*ಆಲಸಿಯಾದ ಆಡಳಿತ ಯಂತ್ರ

ತುಂಬ ನಿದ್ದೆ ಮಾಡುವವರನ್ನು ಕುಂಭಕರ್ಣ ಎಂದೋ, `ಅವನದು ಕುಂಭಕರ್ಣ ನಿದ್ದೆ’ ಎಂದೋ ಹೇಳುವುದಿದೆ. ಆಲಸಿಯಾದ ಆಡಳಿತ ಯಂತ್ರವನ್ನೂ ಕುಂಭಕರ್ಣ ನಿದ್ದೆಗೆ ಹೋಲಿಸುವುದಿದೆ.
ಕುಂಭಕರ್ಣ ಯಾರಿಗೆ ಗೊತ್ತಿಲ್ಲ ಹೇಳಿ? ಮಡಕೆಯಂಥ ಕಿವಿಗಳನ್ನು ಹೊಂದಿದವನು ಎಂಬ ಅರ್ಥದ ನಾಮ ರಾವಣನ ತಮ್ಮನಿಗೆ ಅನ್ವರ್ಥವಾಗಿಯೇ ಬಂದದ್ದು. ಪರ್ವತಕಾಯದ ಕುಂಭಕರ್ಣ ನಿದ್ದೆಗೆ ಹೇಗೆ ಪ್ರಸಿದ್ಧನಾದ? ಅದರ ಹಿಂದಿನ ಪುರಾಣವೇನು?
ರಾವಣ, ಕುಂಭಕರ್ಣ, ವಿಭೀಷಣ ಸಹೋದರರು. ಮಹಾನ್‌ ಶಕ್ತಿಶಾಲಿಗಳು. ಇವರೆಲ್ಲ ದೇವತೆಗಳ ಮೇಲೆ ಯುದ್ಧ ಮಾಡಿ ಸೋಲಿಸಿದ್ದರು. ಈ ಅಸಾಮಾನ್ಯ ಸಾಹಸಿಗಳು ಇನ್ನೂ ಹೆಚ್ಚಿನ ಶಕ್ತಿಯನ್ನು ದೊರಕಿಸಿಕೊಳ್ಳಲು ಬ್ರಹ್ಮನನ್ನು ಕುರಿತು ತಪಸ್ಸನ್ನು ಆಚರಿಸುತ್ತಾರೆ. ಮೊದಲೇ ದುಷ್ಟರಾದ ಇವರು ಬ್ರಹ್ಮನಿಂದ ವರ ಪಡೆದು ಇನ್ನಷ್ಟು ಶಕ್ತಿಸಂಪನ್ನರಾದರೆ ಕಷ್ಟವೆಂದು ದೇವತೆಗಳು ಚಿಂತಿತರಾಗುತ್ತಾರೆ.
ವರ ಕೊಡುವುದರಲ್ಲಿ ಬ್ರಹ್ಮ ಎತ್ತಿದ ಕೈ. ಅದರ ಪರಿಣಾಮಗಳ ಕುರಿತು ಆತ ಯೋಚಿಸುವುದೇ ಇಲ್ಲ. ರಾಕ್ಷಸರೂ ವಿಚಿತ್ರ ವರಗಳನ್ನು ಪಡೆದು ಅಮರರಾಗಲು ಯತ್ನಿಸುತ್ತಿದ್ದರು. ದೇವತೆಗಳು ಸರಸ್ವತಿ ದೇವಿಯ ಬಳಿಗೆ ತೆರಳಿ ತಮ್ಮ ಆತಂಕವನ್ನು ಹೇಳಿಕೊಂಡರು. ಸರಸ್ವತಿ ಅವರನ್ನು ರಕ್ಷಿಸುವ ಆಶ್ವಾಸನೆ ನೀಡುತ್ತಾಳೆ.
ಬ್ರಹ್ಮ ಕುಂಭಕರ್ಣನಿಗೆ ವರ ಕೇಳು ಎಂದು ಹೇಳಿದಾಗ, ಆತನ ನಾಲಿಗೆಯ ಮೇಲೆ ನಿಂತು ಸರಸ್ವತಿ, ವರ್ಷದ ಆರು ತಿಂಗಳು ನಿದ್ದೆ, ಒಂದು ದಿನ ಎಚ್ಚರ, ಬೆಟ್ಟದಷ್ಟು ಆಹಾರ ಮತ್ತೆ ಮರುದಿನದಿಂದ ಆರು ತಿಂಗಳು ನಿದ್ದೆ ಬರಲಿ ಎಂದು ನುಡಿಸುತ್ತಾಳೆ. ಬ್ರಹ್ಮ ತಥಾಸ್ತು ಎನ್ನುತ್ತಾನೆ.
ಹೀಗೆ ಕುಂಭಕರ್ಣ ಸದಾ ನಿದ್ರಾವಶನಾಗಿಬಿಡುತ್ತಾನೆ.