ನುಷ್ಯನ ವ್ಯಾವಹಾರಿಕ ಕ್ಷೇತ್ರ ದೊಡ್ಡದಾದಂತೆ ಆತನ ಸಂಪರ್ಕಗಳು ಹೆಚ್ಚುತ್ತವೆ. ಅದಕ್ಕಾಗಿ ಆತನ ಸಂವಹನದ ಕ್ಷಮತೆ ಹೆಚ್ಚಬೇಕಾಗುತ್ತದೆ. ಇದಕ್ಕಾಗಿ ಬೇರೆಬೇರೆ ಭಾಷೆಗಳನ್ನು ಕಲಿಯುವುದು, ತನ್ನ ಭಾಷೆಯಲ್ಲಿಲ್ಲದ ಆ ಭಾಷೆಯ ಪದಗಳನ್ನು ತನ್ನ ಭಾಷೆಗೆ ತರುವುದು ಇವೆಲ್ಲ ಮಾಡಬೇಕಾಗುತ್ತದೆ. ಬ್ರಿಟಿಷರು ನಮ್ಮ ದೇಶವನ್ನು ಎರಡು ಶತಮಾನಗಳ ಕಾಲ ಆಳಿದ್ದರಿಂದ ಇಂಗ್ಲಿಷ್ ಈ ದೇಶದಲ್ಲಿ ಸಂಪರ್ಕ ಭಾಷೆಯಾಗಿದೆ. ಹೀಗಾಗಿ ಆ ಭಾಷೆಯ ಹಲವು ಪದಗಳನ್ನು ನಮ್ಮ ಭಾಷೆಗೆ ಹೊಂದುವಂತೆ ಪರಿವರ್ತಿಸಿ ಬಳಸಲಾಗುತ್ತಿದೆ. ಅಂಥ ಪದಗಳಲ್ಲಿ ಒಂದು ರೌಡ್ ಟೇಬಲ್ ಕಾನ್ಫರೆನ್ಸ್.
ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಭಾರತದಲ್ಲಿ ನಾಗರಿಕರಿಗೆ ಉತ್ತಮ ಆಡಳಿತವನ್ನು ನೀಡುವ ಉದ್ದೇಶದಿಂದ ಯಾವ ಬದಲಾವಣೆಗಳನ್ನು ತರಬೇಕು ಎಂದು ಅಭಿಪ್ರಾಯ ಸಂಗ್ರಹಕ್ಕೆ ಬ್ರಿಟಿಷರು ಇಂಗ್ಲೆಂಡಿನಲ್ಲಿ ಭಾರತದ ಎಲ್ಲ ಪ್ರಮುಖ ನಾಯಕರ ಸಭೆ ಕರೆದಿದ್ದರು. ಇದಕ್ಕೆ ಅವರು ರೌಂಡ್ ಟೇಬಲ್ ಕಾನ್ಫರೆನ್ಸ್ ಎಂದು ಕರೆದಿದ್ದರು. ಇದನ್ನು ಕನ್ನಡಕ್ಕೆ ತರುವಾಗ ರೌಂಡ್ ಎಂದರೆ ದುಂಡಾಗಿರುವುದ ಟೇಬಲ್ ಅಂದರೆ ಮೇಜು ಹಾಗೂ ಕಾನ್ಫರೆನ್ಸ್ ಎಂದರೆ ಪರಿಷತ್ತು ಎಂದು ಅನುವಾದ ಮಾಡಿ ದುಂಡು ಮೇಜಿನ ಪರಿಷತ್ತು ಎಂಬ ಪದವನ್ನು ಸೃಷ್ಟಿಸಲಾಯಿತು. ಈ ಪದ ಬಳಕೆ ಮೊದಲು ಪತ್ರಿಕೆಗಳಿಂದ ಪ್ರಾರಂಭವಾಯಿತು.