ಅನುವಾದವೆಂದರೆ ಪುನರ್‌ಸೃಷ್ಟಿ. ಒಂದು ಭಾಷೆಯಲ್ಲಿರುವ ಸಾಹಿತ್ಯವನ್ನು ಇನ್ನೊಂದು ಭಾಷೆಯಲ್ಲಿ ಪುನರ್‌ನಿರ್ಮಾಣ ಮಾಡುವುದು. ಅನುವಾದಿಸುವವನಲ್ಲಿ ಇರಬೇಕಾದ ಪ್ರಮುಖ ಅರ್ಹತೆ ಎಂದರೆ ಎರಡೂ ಭಾಷೆಯಲ್ಲಿ ಇರಬೇಕಾದ ಸಮಾನ ಪ್ರಭುತ್ವ. ಅನುವಾದವು ಕೆಲವೊಮ್ಮೆ ಅನುಸೃಷ್ಟಿಯೂ ಆಗಬಹುದು. ಒಂದೇ ದೇಶದ ಸಮಾನ ಸಂಸ್ಕೃತಿಯ ಪಠ್ಯವೊಂದನ್ನು ಅನುವಾದಿಸುವುದು ಅಂಥ ಸವಾಲಿನ ಕೆಲಸವಾಗಲಾರದು. ಆದರೆ ಬೇರೊಂದು ದೇಶದ, ಭಿನ್ನ ಸಂಸ್ಕೃತಿಯ ಪಠ್ಯವನ್ನು ಅನುವಾದಿಸುವುದು ಕಷ್ಟದ ಕೆಲಸ. ಇಂಥ ಸಂದರ್ಭಗಳಲ್ಲಿ ಅನುವಾದಕನು ಆ ಸಂಸ್ಕೃತಿಯ ವಿಶೇಷತೆಗಳನ್ನು ಪ್ರಸ್ತಾವನೆಯ ರೂಪದಲ್ಲಿ ನೀಡುತ್ತಾನೆ. ಅಂದರೆ ಓದುಗನಿಗೆ ಅನುವಾದಿತ ಪಠ್ಯವು ಆಗಂತುಕ ಅನ್ನಿಸದಿರಲಿ ಎಂಬ ಉದ್ದೇಶದಿಂದ. ಕನ್ನಡದಲ್ಲಿ ಹಲವು ಉತ್ಕೃಷ್ಟ ಅನುವಾದಗಳು ಬಂದಿವೆ. ಪ್ರಾಚೀನ ಕಾಲದಲ್ಲಿಯೇ ಕನ್ನಡ ಮಹಾಕವಿಗಳು ಸಂಸ್ಕೃತ ಮತ್ತು ಪ್ರಾಕೃತಗಳಿಂದ ಅನುವಾದ, ರೂಪಾಂತರಗಳನ್ನು ಮಾಡಿದ್ದಾರೆ. ಹೊಸಗನ್ನಡದಲ್ಲಿ ಇಂಗ್ಲಿಷ್, ಬಂಗಾಳಿ, ಮರಾಠಿಗಳಿಂದ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬಂದವು. ಕನ್ನಡದ ಮೊಟ್ಟಮೊದಲ ಕಾದಂಬರಿ ‘ಯಮುನಾಬಾಯಿ ಪರ್ಯಟನ’ ಎಂಬುದು ಬಾಬಾಪದಮಂಜಿ ಎಂಬವರು ಮರಾಠಿಯಲ್ಲಿ ಬರೆದ ಕಾದಂಬರಿಯ ಅನುವಾದ. ಇದನ್ನು ಅನುವಾದಿಸಿದವರು ಸೋಲೋಮನ್ ಭಾಸ್ಕರ ಅವರು. ಇದು ಆದದ್ದು ೧೮೬೯ರಲ್ಲಿ. ಬ್ರಿಟಿಷ್ ಇಂಡಿಯಾದ ಸರ್ಕಾರಿ ಕಚೇರಿಗಳಲ್ಲಿ ಅನುವಾದಕರ ಒಂದು ಪಡೆ ಇತ್ತು. ಸರ್ಕಾರಿ ದಪ್ತರಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡುವುದು ಇವರ ಕೆಲಸ. ಅನುವಾದಕ ಎಂಬ ಹುದ್ದೆಯಲ್ಲಿಯೇ ಇವರ ನೇಮಕವಾಗುತ್ತಿತ್ತು. ಇಂಥ ಅನುವಾದಕರಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಇದ್ದವರು ಇಂಗ್ಲಿಷ್ ಸಾಹಿತ್ಯ ಕೃತಿಗಳನ್ನು ಅನುವಾದಿಸುತ್ತಿದ್ದರು ಇಲ್ಲವೆ ರೂಪಾಂತರಿಸುತ್ತಿದ್ದರು. ಇವರ ಮೊದಲ ಆಕರ್ಷಣೆ ಶೇಕ್ಸ್‌ಪಿಯರ್. ಈ ಸಂದರ್ಭದಲ್ಲಿ ಅನುವಾದ ಹೇಗಿರಬೇಕು ಎಂಬ ಬಗ್ಗೆ ವಾಗ್ವಾದ ಸ್ವರೂಪದ ಚರ್ಚೆಗಳು ನಡೆದವು. ಹತ್ತೊಂಬತ್ತನೆ ಶತಮಾನದ ಕೊನೆಯಲ್ಲಿ ‘ಕನ್ನಡಿಗರ ಜನ ್ಮಸಾರ್ಥಕತೆ’ ಎಂಬ ಕೃತಿಯನ್ನು (ಇದನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಕಟಿಸಿತ್ತು. ಪುಸ್ತಕವಾಗುವುದಕ್ಕೂ ಮೊದಲು ಇದು ಧನಂಜಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.) ಬರೆದಿರುವ ವಲ್ಲಭ ಮಹಾಲಿಂಗ ತಟ್ಟಿಯವರು, ಭಾಷಾಂತರದ ಬಗ್ಗೆ ಹಲವು ನಿರ್ದಿಷ್ಟ ಸಲಹೆಗಳನ್ನು ನೀಡಿರುವರು. ಕೊನೆಯಲ್ಲಿ ಅವರು, ಬಿಸಿಲಲ್ಲಿ ಕನ್ನಡಿಯನ್ನು ಹಿಡಿದು, ಸೂರ್ಯಪ್ರಕಾಶವನ್ನು ಕತ್ತಲೆಯಲ್ಲಿ ಕೆಡವಿದರೆ, ಅದರಲ್ಲಿ ಉಷ್ಣತೆಯೂ ತೇಜಸ್ಸೂ ಬಿಸಿಲಿಗಿಂತ ಹೇಗೆ ಕಡಿಮೆಯಾಗಿರುವವೋ ಹಾಗೆಯೇ ಭಾಷಾಂತರಿಸಿದ್ದರಲ್ಲಿ ತಥ್ಯವೂ ರಸವೂ ಕಡಿಮೆಯಾಗಿರುವವು ಎಂದು