ಪುಷ್ಯ ಕಳೆಯುವುದೇ ತಡ ಕರಾವಳಿಯಲ್ಲಿ ಒಂದಲ್ಲ ಒಂದು ತೇರು. ಒಂದೂರಿನಲ್ಲಿ ತೇರು ಎಂದರೆ ಏಜುಬಾಜಿನ ಹತ್ತೂರಲ್ಲಿ ಮನೆಮನೆಯಲ್ಲೂ ಹಬ್ಬವೇ ಹಬ್ಬ. ಆಗಲೆ ಕಾತ್ಗಿ ಬೆಳೆಯ ಕುಯ್ಲು ಮುಗಿದು ಎಲ್ಲರ ಮನೆಯಲ್ಲೂ ಕಾಳುಕಡಿ ಸಮೃದ್ಧವಾಗಿರುತ್ತದೆ. ಸುಗ್ಗಿ ಬೆಳೆಯ ಸಾಧ್ಯತೆ ಇದ್ದಲ್ಲಿ ಬಿತ್ತನೆ, ನಾಟಿ ಮುಗಿದಿರುತ್ತದೆ. ಕೆಲಸವೆಲ್ಲ ಮುಗಿಯಿತಪ್ಪ ಎಂದು ರೈತರಲ್ಲ ನಿರುಂಬಳವಾಗಿ ಉಸಿರಾಡಿಸಿಕೊಳ್ಳುತ್ತಿರುವಾಗಲೆ ಈ ತೇರುಗಳು ಬಂದುಬಿಡುತ್ತವೆ.
ಒಂದೇ, ಎರಡೇ….
ಇಡಗುಂಜಿಯ ತೇರು, ಬಳಕೂರು ತೇರು, ದಿಬ್ಬಣಗಲ್ಲ ತೇರು, ಕೊಳಗದ್ದೆ ತೇರು, ಕಾಸರಕೋಡು ತೇರು, ಹಳದಿಪುರ ತೇರು, ಅಗ್ರಹಾರ ತೇರು, ಧಾರೇಶ್ವರ ತೇರು, ಮುರುಡೇಶ್ವರ ತೇರು, ಹೊನ್ನಾವರ ತೇರು ಹೀಗೆ ಒಂದೇ ಎರಡೇ? ಒಂದಾದ ಮೇಲೆ ಒಂದು. ಒಂದಕ್ಕಿಂತ ಒಂದು ಮಿಗಿಲು ಎಂಬಂತೆ ಜನ ತೇರಿಗೆ ಹೋಗಿಯೇ ಹೋಗುತ್ತಾರೆ. ಉರಿ ಬಿಸಿಲೆನ್ನದೆ, ಮಧ್ಯ ರಾತ್ರಿ ಎನ್ನದೆ ಮಜ ಉಡಾಯಿಸಿಯೇ ಉಡಾಯಿಸುತ್ತಾರೆ.
ನಮ್ಮೂರಿಗೆಲ್ಲ ಇಡಗುಂಜಿ ತೇರು ಎಂದರೆ ದೊಡ್ಡದು. ರಥಸಪ್ತಮಿಯ ದಿನ ಇದು ಬರುತ್ತದೆ. ಇದೇ ದಿನ ಒಟ್ಟೂ ಏಳು ಊರುಗಳಲ್ಲಿ ತೇರು ನಡೆಯುವುದಂತೆ. ನಮ್ಮೂರಿನಿಂದ ತಾರಿ ದಾಟಿ ಹೋಗಬೇಕು. ಅವತ್ತು ತಾರಿ ದಾಟಿಸಲು ನಾಲ್ಕೈದು ದೋಣಿ ಇಟ್ಟಿರುತ್ತಾರೆ. ಇಡಗುಂಜಿಯ ಗಣಪತಿ ಜಾಗೃತ ದೇವರೆಂದು ಪ್ರತೀತಿ. ಒಂದು ಬೆಳಿಗ್ಗೆಯಿಂದ ಜನ ತೇರಿಗೆ ಬರಲು ಆರಂಭಿಸುತ್ತಾರೆ. ಶಿರಸಿ-ಸಿದ್ದಾಪುರ, ಸಾಗರದ ಕಡೆಯಿಂದಲೂ ಜನ ಈ ತೇರಿಗೆ ಬರುತ್ತಾರೆ. ದುಡಿಯಲು ಘಟ್ಟಕ್ಕೆ ಹೋದವರು, ಗೋವಾಕ್ಕೆ- ರತ್ನಾಗಿರಿಗೆ ಮೀನು ಲಾಂಚಿಗೆ ಹೋದವರು, ಹೊಟೇಲುಗಳಲ್ಲಿ ಕೆಲಸಕ್ಕೆಂದು ಹೋದವರು, ಮದುವೆಯಾಗಿ ದೂರದೂರಿನ ಗಂಡನ ಮನೆಗೆ ಹೋದ ಹೆಂಗಸರು ಯಾರೂ ಇಡಗುಂಜಿ ತೇರನ್ನು ತಪ್ಪಿಸುವುದಿಲ್ಲ.
