ಕನ್ನಡದ ಮೇಲೆ ಅನ್ಯ ಭಾಷೆಗಳು, ಕರ್ನಾಟಕದ ಮೇಲೆ ಕನ್ನಡೇತರ ದೊರೆಗಳು ಆಡಳಿತ ನಡೆಸುತ್ತ ಬಂದಿದ್ದರು. ‘ಭಾಷೆ’ ಎನ್ನುವುದೇ ಕನ್ನಡವಲ್ಲ. ‘ನುಡಿ’ ಎಂಬುದು ಕನ್ನಡ. ಕನ್ನಡ ನುಡಿಯ ಮೇಲೆ ಅನ್ಯ ಭಾಷೆಗಳ ಆಕ್ರಮಣವನ್ನುವಿರೋಧಿಸುವ ಪ್ರಯತ್ನ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ.

ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಪಣ ತೊಡುವ ಇನ್ನೊಂದು ಮುಹೂರ್ತ ನಿಗದಿಯಾಗಿದೆ. ಅಯ್ಯೋ, ಈ ವಾಕ್ಯವನ್ನೂ ಇಡಿಯಾಗಿ ಕನ್ನಡದಲ್ಲೇ ಹೇಳುವುದಕ್ಕೆ ಆಗುತ್ತಿಲ್ಲವಲ್ಲ. ಈ ಮುಹೂರ್ತ ಎಲ್ಲಿಂದ ಬಂತು? ಮುಹೂರ್ತಕ್ಕೆ ಕನ್ನಡದಲ್ಲಿಯೇ ಪದ ಇಲ್ಲವೆ? ಗಳಿಗೆಯೆ, ಕ್ಷಣವೆ, ಕಾಲವೆ.. ಓಹೋ! ಇವು ಒಂದೂ ಕನ್ನಡವಲ್ಲವಲ್ಲ! ಸಮಯವೆ, ಗಂಟೆಯೆ.. ಇವೂ ಕನ್ನಡವಲ್ಲವಲ್ಲ!.. ಇದಕ್ಕೆ ಕನ್ನಡ ಪದವೇನಾದರೂ ದೊರೆತೀತೇ ಎಂದು ಕನ್ನಡ ನಿಘಂಟುವನ್ನು ತೆಗೆದು ನೋಡಿದೆ. ಅದರಲ್ಲಿ ಕೊಟ್ಟ ಮೊದಲ ಅರ್ಥ ‘ಸ್ವಲ್ಪ ಹೊತ್ತು’. ಈ ಸ್ವಲ್ಪ ಕೂಡ ಅಲ್ಪ- ಸಂಸ್ಕೃತಪದ-ದ ಜೋಡಿ ಪದ. ಹೊತ್ತು ಮಾತ್ರ ಕನ್ನಡ. ಇದಕ್ಕೆ ಕೊಟ್ಟ ಇನ್ನೊಂದು ಅರ್ಥ ಅಲ್ಪ ಸಮಯ ಎಂಬುದು. ಮದುವೆ ಮುಂತಾದ ಮಂಗಳ ಕಾರ್ಯಗಳಿಗಾಗಿ ನಿಶ್ಚಯಿಸುವ ಶುಭ ಗಳಿಗೆ ಮತ್ತು ಆ ಗಳಿಗೆಯಲ್ಲಿ ನಡೆಯುವ ಶುಭ ಕಾರ್ಯ, ದಿನದ ಮೂವತ್ತನೆಯ ಒಂದು ಭಾಗ, ನಲ್ವತ್ತೆಂಟು ನಿಮಿಷಗಳ ಅವಧಿ, ನೆಲೆಸುವುದು, ಆಸೀನಗೊಳ್ಳುವುದು ಎಂಬ ಅರ್ಥಗಳೂ ಇದಕ್ಕೆ ಇವೆ. ಇದರಲ್ಲಿ ಅಚ್ಚ ಕನ್ನಡ ಪದಗಳು ಎಷ್ಟು ಎಂಬುದನ್ನು ನೀವೇ ನೋಡಿ.

