*ಒಬ್ಬರನ್ನು ಮೀರಿಸುವ ಇನ್ನೊಬ್ಬ

ಬ್ಬ ಕೆಟ್ಟ ವ್ಯಕ್ತಿ ಇರುತ್ತಾನೆ. ಅವನ ಮಾತನ್ನೆಲ್ಲ ವೇದವಾಕ್ಯವೆಂದು ಪರಿಗಣಿಸಿ ಪಾಲಿಸುವ ಅನುಯಾಯಿ ಇನ್ನೊಬ್ಬ ಇರುತ್ತಾನೆ. ಇವರಿಬ್ಬರೂ ಸೇರಿಬಿಟ್ಟರೆ ಅತ್ಯಂತ ಕೆಟ್ಟ ಸನ್ನಿವೇಶವನ್ನೇ ಸೃಷ್ಟಿಸಿಬಿಡುತ್ತಾರೆ. ಪೋಕರಿಗಳ ಪಟಾಲಾಂ ಅಂತಾರಲ್ಲ ಹಾಗೆ ಇದು. ಒಬ್ಬರನ್ನು ಮೀರಿಸುವ ಕೆಟ್ಟ ಸಾಹಸಗಳನ್ನೆಲ್ಲ ಇವರು ಮಾಡುತ್ತಿರುತ್ತಾರೆ. ಬೆಂಕಿಗೆ ಗಾಳಿ ಸೇರಿದಂತೆ ಇದು. ಇದನ್ನು ಕಂಡು ಚೋರ ಗುರು ಚಾಂಡಾಳ ಶಿಷ್ಯ ಎಂಬ ಮಾತು ಪ್ರಚಾರಕ್ಕೆ ಬಂತು.
ಯಾರಾದರೊಬ್ಬರು ದಾರಿ ತಪ್ಪುತ್ತಿದ್ದರೆ ಅವರನ್ನು ಸರಿದಾರಿಗೆ ತರುವಂಥ ಸ್ನೇಹಿತರು ಇರಬೇಕು. ಕೆಟ್ಟ ಕೆಲಸ ಮಾಡುವವರಿಗೇ ಬಹುಪರಾಕ್‌ ಹೇಳುವವರು ಇದ್ದಾಗ ಒಳ್ಳೆಯ ಕಾರ್ಯಗಳು ಒಂದೂ ಆಗುವುದಿಲ್ಲ.
ಇಂಥ ಕೆಟ್ಟ ಗುರು ಶಿಷ್ಯ ಪರಂಪರೆ ನಮ್ಮಲ್ಲಿ ಬಹಳ ಇದೆ. ಅದರಲ್ಲಿ ಒಂದು ಶಕುನಿ ಮತ್ತು ಕೌರವ. ಕೆಟ್ಟವರ ಜೋಡಿಯನ್ನು ಹೇಳುವಾಗ ರಾಮಾಯಣದ ಉದಾಹರಣೆಯನ್ನೂ ನೀಡುತ್ತಾರೆ. ಮಾರೀಚ ಮತ್ತು ರಾವಣನ ಜೋಡಿ ಅದು. ಮಾವ ಮಾರೀಚ ಅಳಿಯ ಪೋದ್ರೀಚ ಎಂಬುದು ಆ ಮಾತು.
ನಮ್ಮ ಪುರಾತನರು ಹೇಳುವ 64 ವಿದ್ಯೆಗಳಲ್ಲಿ ಚೋರ ವಿದ್ಯೆಯೂ ಒಂದು. ಅದನ್ನೊಂದು ಕಲೆ ಎಂದು ಪರಿಗಣಿಸಲಾಗಿದೆ. ಚೋರ ವಿದ್ಯೆಯನ್ನೂ ಜನೋಪಕಾರಕ್ಕೆ ಬಳಸುವ ದೊಡ್ಡ ವ್ಯಕ್ತಿಗಳು ರೂಪುಗೊಂಡರೆ ಚಾಂಡಾಳ ಶಿಷ್ಯಪರಂಪರೆ ಅಸ್ತಿತ್ವಕ್ಕೆ ಬರಲಾರದು.