ನನಗಾದ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿದೆ. ದ್ವಿತೀಯ ಪಿಯುಸಿ ಮಕ್ಕಳಿಗೆ ವೃತ್ತಿಶಿಕ್ಷಣದ ಕೌನ್ಸಿಲಿಂಗನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವುದು ಸರಿಯಷ್ಟೆ. ಇಲ್ಲಿ ಮಕ್ಕಳು ಕೌನ್ಸೆಲಿಂಗ್ ಸಮಯದಲ್ಲಿ ಸಲ್ಲಿಸುವ ಪ್ರಮಾಣಪತ್ರಗಳ ಝರಾಕ್ಸ್ ಪ್ರತಿಗಳನ್ನು ದೃಢೀಕರಿಸಿ ಸಹಿಮಾಡಿಸಬೇಕು ಎಂಬ ನಿಯಮ ಮಾಡಿದ್ದಾರೆ.
ಈ ರೀತಿ ಸಹಿಮಾಡಿಸಿಕೊಳ್ಳಲು ಪತ್ರಾಂಕಿತ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಮಕ್ಕಳೋ ಅವರ ಹೆತ್ತವರೋ ಹೋಗಬೇಕಾಗುತ್ತದೆ. ಅಲ್ಲಿ ಅವರು ಕಚೇರಿಯಲ್ಲಿ ಇದ್ದರೆ ಆಯಿತು, ಇಲ್ಲದಿದ್ದರೆ ಅವರು ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಕಾಯ್ದುಕುಳಿತುಕೊಳ್ಳಬೇಕು, ಇಲ್ಲ ಅವರು ಆಮೇಲೆ ಬನ್ನಿ ಎಂದರೆ ಅವರು ಹೇಳಿದ ಸಮಯಕ್ಕೆ ಹೋಗಬೇಕು. ಯಾವ ಅಧಿಕಾರಿಯೂ ಈ ಸಹಿಮಾಡುವ ಕೆಲಸವನ್ನು ಖುಷಿಯಿಂದ ಮಾಡುವುದಿಲ್ಲ. ಸಾಲ ಕೇಳಲು ಹೋದವರನ್ನು ಹೇಗೆ ನೋಡುತ್ತಾರೋ ಹಾಗೆ ಮಾಡುತ್ತಾರೆ. ಕೆಲವರು ನಿಷ್ಠುರವಾಗಿ ತಮ್ಮಿಂದ ಆಗುವುದಿಲ್ಲ, ಪಕ್ಕದ ಕಚೇರಿಯಲ್ಲಿ ಮಾಡಿಸಿಕೊಳ್ಳಿ ಎಂದು ದಬಾಯಿಸುತ್ತಾರೆ.
ನಾನೂ ನನ್ನ ಮಗಳ ದಾಖಲೆಗಳನ್ನು ದೃಢೀಕರಿಸಿಕೊಳ್ಳಲು ಸುಮಾರು ಹತ್ತು ಕಚೇರಿಗಳನ್ನು ಅಲೆದೆ. ಕೊನೆಗೆ ನಮ್ಮ ನೆರೆಯಲ್ಲಿಯೇ ಇರುವ ಸರ್ಕಾರಿ ಜೂ.ಕಾಲೇಜಿನ ಪ್ರಿನ್ಸಿಪಾಲ್ ಒಬ್ಬರಿಂದ ಸಹಿಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಬಡಪಟ್ಟಿಗೆ ಅವರು ಒಪ್ಪಲೇ ಇಲ್ಲ. ಪಕ್ಕದಲ್ಲಿ ಹೈಸ್ಕೂಲಿದೆ. ಅದರ ಹೆಡ್ಮಾಸ್ಟರ್ ಕಡೆಯಿಂದ ಮಾಡಿಸಿಕೊಳ್ಳಿ ಎಂದರು. ನಾನು ಅವರೊಂದಿಗೆ ವಾದಕ್ಕೆ ಇಳಿದ ಮೇಲೆ, ನಾನು ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬುದು ಗೊತ್ತಾದ ನಂತರ ಅವರು ಸಹಿ ಮಾಡಿದ್ದು. ಅದೂ ಕೂಡ ಒಂದಕ್ಕೆ ಮಾತ್ರ. ಎರಡಕ್ಕೆ ಇಲ್ಲ. ಮತ್ತೆ ಬೇಕಿದ್ದರೆ ಅದನ್ನೇ ಝರಾಕ್ಸ್ ಮಾಡಿಸಿಕೊಳ್ಳಿ ಎಂಬ ಉಪದೇಶ!
