ನಿನ್ನ ನೆನಪಾಗುವುದು, ಹಬ್ಬದೂಟಗಳಲ್ಲಿ
ಶ್ಯಾವಿಗೆಯ ಎಳೆಗಳಲ್ಲಿ ನಿನ್ನ ತೂಗುವಾಗ
ಹಾಲ ಹನಿಗಳಲ್ಲಿ ನಿನ್ನ ತೇಲಿಸುವಾಗ
ಹಾಲು-ಶ್ಯಾವಿಗೆ ರುಚಿಗೆ ಪುಟಿದ ಲಾಲಾರಸದಿ
ನಾ ತೊಯ್ದು ತೊಪ್ಪೆಯಾದಾಗ

ನಿನ್ನ ನೆನಪಾಗುವುದು, ಮುಳ್ಳುಗಳ ನಡುವೆ
ನಳನಳಿಸಿ ಬಿರಿದ ಗುಲಾಬಿಯ ಕಂಡಾಗ
ಪಕಳೆಗಳೆಲ್ಲ ಉದುರಿ ಉಳಿದ
ಬರಿ ತೊಟ್ಟು ಕಂಡಾಗ

ನಿನ್ನ ನೆನಪಾಗುವುದು ಗಾಳಿಪಟವ ಹಾರಿಸುವಾಗ
ಸೂತ್ರ ಹರಿದ ಪಟವು ಸಿಡಿಲ್ಬೆಂಕಿಗೆ ಸುಟ್ಟು
ಕಣ್ಣಿಗೆ ಕಾಣದಾದಾಗ

ನಿನ್ನ ನೆನಪಾಗುವುದು ಕಡಲಂಚಿಗೆ ನಿಂತಾಗ
ಹಕ್ಕಿಯೊಂದು ತಟ್ಟನೆರಗಿ
ನೀರ ಮೀನ ಗಕ್ಕನೆತ್ತಿ ಹಾರಿದಾಗ
ನಿನ್ನ ನೆನಪಾಗುವುದು.. ನಿನ್ನ ನೆನಪಾಗುವುದು… ನಿನ್ನ ನೆನಪಾಗುವುದು
೮-೧೦-೮೭