಟೆ ಅಂದರೆ ನೀರಿನೊಳಗೆ ಚಾಚಿರುವ ಭೂಮಿಯ ಭಾಗ. ಇರಲಿ.
ತಿಮ್ಮನ ದೋಣಿಯ ಮೇಲೆ ಬರಿ ಇಬ್ಬರು ಮಾತ್ರ ಇದ್ದರು. ಹದಿನೈದು ಸಿಯಾಳ, ಎರಡು ಹುಲ್ಲುಹೊರೆ ಬಿಟ್ಟರೆ ಇಡೀ ದೋಣಿ ಖಾಲಿ. ಹೀಗಾಗಿ ತಿಮ್ಮ ಕೂs ಹಾಕಿದವರನ್ನು ಹತ್ತಿಸಿಕೊಳ್ಳುವ ವಿಚಾರ ಮಾಡಿ ಸುಂಕಾಣಿ ತಿರುಗಿಸಿ ಹಾಯಿಯ ಒಂದು ಸೆರಗನ್ನು ಎಳೆದು ಓರೆಮಾಡಿ ದೋಣಿ ನಿಲ್ಲಿಸಲು ಅನುವಾದ.
ದೋಣಿ ಹಿಡಿಯಲಿಕ್ಕೆ ಅಲ್ಲೇನು ಯಾರೂ ಫಾಜಿ ಕಟ್ಟಿ ತಯ್ಯಾರಿ ಇಟ್ಟಿರಲಿಲ್ಲ. ದಿಡಕ್ಕೆ ಹತ್ತಿರ ಹೋದರೆ ಬ್ಯಾಲಿಗೆ ದೋಣಿ ತಾಗಿ ನಿಂತುಹೋಗುತ್ತಿತ್ತು. ಹಾಗಾಗಿ ದೋಣಿ ಹತ್ತುವವರು ನೀರಿನಲ್ಲೇ ಹತ್ತಾರು ಮಾರು ಹಾಯ್ದು ಬರಬೇಕಿತ್ತು. ಬರುವವರು ಇಬ್ಬರು ಹೆಗಸರು ಎನ್ನುವುದು ಇವನಿಗೆ ಗೊತ್ತಾಯಿತು. ಪ್ರಾಯದ ತಿಮ್ಮನಿಗೆ ಸಹಜವಾಗಿಯೇ ಒಂದು ದುರಾಲೋಚನೆ ತಲೆಯಲ್ಲಿ ಬಂತು. ದೋಣಿಯನ್ನು ಬೇಕಂತಲೇ ಸ್ವಲ್ಪ ನೀರು ಹೆಚ್ಚಾಗಿ ಇರುವಲ್ಲೇ ಹಿಡಿದ. ಹೊನ್ನಾವರಕ್ಕೆ ಹೋಗುವ ಹೆಂಗಸರು ಬಟ್ಟೆ ಒದ್ದೆಯಾಗುತ್ತದೆ ಎಂದು ಹೆದರಿ ಸೀರೆಯನ್ನು ಮೇಲಕ್ಕೆ ಸ್ವಲ್ಪಸ್ವಲ್ಪವಾಗಿ ಎತ್ತುತ್ತಲೇ ಬಂದರು. ಅವರಲ್ಲಿ ಒಬ್ಬಳು ವಯಸ್ಸಾದವಳು ಇನ್ನೊಬ್ಬಳು ಪ್ರಾಯದ ಹುಡುಗಿ. ಬಹುತೇಕ ಇಬ್ಬರೂ ತಾಯಿ ಮಗಳಂತೆ ಕಾಣಿಸುತ್ತಿತ್ತು. ತಿಮ್ಮನ ಕಣ್ಣು ಅವರ ತೊಡೆಯ ಮೇಲೆ ನಟ್ಟಿತ್ತು. ಕಂಡಷ್ಟೂ ಹಸಿವು ಏನನ್ನೋ ನೋಡಬೇಕೆನ್ನುವಂತೆ. ಅವರು ಬಂದು ದೋಣಿಯ ಬಾಣಿಗೆ ಹಿಡಿದರು. ತಿಮ್ಮ ಅವರಿಗೆ, ಕೆಸರು ಕಾಲು ತೊಳೆದುಕೊಂಡು ಹತ್ತಿ ಎಂದ.
ಕಾಲನ್ನು ನೆಲದಿಂದ ಸ್ವಲ್ಪ ಎತ್ತಿ ಕೆಸರನ್ನು ಕಳೆಯಲು ನೀರಿನಲ್ಲೇ ಎರಡುಮೂರು ಸಲ ಹಿಂದಕ್ಕೆ ಮುಂದಕ್ಕೆ ಆಡಿಸಿದಾಗ ಅದುರಿದ ಆ ಹರೆಯದ ಹುಡುಗಿಯ ತೊಡೆಯ ಮಾಂಸಖಂಡಗಳನ್ನು ಕಂಡು ಇವನ ಎದೆಯು ಸಣ್ಣಗೆ ನಡುಗಿತು. ಅವರು ನೀರಿನಿಂದ ಕಾಲು ತೆಗೆದು ಎತ್ತಿ ದೋಣಿಯ ಒಳಗಿಟ್ಟು ಹತ್ತುವಾಗ ದೋಣಿಯಲ್ಲಿ ಕುಳಿತುಕೊಂಡಿದ್ದ ಇಬ್ಬರೂ ಕಣ್ಣು ಮುಚ್ಚಿಕೊಂಡರು.
“ಏನೋ ಅಪ್ಪ ಬರಲಿಲ್ಲವೇನೋ? ಅವ್ವ ಆರಾಂ ಅದೆಯೇನೋ?” ಎಂದು ಕೇಳಿದಳು ವಯಸ್ಸಾದ ಹೆಂಗಸು.
“ಅಪ್ಪ ಮನಿಕೂಡೆ ಅವ್ನೆ. ಅವ್ವ ಆರಾಂ ಇದ್ದಾಳೆ” ಎಂದ ತಿಮ್ಮ. ಜೊತೆಗೇ, ಇವರು ನಮ್ಮ ಜಾತಿಯವರೇ ಆಗಿರಬೇಕು ಎನ್ನುವ ಸತ್ಯವನ್ನೂ ಕಂಡುಕೊಂಡ. ಹೊನ್ನಾವರಕ್ಕೆ ಹೋಗುವುದರೊಳಗೆ ಏಳೆಂಟು ಬಾರಿ ಆ ಹುಡುಗಿಯ ಕಣ್ಣಿನೊಟ್ಟಿಗೆ ತನ್ನ ಕಣ್ಣನ್ನು ಸೇರಿಸಿದ. ಅವಳ ಹೆಸರು ದೇವಿ ಎನ್ನುವುದೂ ಇವನಿಗೆ ಗೊತ್ತಾಯಿತು.
ಆ ನಂತರ ಎಷ್ಟೋ ದಿನಗಳವರೆಗೂ ತಿಮ್ಮನಿಗೆ ಆ ನೋಟ, ಆ ಪ್ರಸಂಗ ಮರೆಯಲು ಸಾಧ್ಯವೇ ಆಗಲಿಲ್ಲ.
4
ಮಾವಿನಕುರುವ ಹಬ್ಬ, ಅನಿಲಗೋಡ ಹಬ್ಬ ಈ ಬದಿಯ ಜನರಿಗೆ ಧಾರ್ಮಿಕ ಹಬ್ಬಗಳಲ್ಲೇ ಸೇರಿಹೋಗಿದೆ. ಈ ಹಬ್ಬಗಳನ್ನ ಅವು ನಡೆಯುವ ಊರಿನ ಹೆಸರಿನಿಂದ ಕರೆಯುತ್ತಿದ್ದರು. ಈ ಎರಡೂ ಹಬ್ಬಗಳು ಮಳೆಗಾಲ ಪ್ರಾರಂಭವಾಗುವುದಕ್ಕೆ ಸ್ವಲ್ಪ ದಿನ ಮೊದಲು ಬರುತ್ತವೆ. ಮಾವಿನಕುರುವ ಹಬ್ಬ ಮೊದಲು ಅಂದರೆ ವೈಶಾಖ ಹುಣ್ಣಿಮೆಗೆ ಆಗುತ್ತದೆ. ಅದಾದ ಕೆಲವು ದಿನಗಳ ನಂತರ ಅನಿಲಗೋಡು ಹಬ್ಬ. ಇದು ಹೆಚ್ಚಾಗಿ ಯಾವಾಗಲೂ ಮೇ ತಿಂಗಳ ಇಪ್ಪತ್ತೊಂದನೆ ತಾರೀಖಿಗೆ ಬರುತ್ತದೆ. ಈ ಹಬ್ಬ ಆದಕೂಡಲೆ ಮಳೆ ಕಾಯಂ ಎಂದು ಈ ಬದಿಯವರ ಲೆಕ್ಕ.
ಈ ಎರಡೂ ಊರುಗಳಲ್ಲಿ ಮಾಸ್ತಿ ಮನೆ ಇದೆ. ಇದಕ್ಕೆ ಗಾಮನ ಮನೆ ಎಂದು ಕರೆಯುತ್ತಾರೆ. ಎಷ್ಟೋ ಮನೆತನಗಳಿಗೆ ಆ ಅಮ್ಮನವರ ಗುಡಿಗಳೆ “ಬುಡದ ಸ್ಥಳ” ಆಗಿರುತ್ತದೆ. ಅವರೆಲ್ಲ ಅಲ್ಲಿಗೆ “ನಡೆದುಕೊಳ್ಳು”ತ್ತಾರೆ. ಪೂಜೆ, ಕಾಣಿಕೆ, ಬಲಿಗಳನ್ನು ನಿಯಮಿತವಾಗಿ ಸಲ್ಲಿಸುತ್ತಲೆ ಇರುತ್ತಾರೆ.
ಇನ್ನೂ ಒಂದು ವಿಶೇಷವಾದ ಪದ್ಧತಿ ಇದೆ. ಈ ಹಬ್ಬಗಳು ನಡೆದಾಗ ಆಯಾ ಕುಟುಂಬದವರಲ್ಲಿ ಒಬ್ಬರು “ಕಳ್ಳರ ಕಟ್ಟ”ಬೇಕು. ಕಳ್ಳರ ಕಟ್ಟುವುದೂ ಒಂದು ರೀತಿಯ ಸೇವೆಯೇ.
ಹಬ್ಬದ ಮುಂಚಿನ ದಿನ ಈ ಸೇವೆ ಮಾಡುವವರೆಲ್ಲ ಗಾಮನ ಮನೆಯಲ್ಲಿ ಸೇರಬೇಕು. ಮಿಂದು ಶುಚಿಯಾಗಿ ಮಧ್ಯಾಹ್ನದಷ್ಟೊತ್ತಿಗೆ ಗೌಡರ ತಳದವನೊಬ್ಬನು ಬಂದು ಅವರಿಗೆಲ್ಲ ಕುಸುಮಾಲೆ ಹೂವಿನ ಚಂಡಿಕೆಗಳನ್ನು ಹಣೆಗೆ, ತೋಳುಗಳಿಗೆ ಕಟ್ಟುತ್ತಾನೆ. ಎಲ್ಲರ ಕೈಯಲ್ಲೂ ಒಂದೊಂದು ಬೆತ್ತ ಇರುತ್ತದೆ. ನಂತರ ಆತ ಸೂಚನೆ ಕೊಟ್ಟಕೂಡಲೆ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಚದುರುತ್ತಾರೆ. ನಾಳೆ ಅಷ್ಟೇ ಹೊತ್ತಿಗೆ ಅವರು ಅದೇ ಜಾಗೆಗೆ ಬರಬೇಕು. ಆ ದಿನವೇ ಹಬ್ಬ. ಸಾವಿರಾರು ಜನರು ಹತ್ತಾರು ಹಳ್ಳಿಗಳಿಂದ ನೆರೆದಿರುತ್ತಾರೆ. ಅವರೆಲ್ಲರ ಎದುರಿಗೆ ಪ್ರತಿಯೊಬ್ಬ ಕಳ್ಳನೂ ಶೂಲದ ಮರವನ್ನು ಏರಬೇಕು.
ಬಯಲಿನಲ್ಲಿ ಒಂದಡಿ ವ್ಯಾಸದ, ಸುಮಾರು ಮೂವತ್ತು ಅಡಿ ಎತ್ತರದ ಶೂಲದ ಮರವನ್ನು ನಿಲ್ಲಿಸಿರುತ್ತಾರೆ. ಅದಕ್ಕೆ ಮೇಲಿನಿಂದ ಕೆಳಗಿನವರೆಗೂ ಪೂರ್ತಿಯಾಗಿ ಬಳಿಯುವಂತೆ ಎಣ್ಣೆಯನ್ನು ಹಚ್ಚಿರುತ್ತಾರೆ. ಅದನ್ನೇ ಏರಬೇಕು ಎನ್ನುವ ಹುರುಪು. ತುರುಸಿನಿಂದ ಏರಿದವರು ಜಾರುತ್ತಾರೆ. ಮತ್ತೆ ಪ್ರಯತ್ನಿಸುತ್ತಾರೆ. ಅಂತೂ ಪ್ರತಿಯೊಬ್ಬರೂ ತುದಿಯನ್ನು ಮುಟ್ಟಲೇಬೇಕು.
ಹಾಗೆ ಮೊದಲಿಗನಾಗಿ ಏರಿದವನಿಗೆ ಮಾವಿನಕುರುವದ ಹಬ್ಬದಲ್ಲಿ ಅನಿಲಗೋಡ ಹತ್ತಿರ ಹೊಳೆಯಲ್ಲಿ ಬಂಗಾರದ ಕಳಸ ಕಾಣುವುದೆಂದೂ, ಅನಿಲಗೋಡ ಹಬ್ಬದಲ್ಲಿ ಮೊದಲು ಏರಿದವನಿಗೆ ಮಾವಿನಕುರುವದ ಹತ್ತಿರ ಹೊಳೆಯಲ್ಲಿ ಬಂಗಾರದ ಕಳಸ ಕಾಣುವುದು ಎಂದೂ ಪ್ರತೀತಿ ಇದೆ. ಅದರ ಸತ್ಯಾಸತ್ಯತೆ ಯಾರಿಗೂ ಗೊತ್ತಿಲ್ಲ. ಏಕೆಂದರೆ ಹಾಗೆ ಏರಿದವರೆಲ್ಲ ತಾವು ಕಂಡಿದ್ದೇವೆ ಎನ್ನುತ್ತಾರೆ. ಕಾಣದೆ ಇದ್ದು ಕಂಡಿಲ್ಲ ಅಂದರೆ ತಮ್ಮಲ್ಲೇ ಏನಾದರೂ ದೋಷ ಹುಡುಕಬಹುದು ಎನ್ನುವ ಭಾವನೆಯೂ ಅದಕ್ಕೆ ಕಾರಣವಿರಬಹುದು. ಇದೆಲ್ಲಕ್ಕೂ ಮೂಲವಾಗಿ ಎರಡೂ ಕಡೆಯ ಹೊನ್ನ ಕಳಸಗಳು ನದಿಯ ನೀರಿನಲ್ಲಿ ಮುಳುಗಿಕೊಂಡು ಇವೆ ಎನ್ನುವ ದಟ್ಟವಾದ ನಂಬಿಗೆ ಇದೆ.
ಮಾವಿನಕುರುವ ಮಾಸ್ತಿ ತಿಮ್ಮನ ಕುಟುಂಬದವರ ಬುಡ' ಆದುದರಿಂದ ಅವರ ಕುಟುಂಬದವರು ಕಳ್ಳರ ಕಟ್ಟಬೇಕಿತ್ತು. ಇಷ್ಟು ವರ್ಷ ತಿಮ್ಮನ ಅಪ್ಪನೇ ಕಟ್ಟುತ್ತಿದ್ದ. ತಿಮ್ಮನ ಅಪ್ಪನಿಗೆ ವಯಸ್ಸು ಆಗುತ್ತ ಬಂದುದರಿಂದ ಪ್ರಾಯದ ಹುರುಪಿನ ಮಗನಿಗೆ ತನ್ನ ಹಕ್ಕನ್ನು ಬಿಟ್ಟುಕೊಟ್ಟಿದ್ದ. ತಿಮ್ಮನು ಕಳ್ಳನಾದರೆ ನೆರಮನೆಯ ವೆಂಕ್ಟ ಬೆನ್ನು ತಡೆಯುವವನು. ಬೆನ್ನುತಡೆಯುವವನು ಎಂದರೆ ಕಳ್ಳ ಮುಂದಕ್ಕೆ ಓಡುತ್ತ ಇರುತ್ತಾನೆ. ಹಿಂದಕ್ಕೆ ಅವನನ್ನು ಹಿಡಿಯಲು ಬರುವಂತೆ ಇವನು ಬರುತ್ತಾನೆ. ಇವನಿಗೆ ವಿಶೇಷ ವೇಷವೇನೂ ಇಲ್ಲ. ಇವನ ಕೆಲಸವೆಂದರೆ ಕಳ್ಳನ ಹಿಂದೆ ಓಡುತ್ತಲೆ ಮನೆಮನೆಯನ್ನು ಹೊಕ್ಕು ಜನರಿಂದ ಕಾಯಿ ಅಥವಾ ಹಣವನ್ನು ವಸೂಲು ಮಾಡುವುದು. ಹಬ್ಬದ ಮುಂಚಿನ ದಿನ ಕಳ್ಳರ ಬಿಡುವುದು. ಹೊಸ ಅಂಡರ್‌ಬಟ್ಟೆ ಹಾಕಿ ಅದರ ಮೇಲೆ ಐದು ಮೊಳದ ಮಗ್ಗದ ಪಂಚೆಯನ್ನು ಸುತ್ತಿ ಕಟ್ಟಿದ ತಿಮ್ಮ ಕಳ್ಳರ ವೇಷದಲ್ಲಿ ತುಂಬಾ ಚೆಂದ ಕಾಣುತ್ತಿದ್ದ. ಸಾಂಪ್ರದಾಯಿಕ ವಿಧಿಗಳು ಮುಗಿದ ಮೇಲೆ ಕಳ್ಳರನ್ನು ಬಿಟ್ಟುಬಿಟ್ಟರು. ಕೂ... ಹೂ ಎಂಬ ಕಳ್ಳರ ಕೂಗು, ಹುಳುಳುಳು.... ಎಂಬ ಬೆನ್ನು ತಡೆಯುವವನ ಕೂಗು, ಇವುಗಳಿಂದ ಆ ಮಾವಿನಕುರುವ ಗಾಮನ ಮನೆ ಬಯಲು ತುಂಬಿಹೋಯಿತು. ತಿಮ್ಮನ ಉದ್ದೇಶ ವೆಂಕ್ಟನಿಗೆ ಗೊತ್ತಿಲ್ಲ. ಅವನು ಸ್ವಂತ ಊರಿಗೆ ಬಂದರೆ ಜನರಿಗೆ ದಾಕ್ಷಿಣ್ಯದಲ್ಲಿ ಸಿಕ್ಕಿಸಿ ಒಂದಿಷ್ಟು ಕಾಯಿ ಒಟ್ಟು ಮಾಡಬಹುದು ಎಂಬ ಆಲೋಚನೆಯಲ್ಲಿದ್ದ. ಆದರೆ ತಿಮ್ಮ ಕಳಸನಮೊಟೆಯ ತಾರಿ ದೋಣಿ ಹತ್ತಲು ಹೋದದ್ದು ಯಾಕೆ ಅಂತ ತಿಳಿಯಲಿಲ್ಲ. ತಿಮ್ಮನಿಗೆ ತನ್ನ ಮನಸ್ಸಿನಲ್ಲಿ ಇದ್ದುದನ್ನು ಹೇಳಿದಾಗ ಅವನು,ಸುಮ್ಮನೆ ಬಾ ನನ್ನ ಬೆನ್ನಿಗೆ’ ಅಂದ.
ಕಳಸನಮೊಟೆಗೆ ಬಂದ ಕಳ್ಳ ಇವನೊಬ್ಬನೆ. ತಿಮ್ಮ ಕೂ….. ಹೂ ಎಂದು ಕೂಗಿ ಮನೆಯ ಗೋಡೆಯನ್ನೋ ತಟ್ಟಿಯನ್ನೋ ಕೈಯಲ್ಲಿದ್ದ ಬೆತ್ತದಿಂದ ಬಡಿಯುತ್ತಿದ್ದ. ವೆಂಕ್ಟ ಹುಳುಳುಳು…….. ಎಂದು ಹಿಂಬಾಲಿಸಿ ಬಂದು ಕಾಯನ್ನೋ ಹಣವನ್ನೋ ವಸೂಲು ಮಾಡಿ ಚೀಲ ತುಂಬುತ್ತಿದ್ದ.
ತಿಮ್ಮನಿಗೆ ದೇವಿಯ ಮನೆ ಯಾವುದು ಎಂದು ಗೊತ್ತಿರಲಿಲ್ಲ. ವೆಂಕ್ಟನ ಹತ್ತಿರ ಕೇಳುವುದಾದರೂ ಹೇಗೆ? ತಿಮ್ಮ ಓಡುತ್ತಿರುವಾಗಲೆ ನಾಲ್ಕು ಮನೆಯ ಆಚೆ ಇರುವ ಒಂದು ಮನೆಯ ಅಂಗಳದಲ್ಲಿ ದೇವಿ ನಿಂತದ್ದು ಕಂಡ. ಅದೇ ಅವಳ ಮನೆ ಇರಬೇಕು ಎಂದು ಊಹಿಸಿದ. ಆ ಮನೆಯ ತಟ್ಟಿಗೆ ಬೆತ್ತ ಬಡಿದು ಕೂ….. ಹೂ ಎಂದು ಕೂಗಿ ಅಲ್ಲೇ ನಿಂತ. ಹುಳುಳುಳು ಎಂದು ಕೂಗುತ್ತ ವೆಂಕ್ಟನೂ ಓಡಿ ಬಂದ.
ಏನು ನಿಂತೆಯೋ?' ಎಂದು ವೆಂಕ್ಟ ತಿಮ್ಮನಿಗೆ ಕೇಳಿದ. ತಿಮ್ಮ ನೀರು ಬೇಕು ಎನ್ನುವಂತೆ ಸನ್ನೆ ಮಾಡಿದ. ಅವನ ಅಗಲವಾದ ಎದೆ ಒಂದೇ ಸಮನೆ ಏರಿಳಿಯುತ್ತಿತ್ತು. ಓಡಿ ಬಂದುದರಿಂದ ಮೈ ತುಂಬ ಬೆವರು ಇಳಿಯುತ್ತಿತ್ತು. ಅಷ್ಟರಲ್ಲಿ ದೇವಿ ನಗುತ್ತಾ ಅವರ ಬಳಿಗೆ ಬಂದಿದ್ದಳು. ವೆಂಕ್ಟ ಆಕೆಯನ್ನು ಉದ್ದೇಶಿಸಿ, "ತಂಗಿ ತೊ... ಡಿ ನೀರು ಕೊಡು'' ಎಂದ. ದೇವಿ ಒಳಗೆ ಹೋದಳು. ಒಳಗಿದ್ದ ತನ್ನ ತಾಯಿಗೂ ಹೇಳಿದಳು. ಆಕೆಯು ಹೊರಗೆ ಬಂದಳು. ಅವಳು ತಿಮ್ಮನನ್ನು ನೋಡಿ, "ಒಳಗೆ ಬಾರೋ ತಮ್ಮ'' ಎಂದಳು. "ಇಲ್ಲ, ಹೊತ್ತಾಯ್ತದೆ. ಇವತ್ತು ಸಂಜೀಕೆ ಮನೆ ಬಡಕ್ಕೆ ಹೋಗಿ ಮಟ್ಟಬೇಕು. ಇವತ್ತೆ ಮನಿ ಹೊಕ್ಕುಕೆ ಆಗೂದಿಲ್ಲ, ಆದ್ರೂ ಹೋಗಬೇಕು. ಕಾಸರಕೋಡು, ಮಂಕಿ, ಗುಣವಂತೆ, ಮಾವಿನಕಟ್ಟೆ ಹಾಯ್ಸಿ ಬರೂರಟ್ಟಕೆ ಕಪ್ಪಾತದೆ'' ಎಂದು ಇಬ್ಬರೂ ಸೇರಿ ವಿವರಣೆ ನೀಡಿದರು. ಅಷ್ಟರಲ್ಲಿ ದೇವಿ ಚಂಬಿನಲ್ಲಿ ನೀರು ತಟ್ಟೆಯಲ್ಲಿ ಬೆಲ್ಲ ತಂದಿದ್ದಳು. ತಿಮ್ಮನೂ ಕುಡ್ದ, ವೆಂಕ್ಟನೂ ಕುಡ್ದ. ವೆಂಕ್ಟನಿಗೆ ಅರಿಯದಂತೆ ತಿಮ್ಮ ಮತ್ತು ದೇವಿಯರ ಕಣ್ಣುಗಳಲ್ಲಿ ಏನೇನೋ ಸಂಭಾಷಣೆಗಳು ನಡೆದಿದ್ದವು. ದೇವಿಯ ತಾಯಿ ಮಾತ್ರ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದಳು. ನೀರು ಕುಡಿದು ಮುಗಿಸಿದ ವೆಂಕ್ಟ, "ಇನ್ನ ನಾವು ಬತ್ರು ಚಿಕ್ಕಿ. ನಾಳಿಕೆ ಮತ್ತೆ ಹಬ್ಬಕ್ಕೆ ಬರೂದು ಮರ್ತಹಾಕೂರಿ'' ಎಂದ. ಹಬ್ಬಕ್ಕೆ ಅವರು ಬರದೆ ಇರುವುದಿಲ್ಲ ಎಂದು ತಿಮ್ಮ ದೃಢವಾಗಿ ನಂಬಿದ್ದ. ಮತ್ತೆ ಕೂ.... ಹೂ... ಹುಳುಳುಳು..... ಕಳ್ಳ ತಿಮ್ಮ ಮಂದೆ, ಅವನ ಹಿಂದೆ ಬೆನ್ನುತಡೆಯುವ ವೆಂಕ್ಟ. ನೀರು ಕುಡಿದು ವೆಂಕ್ಟನಿಗೆ ಹೊಟ್ಟೆ ಭಾರವಾದಂತೆನಿಸಿದರೆ ತಿಮ್ಮನ ಓಟ ಚುರುಕಾಗಿತ್ತು. 5 ಏಳೆಂಟು ಮಿಠಾಯಿ ಅಂಗಡಿ, ಹತ್ತಾರು ಬಳೆ ಅಂಗಡಿ, ಕಬ್ಬಿನ ಹಾಲಿನ ಅಂಗಡಿ, ಒಂದು ಚಾದಂಗಡಿ, ಪುಗ್ಗಿ ಹಿಡಿದು ಮಾರುವವರು, ತಿರುಗುವ ತೊಟ್ಟಿಲು ಮುಂತಾದವುಗಳಿಂದ ಗಾಮನಮನೆ ಬ.ಲು ಸಣ್ಣ ಪೇಟೆಯೇ ಆಗಿ ಮಾರ್ಪಟ್ಟಿತ್ತು. ಅವೆಲ್ಲಕ್ಕೂ ದೂರವಾಗಿ ಮಾಸ್ತಿ ಮನೆಯ ಬಾಗಿಲಿಗೆ ಸರಿ ಎದುರಾಗಿ ಸುಮಾರು ಮುನ್ನೂರು ಗಜ ದೂರದಲ್ಲಿ ಶೂಲದ ಮರ ಎಣ್ಣೆ ತಿಕ್ಕಿದ ಕಾರಣ ಬಿಸಿಲಿಗೆ ಮಿಂಚುತ್ತ ನಿಂತಿತ್ತು. ಹತ್ತಿರದಿಂದ ತಲೆ ಎತ್ತಿ ನೋಡಿದರೆ ಮೈ ಜುಂ ಎನ್ನುವಂತಿತ್ತು. ಸುಮಾರು ಹನ್ನೆರಡು ಗಂಟೆಯಿಂದಲೆ ಜನರು ಜಮಾಯಿಸಲು ಆರಂಭವಾಯಿತು. ಗಾಮನ ಮನೆ ಒಳಗೆ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತಿದ್ದವು. ಕಳ್ಳರೆಲ್ಲರೂ ಬೇರೆಬೇರೆ ದಿಕ್ಕಿಗೆ ಚದುರಿದವರು ಆ ವೇಳೆಗೆ ಅಲ್ಲಿ ನೆರೆದಿದ್ದರು. ಪ್ರತಿಯೊಬ್ಬರ ಮುಖದಲ್ಲೂ ತಾನೇ ಮೊದಲು ಶೂಲದ ಕಂಭದ ತುದಿ ಮುಟ್ಟುವವನು ಎಂಬ ಭರವಸೆ ಇದ್ದುದನ್ನು ಕಾಣಬಹುದಿತ್ತು. ಯಾವ ಕ್ಷಣಕ್ಕೆ ನಮ್ಮನ್ನು ಇಲ್ಲಿಂದ ಬಿಡುತ್ತಾರೆ ಎಂದು ಕಾತರಿಸಿಕೊಂಡಿದ್ದರು. ಅಂತೂ ಎರಡು ಗಂಟೆಯ ಸುಮಾರಿಗೆ ವಿಧಿವತ್ತಾಗಿ ಇವರಿಗೆ ಅಪ್ಪಣೆ ದೊರಕಿತು. ಪ್ರತಿಯೊಬ್ಬರೂ ಓಡಿ ಓಡಿ ಕಂಭ ಏರಲಾರಂಭಿಸಿದರು. ಅಷ್ಟರೊಳಗೆ ಜನರ ದಟ್ಟಣೆ ಆಗಿತ್ತು. ತಿಮ್ಮನ ಮನೆಯವರು ಎಲ್ಲರೂ ಬಂದಿದ್ದರು. ಇತ್ತ ಕಳಸನಮೊಟೆಯಿಂದ ದೇವಿ, ಅವಳ ತಾಯಿ, ಅವಳ ಅಣ್ಣ ಬಂದಿದ್ದರು. ಆ ತುರುಸಿನ ಸ್ಪರ್ಧೆಯ ನಡುವೆಯೇ ತಿಮ್ಮ ಆಚೆ ಈಚೆ ಕಣ್ಣು ಹಾಯಿಸಿದ. ಗುಂಪಿನಲ್ಲಿ ಇದ್ದ ತನ್ನ ಅಪ್ಪನನ್ನು ಕಂಡ. ಮತ್ತೆ ಯಾರನ್ನೂ ಕಾಣಲು ಸಾಧ್ಯವಾಗಲಿಲ್ಲ. ತಿಮ್ಮ ಕಂಭಕ್ಕೆ ಕೈ ನೀಡುವುದರೊಳಗೇ ಎಂಟ್ಹತ್ತು ಜನರು ಏರಿಬಿಟ್ಟಿದ್ದರು. ಅವರಲ್ಲೊಬ್ಬ ಅರ್ಧ ಕಂಭದ ವರೆಗೂ ಹೋಗಿದ್ದ. ತಿಮ್ಮನಿಗೆ ಗೊತ್ತು, ಅವರಲ್ಲೊಬ್ಬರೂ ಸದ್ಯಕ್ಕೆ ತುದಿ ಮುಟ್ಟುವುದಿಲ್ಲ ಎಂದು. ಹತ್ತಾರು ಜನ ಹತ್ತಿಳಿದರು. ಎಣ್ಣೆಯ ನಯ ಆದಷ್ಟು ಹೋಗಲಿ ಎಂದು ತಿಮ್ಮ ಸುಮ್ಮನುಳಿದ. ಅವನು ಮೊದಲೇ ಅಂಗೈಗೆ, ಎದೆಗೆ, ಕಾಲು ತೊಡೆಗಳಿಗೆ ತೆಳ್ಳಗೆ ಮಣ್ಣು ಬಳಿದುಕೊಂಡು ಬಂದಿದ್ದ. ಈಗ ತಿಮ್ಮನೂ ಏರತೊಡಗಿದ. ಕಂಭದ ಮೇಲೆ ಅಡ್ಡ ಬಂದವರನ್ನು ಕುಪ್ಪಳಿಸಿ ದಾಟಿ ಏರತೊಡಗಿದ. ಅಷ್ಟರೊಳಗೆ ಇಬ್ಬರು ಮುಕ್ಕಾಲು ಕಂಭದವರೆಗೆ ಹೋಗಿದ್ದರು. ಅವರನ್ನು ಸಮೀಪಿಸಲು ತಿಮ್ಮನಿಗೆ ಇನ್ನೂ ಇಬ್ಬರು ಅಡ್ಡ ಇದ್ದರು. ಒಬ್ಬ ಜಾರಿದ. ತಿಮ್ಮ ಉಪಾಯವಾಗಿ ಅವನಿಂದ ತಪ್ಪಿಸಿಕೊಂಡು ಸ್ಥಿರವಾಗಿ ನಿಂತು ಮೇಲೇರತೊಡಗಿದ. ಇನ್ನೊಬ್ಬನನ್ನೂ ದಾಟಿದ. ತುದಿ ಮುಟ್ಟಲು ತಿಮ್ಮನಿಗೆ ಅಡ್ಡ ಇರುವವರು ಇಬ್ಬರೇ ಇದ್ದರು. ಅವರಿಗೂ ಇವನಿಗೂ ಒಂದೇ ಒಂದು ಗಜ ಅಂತರ. ಕೆಳಗೆ ನಿಂತ ಜನರು, ತಿಮ್ಮ ಬಿಡಬೇಡ ಹತ್ತು ಹತ್ತು ಎಂದು ಕೂಗತೊಡಗಿದರು. ತಿಮ್ಮ ಆ ಕಡೆ ನೋಡಿದ. ಗುಂಪಿನಲ್ಲಿ ದೇವಿಯ ಮುಖ ಕಂಡ. ಅವಳ ಪಕ್ಕದಲ್ಲೇ ಆಕೆಯ ತಾಯಿ. ಇವನ ತಾಯಿಯೂ ಅವರ ಸಸನಿಹದಲ್ಲೇ ನಿಂತು ಅವರೊಟ್ಟಿಗೆ ಮಾತನಾಡುತ್ತಿದ್ದಳು. ದೇವಿಯ ಕಣ್ಣು ತಿಮ್ಮನ ಮೇಲೆಯೇ ಕೇಂದ್ರೀಕೃತವಾಗಿತ್ತು, ತಿಮ್ಮನ ಆತ್ಮೀಯರು ಬಾಯಿ ಬಿಟ್ಟು ಒದರಿದ್ದನ್ನೇ ಆಕೆಯ ಕಣ್ಣುಗಳು ಅನೇಕ ಸಾರೆ ನುಡಿದವು. ತಿಮ್ಮ ಆಕೆಯನ್ನೂ ನೋಡಿದ. ಏನೋ ಆವೇಶ ಉಕ್ಕಿದಂತಾಗಿ ತನಗಿಂತ ಮೇಲಿದ್ದವರನ್ನು ಉಪಾಯದಿಂದ ದಾಟಿದ. ಇನ್ನು ಒಂದೇ ಒಂದು ಮಾರು. ಅಲ್ಲಿ ಯಾರೂ ಹತ್ತಿರಲಿಲ್ಲ. ಎಣ್ಣೆ ಇನ್ನೂ ಬಳಿಯುತ್ತಲೇ ಇತ್ತು. ಇಷ್ಟು ಹೊತ್ತಿನ ಕೆಲಸ ಸಲೀಸಾಗಿತ್ತು ಅವನ ದೃಷ್ಟಿಯಲ್ಲಿ. ಈಗ ನಿಜವಾದ ಸತ್ವಪರೀಕ್ಷೆ ಇತ್ತು. ತಿಮ್ಮ ಕೆಳಗೆ ಹೊರಳಿ ದೇವಿ ನಿಂತ ಕಡೆ ನೋಡಿದ. ಅವನ ತಾಯಿ ಹತ್ತು ಎನ್ನುವಂತೆ ಕೈ ಮಾಡುತ್ತಿದ್ದಳು. ಅವನ ಕಣ್ಣು ದೇವಿಯ ಮುಖವನ್ನು ನೋಡಿದಾಗ ಆಕೆಯು ಕೂಡ ಪರಿವೆ ಇಲ್ಲದೆ ಆತನಿಗೆ ಉತ್ಸಾಹ ತುಂಬುವಂತೆ ಸನ್ನೆ ಮಾಡಿದಳು. ಆಕೆಯ ಮುಖ ಗಂಭೀರವಾಗಿತ್ತು. ಏನಾಗುತ್ತದೆ ಏನಾಗುತ್ತದೆ, ಅಕಸ್ಮಾತ್ತಾಗಿ ಜಾರಿದರೆ ಏನು ಗತಿ? ಇಷ್ಟು ಎತ್ತರ ಏರಿದ್ದೆಲ್ಲ ವ್ಯರ್ಥ ಆಗುತ್ತದೆಯಲ್ಲ ಎಂದು ಚಿಂತಿಸಿದಳು. ತಿಮ್ಮನ ಲಕ್ಷ್ಯ ಪೂರ್ತಿ ಶೂಲದ ಮರದ ತುದಿಯಲ್ಲೇ ಕೇಂದ್ರಿತವಾಯಿತು. ಮರದೊಟ್ಟಿಗೆ ಸೆಣಸಾಡಿ ಸೆಣಸಾಡಿ ಅಂತೂ ತುದಿ ಮುಟ್ಟಿದ. ತಿಮ್ಮ ತುದಿ ಮುಟ್ಟಿದವನು ಹೊಳೆಯ ಕಡೆ ನೋಡಿದ್ದರೆ ಅವನಿಗೆ ನೀರಿನಲ್ಲಿ ಅನಿಲಗೋಡಿನ ಕಳಸ ಕಾಣಿಸುತ್ತಿತ್ತೋ ಏನೋ. ಆದರೆ ಅವನ ಕಣ್ಣು ದೇವಿಯ ಮುಖದ ಮೇಲೆ ನಟ್ಟಿತ್ತು. ಆನಂದ ಉಕ್ಕೇರಿದ ಆಕೆಯ ಮುಖ ಹುಚ್ಚುಹುಚ್ಚಾಗಿ ಅವನಿಗೆ ಕಂಡಿತು. 6 ಮಾವಿನಕುರುವ ಹಬ್ಬದ ಗಾಮನ ಮನೆ ಪೇಟೆಯಲ್ಲೇ ದೇವಿಯ ತಾಯಿ ತಿಮ್ಮನ ತಾಯಿ ಲಕ್ಷ್ಮಿಯ ಜೊತೆ ಸೂಕ್ಷ್ಮವಾಗಿ ನೆಂಟಸ್ಥಿಕೆಯ ವಿಷಯ ಪ್ರಸ್ತಾಪಿಸಿದ್ದಳು. ಅವಳು,ನಂದೇನಿದೆ? ಎಲ್ಲ ಅವಂದೇ. ಮದುವೆ ಆಗುವವನ ಮನ್ಸು ತಿಳೀದ ಹೊರ್ತು ನಾವೇನೂ ಹೇಳೂಕೆ ಬರೂದಿಲ್ಲ’ ಎಂದಿದ್ದಳು.
ತಿಮ್ಮನಿಗೆ ಇದಾವುದೂ ಗೊತ್ತಿಲ್ಲ. ಲಕ್ಷ್ಮಿಯೂ ಅವನಿಗೆ ಹೇಳಿರಲಿಲ್ಲ. ಆಕೆಯ ದೃಷ್ಟಿಯಲ್ಲಿ ಅದೇನು ಅಷ್ಟು ಮಹತ್ವದ ವಿಚಾರ ಆಗಿರಲಿಲ್ಲ. ಏಕೆಂದರೆ ಅದೆಷ್ಟೋ ಜನ ಹೆಣ್ಣಿದ್ದವರು ಗಂಡಿಗೆ ಕೇಳುತ್ತಾರೆ ಎಂದು ಆಕೆಗೆ ಗೊತ್ತಿತ್ತು. ತಿಮ್ಮನ ಮನಸ್ಸಿನ ಒಳತೋಟಿ ಅವಳಿಗೆ ಹೇಗೆ ಗೊತ್ತಾಗಬೇಕು?
ತಿಮ್ಮ ಅದೇ ಗುಂಗಿನಲ್ಲೇ ಇದ್ದ. ಹಬ್ಬ ಆಗಿ ಎರಡು ದಿನದ ನಂತರ ಗೂಟಕ್ಕೆ ಹಾಕಿದ ತನ್ನ ಪಂಚಗಿರಿ ಹುಂಜವನ್ನು ತೆಗೆದುಕೊಂಡು ಮಾವಿನಕುರುವ ಕೋಳಿಪಡೆಗೆ ನಡೆದ.
ಈ ಕಡೆ ಯಾವುದೇ ತೇರು, ಜಾತ್ರೆ, ಸಾರ್ವಜನಿಕ ಉತ್ಸವ ನಡೆದರೆ ಅಲ್ಲಿ ಕೋಳಿಪಡೆ, ಇಸ್ಪೀಟು ಫಂಡು, ಗುಡುಗುಡಿ ಮಂಡ ಇವು ಅದೆ ಅಂತ ತಿಳಿದುಕೊಳ್ಳುವುದೇ. ಇದಕ್ಕೆಲ್ಲ ಪ್ರತಿಬಂಧ ಇದೆ. ಆದರೆ ಪೊಲೀಸಿನವರಿಗೆ ಏನಾದರೂ ಬಾಯಿಗೆ ಹಾಕಿ ಇವರು ರಾಜಾರೋಷಾಗಿ ನಡೆಸುತ್ತಾರೆ.
ಕೋಳಿಪಡೆಗೆ ಎಲ್ಲ ರೀತಿಯ ಕೋಳಿಯೂ ಲಾಯಕ್ಕು ಅಲ್ಲ. ಕೋಳಿಯ ಬಣ್ಣಕ್ಕೂ, ಸಾಕುವವರಿಗೂ ಸಾರಾವಳಿ ಕೂಡಿ ಬರಬೇಕು. ಯಾವ ಯಾವ ಮಿಥಿಗೆ ಯಾವ ಯಾವ ಬಣ್ಣದ ಕೋಳಿ ಜೊತೆ ಮಾಡಬೇಕು ಎನ್ನುವುದಕ್ಕೆ ಸಣ್ಣ ಕೋಳಿ ಪಂಚಾಂಗವೇ ಇದೆ.
ಪಡೆಗೆ ತರುವ ಹುಂಜಗಳನ್ನು ಬೇಕಾಬಿಟ್ಟಿ ಮೇಯಲು ಬಿಡುವುದಿಲ್ಲ. ಆ ಹುಂಜದ ಕಾಲಿಗೆ ಬಳ್ಳಿ ಹಾಕಿ, ಒಂದು ಗೂಟ ಹುಗಿದು ಅದಕ್ಕೆ ಕಟ್ಟಿರುತ್ತಾರೆ. ಅದರ ಹೊಟ್ಟೆಗೆ ಅಲ್ಲೇ ಹಾಕುತ್ತಾರೆ. ಇದಕ್ಕೆ ಗೂಟಕ್ಕೆ ಹಾಕುವುದು ಎನ್ನುತ್ತಾರೆ. ಹಾಗೆ ಗೂಟಕ್ಕೆ ಹಾಕುವುದರಿಂದ ಕೋಳಿಗಳಲ್ಲಿ ರೊಚ್ಚು ಬೆಳೆಯುತ್ತದೆ.
ತಿಮ್ಮನ ಬಗಲಲ್ಲಿ ಇದ್ದ ಹುಂಜ ಕೊಕ್ಕೊಕ್ಕೊ… ಎಂದು ಸ್ವರಗೆಯ್ಯುತ್ತಿತ್ತು. ಆಗೊಮ್ಮೆ ಈಗೊಮ್ಮೆ ತಿಮ್ಮ ಪ್ರೀತಿಯಿಂದ ಅದರ ಗಿರಿಗಳ ಮೇಲೆ ಕೈಯಾಡಿಸುತ್ತಿದ್ದ. ಏರು ಜುಟ್ಟಿನ ಕೋಳಿ ಕಾಣಲು ಸುಂದರವಾಗಿಯೇ ಇತ್ತು.
