*ವಿಶ್ವಾಸಕ್ಕೆ ಬಗೆಯುವ ದ್ರೋಹ

ಯಾರೋ ಅಪರಿಚಿತ ಬರುತ್ತಾನೆ. ನಿಮ್ಮ ಪರಿಚಯ ಮಾಡಿಕೊಳ್ಳುತ್ತಾನೆ. ನಿಮ್ಮ ಆಶ್ರಯ ಪಡೆಯುತ್ತಾನೆ. ವಿಶ್ವಾಸಿಕನಂತೆ ಇರುತ್ತಾನೆ. ಒಂದು ದಿನ ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದು ನಿಮ್ಮ ಅಮೂಲ್ಯ ವಸ್ತುವನ್ನು ಎತ್ತಿಕೊಂಡು ಪರಾರಿಯಾಗುತ್ತಾನೆ. ಆಗ ನಿಮ್ಮ ಬಾಯಿಂದ `ಉಂಡೂ ಹೋದ ಕೊಂಡೂ ಹೋದ’ ಎಂಬ ಮಾತು ಬರುತ್ತದೆ.
ಯಾವುದೋ ಊರಿನಲ್ಲಿ ಅಧಿಕ ಬಡ್ಡಿದರದ ಆಮಿಷ ಒಡ್ಡುವ ಹಣಕಾಸು ಸಂಸ್ಥೆ ಹಣ ಸಂಗ್ರಹಿಸಿ ನಾಪತ್ತೆಯಾಗುವುದು, ಇಂದು ಹಣ ನೀಡಿ ಹದಿನೈದು ದಿನದ ನಂತರ ಸಾಮಾನುಗಳನ್ನು ಅರ್ಧ ಬೆಲೆಗೆ ತೆಗೆದುಕೊಂಡು ಹೋಗಿ ಎಂದು ಪ್ರಚಾರ ಮಾಡಿ ರಾತ್ರೋರಾತ್ರಿ ನಾಪತ್ತೆಯಾಗುವವರು ಇವರನ್ನೆಲ್ಲ ನೋಡಿದಾಗಲೂ ಉಂಡೂ ಹೋದ ಕೊಂಡೂ ಹೋದ ಎಂದು ಹೇಳುತ್ತಾರೆ.
ಮನೆಗೆ ಅಪರಿಚಿತನಾಗಿ ಬಂದು ಮನೆ ಮಗಳನ್ನೇ ಹಾರಿಸಿಕೊಂಡು ಹೋಗುವ ಮಹಾನುಭಾವನನ್ನು ನೋಡಿದಾಗಲೂ ಇದೇ ಮಾತು ಬರುತ್ತದೆ.
ಇಲ್ಲೆಲ್ಲ ನಡೆಯುವುದು ವಿಶ್ವಾಸಕ್ಕೆ ಬಗೆಯುವ ದ್ರೋಹ. ಯಾರ ಮೇಲೆ ವಿಶ್ವಾಸ ಇರಿಸಬೇಕು ಎಂಬುದನ್ನು ಸಾವಿರ ಸಲ ಯೋಚಿಸಿ ನಿರ್ಧರಿಸಬೇಕು. ಇಲ್ಲದಿದ್ದರೆ ಉಂಡ ಮನೆಗಳ ಗಳ ಎಣಿಸುವ ಜನರಿಗೆ ಆತಿಥ್ಯ ನೀಡಿದಂತಾಗುತ್ತದೆ.