*ಯಾಮಾರಿಸುವುದು
ಯಾರನ್ನಾದರೂ ಪುಸಲಾಯಿಸಿ ಕೆಲಸ ಮಾಡಿಸಿಕೊಳ್ಳಲು ಯತ್ನಿಸಿದಾಗ, `ಏನ್ ನನ್ನ ಕಿವಿಲಿ ಹೂ ಇಡ್ತಿಯಾ?' ಎಂದು ಹೇಳುವುದಿದೆ. ಇರುವುದೊಂದು ಹೇಳುವುದೊಂದು. ಹಾಗೆ ಹೇಳಿ ಯಾಮಾರಿಸಲು ನೋಡುವವರಿಗೂ ಇದೇ ಮಾತು ಹೇಳುತ್ತಾರೆ.
ನಾವೇನು ಕಿವಿಯಲ್ಲಿ ಹೂವಿಟ್ಟುಕೊಂಡು ಕುಳಿತಿದ್ದೇವಾ?’ ಎಂದು ಹೇಳುವುದನ್ನೂ ಕೇಳಿರುತ್ತೀರಿ.
ಕಿವಿಯಲ್ಲಿ ಯಾರು ಹೂವು ಇಟ್ಟುಕೊಳ್ಳುವವರು? ದೇವಸ್ಥಾನದಲ್ಲಿ ಕೊಡುವ ಪ್ರಸಾದ ರೂಪದ ಹೂವನ್ನು ಭಕ್ತರು ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಕಿವಿಯಲ್ಲಿ ಇರುವ ಹೂವನ್ನು ನೋಡಿದ ಕೂಡಲೆ ಆತನನ್ನು ಪರಮ ದೈವಭಕ್ತ ಎಂದು ನಿರ್ಧರಿಸಿಬಿಡುವವರು ಇದ್ದಾರೆ. ಕಿವಿಯಲ್ಲಿ ಹೂವಿಟ್ಟುಕೊಳ್ಳುವವರೆಲ್ಲರೂ ನಿಜವಾದ ಭಕ್ತರಾಗಿರುವುದಿಲ್ಲ. ಅದೊಂದು ರೀತಿಯ ಡಾಂಬಿಕ ಭಕ್ತಿ.
ಕಿವಿಯಲ್ಲಿ ಹೂವಿಟ್ಟುಕೊಳ್ಳುವವರು ಒಂದು ರೀತಿಯಲ್ಲಿ ಬೋಳೆ ಅಂದರೆ ಸಾಧು ಪ್ರಾಣಿ. ಸುಲಭವಾಗಿ ಮೋಸಹೋಗುವಂಥ ವ್ಯಕ್ತಿ ಎಂಬ ವಿವರಣೆಯೂ ಇದೆ. ಹೀಗಿದ್ದಾಗ ಕಿವಿಯಲ್ಲಿ ಹೂವಿರಿಸಿಕೊಳ್ಳಲು ಯಾರು ಇಷ್ಟಪಡುತ್ತಾರೆ ಹೇಳಿ?
ತುಂಬಾ ಯಾಮಾರಿಸುವವರನ್ನು ನೋಡಿದಾಗ, `ಎಲ್ಲರೂ ಕಿವಿಯಲ್ಲಿ ಹೂವು ಇಟ್ಟರೆ ನೀನು ಗಾರ್ಡನನ್ನೇ ತಂದು ಇಡುವ ಹಾಗೆ ಕಾಣ್ತಿದೆ’ ಎಂದು ಹೇಳುವ ಮಾತೂ ಪ್ರಚಲಿತದಲ್ಲಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.