ನಮ್ಮ ಸಮಕಾಲೀನ ಬರಹಗಾರರಲ್ಲಿ ಸಮಕಾಲೀನ ವಿವಾದಗಳಿಗೆ ತಕ್ಷಣವೇ ಪ್ರತಿಕ್ರಿಯಿಸುತ್ತ ಸದಾ ಜಾಗೃತರಾಗಿರುವ ಬರಗೂರು ರಾಮಚಂದ್ರಪ್ಪನವರು ವಿವಿಧ ಕೃತಿಗಳಿಗೆ ಬರೆದ ಮುನ್ನುಡಿ ರೂಪದ ಬರೆಹಗಳ ಸಂಕಲನ ‘ಅನುಸಂಧಾನ’. ಮುನ್ನುಡಿ ಬರೆಹವು ಸಾಹಿತ್ಯದಲ್ಲಿ ಒಂದು ವಿಶೇಷ ಪ್ರಕಾರವಾಗಿ ಬೆಳೆದುಬರುತ್ತಿದೆ. ಅದರ ಲಕ್ಷಣ, ಸ್ವರೂಪಗಳನ್ನು ಇಂಥ ಕೃತಿಯನ್ನು ಇಟ್ಟುಕೊಂಡು ನಿರ್ವಚಿಸಬಹುದಾಗಿದೆ.
 ಸಾಮಾನ್ಯವಾಗಿ ಕೃತಿಯೊಂದನ್ನು ಓದುವ ಓದುಗನಿಗೆ ಕೃತಿಯ ಮುಖ್ಯಾಂಶಗಳು ಹಾಗೂ ಆಶಯವನ್ನು ತಿಳಿಸುತ್ತ ಕೃತಿಕಾರನಿಗೆ ಶುಭಕೋರುವುದು ಈ ಬರೆಹದ ಒಂದು ಲಕ್ಷಣ. ಇಂಥವುಗಳಲ್ಲಿ ಕಟು ವಿಮರ್ಶೆಯನ್ನು ಕಾಣುವುದು ಸಾಧ್ಯವಿಲ್ಲ. ಮುನ್ನುಡಿ ಅಪೇಕ್ಷಿಸುವ ಕೃತಿಕಾರ ಕೃತಿಯ ಬಗ್ಗೆ, ತನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಬರೆಯಬೇಕು ಎಂದು ಬಯಸುವುದು ತೀರ ಸಹಜ. ಇಂಥ ಅಡಕ್ಕೊತ್ತಿನಲ್ಲಿ ಸಿಲುಕುವ ಮುನ್ನುಡಿಕಾರರು ತಮ್ಮ ಮಿತಿಯಲ್ಲಿಯೇ ಪುಸ್ತಕವೊಂದರ ಆಲೋಚನೆ ಮಾಡುತ್ತಾರೆ. ಸೂಕ್ಷ್ಮವಾಗಿ ಕೊರತೆಗಳನ್ನು ದಾಖಲಿಸುತ್ತಾರೆ. ಇನ್ನೊಂದು ಕೃತಿಯೊಂದಿಗೆ ಈ ಕೃತಿಯನ್ನು ಹೋಲಿಸಿ ನೋಡುತ್ತಾರೆ. ವೈಯಕ್ತಿಕವಾದ ಪ್ರೀತಿ ವಿಶ್ವಾಸಗಳ ನೆಲೆಯಲ್ಲಿ ಸಹೃದಯತೆಯನ್ನು ನಾವು ಮುನ್ನುಡಿಗಳಲ್ಲಿ ಕಾಣಬಹುದು.
 ಬರಗೂರರ ಈ ಕೃತಿಯಲ್ಲಿ ಮುನ್ನುಡಿಗಳ ಜೊತೆಗೆ ಕೆಲವು ಪುಸ್ತಕಾವಲೋಕನಗಳೂ ಇವೆ. ಮುನ್ನುಡಿ ಬರೆಹಗಳಿಗೆ ಈ ಕೃತಿಯೊಂದು ದಿಕ್ಸೂಚಿಯೂ ಆಗಬಲ್ಲುದು.
