ಪೆರಾ ಒಂದರಲ್ಲಿ ಹಾಡುಗಾರನಾಗಿದ್ದ ವ್ಯಕ್ತಿಯೊಬ್ಬನು ಗೂಢಚಾರನಾಗಿ ನಡೆಸಿದ ಈ ವಿಲಕ್ಷಣವಾದ ಲೈಂಗಿಕತೆ, ಗೂಢಚರ್ಯೆಯ ಹಗರಣವು ಪ್ರಾರಂಭವಾಗಿದ್ದು ಚೀನಾದ ಬೀಜಿಂಗ್‌ನಲ್ಲಿ 1964ರಲ್ಲಿ. ಶಿ ಪೀ ಪು ಎಂಬ ಹೆಸರಿನ ಈ ವ್ಯಕ್ತಿಯು ಫ್ರೆಂಚ್‌ ದೂತಾವಾಸದ ಗುಮಾಸ್ತ ಬೆರ್ನಾರ್ಡ್‌ ಬೌರ್ಸಿಕೋಟ್‌ ಎಂಬಾತನನ್ನು ಭೇಟಿಮಾಡುತ್ತಾನೆ. ಈ ಬೌರ್ಸಿಕೋಟ್‌ ತನ್ನ ನಿಯಮಿತ ಕೆಲಸದ ಜೊತೆಯಲ್ಲಿ ರಾಜತಾಂತ್ರಿಕರ ಕುಟುಂಬದವರಿಗೆ ಇಂಗ್ಲಿಷ್‌ ಕಲಿಸುತ್ತಿದ್ದನು.
ಈ ಶಿ ಪೀ ಪು ಎಂಥ ಚಾಣಾಕ್ಷ ಎಂದರೆ ತಾನೊಬ್ಬ ಪುರುಷ ವೇಷದಲ್ಲಿರುವ ಮಹಿಳೆ ಎಂದು ನಂಬಿಸುತ್ತಾನೆ. ಇಬ್ಬರ ನಡುವೆ ಪ್ರೇಮ ಸಂಬಂಧ ಪ್ರಾರಂಭವಾಗಿ ಮುಂದಿನ ಇಪ್ಪತ್ತು ವರ್ಷಗಳ ವರೆಗೆ ಮುಂದುವರಿಯುತ್ತದೆ. ಶಿ ಪೀ ಪು ತನಗೆ ಬೌರ್ಸಿಕೋಟ್‌ನಿಂದ ಮಗುವಾಗಿದೆ ಎಂದೂ ಆತನನ್ನು ನಂಬಿಸುತ್ತಾನೆ. ನಿಜವೆಂದರೆ ಆ ಮಗುವನ್ನು ಆಸ್ಪತ್ರೆಯೊಂದರಿಂದ ಖರೀದಿಸಿದ್ದಾಗಿತ್ತು.
ಈ ಪ್ರಣಯ ಸಂಬಂಧದ ಪರಿಣಾಮವಾಗಿ ಬೌರ್ಸಿಕೋಟ್‌‌ ತಾನು 1980ರ ದಶಕದ ಆರಂಭದಲ್ಲಿ ಫ್ರಾನ್ಸ್‌ಗೆ ಮರಳುವ ಪೂರ್ವದಲ್ಲಿ ಚೀನಾದ ರಹಸ್ಯ ಸೇವೆಗೆ ಫ್ರೆಂಚ್‌ ದೂತಾವಾಸದ 150ರಷ್ಟು ದಾಖಲೆಗಳನ್ನು ನೀಡಿಯಾಗಿತ್ತು. ಬೌರ್ಸಿಕೋಟ್‌ನು ಶಿ ಪೀ ಪು ಮತ್ತು ತಮ್ಮ ಮಗನನ್ನು ಫ್ರಾನ್ಸ್‌ಗೆ ಕರೆದುಕೊಂಡು ಬಂದಿದ್ದನು. ಆ ಸಮಯದಲ್ಲಿ ಈ ಹಗರಣ ಬೆಳಕಿಗೆ ಬಂತು.