ಸಂವೇದನಾರಹಿತ ಅಧಿಕಾರ ವರ್ಗದ ಎದುರು ಆರಡಿ ಎತ್ತರದ ದೇಹವನ್ನು ಮೂರಡಿಗೆ ಕುಗ್ಗಿಸಿಕೊಂಡು ಸಹಿಗಾಗಿ ಅಂಗಲಾಚುವ ದೈನೇಸಿ ಪರಿಸ್ಥಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಕ್ಕಳಿಗೆ ಒದಗಿಸಿದೆ.
ಸ್ವಲ್ಪವೇ ಸ್ವಲ್ಪ ವಿವೇಕವಿದ್ದರೂ ಇಂಥ ಅನಿಷ್ಟವನ್ನು ತಪ್ಪಿಸಬಹುದಿತ್ತು. ಝರಾಕ್ಸ್ ಪ್ರತಿಗಳನ್ನು ದೃಢೀಕರಿಸಬೇಕಾದ ಅಗತ್ಯವೇನಿಲ್ಲ. ಎರಡನೆಯದು ಪರೀಕ್ಷಾ ಪ್ರಾಧಿಕಾರದ ಸಿಬ್ಬಂದಿಯೇ ಮೂಲ ಮತ್ತು ನಕಲು ಪ್ರತಿಗಳನ್ನು ಪರಿಶೀಲಿಸಿಯೇ ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ಬೇರೆಯವರಿಂದ ಸಹಿಮಾಡಿಸಿಕೊಳ್ಳುವ ಅಗತ್ಯವೇನಿದೆ? ಮುಂದಿನ ವರ್ಷವಾದರೂ ಇಂಥ ಅವಹೇಳನ ನಿಲ್ಲಲಿ. ಇದು ಮಕ್ಕಳಲ್ಲಿ ನಮ್ಮ ಆಡಳಿತ ವ್ಯವಸ್ಥೆಯ ಬಗ್ಗೆಯೇ ಒಂದು ರೀತಿಯ ಅಸಹನೆ, ಹೇಸಿಗೆ ಹುಟ್ಟುಹಾಕುತ್ತದೆ.
ಈ ಒಂದು ವಿಷಯ ಕಳೆದ ಒಂದೂವರೆ ತಿಂಗಳಿನಿಂದ ನನ್ನನ್ನು ಕೊರೆಯುತ್ತಲೇ ಇತ್ತು. ಬರೆಯುವುದು ಮಾತ್ರ ಸಾಧ್ಯವಾಗಿರಲಿಲ್ಲ. ಇತ್ತೀಚೆ ಉಡುಪಿಯಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿಯ ಮಾರನೆ ದಿನ ಉತ್ಸವದ ರಥದಲ್ಲಿ ಕುಳಿತ ಸ್ವಾಮೀಜಿ ಭಕ್ತರ ಕಡೆ ಶ್ರೀಕೃಷ್ಣ ಎಂದು ಬರೆಸಿದ ಟೋಪಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ಎಸೆಯುವುದು, ಭಕ್ತರು ಅದನ್ನು ಗಿಟ್ಟಿಸಿಕೊಳ್ಳಲು ಎಗರಾಡುವುದನ್ನು ಕಂಡು ಆನಂದಿಸುವುದು, ಎಸೆದಂತೆ ಮಾಡಿ ಎಸೆಯದೆ ಇರುವುದು ಮೊದಲಾದ ವಿನೋದವನ್ನು ಪ್ರದರ್ಶಿಸಿದರಂತೆ. ಈ ನೂಕು ನುಗ್ಗಾಟದಲ್ಲಿ ಕಾಲ್ತುಳಿತ ಸಂಭವಿಸಿ ಪ್ರಾಣಹಾನಿಯಾಗಿದ್ದರೆ ಅದಕ್ಕೆ ಯಾರು ಜವಾಬ್ದಾರರಾಗುತ್ತಿದ್ದರು? ಎಲ್ಲ ಕೃಷ್ಣ ಮಹಿಮೆ!