ಮುಹೂರ್ತದ ಕೆಳಗಿನ ಪದ ನೋಡಿದೆ. ಅದು ಮುಳ್ (ನಾ). ಇದಕ್ಕೆ ಕಂಟಕ ಎಂಬ ಸಂಸ್ಕೃತದ ಅರ್ಥವನ್ನು ನೀಡಲಾಗಿದೆ. ಮುಳಬಾಗಿಲನ್ನು ಕಂಟಕದ್ವಾರ ಎಂದು ಬದಲಾಯಿಸಿದ ಕಾಲವೊಂದಿತ್ತು. ಇದನ್ನೆಲ್ಲ ನೋಡಿದ ಮೇಲೆ ಕನ್ನಡ ನಿಘಂಟುವಿನಲ್ಲಿ ಶೇಕಡ 80 ಭಾಗ ಶಬ್ದಗಳು ಕನ್ನಡೇತರ ತುಂಬಿವೆ ಎಂಬುದು ಅರ್ಥವಾಯಿತು. ಅದನ್ನು ನಾವು ಕನ್ನಡ ನಿಘಂಟು ಎಂದು ಒಪ್ಪಿಕೊಳ್ಳುತ್ತೇವೆ ಮತ್ತು ಬಳಸುತ್ತೇವೆ.

ಇದು ನಮ್ಮ ಕನ್ನಡದ ಸ್ಥಿತಿ. ಕನ್ನಡದ ಮೇಲೆ ಅನ್ಯ ಭಾಷೆಗಳು, ಕರ್ನಾಟಕದ ಮೇಲೆ ಕನ್ನಡೇತರ ದೊರೆಗಳು ಆಡಳಿತ ನಡೆಸುತ್ತ ಬಂದಿದ್ದರು. ‘ಭಾಷೆ’ ಎನ್ನುವುದೇ ಕನ್ನಡವಲ್ಲ. ‘ನುಡಿ’ ಎಂಬುದು ಕನ್ನಡ. ಕನ್ನಡ ನುಡಿಯ ಮೇಲೆ ಅನ್ಯ ಭಾಷೆಗಳ ಆಕ್ರಮಣವನ್ನು ವಿರೋಧಿಸುವ ಪ್ರಯತ್ನ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ. ಆಂಡಯ್ಯ ಕವಿಯು ‘ಕಬ್ಬಿಗರ ಕಾವ’ದಲ್ಲಿ ಕನ್ನಡ ಪದಗಳನ್ನಷ್ಟೇ ಬಳಸುವುದಾಗಿ ಶಪಥ ಮಾಡಿದ. ಆದರೆ ಅದೆಷ್ಟೋ ತತ್ಸಮ, ತದ್ಭವ ಪದಗಳನ್ನು ಅವನು ಬಳಸಿದ. ಭಾಷೆಯಲ್ಲಿ ಕೊಡುವ ಮತ್ತು ಕೊಳ್ಳುವ ಪ್ರಕ್ರಿಯೆ ಸತತ ನಡೆಯುತ್ತ ಬಂದಿದೆ. ಅದು ಭಾಷೆಯ ಸಹಜ ಗುಣ. ಆದರೆ ಕನ್ನಡದ ಮೇಲೆ ಪ್ರೀತಿ ಇರುವವರು ಉದ್ದೇಶಪೂರ್ವಕವಾಗಿ ಹೆಚ್ಚುಹೆಚ್ಚು ಕನ್ನಡ ಪದಗಳನ್ನು ಬಳಸಬೇಕು.