ಶಿ ತಂದೆ ಕಾಲೇಜೊಂದರಲ್ಲಿ ಪ್ರೊಫೆಸರ್‌ ಆಗಿದ್ದರು. ಮತ್ತು ಆತನ ತಾಯಿ ಶಿಕ್ಷಕಿ. ಇವನಿಗೆ ಇಬ್ಬರು ಅಕ್ಕಂದಿರು ಇದ್ದರು. ಚೀನಾದ ಯುನ್ನಾನ್‌ ಪ್ರಾಂತ್ಯದ ಕುನ್ಮಿಂಗ್‌ ಎಂಬಲ್ಲಿ ಬೆಳೆದ ಶಿ ಅಲ್ಲಿಯೇ ಫ್ರೆಂಚ್‌ ಭಾಷೆಯನ್ನು ಕಲಿತನು. ಯುನ್ನಾನ್‌ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದು ಸಾಹಿತ್ಯದಲ್ಲಿ ಪದವಿ ಗಳಿಸುತ್ತಾನೆ. ತನ್ನ 17ನೆ ವಯಸ್ಸಿನಲ್ಲಿ ಶಿ ನಟ ಮತ್ತು ಗಾಯಕನಾಗುತ್ತಾನೆ. ಇದರಲ್ಲಿ ಅವನಿಗೆ ಸ್ವಲ್ಪ ಹೆಸರು ಬರುತ್ತದೆ. ತನ್ನ 20ನೆ ವಯಸ್ಸಿನಲ್ಲಿ ಶಿ ಕಾರ್ಮಿಕರ ಕುರಿತು ನಾಟಕಗಳನ್ನು ರಚಿಸಿದ್ದನು.
ಉತ್ತರ ಮತ್ತು ದಕ್ಷಿಣ ವಿಯೆಟ್ನಾಮ್‌ ನಡುವಿನ ಯುದ್ಧವೆಂದರೆ ರಷ್ಯಾ, ಚೀನಾ ಬೆಂಬಲಿತ ಒಂದು ಪಡೆ ಮತ್ತು ಅಮೆರಿಕ ಬೆಂಬಲಿತ ಒಂದು ಪಡೆಯ ನಡುವಿನ ಯುದ್ಧವಾಗಿತ್ತು. ವಿಯೆಟ್ನಾಮ್‌ ಎರಡನೆ ಜಾಗತಿಕ ಯುದ್ಧದ ಪೂರ್ವದಲ್ಲಿ ಫ್ರಾನ್ಸ್‌ನ ವಸಾಹತು ಆಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಫ್ರಾನ್ಸ್‌ನ ಬೆಂಬಲವಿತ್ತು. ವಿಯೆಟ್ನಾಮ್‌ನಲ್ಲಿ ಅಮೆರಿಕದ ಸೈನಿಕ ನಡೆ ಏನು ಎಂಬುದನ್ನು ಫ್ರೆಂಚ್‌ ದೂತಾವಾಸದಲ್ಲಿ ಗೂಢಚರ್ಯೆ ನಡೆಸುವುದರಿಂದ ಅರಿಯಬಹುದು ಎಂಬುದು ಚೀನಾದ ಆಲೋಚನೆಯಾಗಿತ್ತು.