ಈ ವರದಿಯನ್ನು ಓದುತ್ತಿದ್ದಾಗ ನನಗೆ ಆಫ್ರಿಕ ಖಂಡದ ದೊರೆಯೊಬ್ಬನ ನೆನಪಾಯಿತು. ಆತನು ತನ್ನ ಅರಮನೆಯ ಉಪ್ಪರಿಗೆಯ ಮೇಲೆ ನಿಂತು ಬಯಲಿನಲ್ಲಿ ನಿಂತ ದಟ್ಟದರಿದ್ರರ ಕಡೆಗೆ ನಾಣ್ಯಗಳನ್ನು ತೂರುತ್ತಿದ್ದನಂತೆ. ಹೀಗೆ ತೂರಿದ ನಾಣ್ಯಗಳನ್ನು ಎತ್ತಿಕೊಳ್ಳಲು ಜನ ನಡೆಸುವ ತಳ್ಳಾಟ, ಹೋರಾಟ ಕಂಡು ಆತನ ಅಹಂ ತೃಪ್ತಿಯಾಗುತ್ತಿತ್ತಂತೆ. ಇದೊಂದು ರೀತಿಯಲ್ಲಿ ಫ್ಯೂಡಲಿಸ್ಟಿಕ್ ಮೆಂಟಾಲಿಟಿ- ಊಳಿಗಮಾನ್ಯ ವ್ಯವಸ್ಥೆಯ ಜಮೀನ್ದಾರಿ ಪದ್ಧತಿಯ ಮನೋಧರ್ಮ ಇದು. ಈ ಒಂದು ಮಾನಸಿಕ ಸ್ಥಿತಿ ಪ್ರತಿಯೊಬ್ಬ ಜೀವಿಯಲ್ಲೂ ಇರುತ್ತದೆ. ಅದು ಹೊರಬರುವುದಕ್ಕೆ ಅವಕಾಶ ದೊರೆತಾಗ ಅದು ಹುಚ್ಚುಹೊಳೆಯಾಗಿ ಪ್ರವಹಿಸುತ್ತದೆ. ಇಂಥದ್ದನ್ನು ನಿಯಂತ್ರಿಸುವುದಕ್ಕೆ ಕಾಯ್ದೆ ಕಾನೂನು, ಧರ್ಮಶಾಸ್ತ್ರ, ನೀತಿಶಾಸ್ತ್ರ ಇತ್ಯಾದಿಗಳು ಇರುವುದು. ಇದೊಂದು ರೀತಿಯಲ್ಲಿ ಹುಚ್ಚುಹೊಳೆಗೆ ಅಣೆಕಟ್ಟು ಕಟ್ಟಿ ಆ ನೀರನ್ನು ಕಾಲುವೆಗಳಲ್ಲಿ ಹರಿಯಿಸಿ ಫಸಲು ತೆಗೆಯುವ ವಿಧಾನಕ್ಕೆ ಸಮ.
ಮನುಷ್ಯನಲ್ಲಿ ಅಂತಸ್ಥವಾಗಿರುವ ಈ ಜಮೀನ್ದಾರಿಕೆಯ ಮನೋಭಾವ ಹೊರಬರುವುದಕ್ಕೆ ಅವಕಾಶ ಮಾಡಿಕೊಡುವುದು ಅಧಿಕಾರ. ಎಲ್ಲರೂ ತನ್ನೆದುರು ಕೈಯೊಡ್ಡಬೇಕು ಎಂದು ಮನಸ್ಸು ಬಯಸುತ್ತದೆ. ಇದೇ ಮಕ್ಕಳ ದಾಖಲೆಗಳಿಗೆ ಸಹಿ ಮಾಡಿ ದೃಢೀಕರಿಸಲು ಮುಖ ತಿರುಗಿಸುವ ನೌಕರಶಾಹಿಯ ಮನೋಧರ್ಮದಲ್ಲಿ ಪ್ರಕಟವಾಗುತ್ತದೆ. ಎಲ್ಲವನ್ನೂ ಈ ಕ್ಷಣದಲ್ಲೇ ಸಿದ್ಧಿಸಿ ತೋರಿಸುತ್ತೇನೆ ಎಂಬ ರಾಜಕಾರಣಿಯ ಹುಂಬತನದಲ್ಲಿ ಇದು ಪ್ರಕಟವಾಗುತ್ತದೆ. ರಾಜಕೀಯ ನೇತಾರರು ಮತ್ತು ಧಾರ್ಮಿಕ ನೇತಾರರು ಈ ರೀತಿಯಾದರೆ ಸಮಾಜದಲ್ಲಿ ತಾವೇ ಎಲ್ಲವನ್ನೂ ಸರಿಪಡಿಸುವ ಗುತ್ತಿಗೆಯನ್ನು ಪಡೆದವರಂತೆ ವರ್ತಿಸುವ ‘ನೈತಿಕ ಪೊಲೀಸರು’ ಇನ್ನೊಂದು ಕಡೆ. ಅಣ್ಣಾ ಹಜಾರೆಯವರ ಹೋರಾಟಕ್ಕೆ ಈ ಪರಿಯಲ್ಲಿ ಯುವ ಜನರು ಏಕೆ ಬೆಂಬಲವನ್ನು ನೀಡಿದರು ಎಂಬುದಕ್ಕೆ ಉತ್ತರವೂ ಇದರಲ್ಲಿಯೇ ಸಿಗುತ್ತದೆ.
