*ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲ

ರಿಯ ಎತ್ತು ಕಾಳ, ಬಿಳಿಯ ಎತ್ತು ಬೆಳ್ಳ. `ಕಾಳನನ್ನು ದೂರುವುದು ಬೇಡ, ಬೆಳ್ಳನನ್ನು ಹೊಗಳುವುದು ಬೇಡ’ ಎಂದರೆ ಎರಡೂ ಸಮಾನ ತಪ್ಪು ಮಾಡಿದವೇ. ಕಾಳ ಸರಿಯಾಗಿ ಮಾತು ಕೇಳುತ್ತಾನೆ ಎನ್ನುವಂತಿಲ್ಲ, ಬೆಳ್ಳ ನಡೆಯನ್ನು ತಪ್ಪುವುದಿಲ್ಲ ಎನ್ನುವಂತಿಲ್ಲ. ಇಬ್ಬರೂ ಸಮಾನ ತಪ್ಪುಗಾರರೇ.
ನಮ್ಮ ನಿತ್ಯ ಜೀವನದಲ್ಲೂ ಕಾಳ, ಬೆಳ್ಳ ಎದುರಾಗುತ್ತಾರೆ. ನಾವು ಅತ್ಯುತ್ತಮವಾದುದನ್ನೇ ಆಯ್ಕೆಮಾಡಿಕೊಳ್ಳಬೇಕು ಎಂದು ಬಯಸುತ್ತೇವೆ. ಯಾರನ್ನು ಆಯ್ಕೆ ಮಾಡಬೇಕೆಂದರೂ ಅವರಲ್ಲಿ ಒಂದೊಂದು ಲೋಪ. ಅವನನ್ನು ಹೊಗಳುವಂತಿಲ್ಲ, ಇವನನ್ನು ತೆಗಳುವಂತಿಲ್ಲ. ಎಲ್ಲರೂ ಒಂದೇ ರೀತಿಯ ಸಾಮರ್ಥ್ಯದವರು. ಆದರೆ ನಮಗೆ ಬೇಕಾದಂಥ ಸಾಮರ್ಥ್ಯ, ಪರಿಣತಿ ಯಾರೊಬ್ಬರಲ್ಲೂ ಇಲ್ಲ.
ಕಾಳ ಮತ್ತು ಬೆಳ್ಳ ಇಲ್ಲಿ ಸಂಕೇತ ಮಾತ್ರ. ಕಾಳ ಎನ್ನುವುದು ಕಪ್ಪು, ಕೆಟ್ಟದ್ದು, ಅನಿಷ್ಟವಾದದ್ದು…. ಹೀಗೆ ಬೇಡದಿರುವುದೆಲ್ಲ ಅದರಲ್ಲಿ ಸೇರುತ್ತದೆ. ಬೆಳ್ಳ ಎಂದರೆ ಬಿಳಿಯದು, ಶುಭ್ರವಾದುದು, ಪರಿಶುದ್ಧವಾದುದು… ಹೀಗೆ ಬೇಕೆನಿಸುವುದೆಲ್ಲ ಅದರಲ್ಲಿ ಸೇರಿರುತ್ತದೆ. ಆದರೆ ವರ್ತಮಾನದ ದುರಂತವೆಂದರೆ ಕಾಳ-ಬೆಳ್ಳರಲ್ಲಿ ಅಂತರವೇ ಮಾಯವಾಗಿರುವುದು. ಇಬ್ಬರೂ ಒಂದೇ ಅನ್ನಿಸಿದಾಗ ಭವ ಎನ್ನುವುದು ಬಂಧನವೆನ್ನಿಸುತ್ತದೆ.
ಕಾಳ-ಬೆಳ್ಳ ಎನ್ನುವುದನ್ನು ಗುಣಗಳನ್ನಾಗಿ ಗ್ರಹಿಸಿದಾಗ ಪ್ರತಿಯೊಬ್ಬರಲ್ಲೂ ಈ ಗುಣಗಳು ಇರುತ್ತವೆ. ಕಾಳನನ್ನು ಮೆಟ್ಟಿ, ಬೆಳ್ಳನನ್ನು ಎತ್ತಿಕಟ್ಟಿದಾಗ ಮಾತ್ರ ಈ ಭವಬಂಧನದಿಂದ ಸುಲಭವಾಗಿ ಪಾರಾಗಬಹುದು ಎನ್ನುವುದು ಅನುಭವಿಗಳ ಮಾತು. ಎಲ್ಲರ ತುಡಿತವೂ ಈ ಕತ್ತಲಿನಿಂದ ಬೆಳಕಿನ ಕಡೆ ಸಾಗುವುದೇ ಆದಾಗ ಜಗತ್ತು ಸುಂದರ.