ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರ ಹೊಸ ಕತೆಗಳ ಸಂಕಲನ ‘ಚಿತ್ರಗುಪ್ತನ ಕತೆಗಳು’ ಈಗ ಬಂದಿದೆ. ಇದರಲ್ಲಿ ಒಟ್ಟೂ ೩೦ ಕತೆಗಳು ಇವೆ. ಸಂಕಲನದಿಂದ ಸಂಕಲನಕ್ಕೆ ಹೊಸತನ್ನು – ರೂಪ, ಗಾತ್ರ, ಸತ್ವ, ಸ್ವರೂಪದಲ್ಲಿ- ನೀಡಲು ಸದಾ ತುಡಿಯುವ ಸತ್ಯನಾರಾಯಣ ಅವರ ಈ ಸಂಕಲನ ಕೂಡ ನಿರಾಶೆ ಮೂಡಿಸುವುದಿಲ್ಲ. ಇದರಲ್ಲಿ ಅವರು ಕತೆಯ ಗಾತ್ರವನ್ನು ಕಿರಿದುಗೊಳಿಸಿದ್ದಾರೆ. ಕವಿತೆಯ ಬಿಗಿಯಲ್ಲಿ ಕತೆಯನ್ನು ಕಟ್ಟುವ ಅವರ ಕುಶಲತೆಗೆ ಈ ಸಂಕಲನ ಒಂದು ಪುರಾವೆ. ಸಾಮಾನ್ಯವಾಗಿ ಸತ್ಯನಾರಾಯಣ ಅವರು ದೀರ್ಘ ಕತೆಗಳನ್ನು ಬರೆಯುವುದಕ್ಕೆ ಪ್ರಸಿದ್ಧರು. ಆದರೆ ಇಲ್ಲಿ ಪ್ರಯೋಗವೆನ್ನುವಂತೆ ಅವರು ಕೇವಲ ಅರ್ಧಪುಟ, ಒಂದು ಪುಟ, ಎರಡು ಪುಟಗಳ ಕತೆಯನ್ನು ಬರೆದಿದ್ದಾರೆ. ಕೆಲವು ಕತೆಗಳಂತೂ ವಾಕ್ಯಗಳನ್ನು ಕತ್ತರಿಸಿ ಒಂದರ ಕೆಳಗೆ ಒಂದನ್ನು ಒಟ್ಟಿದರೆ ಒಂದು ಕವಿತೆಯೆನ್ನಿಸಿಬಿಡುವುದು. ಒಂದು ಕತೆಯ ಶಕ್ತಿ ಇರುವುದು ಅದು ಉಂಟುಮಾಡುವ ಪರಿಣಾಮದ ತೀವ್ರತೆಯಲ್ಲಿ. ತಾನು ಅಂದುಕೊಂಂಡಿದ್ದನ್ನು ಓದುಗನಿಗೆ ವರ್ಗಾಯಿಸುವುದರಲ್ಲಿಯ ಯಶಸ್ಸಿನಲ್ಲಿ. ಈ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಅದು ಪಡೆದುಕೊಳ್ಳುವ ಅನಂತ ಹೊಳಹುಗಳಲ್ಲಿ. ಸೃಜನಶೀಲ ವ್ಯಕ್ತಿಯೊಬ್ಬ ನಿರಂತರವಾಗಿ ಇಂಥ ಹೊಳಹುಗಳ ಹುಡುಕಾಟದಲ್ಲಿ ತೊಡಗಿರುತ್ತಾನೆ. ಅದರಲ್ಲಿ ಆತ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾನೆ ಎನ್ನುವುದರ ಮೇಲೆಯೇ ಆತನ ಸೃಷ್ಟಿಯ ಹಣೆಬರೆಹ ನಿರ್ಧಾರವಾಗುತ್ತದೆ. ಈ ಕೃತಿಗೆ ಒಂದು ಪ್ರವೇಶವನ್ನು ಬರೆದಿರುವ ಕೆ.