*ಪ್ರಾಮಾಣಿಕತೆಗೆ ಪುರಾವೆ ಒದಗಿಸುವ ಸ್ಥಿತಿ ಬರಬಾರದು
ಈಚಲುಮರ ಯಾವುದಕ್ಕೆ ಪ್ರಸಿದ್ಧ ಹೇಳಿ? ಈ ಮರದಿಂದ ಶೇಂದಿಯನ್ನು ಇಳಿಸುತ್ತಾರೆ. ಈ ಮರದ ಬುಡದಲ್ಲಿ ಕುಳಿತು ಏನನ್ನಾದರೂ ಕುಡಿದರೆ ಅದು ಶೇಂದಿಯಲ್ಲದೆ ಮತ್ತೇನು ಇದ್ದೀತು? ಇದು ಸಾಮಾನ್ಯವಾದ ತರ್ಕ. ಈ ರೀತಿ ತರ್ಕ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ.
ಮಜ್ಜಿಗೆಯನ್ನು ಮಾಡುವುದು ಮನೆಯಲ್ಲಿ ತಾನೆ? ಮನೆಯಲ್ಲಿ ಮಜ್ಜಿಗೆ ಕುಡಿಯದೆ ಈಚಲುಮರದ ಬುಡಕ್ಕೆ ಹೋಗಿ ಏಕೆ ಕುಡಿಯಬೇಕು?
ನಾವು ಯಾವುದೇ ಕೆಲಸವನ್ನು ಮಾಡಿದರೂ ಅದು ಪಾರದರ್ಶಕವಾಗಿರಬೇಕು. ಯಾರೂ ನಮ್ಮನ್ನು ಅನುಮಾನಿಸುವುದಕ್ಕೆ ಅವಕಾಶವನ್ನು ನೀಡಬಾರದು. ಅನುಮಾನ ಬರುವ ರೀತಿಯಲ್ಲಿ ನಮ್ಮ ವರ್ತನೆ ಇದ್ದರೆ ಅದು ನಮ್ಮ ತಪ್ಪೇ ಹೊರತು ಅನುಮಾನಿಸುವವರ ತಪ್ಪಲ್ಲ.
ಇದು ಸಾರ್ವಜನಿಕ ಬದುಕಿನಲ್ಲಿ ಇರುವವರು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಾವಿರ ಕಣ್ಣುಗಳು ಅವರನ್ನು ನೋಡುತ್ತಿರುತ್ತವೆ. ಅವರ ವಿರೋಧಿಗಳಂತೂ ಕಾಲೆಳೆಯುವ ಯಾವ ಅವಕಾಶವನ್ನೂ ಬಿಡುವುದಿಲ್ಲ. ತಮ್ಮ ಪ್ರಾಮಾಣಿಕತೆಯನ್ನು ಶಂಕಿಸುವ ಅಥವಾ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾಗಿ ಬರುವಂಥ ಕೆಲಸಗಳನ್ನು ಯಾರೂ ಮಾಡಬಾರದು ಎನ್ನುವುದಕ್ಕೆ ಈ ಮಾತನ್ನು ಹೇಳುತ್ತಾರೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.