 ಬರಗೂರರ ಬರೆಹದ ಒಂದು ವಿಶೇಷವೆಂದರೆ, ಅವರು ಕೃತಿಯೊಂದರಲ್ಲಿ ಪ್ರತಿಪಾದನೆಯಾದ ವಿಷಯವನ್ನು ಗ್ರಹಿಸುತ್ತಾರೆ ಮತ್ತು ಆ ವಿಚಾರವನ್ನು ವಿಸ್ತರಿಸುತ್ತಾರೆ. ಅದಕ್ಕೊಂದು ಉದಾಹರಣೆ ಈ ಕೃತಿಯ,’ಹರಿಹರಪ್ರಿಯರ ಕೆಲವು ಕೃತಿಗಳು’ಲೇಖನ. ಅದರಲ್ಲಿ ‘ಅಸಹನೆ ಮತ್ತು ಆತಂಕಗಳ ನಡುವೆ ಇರುವ ಸೂಕ್ಷ್ಮ ಗೆರೆಯನ್ನು ಕಂಡುಕೊಳ್ಳುವ ಸಂವೇದನಾಶೀಲತೆ ಇದ್ದಾಗ ಆತಂಕ ಮೌಲ್ಯವಾಗುತ್ತ ಅಸಹನೆ ಹಿನ್ನೆಲೆಗೆ ಸರಿಯುತ್ತದೆ. ಸಂಕಟ ುರಿಯುತ್ತ ಸಿಟ್ಟು ಆರತೊಡಗುತ್ತದೆ. ಹರಿಹರಪ್ರಿಯ ಅವರ ಬರೆವಣಿಗೆಯುದ್ದಕ್ಕೂ ಅಸಹನೆ- ಆತಂಕ ಮತ್ತು ಸಿಟ್ಟು- ಸಂಕಟಗಳ ನಡುವೆ ತುಯ್ದಾಡುತ್ತ ಆರೋಗ್ಯಕರ ನೆಲೆಗೆ ಹಾರೈಸುವ ತಳಮಳವಿದೆ. ಎಲ್ಲಿ ಆತಂಕ ಮತ್ತು ಸಿಟ್ಟು ಸಂಕಟಗಳು ಮುಖ್ಯವಾಗುತ್ತವೋ ಅಲ್ಲಿ ಲೇಖಕನೊಬ್ಬ ಗೆಲ್ಲುತ್ತಾನೆ; ಅಸಹನೆ ಮತ್ತು ಸಿಟ್ಟು ಮುಖ್ಯವಾದವನು ಸೊರಗುತ್ತಾನೆ. ಆತಂಕವಿಲ್ಲದ ಅಸಹನೆ, ಸಂಕಟವಿಲ್ಲದ ಸಿಟ್ಟು ಅಪ್ರಸ್ತುತವಾಗುವ ಅಪಾಯವಿರುತ್ತದೆ. ಹರಿಹರಪ್ರಿಯ ಅವರ ಬರವಣಿಗೆಯ ಪ್ರಸ್ತುತತೆ ಇರುವುದು, ಅಸಹನೆಯಿಂದ ಆತಂಕಕ್ಕೆ, ಶುಷ್ಕ ಸಿಟ್ಟಿನಿಂದ ಸಂಕಟಕ್ಕೆ ಹೊರಳುತ್ತಿರುವ ಹಾದಿಯಲ್ಲಿ….” ಹೀಗೆ ಹೇಳುತ್ತ ಬರಗೂರರು ಸಾಹಿತ್ಯದ ಒಂದು ಸಿದ್ಧಾಂತವನ್ನು ಸೂತ್ರರೂಪದಲ್ಲಿ ವಿವರಿಸುತ್ತಾರೆ.
 ಬರಗೂರರ ಒಳ ನೋಟಗಳಿಗೆ ಇನ್ನೊಂದು ಉದಾಹರಣೆ “ಮೂರು ಕಾದಂಬರಿಗಳು: ಹಾಡ್ಲಹಳ್ಳಿ ನಾಗರಾಜ್” ಲೇಖನ ನೋಡಬಹುದು. ಅಲ್ಲಿ ಅವರು ಅಕ್ಷರ ಸಂಸ್ಕೃತಿ ಸ್ಥಿತ್ಯಂತರಗೊಂಡ ರೀತಿಯನ್ನು ದಾಖಲಿಸುತ್ತಾರೆ. “ನಮ್ಮಲ್ಲಿ ಸಾಹಿತ್ಯ ಸಂಭ್ರಮ ಮತ್ತು ಸಮೃದ್ಧಿಗಳು ಕಡಿಮೆಯಾಗಿವೆಯೆಂದು ಕೆಲವು ಪ್ರತಿಷ್ಠಿತರು ಆಗಾಗ್ಗೆ ಹಳಹಲಿಸುತ್ತಾರೆ. ಈ ಹಳಹಳಿಕೆಗೆ ಕಾರಣವಿಲ್ಲ ಎಂಬುದು ನನ್ನ ಅಭಿಪ್ರಾಯ. ನಮ್ಮ ಸಂದರ್ಭದ ಸಾಹಿತ್ಯ ಸಂಭ್ರಮ ಮತ್ತು ಸಮೃದ್ಧಿಗಳು ಸ್ಥಲಾಂತರಗೊಂಡಿವೆ; ವ್ಯಕ್ತಿ ನೆಲೆಗಳು ಸಾಮುದಾಯಿಕ ನೆಲೆಗಳಾಗಿ ಸ್ಥಿತ್ಯಂತರಗೊಂಡಿವೆ. ಅಕ್ಷರ ಸಂಸ್ಕೃತಿಯ ‘ಸಾಮಾಜಿಕ ರೇಖೆ’ಗಳು ಅಳಿಸಿಹೋಗುತ್ತ ಹೊಸ ಅನುಭವಗಳು ಅಕ್ಷರವಾಗತೊಡಗಿದ ಸನ್ನಿವೇಶದಲ್ಲಿ ನಾವು ಹಾದುಹೋಗುತ್ತಿದ್ದೇವೆ. ಪ್ರತಿಷ್ಠಿತ ವಲಯದ ಪ್ರತಿಗಾಮಿ ಪೀಠಗಳಿಗೆ ನಡುಕ ಹುಟ್ಟಿ ಸಂಭ್ರಮ- ಸಮೃದ್ಧಿಗಳ ಅಭಾವ ಕಾಣಿಸಿಕೊಂಡಿದ್ದರೆ, ಅಂಥವರಿಗೆ ಅದು ಸಹಜ- ಸ್ವಾಭಾವಿಕ. ಆದರೆ ಸಾಂಸ್ಕೃತಿಕ ಆವರಣದಲ್ಲಿ ಅಕ್ಷರಾಕೃತಿಗಳ ಕುಣಿತಕ್ಕೆ ಕಾರಣವಾಗಿರುವ ನಿರ್ಲಕ್ಷಿತ ಸಾಮಾಜಿಕ ವಲಯಗಳಿಗೆ ಸಂಭ್ರಮವೂ ಇದೆ; ಆವೇಶವೂ ಇದೆ; ಹದಕ್ಕೆ ಬರಬೇಕೆಂಬ ಒತ್ತಾಸೆಯೂ ಇದೆ. ಇಂಥ ವಿಶಿಷ್ಟ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳು ಸಮೃದ್ಧವಾಗಬೇಕಾಗಿದೆ…” ನಮ್ಮಲ್ಲಿರುವ ಪ್ರತಿಷ್ಠಿತ ವಿಮರ್ಶಕ ವಲಯವು ಹೊಸಬರ ಬರಹಗಳನ್ನು ಓದಿಲ್ಲ ಮತ್ತು ಬರಹಗಾರರನ್ನು ಗುರುತಿಸಿಲ್ಲ ಎಂದು ಅವರು ಹೇಳುತ್ತಾರೆ.
 ಕೃತಿಯೊಂದರ ಕೊರತೆಯನ್ನು ಹೇಳುವಲ್ಲಿಯೂ ಬರಗೂರರು ಹಿಂದೆಮುಂದೆ ನೋಡುವುದಿಲ್ಲ. ಇದೇ ಲೇಖನದ ಕೊನೆಯಲ್ಲಿ ಅವರು, ‘ಬಂಗಾರೆಕಲ್ಲು ಮತ್ತು ಕಡವೆ ಬೇಟೆ- ಹಾಡ್ಲಹಳ್ಳಿ ನಾಗರಾಜ್್ ಅವರ ಉತ್ತಮ ಕತೆಗಾರಿಕೆಗೆ ಉದಾಹರಣೆಯಾಗಿ ನಿಲ್ಲುವ ರಚನೆಗಳಾಗಿವೆ. ಆದರೆ ಇದೇ ಮಾತನ್ನು ‘ಕೋಕಿಲಾ’ ಎಂಬ ಕಿರುಕಾದಂಬರಿಯ ಬಗ್ಗೆ ಹೇಳಲಾರೆ. ಅದೊಂದು ಸಾಮಾನ್ಯ ಕಥಾನಕ. ವಸ್ತುವಿನಲ್ಲಿರುವ ಆದರ್ಶ, ಸ್ತ್ರೀಪರ ದೃಷ್ಟಿಕೋನಗಳು ಗಮನೀಯವಾದರೂ ಗಾಢವಾಗಿ ಕಾಡುವ ಕತೆಗಾರಿಕೆ ಕಾಣುವುದಿಲ್ಲ. ಮೊದಲೆರಡು ಕೃತಿಗಳ ನಾಗರಾಜ್್ ಇಲ್ಲಿ ನಾಪತ್ತೆಯಾಗಿದ್ದಾರೆ….”
 ಈ ಕೃತಿಯನ್ನು ಇಟ್ಟುಕೊಂಡು ಬರಗೂರರ ವಿಮರ್ಶೆಯ ನೆಲೆಗಳೇನು, ಅವರ ಸಾಹಿತ್ಯ ಮೀಮಾಂಸೆಯೇನು ಎಂಬುದನ್ನು ಗುರುತಿಸಬಹುದಾಗಿದೆ. ಈ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿಯಾಗಿದೆ.