ಕಾಲದ ಎದುರು ಎಚ್ಚರ ತಪ್ಪಿದರೆ ಕಾಲವೇ ಕಾಲನೇಮಿಯೂ ಆಗಬಹುದು!

ಪಂಚಾಂಗದಲ್ಲಿ ಇನ್ನೊಂದು ವರ್ಷ ಸಂದುಹೋಗಿದೆ. ಗೋಡೆಯ ಮೊಳೆಗೆ ಹೊಸ ಕ್ಯಾಲೆಂಡರ್ ಬಂದು ಕುಂತಿದೆ. ಹೋಗಿಯೇ ಬಿಟ್ಟಿತೇ ಒಂದು ವರ್ಷ ಎಂಬ ಉದ್ಗಾರದಲ್ಲಿಯೇ ಬೇಸರವೋ ಆತಂಕವೋ ಅವರವರ ಭಾವಕ್ಕೆ ತಕ್ಕಂತೆ ಅಭಿವ್ಯಕ್ತಿಗೊಂಡಿರುತ್ತದೆ. ಕಾಲವನ್ನು ಖಂಡಖಂಡವಾಗಿ ನೋಡಿ ಇಲ್ಲವೆ ಅಖಂಡವಾಗಿಯೇ ನೋಡಿ ಅದೇನೋ ನಿಗೂಢತೆ ಅದರಲ್ಲಿ ತುಂಬಿರುತ್ತದೆ.
ಕಾಲಮಾನವು ಈಗ ಇದ್ದಂತೆ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. ಕಾಲ ಮತ್ತು ಮನಸ್ಸು ಇವುಗಳಲ್ಲಿ ಯಾವಾಗಲೂ ಒಂದು ರೀತಿಯ ಹೊಯ್ದಾಟ ಇದ್ದೇ ಇರುತ್ತದೆ. ಭವಿಷ್ಯದ ಬಗೆಗೆ ಏನೇನೋ ನಿರೀಕ್ಷೆಗಳನ್ನು ಇಟ್ಟುಕೊಂಡು ಅದು ಬೇಗ ಬರಲಿ ಎಂದು ಹಾರೈಸುತ್ತ ಕುಳಿತರೆ ವರ್ತಮಾನವೇ ಸುದೀರ್ಘವಾಗುತ್ತದೆ. ತನ್ನ ಭೂತವೇ ಬಹು ಬೆಲೆಯುಳ್ಳದ್ದು ಎಂದು ತಿಳಿದುಕೊಂಡವನ ವರ್ತಮಾನಕ್ಕೆ ಯಾವುದೇ ತೂಕ ಇರುವುದಿಲ್ಲ.
ಹಾಗಾದರೆ ಕಾಲದ ಮೇಲೆ ನಾವು ಸವಾರಿ ಮಾಡುವುದು ಯಾವಾಗ? ಕಾಲವನ್ನು ಬೆನ್ನಟ್ಟುತ್ತ ಹೋದರೆ ನಾವೇ `ಕಾಲನೇಮಿ’ಗಳಾಗಿಬಿಡುವ ಅಪಾಯವಿದೆ. ಕಾಲಾಯ ತಸ್ಮೈ ನಮಃ ಎಂದು ಸುಮ್ಮನೆ ಕುಳಿತರೂ ಭೀರುಗಳಾಗಿಬಿಡಬಹುದು. ಕಾಲದ ಬೆನ್ನುಹತ್ತಿ ನಾವು ಹೊರಟರೆ ಗಾವುದ ಗಾವುದ ಗಾವುದ ಮುಂದೆ ಸಾಗುತ್ತಲೇ ಇರುತ್ತದೆ.