ಪಿ.ಸುರೇಶ ಅವರು, ‘ಕನ್ನಡದ ಇದು ಹೊಸ ಹಾದಿಯ ಸುಳುಹು’ ಎಂದು ಹೇಳಿದ್ದಾರೆ. ಸತ್ಯನಾರಾಯಣ ಅವರ ಕಿರು ಕತೆಗಳು ಲೇಖಕನೊಬ್ಬ ತನ್ನ ಹೆಗಲೇರಿರುವ ಕಥನ ಶೈಲಿ ಮತ್ತು ಕಾಣುವ ಬಗೆಯನ್ನು ಕೊಡವಿ ಹೊಸ ರೀತಿಯಲ್ಲಿ ನೋಡುವ/ ಕಾಣುವ ಬಗೆಯನ್ನು ಅನ್ವೇಷಿಸುವ ಧೀರ ಪ್ರಯತ್ನ ಎಂದು ಅವರು ಗುರುತಿಸಿದ್ದಾರೆ. ಇದಕ್ಕೆ ಮತ್ತೊಂದು ಪ್ರವೇಶವನ್ನು ಒದಗಿಸಿರುವ ಕೆ.ರಘುನಾಥ ಅವರು, ನಮ್ಮ ಪುರಾಣ, ಇತಿಹಾಸ, ಸಂಪ್ರದಾಯ ಮತ್ತು ಐತಿಹ್ಯಗಳ ಮೂಲಕ ನಮಗಿರುವ ಸಂಬಂಧಾಂತರಗಳನ್ನು ವರ್ತಮಾನದ ತುರ್ತಿನೊಂದಿಗೆ ಸ್ಪರ್ಶಿಸಿದ್ದಾರೆ ಎಂದು ಹೇಳಿದ್ದಾರೆ. ಇವರಿಬ್ಬರು ಇಲ್ಲಿ ಸಾಕ್ಷಾತ್ಕರಿಸದ ಸೃಜನ ಸತ್ಯದ ಆಚೆ ನನಗೆ ಲಭ್ಯವಾದ ಕೆಲವು ವಿಚಾರಗಳನ್ನು ಇಲ್ಲಿ ನಮೂದಿಸುವೆನು. ಸಾಹಿತ್ಯದ ಸೃಜನ ಕ್ರಿಯೆಯಲ್ಲಿ ಅದರ ವರ್ಣತಂತುಗಳು (ಕ್ರೋಮುಸೋಮುಗಳು) ಕೃತಿಕಾರನ ಭಾವವಲಯದಲ್ಲಿಯೇ ನಿರ್ಧಾರಗೊಳ್ಳುವಂಥದ್ದು. ಕಣ್ಣಿಗೆ ಕಾಣದಂಥ ಬೀಜವೊಂದು ಆಲದ ಮರವೂ ಆಗಬಹುದು, ತುಳಸಿಯ ಗಿಡವೂ ಆಗಬಹುದು. ಅವುಗಳ ಉಪಯುಕ್ತತೆಯೇ ಅವುಗಳ ಸಾರ್ಥಕತೆ. ರಸ್ತೆಬದಿಯಲ್ಲಿ ಹುಟ್ಟಿಕೊಂಡಿರುವ ಪುಟ್ಟ ಸಸ್ಯವೊಂದು ಜೀವ ಉಳಿಸುವ ಜೀವ ವೃಕ್ಷದ ಸಾಮರ್ಥ್ಯವನ್ನು ಪಡೆದಿರಬಹುದು. ಆದರೆ ಅದನ್ನು ಕಂಡು ಹೇಳಬೇಕಲ್ಲವೆ? ಈ ಕಾರಣಕ್ಕಾಗಿ ಸತ್ಯನಾರಾಯಣ ಅವರ ಕತೆಯ ಗಾತ್ರವನ್ನೇ ವಿಶೇಷ ಎಂದು ಪರಿಗಣಿಸಬೇಕಾದ ಅಗತ್ಯವೇನಿಲ್ಲ. ಈ ಹಿನ್ನೆಲೆಯಲ್ಲಿ ಸೃಜನ ಕ್ರಿಯೆಗೆ ಪ್ರತಿಕ್ರಿಯೆಯ ಹಾಗೆ ಮೂಡಿ ಬಂದ ‘ಲೇಖಕನ ರಾಜೀನಾಮೆ’ ಕತೆ ವಿಶೇಷವೆಂದು ತೋರುತ್ತದೆ. ಇದರಲ್ಲಿ ಲೇಖಕನೊಬ್ಬನಿಗೆ ಒಂದು ದಿನ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ತನ್ನ ಎಲ್ಲ ಕೃತಿಗಳನ್ನು ಹಿಂದಕ್ಕೆ ಪಡೆಯುವುದಕ್ಕೆ ನಿರ್ಧರಿಸುತ್ತಾನೆ. ಸಂಬಂಧಿಸಿದವರಿಗೆಲ್ಲ ಪತ್ರ ಬರೆದು ಕೃತಿಯನ್ನು ನನಗೆ ವಾಪಸ್ ಕಳುಹಿಸಿ. ಇವತ್ತಿನ ಬೆಲೆಯಲ್ಲೇ ಕೊಳ್ಳುತ್ತೇನೆ. ಇಷ್ಟೊಂದು ವರ್ಷಾನುಗಟ್ಟಲೆ ಬರೆದೂ ಬರೆದು ಓದುಗರನ್ನ ಹಿಂಸಿಸಿದ್ದಕ್ಕಾಗಿ ಕ್ಷಮೆಯನ್ನೂ ಕೋರುತ್ತಾನೆ. ನೀಡುವ ಶಿಕ್ಷೆಯನ್ನು ಅನುಭವಿಸಲು ಸಿದ್ಧ ಎಂದು ಹೇಳುತ್ತಾನೆ. ಬಹುಶಃ ಸೃಜನಶೀಲತೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡವರ, ಅದನ್ನೊಂದು ಆಭರಣವನ್ನಾಗಿ ಮಾಡಿಕೊಂಡವರ ಮಿಥ್‌ಅನ್ನು ಭಂಜಿಸುವ ಅಂದಾಜು ಇದು. ಕೃತಿಕಾರನಿಗಿಂತ ಕೃತಿ ದೀರ್ಘಾಯು ಎಂಬ ಭ್ರಮೆಯನ್ನು ಅಳಿಸಿಹಾಕುವ ಒಂದು ನಿಕಷ ಇದು. ಯಾವ ಲೇಖಕನಲ್ಲಿ ಇಂಥ ಒಂದು ಡೋಂಟ್‌ಕೇರ್ ಮನೋಭಾವ ಇರುವುದೋ ಆತನಿಂದ ಮಾತ್ರ ಸೃಜನಕ್ರಿಯೆಯ ಹೊಸ ಸಾಧ್ಯತೆಗಳ ಹುಡುಕಾಟ ಸಾಧ್ಯವಾಗುತ್ತದೆ. ಈ ಸಂಕಲನದಲ್ಲಿ ಅಂಥ ಹುಡುಕಾಟದ ಪ್ರಾಮಾಣಿಕ ಪ್ರಯತ್ನವನ್ನು ಕಾಣಬಹುದು. ಈ ಸಂಕಲನಕ್ಕೇಕೆ ‘ಚಿತ್ರಗುಪ್ತನ ಕತೆಗಳು’ ಎಂದು