ಹೇಳಿದ್ದಾರೆ. ಇಂಥ ಚಿಂತನ ಮಂಥನಗಳ ನಡುವೆ ಅನುವಾದ ಸಾಹಿತ್ಯವು ಕನ್ನಡವನ್ನು ಪುಷ್ಟಗೊಳಿಸಿದೆ. ಅನ್ಯ ಸಂಸ್ಕೃತಿಯ ಪಠ್ಯವನ್ನು ನಮ್ಮ ಸಂಸ್ಕೃತಿಗೆ ರೂಪಾಂತರಿಸಿಕೊಳ್ಳುವ ಅನುವಾದಕ್ಕೆ ಕುವೆಂಪು ಅವರ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಒಂದು ಉತ್ಕೃಷ್ಟ ಉದಾಹರಣೆ. ಬಿ.ಎಂ.ಶ್ರೀಯವರ ‘ಇಂಗ್ಲಿಷ್ ಗೀತೆಗಳು’ ಒಂದು ಆದರ್ಶವಾಗಿದೆ. ಪಾಶ್ಚಾತ್ಯ ಪಠ್ಯಗಳ ಯಥಾವತ್ತಾದ ಅನುವಾದಗಳೂ ಸಾಕಷ್ಟು ಬಂದಿವೆ. ಅನ್ಯ ಸಂಸ್ಕೃತಿಯ ಪಠ್ಯಗಳ ಭಾರತೀಯ ಅನುವಾದಕರು ಮೂಲ ಭಾಷೆಯಲ್ಲಿ ಪರಿಣತಿಯನ್ನು ಹೊಂದಿರುವ ಸಂಭವ ಕಡಿಮೆ. ಹೀಗಾಗಿ ಅವರು ಇಂಗ್ಲಿಷಿನಿಂದ ಅನುವಾದ ಮಾಡುತ್ತಾರೆ. ನಾವು ಫ್ರೆಂಚ್, ಸ್ಪ್ಯಾನಿಶ್, ರಷಿಯನ್, ಚೈನೀಸ್, ಜಪಾನೀಸ್ ಮೊದಲಾದ ಭಾಷೆಗಳ ಕೃತಿಗಳನ್ನು ಕನ್ನಡದಲ್ಲಿ ನೋಡುವುದು ಮೂಲದ್ದರ ಇಂಗ್ಲಿಷ್ ಅನುವಾದಗಳ ಮೂಲಕವೇ. ಇಂಗ್ಲಿಷ್ ಅನುವಾದಕನು ಮಾಡಿರುವ ಲೋಪಗಳು ಅದನ್ನು ಅನುಸರಿಸಿ ಮಾಡುವ ಅನುವಾದಗಳಲ್ಲೂ ಉಳಿದುಬಿಡುತ್ತವೆ. ಅನುವಾದವೆಂದರೆ ಮೂಲ ಭಾಷೆಯ ಪಠ್ಯವನ್ನು ನಮ್ಮ ಭಾಷೆಯಲ್ಲಿ ಮರುಸೃಷ್ಟಿ ಮಾಡುವುದೆಂದು ಈಗಾಗಲೆ ಹೇಳಿದೆ. ಈ ಮರುಸೃಷ್ಟಿಯನ್ನು ನಾವು ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಆ ಭಾಷೆಯ ವ್ಯಾಕರಣ, ವಾಕ್ಯಗಳ ರಚನೆಯ ಸ್ವರೂಪ ಇತ್ಯಾದಿ. ಮೂಲದ್ದರ ಸಂಕೀರ್ಣ ವಾಕ್ಯಗಳನ್ನು ಯಥಾವತ್ತಾಗಿ ಅನುವಾದ ಮಾಡಿದರೆ ಓದುಗನಿಗೆ ಕಬ್ಬಿಣದ ಕಡಲೆಯಾಗದೆ ಇರದು. ಅಷ್ಟೊಂದು ಹಿಂಸೆಪಟ್ಟುಕೊಂಡು ಓದುವುದಕ್ಕೆ ಯಾರೂ ಇಷ್ಟಪಡುವುದಿಲ್ಲ. ಅಲ್ಲಿಗೆ ಅನುವಾದಕನ ಶ್ರಮ ವ್ಯರ್ಥವಾಗುವುದು. ಇಷ್ಟೆಲ್ಲ ಪೀಠಿಕೆಯನ್ನು ಕೆ.ವಿ.ತಿರುಮಲೇಶ್ ಅವರು ಮಾಡಿರುವ ಹರ್ಮನ್ ಮೆಲ್ವಿಲ್ ಅವರ ಕತೆಗಳ ಅನುವಾದವನ್ನು ನೋಡಿದಾಗ ಹೇಳಬೇಕೆನಿಸಿತು. ‘ಗಂಟೆ ಗೋಪುರ’ ಎಂಬ ಈ ಕೃತಿಯಲ್ಲಿ ಹರ್ಮನ್ ಮೆಲ್ವಿಲ್ ಅವರ ನಾಲ್ಕು ಸಣ್ಣ ಕತೆಗಳನ್ನು ಅನುವಾದಿಸಿ ನೀಡಲಾಗಿದೆ. ಹತ್ತೊಂಬತ್ತನೆಯ ಶತಮಾನದ ಅಮೆರಿಕದ ಈ ಪ್ರಸಿದ್ಧ ಕಾದಂಬರಿಕಾರನನ್ನು ಕನ್ನಡಕ್ಕೆ ಪರಿಚಯಿಸಬೇಕು ಎಂದು ಲೇಖಕರಿಗೆ ಅನ್ನಿಸಿದ್ದಕ್ಕೆ ಅವರಿಗೆ ಅಭಿನಂದನೆ ಹೇಳಬೇಕು. ಈ ನಾಲ್ಕು ಕತೆಗಳು ಅವರ ೧೮೫೬ರಲ್ಲಿ ಬಂದ ‘ದಿ ಪಿಜ್ಜಾ ಟೇಲ್ಸ್’ ಎಂಬ ಸಂಕಲನದಲ್ಲಿವೆ. ಕೃತಿಯಲ್ಲಿ ಮೆಲ್ವಿಲ್ ಬಗ್ಗೆ ಪರಿಚಯವೂ ಇದೆ. ಇಲ್ಲಿರುವ ಮೂರು ಕತೆಗಳು ಹರ್ಮನ್ ಅವರ ಛಿ ಉ್ಞ್ಚಚ್ಞಠಿ, ಣ್ಟ ಉ್ಞ್ಚಚ್ಞಠಿಛಿ ಐಠ್ಝಛಿ ಎಂಬ ಸಂಕಲನದಲ್ಲಿಯೂ ಇವೆ. ಈ ಕೃತಿಯ ಪರಿಚಯವನ್ನೂ ಇದರಲ್ಲಿ ನೀಡಲಾಗಿದೆ. ಹೀಗಾಗಿ ಓದುಗನಿಗೆ ಒಂದು ಉತ್ತಮ ಪ್ರವೇಶ ದೊರಕಿದಂತೆ ಆಗಿದೆ. ಹರ್ಮನ್ ಇವುಗಳನ್ನು ಕತೆಗಳು ಎಂದು ಕರೆಯದೆ ರೇಖಾಚಿತ್ರಗಳು (ಸ್ಕೆಚಸ್) ಎಂದು ಕರೆದಿದ್ದಾನಂತೆ. ಎಂಕಾಂಟಡಾಸ್ ಎನ್ನುವುದು ಒಂದು ಸ್ಪ್ಯಾನಿಶ್ ಪದ. ಮೋಡಿ, ಮೋಹಿನಿ, ಯಕ್ಷಿಣಿ ಎಂಬೆಲ್ಲ ಅರ್ಥಗಳಿವೆಯಂತೆ. ಗಲಾಪಾಗೋಸ್ ಎನ್ನುವುದು ದಕ್ಷಿಣ ಶಾಂತಸಾಗರದ ಒಂದು ದ್ವೀಪ. ಈ ಸ್ಪ್ಯಾನಿಶ್ ಪದದ ಅರ್ಥ ಕೂರ್ಮಗಳು ಎಂದು. ಸ್ವತಃ ನಾವಿಕನಾಗಿದ್ದ ಹರ್ಮನ್ ತನ್ನ ಅನುಭವಗಳನ್ನು ಮತ್ತು ಇತರರಿಂದ ಕೇಳಿದ ಸಂಗತಿಗಳನ್ನು ಕತೆಗಳನ್ನಾಗಿ ಬರೆದಿದ್ದಾನೆ. ಈ ಕಾರಣಕ್ಕಾಗಿಯೇ ಇವುಗಳಲ್ಲಿ ಜೀವಂತಿಕೆ ಇರುವುದು. ಕನ್ನಡದಲ್ಲಿ ತುಂಬ ಸುಂದರವಾಗಿ ಬರೆಯುವ ತಿರುಮಲೇಶ ಅವರು ಮಾಡಿರುವ ಅನುವಾದದ ಮಾದರಿಯನ್ನು ನೋಡಿ- ‘‘.. ಟರ್ಕಿ ಕುಳ್ಳನೂ ಸಂಕುಚಿತನೂ ಆದ ಇಂಗ್ಲಿಷ, ಸುಮಾರು ನನ್ನದೇ ವಯಸ್ಸಿನವ, ಎಂದರೆ, ಅರುವತ್ತಕ್ಕೆ ಹೆಚ್ಚೇನೂ ದೂರವಿಲ್ಲದವ, ಮುಂಜಾನೆ, ಅವನ ಮುಖ ಚೆನ್ನಾದ ಕೆಂಪು ಬಣ್ಣದ್ದು ಎಂದು ಹೇಳಬಹುದಾಗಿತ್ತು, ಅದರೆ ಹನ್ನೆರಡು ಗಂಟೆಯ ನಂತರ, ಮಧ್ಯಾಹ್ನ- ಅವನ ಊಟದ ಸಮಯ- ಅದು ಕ್ರಿಸ್‌ಮಸ್ ಇದ್ದಿಲು ಕೆಂಡಗಳು ತುಂಬಿದ ಕುಂಡದಂತೆ ಉರಿಯುತ್ತಿತ್ತು; ಹಾಗೂ ಉರಿಯುತ್ತಲೇ ಇರುತ್ತಿತ್ತು- ಆದರೆ, ಕ್ರಮವಾದ ಇಳಿತದಲ್ಲೆಂಬಂತೆ- ಸಾಯಂಕಾಲ ೬ ಗಂಟೆ ತನಕ, ಅಥವಾ ಸರಿಸುಮಾರು ಆ ಹೊತ್ತಿನ ತನಕ, ಆನಂತರ ನಾನು ಆ ಮುಖದ ಒಡಮಸ್ತನನ್ನು ಕಂಡದ್ದಿಲ್ಲ, ಯಾಕೆಂದರೆ, ಅದು ಸೂರ್ಯನ ಜತೆ ತನ್ನ ಉಚ್ಛ್ರಾಯ ತಲುಪುತ್ತ, ಸೂರ್ಯನ ಜತೆ ಕಂತುವ ಹಾಗೆಯೂ ತೋರುತ್ತಿತ್ತು, ಮರುದಿನ ಅದೇ ಯಥಾಕ್ರಮದಲ್ಲಿ ಅದೇ ಅಬಾಧಿತ ಅತಿಶಯದಲ್ಲಿ ಉದಿಸಿ, ಉಜ್ವಲಿಸಿ, ಊನವಾಗುವುದಕ್ಕೆ.