ಕಾಲಕ್ಕೆ ಬಣ್ಣವಿದೆಯೆ? ಅದು ಕಪ್ಪೆ? ಅದು ಬಿಳಿಯದೆ? ಹಗಲಿದ್ದರೂ ನಮ್ಮ ಗಮನಕ್ಕೆ ಬಾರದೆ ಇರುವುದು ಅದು ರಾತ್ರಿಯೇ. ನಿಮ್ಮ ಕಣ್ಣ ಮುಂದಿನದು ನಿಮಗೆ ಹಗಲಾದರೆ ಬೆನ್ನ ಹಿಂದಿನದು ರಾತ್ರಿಯೇ. ಕಾಲದ ಬಣ್ಣವನ್ನು ನೀವೇ ನಿರ್ಧರಿಸಬಹುದು. ನೀವು ಎಂದಾದರೂ ನಿಮ್ಮ ಕನಸಿನ ಬಣ್ಣದ ಬಗ್ಗೆ ಚಿಂತಿಸಿದ್ದೀರಾ? ನಿಜ ಹೇಳಿ, ನಿನ್ನೆ ರಾತ್ರಿ ನಿಮಗೆ ಬಿದ್ದ ಕನಸಿನ ಬಣ್ಣ ಯಾವುದೆಂದು? ನಿಮ್ಮ ಕನಸಿನ ಬಣ್ಣವನ್ನು ನೀವು ಹೇಳಬಲ್ಲಿರಾದರೆ ಕಾಲದ ಬಣ್ಣವನ್ನೂ ನೀವು ಹೇಳಬಲ್ಲಿರಿ. ಅದೊಂದು ರಿತಿಯ ತರಬೇತಿ. ನಿಮ್ಮ ಮನಸನ್ನು ನೀವು ತರಬೇತುಗೊಳಿಸಿದರೆ ಅದು ಕನಸಿನ ಬಣ್ಣವನ್ನೂ ಹೇಳುತ್ತದೆ. ಕಾಲದ ಬೆನ್ನು ಹತ್ತುವವನು ಮೈಯೆಲ್ಲ ಕಣ್ಣಾಗಿ ಇರಬೇಕು. ಮೈಮರೆತು ನಿಂತ ಸಿಂಹವನ್ನು ಒಂದು ಚಿಕ್ಕ ಪಟಾಕ್ಷಿಯನ್ನು ಸಿಡಿಸಿ ಹೆದರಿಸಬಹುದಲ್ಲವೆ? ಆದರೆ ಸಿಂಹ ತನ್ನ ಎದೆಯನ್ನು ಮುಂದುಮಾಡಿ ನಿಂತಾಗ ಸಿಡಿಗುಂಡು ಅದನ್ನು ಭೇದಿಸಿ ಹೋದರೂ ತಡೆಯುವುದು ಸಾಧ್ಯವಿಲ್ಲ. ಕಾಲದ ಎದುರು ಎಚ್ಚರ ತಪ್ಪಿದರೆ ಕಾಲವೇ `ಕಾಲನೇಮಿ’ಯೂ ಆಗಬಹುದು.
ಕಾಲವನ್ನು ಸಮಯ ಎಂದೂ ಕರೆಯುತ್ತೇವೆ. ಸಮಯವೆಂದರೆ ಧರ್ಮವೆಂಬ ಅರ್ಥವಿದೆ. ಬ್ರಹ್ಮಶಿವ ಕವಿ `ಸಮಯ ಪರೀಕ್ಷೆ’ ಎಂಬ ಗ್ರಂಥವನ್ನು ಬರೆದ. ಇಲ್ಲಿ ಸಮಯ ಪರೀಕ್ಷೆ ಎಂದರೆ ಧರ್ಮಪರೀಕ್ಷೆಯೇ. ಕಾಲ ಮತ್ತು ಸಮಯವನ್ನು ಅದ್ವೈತಗೊಳಿಸಿ ಕಾಲಧರ್ಮ ಎಂದು ಕರೆಯುವುದಿದೆ.
ಇಂಥ ವರ್ಣನಾತೀತ ಕಾಲಗರ್ಭದೊಳಗೆ ಜನವರಿ 1ರಿಂದ ಡಿಸೆಂಬರ್ 31ರ ವರೆಗಿನ 365 ದಿನಗಳ ಕಾಲಘಟ್ಟ ಮಹಾಸಾಗರದಿಂದ ಒಂದು ಹನಿ ನೀರನ್ನು ಎತ್ತಿದಂತೆ. ಆದರೆ ಮನುಷ್ಯನ ಜೀವಿತಾವಧಿಗೆ ಹೋಲಿಸಿದರೆ ಇದೊಂದು ದೊಡ್ಡ ಅವಧಿಯೇ. ಸೋಲು ಗೆಲವು, ನಗು ಅಳು, ಪ್ರೀತಿ ದ್ವೇಷ ಹೀಗೆ ಹಲವು ರೀತಿಯ ದ್ವಂದ್ವಗಳು ಘಟ್ಟಿಸಿಕೊಂಡು ನಿರುಂಬಳತೆಗೆ ಹಾತೊರೆಯುವ ಮನಸ್ಸನ್ನು ಸಾಂತ್ವನಗೊಳಿಸುವ ಸಂಧಿ ಸಮಯ ಇದು. ಏನು ಮಾಡಿದೆ, ಏನು ಮಾಡಬೇಕಿತ್ತು, ಅದಾವ ಸಾಧ್ಯತೆಗಳು ನನ್ನೆದುರಿಗಿದ್ದವು, ಸವಾಲುಗಳನ್ನು ನಾನು ಸರಿಯಾಗಿ ಎದುರಿಸಿದೆನೆ, ಮಿತಿಮೀರಿದ ಔದಾರ್ಯ ತೋರಿಸಿದೆನೆ, ಅತ್ಯಂತ ಕೃತಘ್ನನಾಗಿ ವತರ್ಿಸಿದೆನೆ, ಹಾಲಿಟ್ಟವರಿಗೆ ವಿಷ ಕಕ್ಕಿದೆನೆ, ಕೊಲ್ಲ ಬಂದವರಿಗೆ ಕರುಣೆ ತೋರಿಸಿದೆನೆ, ಎಡದ ಕೆನ್ನೆಗೆ ಹೊಡೆದವರಿಗೆ ಬಲದ ಕೆನ್ನೆ ತೋರಿಸಿದೆನೆ ಇಲ್ಲ ನಾನೂ ಅವರಿಗೆ ತಿರುಗಿ ಹೊಡೆದೆನೆ… ಇವನ್ನೆಲ್ಲ ಅವಲೋಕನ ಮಾಡಿಕೊಂಡು ಮುಂದೆ ಇಂಥದ್ದೇ ಸನ್ನಿವೇಶಗಳಲ್ಲಿ ನಾನು ಏನು ಮಾಡಬಹು ಎಂದು ಆಲೋಚಿಸಲು, ಹೀಗೆಯೇ ಮಾಡುತ್ತೇನೆ ಎಂದು ಸಂಕಲ್ಪ ತೊಡಲು ಇದು ಸಂಕ್ರಮಣ ಕಾಲ.
ಸಾಧ್ಯತೆಗಳ ಸಾವಿರ ದಾರಿ ಎದುರಿಗೆ ಇರುತ್ತದೆ. ಆದರೆ ಅದು ನಮಗೆ ಗೋಚರವೇ ಆಗುವುದಿಲ್ಲ. ಕಂಗಳ ಮುಂದೆ ಮಾಣಿಕ್ಯವಿದ್ದು ಕಾಣಲರಿಯದವರು, ಬಾಗಿಲ ಮುಂದೆ ಹಾಲ ಸಾಗರವಿದ್ದು ಒರತೆಯ ನೀರಿಗೆ ಹಾರುವವರು ಇಂಥವರು. ಆಗ ತನು ನಷ್ಟ, ಮನ ನಷ್ಟ, ನೆನಹು ನಷ್ಟ, ಭಾವ ನಷ್ಟ, ಜ್ಞಾನ ನಷ್ಟ… ಹೀಗೆ ಎಲ್ಲವೂ ನಷ್ಟಗಳದ್ದೇ ಮೂಟೆ.