ತೇರಿಗೆ ಹೋಗುವವರ ತಯ್ಯಾರಿ ಬೆಳಿಗ್ಗೆಯಿಂದಲೇ ಆರಂಭವಾಗುತ್ತದೆ. ಮನೆಯಲ್ಲಿ ಹೆಂಗಸರ ಗಡಿಬಿಡಿ ಜೋರು. ಹಟ ಮಾಡುವ ಮಕ್ಕಳ ಬೆನ್ನಮೇಲೆಬೆರಳು ಮೂಡುವ ಹಾಗೆ ಏಟು ಬೀಳುವುದು ಇದ್ದದ್ದೇ. ಮಕ್ಕಳಿಗಾದರೂ ಅಂದು ತೇರು ಎನ್ನುವುದು ಹೇಗೆ ಕನಸು ಬೀಳುತ್ತದೋ ಎನೋ? ಬೆಳಕು ಹರಿಯಿತು ಅನ್ನುವುದೇ ತಡ ಹೊಸ ಅಂಗಿ ಹಾಕಿಕೊಡು ಎಂದು ದುಂಬಾಲು ಬೀಳುತ್ತಾರೆ. ಎದ್ದಕೂಡಲೆ ಹೊರಟುಬಿಡುವುದೆ? ಮಕ್ಕಳುಮರಿ ಇಲ್ಲದ ಬಾವಾಗಳೆ ಅವರು? ತೇರೆಂದಮೇಲೆ ಮನೆಯಲ್ಲಿ ಸಿಹಿ ಅಡುಗೆ ಮಾಡಬೇಕು. ತೇರಿಗೆ ಎಂದೇ ಪರವೂರಿನಿಂದ ಯಾರಾದರೂ ಬಂದಿರುತ್ತಾರೆ. ಅವರದೆಲ್ಲ ವ್ಯವಸ್ಥೆ ಮಾಡಬೇಡವೆ? ಮಕ್ಕಳಿಗೆ ಅದೆಲ್ಲ ಹೇಗೆ ಅರ್ಥವಾಗಬೇಕು?
ಮನೆಯ ಮುಂದಿನ ಅಂಗಳ ಗುಡಿಸಿ ಸಾರಿಸಿ ರಂಗೋಲಿ ಬಿಡಿಸಬೇಕು. ಕೊಟ್ಟಿಗೆಯಲ್ಲಿ ಕಟ್ಟಿದ ದನ ಕರುಗಳಿಗೆ ಕಲಗಚ್ಚು ಕೊಟ್ಟು ಮೆಯಲು ಗುಡ್ಡಕ್ಕೆ ಅಟ್ಟಬೇಕು. ಹಾಲು ಹಿಂಡಬೇಕು, ಕೊಟ್ಟಿಗೆ ತೊಳೆಯಬೇಕು. ತೇರು, ಇಂದು ಸ್ವಲ್ಪ ಕೆಲಸ ಹೆಚ್ಚು ಎಂದು ಗಂಡಸರಾದರೂ ಮದ್ದತ್ತು ಮಾಡಲು ಬರುತ್ತಾರೆಯೆ? ದಿನದಕ್ಕಿಂತ ಅಂದು ಅವರು ಏಳುವುದು ತಡ ಅನ್ನಿಸಿ ಈ ಹೆಂಗಸರೇನಾದರೂ ಅಂದುಗಿಂದರೆ `ತೇರಿನ ದಿನವೂ ವಟಟವೇ’ ಎಂದು ಮುಖ ಹೊಗೆಸುತ್ತಾರೆ ಗಂಡಸರು.
ಹೆಣ್ಣು ಮಕ್ಕಳು ಮೊದಲ ದಿನವೇ ತಮ್ಮ ಹಿತ್ತಲಲ್ಲಿ, ಇತರರ ಹಿತ್ತಲಲ್ಲಿ ಇರುವ ಹೂವಿನ ಗಿಡಗಳನ್ನೆಲ್ಲ ಜಾಲಾಡಿರುತ್ತಾರೆ. ಅಬ್ಬಲಿಗೆ ಹೂವು, ಮೋತಿಮಲ್ಲಿಗೆ ಹೂವು, ಸೇವಂತಿಗೆ ಹೂವು, ಜಾಜಿ ಸಿಕ್ಕಿದರೆ ಅದು, ಕೊನೆಗೆ ಭಟ್ಕಳ ಮಲ್ಲಿಗೆಯಾದರೂ ನಡೆದೀತು. ಕೇಳಿಯೋ, ಕೇಳಿದರೂ ಕೊಡುವುದಿಲ್ಲ ಎನ್ನುವಂಥವರ ತೋಟದಿಂದ ಕದ್ದೋ ತಂದೇ ಬಿಡುತ್ತಾರೆ. ಬಾಳೆಯ ಹಂಬೆ ಒಣಗಿಸಿ ಮಾಡಿದ ನಾರಿನಿಂದ ದಂಡೆಗಳನ್ನು ರಾತ್ರಿಯೇ ಮಾಡಿಟ್ಟುಕೊಳ್ಳುತ್ತಾರೆ.
