*ಎರಡು ಘಟನೆಗಳ ನಡುವೆ ಸಂಬಂಧ ಇರಲೇಬೇಕಿಲ್ಲ

ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಹೋಯಿತು. ಅದೇ ಕಾಕತಾಳೀಯ. ಕಾಗೆಯ ಭಾರವಾದರೂ ಎಷ್ಟು? ಟೊಂಗೆ ಮುರಿಯುವಷ್ಟು ಬಾಗಿತು ಎಂದರೆ ಕಾಗೆ ಹಾರಿಯೇ ಹೋಗುತ್ತದೆ. ಮುರಿಯುವುದಕ್ಕೆ ಅಲ್ಲಿ ಅವಕಾಶವೇ ಇರುವುದಿಲ್ಲ.
ಟೊಂಗೆ ಮುರಿಯುವುದಕ್ಕೆ ಕಾಗೆ ಕುಳಿತದ್ದೇ ಕಾರಣವಲ್ಲ. ಬೇರಾವುದೋ ಕಾರಣವಿರಬಹುದು. ಆದರೆ ಕಾಗೆ ಕುಳಿತೇ ಟೊಂಗೆ ಮುರಿಯಿತು ಎಂದು ಸಾಧಿಸುವುದು ತಪ್ಪು. ಸೇತುವೆಯ ಮೇಲೆ ಬಸ್ಸು ಹೋಗುತ್ತಿರುವಾಗಲೇ ಕೆಳಗೆ ನದಿಯಲ್ಲಿ ಚಲಿಸುತ್ತಿದ್ದ ದೋಣಿ ಮುಳುಗಿತು. ಈ ಎರಡೂ ಘಟನೆಗಳು ತನ್ನಷ್ಟಕ್ಕೆ ತಾನೇ ನಡೆದಿವೆ. ಬಸ್ಸು ಸೇತುವೆಯ ಮೇಲೆ ಹೋಗಿದ್ದೇ ದೋಣಿ ಮುಳುಗುವುದಕ್ಕೆ ಕಾರಣ ಎಂದು ವಾದಿಸುವುದು ಎಷ್ಟು ಸರಿ? ಇದು `ಕಾಕತಾಳೀಯ’ ಘಟನೆ ಅಷ್ಟೇ.