ಸುಮಾರು ಮೂವತ್ತು ನಲವತ್ತು ಕೋಳಿಗಳು ಅಂದಿನ ಪಡೆಗೆ ಬಂದಿದ್ದವು. ಆಗಲೇ ನಾಲ್ಕೈದು ಕೋಳಿಗಳಿಗೆ ಜೋಡಿ ಆಗಿ ಕತ್ತಿ ಕಟ್ಟುತ್ತಿದ್ದರು. ತಿಮ್ಮನ ಕೋಳಿ ನೋಡಿದವರು ಯಾರೂ ಅದರ ಮೇಲೆ ಕಟ್ಟಲಿಕ್ಕೆ ಮನಸ್ಸು ಮಾಡಲಿಲ್ಲ. ಅವನ ಕೋಳಿ ಅಷ್ಟು ಮಜಬೂತಾಗಿತ್ತು. ಏನು ಮಾಡುವುದು, ಕಟ್ಟಬೇಕು ಅಂತ ದೊಡ್ಡ ಮನಸ್ಸು ಮಾಡಿ ತಕ್ಕಂಡು ಹೋಗಿದ್ದ. ಹಾಗೇ ತರಲಿಕ್ಕೆ ಮನಸ್ಸು ಬರಲಿಲ್ಲ. ಪಂಚಾಂಗ ಗಿಂಚಾಂಗ ಏನೂ ನೋಡಲಿಲ್ಲ. ಯಾವ ಕೋಳಿ ಮೇಲಾದರೂ ಕಟ್ಟಲಿಕ್ಕೆ ತಯ್ಯಾರಿ ಆದ. ಕೊನೆಯ ವೇಳೆಯಲ್ಲಿ ಮುಗ್ವಿಯಿಂದ ಬಂದ ಒಬ್ಬ ಗೌಡನ ಕೋಳಿಯ ಜೊತೆ ಜೋಡಿ ಮಾಡಿದರು. ಎರಡಕ್ಕೂ ಕತ್ತಿ ಕಟ್ಟಿ ಕಾದಲು ಬಿಟ್ಟರು. ಹೋರಾಟ ರಣಜಂಗಿ ಆಗುವುದೆಂದು ಎಲ್ಲರೂ ತಿಳಿದಿದ್ದರು. ತಿಮ್ಮನ ಕೋಳಿ ಕಾದದೆ ಓಡಿ ಹೋಯಿತು. ತಿಮ್ಮನಿಗೆ ಎಲ್ಲಿಲ್ಲದ ಸಿಟ್ಟು ಬಂತು. ಇನ್ನೂ ತನಕ ಆ ರೀತಿ ಎಲ್ಲೂ ಆಗಿರಲಿಲ್ಲ ಅವನಿಗೆ. ಮತ್ತೊಮ್ಮೆ ಹಿಡಿದು ಬಿಟ್ಟರು. ಆಗಲೂ ಕಾದದೆ ಎದುರಾಳಿಯ ಹತ್ತಿರ ಕೊಕ್ ಕೊಕ್‌ ಕೊಕ್‌ ಮಾಡಿ ಪ್ರಣಯಚೇಷ್ಟೆ ಮಾಡಲಾರಂಭಿಸಿತು. ಆಟದ ನಿಯಮದ ಪ್ರಕಾರ ತಿಮ್ಮ ಕೋಳಿಯನ್ನು ಕಳೆದುಕೊಂಡ. ಅದು ಕಾದು ಸತ್ತಿದ್ದರೆ ತಿಮ್ಮನಿಗೆ ಏನೇನೂ ಏನಿಸುತ್ತಿರಲಿಲ್ಲ. ಹೀಗಾಯಿತಲ್ಲ ಎಂದು ವ್ಯಥೆಯಾಯಿತು ಅವನಿಗೆ. ಜೊತೆಗೆ ಒಡ್ಡವನ್ನೂ ಕಟ್ಟಿದ್ದ. ಆ ಒಡ್ಡದ ಹಣವೂ ಹೋಯಿತು. ಇವನ ಕೋಳಿಯನ್ನು ನಂಬಿ ಕಟ್ಟಿದವರ ಹಣವೆಲ್ಲ ವಿರುದ್ಧ ದಿಕ್ಕಿನವರಿಗಾಯಿತು.
`ಕೋಳಿ ಹೋದ್ರೆ ಏನಾಯ್ತೋ? ಅದರ ಅಪ್ಪನಂಥದ್ದು ಮಾಡೂಕೆ ಬರುವುದಿಲ್ಲವೇನೋ? ಇದಕ್ಕೆಲ್ಲ ಬೇಜಾರು ಬಿಟ್ಟುಕೊಂಡರೆ ಆಗುತ್ತದಾ? ಬಾರೋ’ ಎಂದು ತಿಮ್ಮನ ದೂರದ ಸಂಬಂಧಿ ಮಾವನೊಬ್ಬ ಕಳ್ಳಂಗಡಿಗೆ ಎಳೆದುಕೊಂಡು ಹೋಗಿದ್ದ. ಅಂವ ಇಂವ ಸೇರಿ ಒಂದು ಬಾಟ್ಲಿ ಮುಗಿಸಿದ್ದರು. ಇವರು ಹೊರಗೆ ಬೀಳುವ ವೇಳೆಗೆ ಮತ್ತಿಬ್ಬರು ಬಂದು ಹೊಕ್ಕಿದ್ದರು. ಇವರು ಬೇಡಬೇಡ ಅಂದರೂ ಒತ್ತಾಯ ಮಾಡಿ ಒಂದೊಂದು ಗ್ಲಾಸು ಕುಡಿಸಿದರು. ತಿಮ್ಮನಿಗೆ ಮೊದಲಿನದೆ ಹೆಚ್ಚಾಗಿತ್ತು. ಅದರ ಮೇಲೆ ಮತ್ತೊಂದು ಗ್ಲಾಸು ಬಿದ್ದಾಗ ಅವನ ಅವಸ್ಥೆ ಕೇಳಬೇಕೆ? ಅಂತೂ ತೂರಾಡುತ್ತ ತೂರಾಡುತ್ತ ಹತ್ತು ಗಂಟೆ ರಾತ್ರಿಗೆ ಮನೆಗೆ ಬಂದು ಮುಟ್ಟಿದ. ಇವನು ಇಷ್ಟೆಲ್ಲಾ ಮಿತಿ ಮೀರಿ ಕುಡಿಯುತ್ತಾನೆ ಎನ್ನುವುದು ಅವನ ಅಪ್ಪ ಅಮ್ಮ ಇಬ್ಬರಿಗೂ ಗೊತ್ತಿರಲಿಲ್ಲ. ಇಬ್ಬರೂ ಆಗ ಅವನಿಗೆ ಏನೂ ಅನ್ನಲಿಲ್ಲ. ಮಾರನೆ ದಿನ ಬೆಳಿಗ್ಗೆ ಅವನಿಗೆ ಸರಿಯಾಗಿ ಬಲಿ ತೆಗೆದರು. ತಿಮ್ಮನಿಗೂ ತಾನು ಮಾಡಿದ್ದು ತಪ್ಪು ಎನಿಸದೆ ಇರಲಿಲ್ಲ.

—-

ದೋಣಿಗೆ ಹಾಯಿ ಏರಿಸಿ ಕೋಡಿಯಿಂದ ಹೊರಗೆ ಮಾಡುವವರೆಗೆ ದಿನದ ವೇಳೆ ಮೀರಿ ಹೋಗಿತ್ತು. ನಿನ್ನೆಯ ದಿನದ್ದು ನೆನಪಾಗಿ ತಾನು ಹೆಂಡ ಕುಡಿದದ್ದು ಹೆಚ್ಚಾಗಿ ಏನೇನು ಮಾಡಿದೆನೊ ಏನೋ ಅಂದುಕೊಂಡ. ಅಪ್ಪನಿಗೆ ಅವ್ವನಿಗೆ ಗೊತ್ತಾಗುವ ಹಾಗೆ ಅಷ್ಟೆಲ್ಲ ಇನ್ನು ಕುಡಿಯಬಾರದು ಎಂದು ನಿರ್ಧರಿಸಿಕೊಂಡ. ವೇಳೆಯಾದ ಕಾರಣ ತನ್ನ ದೋಣಿಗೆ ಹತ್ತಲು ಜನರು ಯಾರೂ ಸಿಕ್ಕುವುದಿಲ್ಲ ಎಂದುಕೊಂಡು ಕೂ…. ಹಾಕುವ ಗೋಜಿಗೋ ಹೋಗದೆ ಸುಂಕಾಣಿ ಹಿಡಿದುಕೊಂಡು ಸುಮ್ಮನೇ ಕುಳಿತುಬಿಟ್ಟ.
ದೋಣಿ ಸುಮಾರು ಕಳಸನಮೊಟೆಯ ಹತ್ತಿ ಹತ್ತಿರ ಬಂತು ಅನ್ನುವಾಗ ಸುಂಕಾಣಿ ಅಪ್ರಯತ್ನವಾಗಿ ಆ ಕಡೆ ತಿರುಗಿತು. ಹಾಗೆ ಬದಿಯಲ್ಲೇ ಹೋಗುವ ಆಲೋಚನೆ ಅವನದು. ಎಲ್ಲಾದರೂ ಹೊಳೆ ಬದಿಗೆ ಬಂದರೆ ದೇವಿ ಕಾಣಬಹುದೇನೋ ಎನ್ನುವ ದೂರದ ಆಸೆಯೊಂದಿತ್ತು. ಅಷ್ಟರಲ್ಲೆ ಯಾರೋ ಕೂ…. ಹೂಯ್‌ ಎಂದು ಕರೆದದ್ದು ಕೇಳಿಸಿತು. ಯಾರೋ ಹತ್ತುವವರು ಇದ್ದಾರೆ ಎಂದುಕೊಂಡು ಹಾಯಿಯ ಸೆರಗು ಒಂದು ಕಡೆ ಎಳೆದು ಸುಂಕಾಣಿಯನ್ನು ಪೂರ್ತಿ ಮುರಿದ. ಬರುವವರು ಯಾರು ಎಂದು ಬಗ್ಗಿ ನೋಡಿದ. ಮೊಣಕಾಲವರೆಗಿನ ನೀರಿನಲ್ಲಿ ಒಬ್ಬ ಹೆಂಗಸು ಬಂದು ನಿಂತಿದ್ದಳು. ತಿಮ್ಮ ಇನ್ನೂ ಹತ್ತಿರ ಹೋಗಿ ನೋಡುತ್ತಾನೆ. ಅವಳು ದೇವಿಯೇ ಆಗಿದ್ದಳು.
ತಿಮ್ಮನಲ್ಲಿ ಸಣ್ಣಗೆ ನಡುಕ ಪ್ರಾರಂಭವಾಯಿತು. ಚಲಿಸುತ್ತಿದ್ದ ದೋಣಿಯನ್ನು ಜಲ್ಲ ಹಾಕಿ ಹಿಂದಕ್ಕೆ ಹಿಡಿದ. ದೇವಿ ದೋಣಿ ಹತ್ತಿದಳು. ತಿಮ್ಮ,
ಎಲ್ಲಿ ಹೊನ್ನಾವರಕ್ಕೇನೆ?' ಎಂದ. ಹೌದು, ಆಸ್ಪತ್ರೆಗೆ, ನಮ್ಮ ಅವ್ವಿಗೆ ಕೂಡಾಗದೆ. ಔಷಧ ತರೂಕೆ ಬಂದೆ.’
ಎಂಥಾ ಸೀಕೆ?' ನಿನ್ನೆ ಸಂಜೆ ಆಪಂಗೆ ನಡಗೂಕೆ ಸುರುಮಾಡ್ತು. ಕಡಿಗೆ ಮೈನೂ ಬೆಚ್ಚಗೆ ಆಯ್ತು. ಏನು ಮಾಡಬೇಕು ಹೇಳಿ ಗೊತ್ತಾಗ್ಲೇ ಇಲ್ಲ. ಆಗಿಂದಾಗೆ ನಮ್ಮಣ್ಣ ಹೋಗಿ ಸಣಕೂಸಣ್ಣನ ಕರಕೊಂಡು ಬಂದ. ಅಂವ ನೊಟ ಮಾಡಿದ ಮೇಲೆ ಸ್ವಲ್ಪ ಲಘು ಕಂಡ್ತು. ಒಂದು ಕೋಳಿನೂ ದೆವ್ವಕ್ಕೆ ಬಿಟ್ಟಾನೆ.’
ದೇವಿ ಈ ರೀತಿ ಸರಸರ ಮಾತಾಡುವುದು ಕಂಡ ತಿಮ್ಮನಿಗೆ ಸ್ವಲ್ಪ ದಿಗಿಲಾಯ್ತು. ಇವ್ಳು ಎಲ್ಲಾರಕೂಡೂ ಹೀಗೇ ಮಾತಾಡ್ತಾಳೇನೋ ಎನ್ನುವ ಆಲೋಚನೆ ತಲೆಯಲ್ಲಿ ಬಂತು. ದೇವಿಗೆ ತನ್ನ ಅವ್ವ ತಿಮ್ಮನ ತಾಯಿ ಲಕ್ಷ್ಮಿಯ ಕೂಡೆ ನೆಂಟಸ್ಥಿಕೆ ವಿಷಯ ಮಾತಾಡಿದ್ದು ಗೊತ್ತಿತ್ತು. ಮೇಲಾಗಿ ಅವನ ಮೇಲೆ ಅವಳಿಗೆ ಮನಸೂ ಆಗಿತ್ತು. ಈಗ ಅವ್ವನ ಸೀಕು ಎನ್ನುವುದು ಒಂದು ರೀತಿಯ ಖೇದವೂ ಮನಸ್ಸಿನಲ್ಲಿ ಇತ್ತು. ಮನಸ್ಸಿನಲ್ಲೇ ಅವಳವನಾಗಿದ್ದ ತಿಮ್ಮ ಅವಳಿಗೆ ಆತ್ಮೀಯನಾಗಿ ಕಂಡುದರಿಂದ ಆ ರೀತಿ ನಾಲಿಗೆ ಸಡಿಲ ಬಿಟ್ಟಿದ್ದಳು. ತಿಮ್ಮನಿಗೆ ಅದೆಲ್ಲ ಹೇಗೆ ಗೊತ್ತಾಗಬೇಕು?
ಸೀಕಾದ ಅವ್ವನ ಬಿಟ್ಟು ನೀ ಯಾಕೆ ಬಂದೆ? ನಿನ್ನ ಅಣ್ಣ ಎಲ್ಲಿ ಹೋಗಾನೆ?' ಎಂದ ತಿಮ್ಮ. ಅಂವ ಕಾಸರಕೋಡಿನಲ್ಲಿ ಹಂಚಿನ ಕಾರ್ಖಾನೆಲಿ ಕೆಲಸಕ್ಕೆ ಸೇರ್ಕಂಡವ್ನೆ. ಅಂವಗೆ ಇವತ್ತು ರಜೆ ಕೊಡುವದಿಲ್ಲವಂತೆ. ಹಾಗಾಗಿ ನನ್ನ ಕೂಡೆ ಹೊನ್ನಾವರಕ್ಕೆ ಹೋಗಿ ಬಾ ಎಂದ.’
ಈಗ ಯಾರು ಅವ್ರೆ ನಿನ್ನ ಅವ್ವಿ ಬುಡಕ್ಕೆ?' ನಮ್ಮ ಚಿಕ್ಕಿ ಮಗಳು ಸೀತೆಗೆ ಇರು ಹೇಳಿ ಬಂದಿನಿ’
ಮುಂದೇನು ಮಾತನಾಡಬೇಕು ಎಂದು ತಿಮ್ಮನಿಗೆ ತಿಳಿಯದೆ ಸುಮ್ಮನಾದ. ಇಬ್ಬರಲ್ಲೂ ಮಾತಿಲ್ಲದೆ ದೋಣಿ ಹತ್ತು ಮಾರು ಕೆಳಗೆ ಸರಿಯಿತು.
ದೋಣಿ ನಡೆಸುವವನು ತಿಮ್ಮ. ಪಯಣಿಸುವವಳು ದೇವಿ. ಇಬ್ಬರ ಬಿಟ್ಟರೆ ಇನ್ಯಾರೂ ಇಲ್ಲ. ತಿಮ್ಮನಿಗೆ ಎಲ್ಲಿಲ್ಲದ ಧೈರ್ಯ ಬಂತೋ ಏನೋ? ದೇವಿಗೆ ಕೇಳಿಯೇ ಬಿಟ್ಟ,
ನನ್ನ ಮದ್ವಿ ಆಗ್ತೆಯೇನೆ?' ದೇವಿ ಏನೆಂದು ಉತ್ತರಿಸಿಯಾಳು? ಹಳ್ಳಿ ಹೆಣ್ಣಾದರೂ ನಾಚಿಕೆ ಇಲ್ಲದವಳೆ? ಆಕೆಯ ಮುಖ ಕೆಳಗಾಯಿತು. ತಿಮ್ಮ ಇನ್ನೊಮ್ಮೆ ಮರ್ಯಾದೆ ಬಿಟ್ಟು(?) ಕೇಳಿದ, ಏನೆ ನನ್ನ ಮೇಲೆ ಮನಸಿಲ್ವೇನೆ ನಿನಗೆ?’
ದೇವಿ, ತನ್ನ ಮನೆಯವರು ಪ್ರಸ್ತಾಪ ಮಾಡಿದ್ದು ಇವನಿಗೆ ಗೊತ್ತಿದೆ ಎಂದೇ ಭಾವಿಸಿದಳು. ಅದಕ್ಕೇ ಇವನು ಹೀಗೆ ಕೇಳುತ್ತಾನೆ ಅಂದುಕೊಂಡಳು. ಮನಸ್ಸಿನಲ್ಲಿ ಏನೇನೋ ನಡೆದವು. ಕತ್ತನ್ನು ಮೇಲೆತ್ತಿ ತಿಮ್ಮನ ಮುಖ ನೋಡಿದಳು. ಆಕೆ ಬಾಯಿ ಬಿಟ್ಟು ಆಡಲಾರದ್ದನ್ನು ಕಣ್ಣು ಹೇಳುತ್ತಿತ್ತು. ತಿಮ್ಮನಿಗೆ ಅದೇ ಸಾಕಾಯಿತು.
ಹಿಂದೆ, ಬಹು ಹಿಂದೆ ಪರಾಶರ ಎನ್ನುವ ಮುನಿ ತಾರಿ ದಾಟುತ್ತಿದ್ದನಂತೆ. ದಾಟಿಸುವವಳು ಬೆಸ್ತರ ಹುಡುಗಿಯಾಗಿದ್ದಳಂತೆ. ಆದರೆ ಇಲ್ಲಿ ತಿಮ್ಮ ದೋಣಿ ನಡೆಸುವವನು. ದೇವಿ ಹೊನ್ನಾವರಕ್ಕೆ ಆಸ್ಪತ್ರೆಗೆ ಹೋಗುವವಳು. ಈ ವ್ಯತ್ಯಾಸ ಬತ್ತದಷ್ಟಾದರೂ ಬದಲಾವಣೆ ಮಾಡಬಹುದೆ?
ನೀರು ಕೆಳಮುಖವಾಗಿ ಹರಿಯುತ್ತಿತ್ತು.
ಹತ್ತಿರದಲ್ಲಿ ಎಲ್ಲೂ ಬೇರೆ ದೋಣಿ ಇರಲಿಲ್ಲ.
ಗಾಳಿ ಬಿದ್ದು ಹೋಗಿತ್ತು.
ಪ್ರಾಯದ ತಿಮ್ಮ, ದೇವಿ ಇಬ್ಬರೇ ಇಬ್ಬರು.
ತಿಮ್ಮ ಸುಂಕಾಣಿ ಬಿಟ್ಟು ದೇವಿಯ ಬಳಿಗೆ ಬಂದ. ದೇವಿ ಬೆದರುಗಣ್ಣಾಗಿ ನೋಡುತ್ತಲೇ ಇದ್ದಳು.
ಹೊಳೆಯಿಂದ ಮಗ್ಣಿ ಮೀನು ಒಂದು ನೀರಿನಿಂದ ಮೇಲಕ್ಕೆ ಹಾರಿ ಪುನಃ ನೀರಿನೊಳಗೆ ಸೇರಿ ಹೋಯಿತು.
ಭಾಗ 2
ಹೊಟ್ಟೆ
1
ದೇವಿ ಚೊಚ್ಚಿಲು ಬಾಣಂತನಕ್ಕೆ ತೌರು ಮನೆಗೆ ಹೋಗಿ ಬರುವುದರೊಳಗಾಗಿ ತಿಮ್ಮ ತಾಯಿಯನ್ನು ಕಳೆದುಕೊಂಡಿದ್ದ. ಲಕ್ಷ್ಮೀಗೆ ಒಮ್ಮಿಂದೊಮ್ಮೆಲೆ ಸೀಕು ಬಂದಿತ್ತು. ಸರಿಯಾಗಿ ಎಂಟು ದಿನವೂ ಹಾಸುಗೆ ಹಿಡಿದಿರಲಿಲ್ಲ. ಸನ್ನೆ ಏರಿದ ನಮೂನೆ ಆಗಿತ್ತು. ಎಲ್ಲರೂ ಆಕೆಗೆ ಕಟ್ಟಿನ ಕೋಡಿ ಮುರ್ತು ಹೊಡೆದಿದೆ ಎಂದರು. ಬೆನ್ನಿಗೆ ಎಣ್ಣೆ ಹಚ್ಚಿ ನೋಡಿದಾಗ ಬೆರಳು ಮೂಡಿದ್ದು ಕಂಡಿತಂತೆ. ಹೇಳುವವರ ಮಾತು ಕೇಳಿ ಮುರ್ತು ಸೋಕಿದ ಔಷಧ ತಂದು ಹಾಕಿದ. ಈರಯ್ಯ ನಾಯ್ಕ ಒಂದೇ ದಿನ ಆರು ನೋಟ ಮಾಡಿದ. ಮೂರು ಕೋಳಿ ಬಿಟ್ಟಿದ್ದ. ಆದರೇನು?
ದೆವ್ವದ್ದೆಲ್ಲ ನೋಡಿ ಆದ ಮೇಲೆ ಕೊನೆ ಪ್ರಯತ್ನವೆಂದು ಡಾಕ್ಟರಿಗೆ ಕರೆದುಕೊಂಡು ಬಂದರು. ಡಾಕ್ಟರು ನೋಡಿ ಔಷಧ ಕೊಟ್ಟರು. ಮೊದಲೇ ಬರಬೇಕಿತ್ತು. ಈಗೇನೂ ಸಾಧ್ಯವಿಲ್ಲ ಎಂದರು. ಅಪ್ಪ ಮಗ ಇಬ್ಬರೂ ತಲೆ ಮೇಲೆ ಕೈ ಹೊತ್ತು ಕುಳಿತರು.
ತಿಮ್ಮ ತನ್ನ ಹಿರಿಯ ಮಗಳಿಗೆ ತನ್ನ ತಾಯಿಯ ಹೆಸರನ್ನೇ ಇಟ್ಟನು. ತನ್ನ ಮಗುವನ್ನು ನೋಡಲು ಅತ್ತೆ ಉಳಿಯಲಿಲ್ಲವಲ್ಲ ಎಂದು ದೇವಿಗೆ ದುಃಖವಾಯಿತು.
ಹೆಂಡತಿ ಸತ್ತ ದುಃಖದಲ್ಲಿ ತಿಮ್ಮನ ತಂದೆಯಾದ ಗಣಪು ಬಹಳ ನರಂ ಆಗಿದ್ದ. ಅವ್ವ ಸತ್ತ ದುಃಖದಲ್ಲಿ ತಿಮ್ಮನಾದರೂ ಏನೂ ಮಾಡಲು ಮನಸ್ಸು ಬಾರದೆ ಕೆಲವು ದಿನ ಮನೆಯಲ್ಲೇ ನಿಂತಿದ್ದ. ಸಾಗುವಳಿ ಭೂಮಿ ಏನೇನೂ ಇಲ್ಲದ ಅವರು ಈ ರೀತಿ ಸುಮ್ಮನಿದ್ದುಬಿಟ್ಟರೆ ಸಂಸಾರ ನಡೆಯುವುದಾದರೂ ಹೇಗೆ? ಲಕ್ಷ್ಮೀ ಸಾಯುವಾಗ ಆಕೆಯ ಆರೈಕೆಗೆ ಅಲ್ಲಲ್ಲಿ ಕೈಗಡ ತಗೊಂಡಿದ್ದ. ದೋಣಿ ಕೊಟ್ಟ ಒಡೆಯ ದಾಸ ಪ್ರಭುರಿಗೆ ಮೂರು ತಿಂಗಳ ದೋಣಿ ಬಾಡಿಗೆ ಕೊಡುವುದು ಬಾಕಿ ಇತ್ತು. ಹೀಗಾಗಿ ಅಲ್ಲಿಗೆ ಹೋಗುವುದನ್ನು ಕಡಿಮೆ ಮಾಡಿದ್ದ. ಅವರು ದಿನಕ್ಕೊಮ್ಮೆಯಾದರೂ ಕರೆಯುತ್ತಿದ್ದರು. ಈಗ ದಿನದ ಊಟಕ್ಕೂ ಅಲ್ಲಲ್ಲಿ ಸಾಲ ಮಾಡಬೇಕಾದ ಪ್ರಮೇಯ ಬಂದೊದಗಿತು.
ತಿಮ್ಮ ಕೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ನಾಲ್ಕು ದಿನ ಹೊನ್ನಾವರದ ಬಾಡಿಗೆ ಮಾಡಿದ. ಪ್ರಭುರ ಮನೆಗೆ ಹೋಗಿ ಪರಿಸ್ಥಿತಿ ಹೇಳಿಕೊಂಡ. ಅವರಿಗೂ ಇವನ ಮನೆಯ ಸ್ಥಿತಿ ಗೊತ್ತಿತ್ತು. ಅವರು ಎಷ್ಟೋ ಸಲ,
ನಾಳಿನ ಆಲೋಚನೆ ಇಲ್ಲದ ಜನ ಇವರು. ಊಟಕ್ಕಿಲ್ಲದಿದ್ದರೆ ಹೊಟ್ಟೆಗೆ ತಣ್ಣೀರು ಅರಿವೆ ಕಟ್ಟಿಕೊಂಡು ಮಲಗಲಿಕ್ಕೂ ತಯ್ಯಾರಿ. ಕೂಡಿಡುವುದು ಗೊತ್ತೇ ಇಲ್ಲ ಈ ಜನಕ್ಕೆ' ಎಂದು ತಿಮ್ಮನ ಮನೆಯವರನ್ನು ಕುರಿತು ಬೇರೆಯವರಲ್ಲಿ ಹೇಳುತ್ತಿದ್ದರು. ಪ್ರಭುಗಳು ಹೀಗೆ ಹೇಳುವುದರಲ್ಲೂ ಸತ್ಯಾಂಶ ಇಲ್ಲದೇ ಇಲ್ಲ. ದುಡಿತದ ಪರಮ ಗುರಿಯೇ ಹೊಟ್ಟೆ ತುಂಬಿಕೊಳ್ಳುವುದು ಆಗಿರುವಾಗ ಮತ್ತು ದುಡಿಮೆ ಆವತ್ತಿನ ಖರ್ಚಿಗೇ ತೋವುಮುಟ್ಟು ಆಗುವಾಗ ಕೂಡಿಡುವುದು ಎಲ್ಲಿ? ಇದಕ್ಕಿಂತ ಭಿನ್ನವಾದ, ತೀವ್ರವಾದ ಆಸೆ ಬಲವತ್ತರಗೊಂಡಾಗ ಅಷ್ಟೇ ಉತ್ಸಾಹ, ಛಲ ಹೆಚ್ಚುವುದು. ಆಶೆ ಪೂರ್ಣಗೊಳ್ಳುವವರೆಗೆ ಊಟ ನಿದ್ದೆ ಇವೆಲ್ಲ ಅಮುಖ್ಯವೆನಿಸಿಬಿಡುತ್ತವೆ. ಆದರೆ ತಿಮ್ಮನ ದುಡಿಮೆಯ ಹಿಂದಿದ್ದ ಪ್ರೇರಣೆ ಹೊಟ್ಟೆಯಷ್ಟೇ ಆಗಿತ್ತು. ಅಂದಿನ ದುಡಿಮೆಯನ್ನು ಅಂದೇ ಖರ್ಚು ಮಾಡುವುದು ಅವನಿಗೆ ತಪ್ಪೆನಿಸಿರಲಿಲ್ಲ. ಅರ್ಧಹೊಟ್ಟೆ ಉಂಡು ಹೋದರೆ ಇಡೀ ದಿನ ಕೆಲಸ ಮಾಡುವುದಾದರೂ ಹೇಗೆ? ಗ್ರಹಚಾರ ಅನ್ನುವುದು ಇದಕ್ಕೇ ಇರಬೇಕು. ನಾಲ್ಕು ದಿನ ಸುರಳೀತ ಹೊನ್ನಾವರಕ್ಕೆ ಹೋಗಿ ಬರುತ್ತ ಇದ್ದ ತಿಮ್ಮ ರವಿವಾರ ದಿನ ಹೈಸ್ಕೂಲ ಹಿಂಬದಿಯ ಬಯಲಿನಲ್ಲಿ ನಡೆದ ಕೋಳಿಪಡೆಗೆ ಹೋಗಿದ್ದ. ಇಂವಂದು ಕೋಳಿ ಏನ್‌ ಇರಲಿಲ್ಲ. ಒಂದ್ನಾಲ್ಕು ರುಪಾಯಿ ಒಡ್ಡ ಆಡುವ ಅಂತ ಹೋಗಿದ್ದ. ರಸ್ತೆ ಬದಿ ಜಾಗ ಅದು. ರಾಜಾರೋಷಾಗಿ ಕೋಳೆಪಡೆ ನಡೆಸುವುದು, ಅದೂ ಸಂಬಂಧಿಸಿದವರಿಗೆ ಒಂದು ಸುದ್ದಿ ತಿಳಿಸಿ ಬಂದೋಬಸ್ತು ಮಾಡಿಕೊಳ್ಳದೆ ಅಂದರೆ ದೊಡ್ಡ ಸಾಹಸವೇ ಸರಿ. ಆಟಕ್ಕೆ ಒಳ್ಳೆ ರಂಗೇರಿತ್ತು. ಎರಡು ಹುಂಜಗಳು ಅವಕಾಶದಲ್ಲಿ ಕಾದಾಡುತ್ತಿದ್ದವು. ಜನರು ಸುತ್ತುವರಿದು ನಿಂತು, ಹಾಕು, ಹೊಡೆ, ಬಡಿ, ಒದಿ ಹೀಗೆ ಹತ್ತಾರು ರೀತಿಯಲ್ಲಿ ತಮ್ಮ ಪಕ್ಷದ ಕೋಳಿಗೆ ಉತ್ತೇಜನ ನೀಡುತ್ತಿದ್ದರು. ಆ ಹೊತ್ತಿಗೆ ಸರಿಯಾಗಿ ಪೊಲೀಸ್‌ ಜೀಪು ಹುಡಿ ಹಾರಿಸುತ್ತ ತಿರುವಿನಲ್ಲಿ ಪ್ರತ್ಯಕ್ಷವಾಯಿತು. ಜನರಿಗೆ ಅರಿವಾಗಿ ಕಂಬಿ ಕೀಳುವುದರಳಗೆ ಹತ್ತಿರವೇ ಬಂದು ನಿಂತಿತು ಜೀಪು. ಆರೆಂಟುಜನ ಪೊಲೀಸರು ಕೆಳಗೆ ದುಮುಕಿದರು. ದಿಕ್ಕಾಪಾಲಾಗಿ ಜನರು ಚದುರಿ ಮುಂದೆ ಓಡತೊಡಗಿದರು. ಅವರನ್ನು ಬೆನ್ನಟ್ಟಿದ ಪೊಲೀಸರು ಹಿಂದೆ ಓಡಿದರು. ಹಳ್ಳ, ಕೊಡ್ಲು, ಬರೆ, ಪಾಗಾರು, ಕಂಟ ಯಾವುದನ್ನೂ ಲೆಕ್ಕಿಸದೆ ಏಳುವುದು ಬೀಳುವುದು ಗಮನಕ್ಕೆ ತಂದಿಕೊಳ್ಳದೆ ಹಾರಿಹಾರಿ ಓಡಿದರು. ಪೊಲೀಸರು ನಾಲ್ಕಾರು ಜನರನ್ನು ಹಿಡಿದು ಜೀಪಿನಲ್ಲಿ ತುರುಕಿ ಹನ್ನಾವರಕ್ಕೆ ಒಯ್ದರು. ಇತ್ತ ಓಡುವ ಗಡಿಬಿಡಿಯಲ್ಲಿದ್ದ ತಿಮ್ಮ ಎದುರಾಗಿ ಬಂದ ಒಂದು ಕೊಡ್ಲನ್ನು ದಾಟುವಾಗ ಜಾರಿಬಿದ್ದು ಮೈಯೆಲ್ಲಾ ತೆರಿದು ಹೋಗಿ, ಕಾಲನ್ನು ಉಳುಕಿಸಿಕೊಂಡ. ಏನಿಲ್ಲೆಂದರೂ ರಿಪೇರಿ ಆಗವಲಿಕ್ಕೆ ಹದಿನೈದು ದಿನ ಬೇಕಿತ್ತು. ಸುಖದಲ್ಲಿ ಇದ್ದವನು ಸ್ವಾದನೆ ಮದ್ದು ತಗೊಂಡ ಅಂತಾರಲ್ಲ ಹಾಗಾಯಿತು ಅವನ ಪರಿಸ್ಥಿತಿ. ದುಡಿಯುವ ಒಂದು ಗಟ್ಟಿ ಆಧಾರವೆ ಸದ್ಯಕ್ಕೆ ತಿಮ್ಮನ ಕುಟುಂಬಕ್ಕೆ ಇಲ್ಲವಾಯಿತು. ಒಪ್ಪತ್ತಿನ ಊಟಕ್ಕೆ ಅವರು ಬಾಯ್ಬಿಡಬೇಕಾಯಿತು. ಪರಿಸ್ಥಿತಿ ಮನುಷ್ಯನನ್ನು ರೂಪಿಸುತ್ತದೆ ಎನ್ನುವುದು ಸುಳ್ಳಲ್ಲ. ಗಣಪು ಈಗ ಅನಿವಾರ್ಯವಾಗಿ ಕೆಲಸಕ್ಕೆ ಹೋಗಬೇಕಾಗಿ ಬಂತು. ಹುಟ್ಟಿದ ಮೇಲೆ ದೋಣಿ ನಡೆಸುವುದು, ಬೀಸುವುದು, ಗಾಳ ಹಾಕುವುದು ಬಿಟ್ಟರೆ ಬೇರೆ ಕಸಬು ಇವನು ಕಲಿತೇ ಇಲ್ಲ. ಹೊನ್ನಾವರಕ್ಕೆ ಹೋಗುವುದಾದರೆ ಇಳಿತ ಇರಬೇಕು, ಹಾಯಿ ಏರಿಸಬೇಕು. ಹಾಗಿದ್ದರೆ ಮಾತ್ರ ಅವನಿಂದ ಸಾಧ್ಯ. ಮೊದಲಿನ ತಾಕತ್ತು ಈಗ ಅವನಲ್ಲಿ ಇರಲಿಲ್ಲ. ಅಕಸ್ಮಾತ್ತು ಗಾಳಿ ಬಿದ್ದುಹೋದರೆ ಆರೆಂಟು ಮೈಲು ದೋಣಿ ಒತ್ತುವವನು ಯಾರು? ಯಾರಾದರೂ ದೋಣಿಗೆ ಸಾಮಾನು ಮೂಟೆ ಹಾಕಿದರ ಅದನ್ನು ಎತ್ತಿ ಹೊರುವವರ ತಲೆಗೆ ಏರಿಸಬೇಡವೆ? ಗಣಪುವೂ ಅತ್ತಿತ್ತ ಕಣ್ಣು ಹಾಯಿಸುವ ಹಾಗಾಯಿತು. ಅಂಥ ಸಮಯ ಸಾಧಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರಿಗೇನೂ ಕೊರತೆಯಿಲ್ಲ. ಒಳ್ಳೆಯದೋ ಕೆಟ್ಟದ್ದೋ ಅಂತೂ ಯೋಗಾಯೋಗವೆ ಅನ್ನಬೇಕು. ಈ ಸಮಯದಲ್ಲೇ ವಿಠ್ಠಲ ಹೆಗಡೆಯವರು ತಿಮ್ಮನನ್ನು ಕಾಣಲು ಬಂದದ್ದು. ಯಾವಾಗ್ಲೂ ಬರದೆ ಇದ್ದ ಹೆಗಡೆಯವರ ಸವಾರಿ ಮನೆ ಬಾಗ್ಲಿಗೆ ಬಂದದ್ದು ಕಂಡು ಏನೋ ವಿಶೇಷ ಅದೆ ಎಂದು ಊಹಿಸಿದರು. ಬಾಯುಪಚಾರದ ಮಾತುಗಳ ನಂತರ ಹೆಡಗೆಯವರು ಗಣಪುಗೆ ಸೂಕ್ಷ್ಮವಾಗಿ ತಾವು ಬಂದ ಕಾರ್ಯಭಾರವನ್ನು ತಿಳಿಸಿದರು. ತಿಮ್ಮನೂ ಮಲಗಿದಲ್ಲಿಂದಲೇ ಕೇಳಿಸಿಕೊಂಡ. ಅಪ್ಪ ಮಗ ಇಬ್ಬರೂ ಮುಖ ಮುಖ ನೋಡಿಕೊಂಡರು. ಹೆಗಡೆಯವರು ಕುಳಿತಿರುವಾಗಲೆ ಏನನ್ನೋ ಕೆಳಧ್ವನಿಯಲ್ಲಿ ಮಾತನಾಡಿಕೊಂಡರು. ನಂತರ ಹೆಗಡೆಯವರಿಗೆ, ಆಗುದ್ರಾ, ನಾಳೆ ಸಂಜೆ ಆಪಂಗೆ ನಿಮ್ಮನೆ ಹೊಳೆಬಾಗ್ಲಲ್ಲಿ ಕೂ… ಹಾಕ್ತೆ’ ಎಂದ ಗಣಪು.
2
ವಿಠ್ಠಲ ಹೆಗಡೆಯವರದ್ದು ಒಂದು ಸಣ್ಣ ದಂಧೆ ಇತ್ತು. ಬೆಟ್ಟದಲ್ಲಿ ದಡೆ ಕಟ್ಟಿ ನಾಟಾ ಕೊಯ್ಸಿ ಸಪ್ಲೈ ಮಾಡುತ್ತಿದ್ದರು. ಹೊಳೆಸಾಲಿನಲ್ಲಿ ಮುಕ್ಕಾಲು ಪಾಲು ಕಳ್ಳಕೊಯ್ತದ ಮಾಲು ಪುರುವಟೆ ಮಾಡುವವರು ಇವರೇ ಆಗಿದ್ದರು. ಆಯಕಟ್ಟಿನ ಜನರೆಲ್ಲ ಇವರ ಕಿಸೆಯೊಳಗೇ ಇದ್ದರು. ಹಾಗಾಗಿ ಇವರ ಈ ದಂಧೆ ಸುರಳೀತ ನಡೆಯುತ್ತಿತ್ತು.
ಈ ರೀತಿ ಕಳ್ಳ ಸಂಪಾದನೆ ಮಾಡುವವರ ಮೇಲೆ ಸಮಯ ನೋಡಿ ಹದ ಹಾಕಬೇಕು ಎಂದು ಹೊಂಚಿಕೊಂಡು ಇದ್ದವರಿಗೆ ಏನೂ ಕೊರತೆ ಇರಲಿಲ್ಲ. ಈಗಿತ್ತಲಾಗಿ ಹೆಗಡೆಯವರ ಮನೆಯಲ್ಲಿ ಪಾಲಾದ ಮೇಲೆ ಅವರೂ ಸ್ವಲ್ಪ ಎಚ್ಚರ ವಹಿಸುತ್ತಲೇ ಇದ್ದರು. ಇವರಿಗೂ ಇವರ ತಮ್ಮನಿಗೂ ಮನೆಯಲ್ಲಿ ಮನಸ್ತಾಪ ಬಂದು ಪಾಲುಪಟ್ಟಿ ಮಾಡಿಕೊಂಡಿದ್ದರು. ಒಂದೇ ಹಿತ್ತಲಲ್ಲಿ ಎರಡು ಮನೆ ಮಾಡಿಕೊಂಡು ತಮ್ಮಷ್ಟಕ್ಕೆ ತಮ್ಮನ್ನು ಬೆಳೆಸಿಕೊಳ್ಳುವುದು ಬಿಟ್ಟು ಇನ್ನೊಬ್ಬರ ಕೆಡಕಿಗೆ ಬುದ್ಧಿ ಉಪಯೋಗಿಸುತ್ತಿದ್ದರು. ಅಂಥದರಲ್ಲೂ ವಿಠ್ಠಲ ಹೆಗಡೆಯವರು ಈ ಕಳ್ಳ ದಂಧೆಯಲ್ಲಿ ಯಶಸ್ವಿಯಾದರು ಎಂದರೆ ಆಶ್ಚರ್ಯವೇ ಸರಿ.
ಹೆಗಡೆಯವರು ತಿಮ್ಮನ ಮನೆಗೆ ಬಂದುದೂ ಇದಕ್ಕೆ ಸಂಬಂಧಪಟ್ಟೇ ಆಗಿತ್ತು. ಹೊನ್ನಾವರದ ಬಿಕಾಸನ ತಾರಿ ಬುಡದಲ್ಲಿ ಒಬ್ಬರಿಗೆ ಒಂದು ದೋಣಿ ಮಾಲು ಸಪ್ಲೈ ಆಗಬೇಕಿತ್ತು. ಪಕಾಸು, ಜಂತಿ, ತೊಲೆ, ರೀಪು ಎಂದು. ಸ್ವಂತ ದೋಣಿಯವರೆಲ್ಲ ಇಷ್ಟು ದೂರ ಬರಲು ಹೆದರುತ್ತಿದ್ದರು. ಮತ್ತು ಹೆಗಡೆಯವರು ಕಾಯಂ ಒಂದೇ ದೋಣಿಗೆ ಹೇಳುತ್ತಿರಲಿಲ್ಲ. ಈ ಸಲ ಯಾರಿಗೆ ಹೇಳಬೇಕು ಎಂದು ವಿಚಾರ ಮಾಡಿ ಕೊನೆಗೆ ಅವರ ನರಿ ಬುದ್ಧಿಗೆ ತಿಮ್ಮನ ದೋಣಿ ಇದ್ದದ್ದು ನೆನಪಾಯಿತು. ಮೊದಲು ಎರಡು ಸಲ ಕೇಳಿ ಇಲ್ಲ ಅನ್ನಿಸಿಕೊಂಡಿದ್ದರು. ಸದ್ಯ ತಿಮ್ಮನ ಮನೆಯ ಪರಿಸ್ಥಿತಿಯಲ್ಲಿ ಕೈ ತುಂಬಾ ಬಾಡಿಗೆ ಸಿಗುತ್ತಿರುವಾಗ ಬರದೇ ಇರಲಾರ ಎಂದು ವಿಚಾರ ಮಾಡಿ ಬಂದಿದ್ದರು.
ಗಣಪು, ನನ್ನ ಹತ್ತಿರ ಅಷ್ಟೆಲ್ಲ ದೂರ ದೋಣಿ ಒತ್ತಲು ಸಾದ್ಯವಿಲ್ಲ ಎಂದುಬಿಟ್ಟ ಮೊದಲಿಗೆ.
ಹೆಗಡೆಯವರು ಅವನಿಗೆ, ನೀನು ದೋಣಿ ಮೇಲೆ ಸುಮ್ಮನೆ ಕುಳಿತುಕೊಂಡರೆ ಸಾಕು. ನಮ್ಮ ಜನರೇ ಒತ್ತುತ್ತಾರೆ. ಜೊತೆಗೆ ಸುಬ್ಬ ಫೊರೆಸ್ಟರ ದೋಣಿ ಮೇಲೆ ಬರುತ್ತಾನೆ. ಐವತ್ತು ರೂಪಾಯಿ ಕೊಡುತ್ತೇನೆ ಬಾಡಿಗೆ. ಒಂದು ರಾತ್ರಿ ಬೆಳಗಾಗುವುದರೊಳಗೆ, ವಿಚಾರ ಮಾಡು ಎಂದರು.
ಅಪ್ಪ ಮಗ ಇಬ್ಬರೂ ಮಾತನಾಡಿಕೊಂಡು ಸುಬ್ಬ ಫೊರೆಸ್ಟರ ದೋಣಿ ಮೇಲೆ ಬರುತ್ತಾನೆ ಅಂದರೆ ಏನೂ ತೊಂದರೆ ಇಲ್ಲ ಅನ್ನುವ ನಿರ್ಧಾರಕ್ಕೆ ಬಂದು ಹೂಂ ಅಂದರು. ಆ ಹೊತ್ತಿನಲ್ಲಿ ದೋಣಿ ಕೊಡುವಾಗ ದಾಸ ಪ್ರಭುರು ವಿಧಿಸಿದ್ದ ಶರ್ತು ಮರೆತು ಹೋಗಿತ್ತು.
