ಬುದುವಂತ ಕಂಬಳಿಕೊಪ್ಪೆ ಝಾಡಿಸಿ ಮಾಡಿಗೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟ. `ನಿನ್ನೆ ರಾತ್ರಿ ಹಿಡ್ಕಂಡ ಮಳೆ ಇವತ್ತು ಇಷ್ಟೊತ್ತಾದ್ರೂ ಹನಿ ಕಡಿಲಿಲ್ಲ. ಆಕಾಶಕ್ಕೆ ತೂತು ಬಿದ್ದಂಗೆ ಹೊಯ್ದೇ ಹೊಯ್ಯುಕೆ ಹತ್ತಿದೆ’. ಇಂಥದ್ರಲ್ಲಿ ಸಣ್ಣಯ್ಯ ಯಾವ ಕೆಲಸ ಇಟ್ಕೊಂಡು ತನಗೆ ಬರೂಕೆ ಹೇಳಿದ್ದಾರೋ ಅಂದುಕೊಳ್ಳುತ್ತ ಸಣ್ಣಯ್ಯನವರ ಮನೆ ಹೊಸ್ತಿಲು ತುಳಿದ. ಸಣ್ಣಯ್ಯ ಕವಳಕ್ಕೆ ನೀರಡಿಕೆ ಸುಲಿದು ಕೆರಿಸುತ್ತ ಕುಳಿತಿದ್ದರು. ಬುದುವಂತನನ್ನು ನೋಡಿ, ಬಂದ್ಯಾ, ಬಾ ಬಾ, ಈ ಮಳೆ ನೋಡಿ ಮನೆಯಿಂದ ಹೊರಗೆ ಬೀಳುತ್ತಿಯೋ ಇಲ್ಲವೋ ಅಂದ್ಕಂಡಿದ್ದೆ ಅಂದರು.
ಅಲ್ಲ, ಈ ಮಳೆಯಲ್ಲೂ ಅದೆಂಥ ಜಂಬ್ರ ಇಟ್ಕಂಡಿದ್ದೀರಿ? ಕೆಲ್ಸ ಏನು ಮಾಡೂದು? ಕಂಬಳಿ ಕೊಪ್ಪೆ ಹಾಕ್ಕೊಂಡು ಕೆಲ್ಸ ಮಾಡೂಕೆ ಆಗ್ತದಾ ಎಂದು ಗೊಣಗಿದ.
ಮೊದಲ ಮಳೆಗೆ ಗುಡ್ಡದ ಹನಾಲು ತಿರುಗಿಸದಿದ್ದರೆ ಹೇಗೆ? ಎಲ್ಲೆಂದರಲ್ಲಿ ಹಳ್ಳ ಹರಿದುಬಿಡುವುದಿಲ್ಲವೆ? ಗುಡ್ಡ ಕುಸಿಯುವ ಸಂಭವ ಇಲ್ಲವೆ? ಸಣ್ಣಯ್ಯನ ಚಿಂತೆ ಬುದುವಂತಗೆ ಹೇಗೆ ಅರ್ಥವಾಗಬೇಕು? ಗಾಳಿಗೆ ಕಿತ್ತು ಬೀಳುವ ಬಾಳೆಯ ಗಿಡಗಳ ಬುಡಕ್ಕೆಲ್ಲ ಮಣ್ಣು ಹಾಕಿ ಗುಡಿಸಿಕೊಡಬೇಡವೆ? ಮನೆಯ ಸುತ್ತ ತಟ್ಟಿ ಕಟ್ಟಿಕೊಳ್ಳಬೆಕು. ಇಲ್ಲದಿದ್ದರೆ ಮಳೆಯ ಸೀರಣಿಗೆಗೆ ನೀರೆಲ್ಲ ಒಳಗೆ. ಬೆಚ್ಚಗೆ ಇರಬೇಕೆಂದೆ ಇದೆಲ್ಲ ಮಾಡಲೇ ಬೇಕು.