ಅನುಭವದಿಂದ ಪಾಠ ಕಲಿಯದವರನ್ನು ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವವರು ಎಂದು ಕರೆಯುತ್ತಾರೆ. ಇಂಥವರು ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ಹೆಲ್ಮೆಟ್ ತೊಟ್ಟರೆ ತಲೆಗೆ ರಕ್ಷಣೆ ದೊರೆಯುತ್ತದೆ ಎನ್ನುವುದು ಸಾಮಾನ್ಯ ಜ್ಞಾನ. ಆದರೆ ಹೆಲ್ಮೆಟ್ ಧರಿಸದೆಯೇ ಗಾಡಿಗೆ ನೇತುಹಾಕಿಕೊಂಡು ಹೋಗುವವರಿಗೆ ಏನೆನ್ನಬೇಕು? ಹೆಲ್ಮೆಟ್ ಕಡ್ಡಾಯಗೊಳಿಸಿ ಎಂದು ನ್ಯಾಯಾಲಯ ಆದೇಶ ನೀಡಬೇಕೆ? ಸಕರ್ಾರ ಆದೇಶ ಹೊರಡಿಸಬೇಕೆ? ಇದರ ವಿರುದ್ಧ ಚಳವಳಿ ಮಾಡುವವರಿಗೆ ಏನು ಹೇಳೋಣ?
ಕನ್ನಡ ನಾಡಿನವರ ಕನ್ನಡದ ಸಮಸ್ಯೆಯನ್ನೇ ಗಮನಿಸಿ. ಕನ್ನಡವನ್ನು ಆಡಳಿತ ಭಾಷೆ ಎಂದು ಘೋಷಿಸಿದ ಮೇಲೆ ಅದರಲ್ಲಿಯೇ ಆಡಳಿತ ನಡೆಸಲು ಇರುವ ತೊಂದರೆ ಏನು? ಇದಕ್ಕಾಗಿ ಹೋರಾಟಗಳು ನಡೆಯಬೇಕೆ? ಈ ನೆಲದಲ್ಲಿ ವಾಸಿಸುವವರು ಈ ನೆಲದ ಋಣ ಸಂದಾಯ ಮಾಡಬೇಕೆಂಬ ಪ್ರಜ್ಞೆಯನ್ನು ಹೊಂದಿರಬೇಡವೆ ಎಂಬುದೆಲ್ಲ ಸಂದ ವರ್ಷದ ಅತ್ಯಂತ ಸಂದಿಗ್ಧ ಮುದ್ದೆಗಳಾಗಿದ್ದವು. ಕನ್ನಡದಲ್ಲಿ ಕಲಿಸುತ್ತೇವೆಂದು ಶಾಲೆ ತೆಗೆದವರು ದುಡ್ಡು ಮಾಡಲು ಇಂಗ್ಲಿಷ್ನಲ್ಲಿ ಕಲಿಸುತ್ತಿದ್ದ ಮೋಸದ ವ್ಯವಹಾರವೂ ಬಯಲಿಗೆ ಬಂತು. ವೃತ್ತಿ ಶಿಕ್ಷಣದ ಸಿಇಟಿ ವಿದ್ಯಾಥರ್ಿಗಳಿಗೆ ತಲೆನೋವಾಗಿರುವ ಸಮಸ್ಯೆ ಹಾಗೆಯೇ ಉಳಿದು ಬಂತು. ಇದನ್ನು ಹೊಸ ವರ್ಷದಲ್ಲಿಯೂ ಹೀಗೆಯೇ ಇಡುವುದು ಬೇಡವೆಂದು ನಾವು ಸಂಕಲ್ಪ ತೊಡೋಣ.
`ನಾನೆಂಬ ಅಹಂಕಾರದಲ್ಲಿ ನಾನುಂಡೆನಾದರೆ ಎನಗದೇ ಭಂಗ’ ಎಂಬ ಅಲ್ಲಮ ಪ್ರಭುದೇವರ ಮಾತು ನೆನಪಾಗುತ್ತಿದೆ. ಅಹಂಕಾರ ಮೂಲ ಹಣ, ಅಧಿಕಾರ, ಹರೆಯ, ಸೌಂದರ್ಯ, ಬಾಹುಬಲ, ಬುದ್ಧಿಬಲ ಇತ್ಯಾದಿ. ರಾಜಕೀಯದಲ್ಲಿದ್ದು ಅಹಂಕಾರ ಮೆರೆದವರು ಏನೇನೋ ಆಗಿಹೋದರು. ಶಿಬು ಸೋರೆನ್ಗೆ ಏನಾಯ್ತು ಗೊತ್ತಲ್ಲ? ಸಲ್ಮಾನ್ ಖಾನ್ಗೆ ವಿನಾಯ್ತಿ ಸಿಗಲಿಲ್ಲ. ನ್ಯಾಯದ ಮುಂದೆ ಎಲ್ಲರೂ ಒಂದೇ. ದೊಡ್ಡವರು ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ರಾಜನೀತಿ ಹೇಳುತ್ತದೆ. ಮಕ್ಕಳ ತಪ್ಪು ದೊಡ್ಡವರ ಮುಖಕ್ಕೆ ಮಸಿ ಬಳಿಯುತ್ತದೆ. ಮನೆಯೊಳಗಣ ಬೆಂಕಿ ಮನೆಯ ಸುಡದೆ ಮೊದಲು ಪರರ ಸುಡದು.