ಹಿರಿಯ ಸಾಹಿತಿಗಳು ನಿತ್ಯ ಜೀವನದಲ್ಲಿ ಕನ್ನಡ ಬಳಕೆಯನ್ನು ಹೇಗೆ ನಾವು ನಿರ್ಲಕ್ಷಿಸುತ್ತಿದ್ದೇವೆ ಎಂಬುದರ ಕುರಿತು ಅರಿವು ಮೂಡಿಸಲು ಪ್ರವಾಸ ಮಾಡಿ ಭಾಷಣಗಳನ್ನು ಮಾಡುತ್ತಿದ್ದರು. ನಾನು ಚಿಕ್ಕವನಿದ್ದಾಗ ಇಬ್ಬರು ಸಾಹಿತಿಗಳು ಈ ರೀತಿ ಕನ್ನಡ ಪ್ರಚಾರ ಪ್ರವಾಸ ಮಾಡಿದ್ದನ್ನು ನೋಡಿದ್ದೇನೆ. ಅವರ ಭಾಷಣವನ್ನು ಆಲಿಸಿದ್ದೇನೆ. ಒಬ್ಬರು ಕೃಷ್ಣಮೂರ್ತಿ ಪುರಾಣಿಕರು, ಇನ್ನೊಬ್ಬರು ಹಾ.ಮಾ.ನಾಯಕರು. ಹಾ.ಮಾ.ನಾಯಕರುಹೊನ್ನಾವರಕ್ಕೆ ಆಗಮಿಸಿದ್ದರು. ಅಲ್ಲಿ ಅವರ ಭಾಷಣವನ್ನು ಏರ್ಪಡಿಸಲಾಗಿತ್ತು. ‘ನಿತ್ಯ ಜೀವನದಲ್ಲಿ ಕನ್ನಡ’ ಎಂಬುದು ಅವರ ವಿಷಯ. ಸೂರ್ಯ ಕನ್ನಡ ಅಲ್ಲ, ನೇಸರ ಕನ್ನಡ. ಚಂದ್ರ ಕನ್ನಡವಲ್ಲ, ತಿಂಗಳು ಕನ್ನಡ. ದಿಕ್ಕುಗಳು ಪೂರ್ವ ಪಶ್ಚಿಮ, ಉತ್ತರ, ದಕ್ಷಿಣ ನಮ್ಮವಲ್ಲ, ಮೂಡಣ, ಪಡುವಣ, ಬಡಗಣ, ತೆಂಕಣ ಕನ್ನಡ ಎಂದೆಲ್ಲ ಹೇಳಿದರು. ರಸ್ತೆಯ ಬದಿಯ ಮೈಲಿ ಕಲ್ಲುಗಳ ಮೇಲೆಯೂ ಕನ್ನಡ ಬರೆಯುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿಸಿದೆ ಎಂದು ಟೀಕಿಸಿದರು. ಹಾಮಾನಾ ಅದ್ಭುತ ಭಾಷಣಕಾರ. ಕೇಳಿದವರೆಲ್ಲ ಅಹುದಹುದೆಂದು ತಲೆದೂಗಿದರು. ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸುವ ಸರದಿ ಕವಿ ಜಿ.ಎಸ್.ಅವಧಾನಿ ಅವರದು. ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು ಕೊನೆಯಲ್ಲಿ ಈ ‘ಹಾಲ್್’ಅನ್ನು ಸಭೆಗೆ ಕೊಟ್ಟ ಶಾಲೆಯ ಆಡಳಿತ ಮಂಡಳಿಗೆ ಕೃತಜ್ಞತೆ ಹೇಳಿದರು. ಹಾಲಿನಲ್ಲಿ ಸೇರಿದವರೆಲ್ಲ ನಕ್ಕುಬಿಟ್ಟರು. ಅವಧಾನಿಯವರ ವ್ಯಂಗ್ಯ ಅವರಿಗೆ ಅರ್ಥವಾಗಿತ್ತು. ಹಾಲ್್ಗೆ ಕನ್ನಡದಲ್ಲಿ ಯಾವ ಶಬ್ದವಿದೆ ಹೇಳಿ?

1911ರಲ್ಲಿ ಧಾರವಾಡದಲ್ಲಿ ಬಿ.ಎಂ.ಶ್ರೀಕಂಠಯ್ಯನವರು ‘ಕನ್ನಡ ಮಾತು ತಲೆ ಎತ್ತುವ ಬಗೆ’ ಕುರಿತು ಸುದೀರ್ಘವಾದ ಭಾಷಣ ಮಾಡಿದ್ದರು. ಸರಿಯಾಗಿ ನೂರು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿ.ವೆಂಕಟಸುಬ್ಬಯ್ಯನವರೂ ಕನ್ನಡ ನುಡಿಯನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಮಾತನ್ನು ಹೇಳಿದರು. ನಾಡು ನುಡಿಯ ಬಗೆಗಿನ ಕಾಳಜಿ ನಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ನೋಡಿದಾಗ ಗೊತ್ತಾಗುತ್ತದೆ.