ಬೆರ್ನಾರ್ಡ್‌ ಬೌರ್ಸಿಕೋಟ್‌ ಫ್ರಾನ್ಸ್‌ನಲ್ಲಿ ಹುಟ್ಟಿದ್ದು. ಅವನಿಗೆ 20 ವರ್ಷವಾಗುವ ಹೊತ್ತಿಗೆ ಬೀಜಿಂಗ್‌ನಲ್ಲಿರುವ ಫ್ರೆಂಚ್‌ ದೂತಾವಾಸದಲ್ಲಿ ಅಕೌಂಟೆಂಟ್‌ ಕೆಲಸ ಸಿಗುತ್ತದೆ. ಕೊರಿಯ ಜೊತೆಗಿನ ಯುದ್ಧದ ಬಳಿಕ 1964ರಲ್ಲಿ ಚೀನಾದಲ್ಲಿ ಪ್ರಾರಂಭಗೊಂಡಿದ್ದ ಮೊದಲ ಪಾಶ್ಚಾತ್ಯ ದೂತಾವಾಸ ಇದಾಗಿತ್ತು. ಬೌರ್ಸಿಕೋಟ್‌ನ ಹಿಂದಿನ ದಾಖಲೆಗಳನ್ನು ನೋಡಿದರೆ ಅವನು ಶಾಲೆಗೆ ಹೋಗುವಾಗ ಹಾಸ್ಟೆಲ್‌ನಲ್ಲಿದ್ದನು. ಅಲ್ಲಿ ಹುಡುಗರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ಅವನು ತೊಡಗಿದ್ದನು. ಹೀಗಾಗಿ ಅವನಿಗೆ ಯಾರಾದರೂ ಮಹಿಳೆಯ ಜೊತೆ ಸ್ನೇಹ ಬೇಕಾಗಿತ್ತು. 1964ರ ಡಿಸೆಂಬರ್‌ನ ಕ್ರಿಸ್ಮಸ್‌ ಪಾರ್ಟಿಯೊಂದರಲ್ಲಿ 26 ವರ್ಷದ ಶಿ ಜೊತೆ ಇವನ ಮೊದಲ ಮುಖಾಮುಖಿಯಾಗುತ್ತದೆ. ಆಗ ಶಿ ಪುರುಷರ ವೇಷದಲ್ಲಿಯೇ ಇದ್ದನು. ಶಿ ಫ್ರೆಂಚ್‌ ದೂತಾವಾಸದ ಕುಟುಂಬದ ಸದಸ್ಯರಿಗೆ ಚೀನಿ ಭಾಷೆಯನ್ನು ಕಲಿಸುತ್ತಿದ್ದನು. ಆತ ಬೌರ್ಸಿಕೋಟ್‌ಗೆ, ತನ್ನ ತಂದೆಗೆ ಗಂಡುಮಕ್ಕಳು ಇಲ್ಲ. ಗಂಡು ಬೇಕೆಂಬ ಆತನ ಇಚ್ಛೆಯನ್ನು ಪೂರ್ತಿ ಮಾಡುವುದಕ್ಕಾಗಿ ತಾನು ಪುರುಷರ ವೇಷ ಧರಿಸಿ ತಿರುಗುವುದು. ಒಪೆರಾದಲ್ಲಿ ಪುರುಷನ ವೇಷ ಹಾಕಿಕೊಳ್ಳುವುದೂ ಇದಕ್ಕಾಗಿಯೇ. ತಾನು ನಿಜಕ್ಕೂ ಹೆಣ್ಣು ಎಂದು ಹೇಳಿದನು. ಇವರಿಬ್ಬರ ನಡುವೆ ಲೈಂಗಿಕ ಸಂಬಂಧ ಕುದುರಿಯೇ ಬಿಟ್ಟಿತು. ಇವೆಲ್ಲ ಕತ್ತಲೆಯಲ್ಲಿ ನಡೆಯುತ್ತಿದ್ದುದರಿಂದ ಶಿ ನಿಜರೂಪ ಆತನಿಗೆ ಗೊತ್ತಾಗಲೇ ಇಲ್ಲ. ಚೀನಾದಲ್ಲಿ ಹೆಣ್ಣನ್ನು ಬೆಳಕಿನಲ್ಲಿ ನೋಡಬಾರದು ಎಂಬುದು ಸಾಂಸ್ಕೃತಿಕ ಕಟ್ಟಳೆ ಎಂದು ಶಿ ಅವನಿಗೆ ತಿಳಿಸಿ ಹೇಳಿದನು. ಚೀನಾದ ಸರ್ಕಾರಕ್ಕೆ ಇವರ ಸಂಬಂಧದ ಬಗ್ಗೆ ತಿಳಿಯಿತು. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಅದು ನಿರ್ಧರಿಸಿತು. ಶಿ ಗೂಢಚರ್ಯೆ ನಡೆಸಬೇಕಾಯಿತು. ಬೌರ್ಸಿಕೋಟ್‌ನ ಮನವೊಲಿಸಿ ದೂತಾವಾಸದ ದಾಖಲೆಗಳನ್ನು ಶಿ ಪಡೆಯಬೇಕಾಯಿತು. ಬೌರ್ಸಿಕೋಟ್‌ ಇದಕ್ಕೆ ಒಪ್ಪಿಕೊಂಡನು. ಬೀಜಿಂಗ್‌ನಲ್ಲಿದ್ದಾಗ 1969ರಿಂದ 1972ರ ವರೆಗೆ ಮತ್ತು ಮಂಗೋಲಿಯಾದ ಉಲಾನ್‌ ಬತೂರ್‌ನಲ್ಲಿದ್ದಾಗ 1977ರಿಂದ 1979ರ ವರೆಗೆ ಆತ ಶಿಗೆ ದೂತಾವಾಸದ ರಹಸ್ಯ ದಾಖಲೆಗಳನ್ನು ನೀಡತೊಡಗಿದನು. ಇವು ಸುಮಾರು 500ಕ್ಕೂ ಅಧಿಕ. ಬೌರ್ಸಿಕೋಟ್‌ ಚೀನಾದಿಂದ ಹೊರಗಿದ್ದಾಗ ಇಬ್ಬರ ಭೇಟಿ ವಿರಳವಾಗುತ್ತಿತ್ತು. ಹೀಗಿದ್ದರೂ ಅವರಿಬ್ಬರು ತಮ್ಮ ಲೈಂಗಿಕ ಸಂಬಂಧ ಮುಂದುವರಿಸಿದ್ದರು. ಒಂದು ಬಾರಿ ಆತ ಶಿ ಭೇಟಿಗೆ ಬಂದಾಗ ನಾಲ್ಕು ವರ್ಷದ ಹುಡುಗ ಶಿ ಡು ಡು (ಇವನಿಗೆ ಮುಂದೆ ಬೌರ್ಸಿಕೋಟ್‌ ಬರ್ಟ್ರಾಂಡ್ ಎಂದು ತನ್ನ ಕುಟುಂಬದ ಹೆಸರನ್ನು ಇಡುತ್ತಾನೆ.) ಎಂಬವನನ್ನು ತೋರಿಸಿ ನಿನ್ನಿಂದ ನನಗೆ ಹುಟ್ಟಿದ್ದು ಎಂದು ನಂಬಿಸಿದ.