ಆಳುವ ವರ್ಗದಲ್ಲಿಯ, ಸಮಾಜಕ್ಕೆ ಮಾರ್ಗದರ್ಶಕರಾಗಿರುವ ವರ್ಗದಲ್ಲಿಯ ಈ ಫ್ಯೂಡಲಿಸ್ಟ್ ಮೆಂಟಾಲಿಟಿಯನ್ನು ದೂರಮಾಡುವಂಥ ಮಂತ್ರದಂಡವನ್ನೇನಾದರೂ ಅಣ್ಣಾ ಹೊಂದಿದ್ದಾರೆಯೆ? ಭ್ರಷ್ಟಾಚಾರಕ್ಕಿಂತ ಮೂಲಭೂತವಾದ ಸಮಸ್ಯೆ ಇದು. ಒಬ್ಬ ವ್ಯಕ್ತಿಯನ್ನು ಬದಲಿಸಬೇಕಿದ್ದರೆ ಅದನ್ನು ಅವನ ಅಜ್ಜನಿಂದಲೇ ಆರಂಭಿಸು ಎಂಬ ಮಾತೊಂದಿದೆ. ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಯಲ್ಲಿ ತಂದರೆ ಎಲ್ಲವೂ ಬಗೆಹರಿದು ಹೋಗುವುದಿಲ್ಲ. ಅದರ ಪರಿಣಾಮಕಾರಿ ಅನುಷ್ಠಾನಗೊಳಿಸುವ ಜವಾಬ್ದಾರಿ ಯಾರದು? ಇದೇ ಸಂವೇದನಶೀಲತೆಯನ್ನು ಕಳೆದುಕೊಂಡಿರುವ ಅಧಿಕಾರಿಗಳೇ ಅಲ್ಲವೆ? ಇವರನ್ನು ತಿದ್ದುವವರು ಯಾರು?
ಆಳುವ ವರ್ಗದಲ್ಲಿಯ ನೈತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸ ಈಗ ಆಗಬೇಕಾಗಿದೆ. ಈ ನೈತಿಕ ಪ್ರಜ್ಞೆ ಎಷ್ಟು ತೀವ್ರವಾಗಿ ಇರುತ್ತದೋ ಅಷ್ಟೂ ಆಡಳಿತ ಶುಭ್ರವಾಗಿರುತ್ತದೆ. ಈ ಪ್ರಜ್ಞೆ ಯಾವ ರೀತಿಯದೆಂದರೆ ಜನ್ನನ ‘ಯಶೋಧರ ಚರಿತೆ’ಯಲ್ಲಿಯ ಸಂಕಲ್ಪ ಹಿಂಸೆಯ ಭಾಗವನ್ನು ಗಮನಿಸಬೇಕು. ಹಿಟ್ಟಿನ ಹುಂಜವನ್ನು ಬಲಿಕೊಟ್ಟ ಕಾರಣಕ್ಕೆ ಜನ್ಮಾಂತರಗಳನ್ನು ಹಾಯ್ದು ಬರಬೇಕಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಬಲಿಕೊಟ್ಟಿದ್ದು ನಿಜವಾದ ಕೋಳಿಯನ್ನಲ್ಲ. ಆದರೆ ಬಲಿ ಕೊಡುವ ಸಂಕಲ್ಪ ಇದೆಯಲ್ಲ ಅದು ನಿಜವಾದ ಬಲಿಯಷ್ಟೇ ಹೀನಾಯವಾದ್ದು. ವ್ಯಭಿಚಾರವನ್ನು ಮಾಡಲೇ ಬೇಕಿಲ್ಲ. ಆದರೆ ಮಾನಸಿಕವಾಗಿಯೂ ವ್ಯಭಿಚಾರಿಯಾಗುವ ಸಾಧ್ಯತೆ ಇರುತ್ತದೆ. ಇಂಥ ಕಠೋರವಾದ ನೈತಿಕ ಪ್ರಜ್ಞೆ ಆಳುವ ವರ್ಗದಲ್ಲಿ ಮೂಡಬೇಕು. ಇದೊಂದು ರೀತಿಯಲ್ಲಿ ಅಸಿಧಾರಾವ್ರತ. ಈ ವ್ರತದ ಧಾರಣೆಯನ್ನು ಅಧಿಕಾರಿ ವರ್ಗ ಮಾಡಿದಾಗ ಚಿಕ್ಕ ಮಕ್ಕಳ ಅಪಮಾನ ನಿಲ್ಲುತ್ತದೆ, ಸ್ವಾಮೀಜಿಯವರ ಕ್ರೌರ್ಯದ ವಿನೋದ ನಿಲ್ಲುತ್ತದೆ. ಲಂಚಕೊಡದೇನೆ ಜನರ ಕೆಲಸಗಳು ಆಗುತ್ತವೆ. ರಾಜಕಾರಣಿ ಜನಸೇವಕ ಆಗುತ್ತಾನೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.