*ಎಲ್ಲ ಕಷ್ಟ ಒಂದೇ ಸಲ ಬರುವುದು

ಕನ ಬಾರಿ, ಮಗನ ಮದುವೆ, ಹೊಳೆಯಾಚೆಗಿನ ಶ್ರಾದ್ಧ… ಓಹೋ ಎಲ್ಲವೂ ಒಂದೇ ಬಾರಿ. ಹೇಗಪ್ಪ ನಿಭಾಯಿಸುವುದು? ಹತ್ತಾರು ಕೆಲಸಗಳು ಒಟ್ಟೊಟ್ಟಿಗೆ ಬಂದು ಹೇರಿಕೊಂಡಾಗ ಕಂಗಾಲಾದ ಮನುಷ್ಯನ ಬಾಯಿಂದ ಸಹಜವಾಗಿ ಹೊರಹೊಮ್ಮುವ ಮಾತುಗಳು ಇವು.
ಏನು ಇವುಗಳ ಹಿಂದಿನ ಪುರಾಣ? ಈ ಮೂರು ಕಾರ್ಯಗಳು ಮಹಾಭಾರತದ ಇಡೀ ಒಂದು ಅಧ್ಯಾಯವನ್ನೇ ಒಳಗೊಂಡಿವೆ. ಮಹಾಭಾರತ ಪರಿಚಯವಿದ್ದವರಿಗೆ ತಟ್ಟನೆ ಇದು ಅರ್ಥವಾಗುತ್ತದೆ. ಇಲ್ಲದವರಿಗೆ ಅದು ಬರೀ ಹೇಳಿಕೆಗಳಾಗಿ ನಿಲ್ಲುತ್ತವೆ.
ಅರಗಿನ ಮನೆಯ ಅವಘಡದಿಂದ ಪಾರಾಗಿ ಬಂದ ಪಾಂಡವರು ಏಕಚಕ್ರ ನಗರದಲ್ಲಿ ಒಬ್ಬ ಬ್ರಾಹ್ಮಣನ ಮನೆಯಲ್ಲಿ ವೇಷ ಮರೆಸಿಕೊಂಡು ಇರುತ್ತಾರೆ. ಆ ಊರಿಗೆ ಬಕಾಸುರನ ಕಾಟ. ಪ್ರತಿ ದಿನ ಒಂದೊಂದು ಮನೆಯ ಒಬ್ಬ ವ್ಯಕ್ತಿ, ಬಂಡಿ ತುಂಬಿದ ಅನ್ನ, ಅದನ್ನೆಳೆಯುವ ಎರಡು ಎತ್ತು ಬಕನ ಆಹಾರ. ಪಂಡವರು ಉಳಿದುಕೊಂಡ ಬ್ರಾಹ್ಮಣನ ಮನೆಯವರ ಪಾಳಿ (ಬಾರಿ) ಬಂದೇ ಬಿಟ್ಟಿತು. ಮಗನ ಮದುವೆಯ ಸಿದ್ಧತೆಯನ್ನೂ ಅವರು ನಡೆಸಿದ್ದರು. ಅದೇ ದಿನ ಹೊಳೆಯ ಆಚೆಗೆ ಶ್ರಾದ್ಧದ ಪೌರೋಹಿತ್ಯಕ್ಕೆ ಆ ಬ್ರಾಹ್ಮಣ ಹೋಗಬೇಕಿತ್ತು. ಯಾವುದೂ ತಪ್ಪುವಂತಿಲ್ಲ. ಅಯ್ಯೋ ಎಲ್ಲವನ್ನೂ ನಿಭಾಯಿಸುವುದು ಹೇಗಪ್ಪ? ಕುಂತಿಯ ನೆರವಿನಿಂದ ಅವರು ಎಲ್ಲವನ್ನೂ ನಿಭಾಯಿಸಿದರು. ಹಲವು ಕಷ್ಟಗಳಲ್ಲಿ ಸಿಕ್ಕವರು ಕುಂತಿಯಂಥವರ ನೆರವಿನ ಹಾರೈಕೆಯಲ್ಲಿ ಈ ಮಾತನ್ನು ಉದ್ಗರಿಸುತ್ತಾರೆ.