ಇವರು ಇಲ್ಲಿ ದೋಣಿಗೆ ಮಾಲು ತುಂಬುವುದಕ್ಕೆ ಒಂದು ದಿನ ಇರಬೇಕಿದ್ದರೇ ಹೆಗಡೆಯವರ ತಮ್ಮನ ಅರ್ಜಿ ಬೆಳಗಾವಿಗೆ ಹೋಗಿ ಮುಟ್ಟಿತ್ತು. ಕೆಳಗಿನ ಅಧಿಕಾರಿಗಳಿಗೆ ತಿಳಿಸುವುದರಿಂದ ಏನೇನೂ ಪ್ರಯೋಜನವಿಲ್ಲ. ಸ್ವತಃ ಸ್ಕ್ವಾಡಿನವರೇ ಬರಬೇಕು ಎಂದು ಬರೆದಿದ್ದ,
ಬೆಟ್ಟಕ್ಕೂ ಹೊಳೆಗೂ ಒಂದು ಮೈಲು ಅಂತರ. ತಿಮ್ಮ ದೋಣಿಯನ್ನು ತಂದು ಹೊಳೆಬಾಗಿಲಲ್ಲಿ ಹಿಡಿದ ಕೂಡಲೆ ಹತ್ತು ಹದಿನೈದು ಜನರು ಸರಸರನೆ ಓಡಾಡಿ ಮಾಲನ್ನು ದೋಣಿಗೆ ತುಂಬಿದರು. ರಾತ್ರಿ ಹನ್ನೆರಡು ಗಂಟೆಗೆ ದೋಣಿಯನ್ನು ಬಿಟ್ಟರು. ಸುಬ್ಬ ಫೊರೆಸ್ಟರ ನಡುಮಧ್ಯದಲ್ಲಿ ಕುಳಿತಿದ್ದ. ಅವನಿಗೆ ಹತ್ತಿರದಲ್ಲೇ ಗಣಪು ಕವಳದ ಚಂಚಿ ಬಿಚ್ಚಿಕೊಂಡು ಕವಳ ಹಾಕುತ್ತ ಇಳಿಧ್ವನಿಯಲ್ಲಿ ಏನೋ ಸುದ್ದಿ ಮಾತನಾಡುತ್ತಿದ್ದ. ಹೆಗಡೆಯವರ ಆಳುಗಳು ಹುಟ್ಟುಹೊಡೆಯುತ್ತಲೂ ಜಲ್ಲದಿಂದ ಒತ್ತುತ್ತಲೂ ಇದ್ದರು.
ಸ್ಕೊಡಿನವರು, ನಾಟ ಕೊಯ್ಯುವವರ ಮಾತಿನಲ್ಲೆ ಹೇಳಬೇಕೆಂದರೆ ಕೊಡನವರು, ಆ ದಿನ ಮುಂಜಾನೆಯೆ ಬೆಳಗಾವಿಯಿಂದ ಬಂದು ಆಯಕಟ್ಟನ ಸ್ಥಳಗಳನ್ನು ಸದ್ದಿಲ್ಲದೆ ಆಕ್ರಮಿಸಿದ್ದರು. ಯಾವುದೇ ಕ್ಷಣದಲ್ಲಾದರೂ ದೋಣಿಯನ್ನು ಹಿಡಿಯುವ ಸಿದ್ಧತೆಯಲ್ಲಿ ಇದ್ದರು. ಆದರೂ ಮಾಲನ್ನು ಖರೀದಿಸುವವರು ಯಾರು ಎನ್ನುವುದನ್ನು ನೋಡುವುದರ ಸಲುವಾಗಿ ಸುಮ್ಮನಿದ್ದರು.
ಸುಮಾರು ಮೂರು ತಾಸು ಕ್ರಮಿಸಿದ ಮೇಲೆ ದೋಣಿ ಬಿಕಾಸನ ತಾರಿಗೆ ಬಂದು ಮುಟ್ಟಿತು. ಪೇದ್ರು ರೊಡ್ರಿಕ್ಸನ ಮನೆಯ ಹೊಳೆಬಾಗಿಲಿನಲ್ಲಿ ನಿಂತು ತೋಡಲು ಸುರು ಮಾಡಿದರು. ಆಗ ಅರ್ಧ ತಾಸು ಆಗಿರಬೇಕು. ಮೂರರಲ್ಲಿ ಒಂದು ಪಾಲು ಖಾಲಿ ಆಗಿತ್ತು. ಹತ್ತು ಹದಿನೈದು ಜನರು ಬ್ಯಾಟರಿಯೊಂದಿಗೆ ಹೊಳೆಬಾಗಿಲಿಗೆ ಬಂದು ಸುತ್ತುಗಟ್ಟಿದರು. ಸುಬ್ಬ ಫೊರೆಸ್ಟರನಿಗೆ ಮಾತ್ರ ಅವರು ಯಾರು ಎಂಬುದು ಹೊಳೆಯಿತು. ಉಳಿದವರಿಗೆ ಸುಳಿವು ಸಿಗುವ ಮೊದಲೇ ಒಂದಿಬ್ಬರು ನೀರಿನಲ್ಲಿ ಇಳಿದು ದೋಣಿಯನ್ನು ಹತ್ತಿ ನಿಂತರು. ಹಗಲಾಗಿದ್ದರೆ ಸುಬ್ಬ ಫೊರೆಸ್ಟರನ ಮುಖದ ಬಣ್ಣ ಎಲ್ಲರಿಗೂ ನೋಡಲು ಸಿಗುತ್ತಿತ್ತು. ಅವನು ಸಂಧಿಯಲ್ಲೇ ನುಸುಳಿ ಪಾರಾಗಲು ಪ್ರಯತ್ನಪಟ್ಟ. ಆದರೆ ಅವರು ರಟ್ಟೆ ಹಿಡಿದು ನಿಲ್ಲಿಸಿ ಛೀಮಾರಿ ಹಾಕಿ ಅವನ ಕೈಯಲ್ಲೇ ಮನೆಗಪ್ಪಣೆ ಪತ್ರವನ್ನು ದಯಪಾಲಿಸಿದರು. ಸುಬ್ಬ ಎಷ್ಟು ಬೇಡಿಕೊಂಡರೂ ಕರುಣೆ ತೋರಿಸಲಿಲ್ಲ. ಆ ರಾತ್ರಿಯಲ್ಲೇ ಪಂಚರನ್ನು ಸೇರಿಸಿ ಪಂಚನಾಮೆ ಮಾಡಿ ದೋಣಿ ಜಪ್ತು ಮಾಡಿದರು.
ವಿಠ್ಠಲ ಹೆಗಡೆಯವರು, ಮಾಲು ಹೋದರೆ ಹೋಗಲಿ ಎಂದು ಸುದ್ದಿಗೇ ಬರಲಿಲ್ಲ. ಗಣಪು ಮಾರನೇ ದಿನ ಸತ್ತ ಮೋರೆ ಮಾಡಿಕೊಂಡು ಹೆಗಡೆಯವರ ಮನೆಗೆ ಬಂದ. ದೋಣಿ ಹೊನ್ನಾವರದ ಬಂದರದಲ್ಲೇ ಇತ್ತು. ಹೇಗೂ ದೋಣಿ ಕೈತಪ್ಪಿತು ಎನ್ನುವುದು ಅವನಿಗೆ ಮನದಟ್ಟಾಗಿತ್ತು. ತಾನು ದಾಸ ಪ್ರಭುರ ದೋಣಿಯನ್ನು ಬಾಡಿಗೆ ಪಡೆದು ನಡೆಸುತ್ತಿದ್ದೆ ಎಂದು ಅವನು ಹೇಳಿಕೆ ಕೊಟ್ಟಿದ್ದ ಪಂಚನಾಮೆ ಮಾಡುವಾಗ. ದೋಣಿ ಪರತ್‌ ಪಡೆಯುವ ಹೊಣೆ ತಮಗಿರಲಿ ಎಂದು ಗಣಪುಗೆ ಸಮಾಧಾನ ಹೇಳಿ ಹೆಗಡೆಯವರು ಪ್ರಭುರ ಮನೆಗೆ ತಾವೇ ಹೋದರು.
ಪ್ರಭುರ ಹೆಸರು ರಾಮದಾಸ ಎಂದು. ರಾಮದಾಸ ಪ್ರಭು ಎನ್ನುವುದು ಕರೆಯಲಿಕ್ಕೆ ತುಂಬಾ ಉದ್ದವಾಗಿ ಜನರು ತಮ್ಮ ಅನುಕೂಲಕ್ಕಾಗಿ ಅವರ ಹೆಸರನ್ನು ಮೊಟಗೊಳಿಸಿ ದಾಸಪ್ರಭು ಎಂದಷ್ಟೇ ಕರೆಯುತ್ತಿದ್ದರು. ಹೆಗಡೆಯವರ ನರಿಬುದ್ಧಿ ಅದನ್ನೇ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿತು. ಗಣಪು ದಾಸಪ್ರಭುರ ದೋಣಿ ನಡೆಸುತ್ತಿದ್ದೆ ಅಂದಿದ್ದಾನಲ್ಲದೆ ರಾಮದಾಸ ಪ್ರಭುರ ದೋಣಿ ಎಂದು ಹೇಳಿರಲಿಲ್ಲ ಮತ್ತು ದೋಣಿಯ ನಂಬರನ್ನೂ ಹೇಳಿರಲಿಲ್ಲ. ಅದಕ್ಕಾಗಿ ರಾಮದಾಸ ಪ್ರಭುಗಳು ತಮ್ಮ ದೋಣಿ ನಿನ್ನೆ ಸಂಜೆ ಹೊಳೆಬಾಗಿಲಲ್ಲಿ ಕಟ್ಟಿದ್ದು ಯಾರೋ ಕದ್ದೊಯ್ದಿದ್ದಾರೆ ಎಂದು ಪೊಲೀಸು ಕಂಪ್ಲೇಟು ಕೊಡಬೇಕು ಎಂದರು. ವಿಚಾರಣೆಯ ಕಾಲಕ್ಕೆ ಗಣಪುಗೂ ತಮಗೂ ಪರಿಚಯವೇ ಇಲ್ಲವೆಂದು ಹೇಳಬೇಕು ಅಂದರು. ಪ್ರಭುಗಳು ಹಾಗೆಯೇ ಮಾಡಿದರು. ಅದಕ್ಕೂ ಮೊದಲು ತಿಮ್ಮನ ಮನೆಯವರಿಗೆ ಮನಸೋ ಇಚ್ಛೆ ಬೈದಿದ್ದರು. ನಾಲ್ಕಾರು ತಿಂಗಳು ಕೋರ್ಟು ಮನೆ ತಿರುಗಿದ ಮೇಲೆ ದೋಣಿ ಸಿಕ್ತು ಅಂತ ಆಯ್ತು.
ಪ್ರಭುರು ದೋಣಿಯನ್ನು ಈಗ ಯಾರಿಗೂ ಕೊಡಲಿಲ್ಲ. ಹಾಗೇ ಎಳೆಯಿಸಿ ಮೇಲೆ ಇಟ್ಟುಬಿಟ್ಟಿದ್ದರು. ಮಳೆಗಾಲದಲ್ಲಿ ತಿಮ್ಮ ಮನೆಗೆ ಬಂದು ದೋಣಿ ಕೊಡದಿದ್ದರೆ ನಾವು ಹೊಟ್ಟೆಗೆ ಇಲ್ದೆ ಸಾಯ್ತೇವೆ ಎಂದು ದಮ್ಮಯ್ಯ ದತ್ತಯ್ಯ ಹಾಕಿದ. ಗಣಪು ದೋಣಿ ಕದ್ದ ಎಂದು ಕೋರ್ಟಿನಲ್ಲಿ ನಿರ್ಣಯವಾಗಿ ಅವನಿಗೆ ಒಂದು ತಿಂಗಳ ಶಿಕ್ಷೆ ಆಗಿತ್ತು. ಇವರ ಸೊಕ್ಕು ಈಗ ಸ್ವಲ್ಪ ಮುರಿದಿದೆ ಎಂದು ಪ್ರಭುರಿಗೆ ಕಂಡುಬಂದ ಮೇಲೆ ಹೇಳಿದರು,
ಇಲ್ಲೇ ಬಂದು ದೋಣಿ ಮೇಲೆ ಕೆಲಸ ಮಾಡು ಪಗಾರ ತಗೊಂಡು ಹೋಗು. ಮನೆಗೆ ಮಾತ್ರ ದೋಣಿ ಕೊಡುವುದಿಲ್ಲ. ಹೀಗೆ ಕಡ್ಡಿ ಮುರಿದಂಗೆ ಹೇಳಿದೆ ಅಂತ ಬೇಜಾರು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮನಮ್ಮ ಸುರಕ್ಷಿತತೆ ನಾವು ನೋಡ್ಕೋಬೇಡ್ವಾ?' 3 ಮೊಟ್ಟೆಯಲ್ಲೇ ಸ್ವರಗೆಯ್ಯುವ ಸ್ವಭಾವ ತಿಮ್ಮನದಲ್ಲ. ಹಾಗಾಗಿ ನಾಲ್ಕು ಜನ ಮನಸ್ಸಿನಲ್ಲಾದರೂ ಅವನನ್ನು ಮೆಚ್ಚಿಕೊಳ್ಳುತ್ತಿದ್ದರು. ಅವನ ದಾಕ್ಷಿಣ್ಯದ ಗುಣಕ್ಕಾಗಿಯೇ ಇರಬೇಕು, ದಾಸಪ್ರಭುರು ಅವನಿಗೆ ತಿರುಗಿ ದೋಣಿ ಕೊಟ್ಟಿದ್ದು. ಅಷ್ಟರೊಳಗೆ ಏಳೆಂಟು ವರುಷಗಳು ಆಗಿದ್ದವು. ತಿಮ್ಮನ ಮೇಲಿದ್ದ ಅಸಮಾಧಾನ ಈಗ ಕಡಿಮೆಯಾಗಿತ್ತು. ತಿಮ್ಮನ ಕುಟುಂಬದಲ್ಲೂ ಬಹಳಷ್ಟು ಬದಲಾವಣೆಯಾಗಿತ್ತು. ದೇವಿಗೆ ಲಕ್ಷ್ಮಿಯಲ್ಲದೆ ಇನ್ನೂ ಎರಡು ಹೆಣ್ಣು ಮಕ್ಕಳು ಮತ್ತು ಮೂರು ಜನ ಗಂಡು ಮಕ್ಕಳು ಆಗಿದ್ದರು. ಈ ನಡುವೆ ಗಣಪು ಸತ್ತು ಹೋಗಿದ್ದ. ದೇವಿಗೆ ಮೇಲಿಂದ ಮೇಲೆ ಇಲ್ಲದ ಸೀಕು ಬಂದು ವಕ್ರಿಸುತ್ತಿತ್ತು. ಜೀವನದ ಸಂಗಾತಿಯಲ್ಲಿ ಕಂಡುಣ್ಣುವ ಹೊಸತನವೇನೂ ತಿಮ್ಮನಿಗೆ ಇದ್ದಿರಲಿಲ್ಲ. ಕುಟುಂಬದಲ್ಲಿ ಹಿರಿಯವಳೇ ಹೆಣ್ಣು. ಕಾಣುಕಾಣುತ್ತಿರುವಾಗಲೇ ಮದುವೆಗೆ ನೆರೆದುಬಿಡುತ್ತಾರೆ ಅವರು. ಸಲ್ಲದ ಆಲೋಚನೆಯಲ್ಲಿ ತಿಮ್ಮ ಸದಾಕಾಲ ಮಗ್ನ. ದೇವಿಗೆ ಮನೆಯಲ್ಲಿ ಮಕ್ಕಳನ್ನು ಸಂಬಾಳಿಸಿಕೊಂಡು ಇರುವುದೆ ಹೆಚ್ಚಿನದಾಗಿರುತ್ತಿತ್ತು. ಹತ್ತು ವರುಷದ ಲಕ್ಷ್ಮಿ ಯಾರೊಟ್ಟಿಗಾದರೂ ಬಳಚು ತೆರಿಯಲು ಹೋಗುತ್ತಿದ್ದಳು. ಸೊಂಟದ ಮಟ್ಟಕ್ಕಿಂತಲೂ ಹೆಚ್ಚಿನ ನೀರಿನಲ್ಲಿ ನಿಂತು ಬಗ್ಗಿ ಬಲೆಯ ಕುಂಟ್ಲದ ತುಂಬ ತಳದ ಹೊಯ್ಗೆಯನ್ನೋ ಕೆಸರನ್ನೋ ತುಂಬಿ ಮೇಲೆತ್ತಿ ಅಲುಬಿ ಎಂಟ್ಹತ್ತು ಬಳಚನ್ನು ಹೆಕ್ಕಿ ಬೆನ್ನಿಗೆ ಕಟ್ಟಿಕೊಂಡ ಚೀಲದೊಳಗೆ ಇಳಿಸುತ್ತಿದ್ದ ಅವಳನ್ನು ಕಂಡು ಬೀಸಲು ಹೋಗುತ್ತಿದ್ದ ತಿಮ್ಮನಿಗೂ ಒಮ್ಮೊಮ್ಮೆ ಅಯ್ಯೋ ಅನಿಸುತ್ತಿತ್ತು. ಕುಟುಂಬದ ನಿರ್ವಹಣೆಗೆ ಆಕೆಯೂ ತನ್ನ ಪಾಲನ್ನು ಸಲ್ಲಿಸುತ್ತಿರುವುದು ಕಂಡು ಅವನಿಗೆ ಸಂತೋಷವೂ ಅನ್ನಿಸುತ್ತಿತ್ತು. ಹೀಗೆ ದಿನಗಳನ್ನು ತಳ್ಳುತ್ತಿರುವಾಗಲೆ ತಿಮ್ಮ ಎಂಟ್ಹತ್ತು ಜನರೊಡನೆ ದಾಸ ಪ್ರಭುರ ಮನೆಯ ಹತ್ತಿರದ ಕೋಡಿ ಇರಿಯಲು ಹೋಗಿದ್ದು. ಹುಣ್ಣಿಮೆ ಜಾಗ ಅಗಧಿ ಕೊರೆ ಹೋಗಿತ್ತು. ಇಡೀ ಕೋಡಿಯನ್ನು ಯಾವ ಅಂದಾರೂ ಇಲ್ಲದೆ ಹಾದಾಡಬಹುದಿತ್ತು. ಇವರು ಪ್ರತಿಯೊಬ್ಬರೂ ಒಂದೊಂದು ಇರುಕುಳಿಯನ್ನು ಹೆಗಲ ಮೇಲೆ ಹೊತ್ತು ತಂದಿದ್ದರು. ಎಲ್ಲರೂ ನೀರಿಗಿಳಿದು ಒಮ್ಮೊಮ್ಮೆ ಒಂದೊಂದು ವ್ಯೂಹವನ್ನು ಮಹಾಭಾರತ ಯುದ್ಧದಲ್ಲಿ ರಚಿಸಿಕೊಂಡಂತೆ, ರಚಿಸಿಕೊಳ್ಳುತ್ತ ಇರುಕುಳಿಯನ್ನು ಎತ್ತೆತ್ತಿ ನೀರಿನಲ್ಲಿ ಇಳಿಸುತ್ತಿದ್ದರು. ಒಮ್ಮೆ ಅರ್ಧಚಂದ್ರ, ಒಮ್ಮೆ ಚಕ್ರ, ಒಮ್ಮೆ ಮೊಸಳೆ, ಒಮ್ಮೆ ರೆಕ್ಕೆ ಬಿಚ್ಚಿದ ಹಕ್ಕಿ ಹೀಗೆ ವಿವಿಧ ವ್ಯೂಹಗಳಲ್ಲಿ ಇರುಕುಳಿಗಳು ಇಳಿಯುತ್ತಿದ್ದುದರಿಂದ ಹೆದರಿ ಕಂಗಾಲಾಗಿ ಓಡುತ್ತಿದ್ದ ಮೀನುಗಳು ಯಾರದಾದರೂ ಇರುಕುಳಿಯಲ್ಲಿ ಸಿಕ್ಕಿ ಬೀಳುತ್ತಿತ್ತು. ಮೀನು ಒಳಗೆ ಸಿಕ್ಕಿದ ಕೂಡಲೆ ಗೊತ್ತಾಗಿಬಿಡುತ್ತದೆ. ಮೇಲ್ಭಾಗದ ಸಪುರು ಬಾಯಿಂದ ಕೈ ತೂರಿಸಿ ಮೀನನ್ನು ಹಿಡಿಯುತ್ತಿದ್ದರು. ತಿಮ್ಮ ಅವತ್ತು ನರಿ ಮುಖ ನೋಡಿ ಬಂದಿದ್ದ ಅಂತ ಕಾಣುತ್ತದೆ. ಉಳಿದವರಿಗಿಂತ ಹತ್ತು ಹೆಚ್ಚು ಅವನಿಗೆ ಸಿಕ್ಕಿತ್ತು. ದಾಸ ಪ್ರಭುರು ಹೊಳೆಬದಿಗೆ ಬಂದು ನಿಂತು ಇವರು ಕೋಡಿ ಇರಿಯುವುದೆ ನೋಡುತ್ತಿದ್ದರು. ತಿಮ್ಮ ಹತ್ತಿರ ಬಂದು ಒಡಿದೀರ್‌ಗೆ ಮೀನ್‌ ಬೇಕೆನ್ರಾ?’ ಅಂದ.
ಬೇಕಾಗಿತ್ತು. ನೀ ಎಲ್ಲಿ ಕೊಡ್ತ್ಯೋ?' ಅಂದರು ಪ್ರಭುಗಳು. ತಿಮ್ಮ ಅದಕ್ಕೆ ಏನೂ ಉತ್ತರಿಸದೆ ನೀರಿನಿಂದ ಮೇಲೆ ಬಂದು ಅಲ್ಲೇ ಇದ್ದ ತೆಂಗಿನ ಸಸಿಯೊಂದರ ಒಂದು ಜಮೆ ಹರಿದು ಹಾಳಿ ಕೊಟ್ಟೆಯಲ್ಲಿ ಇದ್ದ ಮೀನನ್ನೆಲ್ಲ ನೆಲಕ್ಕೆ ಸುರುವಿ ಪ್ರಭುಗಳು ತಿನ್ನುವಂಥ ಮೀನನ್ನೆ ಹತ್ತೆನ್ಹೆರಡು ಹೆಕ್ಕಿ ಒಂದು ಕೊವೆ ತಯಾರಿಸಿಇಕ್ಕೊಳ್ಳಿ’ ಎಂದ.
ಹಾಗೇ ತಕ್ಕಂಡಿ ಮನಿಗೆ ಬಾರೋ. ಕವಳ ಹಾಕ್ಕೊಂಡು ಹೋದ್ರಾಯ್ತು' ಎಂದರು ಪ್ರಭುಗಳು. ತಿಮ್ಮನ ದೇಹದಲ್ಲಿ ಬಹಳಷ್ಟು ಬದಲಾವಣೆ ಆದದ್ದು ಪ್ರಭುಗಳಿಗೆ ಕಂಡು ಬಂತು. ಅವನ ಮನೆಯ ಸುದ್ದಿ ಸುಖಾಲು ಎಲ್ಲ ಕೇಳಿದರು. ತಿಮ್ಮನ ಸದ್ಯದ ಪಾಡು ಕೇಳುವವರಿಗೆ ಪಾಪ ಅನ್ನಿಸುವಂಥದ್ದೇ ಆಗಿತ್ತು. ಮಾತಿನ ನಡುವೆ ತಿಮ್ಮ ದೋಣಿ ವಿಷ್ಯಾನೂ ಕೇಳ್ದ. ನೀನು ಹಿಂದಿನಂಗೆ ಏನೂ ಬಾನ್ಗಡಿ ಮಾಡ್ದೆ ಸುರಳೀತ ನಡೆಸಿಕೊಂಡು ಬರುವುದಾದರೆ ಕೊಡಲಿಕ್ಕೆ ನಂದೇನು ತೊಂದರೆ ಇಲ್ಲ. ಆದ್ರೆ, ನಿಮ್ಮ ನಂಬೂಕೇ ಬರೂದಿಲ್ಲ. ಎಷ್ಟು ಹೊತ್ತಿಗೆ ಏನ್‌ ಮಾಡ್ತೀರಿ ಅಂಬೂದು ತಿಳಿಯುವುದೇ ಇಲ್ಲ’ ಎಂದರು ಪ್ರಭುಗಳು.
ತಿಮ್ಮ ಸೂಕ್ತ ಸಮಾಧಾನ ಹೇಳಿದ ಮೇಲೆ ಪ್ರಭುರು, ಹಾಗಾದರೆ ನಾಳ್ದಿಕೆ ಬಾ. ಎಣ್ಣೆ, ಚಂದ್ರಾಸ, ಹುರುಮುಂಜಿ ಎಲ್ಲ ತಂದಿಡುತ್ತೇನೆ. ನೀನು ಬರಬೇಕಿದ್ದರೆ ಸಾವೇರನ ಮನೆ ಹೊಕ್ಕಿ ಸುಣ್ಣದ ಚಿಂಪಿ ತಗೊಂಡ್ಬಾ. ಅದೇ ದಿನ ಸುಣ್ಣ ಮಾಡಿ ಮುಗಿಸಿ ಬಿಟ್ರೆ ಆಯ್ತು' ಎಂದರು. ತಿಮ್ಮ ಆಗೂದು’ ಎಂಬಂತೆ ತಲೆ ಆಡಿಸಿ ಅವರು ಮೀನಿನ ಲೆಕ್ಕಕ್ಕೆ ಕೊಟ್ಟ ಹಣವನ್ನು ತೆಗೆದುಕೊಳ್ಳದೆ, ಅವರು ಕೊಟ್ಟ ಕವಳ ಮಾತ್ರ ಬಾಯಿಗೆ ಹಾಕಿಕೊಂಡು ಹೊರಗೆ ಬಿದ್ದ.
ಎರಡು ದಿನದ ನಂತರ ಬಂದು ಪ್ರಭುರು ತಂದಿಟ್ಟ ಹೊನ್ನೆಣ್ಣೆಯನ್ನು ದೋಣಿಯ ಹೊಟ್ಟೆಗೆ ಹಾಕಿ ಚೆನ್ನಾಗಿ ಉದ್ದಿ ಸಾಕಾಗುವಷ್ಟು ಕುಡಿಸಿದ. ನಂತರ ಹೊನ್ನೆಣ್ಣೆಯಲ್ಲಿ ಚಂದ್ರಾಸವನ್ನು ಸೇರಿಸಿ ಕುದಿಸಿ ಬಾಣಿಗೆಗೆ ಬಳಿಯಲು ಕಡತಾನ ತಯಾರು ಮಾಡಿದ. ಅಷ್ಟಾದ ಮೇಲೆ ದೋಣಿಯನ್ನು ಕುವುಂಚಿ ಹಾಕಿದರು. ಅದರ ಬೆನ್ನಿಗೆ ಬಳಿಯುವುದು ಸುಣ್ಣ. ಸುಣ್ಣ ಅಂದರೆ ಎಲೆ ಅಡಕೆ ಜೊತೆ ಉಪಯೋಗಿಸುವ ಸುಣ್ಣವಲ್ಲ. ಅದನ್ನು ತಯಾರಿಸುವ ರೀತಿಯೇ ಬೇರೆ ಇದೆ.
(ಮೊದಲು ಸುಣ್ಣದ ಚಿಂಪಿಗಳನ್ನು ತಂದು ಒಂದು ಗೋಣಿಯ ಮೇಲೆ ಹರಡಿ ಅದಕ್ಕೆ ನೀರು ಚಿಮುಕಿಸುತ್ತಾರೆ. ಆಮೇಲೆ ಅದನ್ನು ಒಟ್ಟುಮಾಡಿ ಗೋಣಿಯನ್ನು ಮಡಚಿ ಬಿಸಿಲಿಗೆ ಇಟ್ಟು ಒಜ್ಜೆಗೆ ಒಂದು ಕಲ್ಲು ಹೇರುತ್ತಾರೆ. ಇದೇ ರೀತಿ ಅದನ್ನು ಬಿಸಿಲಲ್ಲಿ ಎರಡು ತಾಸು ಇದ್ದರೆ ಹುಡಿಯಾಗುತ್ತದೆ. ಆ ಹುಡಿಯನ್ನು ಸಾಣಿಗೆಯಿಂದ ಸಾಣಿಸಿ ಜರಿಯನ್ನು ತೆಗೆದು ಹಾಕುವರು.
ಈ ರೀತಿ ತಯಾರಿಸಿದ ಸುಣ್ಣದ ಹಿಟ್ಟನ್ನು ತಿಮ್ಮ ಒಂದು ಕೊಳಗ ತೆಗೆದುಕೊಂಡು ಅದಕ್ಕೆ ಎರಡು ಶಿದ್ದೆ ಹೊನ್ನೆಣ್ಣೆ ಮತ್ತು ಐದು ತೊಲೆ ಹುರುಮುಂಜಿ, ಬಣ್ಣಕ್ಕಾಗಿ ಸೇರಿಸಿ ಒರಳಲ್ಲಿ ಹಾಕಿ ಮೆರಿದು ಉಂಡೆ ತಯಾರಿಸಬೇಕು.)
ಪ್ರಭುರ ಮನೆಯಲ್ಲಿ ಇದನ್ನು ಮೆರಿಯಲಿಕ್ಕಾಗಿಯೇ ಹಳೆಯದಾದ ಒಂದು ಬೀಸುವ ಒರಳನ್ನು ತೆಗೆದು ಬದಿಗಿರಿಸಿದ್ದರು. ತಿಮ್ಮ ಅದರ ಮುಂದೆ ಹೋಗಿ ಕುಳಿತು ಹಿಡಿಹಿಡಿ ಸುಣ್ಣವನ್ನು ಒರಳಲ್ಲಿ ಹಾಕಿ ಹನಿಹನಿ ಹೊನ್ನೆಣ್ಣೆಯನ್ನು ಅದರ ಮೇಲೆ ಹನಿಸುತ್ತ ಚಿಟಿಕೆ ಹುರುಮುಂಜಿಯನ್ನು ಅದರೊಳಗೆ ಬೆರೆಸುತ್ತ ಕಬ್ಬಿಣದ ಹಾರಿಮುಂಡದಿಂದ ಜಪ್ಪಿ ಜಪ್ಪಿ ಹದತರತೊಡಗಿದ. ಸುಣ್ಣದಲ್ಲಿ ಎಣ್ಣೆಯ ಜೊತೆಗೆ ತಿಮ್ಮನ ಕೆನ್ನೆಯ ಮೇಲಿಂದ ಹರಿದು ಗದ್ದದ ಕೊನೆಯಲ್ಲಿ ಹನಿಯಾಗಿ ಉರುಳಿದ ಬೆವರೂ ಬೆರೆತಿತ್ತು.
4
ತಿಮ್ಮನ ಹುಡುಗರು ಬೆಳೆಯುತ್ತಿರುವಂತೆಯೇ ಆಚೀಚೆ ಬದಲಾವಣೆ, ಸುಧಾರಣೆಗಳು ಆಗದೆ ಇರಲಿಲ್ಲ. ಅದರ ಪರಿಣಾಮಗಳು ತಿಮ್ಮನ ಕುಟುಂಬದ ಮೇಲೆಯೂ ಸಹಜವಾಗಿಯೇ ಆದವು. ಹೊಳೆಯಲ್ಲಿ ಜನರನ್ನು ಸಾಗಿಸಲು ಪರವಾನಗಿ ಪಡೆದ ಎರಡು ಲಾಂಚುಗಳು ಬಹಳ ಕಾಲದಿಂದ ಇದ್ದವು. ಅವರೊಡನೆ ಪೈಪೋಟಿ ನಡೆಸಿ ದೋಣಿಯವರು ಒಂದು ಮಟ್ಟಕ್ಕೆ ಬಂದು ನಿಂತು ಉಸಿರು ಬಿಡುವಷ್ಟರಲ್ಲೇ ನದಿಯ ಇಕ್ಕೆಲಗಳಲ್ಲಿಯೂ ರಸ್ತೆ ಆಗಿ ಊರೂರಿಗೆ ಬಸ್ಸು ಬರಲು ಆರಂಭಿಸಿತು. ಇದರ ಬಿಸಿ ದೋಣಿಯವರಿಗಷ್ಟೇ ಅಲ್ಲ, ಲಾಂಚಿನವರಿಗೂ ತಟ್ಟಿತು. ಹತ್ತುವ ಜನರೇ ಕಡಿಮೆಯಾದರು. ಬಸ್ಸಿನ ಸೌಕರ್ಯ ಇಲ್ಲದ ಬ್ಯಾಲೆ, ಕುರ್ವಿ, ಮೊಟೆಗಳ ಜನರನ್ನಷ್ಟೇ ಈ ದೋಣಿಯವರು ಅವಲಂಬಿಸಬೇಕಾಯಿತು. ಲಾಂಚಿನವರಿಗೆ ಅವರೂ ಸಿಗುತ್ತಿರಲಿಲ್ಲ. ಏಕೆಂದರೆ ಅಲ್ಲೆಲ್ಲ ನೀರು ಬಹಳ ಕಡಿಮೆ ಇರುತ್ತಿದ್ದು ಹೊದ್ದ ಒಯ್ಯಲು ಆಗುತ್ತಿರಲಿಲ್ಲ.
ಹೊನ್ನಾವರದ ಅಡುಬಡುಬೆ ಐದಾರು ಹಂಚಿನ ಕಾರ್ಖಾನೆಗಳು ತಲೆ ಎತ್ತಿದ್ದವು. ಇದರಿಂದಾಗಿ ಆ ಭಾಗದ ಅನೇಕ ಜನರಿಗೆ ಉದ್ಯೋಗ ದೊರೆತದ್ದಲ್ಲದೆ ತೀರದ ಎಲ್ಲ ದೊಡ್ಡ ದೊಡ್ಡ ದೋಣಿಗಳವರಿಗೂ ಕೆಲಸ ಸಿಕ್ಕಿತು. ಹಲಗೆ ದೋಣಿ, ಪಡಾವು, ಪಾಂಡಿ ಎಲ್ಲ ಕಾರ್ಖಾನೆಗೆ ಮಣ್ಣು ತುಂಬಿ ತರಲು ಉಪಯೋಗಕ್ಕೆ ಬಂತು. ಹಾಗಾಗಿ ದೊಡ್ಡ ದೋಣಿಯವರಿಗೆ ಆದ ಅನುಕೂಲದಲ್ಲಿ ಚಿಕ್ಕ ದೋಣಿಯವರೂ ಪಾಲು ಪಡೆದುಕೊಂಡರು. ಸ್ವಂತ ಸಣ್ಣ ದೋಣಿ ಇದ್ದವರು ಅನಿವಾರ್ಯವಾಗಿ ನಡೆಸತೊಡಗಿದರು. ಬಾಡಿಗೆ ದೋಣಿ ನಡೆಸುವವರು ಅದನ್ನು ಬಿಟ್ಟು ಈ ದೊಡ್ಡ ದೋಣಿಗಳಲ್ಲಿ ಕೆಲಸಕ್ಕೆ ಸೇರಿದರು. ಅದು ಆರ್ಥಿಕವಾಗಿ ಲಾಭದಾಯಕವಾಗಿತ್ತು.
ತಿಮ್ಮ ಸುಮಾರಾಗಿ ಕೈಕೆಲಸಕ್ಕೆ ಬಂದ ತನ್ನ ಹಿರಿಯ ಮಗ ರಾಮನನ್ನು ಒಂದು ದೋಣಿಗೆ ಕಳುಹಿಸಿದ. ಪಗಾರದ ಆಸೆ ಏನೂ ಇರಲಿಲ್ಲವಾದರೂ ಅವನ ಊಟ ಪರಸ್ಪರ ಹೋಗಿ ಕೆಲಸವಾದರೂ ಕಲಿತಾನಲ್ಲ ಎನ್ನುವ ದೂರಾಲೋಚನೆ ತಿಮ್ಮನದು.
ಇತ್ತಿತ್ತಲಾಗಿ ಯಾಂತ್ರೀಕೃತ ದೋಣಿ, ವಿಶಿಷ್ಟವಾಗಿ ತಯ್ಯಾರು ಆದ ಲಾಂಚುಗಳು ಸಮುದ್ರಕ್ಕೆ ಬಲೆ ಒಯ್ಯುತ್ತಿದ್ದವು. ಒಂದು ದಿನ ಬಲೆ ಇಳಿಸಿದರೆ ಚೆನ್ನಾಗಿ ಮೀನು ಬಿತ್ತು ಎಂದರೆ ತಿಂಗಳು, ಹದಿನೈದು ದಿನವಾದರೂ ಮೀನನ್ನು ತೆಗೆದು ಪೂರೈಸಲು ಆಗುತ್ತಿರಲಿಲ್ಲ. ಅಂದಹಾಗೆ ಬಲೆಗಳೂ ಇಪರಮಿತ ದೊಡ್ಡವು ಇರುತ್ತಿದ್ದವು.
ಸದ್ಯಕ್ಕೆ ಅವು ನದಿಗಳಲ್ಲಿ ಬಲೆ ಎಲಳೆಯಲು ಪ್ರತಿಬಂಧ ಇತ್ತು. ಹಾಗಾಗಿ ನದಿಯಲ್ಲಿ ಗಾಳ ಹಾಕುವವರು, ಬರೆ ಬೀಸುವವರು, ಬೆಪ್ಪಿಗೆ ಹೋಗುವವರು ಅವರಿಗೆಲ್ಲ ನೇರವಾದ ಹೊಡೆತ ಬೀಳಲಿಲ್ಲ. ಹೊಳೆ ಮೀನಿನ ರುಚಿ ಸಮುದ್ರದ ಮೀನಿಗೆ ಇಲ್ಲ ಅನ್ನುವುದಂತೂ ಕರೆ. ಆದರೂ ಈ ಮೀನಿನ ಬೇಡಿಕೆ ಕುಸಿಯಿತು. ಸಹಜವಾಗಿಯೇ ಹೊಳೆ ಮೀನಿನ ದರ ಇಳಿಯಿತು. ಇದರಿಂದಾಗಿ ಕೇವಲ ಮೀನು ಹಿಡಿದು ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದ್ದವರು ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಾಯಿತು. ಅಂಥವರು ಮೀನು ವ್ಯಾಪಾರ ಪ್ರಾರಂಭಿಸಿದರು.
ಮೀನು ವ್ಯಾಪಾರ ಅಂದರೆ, ಸಮುದ್ರದಿಂದ ಲಾಂಚುಗಳ ಮೇಲೆ ತಂದ ಮೀನನ್ನು ಇವರು ಖರೀದಿಸಿ ತಮ್ಮ ದೋಣಿಗಳಲ್ಲಿ ಹೇರಿಕೊಂಡು ನದಿ ತೀರದ ಜನರಿಗೆ ಮಾರುವುದು. ವ್ಯಾಪಾರ ನಗದಿಯಾದರೆ ಒಳ್ಳೆಯ ಲಾಭದ್ದೇ ಅದು.
ತಿಮ್ಮನಿಗೆ ಈಗೀಗ ಹೊನ್ನಾವರ ಬಾಡಿಗೆ ಮಾಡುವ ಉಮೇದಿ ಇಳಿಮುಖವಾಗಿದೆ. ಸಂಸಾರದ ನಿರ್ವಹಣೆಗೆ ಏನಾದರೂ ಕಟಾಕುಟಿ ಮಾಡಬೇಕಾಗಿತ್ತು. ಹಾಗಾಗಿ ಲಾಭನೋ ಲುಕ್ಸಾನೋ ಯಾವುದಾದರೊಂದು ಉದ್ಯೋಗಕ್ಕೆ ತನ್ನನ್ನು ತಾನೆ ತೊಡಗಿಸಿಕೊಳ್ಳುತ್ತಿದ್ದ. ತಿಮ್ಮನ ಹಿರಿಯ ಮಗಳು ಲಕ್ಷ್ಮಿ ಈಗ ಮದುವೆಗೆ ನೆರೆದಿದ್ದಳು. ಪ್ರೀತಿಯ ಮಗಳು ದೊಡ್ಡ ಸಮಸ್ಯೆಯಾಗಿ ಕಂಡಳು ತಿಮ್ಮನಿಗೆ.
ಲಕ್ಷ್ಮಿಯೇನು ಕುರೂಪಿ.ಲ್ಲ. ಆಕೆಯನ್ನು ಒಲ್ಲೆ ಎನ್ನುವ ಗಂಡುಗಳು ಅವರ ಜಾತಿಯಲ್ಲಿ ಯಾರೂ ಇರಲಿಲ್ಲ. ಹುಡುಗನಿಗೆ ಒಬ್ಬ ಹುಡುಗಿ, ಹುಡುಗಿಗೆ ಒಬ್ಬ ಹುಡುಗ ಎಂದು ಬಾಯಲ್ಲಿ ಹೇಳಿದರೂ ಬರಿ ಪುಕ್ಕಟೆ ಮದುವೆಯಾಗುತ್ತದೆಯೆ? ನೆಂಟರು, ಇಷ್ಟರು, ಬಳಗದವರು ಸಂದು ಸುಳಿ ಎಲ್ಲ ಹುಡುಕಿ ಕರೆದು ಪಾಯಸ ಹಾಕಿಸಬೇಡವೆ? ಅದಕ್ಕೆ ಖರ್ಚು ಇಲ್ಲವೆ? ತಿಮ್ಮ ಇದೇ ಚಿಂತೆಯಲ್ಲಿ ಇರುವಾಗಲೆ ದಾಸಪ್ರಭುರ ಮನೆಯ ಒಳಗೆ ಹೊಕ್ಕಿದ್ದ.
ಅದೇನೋ ಯೋಗ ಚೆನ್ನಾಗಿತ್ತು ಅಂತ ಕಾಣುತ್ತದೆ. ಪ್ರಭುಗಳು ತಿಮ್ಮನ ಚಿಂತೆಯ ಕಾರಣ ವಿಚಾರಿಸಿದರು. ತಿಮ್ಮ ತಲೆ ತುರಿಸಿಕೊಳುತ್ತಲೆ,
ನಮ್ಮನಿ ಮಗು ಒಂದು ಮದ್ವಿಗೆ ನೆರ್ದು ನಿಂತದೆ. ಈ ವರ್ಷ ಮದಿ ಮಾಡ್ದೆ ಹೋದರೆ ಊರಲ್ಲಿ ಮುಖ ಎತ್ಕೊಂಡಿ ತಿರ್ಗುವಂಗಿಲ್ಲ. ಮದಿ ಎಬ್ಸಗಂಡರೆ ನನ್ನ ಹತ್ತರೇನು ಸುಧಾರ್ಸಲಿಕ್ಕೆ ಆಗ್ತದ್ಯಾ?' ಎಂದ. ಎಲ್ಲಿ ಗಂಡು ನೋಡಿದ್ಯೆಯೇನೋ?’
ಗಂಡಿಗೆ ಎಂಥಾ ಬರಗಾಲ್ರಾ? ನಾವು ತಯ್ಯಾರಿ ಮಾಡ್ಕಡ್ರೆ ಎಂಟೇ ದಿನದಲ್ಲಿ ಗಂಡು ಹುಡ್ಕಿ ಮದುವೆನೂ ಮುಗಿಸಬಹುದು.' ನಿನ್ನ ಧೈರ್ಯ ಬೇಕಾರೆ ಸೈ, ಯಾರಾದ್ರೂ ಮೆಚ್ಕಂಬೇಕು. ಮದುವೆಯಂಥ ಕೆಲಸಕ್ಕೆ ಸಹಾಯ ತನ್ನಾರೆ ಒದಗಿ ಬರ್ತದೆ. ನೀನು ಗಂಡು ನೋಡು. ಈ ಮದ್ವಿ ಜವುಳಿ ನಾ ಬೇಕಾದ್ರೆ ತೆಗೆಸಿ ಕೊಡ್ತೆ. ದುಡ್ಡು ನೀನು ಯಾವಾಗೂ ಕೊಡು ಇಲ್ಲ ಕೊಡ್ದೆ ಉಳಿ. ಆ ಪ್ರಶ್ನೇ ಬೇರೆ’ ಎಂದರು ಅಂತಿಮವಾಗಿ ಪ್ರಭುಗಳು.
ತಿಮ್ಮ ಯಾವುದೇ ಕೆಲಸಕ್ಕೆ ಬಿದ್ದರೂ ಚಿಗಳಿ ಹಿಡ್ದಹಾಗೇಯ. ಮದುವೆ ಎಬ್ಬಿಸಿಯೇ ಬಿಟ್ಟ. ಗಂಡು ಅಲ್ಲೇ ಹತ್ತಿರದ ಕರಿಕುರುವ ನಾಗಪ್ಪನ ಮಗ ಮಾದೇವ. ಹುಡುಗ ಒಳ್ಳೇ ಕಸುವುಳ್ಳ ಆಳೇ ಆಗಿದ್ದ. ದೋಣಿ ಕಸಬು ಒಂದೇ ಅಲ್ಲದೆ ಬಸ್ತ್ಯಾಂವನ ಮಚ್ವೆಯ ಮೇಲೆ ಮಂಗಳೂರು, ಗೋವೆ, ಬೊಂಬಾಯಿಗಳಿಗೂ ಹೋಗಿ ಬರುತ್ತಿದ್ದ.
ಮಾದೇವನ ಮನೆಯವರು ಆ ವರುಷ ಮದುವೆ ಮಾಡಲು ಸಿದ್ಧರಿರಲಿಲ್ಲ. ತಿಮ್ಮ ಬಹಳಷ್ಟು ಹರಪಿ ಹಾಕಿದ ಮೇಲೆ ಮದುವೆ ಮಾಡಲು ಒಪ್ಪಿಕೊಂಡರು.
ಸಣ್ಣ ಪ್ರಮಾಣದ ಮದುವೆ ಎಂದರೂ ತಿಮ್ಮನ ಮನೆಯ ಮುಂದೆ ದೊಡ್ಡ ಚಪ್ಪರವೇ ಎದ್ದಿತು. ಮದುವೆಗೆ ಏನಿಲ್ಲೆಂದರೂ ಕನಿಷ್ಠ ಮುನ್ನೂರು ಜನರಾದರೂ ಆಗಿದ್ದರು. ರಾಮದಾಸ ಪ್ರಭುರು ಮದುವೆಗೆ ಬಂದು ಮದುಮಕ್ಕಳಿಗೆ ಉಡುಗೊರೆ ಮಾಡಿ ತಿಮ್ಮ ಕೊಟ್ಟ ಬಾಳೆಹಣ್ಣು ಸಕ್ಕರೆ ತಿಂದು ಹೋಗಿದ್ದರು.
ತಿಮ್ಮನಿಗೆ ಮದುವೆಯಾಗಿ ಅನುಭವ ಇತ್ತೇ ಹೊರತು ಮದುವೆ ಮಾಡಿಕೊಟ್ಟ ಅನುಭವ ಹೊಸದು. ಲಕ್ಷ್ಮಿಯ ದಿಬ್ಬಣ ಕರಿಕುರುವಕ್ಕೆ ಹೊರಟು ನಿಂತಾಗ, ಅಪ್ಪಾ ನಾ ಬತ್ತೆ' ಎಂದು ಲಕ್ಷ್ಮಿ ಕಣ್ಣುಗಳಲ್ಲಿ ತುಳುಕಿದ ನೀರನ್ನು ಕೆನ್ನೆಗಳ ಮೇಲೆ ಹರಿಸುತ್ತ ಹೇಳಿದಾಗ ಅದುವರೆಗೂ ಅವನು ಅನುಭವಿಸದಿದ್ದ ಹೊಸ ಅನುಭವದ ಸ್ಪರ್ಶ ಅವನಿಗಾಯಿತು. ಏನೋ ತನ್ನ ಹೃದಯದಿಂದ ಸೋರಿ ಹೋಗುತ್ತಿದೆ ಅನ್ನುವಂತಾಯಿತು. ಕಣ್ಣುಗಳಲ್ಲಿ ಹನಿ ತುಂಬಿ ದೃಷ್ಟಿ ಮಂಜಾಯಿತು. ಬಾಯಿಂದ ಮಾತು ಹೊರಡಲಿಲ್ಲ.ಹೋಗಿ ಬಾ’ ಎನ್ನುವಂತೆ ತಲೆ ಹಾಕುವುದಷ್ಟೆ ಅವನಿಂದ ಸಾಧ್ಯವಾಯಿತು.
ದಿಬ್ಬಣ ದೋಣಿ ಹತ್ತಿತು. ಜೊತೆಗೆ ಲಕ್ಷ್ಮಿಯ ಬಳುವಳಿಯ ಸಾಮಾನುಗಳು, ತಾಮ್ರದ ಕೊಡಪಾನ, ಹಿತ್ತಾಳೆ ತಪ್ಪಲೆ, ಎರಡು ಸೌಟು, ಒಂದು ಚಂಬು, ಎರಡು ತಟ್ಟೆ, ಒಂದು ತಾಟು, ಎರಡು ತೆಂಗಿನ ಸಸಿ, ಎರಡು ಅಡಕೆ ಸಸಿ ಎಲ್ಲ ದೋಣಿಯಲ್ಲಿ ತುಂಬಲಾಯಿತು. ದೋಣಿಯಲ್ಲಿ ಕುಳಿತ ಲಕ್ಷ್ಮಿ ಇನ್ನೊಮ್ಮೆ ತಿರುಗಿ ಮನೆಯ ಕಡೆ ನೋಡಿದಾಗ ಚಪ್ಪರದ ಒಂದು ಕಂಭವನ್ನು ಆತುಕೊಂಡು ತಿಮ್ಮನೂ ಇನ್ನೊಂದು ಕಂಭವನ್ನು ಆತುಕೊಂಡು ದೇವಿಯೂ ನಿಂತದ್ದನ್ನು ಕಂಡಳು. ಇಬ್ಬರ ದೃಷ್ಟಿಯೂ ತೀರದಿಂದ ಹೊರಗಾಗುತ್ತಿರುವ ದೋಣಿಯ ಮೇಲೆ ನೆಟ್ಟಿತ್ತು.
ಲಕ್ಷ್ಮಿಯ ಮದುವೆಯಾದದ್ದು ಯುಗಾದಿ ಕಳೆದ ಮೇಲೆಯೇ. ಹಾಗಾಗಿ ಹೊಸ ಮದುಮಕ್ಕಳಿಗೆ ಸಿಕ್ಕಿದ ಮೊದಲ ಹೊಸ ಹಬ್ಬ ಅಳಿಯನ ಅಮವಾಸೆಯೇ.
ಅಳಿಯನ ಅಮವಾಸೆ, ಅತ್ತೆ ತಮಾಸೆ, ಮಾವನ ದಿವಾಳಿ' ಎಂಬ ಪದ ತಿಮ್ಮ ಹುಡುಗ ಆಗಿದ್ದಾಗ ಆ ಹಬ್ಬ ಬಂದಾಗ ಹಾಡಿಕೊಂಡು ಕುಣಿದಾಡುತ್ತಿದ್ದ. ಈಗ ಅಳಿಯ ಮಗಳು ಮನೆಗೆ ಬಂದು ಹೊಕ್ಕಿದಾಗಲೂ ಆ ಪದ ನೆನಪಿಗೆ ಬಂತು. ಮೊದಲೇ ದಿವಾಳಿಯಲ್ಲಿ ಇದ್ದೇನೆ, ಇನ್ನು ಹೊಸದಾಗಿ ದಿವಾಳಿ ಆಗುವುದು ಏನೂ ಇಲ್ಲ ಎಂದು ಸಮಾಧಾನ ಮಾಡಿಕೊಂಡ. ಹಬ್ಬಕ್ಕೆ ಕರೆಯಲಿಕ್ಕೆ ಎರಡು ದಿನ ಮೊದಲು ಒಂದು ಬುಟ್ಟಿಯಲ್ಲಿ ಕಾಯಿ, ಬಾಳೆಹಣ್ಣು, ವೀಳ್ಯದೆಲೆ, ಬೆಲ್ಲ, ತುಪ್ಪಗಳನ್ನು ಹಾಕಿಕೊಂಡು ಹೊರೆ ಮಾಡಿ ತಲೆ ಮೇಲೆ ಇಟ್ಟುಕೊಂಡು ಮಗಳ ಮನೆಗೆ ಬಂದಿದ್ದ. ಆವಾಗ್ಲೇ ಸೂಕ್ಷ್ಮವಾಗಿ ಮಗಳ ಹತ್ತಿರ ಹಬ್ಬಕ್ಕೆ ಉಡುಗೊರೆ ಏನಾಗಬೇಕು ಎಂದು ಕೇಳಿದ್ದ. ತಂದೆಯ ಸ್ಥಿತಿ ಮಗಳಿಗೆ ಗೊತ್ತಿತ್ತು. ಹಾಗಾಗಿ,ಅಪ್ಪಾ ನೀಯೇನು ತೋಲು ಖರ್ಚು ಮಾಡೂಕೆ ಹೋಗಬೇಡ. ನಿನ್ನ ಕೈಲಿ ಏನು ಅನ್ಕೂಲ ಆಗ್ತದ್ಯೋ ಅದು ಅಗಧಿ ಸಣ್ಣದಾದ್ರೂ ಅಡ್ಡಿಯಿಲ್ಲ, ನಮಗೆ ಸಾಕು. ನೀನು ಎಷ್ಟು ದೊಡ್ಡದು ಕೊಟ್ಟರೂ ನಾವು ಸಾಯುವವರೆಗೆ ಉಳಿದು ಬರ್ತದ್ಯಾ ಅದು? ಇದರ ಲೆಕ್ಕಕ್ಕೆ ನೀ ಎಲ್ಲೂ ಸಾಲ ಸಂಬಂಧ ಮಾಡೂಕೆ ಹೋಗಬೇಡ. ಏನಾದ್ರೂ ದೊಡ್ಡದು ಮಾಡೂದಿದ್ರೆ ಯುಗಾದಿ ಬರೂದು ಇಲ್ವಾ. ಆವಾಗ್ಗೆ ಮಾಡಿದ್ರಾಯ್ತು. ನಾ ಅವ್ರಿಗೂ ಹೇಳ್ತೆ’ ಎಂದಿದ್ದಳು.
ಹಬ್ಬದ ಊಟಕ್ಕೆ ಉದ್ದಿನ ದೋಸೆ, ಬಳಚಿನ ಹುಳಿ ಬಾಳಿಕಾಯಿ ಹಾಕಿದ್ದು ಮಾಡಿದ್ದರು. ಊಟದ ಜೊತೆಯಲ್ಲಿ ಸ್ವಲ್ಪ ಶೇಂದಿ ಎಲ್ಲರೂ ಕುಡಿದಿದ್ದರು. ಹಬ್ಬದ ಊಟ ಭರ್ಜರಿಯೇ ಆಗಿತ್ತು.ಊಟ ಮುಗಿದ ಮೇಲೆ ಮದುಮಕ್ಕಳನ್ನು ಹಸೆ ಹಾಸಿ ಕುಳ್ಳರಿಸಿ ಆರತಿ ಮಾಡಿ ಲಕ್ಷ್ಮಿಗೆ ಒಂದು ಪೊಲಕದ ಖಣ, ಮಾದೇವನಿಗೆ ಒಂದು ಟುವಾಲು ಉಡುಗೊರೆ ಮಾಡಿದರು. ಆ ಮೇಲೆ ಮಾದೇವ ತನ್ನ ಪದ್ಧತಿಯಂತೆ ಮನೆಯ ಹಿರಿಯರಿಗೆಲ್ಲ ಕವಳ- ಎಲೆ, ಅಡಕೆ, ತಂಬಾಕು- ಕೊಟ್ಟ.

ಲಕ್ಷ್ಮಿ ದೀಪಾವಳಿಗೆ ತೌರುಮನೆಗೆ ಬಂದಾಗ ನಾಲ್ಕು ತಿಂಗಳ ಬಸುರಿಯಾಗಿದ್ದಳು. ತಿಮ್ಮ ದೇವಿಯರಿಗೆ ತಾವು ಆಗಲೇ ಅಜ್ಜ ಅಜ್ಜಿಯರಾದಷ್ಟು ಸಂತೋಷವಾಗಿತ್ತು. ದೇವಿ ವಾರಕ್ಕೊಮ್ಮೆಯಾದರೂ ಮಗಳ ಮನೆಗೆ ಬಂದು ನೋಡಿ, ಮಾತನಾಡಿಸಿ, ಆಕೆಗೆ ಇಷ್ಟವಾದದ್ದು ಏನನ್ನಾದರೂ ತಿನ್ನಲು ಕೊಟ್ಟು ಹೋಗುತ್ತಿದ್ದಳು.
ಮಗಳ ಚೊಚ್ಚಿಲು ಬಾಣಂತನ ತಮ್ಮ ಮನೆಯಲ್ಲೇ ಆಗಬೇಕು ಎಂದು ದೇವಿ, ತಿಮ್ಮ ಇಬ್ಬರೂ ಬಯಸಿದರು. ಲಕ್ಷ್ಮಿಗೆ ಎಂಟನೆಯ ತಿಂಗಳು ಪ್ರಾರಂಭವಾಗುವ ಮೊದಲು ಅಂದರೆ ಇನ್ನು ಎರಡು ದಿನಗಳಿರುವಾಗಲೆ ಕರಿಕುರುವದಲ್ಲಿ ಆಕೆಯ ಬಯಕೆಯ ಶಾಸ್ತ್ರವನ್ನು ಮುಗಿಸಿ ಮನೆಗೆ ಕರೆದು ತಂದರು. ತಮ್ಮಲ್ಲೂ ಲಕ್ಷ್ಮಿಗೆ ಒಂದು ಬಯಕೆ ಊಟ ಹಾಕಬೇಕು ಎನ್ನುವ ವಿಚಾರ ದೇವಿಯದು.
ಸರಿ, ಇಲ್ಲಿಗೆ ಬಂದ ಹತ್ತು ದಿನಗಳ ನಂತರ ತಮ್ಮ ಮನೆಯಲ್ಲಿ ಬಯಕೆ ಊಟ ಇಟ್ಟುಕೊಂಡಿದ್ದನ್ನು ತಿಮ್ಮ ಮಾದೇವನಿಗೆ ಹೇಳಿ ಬಂದ. ಒಂದು ಮಧ್ಯಾಹ್ನ ಹೆಂಗಸರು ಶಾಸ್ತ್ರದ ಪ್ರಕಾರ ಲಕ್ಷ್ಮಿಗೆ ಬಯಕೆ ಬಡಿಸಿದರು. ಅದೇ ದಿನ ಸಂಜೆ ಎರಡು ಕೋಳಿ ಕಡಿದು ಪದಾರ್ಥ ಮಾಡಿದ್ದರು. ನಾಲ್ಕು ಕೊಳಗ ಬಳಚು ಸೊಯಿಸಿ ತಾಳ್ಳ ಮಾಡಿದ್ದರು. ಸಿಂಜಾವನ ಅಂಗಡಿಯಿಂದ ನಾಲ್ಕು ಬಾಟ್ಲಿನೂ ತಂದಿದ್ದರು. ಕೇಳಬೇಕೇನು? ಹೊಟ್ಟೆ ಬಿರಿಯುವಷ್ಟು ಉಂಡರು. ಮೈ ಮರೆಯುವಷ್ಟು ಕುಡಿದರು. ಯಾರಿಗೂ ಬುದ್ಧಿ ಸ್ವಾಧೀನದಲ್ಲಿ ಇರಲಿಲ್ಲ. ಬಸುರಿ ಹೆಂಗಸು ಲಕ್ಷ್ಮಿಯೂ ಕೋಳಿ ಪಳ್ದಿ ಸ್ವಲ್ಪ ಹೆಚ್ಚೇ ತಿಂದಳು. ಬಳಚಿನ ತಾಳ್ಳನೂ ತಿಂದಳು. ಬಾಟ್ಲಿ ಬಗ್ಗಿಸಲಿಕ್ಕೆ ಮಾತ್ರ ಹೋಗಲಿಲ್ಲ. ಕೋಳಿ ಪಳ್ದಿಯನ್ನು ಗಂಡಸರೇ ಸ್ವಲ್ಪ ಜಾಸ್ತಿ ತಿಂದರೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಹಾಗೆ ಆಗುತ್ತದೆ. ಹೆಂಗಸು, ಅದರಲ್ಲೂ ಬಸುರಿ ತಿಂದಮೇಲೆ ಕೇಳಬೇಕಾ? ಮನೆಯಲ್ಲಿ ಏನು ತುಪ್ಪ ಇದೆಯೆ? ಹಾಲು, ಮೊಸರು ಇದೆಯೆ? ಬೆಳಗಿನ ಜಾವದ ಸುಮಾರಿಗೆ ಲಕ್ಷ್ಮಿಗೆ ನೋವು ಸುರುವಾಯಿತು. ಕುಡಿದು ಅಮಲೇರಿದವರಿಗೆ ಇಳಿದಿತ್ತು. ಈಕೆಗೆ ನೋವಿನ ಅಮಲೇರಿತ್ತು.
ಲಕ್ಷ್ಮಿ ನೆಲದ ಮೇಲೆ ಹೊರಳಾಡುತ್ತಿದ್ದಳು. ದೇವಿಗೆ ಎಚ್ಚರವಾಗಿ ಗಂಡನಿಗೆ, ಅಳಿಯನಿಗೆ ಎಬ್ಬಿಸಿದಳು. ಬೆಸನದ ಕೋಟಲೆ ಎಂತಲೆ ಅವರು ಲೆಕ್ಕ ಹಾಕಿದರು. ತಿಮ್ಮ ಗಡಬಡಿಸಿ ಬೆಜಿಲ್ತಿ'ಗೆ ಕರೆದುಕೊಂಡು ಬನ್ನಿ ಎಂದ. ಮಾದೇವ ಮತ್ತು ರಾಮ ಓಡಿದರು. ಊರೊಳಗಿನ ಬೆಜಿಲ್ತಿ ತನ್ನ ಮಗಳ ಮನೆಗೆಹೋಗಿ ಮೂರು ದಿನ ಆಗಿತ್ತು. ಮುಖ ಸಣ್ಣದು ಮಾಡಿಕೊಂಡು ಇಬ್ಬರೂ ಹಿಂದಿರುಗಿದರು. ತಿಮ್ಮ ಅವರಿಬ್ಬರಿಗೂ ಮೋಳ್ಕೋಡಿಗೆ ಹೋಗಿ ಬರಲು ತಿಳಿಸಿದ. ಇಬ್ಬರೂ ದೋಣಿ ಒತ್ತಿಕೊಂಡು ಹೋದರು. ಅಲ್ಲಿಯವಳು ಸಿಕ್ಕಿದಳು. ಆದರೇನು? ಮೊದಲು ಬರಲಿಕ್ಕೆ ಒಪ್ಪಲೇ ಇಲ್ಲ ಅವಳು. ಇವರು ದಮ್ಮಯ್ಯ ದತ್ತಯ್ಯ ಹಾಕಿದ ಮೇಲೆ ಅಂತೂ ಬಂದು ದೋಣಿಯಲ್ಲಿ ಕುಳಿತಳು. ಗಂಡಸರೆಲ್ಲ ಹೊರಗಡೆ ಚಡಪಡಿಸುತ್ತ ಕುಳಿತಿದ್ದಾರೆ. ಒಳಗೆ ಲಕ್ಷ್ಮಿಯ ನರಳಿಕೆ ಅವ್ಯಾಹತವಾಗಿ ನಡೆದೇ ಇದೆ. ಹೊತ್ತು ಮೂಡಿ ಹೊತ್ತು ತಿರುಗಿತು. ಮಗುವಿನ ಅಳುವಿನ ಧ್ವನಿ ಈಗ ಕೇಳುತ್ತದೆ ಎಂದುಕೊಂಡು ಕುಳಿತವರ ಹೊಟ್ಟೆಯೂ ಚುರುಗುಡತೊಡಗಿತು. ಹೊತ್ತು ಬಿದ್ದರೂ ಲಕ್ಷ್ಮಿಯ ನರಳಿಕೆ ನಿಂತಿರಲಿಲ್ಲ. ಬೆಜಿಲ್ತಿ, ನನ್ನ ಹತ್ತಿರ ಇದು ಸಾಧ್ಯವಾಗುವುದಿಲ್ಲ. ನೀವ್‌ ಡಾಕ್ಟರಿಗೆ ಕರೆಸಿ, ಇಲ್ಲ ಈಗಂದೀಗ ಹೊನ್ನಾವರಕ್ಕೆ ಕರ್ಕೊಂಡು ಹೋಗಿ’ ಅಂದಳು.
ತಿಮ್ಮ ಏನು ಮಾಡಬೇಕು ಎಂದು ತೋಚದೆ ಕುಳಿತಿದ್ದ. ದೇವಿ ರಾಮನ ಮುಖಾಂತರ ನೋಟಗಾರ' ಕರಿನಾಯ್ಕನಿಗೆವೈತಾನ’ ಮಾಡಲಿಕ್ಕೆ ಕರೆಸಿದಳು.
ಕರಿನಾಯ್ಕ ಬಂದು ಕುಳಿತ ಮೇಲೆ ಅವನ ಎದುರಿಗೆ ಒಂದು ಮಣೆ ತಂದಿಟ್ಟರು. ಅದರ ಮೇಲೆ ಒಂದು ಮುಷ್ಟಿ ಅಕ್ಕಿ ತಂದು ಹಾಕಿದರು. ಹನಿ ಹನಿ ಅಕ್ಕಿಯನ್ನೇ ಮೊದಲು ತೆಗೆದು ಮಣೆಯ ಒಂದೊಂದು ಮೂಲೆಯಲ್ಲಿಟ್ಟು ಕರಿನಾಯ್ಕ ಆಯ ನೋಡಿ ನಂತರ ಅಕ್ಕಿಯನ್ನು ಮಣೆಯ ಮಧ್ಯದಲ್ಲಿ ಮಾಡಿಕೊಂಡು ಚಾಕುವಿನಿಂದ ಸುತ್ತತೊಡಗಿದ.
ಸಾಯದಲ್ಲಿ ಕಡಿಯೋ ಸಕಾಯದಲ್ಲಿ ಕಡಿಯೋ, ಗಡಿಸುತ್ತಿನಲ್ಲಿ ಕಡಿಯೋ, ಮೈಸುತ್ತಿನಲ್ಲಿ ಕಡಿಯೋ, ಓ... ಸ್ವಾಮಿಯೇ ತಳಭಾಗದವರಾ.....' ಹೀಗೆ ರಾಗವಾಗಿ ಹೇಳುತ್ತ ನಡುನಡುವೆಯೆ ಎಡಗೈಯಲ್ಲಿ ಹಿಡಿದುಕೊಂಡ ಹುಲ್ಲುಕಡ್ಡಯನ್ನು ಬಲಗೈಯ ಚಾಕುವಿನಿಂದ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸುತ್ತ ಸುಮಾರು ಅರ್ಧ ಗಂಟೆಯ ವರೆಗೆ ಹತ್ತಾರು ದೆವ್ವಗಳಿಗೆ ಜರೆಯುತ್ತ ಆಸೆ ತೋರಿಸುತ್ತ ಇದ್ದ. ನಂತರ ತುದಿಯಲ್ಲಿ ದೊಡ್ಡದಾಗಿ ಕೂಗಿ ಒಂದು ತೆಂಗಿನ ಕಾಯನ್ನು ಕೈಯಲ್ಲಿ ತೆಗೆದುಕೊಂಡು ಎದ್ದು ನಿಂತು ನೆಲಕ್ಕೆ ಅಪ್ಪಳಿಸಿದ. ಅದು ಚೂರುಚೂರಾಗಿ ದಿಕ್ಕಾಪಾಲಾಯಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡ ಮೇಲೆ ಕರಿನಾಯ್ಕ ದೆವ್ವಕ್ಕೆ ಒಂದು ಕೋಳಿ ಬಿಡಲು ಹೇಳಿದ. ರಾಮ ಮೊನ್ನೆ ಹದಿನೈದು ರುಪಾಯಿ ಕೊಟ್ಟು ಒಂದು ಹಳದಿಕೆಂಪ ಹುಂಜವನ್ನು ತಂದು ಗೂಟಕ್ಕೆ ಹಾಕಿದ್ದ. ಅದರ ಮೇಲೆ ಇವನ ನದರು ಇತ್ತು. ಬೇರೆ ಬಿಡುವಾ ಅಂದರೆ ಎಲ್ಲಿದೆ ಮತ್ತೆ? ಹಾಗಾಗಿ ಕರಿ ನಾಯ್ಕನ ಕೈಗೆ ಅದನ್ನೇ ತಂದುಕೊಟ್ಟರು. ಅವನು ಲಕ್ಷ್ಮಿಗೆ ಅದನ್ನು ಮೂರು ಸುತ್ತು ಸುಳಿದು ಹೇಳಿಕೆ ಮಾಡಿಕೊಂಡು ಕೊಟ್ಟನು. ನೋಟಗಾರ ಕರಿನಾಯ್ಕ ಹೋದ. ಹುಣ್ಣಿಮೆ ನಂತರದ ನಾಲ್ಕನೆ ದಿನದ ಚಂದ್ರ ಆಕಾಶದಲ್ಲಿ ಮೂಡಿದರೂ ಲಕ್ಷ್ಮಿಯ ನರಳಿಕೆ ಯಥಾಪ್ರಕಾರ ಇತ್ತು. ತಿಮ್ಮ, ದೇವಿ, ಮಾದೇವ ಕೂಡಿ ಆಲೋಚನೆ ಮಾಡಿದರು. ಕೊನೆಗೆ ಹೊನ್ನಾವರಕ್ಕೇ ಒಯ್ಯುವುದು ಅಂತ ನಿರ್ಧಾರ ಮಾಡಿದರು. ಲಕ್ಷ್ಮಿಯನ್ನು ಎಬ್ಬಿಸಿ ದೋಣಿಯಲ್ಲಿ ಕಂಬಳಿ ಹಾಸಿ ಮಲಗಿಸಿದರು. ರಾಮ ಜಲ್ಲದಿಂದ ದೋಣಿ ಒತ್ತಿದ. ಮಾದೇವ ಹುಟ್ಟು ಹಾಕಿದ. ತಿಂಗಳು ಆಗಲೇ ಮೂಡಿದುದರಿಂದ ಭರಿತ ಸೊನೆಗಚ್ಚಿತ್ತು. ಇವರು ಕೆಳಮುಖದಲ್ಲಿ ಹೋಗಬೇಕಿತ್ತು. ನೀರು ಮೇಲ್ಮುಖದಲ್ಲಿ ಹರಿಯುತ್ತಿತ್ತು. ಹೊಸಾಡು ದಾಟಿ ದೆವ್ವನ ಮೊಟೆ ಬುಡಕ್ಕೆ ಬರುವ ಹೊತ್ತಿಗೆ ಲಕ್ಷ್ಮಿಯ ದೇಹ ತಣ್ಣಗಾಗಿತ್ತು. ನರಳಾಟ ನಿಂತಿತ್ತು. ಪರಿಸ್ಥಿತಿಯ ಅರಿವು ಎಲ್ಲರಿಗಾಯಿತು.ಎಲ್ಲ ದೆವ್ವದ ಆಟ’ ಅಂದರು. ಇವರು ದೆವ್ವದ ಆಟ ಅಂದರೂ ಆದದ್ದೇ ಬೇರೆ. ಮೊದಲು ಕೈಕೊಟ್ಟಿದ್ದು ಕೋಳಿ ಪಳ್ದಿ. ನಂತರ ಒಂದೂವರೆ ದಿನ ತಡ ಮಾಡಿದ್ದು. ಶಿಶು ಹೊಟ್ಟೆಯಲ್ಲೇ ಸತ್ತಿತ್ತು. ಆಗ್ಗಿಂದಾಗ್ಗೆ ಹೊನ್ನಾವರಕ್ಕೆ ಹೋಗಿದ್ದರೆ ಲಕ್ಷ್ಮಿ ಉಳಿಯುತ್ತಿದ್ದಳು. ಜನ ಮರುಳೋ ಜಾತ್ರೆ ಮರುಳೋ?
ರಾಮ ಸುಂಕಾಣಿ ತಿರುಗಿಸಿದ. ಈಗ ತಿಂಗಳು ತಿರುಗಿದ್ದರಿಂದ ಇಳಿತ ಪ್ರಾರಂಭವಾಗಿತ್ತು. ನೀರು ಕೆಳಮುಖದಲ್ಲಿ ಹರಿಯಲು ಪ್ರಾರಂಭಸಿತ್ತು. ಇವರು ಮೇಲ್ಮುಖದಲ್ಲಿ ದೋಣಿ ನಡೆಸಿದ್ದರು. ದೋಣಿ ತಿಮ್ಮನ ಮನೆ ಹೊಳೆಬಾಗಿಲಿಗೆ ಬಂದು ಮುಟ್ಟುವಾಗ ಕರಿನಾಯ್ಕ ರಾತ್ರಿ ದೆವ್ವಕ್ಕೆ ಅಂತ ಬಿಟ್ಟ ಕೋಳಿಹುಂಜ ಕೊಕ್ಕೋ… ಕೊಕ್ಕೋ ಎಂದು ಸ್ವರಗೆಯ್ಯುತ್ತಿತ್ತು.
5
ಲಕ್ಷ್ಮಿ ಹೀಗಾಗಿ ತಿಂಗಳು ಕಳೆಯಿತೋ ಇಲ್ಲವೋ ಅನ್ನುವಷ್ಟರಲ್ಲಿ ಮಾನಸಿಕ ಆಘಾತದಿಂದ ಬಳಲಿದ ದೇವಿಗೆ ಗಾಳೇಸು ಆಯಿತು. ಗಾಳೇಸು ಅಂದರೆ ಗಾಳಿ ಬಡಿಯುವುದು. ವಾತದ ನಮೂನೆ. ಇದು ಆದವರಿಗೆ ಒಂದು ಪಾರ್ಶ್ವವೇ ನಿತ್ರಾಣವಾಗಿ ಹೋಗುತ್ತದೆ. ಇದಕ್ಕೆ ಅರ್ಧಾಂಗವಾಯು ಅಂತಲೂ ಹೇಳುತ್ತಾರೆ. ಈ ಸಲ ತಿಮ್ಮ ದೆವ್ವಕ್ಕೆ ನೋಡಿಸಲು ಹೋಗಲಿಲ್ಲ. ನೆಟ್ಟಗೆ ಬೆಳ್ಳಂಬರಕ್ಕೆ ಹೋದ.
ಬೆಳ್ಳಂಬರ ಅಂಕೋಲಾದ ಹತ್ತಿರ ಆಗುತ್ತದೆ. ಅಲ್ಲೆಲ್ಲೋ ಅಡ್ಡಗೈ ಅಂತೆ. ಅಲ್ಲಿ ಗಾಳೇಸು ಆದವರಿಗೆ ಮದ್ದು ಕೊಡುತ್ತಾರೆ. ಬಹಳ ನೇಮದಿಂದ ಮದ್ದು ಮಾಡಿದರೆ ಗುಣ ಆಗುತ್ತದೆ. ಆ ಔಷಧ ಮಾಡಿದ ಮೇಲೆ ದೇವಿಗೆ ಸ್ವಲ್ಪ ಗುಣ ಕಂಡಿತು. ಆದರೆ ಮೊದಲಿನ ಚೈತನ್ಯ ಒಂದು ಪಾರ್ಶ್ವಕ್ಕೆ ಉಳಿಯಲಿಲ್ಲ.
ತೊಂದರೆ ತಾಪತ್ರಯಗಳು ಬದುಕಿನ ಅನುಭವದ ಪುಟಗಳನ್ನು ಹೆಚ್ಚಿಸುತ್ತಿದ್ದುದರಿಂದ ತಿಮ್ಮನಿಗೆ ಸಂಸಾರದ ಆಸಕ್ತಿ ಕಡಿಮೆಯಾಗಲಿಲ್ಲ. ದಿನಾಲೂ ಹೊನ್ನಾವರಕ್ಕೆ ಹೋಗಿ ಬರುವುದು ಲಾಭದಾಯಕವಲ್ಲದ ಕಾರಣ ಏನು ಮಾಡುವುದೆಂದು ಯೋಚಿಸುತ್ತಿದ್ದ.
ಹಲಗೆ ದೋಣಿ ಕೆಲಸಕ್ಕೆ ಹೋಗುತ್ತಿದ್ದ ರಾಮ ಒಂದು ಸುದ್ದಿ ತಂದ, ಕಾರ್ಖಾನೆಯವರು ತೆಂಗಿನ ಸಸಿ ಹಾಕಿದ್ದಾರೆ. ತೋಟ ಮಾಡ್ತಾರಂತೆ. ಅದಕ್ಕೆ ದೋಣಿ ಮೇಲೆ ಹೊಯಿಗೆ ಹೇರಿಸುತ್ತಾರಂತೆ ಮತ್ತು ಅದಕ್ಕೆ ಹಲಗೆ ದೋಣಿಯೇ ಆಗಬೇೇಕು ಅಂತ ಇಲ್ಲ. ದೋಣಿಯ ಆಕಾರ ನೋಡಿ ರೇಟು ಮಾಡ್ತಾರೆ. ಆಲ್ಲದೆ ಮತ್ತೆ ಕಾರ್ಖಾನೆ ಕೆಲಸ ವರ್ಷವಿಡಿ ಸಿಗುತ್ತಿದ್ದುದರಿಂದ ನಾಲ್ಕು ಕಾಸಿನ ಪುಡಿ ಮಾಡಿಕಂಡ ಜನರು ಮನೆಗಳಿಗೆ ಹಂಚು ಹಾಕಿಸುವ ತಯಾರಿಯಲ್ಲಿ ಇದ್ದರು. ಅದಕ್ಕೂ ಮೊದಲೆ ನಾಲ್ಕು ಕಲ್ಲು ಕಂಬ ಮಾಡಿಸುವವರು, ಗೋಡೆ ಮಾಡುವವರು ಅವರಿಗೆಲ್ಲ ಹೊಯ್ಗೆ ಬೇಕಾಗುತ್ತದೆ. ಕಲ್ಲನ್ನೂ ಸಾಗಿಸಬಹುದು. ನೀನು ಅಲ್ಲಿಗೆ ಬಂದರೆ ಒಪ್ಪತ್ತು ಕೆಲಸ ಮಾಡಿದರೂ ಎರಡು ದಿನ ಉಣ್ಣಬಹುದು ಎಂದಿದ್ದ.
ದೋಣಿ ದಾಸಪ್ರಭುರದ್ದು. ತಾನು ಅಲ್ಲೆಲ್ಲ ಬೇರೆಯವರಿಗೆ ಹೊಯಿಗೆ, ಕಲ್ಲು ಹೇರಲು ಹೋಗ್ತೇನೆ ಅಂದರೆ ಅವರು ಒಪ್ಪುವುದಿಲ್ಲ ಎನ್ನುವುದು ಇವನಿಗೆ ಖಂಡಿತ ಗೊತ್ತಿತ್ತು. ಆದರೂ ಒಂದು ಮಾತು ಕೇಳಿ ನೋಡುವ ಎಂದು ಒಂದು ದಿನ ಪ್ರಸ್ತಾಪ ಮಾಡಿದ. ಎಲ್ಲವನ್ನು ಕೇಳಿಸಿಕೊಂಡ ಪ್ರಭುರು ಸ್ಪಷ್ಟವಾಗಿಯೇ ಹೇಳಿದರು,
ನಿನಗೆ ದೋಣಿ ನಡೆಸುವುದರಿಂದ ಲಾಭ ಕಾಣದೆ ಹೋದರೆ ದೋಣಿ ತಂದು ನಮ್ಮನೆ ಬಾಗಿಲಲ್ಲಿ ಕಟ್ಟು. ಅದರ ಹೊರತಾಗಿ ಎಲ್ಲೆಲ್ಲೆಲ್ಲಾ ಹೋಗಿ ಬಾಡಿಗೆ ಮಾಡ್ತೆ ಅಂದರೆ ಅದು ನಮಗೆ ಪೂರೈಸುವುದಿಲ್ಲ. ಇನ್ನೆಷ್ಟೆಂದರೂ ಅಷ್ಟೇ. ಇದು ನಿನ್ನ ತಲೆಲಿ ಹೊಕ್ಕಿದ ಮೇಲೆ ನೀನು ದೋಣಿ ನಡೆಸಿದ ಹಾಗೇ ಇದೆ. ಈಗ್ಲೇ ದೋಣಿ ಬಿಟ್ಟು ಹೋದರೂ ಅಡ್ಡಿಯಿಲ್ಲ. ತಿಕ್ಕಿಸಿ ಮೇಲೆ ಎಳೆಯಿಸಿ ಬಿಡ್ತೇನೆ.' ತಿಮ್ಮನಿಗೆ ಇನ್ನು ಅವರ ಹತ್ತಿರ ಮಾತನಾಡಿ ಪ್ರಯೋಜನವಿಲ್ಲ ಅನಿಸಿತು. ಪ್ರಭುರು ಹಾಗೆ ಹೇಳಿದ್ದು ತಪ್ಪೇನೂ ಅಲ್ಲ. ಒಂದು ಸಲ ಅವರು ಅನುಭವಿಸಿದ್ದರು. ತಿಮ್ಮನಿಗೂ ಹಾಗೇ ಅನಿಸಿತು. ಅದರ ಜೊತೆಗೇ ಇನ್ನೊಂದು ವಿಚಾರವೂ ತಲೆ ಹೊಕ್ಕಿತು, ತಾನೇ ಒಂದು ಸ್ವಂತ ದೋಣಿ ಹೊಂದಬೇಕು ಎಂದು. ಸಾಧಾರಣದಂಥ ಕೋಲು ದೋಣಿಗಾದರೂ ಅಂದಿನ ಕಾಲದಲ್ಲಿ ಎರಡು ಮೂರು ಸಾವಿರ ರುಪಾಯಿ ಬೇಕಿತ್ತು. ಅಷ್ಟೊಂದು ಹಣ ಕೂಡಿಸುವುದು ಎಲ್ಲಿಂದ? ಮೇಲಾಗಿ ದಿನೇ ದಿನೇ ಕಟ್ಟಿಗೆಯ ಬೆಲೆ ಆಕಾಶಕ್ಕೆ ಮುಟ್ಟುತ್ತ ಅದೆ. ಜಂಗಲ್‌ ಕಾಯ್ದೆ ಬಿಕ್ಕಟ್ಟಾಗುತ್ತ ಅದೆ. ಅಂಥದರಲ್ಲಿ ಏನು ಮಾಡುವುದು? ಮೇಲಾಗಿ ಈಗ ಎರಡನೆ ಮಗಳು ಸುಬ್ಬಿ ಮದುವೆಗೆ ನೆರೆದಿದ್ದಳು. ಅವಳಿಗೂ ಒಂದು ದಡ ಕಾಣಿಸಬೇಕಿತ್ತು. ತಿಮ್ಮನ ಹೆಣ್ಣುಮಕ್ಕಳಿಬ್ಬರು ಗದ್ದೆ ನೆಟ್ಟಿಗೆ, ಕಳೆ ಕೀಳಲಿಕ್ಕೆ, ಮಣ್ಣು ಹೊರಲಿಕ್ಕೆ ಅಲ್ಲಿ ಇಲ್ಲಿ ಅಂತ ಕೆಲಸಕ್ಕೆ ಹೋಗುತ್ತಿದ್ದರು. ರಾಮ ಹಲಗೆ ದೋಣಿ ಸೇರಿದ್ದ. ಕಿರಿಯವನಾದ ಕೂಸನನ್ನು ಅನಿಲಗೋಡ ಮಂದನ ಜೊತೆ ಮೀನು ವ್ಯಾಪಾರ ಮಾಡಲು ಕಳಿಸಿದ್ದ. ಎರಡನೆ ಮಗ ಶುಕ್ರ ಒಂದು ತಿಂಗಳ ಹಿಂದೆ ಗೋವಾಕ್ಕೆ ಮೀನು ಲಾಂಚಿಗೆ ಸೇರಲು ಹೋಗಿದ್ದ. ಆಕರ್ಷಕ ಸಂಬಳ ದೊರೆಯುತ್ತಿತ್ತು. ಎಂಟು ತಿಂಗಳ ಉದ್ಯೋಗ ಗ್ಯಾರಂಟಿ. ತಿಮ್ಮ ತಾನಾದರೂ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಸದ್ಯಕ್ಕೆ ಕೆಲಸ ಮಾಡದೆ ತಿನ್ನುವವಳು ಅಂದರೆ ದೇವಿ ಒಬ್ಬಳೇ ಇರಬೇಕು. ಅವಳಾದರೂ ನಿಸ್ಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು. ದೋಣಿ ಮಾಡಿಸಲಿಕ್ಕಾಗಲಿ ಅಥವಾ ತೆಗೆದುಕೊಳ್ಳಲಿಕ್ಕಾಗಲಿ ಸ್ವಲ್ಪಸ್ವಲ್ಪವಾಗಿ ಹಣ ಕೂಡಿಸಬೇಕು ಎಂದು ವಿಚಾರ ಮಾಡಿ ತಿಮ್ಮ ಮಗನಿಗೂ ಹೇಳಿದ. ಅವನೂ ಅದಕ್ಕೆ ಸಮ್ಮತಿಸಿದ. ಮಾರನೇ ದಿನವೇ ತಿಮ್ಮ ಕರ್ಕಿ ಕುಂಬಾರರ ಮನೆಗೆ ಹೋಗಿ ಸುಮಾರು ದೊಡ್ಡದಾದ ಮಡಕೆ ಒಂದನ್ನು ಕೊಂಡು ತಂದ. ಅದಕ್ಕೆ ತಗಡಿನ ಮುಚ್ಚಳವನ್ನುಮಾಡಿ ಹಾಕಿ ಮಧ್ಯದಲ್ಲಿ ಕತ್ತಿ ಮೊನೆಯಿಂದ ಒಂದು ಇಂಚಿನಷ್ಟು ಉದ್ದದ ಸೀಳನ್ನು ಮಾಡಿದ. ಪ್ರತಿದಿನವೂ ನಾಲ್ಕಾಣೆ, ಎಂಟಾಣೆ, ರುಪಾಯಿ, ಎರಡು ರುಪಾಯಿ ಹೀಗೆ ಹಾಕುತ್ತ ಬಂದ. ಗೋವಾದಿಂದ ಶುಕ್ರ ಮನಿಆರ್ಡರ್‌ ಮಾಡಿದರೆ ಆಗ ಹತ್ತು ರುಪಾಯಿವರೆಗೂ ಹಾಕುತ್ತಿದ್ದ. ತಿಮ್ಮ ಶುಕ್ರನಿಗೆ ಪತ್ರ ಬರೆದು, ತಮಗೆ ಸದ್ಯ ಹಣದ ಜರೂರತ್‌ ಇಲ್ಲ. ಹಣವನ್ನು ಹಾಳು ಮಾಡದೆ ನಿನ್ನ ತಾಬಾನೇ ಇಟ್ಟುಕೋ ಮತ್ತು ಬರೂಮುಂದ ಸುಬ್ಬಿ ಲೆಕ್ಕಕ್ಕೆ ಒಂದು ಉಂಗುರ, ಒಂದೆಳೆ ಸರ ಮಾಡ್ಸಿಕೊಂಡು ಬಾ. ಏಕೆಂದರೆ ಅಲ್ಲಿ ಬಂಗಾರ ಸೋವಿ ಅಂತ ಕೇಳಿದ್ದೆ ಎಂದು ತಿಳಿಸಿದ್ದ. ಹಾಗೇ ಸುಬ್ಬಿಗೆ ಗಂಡು ನೋಡಲು ನದರು ಹಾಕುತ್ತ ಇದ್ದ. ರಾಮನಿಗೂ ಎಲ್ಲಾದರೂ ನದರು ಹಾಕಿ ಇಡಲಿಕ್ಕೆ ತಿಳಿಸಿದ್ದ. ದೇವಿ, ಮಾದೇವನಿಗೇ ಸುಬ್ಬಿಯನ್ನು ಕೊಟ್ಟುಬಿಡುವ ಆಲೋಚನೆ ಮಾಡಿದ್ದಳು. ಆದರೆ ತಿಮ್ಮಿಗೆ ಏಕೋ ಮನಸ್ಸು ಇರಲಿಲ್ಲ. ಸುಬ್ಬಿ ಬೇಜಾರು ಮಾಡಿಕೊಳ್ತಾಳೇನೋ ಎಂಬ ವಿಚಾರ ಅವನದು. ತಿಮ್ಮ ಈಗ ಪ್ರಭುರ ದೋಣಿಯನ್ನು ಬಿಟ್ಟಿದ್ದ. ಸಿಂಜಾವನ ಪೊಂಗಯವನ್ನು ತಂದು ಹೊಳೆಬಾಗಿಲಿನಲ್ಲಿ ಕಟ್ಟಿಕೊಂಡಿದ್ದ. ಇವನು ದಿನಾಲೂ ಹೆಂಡ ಕುಡಿಯಲಿಕ್ಕೆ ಅಂಗಡಿಗೆ ಹೋಗುತ್ತಿದ್ದ ಕಾರಣ ಸಿಂಜಾವನ ಮತ್ತು ಇವನ ದೋಸ್ತಿ ಘನ ಆಗಿತ್ತು. ಆ ದೋಸ್ತಿ ಮೇಲೆ ಪೊಂಗಯವನ್ನು ಬಾಡಿಗೆ ಇಲ್ಲದೆ, ತಿಮ್ಮ ಮೀನು ಹಿಡಿದಾಗ ಒಂದು ಪದಾರ್ಥದ ಮೀನು ತಂದುಕೊಡಬೇಕೆಂಬ ಮಾತಿನ ಸಾಟಿ ಮೇಲೆ ಸಿಂಜಾವ ದೋಣಿ ಕೊಟ್ಟಿದ್ದ. ಈ ದೋಣಿ ತೆಗೆದುಕೊಂಡು ತಿಮ್ಮ ಎಲ್ಲಾದರೂ ಅಪರೂಪಕ್ಕೆ ಬೀಸಲಿಕ್ಕೆ ಹೋಗುತ್ತಿದ್ದ. ಒಂದೊಂದು ದಿನ ಸುಬ್ಬಿ ಮತ್ತು ಗೌರಿಯರು ರಾಶಿರಾಶಿ ಬಳಚನ್ನು ತೆರಿದು ತಂದಿದ್ದರೆ ಪೊಂಗಯದಲ್ಲಿ ಅದನ್ನು ತುಂಬಿಕೊಂಡು ಮಾರಲು ಹೋಗುತ್ತಿದ್ದ. ಹೋಯ್‌.. ಬಳ್ಚೋ... ಬಿಳಿ ಬಳ್ಚೋ ಎಂದು ಅವನು ಕೂಗಿದರೆ ಸುಮಾರು ಒಂದೂವರೆ ಮೈಲು ದೂರದವರೆಗೂ ಏನೇನೂ ಅಡೆ ಇಲ್ಲದೆ ಕೇಳುತ್ತಿತ್ತು. ಅಷ್ಟು ದೊಡ್ಡದು ತಿಮ್ಮನ ಧ್ವನಿ. ಅದಕ್ಕಾಗಿಯೇ ಕೆಲವರು ಅವನನ್ನು ದೊಡ್ಡ ಬಾಯಿ ತಿಮ್ಮ ಎಂದು ಕರೆಯುತ್ತಿದ್ದರು. ಬಳಚು ಮಾರಿ ಹಣ, ಇಲ್ಲದಿದ್ದರೆ ಬತ್ತ ಅಥವಾ ಅಕ್ಕಿ ಯಾವುದನ್ನು ಕೊಟ್ಟರೂ ತೆಗೆದುಕೊಳ್ಳುತ್ತಿದ್ದ. 6 ತಿಮ್ಮನ ದುಡ್ಡಿನ ಮಡಕೆ ದೋಣಿ ದುಡ್ಡಿನ ಮಡಕೆ ಎಂದೇ ಹೆಸರಾಗಿತ್ತು. ಹೆಸರಾಗಿತ್ತು ಅಂದರೆ ಕೇರಿಯಲ್ಲಿ ಅಲ್ಲ, ಮನೆಮಂದಿಯಲ್ಲೇ. ಹೊರಗೆ ಎಲ್ಲಿಯೂ ಸುದ್ದಿ ಮಾಡಿರಲಿಲ್ಲ. ಗೊತ್ತಾದರೆ ಕಳ್ಳರು ಕನ್ನ ಹಾಕುವ ಭಯವಿತ್ತು. ಈಗ ಮಡಕೆಯನ್ನು ಅಲುಗಿಸಿದರೆ ಝಣ್‌ ಝಣ್‌ ಸದ್ದು ಬರುತ್ತಿತ್ತು. ಇದೇ ಸುಮಾರಿಗೆ ಸಾಗರದ ಕಡೆಯ ಮಲ್ಲಪ್ಪಓಸಿ’ ಪಟ್ಟಿ ಮಾಡಲಿಕ್ಕೆ ಇತ್ತಲಾಗೆ ಬಂದದ್ದು. ಅವನು ಇಲ್ಲೇ ಉಳಿದು ಪಟ್ಟಿ ಮಾಡಿದ ಹಣವನ್ನೆಲ್ಲ ತನ್ನಲ್ಲೇ ಇಟ್ಟುಕೊಳ್ಳುತ್ತಿದ್ದ. ನಂಬರು ತಾಗಿದವರಿಗೆ ತಾನೇ ಹಣ ಸಂದಾಯ ಮಾಡುತ್ತಿದ್ದ. ತನ್ನ ಕೆಳಗೆ ಸುಮಾರು ಹತ್ತು ಹದಿನೈದು ಜನರನ್ನು ಪಟ್ಟಿ ಮಾಡಲಿಕ್ಕೆ ಇಟ್ಟುಕೊಂಡಿದ್ದ. ಅವರು ಮನೆ ಮನೆಗೆ ಹೋಗಿ ನಂಬರು ಕೇಳಿ ಬರೆದುಕೊಂಡು ಚೀಟಿ ಕೊಟ್ಟು ಬರುತ್ತಿದ್ದರು. ಮಾರನೇ ದಿನ ಆ ನಂಬರು ಬಂದರೆ ತಾವೇ ಹೋಗಿ ಹಣ ಮುಟ್ಟಿಸುತ್ತಿದ್ದರು. ಈ ದಂಧೆ ಪ್ರಾಮಾಣಿಕತೆಯ ಆಧಾರದ ಮೇಲೆಯೇ ನಡೆಯುತ್ತಿತ್ತು.
ಒಂದಾಣೆಗೆ ನಾಲ್ಕು ರುಪಾಯಿ ಅಂದರೆ ಯಾರಿಗೆ ಮನಸ್ಸು ತಡೆಯುತ್ತದೆ. ಹೋದರೆ ಒಂದಾಣೆ ಅಲ್ಲವಾ? ಬರದೆ ಹೋದರೆ ನಾಳೆ ಮತ್ತೆ ಕಟ್ಟಿದರೆ ಆಯ್ತು. ತಾಗುವವರೆಗೂ ಬಿಡಲೇಬಾರದು ಎನ್ನುವ ಮನೋಭಾವ ಜನರದ್ದು.
ಓಸಿ ಕಟ್ಟುವವರಿಗೂ ಶಕುನಗಿಕುನ ಎಲ್ಲ ಅದೆ. ಬಹುತೇಕ ಜನರು ಕನಸಿನ ಮೇಲಿಂದ ಲೆಕ್ಕಾಚಾರ ಹಾಕಿ ಹಣ ಕಟ್ಟುತ್ತಿದ್ದರು. ಕೆಲವರ ಕನಸಿನಲ್ಲಿ ನೇರವಾಗಿ ನಂಬರೇ ಕಾಣಿಸಿಕೊಳ್ಳುತ್ತದೆಯಂತೆ. ಕೆಲವರಿಗೆ ಸಂಕೇತದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆಯಂತೆ. ಹಾಗಾಗಿ ಪುಸ್ತಕದ ರೂಪದಲ್ಲಿ ಅಚ್ಚಾಗದೆ ಹೋದರೂ ಓಸಿ ಪಂಚಾಂಗ ತನ್ನಷ್ಟಕ್ಕೆ ತಾನೇ ರೂಪುಗೊಂಡಿತ್ತು. ಓಸಿ ಕಟ್ಟುವವರಿಗೇ ಕನಸು ಬೀಳಬೇಕೆಂದು ಇಲ್ಲ. ಬೇರೆಯವರ ಕನಸೇ ಆದರೂ ಆಗುತ್ತದೆ. ಕಟ್ಟುವವರಿಗೆ ತಮ್ಮ ಕನಸು ಹೇಳಿ ಹಣ ಮಾಡುವವರೂ ಇದ್ದರು.
ಅಲ್ಲೇ ಹತ್ತಿರ ಹತ್ತಿರ ದೇವಸ್ಥಾನ ಒಂದಿದೆ. ಅಲ್ಲಿಯ ಪೂಜಾರಿಗೆ `ಭಾರ’ ಬರುತ್ತದೆಯಂತೆ. ಭಾರ ಎಂದರೆ ಮೈಮೇಲೆ ಬರುವುದು. ಮೇಮೇಲೆ ದೇವರ ಆವೇಶ ಬಂದು ಪಾತ್ರಧಾರಿ ಮಾತನಾಡುತ್ತಾನೆ. ಆಗ ಬೇಕಾದವರು ತಮಗೆ ಬಂದ ಸಂಕಟಗಳನ್ನು ಹೇಳಿ ಪರಿಹರಿಸಿಕೊಳ್ಳಬಹುದು. ಹಾಗೆ ಭಾರ ಬಂದಾಗ ಓಸಿ ನಂಬರೂ ಹೇಳುತ್ತಾರಂತೆ. ಬಂದ ಹಣದಲ್ಲಿ ದೇವರ ಪಾಲು ಎಷ್ಟು ಎಂದು ನಿಷ್ಕರ್ಶೆಯಾದ ಮೇಲೆಯೇ ನಂಬರು ಹೇಳುವುದು, ಅದೂ ಗೂಢವಾಗಿ. ನೋಡಿ ಕೇಳಿದವರು ಇದನ್ನು ಹೂಬೇ ಹೂಬಾಗಿ ವರ್ಣಿಸುತ್ತಾರೆ. ಆ ರೀತಿಯಲ್ಲಿ ದಿಢೀರ್‌ ಶ್ರೀಮಂತರಾದವರೂ ಇದ್ದಾರೆ ಅಲ್ಲಲ್ಲಿ. ಹೀಗೆ ಓಸಿ ಪಿಡುಗು ಹಬ್ಬುತ್ತಿರುವಂತೆಯೆ ತಿಮ್ಮ ತನ್ನ ದಿನದ ಗಳಿಕೆಯ ನಾಲ್ಕೆಂಟಾಣೆಯನ್ನು ಅದಕ್ಕೆ ಮೀಸಲಿಡುತ್ತಿದ್ದ. ಆಗೊಮ್ಮೆ ಈಗೊಮ್ಮೆ ಅವನಿಗೆ ಬಂದುದೂ ಇತ್ತು.
ಓಸಿ ಇತ್ತಲಾಗೆ ಬಂದ ಮೇಲೆಯೇ ಸುರೇಶಭಟ್ಟನ ಮನೆಗೆ ಗಿರಾಕಿ ಬರಲಿಕ್ಕೆ ಹತ್ತಿದ್ದು. ತನ್ನ ಪಂಚಾಂಗದ ಜೊತೆಯಲ್ಲೇ ಓಸಿ ಚಾರ್ಟು ಇಟ್ಟುಕೊಂಡು ತಿರುಗುತ್ತಿದ್ದ. ವಾರದಲ್ಲಿ ಮೂರು ಸಲವಾದರೂ ತನಗೆ ಓಸಿ ಬಿದ್ದಿದೆ ಎಂದು ಗೌಜಿ ಹಾಕಿಸಿಕೊಳ್ಳುತ್ತಿದ್ದ. ಉಳಿದ ಸಲ ಒಂದು ನಂಬರು ಹೆಚ್ಚುಕಡಿಮೆಯಾಗಿಯೋ, ಕಟ್ಟಿದ ನಂಬರು ತಿರುವು ಮುರುವು ಆಗಿಯೋ ಹೋಯ್ತು ಎಂದು ಪ್ರಚಾರ ಮಾಡುತ್ತಿದ್ದ. ಹಾಗಾಗಿ ನಂಬರು ಕೇಳಲಿಕ್ಕೆ ಅವನಲ್ಲಿಗೆ ಹೋಗುವವರು ಹೆಚ್ಚಾದರು. ಹೋದವರಿಗೆಲ್ಲ ಕಡಿಮೆ ಅಂದರೂ ಹತ್ತು ನಂಬರು ಹೇಳಿ ಕಳುಹಿಸುತ್ತಿದ್ದ.
ಕೇವಲ ಗಂಡಸರಷ್ಟೇ ಅಲ್ಲ, ಹೆಂಗಸರು, ಮಕ್ಕಳು ಕೂಡ ಓಸಿ ಕಟ್ಟುತ್ತಿದ್ದರು. ಒಬ್ಬರಿಗೆ ಗೊತ್ತಿಲ್ಲದ ಹಾಗೆ ಒಬ್ಬರು. ತಿಮ್ಮ ಓಸಿ ಕಟ್ಟಲಿಕ್ಕೆ ಸುರು ಮಾಡಿದ ಕಾರಣ ಅಂದ್ರೆ ಹೇಗಾದ್ರೂ ಒಂದಿಷ್ಟು ಹಣ ಮಾಡಿ ಒಂದು ದೋಣಿ ತೆಗೆದುಕೊಳ್ಳಬೇಕು ಮತ್ತು ಗಡುಗಾಲ ಹಿಡಿಯುವುದರೊಳಗೆ ಸುಬ್ಬಿದೊಂದು ಮದುವೆ ಮಾಡಬೇಕು ಎನ್ನುವ ತೀವ್ರ ಅಭಿಲಾಶೆ. ಓಸಿ ಕಟ್ಟುವುದು ಅವನಿಗೆ ಯಾವ ರೀತಿಯಿಂದಲೂ ತಪ್ಪಾಗಿ ಕಂಡಿರಲಿಲ್ಲ.

ಹಂಚಿನ ಕಾರ್ಖಾನೆಗೆ ಮಣ್ಣು ಸಾಗಿಸುವ ದೋಣಿಗೆ ಕೆಲಸಕ್ಕೆ ಸೇರಿದ ರಾಮನಿಗೆ ಅಪ್ಪ ಹೇಳಿದ್ದ, ಸುಬ್ಬಿಗೆ ತಕ್ಕಾದವ ಯಾರಾದರೂ ಇದ್ರೆ ಒಂದು ನದರು ಹಾಕಿ ಇಡು ಎಂಬ ಮಾತು ತಲೆಯಲ್ಲೇ ಇತ್ತು. ಇವರು ಮಣ್ಣು ತುಂಬಿ ತಂದ ದೋಣಿಯನ್ನು ಖಾಲಿ ಮಾಡಲಿಕ್ಕೆ ಮೋಳ್ಕೋಡಿನವರ ಆರು ಜನರ ಒಂದು ತಂಡವಿತ್ತು. ಅವರಲ್ಲಿ ಇಪ್ಪತ್ತಮೂರು ಇಪ್ಪತ್ನಾಲ್ಕು ವರ್ಷ ಪ್ರಾಯದ ಶಿವ ಎನ್ನುವ ಹುಡುಗನೂ ಇದ್ದ. ರಾಮ ಸೂಕ್ಷ್ಮವಾಗಿ ಅವನ ಚಲನವಲನಗಳನ್ನು ಗಮನಿಸುತ್ತಲೆ ಇದ್ದ. ಅವನ ಹಿನ್ನೆಲೆಯನ್ನು ಪರೋಕ್ಷವಾಗಿ ತಿಳಿದುಕೊಂಡಿದ್ದ. ಶಿವನಿಗೆ ಇನ್ನೂ ತನಕ ಮದುವೆ ಆಗದೆ ಇದ್ದದ್ದೂ, ಈ ವರ್ಷ ಮದುವೆಯಾಗುವ ತಲಬಿನಲ್ಲಿ ಇದ್ದಾನೆ ಎಂಬುದೂ ತಿಳಿದ ಮೇಲೆ ಅವನ ಜೊತೆ ಹೆಚ್ಚಾಗಿ ದೋಸ್ತಿ ಕಟ್ಟಿದ್ದ. ಶಿವನ ಮಾತು, ನಡತೆ, ನಗೆ ಎಲ್ಲ ರಾಮನಿಗೆ ಹಿತವಾಗಿ ಕಂಡವು. ಅಡ್ಡ ಚಟ ಅವನಿಗೇನೂ ಇಲ್ಲ ಎನ್ನುವುದದು ತಿಳಿದ ಮೇಲೆ ಇವನಿಗೆ ಸುಬ್ಬಿಯನ್ನು ಕೊಟ್ಟರೆ ಹೇಗೆ ಎನ್ನುವ ವಿಚಾರ ರಾಮನ ತಲೆಯಲ್ಲಿ ಬಂತು.
ಒಂದು ಶನಿವಾರ ದಿನ ರಾಮ ತನ್ನ ಜೊತೆಯಲ್ಲಿ ಶಿವನನ್ನು ಮನೆಗೆ ಕರೆದೊಯ್ದ. ಶಿವನ ವಿಷಯ ಮನೆಯವರಿಗೆ ಮೊದಲೇ ಗೊತ್ತಿದ್ದರಿಂದ ಊಟದ ವ್ಯವಸ್ಥೆ ಸ್ವಲ್ಪ ವಿಶೇಷವಾಗಿತ್ತು. ಸುಬ್ಬಿಯೂ ನಾಲ್ಕಾರು ಬಾರಿ ಅವನೆದುರಿಗೆ ಸುಳಿದಾಡಿದಳು. ಮದುವೆಯ ಪ್ರಾಯಕ್ಕೆ ಬಂದ ಸುಬ್ಬಿ, ಊಟ ಉಪಚಾರದಲ್ಲಿ ವಹಿಸಿದ ಕಾಳಜಿ ಇವೆಲ್ಲವುಗಳಿಂದ ರಾಮ ತನ್ನನ್ನು ಇಲ್ಲಿಗೆ ಕರೆದು ತಂದುದರ ನಿಜವಾದ ಉದ್ದೇಶದ ಕುರಿತು ಶಿವನಿಗೆ ಗುಮಾನಿ ಬರಲಿಕ್ಕೆ ಹತ್ತಿತು. ಆ ಮೇಲೆ ಅವನೂ ಸ್ವಲ್ಪ ಹೆಚ್ಚು ಲಕ್ಷ್ಯ ಕೊಟ್ಟು ಸುಬ್ಬಿಯನ್ನು ಗಮನಿಸಿದ. ಹುಡುಗಿ ಅಡ್ಡಿಯಿಲ್ಲ ಅನ್ನುವ ಹಾಗೆ ಆಯಿತು ಅವನಿಗೆ.
ಎಂಟು ದಿನ ಬಿಟ್ಟು ತಿಮ್ಮ ಮೋಳ್ಕೋಡಿಗೆ ಹೋಗಿ ಬಂದ. ಶಿವನ ಮನೆಯವರೂ ಒಂದು ಸಲ ಇಲ್ಲಿಗೆ ಬಂದು ಹೋದರು. ಮಾತುಕತೆ ಆಯಿತು. ಇಡಗುಂಜಿ ದೇವಸ್ಥಾನದಲ್ಲಿ ಪ್ರಸಾದ' ಕೇಳಬೇಕು ಎಂದಾಯಿತು. ಈ ಬದಿಗೆ ಗಂಡುಹೆಣ್ಣಿನ ವೈವಾಹಿಕ ಜೀವನದ ಭವಿಷ್ಯವನ್ನು ತಿಳಿದು ಈ ಗಂಡಿಗೆ ಈ ಹೆಣ್ಣು ಅಡ್ಡಿಯಿಲ್ಲ ಆಗದು ಎಂದು ಹೇಳುವವರು ಮನುಷ್ಯರಲ್ಲ, ಇಡಗುಂಜಿ ಗಣಪತಿ ದೇವರು ಮತ್ತು ಕಾನಗೋಡು ಕೇಶವ ದೇವರು. ಅರ್ಧ ಜನ ಅತ್ತ ಹೋದರೆ ಅರ್ದ ಜನ ಇತ್ತ ಬರುತ್ತಿದ್ದರು. ಇಡಗುಂಜಿಯಲ್ಲಿ ಗಣಪನ ಪಾದಗಳ ಮೇಲೆ ತಾಡೋಲೆಯ ಸಣ್ಣ ತುಂಡಿನ ಮೇಲೆ ಗಂಡು ಹೆಣ್ಣಿನ ಹೆಸರನ್ನು ಬರೆದು ಅಂಟಿಸುತ್ತಾರ. ಜೋಡಿ ಅಡ್ಡಿಯಿಲ್ಲ ಅಂತಿದ್ದರೆ ಬಲದ ಪಾದದ ಮೇಲಿನ ಓಲೆ ಹಾರಿ ಬೀಳುತ್ತದೆ. ಆಗದು ಅಂತಿದ್ದರೆ ಎಡ ಪಾದದ ಮೇಲಿನ ಓಲೆ ಹಾರಿ ಬೀಳುತ್ತದೆ. ಕಾನಗೋಡಿನಲ್ಲಿ ಕೇಶವ ದೇವರ ಎರಡು ಕೈ ಸಂದುಗಳಲ್ಲೂ ಅಡಕೆ ಮರದ ಸಿಂಗಾರವನ್ನು ತುರುಕುತ್ತಾರೆ. ಹೆಣ್ಣು ಗಂಡು ಅಡ್ಡಿಯಿಲ್ಲ ಅಂತಿದ್ದರೆ ಬಲತೋಳಿನ ಸಿಂಗಾರ ಕೆಳಗೆ ಬೀಳುತ್ತದೆ. ಆಗದು ಅಂತಿದ್ದರೆ ಎಡ ತೋಳಿನ ಸಿಂಗಾರ ಬೀಳುತ್ತದೆ. ಎರಡೂ ದೇವರಲ್ಲಿ ಒಂದು ವಿಶೇಷ ಇದೆ. ಏನೆಂದರೆ ಗಂಡಿಗಾಗಲಿ ಹೆಣ್ಣಿಗಾಗಲಿ ಸೂತಕ, ಮುಟ್ಟು ಇತ್ಯಾದಿಗಳಿಂದ ಮೈಲಿಗೆ ಬಂದಿದ್ದರೆ ಪ್ರಸಾದವೇ ಆಗುವುದಿಲ್ಲ. ಇಡಗುಂಜಿಯಲ್ಲಿ ಬಲದ ಪ್ರಸಾದವೇ ಆಯಿತು. ಮಾವಿನಕುರುವ ಹಬ್ಬ ಆದ ಮೇಲೆ ಅನಿಲಗೋಡ ಹಬ್ಬ ಆಗುವುದರೊಳಗೆ ಮದುವೆ ಮಾಡುವುದೆಂದು ನಿಶ್ಚಯವಾಯಿತು. ಅಲ್ಲಿಯ ವರೆಗೆ ತಯಾರಿ ಆಗಬೇಕಲ್ಲ? ಅದೇ ದಿನವೆ ತಿಮ್ಮ ಗೋವಾದಲ್ಲಿದ್ದ ಮಗನಿಗೆ ಪತ್ರ ಬರೆದು ಮಜ್ಕೂರು ತಿಳಿಸಿದ. ಎಂಟು ದಿನ ಮೊದಲೇ ಬರುವಂತೆ ಬರೆಸಿದ್ದ. 7 ಮೋಳ್ಕೋಡಿನ ಶಿವ ಎಲ್ಲ ವಿಧದಲ್ಲೂ ಸುಬ್ಬಿಗೆ ಅನುರೂಪನೆ ಆಗಿದ್ದ. ಮನೆಯಲ್ಲಿ ಸ್ವಲ್ಪ ಅನುಕೂಲ ಇತ್ತು. ಅಲ್ಲದೆ ಇವನಿಗೆ ಹಂಚಿನ ಕಾರ್ಖಾನೆಯಲ್ಲಿ ವರ್ಷವಿಡಿ ಕೆಲಸ ಇರುತ್ತಿತ್ತು. ಹಾಗಾಗಿ ಮಗಳ ಹೊಟ್ಟೆಗೆ ಏನೇನೂ ಕೊರತೆ ಆಗುವುದಿಲ್ಲ ಎನ್ನುವ ಖಾತ್ರಿ ತಿಮ್ಮನಿಗಿತ್ತು. ಆದ್ದರಿಂದ ಈ ಸಂಬಂಧದಲ್ಲಿ ಅವನು ನಿಶ್ಚಿಂತನಾಗಿದ್ದ. ತಿಮ್ಮ ರಾಮ ಸೇರಿಕೊಂಡು ಸಾಮಾನು, ಜವುಳಿ ಇತ್ಯಾದಿಗಳ ವ್ಯವಸ್ಥೆ ಮಾಡಿದರು. ಅಲ್ಲಲ್ಲಿ ಕಡ ಮಾಡಿದ್ದರು. ಶುಕ್ರ ಬಂಗಾರದ ಉಂಗುರ ಮತ್ತು ಒಂದೆಳೆ ಕರಿಮಣಿ ಮಾಡಿಸಿಕೊಂಡು ಬಂದಿದ್ದ. ಹತ್ತು ಜನ ಕೂಡಿದರು. ಒಬ್ಬರಿಗೊಬ್ಬರು ಮದ್ದತ್ತು ಮಾಡಿದರು. ತಿಮ್ಮನ ಮನೆಯ ಎದುರಿಗೆ ಮದುವೆಯ ಚಪ್ಪರ ತಯಾರಾಯಿತು. ಯಾರದೋ ತೋಟದ ಬಾಳೆಯ ಗಿಡಗಳನ್ನು ಕಡಿದು ತಂದು ನಿಲ್ಲಿಸಿದರು. ಮಾವಿನ ಮರದ ಟೊಂಗೆಗಳನ್ನು ತಂದು ತೋರಣ ಕಟ್ಟಿದರು. ಚಪ್ಪರದಲ್ಲಿ ವಾಲಗದ ಸದ್ದು, ಗರ್ನಾಲು ಢಂಢಂ ಎಂದು ಹೊಟ್ಟಿದವು. ಹೆಂಗಸರ ಗೌಜಿಯ ನಡುವೆಯೂ ಮಕ್ಕಳ ಅಳು ಆಗಾಗ ಕೇಳುತ್ತಿತ್ತು. ಹಿತ್ತಲು ಮೂಲೆಯಲ್ಲಿ ಗಂಡಸರು ಗುಂಪುಗುಂಪಾಗಿ ಕುಳಿತು ಬಾಟಲಿ ಬಗ್ಗಿಸುತ್ತಿದ್ದರು. ಆಗಾಗ ಹೆಂಗಸರ ಹಾಡು ಕೇಳಿಬರುತ್ತಿತ್ತು. ಸಂಜೆಯ ಹೊತ್ತಿಗೆ ಮದುವೆಯ ಎಲ್ಲ ಚಡಂಗ ಮುಗಿದವು. ಸುಬ್ಬಿ ಅಳುತ್ತಲೆ ಶಿವನ ಬೆನ್ನಿಗೆ ಹೊರಟು ದೋಣಿ ಹತ್ತಿದಳು. ದಿಬ್ಬಣದವರೆಲ್ಲ ದೋಣಿ ಹತ್ತಿದ ಮೇಲೆ ದೋಣಿಯನ್ನು ದಡದಿಂದ ಹೊರಗೆ ಮಾಡಿದರು. ಸುಬ್ಬಿಯ ದಿಬ್ಬಣ ಮೋಳ್ಕೋಡಿಗೆ ಹೊರಟಿತು. ಅದರ ಮರುದಿನ ಮರುದಿಬ್ಬಣವೂ ಬಂತು. ಮುನ್ನಾ ದಿನ ಅಳುತ್ತಾ ಹೋದ ಸುಬ್ಬಿ ಈಗ ನಗುತ್ತಾ ಬಂದಿದ್ದಳು. ಸುಬ್ಬಿ ಸಂತೋಷಪಡುವ ಹಾಗೇ ಇದ್ದ ಶಿವ. ಸದ್ಯ ದೂರದಿಂದಲೇ ನೋಡಿ, ಚೇಷ್ಟೆ ಮಾಡಿ ಸಂತೋಷ ಪಡಬೇಕಿತ್ತು. ಹೊಸ ಮದುಮಕ್ಕಳು, ಮದುವೆ ಮನೆ. ಹಾಗಾಗಿ ಜನ ಸದಾ ಸುತ್ತುವರಿದುಬಿಡುತ್ತಿದ್ದರು. ಶೋಭನಕ್ಕೆ ಇನ್ನೂ ನಾಲ್ಕು ದಿನ ಇತ್ತು. ಶಿವನಿಗೆ ಸುಮ್ಮನೆ ಕುಳಿತು ಬೇಜಾರು. ಆ ದಿನ ರಾತ್ರಿ ಎಲ್ಲರೂ ಬೆಪ್ಪಿಗೆ ಹೋಗುವುದು ಎಂದು ನಿಶ್ಚಯವಾಯಿತು. ತಿಮ್ಮನ ಬಾಜು ಮನೆಯವರು ಮೂರು ಜನ ತಯಾರಿ ಆದರು. ಮೋಳ್ಕೋಡಿನಿಂದ ಬಂದ ಇಬ್ಬರು ಎದ್ದರು. ರಾಮನ ಜೊತೆಗೆ ಶಿವನೂ ತಯಾರು ಆದ. ದೇವಿ, ಹೊಸ ಮದುಮಗ ಹೋಗುವುದು ಬೇಡ ಅಂದಳು. ಅವಳ ಮಾತು ಹೊರಟು ನಿಂತವರ ಉತ್ಸಾಹದಲ್ಲಿ ಯಾರಿಗೂ ಕೇಳದೆ ಹೋಯ್ತು. ಏಳು ಜನ ಹೊರಟವರಲ್ಲಿ ಒಬ್ಬನ ಬಿಟ್ಟು ಉಳಿದವರೆಲ್ಲ ಹೊಂತ್ಕಾರಿಗಳೆ. ಮತ್ತು ಹೋಗುವಾಗಲೆ ಸಿಂಜಾವನ ಅಂಗಡಿ ಹೊಕ್ಕು ಅರ್ಧ ಅರ್ಧ ಬಾಟ್ಲಿ ಶೇಂದಿ ಕುಡಿದಿದ್ದರು. ದೊಡ್ಡದಾಗಿ ಮಾತನಾಡುತ್ತ, ಅಷ್ಟೇ ದೊಡ್ಡದಾಗಿ ನಗುತ್ತ ನಡು ನಡುವೆ ಶಿವನನ್ನು ಗೋಳು ಹೊಯ್ಯುತ್ತ ಇದ್ದರು. ಎಷ್ಟೆಂದರೂ ಹೊಸ ಮದುಮಗ ಅವನು. ಇನ್ನೂ ಹೆಣ್ಣಿನ ಅನುಭವ ಇಲ್ಲದವನು. ಅಂಥವನಿಗೆ ಉಳಿದವರು ಮೊದಲ ರಾತ್ರಿಯಲ್ಲಿ ಆಗುವ ಫಜೀತಿ ಕುರಿತು ಅತ್ಯಂತ ಮಜಾದಲ್ಲಿ ಉಪನ್ಯಾಸ ಕೊಡುತ್ತಿದ್ದರು. ಹಾಗೆ ಫಜೀತಿ ಪಟ್ಟ ಸದ್ಯ ಬದುಕಿದ್ದವರ ಎಷ್ಟೋ ಉದಾಹರಣೆಗಳನ್ನು ನೀಡುತ್ತಿದ್ದರು. ಹೊಳೆಯಲ್ಲಿ ತುಂಬಿದ ಭರಿತ. ಇವರು ತಾವು ಉದ್ದೇಶಿಸಿ ಹೊರಟ ಸ್ಥಳದ ಹತ್ತಿರ ಹತ್ತಿರ ಬಂದಿದ್ದಾರೆ. ಕುಡಿದ ಅಮಲು ಏರುತ್ತಿತ್ತು. ಕುತ್ತಿಗೆ ಮಟ್ಟ ನೀರಿನಲ್ಲಿ ಇಳಿದು ಸಮಾರು ಹದಿನೈದು ಮಾರು ಉದ್ದಕ್ಕೆ ನಾಲ್ಕೂರು ಗೂಟಗಳನ್ನು ನಿಲ್ಲಿಸಿದರು. ಅಷ್ಟೇ ಉದ್ದದ ಬಲೆಯನ್ನು ಆ ಗೂಟಗಳ ತಲೆಯ ಮೇಲೆ ನೇತು ಹಾಕಿದರು. ಕೆಳಭಾಗದಲ್ಲಿ ಕಲ್ಲುಗಳನ್ನು ಉದ್ದಕ್ಕೂ ಕಟ್ಟಿದ್ದರಿಂದ ಬಲೆ ನೀರಿನಲ್ಲಿ ಮುಳುಗಿತು. ಕ್ರಿಕೆಟ್‌ ಆಟದಲ್ಲಿ ನೆಟ್‌ ಪ್ರ್ಯಾಕ್ಟೀಸ್‌ ಮಾಡುವ ಕಾಲಕ್ಕೆ ಹಿಂಭಾಗದಲ್ಲಿ ಬಲೆಯನ್ನು ಕಟ್ಟಿಕೊಳ್ಳುವುದಿಲ್ಲವೆ, ಆ ರೀತಿ ಇತ್ತು ಇವರು ಮಾಡಿಕೊಂಡ ವ್ಯವಸ್ಥೆ. ಇಷ್ಟು ಆದ ಮೇಲೆ, ಸುಮಾರು ಐವತ್ತು ಮಾರು ಉದ್ದದ ಕಿರುಬೆರಳು ಗಾತ್ರದ ನೇಣಿಗೆ ಗೇಣಿಗೊಂದರಂತೆ ತೆಂಗಿನ ಮರದ ಸುಳಿ ಹೆಡೆಯ ಜಮೆಯನ್ನು ಸುರಿದು ಮಾಡಿದ ಹಗ್ಗವನ್ನು ಕೈಗೆತ್ತಿಕೊಂಡರು. ಈ ಹಗ್ಗವನ್ನು ಆರೆಂಟು ಜನ ಸೇರಿ ನೀರಿನಲ್ಲಿ ಎಳೆಯುತ್ತ ಬಂದರೆ, ಆಗ ಹಸಿರು ಮಿಶ್ರಿತ ಹಳದಿ ಬಣ್ಣದ ಜಮೆಗಳು ನೀರಿನೊಳಗಿನ ಮೀನನ್ನು ಮೋಸಗೊಳಿಸುತ್ತವೆ. ಹಗ್ಗವನ್ನು ಬಲೆಗೆ ಅಭಿಮುಖವಾಗಿ ಸುತ್ತುಗಟ್ಟಿ ಎಳೆಯುತ್ತಾರೆ. ಆ ಸಮಯದಲ್ಲಿ ಒಂದು ರೀತಿಯಲ್ಲಿ ಅಲ್ಲೋಲ ಕಲ್ಲೋಲ ಸ್ಥಿತಿ ನೀರಿನಲ್ಲಿ ಉಂಟಾಗಿ ಮೀನುಗಳು ಗಾಬರಿ ಬೀಳುವವು. ಈ ಜಮೆಗಳೂ ಗೊಂದಲಕ್ಕೊಳಗಾದ ಮೀನುಗಳಿಗೆ ಮೀನುಗಳಂತೆಯೇ ಕಾಣುತ್ತವೆ. ಸಾಲುಸಾಲಾಗಿ ಬಲೆಯ ದಿಕ್ಕಿಗೆ ಜಮೆಗಳು ಚಲಿಸುವಾಗ ಮೀನುಗಳೂ ಅವುಗಳನ್ನು ಹಿಂಬಾಲಿಸಿ ಬಂದು ಬಲೆ.ಲ್ಲಿ ಬೀಳುವವರು. ನೀರು ಸ್ವಲ್ಪ ಇಳಿಯಲಿ ಎಂದು ಇವರೆಲ್ಲ ಕಾದು ಕುಳಿತರು. ಒಂದು ತಾಸು ಅದು ಇದು ಅಂತ ಪಟ್ಟಾಂಗ ಬಿಚ್ಚಿದರು. ಆ ಮೇಲೆ ನೀರಿಗಿಳಿದರು. ಈಗ ನೀರು ಎದೆ ಮಟ್ಟಕ್ಕೆ ಬಂದಿತ್ತು. ಹಗ್ಗದ ಒಂದು ತುದಿಯನ್ನು ರಾಮನೂ ಇನ್ನೊಂದು ತುದಿಯನ್ನು ಶಿವನೂ ಹಿಡಿದುಕೊಂಡರು. ಉಳಿದವರು ಮಧ್ಯದಲ್ಲಿ ಹಿಡಿದುಕೊಂಡರು. ಒಂದಿಬ್ಬರು ನೀರಿನಲ್ಲಿ ಹುಚ್ಚಾಪಟ್ಟೆ ಓಡಾಡುತ್ತ ನೀರನ್ನು ಕದಡುತ್ತಿದ್ದರು. ಅರ್ದ ತಾಸು ಕಳೆದಿರಬೇಕು. ಎಲ್ಲರಿಗೂ ಸುಸ್ತು ಆಗುತ್ತಾ ಬಂದಿತ್ತು. ಅದೇ ಸಮಯಕ್ಕೆ ಹಗ್ಗದ ಒಂದು ತುದಿಯನ್ನು ಹಿಡಿದುಕೊಂಡು ಎಳೆಯುತ್ತಿದ್ದ ಶಿವನಿಗೆ ಒಮ್ಮೆಲೇ ನೆಲೆ ತಪ್ಪಿದಂತಾಯಿತು. ನಿಜಕ್ಕೂ ಅಲ್ಲಿ ದೊಡ್ಡ ಕೊರಕಲೇ ಇತ್ತು. ಒಮ್ಮೆ ಕೆಳಗೆ ಇಳಿದು ಹೋದ ಶಿವನಿಗೆ ಆಧರಿಸಿಕೊಂಡು ಅಡ್ಡ ಬಿದ್ದು ಈಸಲಿಕ್ಕೆ ಆಗಲೇ ಇಲ್ಲ. ಬುಳ್‌ ಬುಳ್‌ ಬುಳ್‌ ಸಪ್ಪಳ ಕೇಳಿಸಿತು. ಮಬ್ಬು ಬೆಳಕಿನಲ್ಲೇ ಶಿವನ ಕೈ ಒಂದು ಸಲ ಮೇಲೆ ಬಂದದ್ದು ನೋಡಿದರು. ನಡೆದದ್ದು ಸಂಪೂರ್ಣ ಅರ್ಥವಾಗಿ ಉಳಿದವರು ಅಲ್ಲಿಗೆ ಧಾವಿಸುವುದರೊಳಗೆ ಪರಿಸ್ಥಿತಿ ಬಿಗಡಾಯಿಸಿತ್ತು. ರಾಮ ಉಳಿದವರೆಲ್ಲ ನೋಡುತ್ತ ನಿಂತಿರುವಾಗಲೆ ನೀರಿನಲ್ಲಿ ಮುಳುಗಿದ. ನೆಲವನ್ನು ಕಚ್ಚಿ ಹಿಡಿದ ಶಿವನನ್ನು ಎಳೆದು ಮೇಲೆ ತಂದ. ನೀರು ಕುಡಿದ ಹೊಟ್ಟೆ ಉಬ್ಬಿತ್ತು. ಹಾಗೇ ಎಳೆದುಕೊಂಡು ದೋಣಿ ಬುಡಕ್ಕೆ ಬಂದರು. ಮೊದಲು ನೀರನ್ನು ಕಾರಿಸಬೇಕಿತ್ತು. ನಡುಹೊಳೆಯಲ್ಲಿ ಏನು ಮಾಡುತ್ತಾರೆ ಅವರು? ಅಷ್ಟರಲ್ಲೇ ಒಬ್ಬನಿಗೆ ಅಡಗ ಕಣ್ಣಿಗೆ ಬಿತ್ತು. ಅಡಗ ಅಂದರೆ ದೋಣಿಯ ಎರಡು ಬಾಣಿಗೆಗಳನ್ನು ಜೋಡಿಸಿ ಮೇಲ್ಭಾಗದಲ್ಲಿ ಕಟ್ಟುವ ಗೇಣಗಲದ ಹಲಗೆ. ಶಿವನನ್ನು ಎತ್ತಿ ಆ ಅಡಗ ಹೊಟ್ಟೆಯ ಕೆಳಗೆ ಬರುವಂತೆ ಮಾಡಿ ಕವುಂಚಿ ಮಲಗಿಸಿ ಬೆನ್ನನ್ನು ಅಮುಕಿದರು. ಸ್ವಲ್ಪ ನೀರು ಬಾಯಿಂದ ಹೊರ ಬಂತು ಅಷ್ಟೇ. ಅವರ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಯ್ತು. ಆತಂಕ, ಭೀತಿಗಳಿಂದ ತುಂಬಿದ ಮುಖ ಅಳುಮುಖವಾಯಿತು. ಮಾತನಾಡದೆ ದೋಣಿಯನ್ನು ತಿರುಗಿಸಿ ನಡೆಸತೊಡಗಿದರು. 8 ಶಿವನ ಶವ ಸಂಸ್ಕಾರ ಮೋಳ್ಕೋಡಿನಲ್ಲೇ ಆಯಿತು. ರಾಮ ಅಲ್ಲಿದ್ದವನೆ ಎಲ್ಲ ಮುಗಿಸಿ ಬಂದನೇ ಹೊರತು ತಿಮ್ಮನ ಮನೆಯಿಂದ ಹೊಸದಾಗಿ ಯಾರೂ ಅಲ್ಲಿಗೆ ಹೋಗಲಿಲ್ಲ. ಸುಬ್ಬಿ ಇಲ್ಲೇ ಇದ್ದರು ಕೂಡ ಆಕೆಯ ಮದುಮಗಳ ಅಲಂಕಾರಗಳೆಲ್ಲ ಬರಿದಾದವು. ಮುತ್ತೈದೆ ಪಟ್ಟದ ಬದಲಾಗಿ ವಿಧವೆ ಪಟ್ಟ ಆಕೆಗೆ ದಕ್ಕಿತು. ಮಗಳ ಮೂಕ ರೋದನ ತಿಮ್ಮನಿಗೂ ಅರ್ಥವಾಗುತ್ತಿತ್ತು. ಹೆತ್ತವರಲ್ಲಲ್ಲದೆ ಕಕ್ಕುಲತೆ ಇನ್ನಾರಲ್ಲಿ ಬರಬೇಕು? ದಿನಗಳ ಮೇಲೆ ದಿನಗಳು, ತಿಂಗಳುಗಳ ಮೇಲೆ ತಿಂಗಳುಗಳು ಉರುಳುತ್ತಿತ್ತು. ತನ್ನ ಮಗಳು ಪುರುಷ ಸಂಬಂಧವನ್ನೇ ಹೊಂದದ ಸುಬ್ಬಿ ಜೀವಿತವಿಡಿ ಹೀಗೆಯೇ ಇರಬೇಕೆ ಎನ್ನುವ ಪ್ರಶ್ನೆ ತಿಮ್ಮನ ಮುಂದೆ ಸುಳಿಯುತ್ತಿತ್ತು. ಆಕೆಯನ್ನು ಶಿವನ ಮನೆಗೆ ಕಳುಹಿಸಿಕೊಟ್ಟಿರಲಿಲ್ಲ. ಅವರೂ ಕರೆಯಲು ಬಂದಿರಲಿಲ್ಲ. ಇವಳ ಕೆಟ್ಟ ಕಾಲಗುಣದಿಂದಲೇ ತಮ್ಮ ಮಗ ಹೋದ ಎಂದು ಅವರು ಶಾಪ ಹಾಕುತ್ತಿದ್ದರು. ತಿಮ್ಮ ಮನೆಯಲ್ಲಿ ಇರುವಾಗಲೆಲ್ಲ ಸುಬ್ಬಿ ಎದುರಿಗೆ ಸುಳಿದಾಡಿದಾಗ ಅವನಿಗೆ ತುಂಬ ಸಂಕಟ ಆಗುತ್ತಿತ್ತು. ಹಾಗಾಗಿ ಈಗೀಗ ಅವನು ಮನೆಯಿಂದ ಹೊರಗಡೆಯೇ ದಿನದ ಹೆಚ್ಚಿನ ವೇಳೆಯನ್ನು ಕಳೆಯುತ್ತಿದ್ದ. ಅವಳಿಗೆ ಇನ್ನೊಂದು ಮದುವೆಯನ್ನು ಯಾಕೆ ಮಾಡಬಾರದು ಎನ್ನುವ ವಿಚಾರವೂ ತಿಮ್ಮನ ತಲೆಯಲ್ಲಿ ಬಂದಿತ್ತು. ತನಗೆ ಆಗುವವರ ಮುಂದೆ ಈ ಮಾತನ್ನು ಪ್ರಸ್ತಾಪ ಮಾಡಿದ್ದ. ಅವರೂ ಕೂಡ ಇವನೆದುರಿಗೆ ಇವನ ಅಭಿಪ್ರಾಯ ಅನುಮೋದಿಸಿದ್ದರು. ಈ ವಿಷಯದಲ್ಲಿ ತಿಮ್ಮನಿಗೆ ಎದುರಾದ ಮೊದಲ ವಿರೋಧ ದೇವಿಯದೇ. ಶಿವ ಸತ್ತು ಆರು ತಿಂಗಳು ಆಗುವುದರೊಳಗೇ ಅವಳು ಜಗುಲಿಯ ಮೇಲೆ ಮಲಗಿದವಳು ಮಗ್ಗುಲಾಗಿ ಬಿದ್ದು ಸ್ವಲ್ಪ ಶಕ್ತಿಯಿದ್ದ ಪಾರ್ಶ್ವದ ಕೈಯ ಮೂಳೆಯನ್ನು ಮುರಿದುಕೊಂಡಿದ್ದಳು. ಹಾಗಾಗಿ ಈಗ ಅವಳು ಬಿದ್ದಲ್ಲೇ ಬಿದ್ದಿರುತ್ತಿದ್ದಳು. ತಿಮ್ಮನೇ ಒಮ್ಮೊಮ್ಮೆಆಕೆಗೆ ಉಣ್ಣಿಸುತ್ತಿದ್ದ. ಉಣ್ಣಿಸುವಾಗಲೆ ಆಕೆಗೆ ಮಧ್ಯದಲ್ಲಿ ಕೆಮ್ಮು ವಕ್ರಿಸುತ್ತಿತ್ತು. ತಿಮ್ಮನಿಗೂ ಒಂದೊಂದು ಸಲ, ಇಷ್ಟೆಲ್ಲ ಇವಳಿಗೆ ಯಾಕೆ ಕಾಡಿಸುತ್ತದೋ ಎಂದು ಅನಿಸುವುದು. ತಿಮ್ಮನ ದೋಣಿ ದುಡ್ಡಿನ ಮಡಕೆ ಈಗ ಸುಮಾರು ಒಜ್ಜೆಯಾಗಿತ್ತು. ಈ ಸಲ ಶುಕ್ರ ಗೋವಾದಿಂದ ಬಂದ ಮೇಲೆ ದೋಣಿ ಮಾಡಿಸುವ ವಿಚಾರ ಮಾಡಬೇಕು ಅಂದುಕೊಂಡ. ತಿಮ್ಮನ ಸರೀಕರೆಲ್ಲ ನಾಲ್ಕೈದು ವರುಷದ ಈಚೆ ತುಂಬ ಬಡಕಾಯಿಸಿ ಬಿಟ್ಟಿದ್ದರು. ಹಾಗಾಗಿ ದಿನ ಹೋದ ಹಾಗೆ ಅವನ ದೋಣಿ ಮಾಡಿಕೊಳ್ಳಬೇಕೆಂಬ ಆಸೆ ಉತ್ಕಟವಾಗುತ್ತ ಹೋಯಿತು. ತಿಮ್ಮ ಆಗಾಗ ಮಡಕೆಯನ್ನು ಕೈಯಲ್ಲಿ ಎತ್ತಿ ಅಲುಗಿಸಿ ಎಷ್ಟಾಗಿರಬಹುದು ಎಂದು ಅಂದಾಜು ಮಾಡುತ್ತಿದ್ದ. ಹೀಗಿರುವಾಗಲೆ ಮತ್ತೆ ಅನಿಲಗೋಡ ಹಬ್ಬ ಬಂದಿತು. ಗಡುಗಾಲ ಮತ್ತೆ ಸುರುವಾಯಿತು. 9 ಮಳೆಗಾಲದ ಪ್ರಾರಂಭದಿಂದಲೇ ಬಿದ್ದ ಉತ್ತಮ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯ ತುಂಬುತ್ತ ಬಂದಿತ್ತು. ಶರಾವತಿ ಹೊಳೆಸಾಲಿನ ಜನರಿಗೆಲ್ಲ ಪೂರ್ವಸೂಚನೆಯಾಗಿ ನೀರನ್ನು ಯಾವುದೇ ಕಾಲದಲ್ಲಿ ಬಿಡಬಹುದು, ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಲಾಗಿತ್ತು. ಮಳೆಗಾಲ ನಂಬುವಂಥದ್ದು ಅಲ್ಲ. ಹೊಯ್ದರೆ ಮಳೆ, ಕಾಯ್ದರೆ ಬಿಸಿಲು. ಹೊಳೆಬದಿ ಕೇರಿ ಜನರೆಲ್ಲ ಉದಾಸೀನರಾಗಿಯೇ ಇದ್ದರು. ಏಕೆಂದರೆ ಇಂಥ ಎಚ್ಚರಿಕೆಯನ್ನು ಅವರು ಬಹಳ ಸಾರೆ ಕೇಳಿದ್ದರು. ಆದರೆ ನೀರಿನಿಂದ ಯಾವ ಅಪಾಯವನ್ನು ಅನುಭವಿಸಿರಲಿಲ್ಲ. ಇಪ್ಪತ್ತೊಂದು ವರ್ಷಗಳ ಹಿಂದೆ ಒಮ್ಮೆ ಜಲಾಶಯದ ನೀರು ವಿಪರೀತ ಹಾನಿ ಮಾಡಿತ್ತು. ಅದು ಜನರ ಚಿತ್ತದಿಂದ ಮರೆಯಾಗಿತ್ತು. ತಿಮ್ಮನಿರುವ ಕೇರಿಯಲ್ಲಿ ಕಲ್ಲಿನಿಂದ ಕಟ್ಟಿದ ಮನೆಗಳೇ ಬಹಳ ಕಡಿಮೆ. ಇಡೀ ಊರಲ್ಲಿ ಐದಾರು ಇರಬಹುದು. ಉಳಿದವೆಲ್ಲ ಮಣ್ಣುಗೋಡೆಯವು ಇಲ್ಲವೆ ವಾಂಟೆ ಗಳ ನೇಯ್ದು ಮಣ್ಣು ಮೆತ್ತಿದವು ಆಗಿದ್ದವು. ಆಶ್ಲೇಷಾ ನಕ್ಷತ್ರದ ಏಳನೆಯ ದಿನ ಮಳೆ ಗುಡುಗು ಮಿಂಚುಗಳೊಡನೆ ಅದ್ಭುತವಾಗಿ ಸುರಿಯಿತು. ರಾತ್ರೆ ಜನರೆಲ್ಲ ಮೈಮರೆತು ಮಲಗಿದ್ದರು. ಬೆಳಗಿನ ಜಾವ ಐದು ಗಂಟೆಯ ಸಮಯಕ್ಕೆ ಮಳೆ ಸುರಿಯುವುದು ನಿಂತಿತು. ಮಲಗಿದವರು ಮೈಮುರಿದು ಮಗ್ಗಲು ಬದಲಿಸಿದರು. ಏಳುವ ಮನಸ್ಸೇ ಇರಲಿಲ್ಲ. ಅರೆ ನಿದ್ದೆ ಅರೆ ಎಚ್ಚರ ಈ ಸ್ಥಿತಿಯಲ್ಲಿದ್ದ ಕೆಲವರಿಗೆ ನದಿಯಲ್ಲಿ ನೀರಿನ ಸೆಳೆತದ ಸದ್ದು ಕೇಳಿಸಿತು. ಕೆಲವರು ಎದ್ದು ಹೊಳೆಬದಿಗೆ ಮುಖ ತಿರುಗಿಸಿ ನೋಡಿದರು. ಕೆಂಬಣ್ಣದ ನೀರು ರಭಸದಿಂದ ಹರಿಯುತ್ತಿತ್ತು. ಸೌದೆ, ನಾಟ, ಬುಡಕಿತ್ತ ಮರಗಳು ತೇಲಿ ಹೋಗುತ್ತಿದ್ದವು. ದನ, ಕರು, ಪ್ರಾಣಿಗಳು, ಕಿತ್ತೆದ್ದು ಬಂದ ಮನೆಯ ಮೇಲ್ಛಾವಣಿಗಳು ಬಳಿದು ಬಂದವು. ನೋಡನೋಡುತ್ತಿರುವಾಗಲೆ ನೀರಿನ ಮಟ್ಟ ಹೆಚ್ಚಿತು. ಮನೆಯ ಅಂಗಳದಲ್ಲಿ ನೀರಾಯಿತು. ನೀರಿನ ಹೊಯ್ಲು ಇವರ ಮನೆಯ ಸುತ್ತಲೂ ಬೀಳತೊಡಗಿತು. ಊರಿಗೆ ಊರೇ ಎಚ್ಚೆತ್ತಿತ್ತು. ಎಲ್ಲರೂ ಕೈಕಟ್ಟಿ ಕುಳಿತರು. ಹೆಂಗಸರು ಬೇಗಬೇಗ ಬೆಳಗಿನ ತಿಂಡಿ ತಯಾರಿಸಿದರು. ಎಲ್ಲರೂ ತಿಂದು ಮುಗಿಸುವವರೆಗೆ ಒಂದಡಿ ನೀರು ಏರಿತ್ತು. ಕೊಟ್ಟಿಗೆಯಲ್ಲಿ ಕಟ್ಟಿದ ದನ, ಎಮ್ಮೆ, ಎತ್ತುಗಳನ್ನು ಬಿಟ್ಟು ಗುಡ್ಡದ ಕಡೆ ಅಟ್ಟಿದರು. ನೀರು ಇನ್ನೂ ಬಹಳ ಏರುತ್ತದೆ ಎಂದು ಊಹಿಸಿದರು. ಎಲ್ಲರೂ ಮಾತನಾಡಿಕೊಂಡು ಮನೆ ಬಿಡುವ ನಿರ್ಣಯಕ್ಕೆ ಬಂದರು. ಸಾಮಾನುಗಳನ್ನೆಲ್ಲ ಅಟ್ಟದ ಮೇಲೆ ಸೇರಿಸಿದರು. ಎರಡು ದಿನದ ಊಟಕ್ಕೆ ಬೇಕಾಗುವಷ್ಟು ಅಕ್ಕಿ, ಒಂದೆರಡು ಪಾತ್ರೆಗಳನ್ನು ತೆಗೆದುಕೊಂಡು ಗುಡ್ಡದ ಅಂಚಿಗೆ ಬಂದರು. ಅಲ್ಲಿ ಮೂರ್ನಾಲ್ಕು ಮನೆಗಳೂ ಒಂದು ಶಾಲೆಯೂ ಇತ್ತು. ಕೆಲವರು ಅಲ್ಲಿ, ಇಲ್ಲಿ ಅಂತ ಹಂಚಿ ಉಳಿದರು. ಇನ್ನು ಕೆಲವರು ಗುಡ್ಡದ ಮೇಲಿನ ಸೊಸೈಟಿ, ಪಂಚಾಯಿತ ಆಫೀಸಿನಲ್ಲಿ ಉಳಿದರು. ಕೇರಿಯಲ್ಲಿ ನಾಲ್ಕೈದು, ನೆಲಗಟ್ಟು ಎತ್ತರವಿದ್ದ, ಕಲ್ಲುಗೋಡೆಯ ಮನೆಯವರು ಮಾತ್ರ ಉಳಿದರು. ನೀರು ಏರುತ್ತಲೇ ಇತ್ತು. ಗುಡ್ಡದ ಅಂಚಿಗಿದ್ದ ಜನ ಆತಂಕದಿಂದ ತಮ್ಮ ಮನೆಗಳ ಕಡೆಗೆ ನೋಡುತ್ತಿದ್ದರು. ಒಂದು ಮನೆಯ ಗೋಡೆ ಕುಸಿಯಿತು. ಆ ಮನೆಯ ಹೆಂಗಸರು ಗಟ್ಟಿಯಾಗಿ ರೋದಿಸತೊಡಗಿದರು. ಮತ್ತೊಬ್ಬನ ಮನೆ. ಮೇಲ್ಛಾವಣಿಯೇ ಅಕ್ಕಿ ಬಿತ್ತು. ಒಬ್ಬನ ಕೊಟ್ಟಿಗೆ ಬಿತ್ತು, ಇನ್ನೊಬ್ಬನ ಬಚ್ಚಲು ಬಿತ್ತು. ಒಂದೊಂದು ಬೀಳುವಾಗಲೂ ಉಂಟಾಗುವ ಶಬ್ದ ಎದೆಯನ್ನು ನಡುಗಿಸುತ್ತಿತ್ತು. ಜನರ ಗೋಳು ಹೇಳತೀರದು. ಸಂಜೆಯಾಗುತ್ತ ಬಂದಿತು. ನೀರು ಏರುವುದು ನಿಂತಿತು. ಆದರೆ ಮಳೆ ಮಾತ್ರ ಜೋರಾಗಿಯೇ ಇತ್ತು. ಜನರೆಲ್ಲ ಇದ್ದಲ್ಲೇ ತೂಕಡಿಸುತ್ತ ಕುಳಿತರು. ಯಾರಿಗೂ ಮಲಗಿ ನಿದ್ರಿಸಲು ಮನಸ್ಸಿಲ್ಲ. ಮಲಗಲೂ ಸ್ಥಳವಿರಲಿಲ್ಲ. ಚಿಕ್ಕಮಕ್ಕಳ ಆಕ್ರಂದನ, ಹೆಂಗಸರ ಮಾತು, ಕೆಲವರ ಅಳು, ಅಳುವವರಿಗೆ ಗದರಿಸುವವರು ಇವೆಲ್ಲವುಗಳಿಂದ ಆ ಸ್ಥಳದಲ್ಲಿ ಒಂದು ರೀತಿಯ ಗದ್ದಲದ ವಾತಾವರಣ ಉಂಟಾಗಿತ್ತು. ಹಾಗೂ ಹೀಗೂ ಬೆಳಗಾಯಿತು. ಮುಂಜಾನೆಯನ್ನು ಸಾರಬೇಕಾಗಿದ್ದ ಕೋಳಿಗಳು ನೆರೆಯ ಮಧ್ಯದಲ್ಲಿಯೇ ಉಳಿದುಹೋಗಿದ್ದವು. ಮರಗಳ ಮೇಲೋ, ಮನೆಯ ಕೋಳಿನ ಮೇಲೋ ಕುಳಿತವು ಮಳೆಯಲ್ಲಿ ನೆನೆಯುತ್ತಾ ಕೆಲವು ಸತ್ತು, ಕೆಲವು ಕೂಗಲೂ ಶಕ್ತಿಯಿಲ್ಲದೆ ನಿತ್ರಾಣವಾಗಿದ್ದವು. ಜನರೆಲ್ಲ ಮುಂಜಾನೆಯ ತಿಂಡಿ ತಿಂದು ಮುಗಿಸಿದರು. ನೆರೆಯ ನೀರು ಇನ್ನೂ ಇಳಿದಿರಲಿಲ್ಲ. ಸುಮಾರು ಒಂದೂವರೆ ಅಡಿಯಷ್ಟು ನೀರು ಮಾತ್ರ ಕಡಿಮೆಯಾಗಿತ್ತು. ಮಾಡಲು ಕೆಲಸವೇನೂ ಇರಲಿಲ್ಲ. ಏನೇನೋ ಮಾತನಾಡುತ್ತ ನೀರು ಬಿಟ್ಟವರನ್ನು ಶಪಿಸುತ್ತ ಮಧ್ಯಾಹ್ನದ ವರೆಗೂ ಹೊತ್ತು ದೂಡಿದರು. ಹೆಂಗಸರು ಗಂಜಿ ಮಾಡಿ ಬಡಿಸಿದರು. ಹೊತ್ತು ತಿರುಗಿದ ಬಹು ಹೊತ್ತಿನ ಮೇಲೆ ಗದ್ದೆಯ ಹಾಳೆಯ ಮೇಲೆ ಹಾದುಹೋಗುವಷ್ಟು ನೀರು ಇಳಿಯಿತು. ತಿಮ್ಮ ನಾಲ್ಕಾರು ಜನರೊಟ್ಟಿಗೆ ಆ ನೀರಿನಲ್ಲೇ ಹಾಯ್ದುಹೋಗಿ ಮನೆ ಹತ್ತಿರ ಬಂದ. ಅವನ ಮನೆ ಅಲ್ಲೆಲ್ಲಿ ಇದೆ? ಗುಂದದ ವರೆಗೆ ಪೂರ್ತಿ ತೊಳೆದು ಹೋಗಿದೆ. ಆ ದಿನ ಓಡಿ ಬರುವ ಗಡಿಬಿಡಿಯಲ್ಲಿ ತನ್ನ ಪೊಂಗಯದ ಬಗ್ಗೆ ಯೋಚಿಸಿಯೇ ಇರಲಿಲ್ಲ. ಕೋಡಿ ಬದಿಯ ಮರವೊಂದಕ್ಕೆ ಹಗ್ಗ ಬಿಗಿದಿದ್ದ. ಪೊಂಗಯ ನೀರಿನಲ್ಲಿ ಮುಳುಗಿ ಹೋದರೂ ಅಲ್ಲೇ ಇತ್ತು. ಸ್ವಲ್ಪ ಸಮಾಧಾನವೆನಿಸಿತು. ಕವಿದ ಮೋಡಗಳಿಂದಾಗಿ ಸಂಜೆಗತ್ತಲು ಬೇಗನೆ ಆವರಿಸಿದ ಅನುಭವ. ಕೇರಿಗೆ ತೆರಳಿದ ಜನರೆಲ್ಲ ತಮ್ಮ ತಮ್ಮ ಗುಂಪುಗಳಿಗೆ ಬಂದು ಸೇರಿಕೊಂಡರು. ಸಂಜೆಯ ಗಂಜಿಯನ್ನು ಉಂಡರು. ಮುನ್ನಾದಿನ ನಿದ್ದೆಗೆಟ್ಟ ಪ್ರಯುಕ್ತ ಎಲ್ಲರೂ ಕಣ್ಣು ಕೂರಲಾರಂಭಿಸಿದ್ದರು. ಅಲ್ಲಲ್ಲೇ ಮುದುರಿ ಮಲಗಿಕೊಂಡರು. ಮರುದಿನ ಆಕಾಶ ಮೋಡಗಳಿಂದ ಹೊರತಾಗಿತ್ತು. ಏನೋ ಒಂದು ರೀತಿಯ ಕಂಪನ್ನು ಹೊತ್ತ ಗಾಳಿ ಬೀಸುತ್ತಿತ್ತು. ಸೋತು ಮಲಗಿದ ಜನರು ಪ್ರಯತ್ನಪೂರ್ವಕವಾಗಿ ಕಣ್ಣು ತೆರೆದರು. ಎದ್ದು ಮೈಮುರಿದು ಆಕಳಿಸಿ ಊರಕಡೆ ನೋಡಿದರು. ನೀರು ಸಪೂರ್ಣ ಬಯಲನ್ನು ಬಿಟ್ಟು ನದಿಯನ್ನು ಸೇರಿತ್ತು. ಆಗ ಅವರ ಮುಖ ಸ್ವಲ್ಪ ಗೆಲುವಾಯಿತು. ಹರುಷದಿಂದಲೇ ಎದ್ದು ಮುಖ ತೊಳೆದರು. ಹೆಂಗಸರು ಲಗುಬಗೆಯಿಂದ ಗಂಜಿ ಕುದಿಸಿದರು. ಎಲ್ಲರೂ ಎರಡೆರಡು ಚಿಪ್ಪು ಗಂಜಿ ಸುರಿದರು. ನಂತರ ಗಂಡಸರು ಎದ್ದು ಕಂಬಳಿಯನ್ನು ಕೊಡವಿ ಕೊಪ್ಪೆ ಹಾಕಿಕೊಂಡು ಕೈಯಲ್ಲೊಂದು ಕತ್ತಿ, ಹೆಗಲಮೇಲೊಂದು ಕುಠಾರಿ ಹಾಕಿಕೊಂಡು ತಮ್ಮ ಮನೆಗಳತ್ತ ನಡೆದರು. ಏನಾದರೂ ಸ್ವಲ್ಪ ದುರಸ್ತಿ ಮಾಡುವ ಉದ್ದೇಶದಿಂದ ಕೆಲಸ ಮಾಡಬಲ್ಲಂತಹ ಹುಡುಗಿಯರೂ ಹುಡುಗರೂ ಅವರ ಸಂಗಡ ನಡೆದರು. ಹೆಂಗಸರು ಸಣ್ಣ ಮಕ್ಕಳನ್ನು ನೋಡಿಕೊಳ್ಳುತ್ತ ಅಲ್ಲೇ ಉಳಿದರು. ತಮ್ಮ ಬಿದ್ದ ಮನೆಗಳನ್ನು ಗೋಡೆಗಳನ್ನು ಕಂಡು ದೊಡ್ಡವರಿಗೆ ಎದೆಯಲ್ಲೇ ತಳಮಳ. ಚಿಕ್ಕವರಿಗೆ ಅಳು. ಮಾಡುಗಳ ಎಳೆಗಳನ್ನು ತೆಗೆದು ಬದಿಗೆ ಜೋಡಿಸಿದರು. ಚೆನ್ನಾಗಿದ್ದ ಮಡ್ಳುಗಳನ್ನು ತೆಗೆದು ಹೊರೆ ಕಟ್ಟಿದರು. ಬಿದ್ದ ಗೋಡೆಯ ಮಣ್ಣನ್ನು ಮನೆಯಿಂದ ಹೊರಗೆ ಎಳೆದು ಹಾಕಿದರು. ಮನೆಯ ನೆಲದ ಮಣ್ಣಿನಲ್ಲಿ ಕಾಲು ಹುಗಿಯುತ್ತಿತ್ತು. ಸುಮಾರು ಹನ್ನೊಂದು ಗಂಟೆಯ ಸಮಯ. ಗಂಡಸರು, ದೊಡ್ಡ ಮಕ್ಕಳು ಕೇರಿಯಲ್ಲಿದ್ದಾರೆ. ಹೆಂಗಸರು, ಚಿಕ್ಕಮಕ್ಕಳು ಗುಡ್ಡದ ಅಂಚಿಗಿದ್ದಾರೆ. ಆಗ ಇಬ್ಬರು ಗುಡ್ಡದ ಬದಿಯಿಂದ ಓಡುತ್ತ ಬಂದರು. ಅವರ ಮುಖ ಬಹಳ ಭಯಪಟ್ಟವರಂತೆ ಕಾಣುತ್ತಿತ್ತು. ಓಡಿ ಬಂದುದರಿಂದಲೋ ಏನೋ ತಂಬ ಬೆವರಿದ್ದರು. ಅವರು ಒಂದೇ ಉಸಿರಿಗೆ,ಜೋಗದ ಕಟ್ಟು ಒಡಿತಂತೆ. ಎಲ್ಲ ಗುಡ್ಡ ಹತ್ತಿ ಓಡಿ, ಜೀವ ಉಳಿಸಿಕೊಳ್ಳಿ’ ಎಂದು ಅರಚಿದರು.
ಎಲ್ಲರ ಗುಂಡಿಗೆಯೂ ಒಂದು ಕ್ಷಣ ನಿಂತಂತಾಯಿತು. ಏನು ಮಾಡಬೇಕೆಂದೂ ತೋಚದಾಯಿತು. ಆ ಇಬ್ಬರು ಅಲ್ಲಿ ನಿಲ್ಲದೆ ಕೇರಿಯ ಕಡೆ ಓಡಲಾರಂಭಿಸಿದರು. ಅಲ್ಲಿ ಕೆಲಸದಲ್ಲಿ ತೊಡಗಿದ್ದ ಗಂಡಸರು ಮತ್ತು ಮಕ್ಕಳಿಗೆ, ಲಿಂಗನಮಕ್ಕಿ ಕಟ್ಟು ಮುರಿತು. ಓಡಿ, ಜೀವ ಉಳಿಸಿಕೊಳ್ಳಿ' ಎಂದರು. ಆಗಲೇ ಒಬ್ಬ ಕೇಳಿದ, ನಿಮಗೆ ಹ್ಯಾಗೆ ಗೊತ್ತಾಯ್ತೋ?’
ಅದೇ ವಿಟ್ಠಲ ನಾಯ್ಕನ ಅಂಗಡಿಗೆ ಫೋನು ಬಂತೋ ಈಗ ಮಾತ್ರ. ಅವನೇ ನಮಗೆ ಕಳುಹಿಸಿ ಕೊಟ್ಟ. ಓಡ್ರೋ ಹೂಂ ಓಡಿ.' ಅಲ್ಲ, ಎರಡು ದಿನದಿಂದ ಫೋನ್‌ ಲೈನು ಹಾಳು ಬಿದ್ದಿದೆಯಲ್ಲೋ?’
ಅವನು ಮಾತನಾಡಿದ್ದು ನಾವು ಕಣ್ಣಿಂದ ನೋಡಲಿಲ್ಲವಾ? ಅಲ್ಲದೆ ಒಂದು ಕಾರು ಬಂದಿತ್ತು ನೋಡು ಅವನ ಅಂಗಡಿಗೆ. ಅವರೂ ಅವನ ಜೊತೆ ಅದೇ ವಿಷ್ಯ ಮಾತನಾಡಿದ್ರು. ಹಂಗೇ ಅವನು ನಮಗೆ ಇಲ್ಲಿಗೆ ಓಡಿಸ್ದ. ಓಡ್ರೋ ಓಡಿ.' ಸುದ್ದಿ ಒಣ ಮೀನು ಸುಟ್ಟ ವಾಸನೆಯಂತೆ ಕೇರಿ ತುಂಬ ವ್ಯಾಪಿಸಿತು. ಮುದುಕನಾದ ಭರಮಪ್ಪ ನಾಯ್ಕ ಸುದ್ದಿ ಕೇಳಿದ ಕೂಡಲೆ ವಿಕಾರವಾಗಿ ಕಿರುಚಿ ಎದೆ ಒತ್ತಿಕೊಳ್ಳುತ್ತ, ಅಯ್ಯಯ್ಯೋ ಎನ್ನುತ್ತ ತಿರುಗಿ ಬಿದ್ದ. ಅವನ ಸುತ್ತಲೂ ಕೆಲವು ಜನ ನೆರೆದರು. ಆದರೆ ಕಲವೇ ನಿಮಿಷಗಳಲ್ಲಿ ಅವನ ಉಸಿರು ಹಾರಿಹೋಗಿತ್ತು. ಕೇರಿಯ ತುಂಬೆಲ್ಲ ಅಳುವಿನ ಸದ್ದು. ಕೂಗಾಟ ವ್ಯಾಪಿಸಿತು. ಇತ್ತ ಗುಡ್ಡದ ಕಡೆಗಿದ್ದ ಹೆಂಗಸರು ಅರಚುತ್ತ ತಮ್ಮ ತಮ್ಮ ಮಕ್ಕಳು, ಗಂಡ, ತಮ್ಮ, ಅಣ್ಣ ಇವರೆಲ್ಲರಿಗೆ ಕರೆಯಲು ಗದ್ದೆಯ ಹಾಳೆಯ ಮೇಲೆ ಏಳುವುದು ಬೀಳುವುದು ಲೆಕ್ಕಿಸದೆ ಎದುರಿಗೆ ಬಂದವರಿಗೆ ಡಿಕ್ಕಿ ಹೊಡೆಯುತ್ತ ಓಡುತ್ತಿದ್ದರು. ಈ ಸಂದರ್ಭದಲ್ಲಿ ಸೀನಪ್ಪ ನಾಯ್ಕನ ಅವ್ವ ಕೇರಿಯಲ್ಲೇ ಉಳಿದವಳು ಗಡಿಬಿಡಿಯಿಂದ ಗುಡ್ಡದ ಕಡೆಗೆ ಬರುತ್ತಿದ್ದಳು. ಯಾರೋ ಒಬ್ಬ ಹೆಂಗಸು ಕಂಟದ ಮೇಲೆ ಓಡುವಾಗ ಬಲವಾಗಿ ಆ ಮುದುಕಿಗೆ ಡಿಕ್ಕಿ ಹೊಡೆದಳು. ಪಾಪ, ಅವಳು ಆಯ ತಪ್ಪಿ ಕೆಳಗೆ ಬಿದ್ದಳು. ಆಕೆಯನ್ನು ದೂಡಿದವಳು ತಿರುಗಿಯೂ ನೋಡದೆ ಓಡಿದಳು. ಇಲ್ಲಿ, ಆ ಮುದುಕಿ ಮೊದಲೇ ಹೆದರಿದ್ದಳು. ಈಗ ಬಿದ್ದವಳು ಬಿದ್ದೇ ಹೋದಳು. ಮತ್ತು ಮೇಲೆ ಏಳಲಿಲ್ಲ. ಯಾರೂ ಎಬ್ಬಿಸುವ ಹಾಗೂ ಇರಲಿಲ್ಲ. ಕೆಲವರು ಭರಮಪ್ಪನ ಹೆಣವನ್ನು ಚೂಳಿಯಲ್ಲಿ ಹಾಕಿಕೊಂಡು ಹೊತ್ತು ತಂದರು. ಸೀನಪ್ಪ ನಾಯ್ಕನ ಅವ್ವ ಸತ್ತದ್ದು ಯಾರಿಗೂ ಗೊತ್ತಿರಲಿಲ್ಲ. ಅಯ್ಯೋ ನನ್ನ ಮಗ್ಳು ಬರಲಿಲ್ಲ, ನನ್ನ ಮಗ ಬರಲಿಲ್ಲ, ನನ್ನ ತಮ್ಮ ಬರಲಿಲ್ಲ, ಅಯ್ಯೋ ಅಂವ ಎಲ್ಲಿ ಹೋದ್ನೋ ಎಂದು ಕೂಗುತ್ತ ಅಳುತ್ತಿದ್ದರು. ದೋಣಿ ಇದ್ದವರು ಹಗ್ಗವನ್ನು ಒಂದಕ್ಕೊಂದು ಜೋಡಿಸಿ ಗುಡ್ಡದ ಬದಿಯಲ್ಲಿ ಇದ್ದ ಮರಕ್ಕೆ ತಂದು ಕಟ್ಟಿ ತಾವು ದೋಣಿಯಲ್ಲಿ ಕುಳಿತುಕೊಂಡರು. ಉಳಿದವರೆಲ್ಲ ಗುಡ್ಡದ ಎತ್ತರದ ಸ್ಥಳದಲ್ಲಿ ಬೀಡುಬಿಟ್ಟರು. ನೀರು ಬರುವ ಸೂಚನೆ ಕಾಣಲಿಲ್ಲ. ಹೊಳೆಯಲ್ಲಿ ಹೊಯ್ಲು ರಭಸವಾಗಿ ಇರಲಿಲ್ಲ. ತಮ್ಮವರೆಲ್ಲ ಬಂದಾರೆಯೇ ಎಂದು ನೋಡಿಕೊಂಡರು. ಸುದ್ದಿ ತಿಳಿದ ತಕ್ಷಣ ಗುಡ್ಡ ಹತ್ತಿ ಓಡಿದ ಹುಡುಗರು ಎಲ್ಲರೂ ಈಗ ಇವರನ್ನು ಬಂದು ಸೇರಿದ್ದರು. ಎಲ್ಲರೂ ಕಂಡರೂ ಸೀನಪ್ಪ ನಾಯ್ಕನ ಅವ್ವ ಮಾತ್ರ ಕಾಣಲಿಲ್ಲ. ಎಲ್ಲಿ ಹೋದಳು ಎಂದು ಆಲೋಚಿಸಿದರು. ಆಕೆಯನ್ನು ಹುಡುಕಲು ಐದಾರು ಜನರು ಹೊರಟರು. ಇಬ್ಬರು ಕೇರಿ. ಕಡೆ ಓಡಿದರು. ಹಾಳೆಯ ಬದಿಯಲ್ಲಿ ಕೆಸರಲ್ಲಿ ಬಿದ್ದ ಸೀನಪ್ಪನಾಯ್ಕನ ಅವ್ವ ಕಂಡಳು. ಇಬ್ಬರಿಗೂ ಪಾಪ ಅನ್ನಿಸಿತು. ಹಾಗೆಯೇ ಕೇರಿಯ ಕಡೆ ಓಡಿ ಯಾರದೋ ಮನೆಯ ಅಂಗಳದಲ್ಲಿದ್ದ ಒಂದು ಚೂಳಿ ತಂದರು. ಅದರಲ್ಲಿ ಹೆಣವನ್ನು ಹಾಕಿ ಹಿಡಿದುಕೊಂಡು ಹೋದರು. ಈ ಗದ್ದಲದಲ್ಲಿ ತಿಮ್ಮನ ಕುಟುಂಬದವರು ಸೊಸೈಟಿಯಲ್ಲಿ ಒಂದು ಮೂಲೆಯಲ್ಲಿ ಬಿದ್ದುಕೊಂಡಿದ್ದರು. ಗಂಟೆ ಎರಡಾದರೂ ನೀರು ಏರಲಿಲ್ಲ. ಎಲ್ಲರ ಹೊಟ್ಟೆಯೂ ಚುರ್‌ ಎನಿಸಲಾರಂಭಿಸಿತು. ಕೆಲವು ಹೆಂಗಸರು ಅಲ್ಲಿಯೇ ಕಲ್ಲು ಹೂಡಿ, ಒಲೆ ಮಾಡಿ ಗಂಜಿ ಮಾಡಲು ಎತ್ತಿದರು. ಗಂಡಸರಲ್ಲಿ ಕೆಲವರು ಭರಮಪ್ಪನನ್ನ ಮತ್ತು ಸೀನಪ್ಪನ ಅವ್ವನನ್ನು ಸುಡಲು ಅಲ್ಲಿಯೇ ಇದ್ದ ನಾಲ್ಕೈದು ಗೇರು ಮರವನ್ನು ಕಡಿಯ ತೊಡಗಿದರು. ಕೆಲವರು ಯಾರದೋ ಮನೆಗೆ ಹೋಗಿ ಎರಡು ಚೂಳಿ ಗರಟೆ ತಂದರು. ಬೇರೆಬೇರೆ ಚಿತೆ ಮಾಡಿ ಅವರಿಬ್ಬರನ್ನು ಸುಟ್ಟರು. ಸಾವಿನ ಭೀತಿಯಲ್ಲಿದ್ದ ಅವರಾರೂ ಸತ್ತವರಿಗಾಗಿ ಅಳಲಿಲ್ಲ. ಸುಮಾರು ಐದು ಗಂಟೆಯ ವೇಳೆಗೆ ಎಲ್ಲರೂ ಗಂಜಿ ಉಂಡರು. ಕತ್ತಲು ಕವಿಯುತ್ತ ಬಂದಿತು. ಯಾರಿಗೂ ಊರೊಳಗೆ ಹೋಗುವ ಧೈರ್ಯವಿಲ್ಲ. ನೀರು ಬಂದಾಗ ಧೈರ್ಯ ಮಾಡಿ ಅಲ್ಲೇ ಉಳಿದಿದ್ದ ನಾಲ್ಕೈದು ಮನೆಯವರೂ ಈಗ ಗುಡ್ಡ ಹತ್ತಿದ್ದರು. ಎಲ್ಲರೂ ರಾತ್ರಿಯನ್ನು ಇಲ್ಲಿಯೇ ಕಳೆಯುವುದೆಂದು ನಿಶ್ಚಯಿಸಿದರು. ಇಡೀ ಊರನ್ನೇ ಕರಾಳಕಪ್ಪು ಕವಿದಿತ್ತು. ಕೇರಿಯಲ್ಲಿ ಅಳಿದುಳಿದ ಒಂದೆರಡು ನಾಯಿಗಳು ವಿಕಾರವಾಗಿ ಕೂಗುತ್ತಿದ್ದವು. ಇನ್ನೇನೂ ಸದ್ದು ಕೇಳದೆ ಅವರು ರಾತ್ರಿ.ಯನ್ನು ಕಳೆದರು. ನಿತ್ಯದಂತೆ ಪೂರ್ವದಲ್ಲೇ ಸೂರ್ಯ ಹುಟ್ಟಿದ. ಎಂದಿಗಿಂತಲೂ ಆತನ ಕಿರಣಗಳು ಇಂದು ಪ್ರಖರವಾಗಿದ್ದ ಅನುಭವ ಅವರಿಗೆ. ಮಲಗಿದ್ದಲ್ಲೇ ಆತನಿಗೆ ಕೈ ಮುಗಿದು ಎದ್ದರು. ನದಿಯ ಕಡೆ ನೋಡಿದರು. ನೆಗಸು ಸಂಪೂರ್ಣ ಇಳಿದಿತ್ತು. ಬೆಳಗಿನ ಗಂಜಿ ಕುಡಿದು ತಮ್ಮ ಮನೆಗಳನ್ನು ನೋಡಲು ಹೋದರು. ಎಲ್ಲೆಲ್ಲೂ ಹಾಹಾಕಾರ ಕೇಳಲಾರಂಭಿಸಿತು. ನಿನ್ನೆ ಅವರು ನೋಡಿದ ಯಾವ ಸಾಮಾನೂ ಇಂದಿರಲಿಲ್ಲ. ಒಬ್ಬ ತನ್ನ ಹಂಡೆ ಹೊತ್ತಿದ್ದಾರೆ ಎಂದರೆ ಇನ್ನೊಬ್ಬ ತನ್ನ ಅಕ್ಕಿಮುಡಿ ಹೊತ್ತಿದ್ದಾರೆ ಎಂದ. ಕೆಲವರ ಮನೆಯ ಮರದ ಕಾಯಿ ಕೊಯ್ದಿದ್ದರು. ಊರಿಗೆ ಊರೇ ದರೋಡೆಯಾಗಿತ್ತು. ಎಲ್ಲಿ ನೋಡಿದರೂ ಅಳುಮೋರೆ. ಎತ್ತ ಕೇಳಿದರೂ ಬೈಗುಳ. ಸದ್ಯಕ್ಕೆ ತಿಮ್ಮನದೇನೂ ದರೋಡೆಯಾಗಿರಲಿಲ್ಲ. ದೋಣಿ ದುಡ್ಡಿನ ಮಡಕೆ ದೇವಿಯ ತಲೆ ಅಡಿಯಲ್ಲಿ ಸುರಕ್ಷಿತವಾಗಿತ್ತು. 10 ಇಷ್ಟೆಲ್ಲ ಅನಾಹುತ ಆದ ಮೇಲೆಯೇ ಸರಕಾರದವರು ಗಂಜಿ ಕೇಂದ್ರದ ವ್ಯವಸ್ಥೆ ಮಾಡಿದ್ದು. ಕೆಳಗಿನಿಂದ ಮೇಲೆ ಸುದ್ದಿ ಹೋಗಿ ಅಲ್ಲಿಂದ ಇವರಿಗೆ ಆರ್ಡರು ಬರುವವರೆಗೆ ಇಷ್ಟು ಸಮಯ ಆದದ್ದು ಅಂತಹ ವಿಶೇಷವೇನಲ್ಲ. ಈಗ ಜನರಿಗೆ ಅದೂ ಇದೂ ಮಾತನಾಡುತ್ತ ಹೊಟ್ಟುಗೇರುವುದೇ ದಂಧೆಯಾಯಿತು. ಎಷ್ಟೋ ಮಾತಿನ ತಲಬುದಾರರಿಗೆ ತಿಮ್ಮನ ಕುಟುಂಬದ ಕತೆಯೇ ಆಹಾರವಾಯಿತು. ದೇವಿಗೆ ಒಂದು ನಮೂನೆ ಆದರೆ ಸುಬ್ಬಿದು ಇನ್ನೊಂದು ನಮೂನೆ. ತಿಮ್ಮ ಒಂದು ಮೂಲೆಯಲ್ಲಿ ತಲೆಗೆ ಕೈಹಚ್ಚಿ ಜಡೆಗಟ್ಟಿದ್ದ ಕೂದಲನ್ನು ಕೆದರಿಕೊಳ್ಳುತ್ತ ಕುಳಿತಿದ್ದ. ಇಲೆಕ್ಷನ್ನುಗಳ ಮೇಲೆ ದೃಷ್ಟಿ ನೆಟ್ಟ ಸರಕಾರ ಪರಿಹಾರ ಕಾಮಗಾರಿಯನ್ನು ಬಿರುಸಾಗಿಯೇ ಆರಂಭಿಸಿತು. ಮೊದಲು ಒಂದು ತಂಡ ಬಂದು ಎಲ್ಲ ವ್ಯವಸ್ಥೆ ಮಾಡಿ ಹೋಗಿತ್ತು. ನಂತರ ಇನ್ನೊಂದು ತಂಡದವರು ಬಂದರು. ಇವರು ಬಂದ ಉದ್ದೇಶ ಪ್ರತಿಯೊಬ್ಬರಿಗೂ ಆದ ಲುಕ್ಸಾನು ಪಂಚನಾಮೆ ಮಾಡಿ ಪರಿಹಾರ ನಿಗದಿಗೊಳಿಸುವುದು ಮತ್ತು ಶಾಶ್ವತ ಪರಿಹಾರವನ್ನು ಕಂಡುಹಿಡಿಯುವುದು. ಮೊದಲೆರಡು ದಿನ ಸ್ವಯಂಪ್ರೇರಿತರಾಗಿ ಸಂಘ ಸಂಸ್ಥೆಗಳು ಸಂಗ್ರಹಿಸಿ ಕಳುಹಿಸಿದ ಬಟ್ಟೆಗಳನ್ನು, ಸರಕಾರದವರು ನೀಡಿದ ಚಾದರು, ಕಂಬಳಿಗಳನ್ನು ವಿತರಣೆ ಮಾಡಿದರು. ಶಾಶ್ವತ ಪರಿಹಾರಕ್ಕೆ ಜನರ ಜೊತೆ ವಿಚಾರ ಮಾಡಿದರು. ಎಲ್ಲರಿಗೂ ಗುಡ್ಡದ ಮೇಲೆ ಐದೈದು ಗುಂಟೆ ಜಾಗೆ ಕೊಟ್ಟು ಮನೆ ಕಟ್ಟಿಸಿಕೊಡಬೇಕು ಎನ್ನುವ ಸಲಹೆ ಬಂತು. ಪ್ರತಿ ಹಳ್ಳಿಗೂ ಪಂಚಾಯಿತದ ವತಿಯಿಂದ ಎರಡು ದೊಡ್ಡ ದೋಣಿಗಳು ಇರಬೇಕು. ಅದರ ಸಹಾಯದಿಂದ ಆಕಸ್ಮಿಕ ಸಂದರ್ಭಗಳಲ್ಲಿ ಆಗುವ ನಷ್ಟವನ್ನು ಕಡಿಮೆಗೊಳಿಸಬಹುದು ಎಂಬ ಸೂಚನೆಯೂ ಬಂತು. ಅಧಿಕಾರಿ ತಂಡವರು ಮೂರನೆ ದಿನ ಊರಿನಲ್ಲಿ ಕಾಲಿಟ್ಟರು. ಅವರ ಬೆನ್ನಿಗೆ ಊರ ಮುಖಂಡರೆನಿಸಿಕೊಂಡ ನಾಲ್ಕೈದು ಜನ ಗಡಿಬಿಡಿಯಿಂದ ತಿರುಗಾಡುತ್ತಿದ್ದರು. ಪ್ರತಿಯೊಂದು ಮನೆಯವರದ್ದು ಪಂಚನಾಮೆಯಾಯಿತು. ಹೋದದ್ದರ ಜೊತೆಗೆ ಇದ್ದದ್ದನ್ನೂ ಸೇರಿಸಿ ಹಾನಿಯ ಮೊತ್ತವನ್ನು ದೊಡ್ಡದಾಗಿ ಕಾಣಿಸಿದ್ದರು. ತಿಮ್ಮನದು ಇಡೀ ಮನೆಯೇ ತೊಳೆದು ಹೋಗಿತ್ತು. ಗುಂದದ ಮಣ್ಣು ಮಾತ್ರ ಅಲ್ಲಲ್ಲಿ ಇತ್ತು. ಊರ ಜನರು ತಿಮ್ಮನ ಕನಿಕರದ ಸ್ಥಿತಿಯನ್ನು ವಿವರಿಸಿದರು. ಆಗಲೇ, ಅಧಿಕಾರಿಗಳೆನಿಸಿಕೊಂಡವರ ಪಾಪದ ದೃಷ್ಟಿಯು ಇವನ ಕುಟುಂಬದವರತ್ತ ಹರಿದ್ದು. ತಿಮ್ಮನಿಗೆ, ಊಟಕ್ಕೆ ಬಂದಾಗ ಮತ್ತೆ ಕಾಣಲು ತಿಳಿಸಿದರು. ತಿಮ್ಮ ಮಧ್ಯಾಹ್ನ ಅವರಲ್ಲಿಗೆ ಹೋದಾಗ ಚಾವಡಿಯಲ್ಲಿ ಶಾನಭೋಗರು, ಸರಕಾರದವರು, ಊರವರು ಅಂತ ಏಳೆಂಟು ಜನ ಇದ್ದರು. ಬೆಳಿಗ್ಗೆ ಬರೆದು ತಂದ ಪಂಚನಾಮೆ ಎಲ್ಲವನ್ನು ಪರಿಷ್ಕರಿಸುತ್ತಿದ್ದರು. ಯಾರಿಗೆ ಸಿಗುವ ಹಾಗೆ ಮಾಡಬೇಕು, ಯಾರಿಗೆ ಸಿಗದಂತೆ ಮಾಡಬೇಕು ಎನ್ನುವದೆಲ್ಲ ಅಲ್ಲೇ ನಿರ್ಧಾರಗೊಳ್ಳುತ್ತಿತ್ತು. ತಿಮ್ಮ ಹೋಗಿ ಕೈ ಮುಗಿದು ನಿಂತ. ಇವನನ್ನು ನೋಡಿ ಶಾನುಭೋಗರು ಪಕ್ಕದಲ್ಲಿ ಕುಳಿತವರ ಹತ್ತಿರ ಏನನ್ನೋ ಪಿಸುಗುಟ್ಟಿದರು. ಅವರ ಮುಖದಲ್ಲಿ ಯಾವುದೋ ಒಂದು ರೀತಿಯ ನಗೆ ಉತ್ಪನ್ನವಾಯಿತು. ನಂತರ ಅವರು ತಿಮ್ಮ ಅಬಿಗನಾದ ಕಾರಣ ಅವನಿಗೆ ಸ್ವಂತ ದೋಣಿ ಇದೆಯೆ ಎಂದು ವಿಚಾರಿಸಿದರು. ಇಲ್ಲವೆಂದು ಅರಿತಾಗ, ಅವನಿಗೆ ಸರಕಾರದ ವತಿಯಿಂದ ದೋಣಿ ಮಾಡಿಕೊಳ್ಳಲು ಮರವನ್ನು ಕೊಡಿಸುವ ಆಶ್ವಾಸನೆ ನೀಡಿದರು.ಅಂಬಿಗರಿಗೆ ಹಂಚಲು ನಾಳೆ ಬಲೆ ಬರುತ್ತದೆ. ನಿನಗೆ ಬೀಸುವ ಬಲೆ, ಒಂದು ಕಂಟ್ಲಿ ಬಿಡುವ ಬಲೆ ಎರಡೂ ಸಿಗುವ ವ್ಯವಸ್ಥೆ ಮಾಡುತ್ತೇವೆ’ ಎಂದರು. ನಿನ್ನ ವಿಷಯವನ್ನು ಶಾನುಭೋಗರು ತಿಳಿಸಿದ್ದಾರೆ ಎಂದೂ ಅಂದರು.
ತಿಮ್ಮನಿಗೆ ಸಂತೋಷ ಆಶ್ಚರ್ಯ ಏಕಕಾಲದಲ್ಲಿ ಉಟಾದವು.
ಸರಕಾರದವರಲ್ಲಿ ಒಬ್ಬ ಹೇಳಿದ, ನಿನ್ನ ಹೆಣ್ತಿಗೆ ಹುಬ್ಬಳ್ಳಿಗೆ ಕರ್ಕೊಂಡು ಹೋಗು. ಅಲ್ಲಿ ದೊಡ್ಡ ಆಸ್ಪತ್ರೆ ಅದೆ. ಎಲ್ಲ ಪುಕ್ಕಟೆ ಆಗ್ತದೆ. ಗುಣ ಆಗ್ತದೆ.' ಅದಕ್ಕೆ ಗುಣ ಆಗೂಗು ಒಂದೇ ದಿನವೇಯ. ಅದೂ ಲೆಕ್ಕ ಹಾಕ್ತ ಅದೆ. ನಾನೂ ಲೆಕ್ಕ ಹಾಕ್ತ ಅಂವ್ನೆ.’
ಹಾಂಗೆ ಅಂದ್ರೆ ಹ್ಯಾಂಗೋ? ನಾವು ಮಾಡೂ ಪ್ರಯತ್ನ ಮಾಡಲೇಬೇಕು' ಎಂದ ಇನ್ನೊಬ್ಬ. ಆ ಗೋಡನ್ನದಾಗೆ ಅಡಚಣಿಯಲ್ಲಿ ಅವ್ಳಿಗೆ ಹ್ಯಾಗೆ ಮನಗ್ಸಕಂತಿರೊ? ಈ ಚಾವಡಿ ಖಾಲಿ ಇದೆ. ಇಲ್ಲೇ ತಂದು ಮಲಗಿಸಿಕೊಳ್ಳಿ. ಒಂದು ತಟ್ಟಿ ಬಿಡಾರ ಮಾಡಿಕೊಂಡು ಕೆಳಗೆ ಹೋಗುವವರೆಗಾದ್ರೂ ಇರಿ’ ಎಂದರು ಶಾನುಭೋಗರು.
ಇಂಥ ಒಳ್ಳೆಯ ಅಧಿಕಾರಿಗಳೂ ಇರುತ್ತಾರೆಯೆ ಎಂಬ ಆಶ್ಚರ್ಯ ತಿಮ್ಮನಿಗೆ.
ಇವತ್ತು ರಾತ್ರೆ ಪಂಚನಾಮೆ ಎಲ್ಲ ರೆಡಿ ಮಾಡಿ ಇಡ್ತೇವೆ. ನಾಳೆ ಬೆಳಗಾಮುಂಚೆ ನೀನು ಬಂದು ಸಹಿ ಮಾಡಿ ಹೋಗು' ಎಂದು ಒಬ್ಬರು ಹೇಳಿದರು. ತಿಮ್ಮ ಮತ್ತೊಮ್ಮೆ ಕೈ ಮುಗಿದು ಅಲ್ಲಿಂದ ಹೊರಬಿದ್ದ. ಸಂಜೆ ಆಗುವ ಹೊತ್ತಿಗೆ ಗೌರಿ- ಸುಬ್ಬಿಯರ ಸಹಾಯದಿಂದ ದೇವಿಯನ್ನು ತಂದು ಚಾವಡಿಯ ಜಗುಲಿಯ ಮೇಲೆ ಮಲಗಿಸಿದ. ತಾಯಿಯ ಜೊತೆ ಸುಬ್ಬಿಯೂ ಅಲ್ಲೇ ಮಲಗುವುದೆಂದು ಮಾತನಾಡಿಕೊಂಡರು. ಗೌರಿ ಮಾತ್ರ ತನ್ನ ಕೇರಿಯ ಹುಡುಗಿಯರು ಮಲಗುವಲ್ಲಿಗೇ ನಡೆದುಬಿಟ್ಟಳು. ರಾತ್ರೆ ಚಾವಡಿಯ ಒಳಗಿನ ಕೋಣೆಯಲ್ಲಿ ಆ ಅಧಿಕಾರಿಗಳಿಗಾಗಿ ಮೂರ್ನಾಲ್ಕು ಕೋಳಿ ಪುಡಿ ಹಾಕಿದ್ದರು. ಪಕ್ಕಾ ಗೇರುಹಣ್ಣಿನ ಸಾರಾಯಿ ಮೂರ್ನಾಲ್ಕು ಬಾಟ್ಲಿ ಬಂದಿತ್ತು. ಎಲ್ಲರಿಗೂ ಒಳಗೆ ಎಲೆ ಹಾಕಿದ್ದರು. ತಿಮ್ಮನಿಗೂ ಒಂದು ಮೂಲೆಯಲ್ಲಿ ಎಲೆ ಹಾಕಿದರು. ಅವನು ಸಂಕೋಚದಿಂದಲೇ ಮುದುರಿಕೊಳ್ಳುತ್ತಲೇ ಬಂದು ಎಲೆಯ ಮುಂದೆ ಕುಳಿತ. ಊಟ ಮಾಡುತ್ತಿರುವಾಗಲೇ ಬಾಟ್ಲಿಗಳೂ ಖಾಲಿಯಾದವು. ತಿಮ್ಮನಿಗೂ ಹಾಕೊಳ್ಳೋ ಹಾಕೊಳ್ಳೋ ಎಂದು ಒತ್ತಾಯ ಮಾಡಿ ಎರಡು ತುಂಡು ಜಾಸ್ತಿನೂ ಹಾಕ್ಸಿದರು. ಮತ್ತು ತಿಮ್ಮನ ಎದುರಿಗೆ ಒಂದು ಬಾಟ್ಲಿನೇ ಇಟ್ಟುಬಿಟ್ಟಿದ್ದರು. ಉಣ್ಣಲಿಕ್ಕೆ ದಾಕ್ಷಿಣ್ಯ ಮಾಡಿಕೊಂಡರೂ ತಿಮ್ಮ ಕುಡಿಯಲಿಕ್ಕೆ ದಾಕ್ಷಿಣ್ಯ ಮಾಡಿಕೊಳ್ಳಲಿಲ್ಲ. ಅವರು ಹೇಳುವ ಮೊದಲೇ ಕೈ ಹಚ್ಚಿಬಿಟ್ಟಿದ್ದ. ಒಂದು ಖಾಲಿ ಆದ ಮೇಲೆ, ಹೂಂ ನೋಡೋ ಮತ್ತೊಂದು ಅಂದಾಗ ಇನ್ನೊಂದಕ್ಕೂ ಕೈ ಹಚ್ಚಿದ್ದ. ಊಟ ಅಂದ್ರೆ ಊಟ ಅದು. ಬಾಳೆಲೆಯ ಮುಂದೆ ಕುಳಿತವರು ಒಂದು ತಾಸಿನ ನಂತರ ಮೇಲೆದ್ದರು. ಉಣ್ಣುವವರ ಗೌಜಿಯ ನಡುವೆಯೇ ದೇವಿ ನಿದ್ದೆ ಹೋಗಿದ್ದಳು. ಸುಬ್ಬಿಗೆ ಅರೆ ನಿದ್ದೆ ಅರೆ ಎಚ್ಚರ. ತಿಮ್ಮನ ಅಮಲು ಅವನ ಬಾಹ್ಯ ಪ್ರಜ್ಞೆಯನ್ನು ಅಳಿಸಿಹಾಕಿತ್ತು. ಮಂಪರು ಕವಿದ ತಿಮ್ಮನಿಗೆ ಏನೇನೋ ಕನಸುಗಳು. ರಾಂ ಫೊರೆಸ್ಟರ, ಪ್ರಭುಗಳು, ಹೆಗಡೆಯವರು ಎಲ್ಲ ಅವನ ಮನಸಿನ ಮುಂದೆ ತೇಲಿ ಹೋದರು. ರಾಂ ಫೊರೆಸ್ಟರ ಯಾಕೆ ಬಂದಿದ್ದಾನೆ, ಅದೂ ತನ್ನ ಮನೆಯ ಬಾಗಿಲಿಗೆ ಎಂದು ಆಶ್ಚರ್ಯ ತಿಮ್ಮನಿಗೆ.ರಾಮ ಏನೋ ಕಾಗದ ತೆಗೆದು ಓದಿ ಹೇಳಿದ. ಇವನಿಗೆ ಅದು ಅರ್ಥವಾಗಲಿಲ್ಲ ತನ್ನ ಜೊತೆ ಬರುವಂತೆ ಸನ್ನೆ ಮಾಡಿದ. ತಿಮ್ಮ ಅವನನ್ನು ಹಿಂಬಾಲಿಸಿದ. ಇಬ್ಬರೂ ದಟ್ಟವಾದ ಕಾಡನ್ನು ಪ್ರವೇಶಿಸಿದರು. ಕಾಡಿನಲ್ಲಿ ಸುಮಾರು ದೂರ ಹೋದ ಮೇಲೆ ರಾಂ ಫೊರೆಸ್ಟರ ಒಂದು ದೊಡ್ಡ ಸುರಹೊನ್ನೆ ಮರದ ಬುಡದಲ್ಲಿ ನಿಂತ. ಆ ಮರಕ್ಕೆ ಸರಕಾರದ ಸಿಕ್ಕಾ ಇತ್ತು. ಎರಡು ಅಪ್ಪುಗೈ ಗಾತ್ರವಿತ್ತು ಅದರ ದಪ್ಪ. ಈ ಮರದಲ್ಲಿ ನೀನು ದೋಣಿ ಮಾಡಿಕೋ ಎಂದ. ತಿಮ್ಮನಿಗೆ ಒಮ್ಮೆ ದಿಗಿಲಾಯಿತು. ಅರೆನಂಬುಗೆಯಿಂದಲೇ ಮರವನ್ನು ಅಳೆಯುವವನಂತೆ ಕತ್ತೆತ್ತಿ ನೋಡಿದ. ತಿರುಗಿ ರಾಂ ಫೊರೆಸ್ಟರ ಇದ್ದ ಜಾಗವನ್ನು ನೋಡಿದರೆ ಅವನು ಇರಲೇ ಇಲ್ಲ. ಹಿಂದಕ್ಕೆ ತಿರುಗಿ ನೋಡಿದ. ರಾಮ ಕೈಯಲ್ಲಿ ಮಚ್ಚು, ಕತ್ತಿ, ಹಗ್ಗ ಎಲ್ಲ ಹಿಡಿದುಕೊಂಡು ನಿಂತಿದ್ದ. ತಿಮ್ಮ ಮರವನ್ನ ಕಡಿಯಲು ಸಿದ್ಧನಾಗಿ ಅದರ ಬುಡದ ಮುಳ್ಳು ಹಿಂಡನ್ನು ಬಿಡಿಸಲು ಕತ್ತಿ ಹಿಡಿದು ಕಡಿಯತೊಡಗುತ್ತಾನೆ. ಮರದ ಬುಡದಲ್ಲಿ ಒಂದು ಹಾವಿನ ಹುತ್ತ ಅವನ ಕಣ್ಣಿಗೆ ಬಿತ್ತು. ಮುಳ್ಳು ಹಿಂಡುಗಳೆಲ್ಲ ಅದರ ಮೇಲೆಯೇ ಬೆಳೆದಿದ್ದವು. ತಿಮ್ಮ ಧೈರ್ಯ ಮಾಡಿ ಕಡಿಯತೊಡಗಿದ. ಎಂಟೋ ಒಂಬತ್ತೋ ಕಚ್ಚು ಬಿದ್ದಿರಬೇಕು. ಅಷ್ಟರಲ್ಲಿ ಹಿಂಡಿನಲ್ಲಿ ಬುಸ್‌ ಎಂಬ ಶಬ್ದ ಕೇಳಿಸಿತು. ತಿಮ್ಮನ ಉಸಿರು ನಿಂತಂತಾಯಿತು. ಬಗ್ಗಿ ನೋಡುತ್ತಾನೆ. ಕೊಂಬೆಕೊಂಬೆಯಲ್ಲೂ ಒಂದೊಂದು ಹಾವು. ತಿಮ್ಮ ನಿದ್ರೆಗಣ್ಣಿನಲ್ಲೇ ಅಯ್ಯಯ್ಯೋ ಎಂದು ಅಲ್ಲೇ ಮಗ್ಗಲು ಬದಲಿಸಿದ. ಅದೇ ವೇಳೆಗೆ ನಾಲ್ಕಾರು ಧಾಂಡಿಗ ಕೈಗಳು ಸುಬ್ಬಿಯನ್ನು ಅನಾಮತ್ತು ಎತ್ತಿದವು. ಯಾರು, ಏನು, ಎಲ್ಲಿ, ಎಂಥದ್ದು ಎಂದು ಅರಿವಾಗಿ ಸುಬ್ಬಿ ಬಾಯನ್ನು ಬಿಡುವುದರೊಳಗೆ ಒಂದು ಕೈ ಬಲವಾಗಿ ಬಾಯನ್ನು ಮುಚ್ಚಿತ್ತು. ಅವರ ತೋಳುಗಳ ಮೇಲೆ ಸುಬ್ಬಿ ಕೊಸರಾಡುತ್ತಿದ್ದಳು. ಅಪ್ಪನಿಗೆ ಒದರಬೇಕೆಂದು ಸುಬ್ಬಿಯ ಮನಸ್ಸಿನಲ್ಲಿ ತೋರಿದರೂ ಆಕೆಯ ಗಂಟಲಿನಿಂದ ಧ್ವನಿಯೇ ಹೊರಡಲಿಲ್ಲ. ರಾತ್ರೆ ನಡೆದ ಪಂಚನಾಮೆಯ ತಿದ್ದುಪಡಿಯಲ್ಲಿ ತಿಮ್ಮನಿಗಾದ ನಷ್ಟ ಎಷ್ಟೆಂದು ನಿರ್ಧಾರವಾಯಿತೋ ಏನೋ? 11 ಗೌರಿ ನಸುಕಿನಲ್ಲೇ ಚಾವಡಿಗೆ ಬಂದಾಗ ನೋಡುತ್ತಾಳೆ ಏನನ್ನು? ಹೊರಗಡೆ ದೇವಿ ಒಂದು ಮೂಲೆಯಲ್ಲಿ ಮಲಗಿದ್ದಾಳೆ. ಇನ್ನೊಂದು ಗೋಡೆಯ ಬುಡದಲ್ಲಿ ತಿಮ್ಮ ಬಿದ್ದುಕೊಂಡಿದ್ದಾನೆ. ಸುಬ್ಬಿ ಎಲ್ಲಿ ಹೋದಳು ಎಂದು ನೋಡಿದಳು. ಕೋಣೆಯ ಬಾಗಿಲು ತೆರೆದುಕೊಂಡು ಇತ್ತು. ಇಣುಕಿದಳು. ಒಳಗೆ ನೆಲದ ಮೇಲೆ ಸುಬ್ಬಿ ಬಿದ್ದುಕೊಂಡಿದ್ದಳು. ಆಕೆಯ ದೇಹವೆನ್ನುವುದು ಹಂದಿಹೊಕ್ಕ ಶೇಂಗಾ ಕುಂಬರಿಯಂತಾಗಿತ್ತು. ಗೌರಿ ಒಂದು ಕ್ಷಣ ಮಾತು ಹೊರಡದೆ ಗಪ್ಪಾಗಿ ನಿಂತುಬಿಟ್ಟಳು. ಹಿಂದಿನ ದಿನ ಸಂಜೆ ಚಾವಡಿಯಲ್ಲಿ ಊಟ ಮಾಡಿದವರೆಲ್ಲ ಯಾವಾಗಲೋ ಹೊರಟುಹೋಗಿದ್ದರು. ಅವರು ಹೋಗುವಾಗ ಸುಬ್ಬಿಗೆ ಸ್ಮೃತಿ ಇರಲಿಲ್ಲ. ಸುಬ್ಬಿಗೆ ರಾತ್ರೆ ಮಿಣುಗುಡುವ ಚಿಮಣಿಯ ಬೆಳಕಿನಲ್ಲಿ ಕೋಣೆಯ ತುಂಬ ಕರಿಯ ನೆರಳುಗಳೇ ಕಂಡುಬಂದವು. ಕೂಗಬೇಕೆಂದರೆ ಧ್ವನಿಯೇ ಬಾಯಿಂದ ಹೊರಡಲಿಲ್ಲ. ಪುರುಷ ಸ್ಪರ್ಶವೇ ಆಗಿರದ ದೇಹ ಅದಾಗಿತ್ತು. ಸುಬ್ಬಿಯ ಮನಸ್ಸು ಬೇಡವೆಂದರೂ ಹತೋಟಿ ಮೀರಿ ದೇಹದಲ್ಲಿ ಕಾವು ಏರುತ್ತಿತ್ತು. ಒಬ್ಬ, ಮತ್ತೊಬ್ಬ. ಸುಬ್ಬಿಗೆ ಎಚ್ಚರ ಬಂದಾಗ ದೇಹದ ತುಂಡು ತುಂಡುಗಳನ್ನೇ ಹರಿದಿಟ್ಟಂತೆ ಭಾಸವಾಗಹತ್ತಿತ್ತು. ಕೈಕಾಲು ಹಂದಾಡಿಸಲೂ ಆಗಲಿಲ್ಲ. ಬಿದ್ದಲ್ಲೇ ಕೆಳದನಿಯಲ್ಲಿ ನರಳುತ್ತಿದ್ದಳು. ಹೆದರಿ ಕಂಗಾಲಾಗಿದ್ದ ಗೌರಿ ಅಕ್ಕನ ಬಳಿಗೆ ಬಂದು ಕುಳಿತಳು. ಸುಬ್ಬಿ ಬಿಕ್ಕುತ್ತಾ ತನಗಾದ ಸ್ಥಿತಿಯನ್ನು ತಂಗಿಗೆ ಹೇಳಿದಳು. ಗೌರಿ ಅವಳನ್ನು ಎಬ್ಬಿಸಿ ಅಲ್ಲೇ ಸಮೀಪದಲ್ಲಿ ಹರಿಯುತ್ತಿದ್ದ ಹಳ್ಳದ ಬದಿಗೆ ಕರೆದೊಯ್ದಳು. ಹಳ್ಳದ ನೀರೂ ಸುಬ್ಬಿಯ ದೇಹದ ಒಂದೊಂದು ಭಾಗಕ್ಕೆ ತಗುಲಿದಾಗ ಚುರ್‌ ಅನ್ನುತ್ತಿತ್ತು. ಅವಳು ಪಟ್ಟ ಅವಸ್ಥೆ ಹೇಳುವಂತಹದ್ದಲ್ಲ. ಗೌರಿ ಮಾತ್ರ ಸುದ್ದಿಯನ್ನು ಯಾರಿಗೂ ತಿಳಿಸಲಿಲ್ಲ. ಮನೆಯವರಿಗೆ ಸಹ. ದಿನಗಳು ಉರುಳುತ್ತಿತ್ತು. ಸರಕಾರದ ಗಂಜಿ ಕೇಂದ್ರ ನಿಂತಿತು. ಜನರೆಲ್ಲ ತಮ್ಮ ಬಿದ್ದುಹೋದ ಮನೆಗಳನ್ನೇ ಸದ್ಯಕ್ಕೆ ರಿಪೇರಿ ಮಾಡಿಕೊಂಡು ಅಲ್ಲಿಗೇ ಹಿಂತಿರುಗಿದರು. ತಿಮ್ಮನ ಕುಟುಂಬದವರೂ ಮನೆಗೆ (?) ಮರಳಿದರು. ಮತ್ತೆ ಯಥಾಪ್ರಕಾರ ಕಾಲ ಸರಿಯುತ್ತಿತ್ತು. ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು, ನಾಲ್ಕು ತಿಂಗಳು.... ಸುಬ್ಬಿಯ ಮನಸ್ಸಿನ ಆತಂಕವೂ ದಿನದಿನಕ್ಕೆ ಹೆಚ್ಚುತ್ತಿತ್ತು. ನಡೆಯಬಾರದ್ದು ನಡೆದುಹೋದಮೇಲೆ ಆಗಬಾರದ್ದು ಆಗಿಹೋಗಿತ್ತು. ಸುಬ್ಬಿ ತನ್ನ ಒಡಲಿನ ದುಃಖವನ್ನು ಗೌರಿಗೆ ತಿಳಿಸಿದಳು. ಗೌರಿಗೂ ದಿಕ್ಕು ಹರಿಯಲಿಲ್ಲ. ಅವಳು ಉಪಾಯಗಾಣದೆ ದೇವಿಗೆ ಆದ ಸಂಗತಿಯನ್ನು ತಿಳಿಸಿದಳು. ದೇವಿಯ ಮುಖಾಂತರ ತಿಮ್ಮನಿಗೆ ಸುದ್ದಿ ತಿಳಿದಾಗ ಒಳಗೊಳಗೇ ಸಂಕಟಪಟ್ಟುಕೊಂಡ. ಘಟನೆಯ ಮೂಲದವರೆಗೂ ಬುದ್ಧಿಯನ್ನು ತಿರುಗಿಸಿ ನೋಡಿದ. ಏನೇನೋ ಅಸ್ಪಷ್ಟ ಆಲೋಚನೆಗಳು ತಲೆಗೆ ಮುಸುಕತೊಡಗಿದಂತೆ ತನ್ನಷ್ಟಕ್ಕೆ ನಡುಗಿದ. ಮುಂದೇನು ಮಾಡುವುದು? ಮನೆಯ ಗುಟ್ಟು ಬೀದಿಗೆ ಬರುವುದರೊಳಗೇ ಏನಾದರೂ ವ್ಯವಸ್ಥೆ ಮಾಡಬೇಕಾಗಿತ್ತು. ಆಜುಬಾಜಿನವರಲ್ಲಿ ಇದು ಅವನ ಮರ್ಯಾದೆಯ ಪ್ರಶ್ನೆಯಾಗಿತ್ತು. ನಾಟಿ ಔಷಧ ನಾಟುವ ಸ್ಥಿತಿಯಲ್ಲಿ ಇರಲಿಲ್ಲ. ಹೋದರೆ ಆಸ್ಪತ್ರೆಯ ಡಾಕ್ಟರಲ್ಲಿಗೆ ಹೋಗಬೇಕು. ಯಾರು, ಎಲ್ಲಿ, ಹೇಗೆ, ಎಷ್ಟು ಖರ್ಚು ಬರಬಹುದು? ಈ ಎಲ್ಲ ಸಮಸ್ಯೆಗಳು ತಲೆಗೆ ಮುಸುಕಿದಾಗ ತಿಮ್ಮ ವಿಚಾರಗೇಡಿಯೇ ಆಗಿದ್ದ. ತಿರುಗಾಟದ ಮೇಲೆ ತಿರುಗಾಟ ಮಾಡಿದ ಮೇಲೆ ತಿಮ್ಮ ಹೊನ್ನಾವರದಲ್ಲಿ ಆ ಕೆಲಸ ಮಾಡುವ ಒಬ್ಬ ಡಾಕ್ಟರನ್ನು ಪತ್ತೆ ಹಚ್ಚಿದ. ಅಷ್ಟು ಬೆಳೆದ ಪಿಂಡವನ್ನು ನಾಶ ಮಾಡಲು ಅವರು ಮೊದಲು ಒಪ್ಪಲಿಲ್ಲ. ನಂತರ ತಿಮ್ಮ ಬಹಳಷ್ಟು ಹೇಳಿಕೊಂಡ ಮೇಲೆ ಒಪ್ಪಿದರು. ಅವರು ತಮ್ಮ ಒಟ್ಟು ಬಿಲ್ಲು ಹೇಳಿದ ಕೂಡಲೆ ತಿಮ್ಮ ಅರ್ಧ ಆಗಿದ್ದ. ಇದಕ್ಕೆ ಹಣವನ್ನು ಜೊತಾಪತಿ ಮಾಡುವುದು ಎಲ್ಲಿಂದ ಎಂದು ತಿಮ್ಮ ಆಲೋಚನೆಯಲ್ಲಿ ಬಿದ್ದ. ಐನೂರು ರುಪಾಯಿ ಎಂದರೆ ಸಣ್ಣ ಮೊತ್ತವೆ? ನಾಲ್ಕು ದಿನ ಆಲೋಚನೆಯಲ್ಲಿ ಕಳೆದ ಮೇಲೆ ಅವನಿಗೆ ದೋಣಿ ದುಡ್ಡಿನ ಮಡಕೆ ಕಣ್ಮುಂದೆ ಬಂತು. ಅದನ್ನೇ ತೆಗೆಯುವುದೆಂದು ತಿಮ್ಮ ನಿರ್ಧಾರ ಕೈಗೊಂಡಾಗ ಆತನ ಕಣ್ಣುಗಳು ಹನಿಗೂಡಿದ್ದವು. ಮಡಕೆಯ ಮುಚ್ಚಳವನ್ನು ತೆಗೆದು ಮೊದಲ ಬಾರಿಗೆ ಎಣಿಸಿ ಆ ಚಿಲ್ಲರೆ ಹಣವನ್ನು ಕೈ ಚೀಲದಲ್ಲಿ ತುಂಬಿಕೊಂಡು ಸುಬ್ಬಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋದ. ಹಣದ ಚೀಲವನ್ನು ಡಾಕ್ಟರರ ಟೇಬಲ್ಲಿನ ಮೇಲೆ ಇಟ್ಟನೆನ್ನುವುದೋ ಇಲ್ಲ ಎಸೆದನೆನ್ನುವುದೋ? ಅಂತೂ ಸ್ವಲ್ಪ ದೊಡ್ಡ ಸದ್ದಾದದ್ದು ನಿಜ. ಸುಬ್ಬಿಯನ್ನು ಒಳಗೆ ಬಿಟ್ಟು ತಿಮ್ಮ ಹೊರಗೆ ಬಂದು ಕುಳಿತ. ಭಾಗ 3 ಬಾಣಿಗೆ 1 ತಿಮ್ಮನ ಮನೆಯ ಅಂಗಳದಲ್ಲಿ ಕೋಳಿ ಹೇಂಟೆಕಕ್‌, ಕಕ್‌ ಕಕ್, ಕರ್‌….’ ಎಂದು ಸದ್ದು ಮಾಡುತ್ತ ನೆಲವನ್ನು ಉಗುರಿನಿಂದ ಬಗಿಯುತ್ತಿತ್ತು. ಕೆಂಪು ಕೆಂಪಾದ ಅದರ ಮುಖವನ್ನು ನೋಡಿದ ತಿಮ್ಮ ಹೇಂಟೆ ಮೊಟ್ಟಗೆ ಬಂದಿದೆ ಎಂದು ಅರಿತುಕೊಂಡ. ಹಳೆಯ ಲಟ್ಟು ಮುಟ್ಟಿಯೊಂದನ್ನು ಹುಡುಕಿ ಮಾಡಿನ ಮೂಲೆಯೊಂದರಲ್ಲಿ ಕಟ್ಟಿದ. ಕೆಲವು ಹೊತ್ತಿನ ನಂತರ ಆ ಹೇಂಟೆ ಮೊಟ್ಟೆ ಹಾಕಲು ಅದರಲ್ಲಿ ಹಾರಿ ಕುಳಿತಿತು.
ತಿಮ್ಮ ಈ ಸಲ ಜಾಗ ಬದಲಿಸಿ ಮುಟ್ಟಿ ಕಟ್ಟಿದ್ದ. ಹಿಂದಿನ ಸಲ ಹೇಂಟೆಯನ್ನು ಕಾವಿಗೆ ಕುಳ್ಳಿರಿಸಿದಾಗ ಕೇರೆ ಹಾವು ಬಂದು ಐದಾರು ಮೊಟ್ಟೆ ನುಂಗಿತ್ತು. ಹನ್ನೆರಡು ಮೊಟ್ಟೆ ಕಾವಿಗೆ ಇಟ್ಟಲ್ಲಿ ನಂತರ ಮರಿ ಆದದ್ದು ಬರೀ ಎರಡೇ ಎರಡು. ದರಿದ್ರ ಹೇಂಟೆ, ಮಾರಿಬಿಡಬೇಕು' ಎಂದುಕೊಂಡಿದ್ದ ತಿಮ್ಮ. ತಿಮ್ಮ ಒಂದು ಹಿಡಿ ಬತ್ತವನ್ನು ತಂದು ಹೇಂಟೆಗೆಬ್‌ಬ್‌ಬ್‌’ ಎಂದು ಕರೆದು ನೆಲದ ಮೇಲೆ ಚೆಲ್ಲಿದ. ಹೇಂಟೆ ಬತ್ತ ತಿಂದರೆ ಅದಕ್ಕೆ ಮೊಟ್ಟೆ ಹೊರೆಯತ್ತದೆಯಂತೆ. ತಿಮ್ಮ ಹೇಂಟೆಗೆ ಬತ್ತ ಹಾಕುತ್ತಿರುವಾಗಲೇ ರಾಮ ಮತ್ತು ಕೂಸ ಇಬ್ಬರೂ ಬಂದರು.
ಈಗ ಬಂದ್ರೇನೋ?' ಇಳಿತದ ಮೇಲೆ ದೋಣಿ ಬಿಟ್ಟಾಗಿತ್ತು. ಗಾಳಿ ಬಿದ್ದುಹೋದ ಯಾಪಾರ ಅನ್ನುದು ಇಷ್ಟೊತ್ತಾಯ್ತು’ ಎಂದ ರಾಮ.
ಗೌರಿ.., ಅಣ್ಣ ಎಲ್ಲ ಬಂದ್ರೇ. ಅವ್ರಿಗೆ ಊಟಕ್ಕೆ ತಾಟಿಡೇ' ಎಂದ ತಿಮ್ಮ. ನಾಲ್ಕೈದು ಬಾಳಿ ಇದ್ದದ್ದು ಕಟ್ಟೆರೋಗ ಬಂದುಹೋದ ಮೇಲೆ ಬಟ್ಟಲವೇ ಗತಿಯಾಗಿತ್ತು. ಶನಿವಾರ ಎಂಟು ದಿನಕ್ಕೊಮ್ಮೆ ದೇವ್ರಿಗೆ ಎಡೆ ಹಾಕೂದಕ್ಕೂ ಬಾಳಿ ಬರಗಾಲ ಆಗಿತ್ತು. ಗೌರಿ ಅವರಿಬ್ಬರಿಗೂ ಬಡಿಸಿದಳು. ಮಧ್ಯಾಹ್ನ ತಿಮ್ಮ ತಂದ ಮೀನನ್ನು ಕುದಿಸಿ ಇಟ್ಟಿದ್ದಳು. ಇಬ್ಬರೂ ಮಧ್ಯಾಹ್ನದ್ದು, ಸಂಜೆದು ಎರಡೂ ಸೇರಿಸೇ ಉಂಡರು. ಆಗಲೇ ಹೊತ್ತು ಬೀಳಲು ಹೋಗಿತ್ತು. ಕೋಳಿಗಳು ಗೂಡಿನ ಬಾಗಿಲಲ್ಲಿ ಬಂದು ಕುಳಿತಿದ್ದವು. ಅಪ್ಪಾ, ಶುಕ್ರನ ಪತ್ರ ಬಂತೇನೋ?’ ಎಂದು ಕೇಳಿದ ರಾಮ.
ಇನ್ನೂ ಬರಲಿಲ್ಲಲ್ಲೋ' ಎಂದ ತಿಮ್ಮ. ಶುಕ್ರ ಗೋವಾಕ್ಕೆ ಮೀನು ಲಾಂಚಿನಲ್ಲಿ ಕೆಲಸ ಮಾಡಲು ಈ ಸಲವೂ ಹೋಗಿದ್ದ. ತಿಮ್ಮ ಮೊದಲು ಬೇಡ ಅಂದಿದ್ದ. ಕಣ್ಣು ತಪ್ಪಿ ದೂರ ಹೋಗಿ ದುಡ್ಡು ತರುವುದಕ್ಕಿಂತಲೂ ಊರಲ್ಲೇ ತಿರುಗಾಡಿಕೊಂಡು ಇದ್ದರೂ ಅಡ್ಡಿಯಿಲ್ಲ ಅನ್ನುವವನು ಅವನು. ಶುಕ್ರನೂ ಅಪ್ಪನ ಮಾತಿಗೆ ಒಪ್ಪಿ ಮನೆಯಲ್ಲೇ ಇದ್ದ. ಅಷ್ಟರೊಳಗೆ ಗೋವಾಕ್ಕೆ ಹೋದವನು ಒಬ್ಬ ಸೀಕು ಆಗಿ ಮನೆಗೆ ತಿರುಗಿ ಬಂದ. ಅವನ ಮನೆಯವರು ಅವನನ್ನು ತಿರುಗಿ ಕಳುಹಿಸುವುದಿಲ್ಲವೆಂದರು. ಅದೇ ವೇಳೆಗೆ ಶುಕ್ರ ಅಲ್ಲಿಗೆ ಹೋಗಿ ಗಂಟು ಬಿದ್ದದ್ದು. ಅವನ ಮನೆಯ ಕಡೆ ಶುಕ್ರ ಅವನನ್ನು ನೋಡಿಬರಲು ಹೋಗಿದ್ದಾಗ,ನನ್ನ ಬದಲಿಗೆ ನೀನು ಬೇಕಾದರೆ ಹೋಗಿ ಸೇರಿಕೋ’ ಎಂದ.
ಆಮೇಲೆ ಶುಕ್ರನಿಗೆ ಮನಸ್ಸು ತಡೆಯದೆ ಹೋಯ್ತು. ಅಪ್ಪನಿಗೆ ಒಪ್ಪಿಸಿ ಎಂಟೇ ದಿನದಲ್ಲಿ ಹೋಗಿಬಿಟ್ಟ. ಅವನು ಹೋದ ಮೇಲೆ ಒಂದು ಪತ್ರ ಬಂದದ್ದು ಬಿಟ್ಟರೆ ಎರಡು ತಿಂಗಳಾದರೂ ಮತ್ತೇನೂ ಸುದ್ದಿ ಬಂದಿರಲಿಲ್ಲ. ಹಣವೂ ಬಂದಿರಲಿಲ್ಲ. ತಿಮ್ಮ ಎರಡು ಕಾಗದ ಬರೆಸಿ ಹಾಕಿದ್ದ. ಅದು ಶುಕ್ರನಿಗೆ ಹೋಗಿ ಮುಟ್ಟಿತೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ತಿಮ್ಮನಿಗಲ್ಲದೆ ರಾಮನಿಗೂ ಆಲೋಚನೆ ಸುರುವಾಗಿತ್ತು.
ಮನೆಯಲ್ಲಿ ಕಪ್ಪು ಮುಸುಕುತ್ತಿರುವಂತೆಯೇ ಸುಬ್ಬಿ ಚಿಮಣಿ ಬುರಡಿ ಹಚ್ಚಿದಳು. ಮಾಡಲು ಕೆಲಸವೇನೂ ಇದ್ದಿರಲಿಲ್ಲವಾದ್ದರಿಂದ ಎಲ್ಲರೂ ಅಲ್ಲಲ್ಲಿ ಸುಮ್ಮನೆ ಕುಳಿತಿದ್ದರು.
ತಿಮ್ಮ ಸುಬ್ಬಿಯ ಹತ್ತಿರ ದೇವಿಗೆ ಅನ್ನ ಹಾಕು ಅಂದ. ರಾಮ ಬಂದು ಅವ್ವನನ್ನು ಎಬ್ಬಿಸಿ ಗೋಡೆಗೆ ಚಾಚಿ ಕುಳ್ಳಿರಿಸಿದ. ಸುಬ್ಬಿ ಮೀನು ಪಳ್ದಿಯಲ್ಲಿ ಕಲಿಸಿದ ಅನ್ನವನ್ನು ಆಕೆಯ ಬಾಯಲ್ಲಿ ತುತ್ತುತುತ್ತಾಗಿ ಎತ್ತಿ ಇಡತೊಡಗಿದಳು. ನಾಲ್ಕು ತುತ್ತು ನುಂಗಿದ ಕೂಡಲೆ ದೇವಿಗೆ ಕೆಮ್ಮು ಬರತೊಡಗಿತು.
ಹಾಳಾದ ಕೆಮ್ಮು ಒಂದು ಇವ್ಳಿಗೆ ಕಾಡ್ತಾ ಅದೆ. ಅತ್ಲಾಗೂ ಅಲ್ಲ ಇತ್ಲಾಗೂ ಅಲ್ಲ. ಇನ್ನು ಎಷ್ಟು ದಿನ ನಮೆಯಬೇಕೋ ಎನೋ?' ಎಂದುಕೊಂಡ ತಿಮ್ಮ. 2 ಲೋರೆಸ ನಾಯ್ಕರದೂ ತಿಮ್ಮನದೂ ವಹಿವಾಟು ಒಂದು ವರುಷದ ಈಚಿನದು. ಕ್ರಿಶ್ಚಿಯನ್ನರ ಅಡ್ಡ ಹೆಸರು ಸಾಮಾನ್ಯರಿಗೆ ಉಚ್ಚರಿಸಲು ಕಷ್ಟಸಾಧ್ಯವಾದದ್ದು. ಆದಕಾರಣ ಅವರನ್ನು ಗೌರವ ಸೂಚಕವಾಗಿ ಕರೆಯಬೇಕಾದರೆ ಹೆಸರಿನ ಮುಂದೆನಾಯ್ಕರು’ ಎಂದು ಸೇರಿಸುತ್ತಿದ್ದರು. ಸಾಧಾರಣ ಸಲಿಗೆಯಿಂದ ಕರೆಯಬೇಕಾದರೆ ಮಮ್ಮ' ಎಂದು ಅವರ ಹೆಸರಿನ ಮುಂದೆ ಸೇರಿಸುತ್ತಿದ್ದರು. ಸಂತಮಮ್ಮ, ಪೇದ್ರು ಮಮ್ಮ ಅನ್ನುವ ಹಾಗೆ. ಲೋರೇಸ ನಾಯ್ಕರ ದಂಧೆ ಕತ್ತದ್ದು. ತೆಂಗಿನಕಾಯಿ ಶಿಪ್ಪೆಯಿಂದ ಹುರಿ ತಯಾರಿಸುವುದು. ತಿಮ್ಮನಿಗೆ ಕೆಲಸ ಇಲ್ಲದೆ ಇದ್ದಾಗ ಅಲ್ಲಿಗೆ ಹೋಗುತ್ತಿದ್ದ. ಅವರ ಜೊತೆ ಸೇರಿಕೊಂಡು ಸಣ್ಣ ಕಟಾಕುಟಿ ಏನಾದರೂ ಮಾಡುತ್ತಿದ್ದ. ತೆಂಗಿನಕಾಯಿ ಶಿಪ್ಪೆಯನ್ನು ತಂದು ಮೊದಲಿಗೆ ಕೆಸರಿನಲ್ಲಿ ಹೊಂಡ ಕಡಿದು ಹುಗಿಯುತ್ತಿದ್ದರು. ಅದನ್ನು ಸುಮಾರು ಒಂದು ವರುಷದ ಮೇಲೆಯೇ ತೆಗೆಯುವುದು ಶಿಪ್ಪೆ ಚೆನ್ನಾಗಿ ಕೊಳೆತು ಕಪ್ಪಾಗಿ ಇರುತ್ತದೆ. ಆ ಮೇಲೆ ಅದನ್ನು ಚೆನ್ನಾಗಿ ಮರದ ಮುಂಡದಿಂದ ಜಜ್ಜಿ ಎಳೆಗಳನ್ನು ಬಿಡಿಸುತ್ತಿದ್ದರು. ಆ ಮೇಲೆ ಕೈ ಯಂತ್ರದ ಸಹಾಯದಿಂದ ಹುರಿಯನ್ನು ತಯಾರಿಸುತ್ತಿದ್ದರು. ಅದರಿಂದ ಬಾವಿಹಗ್ಗ, ಆಕಳನ್ನು ಕಟ್ಟುವ ದಾಬ, ದೃಷ್ಟಿಹಗ್ಗ, ಅಡುಗೆ ಮನೆಯಲ್ಲಿ ತೂಗುವ ಸಿಕ್ಕ, ಎತ್ತುಗಳನ್ನು ನೊಗಕ್ಕೆ ಜೋಡಿಸಿ ಕಟ್ಟುವ ಜೊತೆಗ, ದರಕು ತುಂಬುವ ಕಲ್ಲಿ ಮುಂತಾದವನ್ನು ತಯಾರಿಸುತ್ತಿದ್ದರು. ತಿಮ್ಮನಿಗೂ ಆ ಎಲ್ಲ ಕೆಲಸದಲ್ಲಿ ಅಲ್ಪಸ್ವಲ್ಪ ಮಾಹಿತಿ ಇತ್ತು. ಹಾಗಾಗಿ ಲೋರೆಸ ನಾಯ್ಕರಿಗೂ ತಿಮ್ಮ ಉಪಯುಕ್ತನಾಗಿಯೇ ಕಂಡಿದ್ದ. ಶುಕ್ರನಿಂದ ಪತ್ರವಿನ್ನೂ ಬರದೆ ತಲೆ ಬೇಜಾರು ಹಿಡಿದ ತಿಮ್ಮ ಅವತ್ತು ಲೋರೆಸ ನಾಯ್ಕರ ಮುಂದೆ, ಎರಡು ಎರಡೂವರೆ ತಿಂಗಳು ಆಯ್ತು. ನಮ್ಮ ಶುಕ್ರಂದು ಇನ್ನೂ ಪತ್ರ ಬರಲಿಲ್ಲ. ಎಂಥಾ ಮಾಡ್ಕೊಂಡು ಅವನೆಯೋ ಏನೋ?’ ಎಂದಿದ್ದ.
