ಕತೆಯನ್ನು ಹುಡುಕುತ್ತಿದ್ದವರಿಗೆ ಅದು ನಮ್ಮ ಪಕ್ಕದಲ್ಲಿಯೇ ಹರಿದಾಡುತ್ತಿದ್ದರೂ ಒಮ್ಮೊಮ್ಮೆ ಗೊತ್ತೇ ಆಗುವುದಿಲ್ಲ. ಕತೆ ಕಣ್ಣಿಗೆ ಬೀಳುವುದಿಲ್ಲ. ನನಗೂ ಒಮ್ಮೆ ಹೀಗೇ ಆಗಿತ್ತು. ನಾನು ಸಣ್ಣವನಿದ್ದಾಗ ನಮ್ಮೂರಿಗೆ ಪಾತ್ರೆಗಳನ್ನು ದುರಸ್ತಿ ಮಾಡುವ ಸಾಬಿ ಒಬ್ಬ ಬರುತ್ತಿದ್ದ. ಕಲಾಯಿ ಸಾಬಿ ಎಂದು ಅವನನ್ನು ಕರೆಯುತ್ತಿದ್ದರು. ಅವರಿಗೆ ಕಾಯಂ ವಿಳಾಸ ಎಂಬುದು ಇರುತ್ತಿರಲಿಲ್ಲ. ಸಾಬಿ ಹೋದಲ್ಲೇ ಊರು ಎಂಬಂತೆ ಒಂದಲ್ಲ ಒಂದು ಊರಿಗೆ ತಮ್ಮ ಟಂಬು ಬದಲಾಯಿಸುತ್ತಲೇ ಇರುತ್ತಿದ್ದ. ನಿಮ್ಮ ಮನೆಯಲ್ಲಿ ಮೂರ್ನಾಲ್ಕು ದಿನಗಳ ಕೆಲಸ ಇದೆ ಎಂದಾದರೆ ನಿಮ್ಮ ಮನೆಯಲ್ಲಿಯೇ ಅವನ ಬಿಡಾರ. ಕೋಳಿ ಕೂಗುವ ಹೊತ್ತಿಗೇ ಎದ್ದುಬಿಡುತ್ತಿದ್ದ. ಒಂದು ಸುತ್ತು ಕೇರಿಯಲ್ಲಿ ಅಡ್ಡಾಡಿ ಯಾರ ಮನೆಯಲ್ಲಿ ತೂತಾದ ಕೊಡಪಾನಗಳಿವೆ, ಯಾರ ಮನೆಯ ಪಾತ್ರೆಗೆ ಕಲಾಯಿ ಹಾಕಬೇಕು, ಯಾರ ಹಂಡೆಗೆ ಬುಡಕ್ಕೆ ಹೊಸ ತಗಡು ಹಾಕಬೇಕು ಎಂಬುದನ್ನೆಲ್ಲ ಕೇಳಿ ಕೇಳಿ ಕೆಲಸ ತಂದುಕೊಳ್ಳುತ್ತಿದ್ದ. ಆಗೆಲ್ಲ ಪ್ಲಾಸ್ಟಿಕ್ ಬಳಕೆ ಹೆಚ್ಚಿರಲಿಲ್ಲ. ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳನ್ನೇ ಹೆಚ್ಚಿಗೆ ಬಳಸುತ್ತಿದ್ದುದು. ಸೋರುವ ಕೊಡಪಾನಗಳು, ಅಡುಗೆಯ ಪಾತ್ರೆಗಳನ್ನೆಲ್ಲ ತುಂಬ ಸುಂದರವಾಗಿ ಮರುಸೃಷ್ಟಿ ಮಾಡುತ್ತಿದ್ದ ಸಾಬಿಯ ಕಲೆಗೆ ಒಂದು ಸಲಾಂ ಹಾಕಲೇ ಬೇಕು. ಕೊಡಪಾನವನ್ನು ತಿದಿಯ ಬೆಂಕಿಯಲ್ಲಿ ಸುಟ್ಟು ತುದಿ ಬಗ್ಗಿಸಿದ ಹಾರೆಯ ಮೇಲೆ ಬೋರಲು ಇಟ್ಟು ಸಣ್ಣ ಸುತ್ತಿಗೆಯಿಂದ ಟಣ್ ಟಣ್ ಎಂದು ಸುತ್ತು ಬಡಿಯುತ್ತ ಅದನ್ನು ಗಟ್ಟಿಗೊಳಿಸುತ್ತಿದ್ದ. ಆ ಲಯಬದ್ಧ ಹಣಿತದ ಕಲೆಗಳು ಒಂದೂ ತಪ್ಪದೆ ತುಂಬ ಸುಂದರವಾಗಿ ಕಾಣುತ್ತಿದ್ದವು. ಊರಿನಲ್ಲಿ ಕಲಾಯಿ ಸಾಬಿಯ ಗುರುತು ಇಲ್ಲದವರೇ ಇಲ್ಲ ಎಂಬಂತಾಗಿತ್ತು. ಸಾಬಿಯ ಮತ್ತೊಂದು ಕೆಲಸವೆಂದರೆ, ಊರಲ್ಲಿ ಯಾರದಾದರೂ ಮನೆಯಲ್ಲಿ ಪಾಲು ಆದರೆ ಅವರ ಮನೆಯ ಪಾತ್ರೆಗಳಿಗೆ ವಿಳಾಸವನ್ನು ಬರೆಯುವುದು. ಆಗೆಲ್ಲ ವಿಳಾಸ ಹಾಕುವ ಯಂತ್ರ ಬಂದಿರಲಿಲ್ಲ. ಸಾಬಿಯೇ ತನ್ನ ಮೊನೆಯ ಚಾಣದಿಂದ ವಿಳಾಸವನ್ನು ಬರೆಯಬೇಕಿತ್ತು. ಕಲಾಯಿ ಸಾಬಿಗೆ ಆ ಮೇಲೆ ಒಂದು ಮದುವೆಯೂ ಆಯಿತು. ಮದುವೆ ಆದ ಮೇಲೆ ವಾರಕ್ಕೊಂದು ಊರು ಸುತ್ತುವುದನ್ನು ಬಿಟ್ಟುಬಿಟ್ಟ. ತನ್ನ ಪರಿಚಯ ಬಲದಿಂದ ನಮ್ಮೂರ ಗುಡ್ಡದ ಮೇಲೇಯೇ ಯಾರ ಹತ್ತಿರವೋ ಐದು ಗುಂಟೆ ಜಾಗ ಖರೀದಿಸಿ ಅಲ್ಲಿಯೇ ಚಿಕ್ಕದೊಂದು ಮನೆ ಕಟ್ಟಿಕೊಂಡು ವಾಸ ಮಾಡತೊಡಗಿದ. ವರ್ಷಗಳು ಕಳೆದವು. ತಾಮ್ರ ಹಿತ್ತಾಳೆ ಪಾತ್ರೆಗಳು ಬದಿಗೆ ಸರಿದವು. ಸ್ಟೀಲು, ಆಲ್ಯುಮಿನಿಯಂ ಪಾತ್ರೆಗಳು ಬಂದವು. ಕಲಾಯಿ ಸಾಬಿಗೆ ಕೆಲಸ ಕಡಿಮೆಯಾಗತೊಡಗಿತು. ತನ್ನ ಕಸುಬಿನ ಜೊತೆಗೆ ಆತ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಗೇರುಬೀಜ, ಬಾಳೆಕಾಯಿ, ಮುರುಗಲ ಹುಳಿ ಹೀಗೆ ಜನರು ಏನು ತಂದುಕೊಟ್ಟರೂ ಸಾಬಿ ಖರೀದಿ ಮಾಡುವುದಕ್ಕೆ ಆರಂಭಿಸಿದ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಲೂ ಇತ್ತು. ಸಾಬಿಯು ಸ್ವಲ್ಪ ಅನುಕೂಲಸ್ಥನೂ ಆಗಿದ್ದ. ಒಂದು ಸೈಕಲ್ ಖರೀದಿಸಿದ್ದ. ಅದರ ಮೇಲೆಯೇ ಹತ್ತು ಹನ್ನೆರಡು ಮೈಲು ಸಾಗುತ್ತಿದ್ದ. ಕುಳಿತುಕೊಂಡರೆ ಹೊಟ್ಟೆ ತುಂಬುವುದಿಲ್ಲ ಎಂಬುದು ಆತನ ಸಿದ್ಧಾಂತವಾಗಿತ್ತು. ಸಾಬಿಗೆ ಒಂದೆರಡು ಮಕ್ಕಳೂ ಆಗಿದ್ದವು. ಸಾಬಿ ವ್ಯಾಪಾರ ಮಾಡಲಿಕ್ಕೆ ಶುರುಮಾಡಿದ್ದರೂ ತನ್ನ ಮೂಲ ಕಸುಬನ್ನು ಬಿಟ್ಟಿರಲಿಲ್ಲ. ಯಾರಾದರೂ ಅವನ ಮನೆಗೇ ತಂದು ಪಾತ್ರ ಕೊಟ್ಟರೆ ಅದನ್ನು ಅವನು ದುರಸ್ತಿ ಮಾಡಿಕೊಡುತ್ತಿದ್ದ. ಇತ್ತೀಚೆ ನಾನು ಊರಿಗೆ ಹೋದಾಗ ಸಾಬಿ ತನ್ನ ಜಾಗವನ್ನು ಯಾರಿಗೋ ಮಾರಿ ಬೇರೆ ಊರಿಗೆ ಹೋಗಿದ್ದಾನೆ ಎಂಬ ಸುದ್ದಿ ತಿಳಿಯಿತು. ಮರಳಿ ಬರುವಾಗ ಕುಮಟೆಯ ಬಸ್ ಸ್ಟ್ಯಾಂಡಿನಲ್ಲಿ ಸಾಬಿಯ ದರ್ಶನವಾಯ್ತು. ಏನು ಸಾಹೇಬ್ರು ಎಲ್ಲ ಮಾರಿ ಬಂದುಬಿಟ್ರಂತೆ ಎಂದು ಕೇಳಿದೆ. ನನ್ನ ನೋಡಿ ಆತನಿಗೆ ಖುಷಿಯಾಗಿದ್ದು ಅವನ ಮುಖದ ಭಾವದ ಮೇಲಿಂದಲೇ ಗೊತ್ತಾಗುತ್ತಿತ್ತು. ಅಲ್ಲೇ ಇದ್ದ ಚಾದಂಗಡಿಗೆ ಚಾ ಕುಡಿಯಲು ಕರೆದೆ. ಆತ ಬಂದ. ಈಗ ಕಾಲ ಬದ್ಲಾಗಿದೆ ಸ್ವಾಮಿ ಎಂದ. ಏನು, ಎಂಥ ಅಂದೆ ನಾನು. ಸಾಬಿ ಹೇಳಿದ್ದು ಕೇಳಿದ ಮೇಲೆ ಅದರಲ್ಲೂ ಒಂದು ಕತೆ ಇದೆ ಎಂದು ಭಾಸವಾಯ್ತು ನನಗೆ. ಒಂದು ದಿನ ಸಾಬಿ ಕೊಡಪಾನಕ್ಕೆ ಜಾಜು ಬಡಿದು ಹಾರೆಯ ಮೇಲೆ ಬೋರಲು ಹಾಕಿ ಸುತ್ತಿಗೆಯಿಂದ ಹಣಿತ ಹಾಕುತ್ತಿದ್ದಾಗ ನಮ್ಮೂರಿನ ಹೊಂತಕಾರಿ ಹುಡ್ಗ ಸುರೇಶ ಬಂದನಂತೆ. ಈ ಸುರೇಶ ನಮ್ಮೂರ ಶ್ರೀನಿವಾಸ ಸೆಟ್ಟರ ಮಗ. ಈ ಸಾಬಿಯ ಎದುರಿಗೇ ದೊಡ್ಡವನಾದ ಹುಡ್ಗ. ಇತ್ತೀಚೆಗೆ ಅವನು ಅದ್ಯಾವುದೋ ಸಂಘಟನೆಯಲ್ಲಿ ತೊಡಗಿಕೊಂಡಿದ್ದ. ಊರಲ್ಲಿ ಅದು ಇದು ಸಭೆ ನಡೆಸಿ ತಾನೂ ಸಣ್ಣ ಭಾಷಣ ಬಿಗಿದು ಯುವ ಮುಖಂಡ ಎನ್ನಿಸಿಕೊಂಡಿದ್ದ. ತನ್ನ ಮನೆಯ ಕೊಡಪಾನದ ತೂತು ಮುಚ್ಚಿಸಲಿಕ್ಕೆಂದು ಈ ಕಲಾಯಿ ಸಾಬಿಯ ಬಳಿಗೆ ಆತ ಬಂದಿದ್ದ. ಸಾಬಿ ಕುಲುಮೆಗೆ ಬೆಂಕಿ ಹೊತ್ತಿಸಿ ಕೊಡಪಾನ ಬಿಸಿ ಮಾಡುತ್ತಿದ್ದಂತೆ ಸುರೇಶ ಕೇಳಿದ, ‘ಏನ್ ಸಾಬಿ, ನೀನು ಏಕೆ ಹಿಂದೂ ಆಗಿಬಿಡಬಾರ್ದು. ನಮ್ಮ ಸಂಘದಿಂದ ಬೇರೆ ಧರ್ಮದವರನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಯೋಜನೆ ನಡೆಯುತ್ತಿದೆ. ಸ್ವಾಮೀಜಿಗಳ ಹತ್ತಿರ ಮಾತಾಡುತ್ತೇನೆ. ಏನಂತಿಯಾ?’ ಎಂದು ಕೇಳಿದನಂತೆ. ತನ್ನ ಕಣ್ಣೆದುರೇ ದೊಡ್ಡವನಾದ ಹುಡ್ಗ ಏಕಾಏಕಿ ಬಂದು ಹೀಗೆ ಕೇಳಿದಾಗ ಯಾಕೋ ಕಾಲ ಸರಿ ಇಲ್ಲ ಎಂದು ಊರು ಬಿಟ್ಟೆ ಎಂದ. ಸುರೇಶ ಹಾಗೆ ಕೇಳಿದಾಗ ಸಾಬಿಯ ಮುಖಚೆಹರೆ ಹೇಗೆ ಆಗಿದ್ದಿರಬಹುದು ಎಂಬುದನ್ನು ಕಲ್ಪಿಸಿಕೊಂಡೆ.