ಅಧಿಕಾರವೆಂಬುದು ಹಾವಿನ ಸಂಗ ಮಾಡಿದಂತೆ. `ಹಾವಿನ ಹಲ್ಲು ಕಳೆದು ಆಡಿಸ ಬಲ್ಲರೆ ಹಾವಿನ ಸಂಗವೇ ಲೇಸು ಕಂಡಯ್ಯ’ ಎಂದು ಶರಣರು ಹೇಳಿದರು. ಅಧಿಕಾರ ನಮ್ಮ ಅಡಿಯಾಳಾಗಬೇಕೆ ಹೊರತು ಅಧಿಕಾರಕ್ಕೆ ನಾವು ಅಡಿಯಾಳಾಗಬಾರದು. ಅಧಿಕಾರ ಎಂಬುದು ಸೇವೆಗೆ ದೊರೆತ ಒಂದು ಅವಕಾಶ ಎಂದು ತಿಳಿಯಬೇಕು. ಜನಪ್ರಿಯತೆಯ ತಂತ್ರಗಳು ತಕ್ಷಣಕ್ಕೆ ಪ್ರಚಾರವನ್ನು ತಂದುಕೊಡಬಹುದು. ಆದರೆ ಕಾಲನ ಮೊಗಸಾಲೆಯಲ್ಲಿ ಅವರಿಗೆ ಸ್ಥಾನವೇ ಇರುವುದಿಲ್ಲ. ಅಲ್ಲಿ ಅವರ ಹೆಜ್ಜೆಗುರುತುಗಳು ಮೂಡುವುದೇ ಇಲ್ಲ. ಕಣ್ಣೆದುರಿಗಿದ್ದು ಜೈ ಅಂದವರು ಬೆನ್ನಹಿಂದೆ ಏನೆನ್ನಬಹುದು ಎನ್ನುವುದರ ಅರಿವು ರಾಜಕೀಯ ಅಧಿಕಾರಸ್ಥರಲ್ಲಿ ಇದ್ದರೆ ಅವರ ಹೆಸರು ಚಿರಸ್ಥಾಯಿಯಾಗುತ್ತದೆ.
ಸರ್ಪ ಮತ್ಸರ ಕೇಳಿದ್ದೇವೆ. ಆದರೆ ದಾಯಾದಿ ಮತ್ಸರವು ಅದಕ್ಕಿಂತ ಕಡಿಮೆಯದಲ್ಲ ಎನ್ನುವ ಅನುಭವ ಈ ವರ್ಷ ನಮಗೆ ಬಂತು. ಪ್ರಮೋದ ಮಹಾಜನ್, ಪ್ರಭಾಕರ ಕೋರೆ ಪ್ರಸಂಗಗಳು ಹಲವು ಪ್ರಶ್ನೆಗಳನ್ನು ನಮ್ಮ ಮುಂದೆ ಇಟ್ಟವು. ಅರೇ, ಬದುಕೆಂದರೆ ಇಷ್ಟೇನಾ? ನನ್ನದೇ ಇದು ಬದುಕು ಅಂದುಕೊಂಡವನ ಋಣ ಇತರರ ಮೇಲೆ ಎಷ್ಟು ಇರುವುದು? ಯಾವುದೂ ಬೇಡ ಕಣಾ ಎನ್ನುವುದು ಶ್ಮಶಾನ ವೈರಾಗ್ಯವೆನ್ನಿಸಿಕೊಳ್ಳುವುದು. ಇಂಥ ಎಡವಟ್ಟುಗಳು ಭವಿಷ್ಯದಲ್ಲಿ ಆಗದಿರಲಿ.
ಬಲವಿದ್ದವನು ಮಾಡಿದ್ದೆಲ್ಲ ಸರಿ ಎನ್ನುವುದಕ್ಕೆ ಜಾಗತಿಕ ರಾಜಕಾರಣದ ಹಿರಿಯಣ್ಣ ಅಮೆರಿಕವೇ ಸಾಕ್ಷಿ. ಅಪಾರವಾದ ಶಸ್ತ್ರಾಸ್ತ್ರ ಬಲದಿಂದ ಅದು ಇಡೀ ಜಗತ್ತನ್ನೇ ತನ್ನ ಬೆರಳ ತುದಿಯ ಮೇಲೆ ಕುಣಿಸುತ್ತಿದೆ. ನಮ್ಮಲ್ಲಿರುವ ಶಸ್ತ್ರಾಸ್ತ್ರವೇ ನಮ್ಮನ್ನು ಹಿಂಸೆಗೆ ಪ್ರಚೋದಿಸುತ್ತದೆ. ರಾಮಾಯಣದ ಅರಣ್ಯಕಾಂಡದಲ್ಲಿ ಒಂದು ಸುಂದರ ಪ್ರಸಂಗವನ್ನು ವಾಲ್ಮೀಕಿ ಸೃಷ್ಟಿಸಿದ್ದಾರೆ. ಕಂದಮೂಲ ತಿಂದು ಋಷಿಮುನಿಗಳ ಹಾಗೆ ಬದುಕುವುದಕ್ಕೆಂದು ಕಾಡಿಗೆ ಬಂದ ನಿಮಗೆ ಧನುಬರ್ಾಣಗಳೇಕೆ ಎಂದು ಸೀತೆ ಶ್ರೀರಾಮನನ್ನು ಪ್ರಶ್ನಿಸುತ್ತಾಳೆ. ನಿಮ್ಮಲ್ಲಿರುವ ಈ ಶಸ್ತ್ರಾಸ್ತ್ರವೇ ನಿಮ್ಮನ್ನು ಹಿಂಸೆಗೆ ಪ್ರಚೋದಿಸುತ್ತದೆ ಎಂದು ಅವಳು ಖಂಡಿತವಾಗಿ ಹೇಳುತ್ತಾಳೆ. ಜಾಜರ್್ ಡಬ್ಲೂ. ಬುಶ್ಗೆ ರಾಮಾಯಣವನ್ನು ಓದುವಂತೆ ಹೇಳುವವರು ಯಾರು? ಕೊನೆಯಪಕ್ಷ `ಲಗೇ ರಹೋ ಮುನ್ನಾಭಾಯಿ’ ಸಿನಿಮಾವನ್ನಾದರೂ ನೋಡುವುದಕ್ಕೆ ಹೇಳಬೆಕು.
ಗೆಲ್ಲಲೇ ಬೇಕು ಎನ್ನುವ ಹವಣಿಕೆಯಲ್ಲಿ ವಾಮಾರ್ಗವನ್ನು ತುಳಿಯುವುದು ಸಾಮಾನ್ಯ. ಕ್ರೀಡೆ, ರಾಜಕೀಯ, ಪರೀಕ್ಷೆ ಬರೆಯುವ ವಿದ್ಯಾರ್ಥಿ, ವಾಣಿಜ್ಯ ಪ್ರಪಂಚದ ಮಹಾನ್ ನಾಯಕರು ಎಲ್ಲರೂ ಒಮ್ಮೊಮ್ಮೆ ಇಂಥ ಆಮಿಷದಲ್ಲಿ ಬಿದ್ದುಬಿಡುತ್ತಾರೆ. ನಮ್ಮ ಕ್ರೀಡಾಪಟುಗಳು ಮಾದಕ ದ್ರವ್ಯ ಸೇವಿಸಿ ಸಿಕ್ಕಿ ಬಿದ್ದರು. ಕೆಲವು ಉದ್ಯಮಪತಿಗಳು ಸರ್ಕಾರಕ್ಕೆ ತೆರಿಗೆ ವಂಚಿಸಿದ್ದು ಬೆಳಕಿಗೆ ಬಂತು. ಕೆಲವು ರಾಜಕಾರಣಿಗಳು ತಮ್ಮ ಅಧಿಕಾರವನ್ನು ಸ್ವಭಿವೃದ್ಧಿಗೆ, ಸ್ವಜನಪಕ್ಷಪಾತಕ್ಕೆ ಬಳಸಿಕೊಂಡರು. ಇದಕ್ಕಾಗಿ ಸಾರ್ವಜನಿಕವಾಗಿ ಅವರು ಅಪಮಾನವನ್ನೂ, ಮಾನಸಿಕ ಹಿಂಸೆಯನ್ನೂ ಅನುಭವಿಸಬೇಕಾಗಿ ಬಂತು. ಇವೆಲ್ಲ ಪ್ರಸ್ತುತ ವರ್ಷದಲ್ಲಿ ಅನುಭವದ ತೋರುಗಂಭವಾಗಿ ನಿಲ್ಲಬೇಕು ಎಂಬುದು ನಮ್ಮ ಅಪೇಕ್ಷೆ.
