ಮನುಷ್ಯನು ಜಗತ್ತಿನಲ್ಲಿ ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೆ ಎಂಬ ಪ್ರಶ್ನೆಯನ್ನು ಎಸೆದರೆ ತನ್ನ ಹೆಂಡತಿಯನ್ನು, ತನ್ನ ಗಂಡನನ್ನು, ತನ್ನ ಮಗನನ್ನು, ತನ್ನ ಮಗಳನ್ನು, ತನ್ನ ತಂದೆ, ತಾಯಿಯನ್ನು…. ಹೀಗೆ ಏನೇನೋ ಉತ್ತರಗಳು ದೊರೆಯಬಹುದು. ಕೆಲವರು ಎಲ್ಲ ಸಂಬಂಧಿಗಳನ್ನು ಬಿಟ್ಟು ಸಾಕಿದ ನಾಯಿಯನ್ನೋ, ಬೆಕ್ಕನ್ನೋ ಅತಿಯಾಗಿ ಪ್ರೀತಿಸುತ್ತೇನೆ ಎಂದು ಹೇಳಬಹುದು. ಇವೆಲ್ಲ ಪ್ರೀತಿಯ ಹಾದಿಯಲ್ಲಿಯ ಕೆಲವು ಹೆಜ್ಜೆಗಳ ಕ್ರಮಣ ಅಷ್ಟೇ. ಹಾಗಾದರೆ ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ಯಾರನ್ನು? ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ತನ್ನನ್ನೇ. ತನ್ನನ್ನೇ ತಾನು ಪ್ರೀತಿಸುವುದಕ್ಕಿಂತ ಅತಿಯಾಗಿ ಬೇರೊಬ್ಬರನ್ನು ಪ್ರೀತಿಸುವುದು ಮನುಷ್ಯಮಾತ್ರದವನಿಗೆ ಸಾಧ್ಯವೇ ಇಲ್ಲ. ಇದನ್ನೇ ಆತ್ಮರತಿ ಎಂದು ಹೇಳುವುದು. ಮನೋವಿಜ್ಞಾನದಲ್ಲಿ ಇದನ್ನು ನಾರ್ಸಿಸಿಸ್ ಎಂದು ಗುರುತಿಸುತ್ತಾರೆ. ಸ್ವಮೋಹ ಅತಿಯಾದಾಗ ಅದೊಂದು ರೋಗವೆನ್ನಿಸಿಬಿಡುವ ಅಪಾಯವೂ ಇರುತ್ತದೆ. ತಮ್ಮನ್ನೇ ತಾವು ಪ್ರೀತಿಸಿಕೊಳ್ಳುವವರ ದುರಂತದ ಬಗೆಗೆ ಚಂದ್ರಶೇಖರ ಕಂಬಾರರು ‘ನಾರ್ಸಿಸಿಸ್’ ಹೆಸರಿನ ನಾಟಕವನ್ನೇ ಬರೆದಿದ್ದಾರೆ. ಈ ಆತ್ಮರತಿಯು ಕೆಲವೊಮ್ಮೆ ಸ್ವಾಭಿಮಾನ ಅನ್ನಿಸಿಕೊಳ್ಳುತ್ತದೆ. ಇನ್ನು ಕೆಲವೊಮ್ಮೆ ಅಹಂ ಎಂದು ಹೆಸರು ಪಡೆಯಬಹುದು. ಮತ್ತೆ ಕೆಲವೊಮ್ಮೆ ಇದೇ ಹಟ ಎನ್ನಿಸಿಕೊಳ್ಳಲೂಬಹುದು. ನಾನು ಹೇಳಿದ್ದೇ ಸರಿ ಎಂಬ ಮೂಗಿನ ನೇರಕ್ಕೆ ನಡೆಯುವ ಹುಂಬತನವಾಗಿಯೂ ಇದು ಗೋಚರಿಸಬಹುದು. ಎಲ್ಲರೂ ಸದಾಕಾಲ ತನ್ನ ಆಜ್ಞೆಗೇ ಎದುರು ನೋಡಬೇಕು ಎಂಬ ಭಾವನೆ ಬೆಳೆದಾಗ ಈ ಆತ್ಮರತರು ಇತರರಿಗೂ ತಮಗೂ ಒಂದು ಅಂತರವನ್ನು ಸೃಷ್ಟಿಸಿಕೊಳ್ಳುತ್ತ ಹೋಗುತ್ತಾರೆ. ಅವರ ಸುತ್ತಲೂ ಗೋಡೆ ಎದ್ದುಬಿಡುತ್ತದೆ. ಜೊತೆಯಲ್ಲಿರುವವರಿಗಿಂತ ತಾವು ಹೇಗೋ ಎಂತೋ ತಟ್ಟನೆ ಭಿನ್ನವಾಗಿ ಕಾಣಬೇಕು ಎಂದು ಅನ್ನಿಸಿಬಿಡುತ್ತದೆ. ಅದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಹತ್ತರ ಕೂಡ ಹನ್ನೊಂದು ಆಗಿ ಪರಿಗಣಿತರಾಗುವುದು ಅವರಿಗೆ ಕಿರಿಕಿರಿಯಾಗುತ್ತದೆ. ಉಳಿದವರಿಗಿಂತ ತಾನೊಂದು ಗಜ ಎತ್ತರದಲ್ಲಿರಬೇಕು ಎಂದು ಸದಾ ತಹತಹಿಸುತ್ತಿರುತ್ತಾರೆ. ತಾನೊಬ್ಬನೇ ಎಲ್ಲವನ್ನೂ ಸರಿಯಾಗಿ ನಿಭಾಯಿಸುತ್ತೇನೆ, ಉಳಿದವರೆಲ್ಲ ತಪ್ಪು ಎಂಬ ಭಾವನೆ ಬೆಳೆಯತೊಡಗುತ್ತದೆ. ಆಗ ಕಿರುಚಾಟ, ಅಸಹನೆ ಶುರುವಾಗುತ್ತದೆ. ಎದುರಿಗೆ ಹೆಂಡತಿ ಇರಲಿ, ಮಕ್ಕಳಿರಲಿ ಅವರೆಲ್ಲ ತಪ್ಪು. ಅವರನ್ನು ಹೇಗಾದರೂ ತಿದ್ದಬೇಕು ಎಂದು ಹೊರಡುತ್ತಾರೆ. ತಾವು ಅವರನ್ನು ತಿದ್ದುತ್ತಿದ್ದೇವೆ ಎಂಬುದು ಬೇರೆಯವರಿಗೆ ತಿಳಿಯಬೇಕು ಎಂದೂ ಅವರು ಬಯಸುತ್ತಾರೆ. ಇದರಿಂದ ಅವರು ಅಪಮಾನಿತರಾಗುತ್ತಾರೆ, ಅವರಿಗೂ ಒಂದು ಅಹಂ ಇರುತ್ತದೆ ಎಂಬುದೂ ಇವರ ಗಮನಕ್ಕೆ ಬರುವುದಿಲ್ಲ. ಉಳಿದವರೆಲ್ಲ ತಪ್ಪು, ತಾನೊಬ್ಬನೇ ಸರಿ ಎಂಬ ಭಾವ ಬಲಿತಾಗ ಇತರರ ಬಗೆಗೆ ಸಣ್ಣನೆಯ ಅನುಮಾನ ಶುರುವಾಗುತ್ತದೆ. ಉಳಿದವರೆಲ್ಲ ಸೇರಿ ತನ್ನ ವಿರುದ್ಧ ಅದೇನೋ ಒಳಸಂಚು ಮಾಡುತ್ತಿದ್ದಾರೆ, ತನ್ನನ್ನು ತುಳಿಯಲಿದ್ದಾರೆ ಎಂದನ್ನಿಸಲು ಆರಂಭವಾಗುತ್ತದೆ. ತನ್ನ ರಕ್ಷಣೆಗೆ ತಾನೊಂದು ವ್ಯೆಹವನ್ನು ರಚಿಸಿಕೊಳ್ಳಬೇಕು ಎಂಬ ವಿಚಿತ್ರ ಹಂಬಲ ಮೊಳೆಯುತ್ತದೆ. ತನ್ನ ವಿರುದ್ಧ ಒಳಸಂಚು ನಡೆಯುತ್ತಿದೆ ಅನ್ನಿಸಿದಾಗ ಮನಸ್ಸು ಕುಗ್ಗುವುದಕ್ಕೆ ಆರಂಭಿಸುತ್ತದೆ. ಜೊತೆಯಲ್ಲೇ ರೊಚ್ಚು. ಸೇಡು ತೀರಿಸಿಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಅದು ತಾರಕಕ್ಕೇರಿದಾಗ ಮನಸ್ಸಿನ ಶಾಂತಿ ಕದಡುತ್ತದೆ. ಅದು ಆಗ ರೋಗದ ಲಕ್ಷಣಕ್ಕೆ ತಿರುಗುತ್ತದೆ. ಔರಂಗಜೇಬನಂಥ ಸಾಮ್ರಾಟನನ್ನೂ ಈ ರೋಗ ಬಿಡಲಿಲ್ಲ. ಆತ್ಮರತರು ವಿವೇಚನೆಯನ್ನೂ ಕಳೆದುಕೊಂಡಿರುತ್ತಾರೆ. ಇತರರು ತಮ್ಮ ವಿರುದ್ಧ ವಿಷಯ ಮಂಡಿಸಿದರೂ ಅದರಲ್ಲೇನೋ ತಮ್ಮ ಪರವಾಗಿ ಇರುವ ವಿಚಾರ ಇದೆ ಎಂದು ತರ್ಕಿಸುತ್ತಾರೆ. ಏಕೆಂದರೆ ತಮ್ಮ ವಿರುದ್ಧವಾಗಿ ಸೊಲ್ಲೆತ್ತುವವರು ಯಾರೂ ಇಲ್ಲವೇ ಇಲ್ಲ ಎಂಬ ನಂಬಿಕೆಯಲ್ಲಿ ಅವರು ಇರುತ್ತಾರಲ್ಲವೆ? ಜಗತ್ತಿನಲ್ಲಿ ಸಕಲ ಕೆಲಸ ಕಾರ್ಯಗಳೂ ತಮ್ಮಿಚ್ಛೆಗೆ ಅನುಗುಣವಾಗಿಯೇ ನಡೆಯುತ್ತಿದೆ ಎಂಬ ಭ್ರಮೆಯಲ್ಲಿ ಅವರು ಬಳಲುತ್ತಾರೆ. ಕಣ್ಣಿದ್ದೂ ಜಗತ್ತನ್ನು ಕಾಣಲು ಬಯಸದ ಗಾಂಧಾರಿಯ ಪಾಡಾಗುತ್ತದೆ ಅವರದು. ಆತ್ಮರತರು ತಮ್ಮ ಮಕ್ಕಳನ್ನು ಪ್ರೀತಿಸುವಲ್ಲಿಯೂ ಅಹಂ ವ್ಯಕ್ತಪಡಿಸುತ್ತಾರೆ. ‘ನಾನು ಹೀಗಿರುವುದಕ್ಕಾಗಿಯೇ ಅವನು ಹಾಗಾದ’ ಎಂಬ ಧೋರಣೆಯಲ್ಲಿ ಅವರ ವ್ಯಕ್ತಿತ್ವದ ಆಪೋಶನ ಮಾಡಿರುತ್ತಾರೆ. ‘ಎಷ್ಟೆಂದರೂ ಅವನು ನನ್ನ ಮಗ ಅಲ್ಲವಾ?’ ಅನ್ನುವಾಗಲೂ ಅಷ್ಟೇ. ಈ ಲಕ್ಷಣಗಳನ್ನು ಓದಿದವರಿಗೆ, ತನ್ನೊಳಗೂ ಇವನೊಬ್ಬನಿದ್ದಾನಲ್ಲ; ತನ್ನದೇ ಲಕ್ಷಣಗಳನ್ನು ಇಲ್ಲಿ ಹೇಳಿದ್ದಾರಲ್ಲ ಎಂದು ಅನ್ನಿಸಿದರೆ ಸೋಜಿಗವೇನಿಲ್ಲ. ಏಕೆಂದರೆ ಪ್ರತಿ ಮನುಷ್ಯನೂ ಅಷ್ಟಿಷ್ಟು ಆತ್ಮರತನೇ ಇರುತ್ತಾನೆ. ಇದರಿಂದ ಪಾರಾಗುವ ಮಾರ್ಗ ಇಲ್ಲವೆ? ಮನಸ್ಸಿದ್ದರೆ ಇದ್ದೇ ಇದೆ. ಇನ್ನೊಬ್ಬರನ್ನು ಗೌರವಿಸುವುದಕ್ಕೆ ಕಲಿತರೆ, ತನ್ನೊಳಗೇ ಅದೇನೋ ಕೊರತೆ ಇದೆ, ಅದು ಏನು ಎಂಬ ಹುಡುಕಾಟದಲ್ಲಿ ಬಿದ್ದರೆ, ಅವನಿಂದ ತನಗೆ ಉಪಯುಕ್ತವಾಗುವಂಥದ್ದು ಏನೋ ಇದೆ ಎಂಬ ಭಾವನೆ ಬೆಳೆಸಿಕೊಂಡರೆ, ಎಲ್ಲ ದುಃಖಗಳಿಗೂ ಆಸೆಯೇ ಮೂಲ ಎಂಬುದನ್ನು ಅರಿತುಕೊಂಡರೆ ಆತ್ಮರತಿಯ ಪೊರೆ ಕಳಚುವುದು. ಬುದ್ಧಂ ಶರಣಂ ಗಚ್ಚಾಮಿ…..
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.