ನ್ನಡ ಸಾಹಿತ್ಯದ ಅಗ್ರಗಣ್ಯ ಲೇಖಕರಲ್ಲಿ ಒಬ್ಬರಾಗಿದ್ದ ದೇವುಡು ನರಸಿಂಹ ಶಾಸ್ತ್ರಿಗಳ ವ್ಯಕ್ತಿತ್ವ ಹಾಗೂ ಕೃತಿಗಳ ದರ್ಶನ ಮಾಡಿಸುವ “ದೇವುಡು ದರ್ಶನ’ ಕೃತಿಯನ್ನು ಹೊ.ರಾ. ಸತ್ಯನಾರಾಯಣ ಮತ್ತು ಗಂಗಾಧರ ದೇವುಡು ಅವರು ಸಂಪಾದಿಸಿದ್ದಾರೆ. ದೇವುಡು ಅವರ ಜೀವನ ಒಂದು ಭಾಗ ಮತ್ತು ಅವರ ಸಾಹಿತ್ಯ ಕೃತಿಗಳ ವಿಮರ್ಶೆ ಎರಡನೇ ಭಾಗದಲ್ಲಿದೆ.
ನಿಟ್ಟೂರು ಶ್ರೀನಿವಾಸರಾಯರು, ವಿ. ಸೀತಾರಾಮಯ್ಯ, ಅ.ನ. ಕೃಷ್ಣರಾಯರು, ಬಿ. ಶಿವಮೂರ್ತಿಶಾಸ್ತ್ರಿಗಳು, ಎನ್.ಕೆ. ಕುಲಕರ್ಣಿ ಮೊದಲಾದವರ ಲೇಖನಗಳು ಈ ಭಾಗದಲ್ಲಿವೆ. ದೇವುಡು ಅವರೇ ಬರೆದಿರುವ ಆತ್ಮಕಥನವೂ ಇದರಲ್ಲಿದೆ. 
ದೇವುಡು ನರಸಿಂಹ ಶಾಸ್ತ್ರಿಗಳ ಜನನ 29-12-1896ರಂದು ಮೈಸೂರಿನಲ್ಲಿ ಆಯಿತು. ಇವರು ಆರು ವರ್ಷದವರಿರುವಾಗಲೇ ಇವರ ತಂದೆ ಪ್ಲೇಗಿಗೆ ಬಲಿಯಾದರು. ಇವರಿಗೆ ಓದಿನ ಹಸಿವು. ಹನ್ನೆರಡು ವರ್ಷದ ವೇಳೆಗೇ ಅವರು ರಾಮಾಯಣ, ಭಾರತ, ಭಾಗವತ, ಬ್ರಹ್ಮಾಂಡಪುರಾಣಗಳನ್ನು ಓದಿಕೊಂಡಿದ್ದರು. ಹೈಸ್ಕೂಲಿಗೆ ಬರುವ ವೇಳೆಗೇ “ಶಬ್ದಮಣಿ ದರ್ಪಣ’ ಅವರಿಗೆ ಕಂಠಪಾಠವಾಗಿತ್ತು. ಬಂಕಿಮಚಂದ್ರರ ಕಾದಂಬರಿಗಳು ತುಂಬಾ ಇಷ್ಟವಾಗಿದ್ದವು. 1925ರಲ್ಲಿ ಅವರು ಬೆಂಗಳೂರಿಗೆ ಬರುತ್ತಾರೆ.
ಆಗಿನ ಸಾಹಿತಿಗಳ ಸ್ಥಿತಿ ಹೇಗಿತ್ತು ಎಂಬುದನ್ನು ದೇವುಡು ಅವರ ಮಾತುಗಳಲ್ಲೇ ಓದಿ. “ಸಾಹಿತಿಯಾಗಿ ನಿಲ್ಲುವುದಕ್ಕೆ ಆಸೆಯಿದ್ದರೂ ಇನ್ನೂ ಸ್ಥಿತಿ ಚೆನ್ನಾಗಿ ಇರಲಿಲ್ಲ. ಇನ್ನೂ ಆಗ ಹೇಗಿರಬೇಕು? ಜೊತೆಗೆ ಜನತೆಯು ಇನ್ನು ಸಾಹಿತ್ಯದ ಸೊಬಗನ್ನೇ ಅರಿಯುವಷ್ಟು ಮಟ್ಟಕ್ಕೆ ಬಂದಿಲ್ಲ. ಐದು ಹತ್ತು ರುಪಾಯಿ ಕೊಟ್ಟು ಸಂಗೀತ ಕೇಳುವ ಜನ ಬೆಂಗಳೂರಲ್ಲಿ ಎಷ್ಟೋ ಸಾವಿರ ಇದ್ದಾರೆ. ಆದರೆ ಒಂದು ರುಪಾಯಿ ಕೊಟ್ಟು ಪುಸ್ತಕ ಕೊಳ್ಳುವ ಸಾವಿರ ಜನ ಕೂಡ ಸಿಕ್ಕುವುದಿಲ್ಲ. ನಾಟಕ- ಸಿನಿಮಾಗಳಲ್ಲಿದ್ದ ಲಾಭವು ಪುಸ್ತಕ ಬರೆಯುವುದರಲ್ಲಿದೆಯೆ?..’ ಎಂದು ಅವರು ಪ್ರಶ್ನಿಸಿದ್ದಾರೆ.