ದೇಶದ, ಮಾನವೀಯತೆಯ ಪತಾಕೆಯನ್ನು ಎತ್ತರದಲ್ಲಿ ಹಾರಿಸಿದ ಹಲವು ಘಟನೆಗಳು ವರ್ಷದ ಒಡಲಲ್ಲಿ ಹುದುಗಿವೆ. ಹಲವು ಶ್ರೇಷ್ಠರು ನಮ್ಮನ್ನು ಅಗಲಿ ಹೋಗಿದ್ದಾರೆ. ಹೇಳಹೆಸರಿಲ್ಲದವರು ಶ್ರೇಷ್ಠ ಸಾಧನೆ ಮಾಡಿ ಮಿಂಚಿದ್ದಾರೆ. ಭವಿಷ್ಯದಲ್ಲಿ ಭರವಸೆಯನ್ನು ಇಡುವಂತೆ ನಮ್ಮನ್ನು ಬಲವಂತಗೊಳಿಸುವ ಸಾವಿರ ಚಿಲುಮೆಗಳು ವರ್ಷದುದ್ದಕ್ಕೂ ಉಕ್ಕಿವೆ. ಮುಸುಕಿದ ಮಬ್ಬಿನಲ್ಲಿ ಕೈಹಿಡಿದು ಕರೆದೊಯ್ಯುವ ಅಗೋಚರ ಹಸ್ತವೊಂದಿದೆ ಎಂಬ ಭರವಸೆಯನ್ನು ಇವು ನಮಗೆ ನೀಡುತ್ತವೆ.
ವರ್ಷದ ಕೊನೆಯಲ್ಲಿ ಹೊರಳಿ ನೋಡುವುದೆಂದರೆ ತವರು ಮನೆಯಿಂದ ಗಂಡನ ಮನೆಗೆ ಹೊರಟ ಗರತಿ `ತಿಟ್ಹತ್ತಿ ತಿರುಗಿ’ ನೋಡಿದ ಹಾಗೆ. ತೊಟ್ಟಿಲ ಹೊತ್ತುಕೊಂಡು, ತೌರುಬಣ್ಣ ಉಟ್ಟುಕೊಂಡು, ಅಪ್ಪ ಕೊಟ್ಟೆಮ್ಮೆ ಹೊಡಕೊಂಡು, ತಂಗ್ಯಮ್ಮ, ತೌರೂರ ತಿಟ್ಹತ್ತಿ ತಿರುಗಿ ನೋಡ್ವಾಳು.’ ಓಹೋ, ಅದೇನು ಸಾಧಾರಣ ನೋಟವೆ? ಆ ನೋಟದಲ್ಲಿ ಅದೆಂಥ ಆತಂಕ, ಪ್ರೀತಿ, ಮರುಕ… ನುಡಿಗೆ ನಿಲುಕದ ಭಾವನೆಗಳೆಲ್ಲ ಮಡುಗಟ್ಟಿರುತ್ತದೋ ಹಾಗೆ ಇದು