ಅದೇನು ಮಳೆಯೋ ಎನೋ, ಹತ್ತಾರು ಕಡೆ ಸೋರತೊಡಗಿದೆ. ಹಂಚನ್ನೆಲ್ಲ ಗುಡಿಸಿ ಮತ್ತೆ ಜೋಡಿಸಿ ನೀರು ಸರಿಯಾಗಿ ಜಾರುವ ಹಾಗೆ ಮಾಡಬೇಡವೆ? ಅಷ್ಟಕ್ಕೂ ಸೋರುವುದು ನಿಂತಿಲ್ಲ ಎಂದರೆ ಅಡಕೆ ಮರದ ಹಾಳೆಯನ್ನು ಎರಡಿಂಚು ಅಗಲಕ್ಕೆ ಹಂಚಿನ ಗದ್ದಕ್ಕೆ ಕತ್ತರಿಸಿ ಸೋರುವ ಹಂಚಿನ ಸಂದಿನಲ್ಲಿ ಸಿಗಿಸಿ ತೇಪೆ ಕೆಲಸ ಮಾಡಬೇಕು. ಸೋರುವ ಮನೆಗೆ ಸಿಮೆಂಟ್ ನೆಲ ಇದ್ದರೆ ಸರಿ. ಮಣ್ಣಿನ ನೆಲವಾದರೆ ಮುಗಿದೇ ಹೋಯಿತು. ಮನೆಯ ನೆಲಕ್ಕೂ ಹೊರಗಿನ ಅಂಗಳಕ್ಕೂ ಫರಕು ಉಳಿಯುವುದೇ ಇಲ್ಲ.
ಬಿದ್ದ ಮಳೆಗೆ ಬೇಲಿಗೆ ಚಿಗುರಿದ ಗೂಟಗಳನ್ನು ಕಡಿದು ಹುಗಿಯಬೇಕು. ಇವೆಲ್ಲ ಬೇಸಿಗೆಯಲ್ಲಿ ಮಾಡುವುದು ಅಲ್ಲವೇ ಅಲ್ಲ. ಒಲೆಗೆ ಒಂದಿಷ್ಟು ಕಟ್ಟಿಗೆಯನ್ನು ಬೆಚ್ಚಗೆ ಇಟ್ಟುಕೊಂಡರಷ್ಟೇ ಕಣ್ಣೀರಿಳಿಸದೆ ಅಡುಗೆ ಮಾಡಬಹುದು, ಬೆಚ್ಚಗಿನ ನೀರನ್ನು ಮೀಯಬಹುದು. ಇಷ್ಟೆಲ್ಲ ಕೆಲಸ ಹರಡಿ ಬಿದ್ದಿರುವಾಗ ಸುಮ್ಮನೆ ಕರೆದವರಂತೆ ಬುದವಂತ ಮಾತನಾಡುವುದು ಸಣ್ಣಯ್ಯಗೆ ಸರಿ ಕಾಣಲಿಲ್ಲ.
ಈ ಮಳೆ ನಂಬೂದಾದ್ರೂ ಹೆಂಗೋ? ಹಿಡಿದರೆ ಬಿಟ್ಟೂ ಬಿಡದೆ ದಿನಪೂರ್ತಿ, ಅಷ್ಟೇ ಏಕೆ ವಾರಪೂರ್ತಿ. ಇಲ್ಲ ಅಂದ್ರೆ ಇಲ್ಲವೇ ಇಲ್ಲ. ಸುರಿದರೆ ಮಳೆ ಕಾಯ್ದರೆ ಬಿಸಿಲು. ಹಾಗಂತ ಕೆಲ್ಸ ಬಾಕಿ ಉಳಿಸಿಕೊಳ್ಳುವ ಹಾಗೆ ಇದೆಯಾ ಅನ್ನುತ್ತಾರೆ ಸಣ್ಣಯ್ಯ.
ಇದು ಕೇವಲ ಸಣ್ಣಯ್ಯ, ಬುದುವಂತರ ಚಿಂತೆಯಲ್ಲ. ಈ ಮಳೆಗಾಲದಲ್ಲಿ ಹೊಳೆಸಾಲಿನಲ್ಲಿ ಒಂದುಸುತ್ತು ಹಾಕಿ ಬಂದರೆ ಯಾರ ಕಿವಿಮೇಲಾದರೂ ಇಂಥ ಮಾತು ಬೀಳದೆ ಇರುವುದೇ ಇಲ್ಲ. ಇಂಥ ಮಳೆಗೂ ಬೆಳೆಗೂ ಅದೆಂಥದ್ದೋ ನಂಟು. ಆರಿದ್ರಾ ಸುರಿದರೆ ದಾರಿದ್ರ್ಯ ಇಲ್ಲ ಎಂಬ ನಂಬಿಕೆ. ಕಗ್ಗಲ್ಲುಗಳ ಕಿಬ್ಬಿನಲ್ಲೂ ಹಸಿರು ಉಸಿರಾಡುವ ಹಾಗೆ ಮಾಡುವ ಮಾಯಕ ಶಕ್ತಿ ಮಳೆಯಲ್ಲಿದೆ. ಅದಕ್ಕಾಗಿಯೇ ರೈತ ಮಳೆ ಇಲ್ಲದ ದಿನಗಳಲ್ಲಿ ಹುಯ್ಯೋ ಹುಯ್ಯೋ ಮಳೆರಾಯ ಎಂದು ದೇವರಿಗೆ ದಿಂಡರಿಗೆ ಹರಕೆ ಹೊರುವುದು ಸಾಮಾನ್ಯ. ಮಳೆಗಾಗಿ ಕತ್ತೆಗಳ ಮದುವೆ, ಕಪ್ಪೆಗಳ ಮದುವೆ ಏನೆಲ್ಲ ಮಾಡುತ್ತಾರೆ. ಮಳೆ ಇಲ್ಲದೆ ಬೆಳೆಯೆ?
ಮೃಗಶಿರಕ್ಕೆ ಪೂರ್ವದಲ್ಲಿ ಬೀಳುವ ಒಂದೆರಡು ಅಡ್ಡ ಮಳೆ ಬಿಟ್ಟರೆ ಖರೇ ಮಳೆಗಾಲ ಅನ್ನುವುದು ಮೃಗಶಿರದಿಂದಲೇ ಆರಂಭವಾಗುತ್ತದೆ. ಅಕ್ಷಯ ತದಿಗೆಗೆ ಬೀಜ ಮುಹೂರ್ತ ಮಾಡುವ ಪದ್ಧತಿ ಈಗ ಹೋಗಿಬಿಟ್ಟಿದೆ. ಹುಡಿ ಗದ್ದೆ ಹೂಡುವ ರೈತ ಇವತ್ತು ಹೊಳೆಸಾಲಿನಲ್ಲಿ ಕಾಣುವುದಿಲ್ಲ. ಎತ್ತುಗಳ ಭುಜಕ್ಕೆ ನೋವಿಲ್ಲ, ತನ್ನ ಕಾಲುಗಳಿಗೆ ಧೂಳಿಲ್ಲ ಎಂಬಂತೆ ಮಳೆ ಬಂದು ಕೆಸರೆದ್ದ ಮೇಲೆಯೇ ಆರಂಬ.