ಕೆಲವರು ಮದರಂಗಿಯ ಸೊಪ್ಪನ್ನು ಅರೆದು ರಾತ್ರಿ ಮಲಗುವಾಗ ಕೈಗೆ ಕಾಲುಗಳಿಗೆ ಹಚ್ಚಿಕೊಂಡು ಮಲಗುತ್ತಾರೆ. ನಾಳೆ ತೇರಿಗೆ ಹೋಗುವಾಗ ಯಾವ ಬಟ್ಟೆ ತೊಟ್ಟುಕೊಂಡು ಹೋಗುವುದು ಎಂದು ನಿಧರ್ಾರ ಮಾಡಿಕೊಳ್ಳುತ್ತಾರೆ. ಬಟ್ಟೆಯ ಗಳಿಗೆ ಮುರಿದಿದ್ದರೆ ಮತ್ತೊಮ್ಮೆ ಗಳಿಗೆ ಮಾಡಿ ಟವೆಲ್ಲಿನಲ್ಲಿ ಸುತ್ತಿ ರಾತ್ರಿ ಮಲಗುವಾಗ ದಿಂಬಿನ ಅಡಿಯಲ್ಲಿ ಇಟ್ಟುಕೊಂಡು ಮಲಗುತ್ತಾರೆ.
ತೇರಿಗೆ ವಾರ ಇರುವಾಗಲೆ ಬಳಕೂರಿನ ತನ್ನ ತಮ್ಮಟೆ ಬಾರಿಸುತ್ತ ಸುತ್ತಲಿನ ನಾಲ್ಕೂರಿಗೆ ತೇರಿನ ಕರೆ ಮುಟ್ಟಿಸುತ್ತಿದ್ದ. ಪ್ರತಿ ಮನೆಯ ಅಂಗಳದಲ್ಲಿ ನಿಂತು ಇಂಥ ವಾರ ತೇರು ಎಂದು ಸಾರುತ್ತಿದ್ದ.ಆಯ್ತನನ್ನು ಕಂಡರೆ ಮಕ್ಕಳಿಗೆಲ್ಲ ಅಂಜಿಕೆ. ಎಣ್ಣೆ ಕಾಣದೆ ಜಡೆಗಟ್ಟಿದ್ದ ತಲೆ ಕೂದಲು, ಕೆಂಪಗಿನ ಕಣ್ಣುಗಳು. ಆರಡಿಗೂ ಎತ್ತರದ ನಿಲುವು, ಬಡಕಲು ಶರೀರ. ಚಿಕ್ಕಮಕ್ಕಳು ತಮ್ಮ ಅಮ್ಮನ ಸೀರೆಯ ಸೆರಗನ್ನು ಹಿಡಿದುಕೊಂಡೇ ಅರಗರಗಿ ಅವನನ್ನು ನೋಡುವುದು. ಆತ ಅವರಿವರ ಅಂಗಳದಲ್ಲಿ ಕುಳಿತು ನೀರು ಕೇಳಿ ಕುಡಿದಿದ್ದ. ಅನ್ನ ನೀಡಿಸಿಕೊಂಡು ತೋಟದಲ್ಲೇ ಕುಳಿತು ಉಂಡು ಹೋಗಿದ್ದ. ಇಂದು ಆಯ್ತ ಇಲ್ಲ. ಅವನ ಮನೆಯವರಾರೂ ತೇರಿನ ಕರೆ ನೀಡುವ ಕಾಯಕ ಮುಂದುವರಿಸಲಿಲ್ಲ. ಈಗೀಗ ತೇರು ಬಂದಾಗ ಆಯ್ತನ ತಮ್ಮಟೆ ಸದ್ದು ಕಿವಿಯಲ್ಲಿ ಮೊಳಗುತ್ತದೆ. ಆಯ್ತ ಇಲ್ಲದ್ದರಿಂದ ತೇರು ನಾಳೆ ಅನ್ನುವ ವರೆಗೂ ಚಿಕ್ಕ ಹಡುಗರಿಗೆ ತೇರಿನ ಬಾತ್ಮಿ ಗೊತ್ತಿರುವುದೇ ಇಲ್ಲ.
ಮೊದಲಾದರೆ ಆಯ್ತನ ಕರೆ ಮುಗಿದ ಮಾರನೆ ದಿನವೇ ತಾಯಂದಿರು ಮಕ್ಕಳಿಗೆ ಬಟ್ಟೆ ಹೊಲಿಸುವ ಪ್ರಸ್ತಾಪ ಮಾಡುತ್ತಿದ್ದರು. ದೊಡ್ಡವರಿಗೆ ಇಲ್ಲದಿದ್ದರೆ ಮಕ್ಕಳಿಗಾದರೂ ಬೇಡವಾ ಎಂಬ ಪ್ರಶ್ನೆ ಕೆಲವು ಹೆಂಗಸರದ್ದು. ನನ್ನದಂತೂ ಆಯ್ತು, ಮಗು ಮದುವಿಗೆ ನೆರೆದಿದೆ. ತೇರಿನಲ್ಲಿ ನಾಲ್ಕು ಜನರ ಕಣ್ಣಿಗೆ ಬೀಳುವವಳು. ಅವಳಿಗೆ ಸೀರೆ, ಕಿರಗಣಿ, ಪೊಲಕ ಬೇಡ್ವಾ ಎಂಬುದು ಇನ್ನೊಂದು ಮನೆಯಲ್ಲಿ ಪ್ರಶ್ನೆ.
ಆಗಂತೂ ಹಳ್ಳಿಗಳಲ್ಲಿ ಒಬ್ಬರೋ ಇಬ್ಬರೋ ದರ್ಜಿಗಳು. ಎಲ್ಲರ ಮನೆಯ ಬಟ್ಟೆಯೂ ಅವರಲ್ಲಿಯೇ ರಾಶಿ ಬೀಳುವುದು. ಇಲ್ಲದಿದ್ದರೆ ಹೊನ್ನಾವರಕ್ಕೆ ಒಯ್ದು ಕೊಡಬೇಕು. ಆವರಾದರೂ ಹೇಳಿದ ದಿನಕ್ಕೆ ಕೊಡುವವರೆ? ನಾಲ್ಕು ಸಾರಿ ಅದಕ್ಕಾಗಿ ಅಲೆದರೆ ಬಟ್ಟೆ ಕಿಮ್ಮತ್ತು ಓಡಾಟಕ್ಕೆ ಖಚರ್ಾಗಿಬಿಡುತ್ತದೆ. ಹೀಗೆಂದುಕೊಂಡು ಊರಲ್ಲಿಯೇ ಬಟ್ಟೆ ಬಟ್ಟೆ ಹೊಲಿಯಲು ಹಾಕುತ್ತಿದ್ದರು.
ಎಲ್ಲರ ಬಟ್ಟೆಯೂ ಬಂದು ರಾಶಿ ಬಿದ್ದರೆ ಪಾಪ ಅವರಾದರೂ ಏನು ಮಾಡಬೇಕು? ವಾರಗಟ್ಟಲೆ ಕೋಳಿ ಸ್ವರಗೆಯ್ಯುವ ವರೆಗೆ ಕುಳಿತು ಹೊಲಿದೇ ಹೊಲಿಯುವರು. ಎರಡು ಜೊರೆ ಕೊಟ್ಟವರಿಗೆ ಒಂದು, ಅಂಗಿ ಚಡ್ಡಿ ಎರಡೂ ಕೊಟ್ಟವರಿಗೆ ಅಂಗಿಯನ್ನಾಗಲಿ ಚಡ್ಡಿಯನ್ನಾಗಲಿ ಹೊಲಿಯುವುದು ಮಾಡುತ್ತಿದ್ದರು. ಎಲ್ಲರಿಗೂ ಒಂದಾದರೂ ಕೊಟ್ಟೆವಲ್ಲ ಎಂಬ ಸಮಾಧಾನ ಅವರಿಗೆ. ಬೆಳಿಗ್ಗೆ ತೇರಿಗರ ಹೋಗಬೇಕು ಎಂದುಕೊಂಡವರು ಬಟ್ಟೆ ಹೊಲಿದು ಮುಗಿಯದ ಕಾರಣ ಮಧ್ಯಾಹ್ನ, ಮಧ್ಯಾಹ್ನ ಹೋಗಬೇಕು ಎಂದುಕೊಂಡವರು ರಾತ್ರಿ ಹೋಗುವುದು ಆಗುತ್ತಿತ್ತು.
ಬಟ್ಟೆ ಹೊಲಿಸಿಕೊಳ್ಳುವವರ ವರಾತದಿಂದ ದಜರ್ಿಯ ತಲೆಯೂ ಕೆಟ್ಟುಹೋಗುತ್ತಿತ್ತು. ಎಷ್ಟು ರೀತಿಯ ಸುಳ್ಳು ಹೇಳಿ ಸಮಾಧಾನಪಡಿಸುವುದು? ಒಂದು ಸಲವಂತೂ ದರ್ಜಿ ಲಿಯಾಂವ ಒಬ್ಬಳ ಪೊಲಕ ಹೊಲಿದು ಕೊಟ್ಟ. ಅದೂ ತೇರಿನ ದಿನ ಮಧ್ಯಾಹ್ನ. ಅವಳೂ ನೋಡಲಿಲ್ಲ. ಅಸೋಬುಸೋ ಓಡುತ್ತ ಮನೆಗೆ ಬಂದಳು. ಗಡಬಡಿಸಿ ಹಾಕಿಕೊಂಡಳು. ಗುಂಡಿಹಾಕಿಕೊಳ್ಳಲು ತಡಕಾಡುತ್ತಾಳೆ. ಆದರೆ ಗುಂಡಿಗಳೇ ಇರಲಿಲ್ಲ. ಮರಳಿ ಲಿಯಾಂವನ ಬಳಿ ಹೋಗಿ ಗುಂಡಿ ಹಚ್ಚಿಸಿಕೊಳ್ಳುವುದೆ? ಮತ್ತೆ ತೇರಿಗೆ ಹೋಗುವುದಕ್ಕೆ ತಡವಾಗುತ್ತದೆ. `ಹಾಳಾಗಿ ಹೋಗ್ಲಿ’ ಎಂದು ಬೈದು ಅವಳು ಪೊಲಕಕ್ಕೆ ಪಿನ್ನು ಚುಚ್ಚಿಕೊಂಡು ತೇರು ಮುಗಿಸಿ ಬಂದಿದ್ದಳು.
ಎಲ್ಲ ತೇರಿಗೂ ಮೊದಲಿನ ದಿನ ಹೂವಿನ ತೇರು ನಡೆಯುತ್ತದೆ. ದೊಡ್ಡ ತೇರಿಗಿಂತ ಇದು ಆಕಾರದಲ್ಲಿ ಬಹಳ ಸಣ್ಣದಿರುತ್ತದೆ. ಇದಕ್ಕೆ ಅಂಥ ವಿಶೇಷವೇನಿಲ್ಲ. ದೊಡ್ಡ ತೇರು ಮಾತ್ರ ಬೃಹತ್ ಆಗಿರುತ್ತದೆ. ತಿಂಗಳುಗಳ ವರೆಗೆ ಶ್ರಮಿಸಿ ತಯಾರಿಸಿರುತ್ತಾರೆ. ಇದಕ್ಕೆ ವಿಶೇಷ ಕೆಲಸಗಾರರ ತಂಡ ಇರುತ್ತದೆ. ಬಣ್ಣ ಬಣ್ಣದ ಪತಾಕೆಗಳಿಂದ ಅಲಂಕೃತಗೊಂಡ ತೇರನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಸಣ್ಣವನಿದ್ದಾಗ ನಮ್ಮ ಮನೆಯ ದೋಣಿ ನಡೆಸುತ್ತಿದ್ದ ಬೊಮ್ಮನ ಹೆಗಲ ಮೇಲೆ ಕುಳಿತು ಒಂದು ವರ್ಷ ತೇರಿಗೆ ಹೋದ ನೆನಪು. ಇನ್ನೊಂದು ವರ್ಷ ಗೋವಿಂದ ನಾಯ್ಕನ ಹೆಗಲ ಮೇಲೆ ಕುಳಿತು ಹೋಗಿದ್ದೆ. ಹೆಗಲ ಮೇಲೆ ಆಚೆ ಒಂದು ಕಾಲು ಈಚೆ ಒಂದು ಕಾಲು ಹಾಕಿಕೊಂಡು, ಕಾಲಿನ ಮಣ್ಣು ಅವರ ಅಂಗಿಗೆ ಎಲ್ಲಿ ಹತ್ತುವುದೋ ಎಂದು ಆತಂಕ ಪಡುತ್ತ ಸಾಧ್ಯವಾದಷ್ಟು ಹೊರಗೆ ಅಗಲಿಸಿಕೊಂಡು ಕುಳಿತುಕೊಳ್ಳಬೇಕು. ಬಳಕೂರು ತೇರು ಬೀದಿಯ ಪಕ್ಕದಲ್ಲೇ ಬೊಮ್ಮನ ಮನೆ ಇತ್ತು. ರಥಬೀದಿಯಲ್ಲಿ ಅವನು ಕೊಡಿಸಿದ ಎಂಟಾಣೆ ತಿಂಡಿಯ ನೆನಪು ಇನ್ನೂ ಅಳಿಸಿಲ್ಲ.
ತಾರಿ ದಾಟಿದ ಮೇಲೆ ಇಡಗುಂಜಿ ತೇರಿಗೆ ಸುಮಾರು ಎರಡು ಮೈಲು ನಡೆದು ಹೋಗಬೇಕು. ತೇರಿನ ದಿನ ಉದ್ದೋಉದ್ದ ಇರುವೆಯಂತೆ ಜನರ ಸಾಲು. ಹೋಗುವವರು, ಬರುವವರು, ಅವರ ವಸ್ತ್ರಗಳು, ಅವರ ಶೃಂಗಾರ, ಆಭರಣಗಳು, ಮಾತನಾಡುವ ರೀತಿ, ತೋರಿಸುವ ಡೌಲು, ಕೆಲವರ ದಿಮಾಕು ಕಣ್ಣು ಕುಕ್ಕಿಸುತ್ತದೆ. ಕಿವಿ ತುಂಬಿಸುತ್ತದೆ. ಪ್ರಾಯದ ಪುಂಡಿಯರಂತೂ ತೇರಿನ ಪತಾಕೆ ತಮ್ಮ ಮೈಗಳಲ್ಲಿಯೇ ಮೂಡಿದೆಯೋ ಎಂಬಂತೆ ವತರ್ಿಸುತ್ತಾರೆ.
ದಾರಿಯ ಮೇಲೆ ಎರಡೂ ಬದಿಗೆ ಭಿಕ್ಷುಕರು. ವಿವಿಧ ವೇಷಗಳಲ್ಲಿ ತಳವೂರಿರುತ್ತಾರೆ. ಒಬ್ಬನಂತೂ ಇವತ್ತಿಗೂ ನೆನಪಿಗೆ ಬರುತ್ತಾನೆ. ಅವನಿಗೆ ಎರಡೂ ಕಣ್ಣುಗಳಿರಲಿಲ್ಲ. ಒಂದೇ ಕೈ, ಒಂದೇ ಕಾಲು. ವಿಚಿತ್ರ ರೀತಿಯಲ್ಲಿ ಒದರುತ್ತಿದ್ದ. ಪ್ರತಿ ತೇರಿಗೂ ಅವನು ಹಾಜರಾಗುತ್ತಿದ್ದ. ಅವನ ಊರು ಎಲ್ಲೋ ಏನೋ? ತೇರಿನ ಬಾತ್ಮಿ ಅವನಿಗೆ ಹೇಗೆ ಮುಟ್ಟುತ್ತಿತ್ತೋ ಗೊತ್ತಿಲ್ಲ.