ಬೌರ್ಸಿಕೋಟ್‌ ಆಗಾಗ ಬೇರೆಬೇರೆ ಕಡೆ ಕೆಲಸ ಮಾಡಬೇಕಾಗುತ್ತಿತ್ತು. ಹೀಗಾಗಿ ಆತನಿಗೆ ಹಲವು ಸ್ತ್ರೀಯರ ಸಂಬಂಧ ಬೆಳೆದಿತ್ತು. ಅಲ್ಲದೆ ಥಿಯೆರಿ ಟೌಲೆಟ್‌ ಎಂಬ ಫ್ರೆಂಚ್‌ ವ್ಯಕ್ತಿಯ ಜೊತೆಗೂ ಇವನ ದೀರ್ಘ ಕಾಲದ ಸಂಬಂಧ ಇತ್ತು. ಆ ಕಾಲದಲ್ಲಿ ಚೀನಾದಲ್ಲಿ ಸಾಂಸ್ಕೃತಿಕ ಕ್ರಾಂತಿ ಆರಂಭವಾಗಿತ್ತು. ಚೀನಿಯರು ಇತರರೊಂದಿಗೆ ಬೆರೆಯವುದನ್ನು ಈ ಕ್ರಾಂತಿಕಾರಿಗಳು ಒಪ್ಪುತ್ತಿರಲಿಲ್ಲ. ಈ ಕ್ರಾಂತಿಯಿಂದಾಗಿ ಬೌರ್ಸಿಕೋಟ್‌ಗೆ ಶಿಯನ್ನು ನೋಡುವುದು ದುಸ್ತರವಾಯಿತು. ಅವಳನ್ನು ನೋಡದೆ ಇರುವುದು ಅವನಿಗೆ ಕಷ್ಟವಾಯಿತು. ಅದೇ ಸಮಯದಲ್ಲಿ ಚೀನಾದ ಸೀಕ್ರೆಟ್‌ ಸರ್ವಿಸ್‌ನ ಕಾಂಗ್‌ ಶೆಂಗ್‌ ಎಂಬಾತ ಬೌರ್ಸಿಕೋಟ್‌ನನ್ನು ಭೇಟಿ ಮಾಡುತ್ತಾನೆ. ಫ್ರೆಂಚ್‌ ದೂತಾವಾಸದ ರಹಸ್ಯ ದಾಖಲೆಗಳನ್ನು ನೀಡಿದರೆ ಅದಕ್ಕೆ ಪ್ರತಿಫಲವಾಗಿ ಶಿಯನ್ನು ನೋಡುವ ಅವಕಾಶ ಮಾಡಿಕೊಡುವುದಾಗಿ ಆಮಿಷವೊಡ್ಡುತ್ತಾನೆ. ಶಿ ಜೀವಕ್ಕೆ ಅಪಾಯ ಒದಗಬಹುದು ಎಂಬ ಕಾರಣಕ್ಕೆ ಬೌರ್ಸಿಕೋಟ್‌ ಇದಕ್ಕೆ ಒಪ್ಪಿಕೊಳ್ಳುತ್ತಾನೆ.
ಶಿ ಮತ್ತು ಆತನ ದತ್ತುಪುತ್ರನನ್ನು ಬೌರ್ಸಿಕೋಟ್‌ 1982ರಲ್ಲಿ ಪ್ಯಾರಿಸ್‌ಗೆ ಕರೆದುಕೊಂಡು ಬರುತ್ತಾನೆ. ಫ್ರೆಂಚ್‌ ಅಧಿಕಾರಿಗಳು ಬೌರ್ಸಿಕೋಟ್‌ನನ್ನು 1983ರ ಜೂನ್‌ 30ರಂದು ಬಂಧಿಸುತ್ತಾರೆ. ಅದಾದ ಸ್ವಲ್ಪ ದಿನಗಳಲ್ಲಿಯೇ ಶಿ ಬಂಧನವೂ ನಡೆಯುತ್ತದೆ. ಪೊಲೀಸರ ವಶದಲ್ಲಿ ಶಿ ವೈದ್ಯರಿಗೆ ತಾನು ಬೌರ್ಸಿಕೋಟ್‌ಗೆ ಹೆಣ್ಣೆಂದು ತೋರಿಸಿಕೊಳ್ಳಲು ಹೇಗೆ ತನ್ನ ವೃಷಣವನ್ನು ಅಡಗಿಸಿಕೊಳ್ಳುತ್ತಿದ್ದೆ ಎಂಬುದನ್ನು ವಿವರಿಸಿದನು. ತನ್ನ ಮಗನೆನ್ನಲಾದ ಶಿ ಡು ಡು ನನ್ನು ಕ್ಸಿನ್‌ಜಿಯಾಂಗ್‌ ಪ್ರಾಂತ್ಯದ ಒಬ್ಬ ವೈದ್ಯರಿಂದ ಪಡೆದುದಾಗಿ ವಿವರಿಸಿದನು. ಫ್ರಾನ್ಸ್‌ ಪೊಲೀಸರ ಮುಂದೆ ಶಿ ತನ್ನ ಬದುಕಿನ ಇನ್ನೊಂದು ರಹಸ್ಯವನ್ನೂ ಬಿಚ್ಚಿಡುತ್ತಾನೆ. ತನ್ನ ಜನ್ಮ ಚೀನಾದ ಐಘುರ್‌ ಅಲ್ಪಸಂಖ್ಯಾತ ಜನಾಂಗದಲ್ಲಿ ಆಯಿತೆಂದೂ, ಬಡತನದ ಕಾರಣ ತನ್ನ ತಾಯಿ ತನ್ನನ್ನು ಮಾರಿದಳೆಂದೂ, ಹೆತ್ತ ತಾಯಿ ನನ್ನನ್ನು ಪ್ರೀತಿಸುತ್ತಿದ್ದರೂ ಬಡತನ ತಮ್ಮನ್ನು ಅಗಲಿಸಿತು ಎಂದು ಹೇಳಿದನು. ತಮ್ಮ ಸಂಬಂಧದ ರಹಸ್ಯ ಬಯಲಾದಾಗ ಆಘಾತಗೊಂಡ ಬೌರ್ಸಿಕೋಟ್‌ ಜೈಲಿನಲ್ಲಿಯೇ ತನ್ನ ಗಂಟಲನ್ನು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದನು. ಆದರೆ ಉಳಿದುಕೊಂಡನು. ಸುದೀರ್ಘ ಅವಧಿಯ ಈ ಲೈಂಗಿಕ ಸಂಬಂಧ ಫ್ರಾನ್ಸ್‌ನಲ್ಲಿ ಲೇವಡಿಯ ವಿಷಯವಾಗಿಬಿಟ್ಟಿತು.
ಶಿ ಮತ್ತು ಬೌರ್ಸಿಕೋಟ್‌ ಇಬ್ಬರಿಗೂ 1986ರಲ್ಲಿ ಗೂಢಚರ್ಯದ ಅಪರಾಧದ ಮೇಲೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಚೀನಾ ಈ ಪ್ರಕರಣವನ್ನು ಯಾವುದೇ ಮಹತ್ವವಿಲ್ಲದ್ದು ಮತ್ತು ತುಂಬ ಕ್ಷುಲ್ಲಕವಾದದ್ದು ಎಂದು ವರ್ಣಿಸಿತು. ಎರಡೂ ದೇಶಗಳ ನಡುವಿನ ತ್ವೇಷದ ಸ್ಥಿತಿಯನ್ನು ಕಡಿಮೆ ಮಾಡುವ ಉದ್ದೇಶದಿಂದ 1987ರ ಏಪ್ರಿಲ್‌ನಲ್ಲಿ ಅಧ್ಯಕ್ಷ ಫ್ರಾಂಕೋಯಿಸ್‌‌ ಮಿಟ್ಟೆರಾಂಡ್‌ ಶಿಯನ್ನು ಕ್ಷಮಿಸಿ ಬಿಡುಗಡೆ ಮಾಡುತ್ತಾರೆ. ಅದೇ ವರ್ಷ ಆಗಸ್ಟ್‌ ತಿಂಗಳಲ್ಲಿಬೌರ್ಸಿಕೋಟ್‌ನನ್ನೂ ಬಿಡುಗಡೆ ಮಾಡುತ್ತಾರೆ.
