*ಮರಳಿ ಬರುವ ಆಸೆ ತೊರೆದು ಕೊಡುವುದು

ವನೇನು ವಾಪಸ್‌ ಕೊಡುತ್ತಾನಾ? ತುಳಸಿ ನೀರು ಬಿಟ್ಟ ಹಾಗೆ ಆಯ್ತು ನೋಡು ಎಂದು ಅಲವತ್ತುಕೊಳ್ಳುವುದನ್ನು ಕೇಳಿದ್ದೇವೆ. ಕೊಟ್ಟಿದ್ದು ಮರಳಿ ಬರದೆ ಇದ್ದಾಗ, ಬರುವುದಿಲ್ಲ ಎನ್ನುವುದು ನಿಶ್ಚಿತವಾದಾಗ ಇಂಥ ಅನಿಸಿಕೆ ಮೂಡುವುದು.
ತುಳಸಿನೀರು ಬಿಡುವುದು ಎಂದರೇನು? ದಾನವನ್ನು ನೀಡುವಾಗ ತುಳಸಿದಳದಿಂದ ನೀರನ್ನು ಬಿಡಿಸಿ ಕೃಷ್ಣಾರ್ಪಣಮಸ್ತು ಎಂದು ಹೇಳುತ್ತಾರೆ. ನೀಡಿದ ದಾನ ಶ್ರೀಕೃಷ್ಣನಿಗೆ ಸಲ್ಲಲಿ ಎನ್ನುವುದು ಇದರ ತಾತ್ಪರ್ಯ.
ಇನ್ನು, ದೇವರಿಗೆ ನೈವೇದ್ಯವನ್ನು ಮಾಡುವಾಗಲೂ ತುಳಸಿದಳದಿಂದ ನೀರನ್ನು ಸುಳಿದು ದೇವರಿಗೆ ಅರ್ಪಿಸುತ್ತಾರೆ.
ಸತ್ತವರ ಬಾಯಲ್ಲಿ ತುಳಸಿ ನೀರನ್ನು ಬಿಡುವುದನ್ನು ನೋಡಿದ್ದೇವೆ.
ದಾನದಲ್ಲಿ, ಒಪ್ಪಿಸಿಕೊಳ್ಳುವಾಗ, ಸತ್ತವರನ್ನು ತಿರುಗಿಬಾರದ ಊರಿಗೆ ಕಳುಹಿಸುವಾಗ ತುಳಸಿ ನೀರು ಬಿಡುತ್ತಾರೆ.
ದಾನವೆಂದು ಕೊಟ್ಟಿದ್ದನ್ನು ಮರಳಿ ಯಾರೂ ಪಡೆಯುವುದಿಲ್ಲ. ಕೊಟ್ಟ ಕಾಸು, ಕೊಟ್ಟ ವಸ್ತು ಹಿಂದಕ್ಕೆ ಬರುವುದಿಲ್ಲವೆಂದು ಮನದಟ್ಟಾದಾಗ ನಿರಾಸೆಯಿಂದ ಹೇಳುವ ಮಾತು, ತುಳಸಿ ನೀರು ಬಿಟ್ಟ ಹಾಗೆ ಆಯ್ತು ಎನ್ನುವುದು.