1907ರ ‘ಶ್ರೀಕೃಷ್ಣ ಸೂಕ್ತಿ’ ಪತ್ರಿಕೆಯಲ್ಲಿ ನಮ್ಮ ದೇಶ ಭಾಷೆಗಳ ಈಗಿನ ದುಸ್ಥಿತಿಯನ್ನು ಎಂ.ಡಿ ಅಳಸಿಂಗಾಚಾರ್ಯರು ಮನಮುಟ್ಟುವ ಹಾಗೆ ವಿವರಿಸಿದ್ದಾರೆ. ‘ಒಂದೆರಡು ಇಂಗ್ಲಿಷು ಶಬ್ದಗಳನ್ನು ತಿಳಿದುಕೊಂಡ ಚಿಕ್ಕ ಹುಡುಗರು ಕೂಡ ತಾವು ಮಾತನಾಡುವಾಗ, ತಮಗೆ ತಿಳಿದಿರುವಷ್ಟು ಪದಗಳನ್ನು ಸೇರಿಸಿ ಆಡುವುದಕ್ಕೆ ಪ್ರಯತ್ನಿಸುವರು. ನಮ್ಮ ಭಾಷೆಯನ್ನು ಆಡುವುದು ಕೂಡ ಅಪಮಾನಕರವೆಂದು ಕೆಲವರು ಮನಸ್ಸಿನಲ್ಲಿ ಭಾವಿಸಿದ್ದಾರೆ’ ಎಂದು ವ್ಯಥೆ ಪಡುವ ಅವರು, ‘ತಮ್ಮ ಭಾಷೆಯನ್ನು ಅಪ್ರಯೋಜಕವೆಂದು ತಿರಸ್ಕರಿಸಿ ಅನಾದರಿಸುವವರು ತಮ್ಮನ್ನು ತಾವೇ ಅಪ್ರಯೋಜಕರು ಎಂದಂತೆ ಅಲ್ಲವೆ?’ ಎಂದು ಪ್ರಶ್ನಿಸುತ್ತಾರೆ.

ಆ ಕಾಲದ ಸಾಹಿತ್ಯ ಕೃತಿಗಳಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಮಂಗಳೂರು ಭಾಗದಲ್ಲಿ ಇಂಗ್ಲಿಷ್ ವಿರುದ್ಧವಿದ್ದರೆ ಧಾರವಾಡ ಭಾಗದಲ್ಲಿ ಮರಾಠಿಯ ವಿರುದ್ಧ, ಮೈಸೂರು ಭಾಗದಲ್ಲಿ ಪಾರಸಿಕ ಭಾಷೆಯ ವಿರುದ್ಧ ವ್ಯಕ್ತವಾಗಿದೆ. ಎಂ.ಎಸ್.ಪುಟ್ಟಣ್ಣನವರ ‘ಮುಸುಕು ತೆಗೆಯೇ ಮಾಯಾಂಗನೆ’ ಕಾದಂಬರಿಯಲ್ಲಿ ಮೈಸೂರು ಅರಮನೆಯ ಆಡಳಿತದ ಚಿತ್ರಣದಲ್ಲಿ ಈ ಪಾರಸಿಕ ಭಾಷೆಯ ಬಗೆಗಿದ್ದ ಅಸಹನೆ ವ್ಯಕ್ತವಾಗಿದೆ.

