ಪ್ರೊ.ಎಂ.ಎನ್.ಶ್ರೀನಿವಾಸ್ ಅವರು ಪ್ರಖ್ಯಾತ ಸಮಾಜ ಶಾಸ್ತ್ರಜ್ಞರು. ‘ದಿ ರಿಮೆಂಬರ್ಡ್ ವಿಲೇಜ್’ ಎಂಬುದು ಅವರ ಶ್ರೇಷ್ಠ ಕೃತಿ. ಶ್ರೀನಿವಾಸ್ ಅವರು ಅಮೆರಿಕದ ಸ್ಟಾನ್ಸ್‌ಫರ್ಡ್‌ನ ‘ಸೆಂಟರ್ ಫಾರ್ ಅಡ್‌ವಾನ್ಸ್ ಸ್ಟಡೀ ಇನ್ ಬಿಹೇವಿಯರಲ್ ಸೈಯನ್ಸಸ್’ನಲ್ಲಿ ಇದ್ದಾಗ ಅವರು ಮಾಡಿಟ್ಟುಕೊಂಡ ಟಿಪ್ಪಣಿಗಳೆಲ್ಲ ಬೆಂಕಿಗೆ ಆಹುತಿಯಾದವು. ಬಳಿಕ ಅವರು ತಮ್ಮ ಕ್ಷೇತ್ರಾನುಭವದ ನೆನಪಿನ ಆಧಾರದ ಮೇಲೆಯೇ ಬರೆದ ಕೃತಿ ಇದು. ಇದನ್ನು ‘ನೆನಪಿನ ಹಳ್ಳಿ’ ಹೆಸರಿನಲ್ಲಿ ಟಿ.ಆರ್.ಶಾಮಭಟ್ಟ ಅವರು ಕನ್ನಡಕ್ಕೆ ತಂದಿರುವರು. ಇಲ್ಲಿಯ ಕೇಂದ್ರ ಪಾತ್ರ ರಾಮಪುರ ಎಂಬ ಹಳ್ಳಿ. ಒಬ್ಬ ವ್ಯಕ್ತಿಗೆ ಬೇರೆಬೇರೆ ಸ್ವಭಾವಗಳು ಬೇರೆಬೇರೆ ಸಂದರ್ಭಗಳಲ್ಲಿ ಇರುವಂತೆ ಒಂದು ಹಳ್ಳಿಗೂ ಇರುತ್ತದೆ. ವ್ಯಕ್ತಿಯಲ್ಲಿ ಅದು ವ್ಯಷ್ಟಿ ಕ್ರಿಯೆಯಾದರೆ, ಹಳ್ಳಿಯಲ್ಲಿ ಅದು ಸಮಷ್ಟಿ ಕ್ರಿಯೆಯಾಗಿ ಗೋಚರಿಸುತ್ತದೆ. ಒಬ್ಬ ವ್ಯಕ್ತಿಯ ಗುಣ ಸ್ವಭಾವಗಳ ಅಧ್ಯಯನ, ವಿಶ್ಲೇಷಣೆ ಮಾಡಿದಂತೆಯೇ ಶ್ರೀನಿವಾಸ್ ಅವರು ಇಲ್ಲಿ ರಾಮಪುರವನ್ನು ಹಿಂಜಿ ನೋಡಿದ್ದಾರೆ. ಈ ಅಧ್ಯಯನ ನಡೆದದ್ದು ೧೯೪೮ರಲ್ಲಿ. ಗಾಂಧೀಜಿ ಹತ್ಯೆಗೀಡಾದ ಸಂದರ್ಭದಲ್ಲಿ ಲೇಖಕರು ಆ ಊರಿನಲ್ಲಿದ್ದರು. ಗಾಂಧೀಜಿ ಸತ್ತಾಗ ಇಡೀ ಊರೇ ಹದಿಮೂರು ದಿನದ ಸೂತಕ ಆಚರಿಸಿದ್ದು ವಿಶೇಷವಾಗಿತ್ತು. ಆ ದಿನಗಳಲ್ಲಿ ಇಡೀ ದೇಶದ ಮೇಲೆ ಗಾಂಧೀಜಿಯವರ ಪ್ರಭಾವ ಹೇಗಿತ್ತು ಎಂಬುದನ್ನು ಇದು ಸೂಚಿಸುತ್ತದೆ. ‘ನಾನು ರಾಮಪುರವನ್ನು ಆಯ್ಕೆ ಮಾಡಿದ್ದು ಸೌಂದರ್ಯದ ಕಾರಣಗಳಿಗಾಗಿ ಹೊರತು ಬೌದ್ಧಿಕ ಕಾರಣಗಳಿಗಾಗಿ ಅಲ್ಲ ಎಂದು ಹೇಳಲು ನನಗೆ ಸಂಕೋಚವಾಗುವುದಿಲ್ಲ. ಭಾವನಾತ್ಮಕ ಕಾರಣಗಳಿಗಾಗಿಯೇ ನಾನು ದಕ್ಷಿಣ ಮೈಸೂರು ಭಾಗವನ್ನು ಆಯ್ಕೆಮಾಡಿದ್ದೆ…. ಕೇವಲ ಬೌದ್ಧಿಕ ಆಧಾರಗಳನ್ನು ಮಾತ್ರ ಪ್ರಸ್ತಾಪ ಮಾಡಿ, ಬೌದ್ಧಿಕೇತರ ಸಂಗತಿಗಳನ್ನು ಹೇಳದೆ ಮರೆಮಾಚುವುದು ಅಪ್ರಾಮಾಣಿಕವಾದೀತು’ ಎಂದು ಅವರು ಒಂದೆಡೆ ಹೇಳಿದ್ದಾರೆ. ಮಾನವ ವಿಜ್ಞಾನಿಯ ಅಧ್ಯಯನದ ಸಿದ್ಧತೆಗಳು ಹೇಗಿರಬೇಕು ಎಂಬ ವಿವರಗಳು ಇದರಲ್ಲಿ ದೊರೆಯುತ್ತವೆ. ಮಾನವ ವಿಜ್ಞಾನಿಗಳೆಂದರೆ ಜನಾಂಗೀಯ ವಿವರಣೆಕಾರರು. ತಮ್ಮ ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ ಮಾಹಿತಿಗಳ ಮೂಲಕ ಅವರು ಒಂದು ಪ್ರದೇಶದ ಜೀವನವಿಧಾನವನ್ನು ಕಟ್ಟಿಕೊಡುವವರು. ಎಂ.ಎನ್.ಶ್ರೀನಿವಾಸ ಅವರು ಈ ಕೃತಿಯ ಕುರಿತು, ತಾವು ಈ ಕೃತಿಯನ್ನು ರಚನೆ ಮಾಡಿದ್ದು ತಜ್ಞ ಓದುಗರಿಗಾಗಿ ಅಲ್ಲ, ಬದಲಿಗೆ ಜಾಣ ಓದುಗರಿಗಾಗಿ ಎಂದು ಪ್ರಸ್ತಾವನೆಯಲ್ಲಿ ಒಂದೆಡೆ ಹೇಳಿದ್ದಾರೆ. ಸೃಜನಶೀಲ ಲೇಖಕನಿಗೂ ಸಮಾಜವಿಜ್ಞಾನಿಗೂ ಇರುವ ವ್ಯತ್ಯಾಸದ ಅರಿವು ಅವರಿಗೆ ಇದೆ. ಸಮಾಜ ವಿಜ್ಞಾನಿಯು ತಾನು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸಿ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಕಾದಂಬರಿಯಂಥ, ಪ್ರಬಂಧಗಳಂಥ ಪ್ರಕಾರಗಳಲ್ಲಿ ಒಂದು ಪ್ರದೇಶದ ಜನಜೀವನದ ಚಿತ್ರಣ ನಮಗೆ ಲಭ್ಯವಾಗುತ್ತದೆ. ಆದರೆ ಅದು ಸಮಗ್ರವಾಗಿರುವುದಿಲ್ಲ. ಸಾಹಿತಿ ತನಗೆ ಎಷ್ಟುಬೇಕೋ ಅಷ್ಟನ್ನೇ ವಿವರಿಸಿರುತ್ತಾನೆ. ಕೇವಲ ವಿವರಗಳನ್ನು ತನ್ನ ಕತೆಯ ಸಂವಿಧಾನಕ್ಕೆ ಅನುಗುಣವಾಗಿಯಷ್ಟೇ ಬಳಸಿಕೊಳ್ಳುತ್ತಾನೆ. ಅದಕ್ಕೂ ಕೆಲವೊಮ್ಮೆ ಕಲ್ಪನೆಯ ಪೋಷಾಕು ತೊಡಿಸಿರುತ್ತಾರೆ. ಅದರ ಮೇಲೆ ತೀರ್ಪು ನೀಡುವ, ತನಗೆ ಬೇಕಾದಂತೆ ಗ್ರಹಿಸುವ, ಅರ್ಥೈಸಿಕೊಳ್ಳುವ ಸ್ವಾತಂತ್ರ್ಯವನ್ನು ಓದುಗನಿಗೆ ಬಿಡುತ್ತಾನೆ. ಈ ಕಾರಣಕ್ಕಾಗಿಯೇ ಗ್ರಾಮಾಯಣ, ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ನಮ್ಮೂರ ರಸಿಕರು ಮೊದಲಾದ ಕೃತಿಗಳು ‘ನೆನಪಿನ ಹಳ್ಳಿ’ಯಿಂದ ಭಿನ್ನವಾಗುತ್ತವೆ. ಕನ್ನಡದಲ್ಲಿ ‘ನೆನಪಿನ ಹಳ್ಳಿ’ಗೆ ಹತ್ತಿರವಾಗುವ ಒಂದು ಕೃತಿ ಇದೆ. ಅದು ಎಚ್.ಎಲ್.ನಾಗೇಗೌಡರ ‘ನನ್ನೂರು’. ಒಬ್ಬ ಜಾನಪದ ತಜ್ಞ ಒಂದು ಊರನ್ನು ಗ್ರಹಿಸುವುದಕ್ಕೂ ಒಬ್ಬ ಸಮಾಜ ವಿಜ್ಞಾನಿ ಒಂದು ಊರನ್ನು ಗ್ರಹಿಸುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಅರಿಯಲು ಇವುಗಳ ತೌಲನಿಕ ಅಧ್ಯಯನದ ಅಗತ್ಯವಿದೆ. ‘ನೆನಪಿನ ಹಳ್ಳಿ’ ನಮಗೇಕೆ ಮಹತ್ವದ್ದಾಗುತ್ತದೆ ಎಂದರೆ ಅದು ಒಂದು ಕನ್ನಡದ ಹಳ್ಳಿಯ ಬಗ್ಗೆ, ಮೈಸೂರು ಜಿಲ್ಲೆಯಲ್ಲಿರುವ ರಾಮಪುರದ ಬಗ್ಗೆ ವಿವರಗಳನ್ನು ನೀಡುತ್ತದೆ. ಇಡೀ ಒಂದು ಸಮಾಜದ ಹೂಬೇಹೂಬಾದ ಚಿತ್ರಣವನ್ನು ಶ್ರೀನಿವಾಸರು ನೀಡಿದ್ದಾರೆ. ಅವರು ತಮ್ಮ ಕ್ಷೇತ್ರಕಾರ್ಯದ ನೆನಪಿನಿಂದಲೇ ಅದನ್ನು ರಚಿಸಿದ್ದರೂ ಒಬ್ಬ ಕಾದಂಬರಿಕಾರನಂತೆ ಅವರು ಕಲ್ಪನೆಯ ಚಿತ್ರಗಳನ್ನು ನೀಡಲಿಲ್ಲ. ಆದರೆ ಈ ಕೃತಿಯ ಶೈಲಿ ಮಾತ್ರ ಒಂದು ಲಲಿತ ಪ್ರಬಂಧದಂತೆ ನಿಮ್ಮನ್ನು ತಟ್ಟದಿರದು. ಇಲ್ಲಿಯ ಎಷ್ಟೋ ಪುಟಗಳಲ್ಲಿ ಪತ್ರಿಕಾ ವರದಿಗಳಂತೆ ಶುಷ್ಕವಾಗಬಹುದಾಗಿದ್ದ ಬರೆವಣಿಗೆಯನ್ನು