ಬರೆದೇ ಬದುಕುವೆನೆನ್ನುವಂಥ ಸ್ಥಿತಿ ಆಗಿರಲಿಲ್ಲ. ಜನರ ಅಭಿರುಚಿಯೂ ಭಿನ್ನವಾಗಿತ್ತು. ಆದರೆ ದೇವುಡು ಅವರು ರಾಜಿ ಮನೋಭಾವದವರಾಗಿರಲಿಲ್ಲ. “ಕೆಲವರು ಜನಕ್ಕೆ ಹಿಡಿಯುವ ಪುಸ್ತಕ ಬರೆದರೆ ಯಾಕೆ ಆಗುವುದಿಲ್ಲ ಎನ್ನುತ್ತಾರೆ. ನಾನು ಓದುವವರ ಮಟ್ಟಕ್ಕೆ ಪುಸ್ತಕ ಇಳಿಸಿದರೆ ಹೋಟೆಲ್ ತಿಂಡಿಗೂ ಇದಕ್ಕೂ ವ್ಯತ್ಯಾಸವೇನು? ಓದುವವನು ಬರೆಯುವವನ ಮಟ್ಟಕ್ಕೆ ಏರಬೇಕು. ಬೇರು ನೆಲದಲ್ಲಿಯೇ ಬಿಟ್ಟರೂ ಹೂ ಮಾತ್ರ ಗಿಡದ ತಲೆಯಲ್ಲಿಯೇ ಬಿಡುವುದು. ಹಾಗೇ ಸಾಹಿತ್ಯ ಎನ್ನುತ್ತೇನೆ…’ ಎಂದು ಅವರು ಬರೆದಿದ್ದಾರೆ.
ದೇವುಡು ಅವರು ಸಾಹಿತಿಗಳೂ ಹೌದು, ಹಾಗೆಯೇ ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಭಾಗಿಯಾದವರು ಕೂಡ. ಬೆಂಗಳೂರು ಸಿಟಿ ಕಾರ್ಪೋರೇಟರ್ ಕೂಡ ಆಗಿದ್ದರು. ದೇವುಡು ಅವರ ಮನೆ ಮಾತು ತೆಲುಗು, ಅಧ್ಯಯನದ ಭಾಷೆ ಸಂಸ್ಕೃತ. ಬಳಕೆಯ ಭಾಷೆ ಕನ್ನಡವಾಗಿತ್ತು. ಆ ಬಳಕೆಯ ಭಾಷೆಯಲ್ಲಿಯೇ ಅವರು ಸಾಹಿತ್ಯವನ್ನು ರಚಿಸಿದರು. “ಮಹಾ ಬ್ರಾಹ್ಮಣ’, “ಮಹಾ ಕ್ಷತ್ರಿಯ’, “ಮಹಾದರ್ಶನ’ ಅವರ ಅಮರ ಕೃತಿಗಳು. ಕದಂಬರ ಮೂಲ ಪುರುಷ ಮಯೂರವರ್ಮನ ಕುರಿತ ಕಾದಂಬರಿ “ಮಯೂರ’. ಅವರ “ಮಹಾ ಕ್ಷತ್ರಿಯ’ ಕಾದಂಬರಿಗೆ ಅವರ ಮರಣದ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಬಂತು. 
ದೇವುಡು ಅವರು 14 ಕಾದಂಬರಿಗಳನ್ನು ಬರೆದಿರುವರು. ಇನ್ನೊಂದು ಕಾದಂಬರಿ ಅಪೂರ್ಣವಾಗಿದೆ. ಐದು ಸಣ್ಣ ಕತೆಗಳ ಸಂಕಲನ ಬಂದಿದೆ. 5 ನಾಟಕಗಳನ್ನು ಬರೆದಿರುವರು. ಮಕ್ಕಳ ಸಾಹಿತ್ಯದ 17 ಕೃತಿಗಳನ್ನು ಅವರು ಬರೆದಿರುವರು. ಕರ್ನಾಟಕ ಸಂಸ್ಕೃತಿ ಎಂಬ ಜಾನಪದ ಕೃತಿ, 6 ಸಂಗ್ರಹ ಕೃತಿಗಳು, 9 ಅನುವಾದಗಳು, ವಿಚಾರ ವಿಮರ್ಶೆ ಸಂಪಾದನೆಯ 6 ಕೃತಿಗಳು, ಭಾಮಿನಿ ಷಟ್ಪದಿಯಲ್ಲಿ ಕರ್ನಾಟಕ ವಿಶ್ವಾಮಿತ್ರ ಚರಿತ್ರೆಯನ್ನು ರಚಿಸಿರುವರು. ಅವರು ಪತ್ರಿಕೋದ್ಯಮಿಯೂ ಹೌದು. 