1908ರಲ್ಲಿ ಪ್ರಕಟವಾದ ಕೆರೂರು ವಾಸುದೇವಾಚಾರ್ಯರ ‘ಇಂದಿರಾ’ ಕಾದಂಬರಿಯಲ್ಲಿ ಕನ್ನಡ ನುಡಿಯ ಬೆಳವಣಿಗೆಯ ವಿಚಾರದಲ್ಲಿ ಕೆಲವು ನಿರ್ದಿಷ್ಟ ವಿಚಾರಗಳು ವ್ಯಕ್ತವಾಗಿವೆ. ಕಾದಂಬರಿಯ ಪಾತ್ರಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಬಗ್ಗೆ ಚರ್ಚಿಸುತ್ತವೆ. ಭಾಷೆಯು ಜನರಿಂದ ದೂರವಾದರೆ ಅದಕ್ಕೊದಗುವ ಅಪಾಯದ ಬಗ್ಗೆ ಕೆರೂರರು ಎಚ್ಚರಿಕೆಯನ್ನು ನೀಡುತ್ತಾರೆ. ಕೆರೂರರ ‘ರಾಜಹಂಸ’

ಪತ್ರಿಕೆಯು ಭಾಷೆಯ ಪ್ರಾಂತಭೇದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’ಯಲ್ಲಿಯೂ ಕನ್ನಡ ಇಂಗ್ಲಿಷ್ ಸಂಘರ್ಷದ ವಿಚಾರವಿದೆ.

1926ರಲ್ಲಿಯೇ ದ.ರಾ.ಬೇಂದ್ರೆಯವರು ಮತ್ತು ಬೆಟಗೇರಿ ಕಷ್ಣಶರ್ಮರು ವಿದ್ಯಾವರ್ಧಕ ಸಂಘದ ಮೂಲಕ ನವರಾತ್ರಿ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುವಂತೆ ಮಾಡಿದ್ದರು. ವಿದ್ಯಾವರ್ಧಕ ಸಂಘದ ಸಭೆಯಲ್ಲಿ ನಾಡಿನ ಏಕೀಕರಣಕ್ಕೆ ಸಂಬಂಧಿಸಿದಂತೆ ಇದಕ್ಕಿಂತ ಒಂಬತ್ತು ವರ್ಷಗಳ ಹಿಂದೆಯೇ ಗೊತ್ತುವಳಿಯೊಂದನ್ನು ಸ್ವೀಕರಿಸಿದ್ದು ‘ವಾಗ್ಭೂಷಣ’ದಲ್ಲಿ ದಾಖಲಾಗಿದೆ. 7-10-1917ರಂದು ನಡೆದ ಸಭೆಯ ಗೊತ್ತುವಳಿ ಈ ರೀತಿ ಇದೆ: ‘ಬ್ರಿಟಿಷ್ ಅಧಿಕಾರಕ್ಕೆ ಒಳಗಾದ ಎಲ್ಲ ಕನ್ನಡ ಊರು, ತಾಲ್ಲೂಕು, ಜಿಲ್ಲೆಗಳನ್ನು ಒಟ್ಟುಗೂಡಿಸಿ ಒಂದು ರಾಜಕೀಯ ವಿಭಾಗವನ್ನು ಮಾಡಿ ಅದಕ್ಕೆಕರ್ನಾಟಕ ಪ್ರಾಂತವೆಂದು ಕರೆಯುವ ಬಗ್ಗೆ ಸರ್ಕಾರಕ್ಕೆ ಬಿನ್ನಹ ಮಾಡಬೇಕು. ಉದಾಹರಣೆಗೆ ಸೊಲ್ಲಾಪುರ ಜಿಲ್ಲೆಯ ಕೆಲವು ಭಾಗ ಕನ್ನಡವಿರುತ್ತದೆ. ಮದ್ರಾಸ್ ಇಲಾಖೆಯಲ್ಲಿ ಬಳ್ಳಾರಿ, ದಕ್ಷಿಣ ಕನ್ನಡ ಈ ಜಿಲ್ಲೆಗಳು ಕೂಡ ಕನ್ನಡವಿದ್ದು ಕಡಪಾ, ಕರ್ನೂಲು, ಅನಂತಪುರ ಮುಂತಾದ ಜಿಲ್ಲೆಗಳ ಎಷ್ಟೋ ಹಳ್ಳಿಗಳಲ್ಲಿ ತಾಲೂಕುಗಳೂ ಕನ್ನಡ ಇರುತ್ತವೆ. ಇವುಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕರ್ನಾಟಕ ಇಲಾಖೆ ಅಥವಾ ಪ್ರಾಂತವೆಂಬ ರಾಜಕೀಯ ವಿಭಾಗವನ್ನು ಮಾಡಿದರೆ ಕನ್ನಡಿಗರ ಐಕ್ಯಕ್ಕೂ ಹಿತಕ್ಕೂ ಬೆಳವಣಿಗೆಗೂ ಅನುಕೂಲವಾಗುವುದು.’