ತನ್ನ ಬಿಡುಗಡೆಯ ಬಳಿಕ ಶಿ ಒಪೆರಾ ಹಾಡುಗಾರನಾಗಿ ಮತ್ತೆ ರಂಗದ ಮೇಲೆ ಬರುತ್ತಾನೆ. ಬೌರ್ಸಿಕೋಟ್‌ ಜೊತೆಗಿನ ತನ್ನ ಸಂಬಂಧಗಳ ಕುರಿತು ಮಾತನಾಡುವುದಕ್ಕೆ ಅವನಿಗೆ ಇಷ್ಟವಿರುವುದಿಲ್ಲ. ಬೌರ್ಸಿಕೋಟ್‌ ಗಂಡು ಮತ್ತು ಹೆಣ್ಣು ಇಬ್ಬರನ್ನೂ ಸಮಾನವಾಗಿ ಪ್ರೀತಿಸುತ್ತಿದ್ದನು. ಹೀಗಾಗಿ ನಾನು ಏನು ಮತ್ತು ಅವನು ಏನು ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ ಎಂದು ಹೇಳುತ್ತಿದ್ದನು. ನಂತರದ ವರ್ಷಗಳಲ್ಲಿ ಆತ ಬೌರ್ಸಿಕೋಟ್‌ ಜೊತೆ ಆಗೊಮ್ಮೆ ಈಗೊಮ್ಮೆ ಮಾತನಾಡುತ್ತಿದ್ದನು. ತಾನು ಸಾಯುವುದಕ್ಕೆ ಕೆಲವು ತಿಂಗಳ ಮೊದಲು ಬೌರ್ಸಿಕೋಟ್‌ ಜೊತೆ ಮಾತನಾಡಿದ ಶಿ ತಾನು ಇನ್ನೂ ಅವನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ. ತನ್ನ 70ನೆ ವಯಸ್ಸಿನಲ್ಲಿ 2009ರ ಜೂನ್‌ 30ರಂದು ಪ್ಯಾರಿಸ್‌ನಲ್ಲಿ ಶಿ ಕೊನೆಯುಸಿರೆಳೆಯುತ್ತಾನೆ. ಆತನ ದತ್ತುಪುತ್ರ ಶಿ ಡು ಡು ಪ್ಯಾರಿಸ್‌ನಲ್ಲಿಯೇ ಇದ್ದಾನೆ.
ಶಿ ಸಾವಿನ ಸುದ್ದಿ ಕೇಳಿದ ಬೌರ್ಸಿಕೋಟ್‌, ಆತ ನನ್ನ ವಿರುದ್ಧ ಅನೇಕ ಕೃತ್ಯಗಳನ್ನು ಎಸಗಿದನು. ಇದಕ್ಕಾಗಿ ಆತನಿಗೆ ಕರುಣೆ ತೋರಿಸುವುದೇ ಇಲ್ಲ. ಇದೀಗ ಮತ್ತೊಂದು ನಾಟಕವಾಡುವುದು, ನನಗೆ ದುಃಖವಾಗಿದೆ ಎದು ಹೇಳುವುದು ಮೂರ್ಖತನವೇ ಸರಿ. ಪ್ಲೇಟು ಈಗ ಸ್ವಚ್ಛವಾಗಿದೆ. ನಾನೀಗ ಮುಕ್ತನಾಗಿದ್ದೇನೆ ಎಂದು ಪ್ರತಿಕ್ರಿಯಿಸಿದನು.
ಈ ವಿಲಕ್ಷಣ ಪ್ರೇಮ ಪ್ರಕರಣವನ್ನು ಅಮೆರಿಕದ ಡೇವಿಡ್‌ ಹೆನ್ರಿ ಹ್ವಾಂಗ್‌ ಅವರು ಎಂ ಬಟರ್‌ಫ್ಲೈ ಎಂಬ ನಾಟಕವಾಗಿ ರಂಗದ ಮೇಲೆ ತಂದರು. ಈ ನಾಟಕ ನಂತರ 1993ರಲ್ಲಿ ಇದೇ ಹೆಸರಿನ ಸಿನಿಮಾವಾಗಿ ತೆರೆಯ ಮೇಲೆ ಬಂತು.