ಮನೆಯಲ್ಲಿ ನಾವು ಸಣ್ಣವರಿದ್ದಾಗ ಅಂದರೆ ಕಳೆದ ಶತಮಾನದ ಎಪ್ಪತ್ತರ ದಶಕದ ಮೊದಲಾರ್ಧವೆನ್ನಿ, ತೇರಿಗೆ ಮಕ್ಕಳಿಗೆಲ್ಲ ಎಂಟಾಣೆ ಅಥವಾ ಒಂದು ರುಪಾಯಿ, ಹೆಂಗಸರಿಗೆ ಬಳೆ ಇಡುವುದಕ್ಕೆ ಎಂದು ಎರಡು ರುಪಾಯಿ ಕೊಡುತ್ತಿದ್ದರು. ಆಗಿನ ಒಂದು ರುಪಾಯಿ ಎಂದರೆ ಎಷ್ಟೆಷ್ಟೋ ಆಟದ ಸಾಮಾನುಗಳು ಬರುತ್ತಿದ್ದವು. ಬುಗರಿ, ಪೀಪಿ, ಸಾರಂಗ, ಕೊಳಲು, ನೀರಿನ ಚೆಂಡು ಒಂದೇ ಎರಡೇ? ನಮ್ಮ ಕ್ಲಾಸಿನ ಹುಡುಗ ನಾರಾಯಣ ಮೇಸ್ತನ ತಂದೆ ಪುಗ್ಗಿ, ಪೀಪಿ ಮಾರುತ್ತಿದ್ದರು. ಒಂದು ಸಲ ತೇರಿಗೆ ನಾರಾಯಣನೂ ಬಂದಿದ್ದ. ಅಪ್ಪನಿಗೆ ಗೊತ್ತಾಗದ ಹಾಗೆ ಅವನು ನಮಗೆ ಒಂದು ಪುಗ್ಗಿ ಎತ್ತಿಕೊಟ್ಟಿದ್ದ. ಅವನ ದೋಸ್ತಿ ಇವತ್ತಿಗೂ ನೆನಪಾಗುತ್ತಿರುತ್ತದೆ.
ತೇರುಪೇಟೆಯಲ್ಲಿ ಗಚ್ಚಾನಗಚ್ಚಿ. ಅಡಕೆ ಮರದಷ್ಟು ಎತ್ತರದ ತೇರು. ಕೆಂಪು, ಬಿಳಿ, ಕೇಸರಿ, ಹಳದಿ, ಹಸಿರು ಬಣ್ಣಗಳ ಪತಾಕೆಗಳು. ಮೆಲೆ ಬೆಳ್ಳಿಯ ಕಲಶ. ತೇರಿನ ಮೇಲೆ ದೇವರು. ಹಣ್ಣುಕಾಯಿ ಒಪ್ಪಿಸುವವರದು ದೊಡ್ಡ ಸಾಲು. ಇದಂತೂ ಕರಗುವ ಸಾಲೇ ಅಲ್ಲ. ತೇರಿಗೆ ಹೋದವರೆಲ್ಲರೂ ಬಾಳೆಹಣ್ಣು ತೆಗೆದುಕೋಡು ರಥದ ಕಡೇ ಎಸೆದೇ ಎಸೆಯುವರು. ರಥಕ್ಕೆ ಬಾಳೆಹಣ್ಣು ಎಸೆಯುವುದು ಒಂದು ಪದ್ಧತಿ. ಎಸೆದ ಹಣ್ಣು ಕೆಲವು ರಥದ ಒಳಗೆ ಕುಳಿತವರಿಗೆ ಬಡಿಯುವುದು. ಅದನ್ನು ಕಂಡು ಕೆಲವರು ಹೀಹೀಹೀ ಎಂದು ನಗುವುದು. ಅದೇನು ಮಜವೋ ಇವರಿಗೆ. ರಥದ ಪಕ್ಕದಲ್ಲಿ ಇರುವ ಜನರ ಮೈಮೇಲೆ ರಥಕ್ಕೆ ಎಸೆದ ಹಣ್ಣು ಬಿದ್ದು ಅವರ ಹೊಸ ಬಟ್ಟೆಯನ್ನು ಕಲೆ ಮಾಡಿಬಿಡುವುದು.
ತೇರಿಗೆ ಹೋಗುವವರು ತಮ್ಮ ಮನೆಯಲ್ಲಿ ಬೆಳೆದ ಹೊಸ ಫಲವನ್ನು ಒಯ್ಯುವರು. ಅದನ್ನು ರಥದ ಅಕ್ಕಪಕ್ಕದಲ್ಲಿ ಇರಿಸಿ ದೇವರಿಗೆ ಒಪ್ಪಿಸುವರು. ತೆಂಗಿನ ಮರಕ್ಕೆ, ಅಡಕೆ ಮರಕ್ಕೆ, ಮಾವಿನ ಮರಕ್ಕೆ ಹೊಸದಾಗಿ ಫಲ ಬಂದರೆ ಮೊದಲ ಫಲ ಇಡಗುಂಜಿ ದೇವರಿಗೇ ಮುಟ್ಟಬೇಕು.