ನಿಂಬದಿನವರು ಅಲ್ಲಿ ಮತ್ಯಾರೂ ಇಲ್ಲವೇನೋ? ಅವರಿಗಾದರೂ ಪತ್ರ ಒಂದು ಬರೆದು ಹಾಕಿ ನೋಡು' ಅಂದಿದ್ದರು ಲೋರೆಸ ನಾಯ್ಕರು. ಅವರು ಹೀಗಂದ ನಾಲ್ಕನೆ ದಿನವೇ ತಿಮ್ಮನ ಮನೆ ಬುಡಕಿನ ಈಶ್ವರ ಗೋವಾದಿಂದ ಬಂದ. ಅವನು ತಂದ ಸುದ್ದಿ ಮಾತ್ರ ತಿಮ್ಮನ ಪಾಲಿಗೆ ವಿಷವಾಗಿತ್ತು. ಶುಕ್ರ ಹಿಂದಿನ ದಿನ ಲಾಂಚಿನ ಮೇಲೆ ಹೋದವನು ಹಿಂದಕ್ಕೆ ಕುಳಿತಿದ್ದನಂತೆ. ತಲೆ ತಿರುಗಿದ ಹಾಗೆ ಆಗಿ ಅವನು ಸಮುದ್ರದಲ್ಲಿ ಬಿದ್ದನಂತೆ. ಲಾಂಚಿನವರು ಸುಮಾರು ದೂರ ಹೋದ ಮೇಲೆ ಗೊತ್ತಾಗಿ ತಿರುಗಿ ಬಂದು ಹುಡುಕಿದರೂ ಹೆಣ ಸಿಕ್ಕಲಿಲ್ಲವಂತೆ. ಇನ್ನೂ ಹುಡುಕುತ್ತಲೇ ಇದ್ದಾರಂತೆ. ಇವನು ಮಾತ್ರ ತಿಮ್ಮನನ್ನು ಕರೆದುಕೊಂಡು ಹೋಗಲು ಬಂದಿದ್ದ. ಈಶ್ವರ ಇಲ್ಲಿ ಬಂದು ಹೀಗೆ ಹೇಳಿದರೂ ಅಲ್ಲಿ ಆದದ್ದೇ ಬೇರೆ ಆಗಿತ್ತು. ಎರಡು ಲಾಂಚಿನವರಿಗೆ ಜಗಳವಾದಾಗ ಶುಕ್ರ ಅದರಲ್ಲಿ ಮುಂದಾಗಿದ್ದ. ಸಯಮ ನೋಡಿ ಅವರು ಶುಕ್ರನನ್ನು ಹೊಡೆದು ಸಮುದ್ರಕ್ಕೆ ಹಾಕಿದ್ದರು. ಯಾರನ್ನು ಕೇಳುವುದು? ಯಾರು ಕೇಳುವುದು? ರಾತ್ರೋ ರಾತ್ರೆ ತಿಮ್ಮ ಈಶ್ವರನ ಬೆನ್ನಿಗೆ ಹೊರಟ. ಕೈಯಲ್ಲಿ ಹಣವಿಲ್ಲದೆ ಲೋರೆಸ ನಾಯ್ಕರ ಹತ್ತಿರ ಒಂದು ನೂರು ರುಪಾಯಿ ತಕ್ಕೊಂಡು ಬಂದಿದ್ದ. ತಿಮ್ಮ ಗೋವಾಕ್ಕೆ ಹೋದ ಮಾರನೆ ದಿನ ಶುಕ್ರನ ಹೆಣವನ್ನು ಪತ್ತೆ ಮಾಡಿ ಹಿಡಿದರು. ದಹನ ಕ್ರಿಯೆಯನ್ನು ಅಲ್ಲೇ ಮುಗಿಸಿ ತಿಮ್ಮ ಬಂದ. ಬರುವಾಗ ಲಾಂಚಿನ ಸಾಹುಕಾರ ಕೊಟ್ಟ ಶುಕ್ರನ ಕೆಲಸದ ಹಣವನ್ನು ಕಿಸೆಯಲ್ಲಿ ಹಾಕಿಕೊಂಡಿದ್ದ. ಗೋವೆಯಿಂದ ತಿಮ್ಮ ಬಂದ ಮೇಲೆ ಲೋರೆಸ ನಾಯ್ಕರ ಮನೆಗೆ ಬಂದಿದ್ದ. ಅವರು ಎಲ್ಲ ವಿಷಯ ಕೇಳಿದರು.ನಿನ್ನ ಮಗನಿಗೆ ಇನ್ಸುರೆನ್ಸು ಮಾಡ್ಸಿರಲಿಲ್ಲವೇನೋ?’ ಎಂದರು. ತಿಮ್ಮನಿಗೆ ಅದೆಲ್ಲಾ ಏನು ಗೊತ್ತಿದೆ?
ಲಾಂಚಿಗೆ ಸೇರಿದವರಿಗೆ ಮೊದಲಿಗೆ ಹನ್ನೆರಡು ರುಪಾಯಿ ತುಂಬಿಸಿಕೊಂಡು ಇನ್ಸುರೆನ್ಸು ಮಾಡಿಸುತ್ತಾರೆ. ಅಕಸ್ಮಾತ್ತಾಗಿ ಸತ್ತರೆ ಹನ್ನೆರಡು ಸಾವಿರ ರುಪಾಯಿ ಸಿಗುತ್ತದೆ. ಇಲ್ಲದಿದ್ದರೆ ಆ ಹನ್ನೆರಡು ರುಪಾಯಿ ಹೋದಹಾಗೆ ಅಷ್ಟೆ. ಆ ವಿಷಯ ಲೋರೆಸ ನಾಯ್ಕರಿಗೆ ಸ್ವಲ್ಪ ಗೊತ್ತಿತ್ತು. ಆದರೆ ಶುಕ್ರ ಒಬ್ಬ ಬಿಟ್ಟು ಬಂದ ಜಾಗಕ್ಕೆ ಹೋಗಿ ಮಧ್ಯದಲ್ಲಿ ಸೇರಿದ್ದ. ಹಾಗಾಗಿ ಇವನು ಮಾಡಿಸಿರಲಿಲ್ಲ. ಲೋರೆಸ ನಾಯ್ಕರು ವಿಚಾರ ಮಾಡಿ, ಪ್ರಯತ್ನಪಟ್ಟರೆ ಹಣ ಸಿಗುವ ಹಾಗೆ ಮಾಡಬಹುದು ಎಂದು ಲೆಕ್ಕ ಹಾಕಿದರು. ತಿಮ್ಮನಿಗೆ, ಮಗನ ಕೆಲಸಕ್ಕೆ ಬೇಕಾದರೆ ಹಣ ತೆಗೆದುಕೊಂಡು ಹೋಗು. ನಂತರ ವಿಚಾರ ಮಾಡುವಾ ಅದರು. ತಿಮ್ಮ ಶುಕ್ರನ ದಿನದ ಕೆಲಸ ಮಾಡಲು ಗೋಕರ್ಣಕ್ಕೆ ಹೋಗಲು ನಿರ್ಧಾರ ಮಾಡಿದ್ದ. ಹಾಗಾಗಿ ಮತ್ತೆ ಅವರ ಹತ್ತಿರ ಮುನ್ನೂರು ರುಪಾಯಿ ತೆಗೆದುಕೊಂಡು ಅವರ ಉಪಕಾರ ಸ್ಮರಿಸಿ ಹೊರಬಿದ್ದ.
3
ನಿನಗೆ ಇನ್ನೂ ಹಣ ಬರುವುದು ಆಗುತ್ತದೆ. ಅದಕ್ಕೆ ಪ್ರಯತ್ನ ಮಾಡುವಾ. ಹಣ ಸಿಕ್ಕಿದ ಮೇಲೆ ಇನ್ನೇನಾದರೂ ಮಾಡಿಕೊಂಡು ಇರುವಿಯಂತೆ' ಎಂದು ಹೇಳಿ ಲೋರೆಸ ನಾಯ್ಕರು ತಿಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಓಡಾಟ ಮಾಡಿದರು. ಎರಡು ಸಲ ಗೋವೆಗೂ ಹೋಗಿ ಬಂದರು. ನಾಯ್ಕರು ನಿಜಕ್ಕೂ ಕಷ್ಟಪಟ್ಟು ಪ್ರಯತ್ನ ಮಾಡಿದ್ದಾರೆ. ಏನಿಲ್ಲದೆ ಹೋಗುವುದನ್ನು ಅಂತೂ ಇಂತೂ ತಿಮ್ಮನಿಗೆ ಸಿಗುವ ಹಾಗೆ ಮಾಡಿದರು. ಇನ್ಸುರೆನ್ಸ್‌ ಕಂಪನಿಯವರು ತಿಮ್ಮನ ಹೆಸರಿಗೆ ಹೊನ್ನಾವರದ ಸಿಂಡಿಕೇಟ್‌ ಬ್ಯಾಂಕಿಗೆ ಚೆಕ್‌ ಕೊಟ್ಟರು. ತಿಮ್ಮ ಬ್ಯಾಂಕಿನಲ್ಲೂ ಹಣವನ್ನು ತನ್ನ ತಾಬಾ ತೆಗೆದುಕೊಳ್ಳಲಿಲ್ಲ.ನಿಮ್ಮ ಹತ್ತಿರವೇ ಇರಲಿ’ ಎಂದುಬಿಟ್ಟ ಲೋರೆಸ ನಾಯ್ಕರಿಗೆ.
ಮನೆಗೆ ಬಂದ ಮೇಲೆ ಲೋರೆಸ ನಾಯ್ಕರು ತಿಮ್ಮನಿಗೆ,
ನೋಡು, ನಾವು ಎಷ್ಟು ಪ್ರಯತ್ನ ಮಾಡಿದ್ದೇವೆ ಅನ್ನುವುದು ನಿನಗೆ ಗೊತ್ತೇ ಇದೆ. ಏನೂ ಇಲ್ದೆ. ಹೋಗ್ತಿತ್ತು. ಈ ಹಣ ತಗೊಂಡು ಹೋಗಿ ಇಟ್ಟುಕೊಂಡರೆ ಸುಮ್ಮನೆ ಖರ್ಚು ಆಗ್ತದೆ. ಅದರ ಬದಲು ಏನಾದರೂ ಶಾಶ್ವತ ಉಳಿಯುವಂಥದ್ದು ನಿನ್ನ ಮಕ್ಕಳಿಗಾದರೂ ಉಪಯೋಗಕ್ಕೆ ಬರುವಂಥದ್ದು ತೆಗೆದು ಇಡು. ಹನ್ನೆರಡು ನೂರು ರುಪಾಯಿ ನಿನಗೆ ಬಂದಿದೆ' ಅಂದರು. ತಿಮ್ಮನಿಗೆ ಸ್ವಂತ ದೋಣಿ ಮಾಡಿಕೊಳ್ಳಬೇಕೆಂಬ ಆಸೆ ಇತ್ತಷ್ಟೆ. ನಾಯ್ಕರ ಮಾತನ್ನು ಕೇಳಿ, ಒಂದು ದೋಣಿ ಎಲ್ಲಾದರೂ ಸಿಕ್ಕಿದರೆ ತೆಗೆಸಿಕೊಡಿ. ನಿಮ್ಮ ಹತ್ತಿರ ಕಡ ತೆಗೆದುಕೊಂಡಿದ್ದು, ಖರ್ಚು ಮಾಡಿದ್ದು ಎಲ್ಲ ಮುರ್ಕಂಡಿ ಎಷ್ಟು ಉಳಿತದೋ ಅಷ್ಟು ಕೊಟ್ಬಿಡಿ’ ಅಂದ.
ಕಟ್ಟಿಗೆ ರೇಟು ಎಲ್ಲ ನಿನಗೆ ಗೊತ್ತಿದ್ದದ್ದೇ. ಹೊಸ ದೋಣಿ ತಗೊಳ್ಳುದಾಗಲೀ ಮಾಡ್ಸೂದಾಗಲಿ ಅಷ್ಟೊಂದು ಸಸಾರ ಅಲ್ಲ. ಈಗ ಬಂದ ದುಡ್ಡಿಗೆ ಇನ್ನೂ ಎರಡು ಸಾವಿರ ಸೇರ್ಸಿದರೂ ಕಮ್ಮಿ ಆಗ್ತದೆ. ಎಲ್ಲಾದರೂ ಹಳೆ ದೋಣಿ ತಗೊಂಡು ರಿಪೇರಿ ಮಾಡ್ಸಿಕೊಂಡರೆ ಅಡ್ಡಿಯಿಲ್ಲ. ಏನಂತೆ? ನಿನ್ನ ನದರಿನಲ್ಲಿ ಅಂಥಾ ದೋಣಿ ಇದ್ದರೆ ಹೇಳು ನೋಡುವಾ.' ನನಗೆಲ್ಲಿ ತಿಳಿಬೇಕ್ರಾ ಅದೆಲ್ಲ. ನಿಮ್ಮ ಕೈ ಮೇಲೆ ಎಲ್ಲಾದರೂ ಇದ್ರೆ ಮಾಡ್ಸಾಕಿ ನೋಡ್ವಾ’ ಎಂದ ತಿಮ್ಮ.
ಲೋರೆಸ ನಾಯ್ಕರ ಸಂಬಂಧದವರಲ್ಲೇ ಒಂದು ದೋಣಿ ಇತ್ತು. ಹಾಳಾಗಿ ಮೇಲೆ ಎಳೆಯಿಸಿ ಇಟ್ಟಿದ್ದರು. ಬಹಳ ಸೋವಿಯಲ್ಲಿ ಸಿಕ್ಕುತ್ತದೆ ಎಂದು ಹೇಳಿ ನಾಯ್ಕರು ಅದನ್ನು ಅವನಿಗೆ ಕೊಡಿಸಿದರು. ರಿಪೇರಿಯನ್ನು ಮಾಡಿಸಿ ಕೊಟ್ಟರು. ಅದಕ್ಕೆ ಒಟ್ಟು ಐದು ನೂರು ರುಪಾಯಿ ಖರ್ಚು ಮುಟ್ಟಿತು. ತಿಮ್ಮ ತಗೊಂಡ ನಗದು ಮುನ್ನೂರು ರುಪಾಯಿ, ಖರ್ಚಿಗೆ ಇನ್ನೂರು ರುಪಾಯಿ ಎಲ್ಲ ಸೇರಿ ಸಾವಿರ ರುಪಾಯಿ ಆಯ್ತು ಅಂತ ಹೇಳಿ ತಿಮ್ಮನ ಕೈಗೆ ಇನ್ನೂರು ರುಪಾಯಿ ಕೊಟ್ಟು ಕಳುಹಿಸಿದರು.
ತಿಮ್ಮನ ಬಹು ದಿನದ ಆಸೆ ಈಡೇರಿತ್ತು. ಸ್ವಂತದ ದೋಣಿ ಆಗಿತ್ತು. ಹೊಸ ಉತ್ಸಾಹದಿಂದ ಹೊನ್ನಾವರದ ಬಾಡಿಗೆಗೆ ಹೊರಟ. ಕೂಸನೂ ಜೊತೆಯಲ್ಲಿ ಇದ್ದ. ದೋಣಿಯಲ್ಲಿ ನೀರು ಬರುತ್ತಿತ್ತು. ಕಾರಣ ದೋಣಿಗೆ ಹೊಲಿಕೆ ಬಹಳ ಇತ್ತು. ಕೂಸ ದೋಣಿಯಲ್ಲಿ ಬಂದ ನೀರನ್ನು ಹಾಳೆಯಲ್ಲಿ ಮೊಗೆದು ಹೊರಗೆ ಚೆಲ್ಲುತ್ತಿದ್ದ. ದೋಣಿ ಸ್ವಂತದ್ದೆಂಬ ಉಮೇದಿಯಲ್ಲಿ ಅದೆಲ್ಲ ಬೇಸರವೆನಿಸಲಿಲ್ಲ.
ತಿಮ್ಮ ಸ್ವಂತ ದೋಣಿ ಮಾಡಿದ ಮೇಲೆ ಹ್ಯಾಗೆ, ಏನು, ಎಲ್ಲಿಂದ ಎಂದೆಲ್ಲ ಜನರು ವಿಚಾರ ಮಾಡಿದರು. ಹಣವು ಕೈಗೆ ಬರುವವರೆಗೂ ಯಾರಿಗೂ ಗುಟ್ಟು ಹೇಳಬಾರದೆಂದು ಲೋರೆಸ ನಾಯ್ಕರು ಕಟ್ಟು ಮಾಡಿದ್ದರು. ಹಾಗಾಗಿ ಅವನು ಯಾರಲ್ಲಿಯೂ ಹೇಳಿರಲಿಲ್ಲ. ಈಗ ಸ್ವಲ್ಪ ಸ್ವಲ್ಪ ಬಾಯಿಬಿಟ್ಟ.
ಶುಕ್ರ ಸತ್ತದ್ದಕ್ಕೆ ತಿಮ್ಮನಿಗೆ ಹಣ ಸಿಕ್ಕಿದೆ ಎಂದ ಕೂಡಲೆ ಎಲ್ಲಿ, ಹೇಗೆ, ಯಾರಿಂದ, ಎಷ್ಟು ಎಂದೆಲ್ಲ ಜನ ವಿಚಾರಿಸತೊಡಗಿದರು. ವಿಷಯ ಜನರ ಚರ್ಚೆಗೆ ಸಿಕ್ಕಿದ ಮೇಲೆ ನಿಜ ಸಂಗತಿಯ ಸುಳಿವು ತಿಮ್ಮನಿಗೆ ಸಿಕ್ಕಿತು. ಹನ್ನೆರಡು ಸಾವಿರ ಬಂದಲ್ಲಿ ಹನ್ನೆರಡು ನೂರನ್ನು ಕೊಟ್ಟು ಲೋರೆಸ ನಾಯ್ಕರು ಮೋಸ ಮಾಡಿದರು ಎನ್ನುವ ಆಲೋಚನೆ ಬಂದ ಕೂಡಲೆ ಅವನ ಚರ್ಯೆಯಲ್ಲಿ ಏಕ್‌ ದಂ ಬದಲಾವಣೆ ಕಂಡು ಬಂತು. ತಿಮ್ಮ ಮನಸ್ಸು ತಡೆಯಲಾರದೆ ಒಂದು ದಿನ ಹೋಗಿ ಅವರಿಗೇ ಕೇಳಿ ಬಿಟ್ಟ.
ಅಲ್ಲಾ, ನೀನು ಇಂಥ ಮನ್ಸಾ ಅಂತ ನಾ ತಿಳಿಲಿಲ್ಲಾಗಿದ್ದೆ. ಉಪಕಾರ ಮಾಡಿದ್ದಲ್ಲದೆ ಮಂದಿ ಮಾತ ಕೇಳ್ಕಂಡಿ ಒಂದು ಪಿಟ್ಟಿ ಹೊರ್ಸುಕೆ ಬಂದ್ಯಾ? ನಿಮ್ಮ ಜಾತಿ ಹಣೆಬರಾನೇ ಇಷ್ಟು. ಈಗ ಮಾಡಿದ್ದು ಇನ್ನೊಂದು ಗಳಿಗೆಗೆ ಇಲ್ಲ. ಮಂದಿ ಸಾವಿರಾ ಹೇಳ್ತಾರೆ. ಹುಕ್ಕಿ ಮಾತ ಕೇಳುವವ ನೀ ಎಂಥವನೋ? ನೀನು ನನ್ನ ಬೆನ್ನಿಗೆ ಜೀವ್‌ಗೂಡೇ ಇದ್ಯೆಲ್ಲೋ. ಬ್ಯಾಂಕಿನಲ್ಲೇ ತಕ್ಕೊಂಬೇಕಾಗಿತ್ತು. ನಾ ಬ್ಯಾಡಾ ಅಂತೀದ್ನಾ? ಇಷ್ಟು ಮಾಡಿದ್ದು ಸಾಕು. ಇನ್ನೊಂದು ಸಲ ಇಂಥದ್ದು ನನ್ನ ಕಿವಿಗೆ ಬಿತ್ತು ಅಂದ್ರೆ ನಾ ಸುಮ್ನೆ ಉಳಿಯೂದಿಲ್ಲ' ಎಂದು ನಾಯ್ಕರು ಜಬರದಸ್ತು ಮಾಡಿದರು. ತಿಮ್ಮ ನಿರುಪಾಯನಾಗಿ ಹಿಂತಿರುಗಿದ. ಇವರು ಮೋಸ ಮಾಡಿದ್ದು ಸುಳ್ಳಿರಬಹುದು ಎಂಬ ಆಲೋಚನೆಯೂ ತಲೆಯಲ್ಲಿ ಬಂತು. ವರುಷ ಕಳೆಯುವದರೊಳಗೇ ಲೋರೆಸ ನಾಯ್ಕರು ಒಂದು ಮೀನು ಲಾಂಚು ಖರೀದಿ ಮಾಡಿದ್ದು ನೋಡಿದ ಮೇಲೆ ತಿಮ್ಮನಿಗೆ ಮಂದಿ ಮಾತು ಪಕ್ಕಾ ಆಯ್ತು. ಆ ಮೇಲೆ ಅವನಿಗೆ ಕಂಡಕಂಡವರ ಹತ್ತಿರ ಅದೇ ವಿಷಯ ಹೇಳಿಕೊಳ್ಳುತ್ತ ತಿರುಗುವುದೇ ದಂಧೆಯಾಯ್ತು. ಯಾಕೆಂದರೆ ನಾಯ್ಕರು ತೆಗೆಸಿಕೊಟ್ಟ ದೋಣಿಯನ್ನು ಮೇಲೆ ಎಳೆಸಿ ಇಟ್ಟಿದ್ದ. ಕಂಡಾಪಟ್ಟೆ ರಿಪೇರಿ ಕೆಲ್ಸ ಇತ್ತು ಅದಕ್ಕೆ. ಅದೂ ಒಂದು ಬೂಚು ಬಿತ್ತು ತನಗೆ ಅಂದುಕೊಂಡ. ತಿಮ್ಮನಿಗೆ ಮೋನೋವ್ಯಾಧಿ ಹಿಡಿಯಿತು. ಹೊಟ್ಟೆಗೆ ತಿನ್ನುವುದನ್ನು ಕಡಿಮೆ ಮಾಡಿದ್ದ. ಅರ್ಧಕ್ಕೆ ಅರ್ಧ ಆಗಿ ಹೋದ. ಕಂಡಕಂಡವರ ಮುಂದೆ ಕೈ ಮುಗಿಯುವುದು, ತನ್ನ ಗೋಳಿನ ಕಥೆ ಹೇಳುವುದು. ಅವರು ಕೇಳ್ತಾರೋ ಇಲ್ವೋ ನೋಡುವುದಿಲ್ಲ. ಅಂತೂ ತಾನು ಹೇಳಬೇಕಾದುದನ್ನೆಲ್ಲ ಹೇಳಿ ಮುಗಿಸಿ,ಒಟ್ಟೂ ನಿಮಗೆ ತ್ರಾಸು ಕೊಟ್ಟೆ’ ಎಂದು ಹೇಳಿ ಮುಂದೆ ಹೋಗುತ್ತಿದ್ದ.
ಕಂಡವರೆಲ್ಲ ಇವನು ಈ ಮಳೆಗಾಲ ದಾಟುವುದಿಲ್ಲ ಎಂದು ಹೇಳುತ್ತಿದ್ದರು. ಅಂತೂ ಮಳೆಗಾಲ ಹಿಡಿಯುವುದಕ್ಕಿಂತ ಮೊದಲೇ ತಿಮ್ಮನ ಕಾಲ ಸಮೀಪವಾಯ್ತು.
ಮಾವಿನಕುರ್ವಿ ಹಬ್ಬಕ್ಕೆ ಇನ್ನೂ ಎಂಟು ದಿನ ಇರಬೇಕಿದ್ದರೆ ತಿಮ್ಮ ಕಷ್ಟಗಳಿಂದ ಮುಕ್ತಿ ಪಡೆದ. ಅವನು ಸಾಯುವ ವೇಳೆಯಲ್ಲಿ ಮನೆಯಲ್ಲಿ ಇದ್ದವರು ಹೆಂಗಸರು ಮಾತ್ರ. ರಾಮನೂ ಇಲ್ಲ, ಕೂಸನೂ ಇಲ್ಲ. ನಂತರ ಯಾರೋ ಹೋಗಿ ಕರೆದುಕೊಂಡು ಬಂದರು.
ತಿಮ್ಮನ ಹೆಣವನ್ನು ಸುಡಬೇಕು ಎಂದರೆ ಕಟ್ಟಿಗೆಯ ಶಿಲ್ಕು ಅವರ ಮನೆಯಲ್ಲಿ ಎಲ್ಲಿದೆ? ರಾಮ ಸೌದೆಗೆ ಏನು ಮಾಡುವುದೆಂದು ಆಲೋಚನೆ ಮಾಡುತ್ತಿರುವಾಗಲೇ ಲಡ್ಡು ಹತ್ತಿ ರಿಪೇರಿ ಇಲ್ಲದೆ ಮೇಲೆ ಎಳೆಯಿಸಿ ಇಟ್ಟ ದೋಣಿ ನೆನಪಾಯಿತು. ಸರಿ, ಕೊಡಲಿಯನ್ನು ತಂದು ದೋಣಿಯ ಹತ್ತಿರ ಬಂದ. ಕೂಸನಿಗೆ ಅಣ್ಣ ಏನು ಮಾಡುತ್ತಾನೆ ಎನ್ನುವುದು ಗೊತ್ತಾಗಲಿಲ್ಲ.

ರಾಮ ದೋಣಿಯ ಹೊಟ್ಟೆಯಲ್ಲಿ ನಿಂತು ಮಧ್ಯದಲ್ಲಿ ಉದ್ದಕ್ಕೂ ಕೊಡಲಿಯಿಂದ ಕಚ್ಚು ಹಾಕುತ್ತ ಬಂದ. ಹೊಟ್ಟೆಯಲ್ಲಿ ಇಳಿಸಿದ ಕೊಡಲಿ ಬೆನ್ನಲ್ಲಿ ಹೊರಬೀಳುತ್ತಿತ್ತು. ದೋಣಿ ಉದ್ದಕ್ಕೂ ಸೀಳಿತು. ಅದರ ಬಾಣಿಗೆಗಳೆರಡೂ ಎರಡು ಬದಿಗೆ ಬಿದ್ದವು.


ಸ್ಮೃತಿ ಪ್ರಕಾಶನ
ಅಡ್ಯನಡ್ಕ-574 260

ಪ್ರಿಯ ಶ್ರೀ ವಾಸುದೇವ ಶೆಟ್ಟರಲ್ಲಿ ವಿಜ್ಞಾಪನೆಗಳು.
ಕರಾವಳಿ ಗ್ರಾಮ ವಿಕಾಸ'ದಲ್ಲಿ ಧಾರಾವಾಹಿಯಾಗಿ ಅಚ್ಚಾದ ನಿಮ್ಮಬಲೆ’ ನಾನು ಅತ್ಯಾಸಕ್ತಿಯಿಂದ, ಪ್ರೀತಿಯಿಂದ ಓದಿದ್ದೇನೆ. ಇಡಿಯಾಗಿ ಓದಿದ್ದೇನೆ. ಅದರ ಕುರಿತ ನನ್ನ ಮೆಚ್ಚುಗೆಯನ್ನು ಸಂಪಾದಕರಿಗೂ ಬರೆದಿದ್ದೇನೆ. ಬಹುಶಃ ಅದರ ಸಮೀಕ್ಷೆ ಬರೆದೇನು ಅಂತ ಬರೆದಿದ್ದೇನೆ. ಬರೆಯುತ್ತೇನೆ ಬಿಡುವು ಮಾಡಿಕೊಂಡು.
ಬಲೆ' ನಿಸ್ಸಂದೇಹವಾಗಿ ಗಮನಾರ್ಹವಾದ ಪ್ರಾದೇಶಿಕ ಕಾದಂಬರಿ. ವಿಶುಕುಮಾರರಕರಾವಳಿ’, ಅಮೃತ ಸೋಮೇಶ್ವರರ ತೀರದ ತೆರೆ' ಬೆಸ್ತರ ಕುರಿತು ಈ ಮೊದಲು ಬಂದ ಕಾದಂಬರಿಗಳು. ನಿಮ್ಮದು ಮೂರನೆಯದು. ಅಪರೂಪದ್ದು. ಹೊಳೆಯ ಬೆಸ್ತರಿಗೆ ಸಂಬಂಧಿಸಿ, ಎನ್ನಬೇಕು. ನಿಮ್ಮ ಪ್ರಯತ್ನ ಸಂತೋಷ ನೀಡಿದೆ. ನಮ್ಮ ಜಿಲ್ಲೆಯಲ್ಲಿ ಕಾದಂಬರಿಕಾರರೇ ಇಲ್ಲವೆಂಬಷ್ಟು ಕಡಿಮೆ. ಅದರಲ್ಲೂ ಇಂಥ ಪ್ರಯೋಗ ನಡೆಯಿಸಿದವರು -ನನಗೆ ತಿಳಿದಂತೆ- ಡಾ.ಎಲ್.ಜಿ.ಭಟ್‌‌ ಹಾಗೂ ನೀವು- ಇಬ್ಬರೇ. ಅವರಬಾಳಮ್ಮ ತುಳಸಿ ತಾಯಾಗಿ’ ನೀವು ಓದಿರಬಹುದು, ಅಲ್ಲಾ?
ಇಂಥದ್ದನ್ನು ಇನ್ನೂ ಕೊಡಿ. ಅಭಿನಂದನೆಗಳು.
ನಮಸ್ಕಾರಗಳು,
ನಿಮ್ಮ
ವಿ.ಗ.ನಾಯಕ್‌

14-10-87

——–

ಡಾ.ಬುದ್ದಣ್ಣ ಹಿಂಗಮಿರೆ
ಮಾಳಮಡ್ಡಿ (ರಾಯರ ಮಠದ ಹತ್ತಿರ)
ಅತ್ತಿಕೊಳ್ಳ ರೋಡ್‌, ಧಾರವಾಡ 7.
22-03-2001
ಆತ್ಮೀಯ ವಾಸುದೇವ ಶೆಟ್ಟಿ ಅವರಲ್ಲಿ- ಸಪ್ರೇಮ ವಂದನೆಗಳು-
ಕನ್ನಡ ಓದುಗರ ಸ್ವಭಾವ ಸುಧಾರಿಸಬೇಕು. ಗ್ರಂಥಾಲಯ ಇಲಾಖೆಯ ವರ್ತನೆ ನೇರವಾಗಿರಬೇಕು. ಅಂದರೆ ಸಾಹಿತ್ಯ ಸೃಷ್ಟಿ ಮಾಡುವ ಪ್ರತಿಭಾವಂತರಿಗೆ, ಅವರನ್ನು ಪ್ರಕಾಶಕ್ಕೆ ತರಬಲ್ಲ ಪ್ರಕಾಶಕರಿಗೆ ಪ್ರೋತ್ಸಾಹ ದೊರಕುತ್ತದೆ. ಅಲ್ಲಿಯ ವರೆಗೆ ಕನ್ನಡ ಪುಸ್ತಕಗಳ ಪ್ರಕಾಶನ ಕೇವಲ ಹವ್ಯಾಸವಾಗಿಯೇ ಉಳಿಯುತ್ತದೆ1'- ಎಂದು ಪ್ರಕಾಶಕರು ಭೀಮಸೇನ ತೊರಗಲ್ಲ ಅವರು ಹೇಳಿದ್ದು ಅರ್ಥವತ್ತಾಗಿದೆ. 15 ವರ್ಷ ಅಜ್ಞಾತವಾಗಿ ಉಳಿದಿದ್ದ ನಿಮ್ಮ ಕೃತಿಬಲೆ’ಯನ್ನು ಪ್ರಕಟಿಸಿ ಕನ್ನಡ ಓದುಗರ ಸ್ವಭಾವ ಸುಧಾರಿಸಬೇಕೆಂದು ಹೇಳಿದ್ದಾರೆ. ಪ್ರಾಮಾಣಿಕವಾದ ಹೇಳಿಕೆ ವಾಸುದೇವ್‌! ಇಂಥ ಕೃತಿಯನ್ನು ಓದುವುದರಿಂದ ಕನ್ನಡಿಗರ ಸ್ವಭಾವ ಅಷ್ಟೇ ಅಲ್ಲ ಬುದ್ಧಿ ಭಾವಗಳೂ ಸುಧಾರಿಸಬಲ್ಲವು.
ನಿಮ್ಮ ಬಲೆಯ ಬೀಸುವ ಮುನ್ನ'ದ ಮೇಲೆ ಕಣ್ಣಾಡಿಸಿದೆ. ಗುರುವಿನ ನಾತೆಯಿಂದಲ್ಲ, ಒಬ್ಬ ವಿಮರ್ಶಕನ ನಾತೆಯಿಂದ. ನೀವು ಡೆಜರ್ಟೇಶನ್‌ಗಾಗಿ ಬರೆದದ್ದು ಇಂದು ಕಿರು ಕಾದಂಬರಿಯಾಗಿ ಓದುಗರ ಮುಂದಿದೆ.ಕೃತಿಕಾರನೊಬ್ಬನ ಆರಂಭದ ಹೆಜ್ಜೆಗಳನ್ನು ಗುರುತಿಸುವ ದಾಖಲೆಯಾಗಿ ಉಳಿಯಲಿ ಎಂಬ ಉದ್ದೇಶದದಿಂದ ಇದನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ’ ಎಂದು ಹೇಳಿರುವುದು ನಿಮ್ಮ ಅಚ್ಚ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.
ಹೊನ್ನಾವರ ತಾಲೂಕಿನ ಹೊಳೆಸಾಲಿನ ಅಂಬಿಗರ ಬದುಕಿಗೆ ಸಂಬಂಧಿಸಿದ ಕೆಲವು ಘಟನೆಗಳನ್ನಾಯ್ದು ಈ ಕಿರು ಕಾದಂಬರಿ ರಚಿತವಾಗಿದೆ ಈ ನಿಮ್ಮ ಕೃತಿ ಒಂದು ಶಬ್ದವನ್ನೂ ಬಿಡದೆ ಓದುವ ಹಾಗಿದೆ. ಮೊಟ್ಟಮೊದಲು ನನಗೆ ಅತ್ಯಂತ ಹಿಡಿಸಿದ್ದು ನಿಮ್ಮ ಭಾಷೆ, ಎಂದರೆ ಹೊನ್ನಾವರ ತಾಲೂಕಿನ ಅಂಬಿಗರ ಭಾಷೆ. ಭಾಷೆಯನ್ನು ಯಥಾವತ್ತಾಗಿ ಬಳಸಿ ಅದನ್ನು ರಕ್ಷಿಸಿದ್ದೀರಿ. ನನಗೆ ಅಪರಿಚಿತವಾದ ಹಲವು ಶಬ್ದ, ವಿಷಯಗಳನ್ನು ಕಂಡು ನನಗೆ ಆಶ್ಚರ್ಯವಾಯಿತು. ಬೇಕಾದಷ್ಟು ಜನ ಸಾಹಿತಿಗಳು ತುಂಬಿದ್ದಾರೆ. ಬೇಕಾದಷ್ಟು ಪಾರಿತೋಷಕ, ಪುರಸ್ಕಾರಗಳನ್ನು ಪಡೆದು ಮೂಗು ಮೇಲೆ ಮಾಡಿ ಕುರ್ಚಿಗಳ ಮೇಲೆ ಕೂಡ್ರುವವರಿದ್ದಾರೆ. ನನ್ನ ದೃಷ್ಟಿಯಲ್ಲಿ ಪ್ರಾಮಾಣಿಕತೆಗೂ ಸಂಸ್ಕೃತಿಗೂ ತೀರ ಹತ್ತಿರದ ನಂಟು. ಈಗ ಸಂಸ್ಕೃತಿ ಎಂಬ ಶಬ್ದ ಮಾತ್ರ ಇದೆ. ಪ್ರಾಮಾಣಿಕತೆ ಎನ್ನುವುದು ಜೀವ. ಅಪ್ರಾಮಾಣಿಕವಾದದ್ದು ಎಂದೂ ಸಂಸ್ಕೃತಿಯಾಗಲಾರದು. ಹೊನ್ನಾವರದ ನಿಮ್ಮ ಹಳ್ಳಿಯಿಂದ ದಿಲ್ಲಿಯ ವರೆಗೂ ಈ ಮಾತು ಅನ್ವಯವಾಗುತ್ತದೆಂದು ಭಾವಿಸಿದ್ದೇನೆ. ಪ್ರಚಾರ- ರಾಜಕೀಯದಿಂದ ಏನೆಲ್ಲವನ್ನೂ ಸಾಧಿಸಬಹುದು. ಕರ್ನಾಟಕ ಅಕಾಡೆಮಿ ಅಷ್ಟೇ ಅಲ್ಲ ಕೇಂದ್ರ, ಜ್ಞಾನಪೀಠ ಪ್ರಶಸ್ತಿಗಳನ್ನೂ ಗಿಟ್ಟಿಸಬಹುದಾಗಿದೆ. ಆದರೆ ಅಂಥಾದ್ದೆಲ್ಲಾ ಶ್ರೇಷ್ಠ ಸಾಹಿತ್ಯವೆನಿಸಿಕೊಳ್ಳಲಾರದು. ನಾಲ್ಕು ಜನರ ಡುಂಡುಂ ಪ್ರಚಾರ ಮುಗಿದ ಮೇಲೆ ಅಂಥಾ ಕೃತಿಗಳು ಅಲ್ಲಿಯೇ ಬಿದ್ದಿರುತ್ತವೆ.
ವಾಸುದೇವ,
ಈ ಮಾತನ್ನು ಯಾಕೆ ಬರೆಯುತ್ತಿದ್ದೇನೆ ಗೊತ್ತೆ? ಹಲವು ವರ್ಷಗಳ ನಂತರ ನಿಮ್ಮ ಹಾಗೂ ಕೃತಿಯ ಭೆಟ್ಟಿಯಾಯ್ತು. ನನಗೆ ಗೊತ್ತಿದ್ದ ಮಟ್ಟಿಗೆ- ವಿಶುಕುಮಾರ ಅವರ ಕರಾವಳಿ' ಮತ್ತುಚೆಮ್ಮೀನ್‌’ ಕೃತಿಗಳು ನನಗೆ ಹಿಡಿಸಿದ್ದವು. ಅನಂತರ ನಿಮ್ಮ ಈ ಕಿರು ಕೃತಿ `ಬಲೆ’. ತಿಮ್ಮನ ಬದುಕಿನುದ್ದಕ್ಕೂ ಕಾಣಿಸಿಕೊಂಡ ಘಟನೆಗಳು ಈ ಬಲೆಯಲ್ಲಿ ಸೇರಿಕೊಂಡಿವೆ.
ಪಾತಿ, ಪೊಂಗಯ, ಕೊಂತ್ಲ, ಕೋಲುದೋಣಿ ಕಂಡಿದೋಣಿ, ಪಡಾವು, ಹಲಗೆದೋಣಿ, ಪಾಂಡಿ, ಮಚ್ವೆ ಇದೆಲ್ಲಾ ಒಳನಾಡ ಜಲಸಂಚಾರದ ವಾಹನಗಳು. ಪಾತಿ ಅಂದರೆ ಅತಿ ಚಿಕ್ಕದು.- ಹೀಗೆ ಎಲ್ಲವನ್ನೂ ಅತ್ಯಂತ ಸಂಕ್ಷೇಪವಾಗಿ ಕಾವ್ಯ ಹೇಳುವಂತೆ ಹೇಳುತ್ತ ಹೋಗಿದ್ದೀರಿ.
ಬೆನ್ನು, ಹೊಟ್ಟೆ, ಬಾಣಿಗೆ- ಒಂದು ದೋಣಿಯ ಅವಿನಾಭಾವ ಭಾಗಗಳೆಂದೂ ಹೇಳಿದ್ದು.
ಪ್ರಾಮಾಣಿಕ ತಿಮ್ಮ ಕೊನೆಯಲ್ಲಿ ಮಗ ಶುಕ್ರನನ್ನು ಕಳೆದುಕೊಂಡು ಕೊರಗುತ್ತ ಸೊರಗುತ್ತ ಸಣ್ಣಾಗುತ್ತಾನೆ. ಸಾಯುತ್ತಾನೆ. ಅವನ ಹೆಣ ಸುಡುವುದಕ್ಕೂ ಕಟ್ಟಿಗೆ ಇರಲಿಲ್ಲ. ಎಳೆದು ಒಗೆದಿದ್ದ ತಿಮ್ಮನ ದೋಣಿಯ ಕಟ್ಚಿಗೆಗಳೇ ಅವನ ಹೆಣ ಸುಡುವುದಕ್ಕೆ ಬಂತು. ಅಣ್ಣ ರಾಮ(ತಿಮ್ಮನ ಮಗ) ಏನು ಮಾಡುತ್ತಾನೆಂಬುದು ಕೂಸನಿಗೆ ಗೊತ್ತಾಗಲಿಲ್ಲ.
ರಾಮ ದೋಣಿಯ ಹೊಟ್ಟೆಯಲ್ಲಿ ನಿಂತು ಮಧ್ಯದಲ್ಲಿ ಉದ್ದಕ್ಕೂ ಕೊಡಲಿಯಿಂದ ಕಚ್ಚು ಹಾಕುತ್ತ ಬಂದ. ಹೊಟ್ಟೆಯಲ್ಲಿ ಇಳಿಸಿದ ಕೊಡಲಿ ಬೆನ್ನಿನಲ್ಲಿ ಹೊರಬೀಳುತ್ತಿತ್ತು. ದೋಣಿ ಉದ್ದಕ್ಕೂ ಸೀಳಿತು. ಅದರ ಬಾಣಿಗೆಗಳೆರಡೂ ಎರಡು ಬದಿಗೆ ಬಿದ್ದವು.- ಹೀಗೆ ಬಲೆ ಸಾಂಕೇತಿಕವಾಗಿ ಮುಕ್ತಾಯಗೊಂಡು ಹಲವು ಅಪ್ರಾಮಾಣಿಕರಿಗೆ ಸಾಹಿತಿಗಳಿಗೆ ಸವಾಲೊಡ್ಡುತ್ತದೆ.
ವಾಸುದೇವ, ಈಗ ಇಷ್ಟೇ ಸಾಕು. ಇನ್ನೊಮ್ಮೆ ಓದಿ ಬರೆಯಬೇಕೆಂದಿದ್ದೇನೆ. ಆರಂಭದ ಹೆಜ್ಜೆಗಳಲ್ಲಿ ಮೂಡಿರುವ ಪ್ರಾಮಾಣಿಕತೆ ಎಂಥವರನ್ನೂ ದಂಗುಬಡಿಸುವಂತಿದೆ. ಹತ್ತಿಪ್ಪತ್ತು ಬರೆಯುವುದಕ್ಕಿಂತ ಇಂಥ ಒಂದು ಕೃತಿ ಬರುವುದು ಲೇಸು. 15 ವರ್ಷ ಅಜ್ಞಾತ ಮುಗಿಸಿ ಈಗ ಜ್ಞಾತ ಲೋಕಕ್ಕೆ ಬಂದಿದ್ದು, ಭೀಮಸೇನ ತೊರಗಲ್ಲರು ಹೇಳಿರುವಂತೆ, ಓದುಗರ ಸ್ವಭಾವ ಸುಧಾರಿಸಬೇಕು. ಇಷ್ಟು ಮಾತುಗಳನ್ನು ನನಗೆ ಅನಿಸಿದ್ದನ್ನು ಬರೆದಿದ್ದೇನೆ.
ನಿಮ್ಮ ವಿಶ್ವಾಸದ

ಬುದ್ದಣ್ಣ ಹಿಂಗಮಿರೆ

———-

21-08-2000
ಪ್ರಿಯ ವಾಸುದೇವ ಶೆಟ್ಟಿ,
ನನ್ನ ಸ್ನೇಹಿತ ಭೀಮಸೇನ ತೊರಗಲ್ಲ ನಿಮ್ಮ ಕಾದಂಬರಿ `ಬಲೆ’ಯನ್ನು ಕೊಟ್ಟಿದ್ದರು. ಓದಿ ಮುಗಿಸಿದ್ದೇನೆ.
ದೋಣಿ ನಡೆಸುವ ತಿಮ್ಮನ ಕತೆ ಮನಸ್ಸು ಮುಟ್ಟುವ ಹಾಗಿದೆ. ಒಂದು ರೀತಿಯಲ್ಲಿ ಇದು ಎಲ್ಲಾ ಬಡವರ ಕತೆ.
ಬರೆವಣಿಗೆ ಸೊಗಸಾಗಿದೆ. ಪಾತ್ರಗಳು ಕಣ್ಣಿಗೆ ಕಟ್ಟುತ್ತವೆ. ನಿಮ್ಮಲ್ಲಿ ಬರೆಯುವ ಶಕ್ತಿ ಇದೆ. ಬೆಳೆಸಿಕೊಳ್ಳಿ. ಕೈ ಬಿಡಬೇಡಿ. ಈಗ ಪತ್ರಿಕೆಗಳೂ ಸಾಕಷ್ಟಿವೆ. ಧಾರಾವಾಹಿಯಾಗಿ ಬರುವ ಅವಕಾಶಗಳು ಹೆಚ್ಚಾಗಿವೆ.
ಎಲ್ಲಿಯೂ ಅತಿರೇಕಕ್ಕೆ ಹೋಗದ ಸಂಯಮದ ನಿಮ್ಮ ಕಥನ ಸಹಾನುಭೂತಿಯನ್ನು ಹುಟ್ಟಿಸುತ್ತದೆ. ಒಬ್ಬ ಲೇಖಕ ಅದಕ್ಕಿಂತ ಹೆಚ್ಚಿಗೆ ಏನು ಮಾಡಲು ಸಾಧ್ಯ?
ಅಭಿನಂದನೆಗಳು


ನಿಮ್ಮ ಸುಮತೀಂದ್ರ ನಾಡಿಗ