*ಶ್ರೀರಾಮನನ್ನೇ ಹಿಡಿದಿತ್ತು ಈ ಬಾಹು
ಹತ್ತು ಹಲವು ವಿಷಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವವರನ್ನು ಕಂಡಾಗ `ಅದೇನು ಕಬಂಧಬಾಹು ಅವನದು' ಎಂದು ಹೇಳುವುದಿದೆ. ನೈಸರ್ಗಿಕ ಪ್ರಕೋಪಗಳನ್ನು ಹೇಳುವಾಗಲೂ
ಕಾಲ ತನ್ನ ಕಬಂಧಬಾಹುವನ್ನು ಬಳಸಿ ಎಲ್ಲವನ್ನೂ ತನ್ನ ಒಡಲೊಳಗೆ ಸೆಳೆದುಕೊಂಡ’ ಎಂದು ವರ್ಣಿಸುವುದಿದೆ. ಸುನಾಮಿಯಂಥ ಅನಾಹುತವಾದಾಗ ಸಮುದ್ರನಿಗೆ ಕಬಂಧಬಾಹು'ವನ್ನು ಆರೋಪಿಸುವುದಿದೆ. ಯಾರೀತ ಕಬಂಧ? ಅದೇನು ಕಬಂಧಬಾಹು? ಕಬಂಧ ಎನ್ನುವವ ಒಬ್ಬ ರಾಕ್ಷಸ. ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಲಕ್ಷ್ಮಣನೊಡನೆ ಆಕೆಯನ್ನು ಹುಡುಕುತ್ತ ದಟ್ಟ ಕಾಡಿನಲ್ಲಿ ಅಲೆಯುತ್ತಿದ್ದಾಗ ಕಬಂಧ ತನ್ನ ಬಾಹುಗಳನ್ನು ಚಾಚಿ ರಾಮ ಮತ್ತು ಲಕ್ಷ್ಮಣರನ್ನು ತಿನ್ನಲು ಮುಂದಾಗುತ್ತಾನೆ. ರಾಮ ಮತ್ತು ಲಕ್ಷ್ಮಣರು ಆತನ ಬಾಹುಗಳನ್ನು ಕತ್ತರಿಸಿ ಆತನನ್ನು ಕೊಲ್ಲುತ್ತಾರೆ. ಈತನನ್ನು ಕುವೆಂಪು
ಅಕಶೇರು ಕಶ್ಮಲ ಸರೀಸೃಪ’ ಎಂದು ವರ್ಣಿಸಿದ್ದಾರೆ.
ಈತ ವಿಶ್ವಾವಸು ಎಂಬ ಗಂಧರ್ವ. ಶಾಪದಿಂದಾಗಿ ಈತನಿಗೆ ರಾಕ್ಷಸನ ಘೋರ ರೂಪ ಬಂದಿರುತ್ತದೆ. ತನ್ನ ಘೋರ ರೂಪದೊಂದಿಗೆ ಆತ ಅನಾಹುತವನ್ನು ಮಾಡುತ್ತಿದ್ದಾಗ ದೇವೇಂದ್ರನು ಆತನ ತಲೆಯ ಮೇಲೆ ವಜ್ರಾಯುಧದಿಂದ ಹೊಡೆಯುತ್ತಾನೆ. ಆಗ ಆತನ ತಲೆ ಮತ್ತು ಕಾಲು ಹೊಟ್ಟೆಯೊಳಗೆ ಸೇರಿಬಿಡುತ್ತದೆ. ಆತನ ಆಹಾರ ಗಳಿಕೆಗಾಗಿ, ಬಾಹುಗಳನ್ನು ಎಷ್ಟು ದೂರ ಬೇಕಾದರೂ ವಿಸ್ತರಿಸಬಹುದಾದ ಸೌಲಭ್ಯವನ್ನು ದೇವೇಂದ್ರ ಆತನಿಗೆ ಕರುಣಿಸುತ್ತಾನೆ.
ರಾಮನಿಂದಲೇ ಆತನಿಗೆ ಶಾಪ ವಿಮೋಚನೆ ಎಂಬ ಪರಿಹಾರ ಇರುತ್ತದೆ. ರಾಮನಿಂದ ಆತ ಸತ್ತಬಳಿಕ ತನ್ನ ನಿಜರೂಪವನ್ನು ತಳೆದು ರಾವಣ ಸೀತೆಯನ್ನು ಕದ್ದೊಯ್ದುದು, ಸುಗ್ರೀವ ನೆರವಾಗುತ್ತಾನೆ ಎಂಬ ವಿಷಯವನ್ನು ತಿಳಿಸುತ್ತಾನೆ.
`ಕಬಂಧಬಾಹು’ ಕರಾಳ ವಿಷಯಗಳಲ್ಲಷ್ಟೇ ಪ್ರಯೋಗವಾಗುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.