ಹೆಸರಿಟ್ಟಿದ್ದಾರೆ? ಹಿಂದೂ ಪುರಾಣಗಳ ಪ್ರಕಾರ ಚಿತ್ರಗುಪ್ತನು ಸಾವಿನ ದೇವರು ಯಮಧರ್ಮನ ಕಾರ್ಯದರ್ಶಿ ಕಂ ಗುಮಾಸ್ತ. ಸಕಲ ಜೀವರಾಶಿಗಳ ಪಾಪ ಪುಣ್ಯಗಳ ಲೆಕ್ಕಾಚಾರ ಆತನ ಬಳಿ ಇರುತ್ತದೆ. ಆತನು ನೀಡುವ ಅಂಕಿಅಂಶಗಳನ್ನು ಆಧರಿಸಿಯೇ ಯಾರು ಸ್ವರ್ಗಕ್ಕೆ ಯಾರು ನರಕ್ಕೆ ಎಂದು ನಿರ್ಧಾರವಾಗುವುದು. ಪಾಪ ಪುಣ್ಯಗಳ ಒಟ್ಟೂ ಮೊತ್ತವೇ ಒಂದು ಜೀವನ. ಒಂದು ವ್ಯಕ್ತಿತ್ವ. ಒಂದು ನಾಣ್ಯದ ಆ ಮುಖ ಈ ಮುಖ. ಕಪ್ಪೂ ಇದೆ ಬೆಳಕೂ ಇದೆ. ಇಂಥ ಬದುಕೇ ಕತೆಗಾರನ ವಸ್ತು. ಯಾವುದೇ ಕತೆಗಾರನಿಗೂ ಅದು ವಸ್ತು. ಹೀಗಾಗಿ ಸತ್ಯನಾರಾಯಣರ ಕತೆಗಳು ಚಿತ್ರಗುಪ್ತನ ಕತೆಗಳಾಗಿವೆ. ಇದೇ ಹೊಳಹಿನೊಂದಿಗೆ ನೋಡಿದಾಗ ಈ ಸಂಕಲನದಲ್ಲಿಯ ‘ಬಣ್ಣ ಮತ್ತು ಬಣ್ಣ’ ವಿಶೇಷ ಅರ್ಥವನ್ನು ನೀಡುತ್ತದೆ. ಬೆಳಕೆಂದರೆ ಕೇವಲ ಏಳು ಬಣ್ಣಗಳ ಮೊತ್ತವಲ್ಲ, ಅದರಾಚೆಗೂ ಅನಂತ ಸಾಧ್ಯತೆಗಳಿವೆ ಎಂದು ಬಣ್ಣ ಬಳಿಯುವವನಿಗೆ ಸಹಾಯಕಳಾಗಿರುವ ಪುಟ್ಟ ಬಾಲಕಿ ನಿರೂಪಿಸಿದಾಗ ಬದುಕಿನ ಅನಂತ ಸಾಧ್ಯತೆಗಳ ಕಡೆಗೆ ನೋಡುವಂತೆ ಕತೆಗಾರ ಬಲವಂತ ಪಡಿಸುತ್ತಾರೆ. ಜಗತ್ತಿನಲ್ಲಿ ಒಳ್ಳೆಯವನು ಕೆಟ್ಟವನು ಎಂಬ ತರತಮದ ಆಧಾರವೇನು? ನಿಜಕ್ಕೂ ಒಳ್ಳೆಯತನ ಕೆಟ್ಟತನ ಎಂಬುದು ಇದೆಯೇ? ಇದೆಲ್ಲವೂ ಅವರವರ ಭಾವಕ್ಕೆ ಮಾತ್ರವೆ? ಇದಕ್ಕೆ ‘ಯಕ್ಷ ಸ್ಪಷ್ಟನೆ’ಯಲ್ಲಿ ಸಮಾಧಾನವಿದೆ. ‘ಜಗತ್ತಿನಲ್ಲಿ ಯಾರೂ ತಾವೇ ತಾವಾಗಿ ಕೆಟ್ಟವರಲ್ಲ ಎಂಬುದು ನಿಜ. ಅಷ್ಟು ಮಾತ್ರಕ್ಕೆ ಯಾರೊಬ್ಬರು ಇಲ್ಲವೇ ಒಬ್ಬ ಒಬ್ಬನು