ತೇರಿನಲ್ಲಿ ಬಳೆಗಳು, ಆಟಿಗೆ, ಪ್ರಸಾಧನ ಸಾಮಗ್ರಿಗಳನ್ನು ಇಟ್ಟುಕೊಳ್ಳುವ ಪಡಸಾಲಿಗಳು, ಸಾಬಿಗಳು, ಮಿಠಾಯಿ ಅಂಗಡಿಯವರು, ಚಾದಂಗಡಿಯವರು ಜನರನ್ನು ಕರೆದೇ ಕರೆಯುತ್ತಾರೆ. ಎಲ್ಲರದೂ ಮುಖಪರಿಚಯ. ಏಕೆಮದರೆ ಪ್ರತಿವರ್ಷ ಬರುವವರೂ ಅವರೇ. ಹೋದವರ್ಷ ತಾವು ಎಲ್ಲಿ ಕೊಂಡಿದ್ದೆವೋ ಅಲ್ಲಿಯೇ ಕೊಳ್ಳಲು ಜನರೂ ಮನಸ್ಸು ಮಾಡುತ್ತಾರೆ. ಬಳೆ ಪೇಟೆಗೆ ಹೆಂಗಸರು ಹೋಗಬೇಕಲ್ಲವೆ? ಪ್ರಾಯದ ಹುಡುಗರೂ ಅಲ್ಲಿ ನುಸುಳುತ್ತಾರೆ. ಕೊಳ್ಳುವುದು ಏನಿಲ್ಲದಿದ್ದರೂ ಸುಮ್ಮನೆ ರೇಟು ಕೇಳಿ ಅಂಗಡಿಯವನಿಂದ ಹಂಗಿಸಿಕೊಳ್ಳುತ್ತಾರೆ. ಪಕ್ಕದಲ್ಲಿಯ ಯಾವುದಾದರೂ ಹುಡುಗಿ ನಕ್ಕುಬಿಟ್ಟಳೆಂದರೆ ಇವರಿಗೆ ಸ್ವರ್ಗ ಮೂರೇ ಗೇಣು.
ಮಧ್ಯಾಹ್ನ ತೇರಿಗೆ ಹೋದವರು ಬಿಸಿಲಿನ ತಾಪಕ್ಕೆ ಪಾನಕದ ಅಂಗಡಿಗೆ ಹೋಗದೆ ಬರುವುದು ಉಂಟೆ? ಅದಿಲ್ಲದಿದ್ದರೆ ಕೆಮ್ಮುಡಿ (ಕಲ್ಲಂಗಡಿ) ಹಣ್ನನ್ನಾದರೂ ತಿನ್ನಬೇಡವೆ? ಕೆಲವರು ಚಾದಂಗಡಿಗೆ ನುಗ್ಗುವರು. ತೇರುಪೇಟೆಯಲ್ಲಿ ಉದ್ರಿ ವ್ಯಾಪಾರ ಇಲ್ಲವೇ ಇಲ್ಲ. ಕಿಸೆಯ ಭಾರ ನೋಡಿಕೊಂಡೇ ಖಚರ್ು ಮಾಡಬೇಕು.
ಏರುಪೇಟೆಯಿಂದ ಸ್ವಲ್ಪ ದೂರ ಮಡಿಕೆ ಮಾಡುವವರು ಇರುತ್ತಾರೆ. ತೇರಿಗೆ ಹೋದ ಹೆಂಗಸರು ಮಡಿಕೆ ಖರೀದಿಸದೆ ಬರುವುದಿಲ್ಲ. ಅನ್ನಕ್ಕೆ, ಒಳಗಿನ ಹುಳಿಗೆ ಹೊರಗಿನ ಹುಳಿಗೆ ಎಂದು ಮಡಿಕೆ ಕೊರಿಕೆ ತಂದೇ ತರುತ್ತಾರೆ. ಕೆಂಪು ಮಣ್ಣಿನ ಸ್ಥಳೀಯ ಮಡಿಕೆಗಳು, ಕರಿ ಮಣ್ಣಿನ ಸಾಗರ ಮಡಿಕೆಗಳು ನಮನಮೂನೆಯ ಆಕಾರದಲ್ಲಿ ದೊರೆಯುತ್ತವೆ. ಈ ಮಡಿಕೆಗಳನ್ನು ತಂದ ಮೇಲೆ ಮನೆಯಲ್ಲಿ ಅವುಗಳಲ್ಲಿ ಹುಲ್ಲು, ಬೆರಣಿ ತುಂಬಿ ಒಳಗೆ ಹೊರಗೆ ಸುಡುತ್ತಾರೆ. ಇದರಿಂದ ಮಡಿಕೆಗಳು ಹೆಚ್ಚು ಕಾಲ ತಾಳಿಕೆ ಬರುವುದಂತೆ.
ತೇರುಪೇಟೆಯಲ್ಲಿ ಬಳೆ, ಆಟಿಗೆ ಸಾಮಾನುಗಳು, ಮಿಠಾಯಿ ಅಂಗಡಿಗಲಲ್ಲದೆ ಇತರ ಮನರಂಜನೆಗಳೂ ಇರುತ್ತವೆ. ತೊಟ್ಟಿಲು ಬಂದಿರುತ್ತದೆ. ತೊಟ್ಟಿಲಲ್ಲಿ ಕುಳಿತು ಮೇಲೆ ಹೋಗಿ ಕೆಳಗೆ ಬರುವಾಗ ಸವಾರರ ಕೇಕೆ ಕೇಳುವುದಕ್ಕೆ ಮಜ. ನೆಲದ ಮೇಲೆ ಟವೆಲ್ ಇಟ್ಟು ಮೇಲೆ ಏರಿ ಕೆಳಕ್ಕೆ ಬರುವಾಗ ಆ ಟವೆಲ್ ಎತ್ತಿ ಪಡುವ ಖುಷಿ, ನಗುವನ್ನು ಮುಕ್ಕಳಿಸುವ ರೀತಿ ನೋಡುವುದಕ್ಕೆ ಚೆನ್ನ.
ತೊಟ್ಟಿಲು ಅಲ್ಲದೆ, ಜಾದೂ, ಸೂತ್ರದ ಬೊಂಬೆಯವರು, `ಮುಂಬೈ ಸೂಳೆ ನೋಡು, ಇಂಗ್ಲಂಡ್ ರಾಣಿ ನೋಡು’ ಅನ್ನುತ್ತ ಚಿಂಗಿಚಿಕ್ಕಿ ಹಿತ್ತಾಳೆ ತಾಳ ಹಾಕುವ ಜಾದೂ ಡಬ್ಬಾದವನು, ಕೀಲು ಕುದುರೆಯವರು, ವಿಚಿತ್ರ ಮಗು, ನಾಟಕ ಕಂಪನಿ, ಯಕ್ಷಗಾನದವರು ಹೀಗೆ ಯಾರ್ಯಾರೋ ನಿಮ್ಮ ಕಿಸೆ ಖಾಲಿ ಮಾಡಲು ಬಂದೇ ಬರುತ್ತಾರೆ.
ಇವರಲ್ಲದೆ ಕೋಳಿ ಅಂಕ ಇರುತ್ತದೆ. ಎಲ್ಲೋ ಮರೆಯಲ್ಲಿ ಇದನ್ನು ನಡೆಸುತಾರೆ. ಪೊಲೀಸರ ಭಯ. ಕೋಳಿ ಅಂಕ ಇಲ್ಲದ ತೇರುಗಳೇ ಈ ಕಡೆ ಇಲ್ಲ. ಇಸ್ಪೀಟು ಮಂಡಲದವರೂ ಇರುತ್ತಾರೆ. ತೇರು ಪೇಟೆಯ ಅಕ್ಕಪಕ್ಕದ ಮನೆಗಳಲ್ಲಿ, ಗದ್ದೆ ಬಯಲಿನ ಮೂಲೆಯಲ್ಲಿ ಇಸ್ಪೀಟು ಆಟ ತೇರು ನಡೆದ ವಾರದ ವರೆಗೂ ಹಗಲೂ ರಾತ್ರಿ ನಡೆದಿರುತ್ತದೆ.
ತೇರು ಮುಗಿದ ಮೇಲೆ ವಾರದ ವರೆಗೆ ತೇರು ಪೇಟೆ ಇರುತ್ತದೆ. ತೇರಿನ ಗದ್ದಲದಲ್ಲಿ ಸಾಮಾನು ಖರೀದಿಸಲು ಆಗದವರು, ತೇರಿಗೆ ಹೋಗಲು ಆಗದವರು ತೇರು ಪೇಟೆಗೆ ಹೋಗಿ ಬರುತ್ತಾರೆ.
ಅರೇ ಇಡಗುಂಜಿ ತೇರು ಮುಗಿದೇ ಹೋಯಿತಲ್ಲ ಎನ್ನುತ್ತಿರುವಾಗಲೆ ಹೊಸಾಕುಳಿ ತೇರು ಬಂದಿರುತ್ತದೆ. ಅದರ ಬೆನ್ನಿಗೇ ಕೊಳಗದ್ದೆ ತೇರು. ಅದು ಮುಗಿಯಿತೋ ಇಲ್ಲ ಅನ್ನುವುದರೊಳಗೇ ದಿಬ್ಬಣಗಲ್ಲ ತೇರು. ಇದಾದ ಎರಡೇ ದಿಕ್ಕೆ ಬಳಕೂರ ತೇರು. ಹೀಗೇ ಮತ್ತೆ ಆ ತೇರು, ಈ ತೇರು.
ಸಂಸಾರದ ಜಟಾಪಟಿಯಲ್ಲಿ ನುಗ್ಗಾದವರ ನರಗಳೆಲ್ಲ ಹುರಿಗೊಳ್ಳುವುದಕ್ಕೆ, ಅಳುನುಂಗಿ ನಗುವುದಕ್ಕೆ, ಹಳ್ಳಿಗರ ಸೀದಾಸಾದಾ ಬದುಕಿಗೆ ರಂಗೋಲಿಯ ಚಿತ್ತಾರ ಮೂಡಿಸುವುದಕ್ಕೆ ವರುಷಕ್ಕೊಮ್ಮೆ ತೇರುಗಳು ಬರುತ್ತಲೇ ಇರುತ್ತವೆ. ಹರುಷದ ಹೊಳೆಯ ಹರಿಸುತ್ತವೆ. ಪುರುಸೊತ್ತು ಇದ್ದಾಗ ನೀವೂ ಒಮ್ಮೆ ಬನ್ನಿ ನಮ್ಮಕಡೆಯ ತೇರಿಗೆ.