- (ಪುಟ ೧೧) ಅಬ್ಬಬ್ಬಾ, ಅಲ್ಲಿಂದ ಇಲ್ಲಿಯವರೆಗೂ ಅದು ಒಂದೇ ವಾಕ್ಯ. ಇನ್ನೊಂದು- ‘‘ಹಾಗಿದ್ದರೂ, ಅವನು ಅನೇಕ ರೀತಿಗಳಿಂದ ನನಗೆ ಅತ್ಯಂತ ಅಮೂಲ್ಯ ವ್ಯಕ್ತಿಯಾದ್ದರಿಂದ, ಮತ್ತು ಮಧ್ಯಾಹ್ನ ಹನ್ನೆರಡರ ಮೊದಲು ಎಲ್ಲಾ ವೇಳೆಯೂ ಅತಿ ಚುರುಕೂ, ಇನ್ನು ಯಾರೂ ಸುಲಭದಲ್ಲಿ ಎಣೆಯಾಗದ ಶೈಲಿಯಲ್ಲಿ ಬಹು ದೊಡ್ಡ ಮೊತ್ತದ ಕೆಲಸವನ್ನು ಸಾಧಿಸುವಂಥ ಎಡೆಬಿಡದ ಜೀವಿಯೂ ಆದ್ದರಿಂದ- ಈ ಕಾರಣಗಳಿಗೋಸ್ಕರ, ಅವನ ವಿಚಿತ್ರ ವರ್ತನೆಗಳನ್ನು ನಾನು ಕಡೆಗಣಿಸಲು ತಯಾರಿದ್ದೆ, ಅಪರೂಪಕ್ಕೆ ಕೆಲವೊಮ್ಮೆ, ನಾನು ಅವನ ಜತೆ ಪ್ರತಿಭಟಿಸುವುದಿದ್ದರೂ.(ಪುಟ ೧೨) – ಈ ಅನುವಾದವನ್ನು ಮತ್ತೊಮ್ಮೆ ಕನ್ನಡಕ್ಕೆ ಅನುವಾದಿಸುವ ಅಗತ್ಯ ಇಲ್ಲಿ ಕಂಡುಬರುತ್ತದೆ. ಮೊತ್ತದಲ್ಲಿ, ಹನ್ನೆರಡು ಗಂಟೆ ಕಳೆದ ಮೇಲೆ… (ಇಲ್ಲಿ ಮೊತ್ತದಲ್ಲಿ ಬದಲಿಗೆ ಒಟ್ಟಾರೆಯಾಗಿ ಅಂದರೆ ಹೆಚ್ಚು ಸಮಂಜಸವಾಗುತ್ತಿತ್ತು.) ಕೈಭಾಷೆ ಮಾಡುತ್ತ (ಸನ್ನೆ ಮಾಡುತ್ತ) … ಅವನು ಅಳತೆಗೋಲಿನಿಂದ ಒಂದು ಹಿಂಸಾತ್ಮಕ ತಿವಿತ ಹಾಕಿದ (ಪುಟ ೧೩) ಅಪ್ಪಣೆ ಮೇರೆಗೆ, ಸರ್, ನಮಗಿಬ್ಬರಿಗೂ ವಯಸ್ಸಾಗ್ತಿದೆ (ಪುಟ ೧೩) ಅವನು ತನ್ನ ಮೇಜಿನ ಮುಚ್ಚಳವನ್ನು ತನ್ನ ಗದ್ದದ ಮಟ್ಟಕ್ಕೆ ಶೂರ್ಪ ಕೋನದಲ್ಲಿ ತಂದು (ಪುಟ ೧೪) ಇದೊಂದು ಓದುಗನನ್ನು ದೂರಮಾಡುವ ಅನುವಾದ ಎಂದು ಹೇಳದೆ ವಿಧಿಯಿಲ್ಲ. ಕೆ.ವಿ.ತಿರುಮಲೇಶ್ ಅವರು ಕನ್ನಡದ ಅತ್ಯುತ್ತಮ ಗದ್ಯ ಲೇಖಕರಲ್ಲಿ ಒಬ್ಬರು. ಹೀಗಿದ್ದೂ ಅನುವಾದದಲ್ಲಿ ಅವರು ಸೋತಿದ್ದಾರೆ ಎಂದೇ ಹೇಳಬೇಕು. ಪ್ರ: ಅಭಿನವ, ಬೆಂಗಳೂರು, ಪುಟಗಳು ೧೬೮, ಬೆಲೆ ₹ ೧೫೦