ಕೂಡ ಒಳ್ಳೆಯವನಾಗುವುದಿಲ್ಲ. ಪ್ರಶ್ನೋತ್ತರದ ಸಮಯದಲ್ಲಿ ಧರ್ಮನ ಖಚಿತ, ಆಳವಾದ ಉತ್ತರಗಳಿಂದಾಗಿ ಮನಸ್ಸು ತುಂಬಿ ಈ ಮಾತು ಹೇಳುವುದು ಮರೆತೇ ಹೋಯಿತು. ಹಾಗೆ ನೋಡಿದರೆ ಪಾಂಡವರು, ಕೌರವರು ದಾಯಾದಿಗಳಾದರೂ ಈ ಸ್ವಭಾವದಲ್ಲಿ ಸಮಾನರು’ ಎಂಬ ಮಾತು ನಮ್ಮ ಸುತ್ತಲನ್ನು ನೋಡುವ ಪರಿಜ್ಞಾನವನ್ನು ಪ್ರಭಾವಿಸದೆ ಇರದು. ಹಾಗೆಯೇ ‘ಯಕ್ಷಪ್ರಶ್ನೆ’ಯಲ್ಲಿಯ ಶಾಸ್ತ್ರಿಗಳು ಹೇಳುವ, ಕಾಲವನ್ನು ಸಾರಾಂಶದಲ್ಲಿ ಬದುಕಲೂ ಬಾರದು, ನೋಡಲೂ ಬಾರದು ಎಂಬ ಮಾತು ಪುಟಗಟ್ಟಲೆ ವ್ಯಾಖ್ಯಾನವನ್ನು ಬಯಸುತ್ತದೆ. ಪುರಾಣ ವರ್ತಮಾನವಾಗುವ ಪರಿಯನ್ನು ‘ವೈಶಂಪಾಯನದಲ್ಲಿ ಪಾಲು’ ಕತೆಯಲ್ಲಿ ನೋಡಬಹುದು. ಬದಲಾಗಿದ್ದೇವೆಂದು ಪೋಸು ಕೊಡುವ ಮೇಲ್ವರ್ಗದವರು ಅಂತರ್ಯದಲ್ಲಿ ಹೇಗೆ ಇನ್ನೂ ಬದಲಾಗದೇ ಇರುತ್ತಾರೆ ಎಂಬುದನ್ನು ‘ಭಾಷೆ ಮತ್ತು ನಗು’ವಿನಲ್ಲಿ ನೋಡಬಹುದು. ಅಮೆರಿಕಾದಲ್ಲಿ ಸಂಶೋಧನೆ ಮತ್ತು ಅಮೆರಿಕಾದಲ್ಲಿ ಸೀಸದ ಕಡ್ಡಿ ಕತೆಗಳು ಜಗತ್ತಿನ ‘ದೊಡ್ಡಣ್ಣ’ನ ದೌರ್ಬಲ್ಯವನ್ನು ಬಯಲು ಮಾಡುತ್ತವೆ. ಹೀಗೆ ಬದುಕನ್ನು ವಿವಿಧ ನೆಲೆಯಲ್ಲಿ ಮುಖಾಮುಖಿಯಾಗುವ ಕೆ.ಸತ್ಯನಾರಾಯಣ ಅವರು ಮಾಡಿಸುವ ಜೀವನದರ್ಶನ ಮಾಸ್ತಿಯವರ ಆದರ್ಶಗಳನ್ನು ಹೋಲುತ್ತದೆ. ನಮ್ಮ ಪರಂಪರೆಯೊಂದಿಗೆ ನಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಈ ಕಾರಣಕ್ಕೆ ಇಲ್ಲಿಯ ಕತೆಗಳು ನಮಗೆ ಇಷ್ಟವಾಗುತ್ತವೆ. ಪ್ರ: ಅಭಿನವ, ಬೆಂಗಳೂರು, ಪುಟಗಳು ೧೨೪, ಬೆಲೆ ೧೦೦