1930ರಲ್ಲಿ ಮೈಸೂರಿನಲ್ಲಿ ನಡೆದ 16ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನದಿಂದ ಆಲೂರು ವೆಂಕಟರಾಯರು ನಾಡಿನ ಏಕೀಕರಣಕ್ಕೆ ನೀಡಿದ ಕರೆ ಮಹತ್ವದ್ದಾಗಿದೆ. ‘ಚತುರ್ಮುಖವಾದ ಕರ್ನಾಟಕವು ಏಕಮುಖವಾಗಬೇಕಾಗಿದೆ.. ಆದುದರಿಂದ ಕನ್ನಡಿಗರೇ ಏಳಿರಿ,

ಅಖಿಲ ಕರ್ನಾಟಕ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಕ್ಕೋಸ್ಕರ ಟೊಂಕ ಕಟ್ಟಿರಿ….’ ಎಂದು ಕರೆ ನೀಡುತ್ತಾರೆ. ಉತ್ತರ ಕರ್ನಾಟಕದ ಕನ್ನಡ ಮುಂದಾಳುವೊಬ್ಬರು ದಕ್ಷಿಣದ ಮೈಸೂರಿಗೆ ಬಂದು ಏಕೀಕರಣದ ಬಗೆಗಿನ ಉತ್ತರ ಕರ್ನಾಟಕದ ಬದ್ಧತೆಯನ್ನು ಸಾರುತ್ತಾರೆ. ಕನ್ನಡ ನಾಡನ್ನು ಬೇಂದ್ರೆಯವರೂ ಪರಮೇಶ್ವರನ ಪಂಚಮುಖಕ್ಕೆ ಹೋಲಿಸುವರು.

ಕುವೆಂಪುರವರ ಕರ್ನಾಟಕ ಏಕೀಕರಣದ ಕನಸು ಎಷ್ಟು ತೀವ್ರವಾದುದೆಂದು ಗಮನಿಸಿ-

ಕನ್ನಡ ಜನರೆಲ್ಲರ ಮೇಲಾಣೆ!

ಕನ್ನಡ ನಾಡೊಂದಾಗದೆ ಮಾಣೆ!

ತೊಡು ದೀಕ್ಷೆಯ! ಇಡು ರಕ್ಷೆಯ!

ಕಂಕಣ ಕಟ್ಟಿಂದೇ!

ಕನ್ನಡ ನಾಡೊಂದೇ!

ಇನ್ನೆಂದೂ ತಾನೊಂದೇ!

ಇಂಥ ತೀವ್ರವಾದ ಬಯಕೆಯೇ 11-10-1955ರ ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯನ್ನು ಮಾಸ್ತಿ, ಕುವೆಂಪು, ಅ.ನ.ಕೃ., ತ.ರಾ.ಸು. ಮೊದಲಾದವರು ತಿರಸ್ಕರಿಸುವುದಕ್ಕೆ ಕಾರಣವಾಯಿತು. ಕನ್ನಡ ನುಡಿ ಪ್ರದೇಶಗಳೆಲ್ಲವೂ ಅದರಲ್ಲಿ ಸೇರಿರಲಿಲ್ಲ ಎಂಬುದೇ ಅವರ ಆಕ್ರೋಶವಾಗಿತ್ತು.

ಬೆಂಗಳೂರಿನಲ್ಲಿ ಅ.ನ.ಕೃಷ್ಣರಾಯರು ಕನ್ನಡ ನುಡಿ ರಕ್ಷಣೆಯ ಬೆಂಗಾವಲು ಭಟರಾಗಿದ್ದರು. ಏಕೀಕರಣಕ್ಕಾಗಿಯೂ ಅವರ ಹೋರಾಟ ದಾಖಲಾರ್ಹವಾಗಿತ್ತು. ಪ್ರಚಂಡ ವಾಗ್ಮಿತೆ

ಅವರ ಆಸ್ತಿಯಾಗಿತ್ತು. ಕನ್ನಡ ನೆಲ ಇರುವ ಮೂಲೆಮೂಲೆಗೂ ಅವರು ತೆರಳಿ ಏಕೀಕರಣದ ಭಾಷಣ ಮಾಡುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಅಂದಾನಪ್ಪ ದೊಡ್ಡಮೇಟಿ ದೊಡ್ಡ ಹೆಸರು. ಏಕೀಕರಣಕ್ಕೆ ಶ್ರಮಿಸಿದವರ ಪಟ್ಟಿಯಲ್ಲಿ ಅವರ ಹೆಸರು ಮೊದಲ ಸಾಲಿನಲ್ಲಿಯೇ ಬರಬೇಕು. 1-4-1947ರಂದು ಅವರು ಮುಂಬಯಿ ಪ್ರಾಂತ ಶಾಸನ ಸಭೆಯಲ್ಲಿ ಏಕೀಕರಣ ಕುರಿತು ಗೊತ್ತುವಳಿಯನ್ನು ಮಂಡಿಸಿದ್ದರು.

ಸಹಸ್ರಾರು ಜನರ ಶ್ರಮದ ಫಲವಾಗಿ ಒಂದು ಭಾಷೆಯನ್ನು ಆಡುವ ಜನ ಒಂದು ರಾಜಕೀಯ ಆಡಳಿತದ ಕೆಳಗೆ ಬಂದಿದ್ದೇವೆ. ರಾಜಕೀಯ ಏಕೀಕರಣಕ್ಕೆ ಪ್ರೇರಕವಾದ ಭಾಷೆಯನ್ನು ನಾವು ಎಚ್ಚರವಿಟ್ಟು ಪೋಷಿಸಬೇಕು.

ಕನ್ನಡ ಬೇರೆಯಲ್ಲ, ಕರ್ನಾಟಕ ಬೇರೆಯಲ್ಲ ಎಂಬ ಅವಿನಾಭಾವ ಪ್ರಜ್ಞೆಯೊಂದಿಗೆ ನಮ್ಮ ನಿತ್ಯದ ವ್ಯವಹಾರ ನಡೆಯಬೇಕು. ಕನ್ನಡತನವೇ ನಮ್ಮ ಬದುಕಿನ ಮಂತ್ರವಾಗಬೇಕು. ಹೊಸ ಆಹ್ವಾನಗಳಿಗೆ ಭಾಷೆಯನ್ನು ಸಜ್ಜುಗೊಳಿಸುವ ಹೊಣೆ ನಮ್ಮ ಮೇಲಿದೆ. ಆರು ಕೋಟಿ ಜನರು ಮಾತನಾಡುವ ಭಾಷೆ ಯಾವುದೇ ಕಾರಣಕ್ಕೂ ಗೌಣವಲ್ಲ. ಆಧುನಿಕ ಕಂಪ್ಯೂಟರ್ ತಂತ್ರಾಂಶಗಳನ್ನು ಭಾಷೆಗೆ ಹೊಂದಿಸಬೇಕು. ಕನ್ನಡಕ್ಕೆ ಅನ್ಯ ನುಡಿಯ ಪದಗಳು ಬಂದರೆ ಬರಲಿ.

ಅವಕ್ಕೆ ಕನ್ನಡ ದೀಕ್ಷೆ ನೀಡೋಣ. ಅತಿ ಮಡಿವಂತಿಕೆಯಿಂದ ಭಾಷೆ ಬೆಳೆಯದು. ಬದಲಾಗುವುದೇ ಜೀವಂತಿಕೆಯ ಲಕ್ಷಣ. ಎಫ್.ಎಂ. ಕನ್ನಡ ಜನರ ಕನ್ನಡವಾಗುವುದು ಬೇಡ.ನುಡಿಗಾಗಿ ನಾಡಿಗಾಗಿ ಸಂಕಲ್ಪ ತೊಡುವ ಸರದಿ ನಿಮ್ಮದು ಈಗ.