ಈ ಪ್ರಬಂಧದ ಶೈಲಿ ಓದಿಸಿಕೊಂಡು ಹೋಗುವ ಕೃತಿಯನ್ನಾಗಿ ಮಾರ್ಪಡಿಸುತ್ತದೆ. ಸಮಾಜ ವಿಜ್ಞಾನಿಯ ಅಧ್ಯಯನದ ಸ್ವರೂಪ ಇಂದು ಬದಲಾಗಿರಬಹುದು. ಎಷ್ಟೋ ಅನ್ವಯಿಕ ಹೊಸ ವಿಧಾನಗಳು ಬಂದಿರಬಹುದು. ಆದರೆ ಶ್ರೀನಿವಾಸ ಅವರು ಇಲ್ಲಿ ಅನುಸರಿಸಿರುವ ಪದ್ಧತಿ ಅನನ್ಯ. ಎಲ್ಲ ರೀತಿಯ ಅಧ್ಯಯನಗಳಿಗೂ ಇದು ಬುನಾದಿಯ ರೂಪದಲ್ಲಿದೆ. ಒಬ್ಬ ಸಮಾಜಶಾಸ್ತ್ರಜ್ಞನ ಪೂರ್ವಸಿದ್ಧತೆಗಳು ಏನಿರಬೇಕು ಎಂಬ ಪಾಠ ಈ ಕೃತಿಯ ಓದಿನಿಂದ ದೊರೆಯುತ್ತದೆ. ಇಂಥ ಅಧ್ಯಯನಗಳಿಂದ ಯಾರಿಗೆ ಲಾಭ? ಎಲ್ಲ ಸರ್ಕಾರಗಳು ಇಂಥವನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ. ಇವೆಲ್ಲವನ್ನೂ ಬಿಟ್ಟುಬಿಡಿ. ಒಬ್ಬ ಸಾಮಾನ್ಯ ಓದುಗ ಇದನ್ನು ತುಂಬ ಕುತೂಹಲದೊಂದಿಗೆ ಓದು ಆನಂದಿಸಬಹುದು. ಒಂದು ಹಳ್ಳಿಯ ಜನಪದೀಯ ಜ್ಞಾನವನ್ನು ಲೇಖಕರು ಅನಾವರಣಗೊಳಿಸುವ ಪರಿ ಇಲ್ಲಿ ವಿಶಿಷ್ಟವಾಗಿದೆ. ಶ್ರೀನಿವಾಸರು ಇದನ್ನು ಇಂಗ್ಲಿಷಿನಲ್ಲಿ ರಚಿಸಿದ್ದರೂ ಅವರು ಮೂಲತಃ ಕನ್ನಡದವರಾಗಿರುವುದರಿಂದ ಮತ್ತು ಅವರು ಅಧ್ಯಯನಕ್ಕೆ ಆಯ್ಕೆಮಾಡಿಕೊಂಡಿರುವ ಊರು ರಾಮಪುರ ಕನ್ನಡದ್ದಾಗಿರುವುದರಿಂದ ಬರೆಹ ಕನ್ನಡದ ಅಂತರ್ಯವನ್ನು ಹೊಂದಿದೆ. ಹೀಗಾಗಿ ಇದನ್ನು ಕನ್ನಡಕ್ಕೆ ತಂದಿರುವ ಟಿ.ಆರ್.ಶಾಮಭಟ್ಟರಿಗೆ ಮತ್ತೆ ಇದಕ್ಕೆ ಹೊಸದಾಗಿ ಕನ್ನಡದ ದೀಕ್ಷೆಯನ್ನು ನೀಡುವ ಅಗತ್ಯ ಬರಲಿಲ್ಲ. ‘ನೆನಪಿನ ಹಳ್ಳಿ’ ಅಚ್ಚ ಕನ್ನಡದ ಹಳ್ಳಿಯಾಗಿಯೇ ಇಲ್ಲಿ ಅವತರಿಸಿದೆ. ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು, ಪುಟಗಳು ೬೦೮, ಬೆಲೆ ₹ ೪೦೫