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಬೆಳೆಗಳ ತಳಿಗಳೇ ಬದಲಾಗಿವೆ. ಮೊದಲಾದರೆ ಹಳ್ಗ, ಕಗ್ಗ, ಚಿಟ್ಗ, ಚೂಡಾಮಣಿ, ರತ್ನಚೂಡ ಇತ್ಯಾದಿ ಆರು ತಿಂಗಳ ಬತ್ತದ ತಳಿಗಳನ್ನು ಬಿತ್ತಲಾಗುತ್ತಿತ್ತು. ನಾಲ್ಕು ತಿಂಗಳು ಮಳೆಗಾಲ. ಹೀಗಾಗಿ ಮಳೆ ಹಿಡಿಯುವುದಕ್ಕೆ ಒಂದು ತಿಮಗಳು ಮೊದಲೇ ಬೀಜ ಬಿತ್ತನೆ ಮಾಡಿ ಹಳ್ಳದ್ದೋ ಕೆರೆಬಾವಿಗಳದ್ದೋ ನೀರು ಹರಿಯಿಸಿ ಸಸಿಗಳನ್ನು ಮಾಡಿಕೊಂಡು ಮಳೆ ಬಿದ್ದಕೂಡಲೆ ನಾಟಿ ಆರಂಭಿಸಿಬಿಡುತ್ತಿದ್ದರು. ಈಗ ಐದು ತಿಂಗಳು, ನಾಲ್ಕು ತಿಂಗಳು, ಮೂರು ತಿಂಗಳುಗಳ ಹೈಬ್ರಿಡ್ ತಳಿಗಳು ಬಂದಿವೆ. ಗಿಡ್ಡ ಜಾತಿಯ ಈ ತಳಿಗಳು ಇಳುವರಿ ನೀಡುವುದರಲ್ಲಿ ಹಿಂದಿಲ್ಲ.
ದೊಡ್ಡ ಕೆಯ್ ಹೊಡೆ ಬಂದಾಗ ಭಾರೀ ಮಳೆಗೆ ನೆಲಕ್ಕೊರಗಿ ಬತ್ತ ಜೊಳ್ಳಾಗುವ ಅಪಾಯ ಇತ್ತು. ಇದು ನೆಲಕ್ಕೆ ಒರಗುವುದೇ ಇಲ್ಲ. ರೈತನಿಗೆ ಅದೂ ಚಲೋ ಅನ್ನಿಸಿದೆ. ಆದರೆ ಹುಲ್ಲನ್ನು ಮನೆಯ ಹೊದಿಕೆ ಮಾಡಲು ಬಳಸುವವರಿಗೆ ಹಳ್ಗದ ಹುಲ್ಲೇ ಬೇಕು. ಅಬ್ಬರದ ಮಳೆಯನ್ನು ತಾಳಿಕೊಳ್ಳುವ ತಾಕತ್ತು ಅದರಲ್ಲಿ ಮಾತ್ರ ಇದೆ ಎಂದು ನಮ್ಮೂರ ಹಿರಿತಲೆ ವೆಂಕಜ್ಜ ಹೇಳುತ್ತಾರೆ. ಕಡಿಮೆ ಅವಧಿಯ ಬತ್ತದ ಬತ್ತದ ತಳಿಯ ಹುಲ್ಲು ಮಳೆಯಲ್ಲಿ ತಾಳಿಕೆ ಬರದೆ ಕೊಳೆಯುವುದಂತೆ. ಇಂದು ಹಳ್ಗದ ಬೆಳೆ ಕಡಿಮೆಯಾದಂತೆ ಹೊಳೆಸಾಲಿನಲ್ಲಿ ಹೊದಿಕೆಯ ಮನೆಗಳೂ ಮನೆಗಳೂ ಕಡಿಮೆಯಾಗುತ್ತಿವೆ. ಒಂದು ಕಾಲದಲ್ಲಿ ಕನಸಿನ ಮಾತೆನಿಸಿದ ಹಂಚಿನ ಮನೆಗಳು ಇಂದು ಕಣ್ಣುಹಾಯಿಸಿದೆಡೆ ಕಾಣುವವು.
ಮೃಗಶಿರದ ಅಬ್ಬರ ಕಳೆದ ಮೇಲೆಯೇ ಈಗ ಬತ್ತದ ಬಿತ್ತನೆ. ಬಿತ್ತಿ ಮೂರ ವಾರ ಆದ ಮೇಲೆ ನಾಟಿ. ಆಗ ಊರ ಬಯಲು ತುಂಬ ಗೊರಬುಗಳು. ಕಂಬಳಿಗಳು, ಹೂಡುವವರ ರೇರೇರೇ ಪಪ್ಪಪ್ಪೋ ಎಂಬ ಕೊಂಗೆ, ನಾಟಿಗೆ ಬಂದ ಹೆಂಗಸರ ಹಾಡು, ಕೆಲವೊಮ್ಮೆ ಸಣ್ಣಪುಟ್ಟ ರಂಪ. ಲಮ್ಮ ಮನೆಗಳ ತಾಪತ್ರಯಗಳನ್ನು ಉಳಿದ ಹೆಂಗಸರ ಕೈಯಲ್ಲಿ ಹೇಳಿಕೊಂಡಾಗಲೇ ಅವರಿಗೆ ಸಮಾಧಾನ. ಗಂಡನ ಮೇಲೆ ದೂರು ಇರಬಹುದು, ಮಗ ಸೊಸೆಯ ಮೇಲಿನ ಚಾಡಿ ಇರಬಹುದು, ನಾದಿನಿಯ ಮೇಲಿನ ಕೋಪ ಇರಬಹುದು ಒಟ್ಟಾರೆ ಯಾರ ಮುಂದಾದರೂ ಹೇಳಿದರೆ ಮನಸ್ಸು ನಿರುಂಬಳ. ಇವರು ಸಣ್ಣ ದನಿಯಲ್ಲಿ ಸೋ ಎಂದರೆ ಜಿಟಿಜಿಟಿ ಮಳೆ ಸೋಬಾನೆ ಎನ್ನುತ್ತದೆ.
ಮಳೆ ದೊಡ್ಡದಾಗಿ ಗೊರಬಿನ ಮೇಲೆ ಬಿದ್ದಾಗ ರಪ್್ ರಪ್ ಎಂಬ ಸದ್ದು. ದೂರದಿಂದ ನೋಡಿದಾಗ ಗೊರಬಯ ಸೂಡಿದ ಹೆಂಗಸರು, ಕಂಬಳಿ ಕೊಪ್ಪೆ ಮಾಡಿ ಹಾಕಿಕೊಂಡ ಗಂಡಸರು ಮಳೆಗಾಲದಲ್ಲಿ ಅದೆಲ್ಲಿಂದಲೋ ವಲಸೆ ಬಂದ ಕಪ್ಪು, ಬಿಳಿ ಹಕ್ಕಿಗಳಂತೆ ಕಾಣುತ್ತಾರೆ.
ಗೊಬ್ಬರ ಹರಗುವುದು, ನಾಟಿ, ಕಳೆ ಕೀಳುವುದು ಮುಗಿಯುತ್ತಿದ್ದಂತೆ ಗದ್ದೆಯೆಲ್ಲ ಹೊಡೆ. ಆ ಸಮಯದಕ್ಕೆ ಮಳೆ-ಬಿಸಿಲು ಆದರೆ ಹೊಡೆಯಲ್ಲಿ ನೀರು ಸಿಲುಕಿ ತೆನೆ ಬೆಂದು ಕಾಳು ಜೊಳ್ಳಾಗುವ ಅಪಾಯ.
ಬತ್ತದ ನಂತರ ಅಡಕೆ ಇರುವ ರೈತರು ಮಳೆಗಾಲದಲ್ಲಿ ಅದರ ಕಾಳಜಿ ಪೂರೈಸಬೇಕು. ಇಲ್ಲದಿದ್ದರೆ ಕೊಳೆ ರೋಗ ಬಂದು ಮರದ ಚೆಂಡಿಯಲ್ಲಿರಬೇಕಾದ ಅಡಕೆ ಮರದ ಬುಡದಲ್ಲಿ ಬಿದ್ದುಬಿಡುವವು. ಮೃಗಶಿರ, ಆರಿದ್ರಾಗಳಿಗಿಂತ ಆಶ್ಲೇಷಾ ಮಳೆ, ದೊಡ್ಡಪುಂಡ, ಸಣ್ಣಪುಂಡ (ಪುಷ್ಯ, ಪುನರ್ವಸು) ಅತಿ ಹೆಚ್ಚು. ಇವುಗಳಲ್ಲಿ ಹೊಳೆಯಲ್ಲಿ ನೆಗಸು ಬರದೆ ಇರದು. ಅಡಕೆಗೆ ಕೋಳೆ ರೋಗ ಬರುವುದೂ ಈ ಮಳೆಗಳಲ್ಲೇ. ಕಾರಣ ಈ ಮಳೆಗಳು ಬರುವುದಕ್ಕೆ ಮೊದಲೇ ಕೊಳೆ ರೋಗ ತಡೆಗೆ ಕ್ರಮಗಳನ್ನು ಕೈಗೊಳ್ಳಬೇಕು. ಕೊಳೆ ರೋಗ ತಡೆಗೆ ಕೆಲವರು ಸುಣ್ಣ, ರಾಳ, ಮೈಲತುತ್ತುಗಳ ಮಿಶ್ರಣದ ಮದ್ದು ತಯಾರಿಸಿ ಹೊಡೆಯುವರು. ಇನ್ನು ಕೆಲವರು ಅಡಕೆ ಕೊನೆಗಳಿಗೆ ಮಳೆಯ ನೀರು ತಾಕದಂತೆ ಕೊಟ್ಟೆಕಟ್ಟುವುರ.
ಈ ಕೊಟ್ಟೆಯನ್ನು ಅಡಕೆ ಮರದ ಹಾಳೆಯಿಂದಲೂ, ಬೇಸಿಗೆಯಲ್ಲಿ ಸಂಗ್ರಹಿಸಿಟ್ಟ ಕರಡದಿಂದಲೂ ತಯಾರಿಸುವರು. ಇದನ್ನು ತಯಾರಿಸಲಿಕ್ಕೆ ವಿಶೇಷ ಕಸಬುಗಾರಿಕೆ ಬೇಕು. ಘಟ್ಟದ ಮೇಲಿನ ಅಡಕೆ ತೋಟಗಳಿಗೆ ಮದ್ದು ಹೊಡೆಯಲು, ಕೊಟ್ಟೆಕಟ್ಟಲು ಹೊಳೆಸಾಲಿನವರೇ ಹೋಗುತ್ತಾರೆ.
ಅಡಕೆ ಮರದ ತುದಿಗೆ ಹೋಗಿ ಕಡಕುಮಣೆಯ ಮೇಲೆ ಕುಳಿತುಕೊಂಡು, ಸುತ್ತಲಿನ ಹತ್ತಾರು ಮರಗಳನ್ನು ದೋಟಿ ಹಾಕಿ ಎಳೆದು ಮದ್ದು ಹೊಡೆಯುವುದೋ, ಕೊಟ್ಟೆ ಕಟ್ಟುವುದೋ ಮಾಡುವುದನ್ನು ನೆಲದ ಮೇಲೆ ನಿಂತು ನೋಡುತ್ತಿದ್ದರೆ ಯಾವುದೋ ಸರ್ಕಸ್ಸು ನೋಡುತ್ತಿದ್ದಂತೆ ಅನ್ನಿಸದಿರದು. ಒಂದು ಮರದಿಂದ ಇನ್ನೊಂದು ಮರಕ್ಕೆ ದಾಟುವುದಂತೂ ಕಾಲು ಜುಂ ಎನ್ನಿಸುವಂಥದ್ದೇ.