ಹೀಗೆ ಬಹುಮುಖ ಪ್ರತಿಭೆಯ ದೇವುಡು ಅವರ ಸಾಹಿತ್ಯದ ಬಗ್ಗೆ ಕೀರ್ತಿನಾಥ ಕುರ್ತಕೋಟಿ, ಜಿ.ಎಸ್. ಆಮೂರ, ಜಿ. ವೆಂಕಟಸುಬ್ಬಯ್ಯ, ಕೆ. ನರಸಿಂಹಮೂರ್ತಿ, ಅ.ರಾ. ಮಿತ್ರ, ಮಲ್ಲೇಪುರಂ ಜಿ. ವೆಂಕಟೇಶ, ಗಿರಡ್ಡಿ ಗೋವಿಂದರಾಜ ಮೊದಲಾದವರು ಬರೆದಿದ್ದಾರೆ. ಇಲ್ಲಿಯ ಎಲ್ಲ ಬರೆವಣಿಗೆಗಳ ಒಂದು ಸಾಮಾನ್ಯವಾದ ಲಕ್ಷಣವೆಂದರೆ ಓತಪ್ರೋತವಾದ ಶೈಲಿ. ಹೊಗಳಿಕೆಯ ಹೊಳೆಯೇ ಹರಿದಿದೆ. ದೇವುಡು ಅವರ ಬದುಕಿನ ಹಲವು ಅಪರೂಪದ ಕ್ಷಣಗಳನ್ನು ದಾಖಲಿಸಿದವರೂ ಇದ್ದಾರೆ. ವಯಸ್ಕ ಶಿಕ್ಷಣಕ್ಕೆ ಅವರ ಕೊಡುಗೆಯ ಬಗ್ಗೆ ಇಲ್ಲಿ ಲೇಖನವಿದೆ. “ಮಹಾ ಕ್ಷತ್ರಿಯ’ ಮತ್ತು ಉಳಿದ ಎರಡು ಪೌರಾಣಿಕ ಕಾದಂಬರಿಗಳು, ಕಾದಂಬರಿ ಪ್ರಕಾರದಲ್ಲಿ ಹೊಸ ಸಾಧ್ಯತೆಗಳನ್ನು ಗುರುತಿಸಿರುವ ಪ್ರಯೋಗಗಳಾಗಿವೆ ಎಂಬ ನಿರ್ಧಾರಾತ್ಮಕ ಮಾತುಗಳನ್ನು ಗಿರಡ್ಡಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಅವರ ಸಾಹಿತ್ಯ ಕೃತಿಗಳ ಅತ್ಯುತ್ತಮ ವಿಮರ್ಶೆ ಇಲ್ಲಿ ನಡೆದಿದೆ. 
ಇಂಥ ಸಂಪಾದನ ಕೃತಿಗಳಲ್ಲಿ ಮುಖ್ಯವಾಗಿ ಇರಬೇಕಾದದ್ದು ಆಯಾ ಲೇಖನಗಳನ್ನು ಬರೆದ ದಿನಾಂಕ ಮತ್ತು ಸಂದರ್ಭದ ವಿವರ ಹಾಗೂ ಯಾವುದರಲ್ಲಿ ಮೊದಲು ಪ್ರಕಟವಾಗಿತ್ತು ಎನ್ನುವುದರ ಉಲ್ಲೇಖ. ಇಲ್ಲಿಯ ಯಾವ ಲೇಖನದಲ್ಲಿಯೂ ಅದನ್ನು ನಮೂದಿಸದೇ ಇರುವುದು ಒಂದು ಕೊರತೆಯಾಗಿ ತೋರುತ್ತದೆ.
ದೇವುಡು ನರಸಿಂಹಶಾಸ್ತ್ರಿಗಳನ್ನು ಅರಿಯುವುದಕ್ಕೆ ಈ ಕೃತಿಯಲ್ಲಿ ಸಾಕಷ್ಟು ಮಾಹಿತಿ ಇದೆ. ಇಂಥದ್ದೊಂದು ಕೃತಿ ಆಗಲೇ ಬೇಕಿತ್ತು. ಇದು ದೇವುಡು ಅವರಿಗೆ ಸಂದ ನುಡಿಗೌರವ.