ತೆಂಗು ನೆಟ್ಟವ ಗಂಡು ಹೆತ್ತವನಿಗೆ ಸೋಲಿಲ್ಲ ಎಂಬ ನಂಬಿಕೆಯಲ್ಲಿ ಹಲವರು ತೆಂಗನ್ನು ಬೆಳೆಸಿರುತ್ತಾರೆ. ತೆಂಗು ಬೆಳೆದ ಈ ಸೋಲಿಲ್ಲದವರೂ ಮಳೆಗಾಲ ಬಂದಕೂಡಲೆ ತೆಂಗಿನ ರಕ್ಷಣೆಗೆ ಕ್ರಮ ಕೈಗೊಳ್ಳಲೇ ಬೇಕು. ಜೋರಾಗಿ ಬೀಸುವ ಗಾಳಿ ಮಳೆಯಲ್ಲಿ ತೆಂಗಿನ ಎಳೆಯ ಕಾಯಿಗಳಿರುವ (ಸಿಯಾಳ) ಹಿಂಡಿಗೆ ಮುರಿದು ಬೀಳುವ ಅಪಾಯ ಇರುತ್ತದೆ. ಅದಕ್ಕಾಗಿ ಮುರಿಯುವಂಥ ಹಿಂಡಿಗೆಗಳಿಗೆ ಕಬೆ ಇರುವ ಕೋಲನ್ನು ಕೊಡುವುದೋ, ಹುರಿ ಹಾಕಿ ಅವುಗಳನ್ನು ಮೇಲಿನ ಹೆಡೆಗೆ ಕಟ್ಟುವುದೋ ಮಾಡಬೇಕು.
ಮಳೆಗಾಲದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗೆ ಬೇಕಾಗುವಷ್ಟು ತರಕಾರಿಗಳನ್ನು ತಮ್ಮ ಅಂಗಳದಲ್ಲಿಯೇ ಮಾಡಿಕೊಳ್ಳುವರು. ಮಂಗನ ಕಾಟ, ನರಿಯ ಕಾಟ ಅಂದರೂ ಸೌತೆ, ಹೀರೆ, ಹಾಗಲ, ಪಡುವಲ, ಬೆಂಡೆ, ಹಾಲುಸೋರೆ, ಪುರ್ತಲ ಇತ್ಯಾದಿ ಯಾರ ಮನೆಯಲ್ಲಿ ನೋಡಿದರೂ ಸಿಗದೆ ಇರದು. ಕುಂಬರಿ ಅಂದಕೂಡಲೆ ನೆನಪಾಯಿತು, ಮಳೆಗಾಲದಲ್ಲಿ ಖುಷ್ಕಿ ಜಮೀನು ಇದ್ದವರು ಅದರಲ್ಲಿ ಶೇಂಗಾ, ಗೆಣಸು ಇತ್ಯಾದಿ ಬೆಳೆಯುವರು. ಆರು ತಿಂಗಳ ಬೆಳೆಯ ಈ ದೊಡ್ಡ ಶೇಂಗಾದಲ್ಲಿ ಎಣ್ಣೆ ಅಧಿಕ ಎಂಬ ನಂಬಿಕೆ.
ಮಳೆಗಾಲದ ಹೊಳೆಸಾಲಿನಲ್ಲಿ ಅದೆಂಥದ್ದೋ ಚುರುಕು ಮುಟ್ಟಿಸುತ್ತದೆ. ಮಳೆ ಎಂದು ಮನೆಯಲ್ಲಿ ಮುದುರಿ ಕೂಡದೆ ಕಂಬಳಿ ಕೊಪ್ಪೆಯೋ ಗೊರಬೋ ಹಾಕಿಕೊಂಡು ಕೆಲಸ ಮಾಡಲೇ ಬೇಕು. ನೆಲವು ಹಸಿರೊಡೆಯುವ ಪರ್ವ ಕಾಲದಲ್ಲಿ ತನ್ನ ಹೊಟ್ಟೆ ತುಂಬಿಕೊಳ್ಳಲು ಹುಲುಮಾನವನೂ ಸ್ಪರ್ಧೆಗೆ ಸಿದ್ಧನಾಗಬೇಕು. ಈ ಸ್ಪರ್ಧೆಯಲ್ಲಿ ಅವನವನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದು.