*ಮಾಡಬಾರದ್ದನ್ನು ಮಾಡಿ ಫಜೀತಿಗಿಟ್ಟುಕೊಳ್ಳುವುದು

ಮಾಡಬಾರದ್ದನ್ನು ಮಾಡಲು ಹೋಗಿ ಪೆಟ್ಟು ತಿಂದವರನ್ನು ಕಂಡಾಗ ಇಂಗು ತಿಂದ ಮಂಗನಂತಾದ ಎದು ಹೇಳುವುದನ್ನು ಕೇಳಿದ್ದೇವೆ. ಮಂಗ ಯಾವತ್ತಾದರೂ ಇಂಗನ್ನು ತಿಂದುದನ್ನು ಕಂಡಿದ್ದೀರಾ? ಇಂಗು ನಮ್ಮ ನೆಲದ ಬೆಳೆ ಏನಲ್ಲ. ಹೀಗಿರುವಾಗ ಮಂಗ ಇಂಗು ತಿನ್ನುವುದಾದರೂ ಹೇಗೆ? ಇಂಗು ತಿಂದರೆ ಮಂಗನಿಗೆ ಏನಾಗುತ್ತದೆ?
ಇಂಗಿನ ಮೂಲ ಇರಾನ್‌. ಅಫ್ಘಾನಿಸ್ತಾನದಲ್ಲೂ ಇಂಗನ್ನು ಬೆಳೆಯುತ್ತಾರೆ. ಅದೇ ರೀತಿ ಟೆಕ್ಸಾಸ್‌- ಮೆಕ್ಸಿಕೋದ ಗಡಿಯಲ್ಲೂ ಇಂಗನ್ನು ಬೆಳೆಯುತ್ತಾರೆ. ಸುಮಾರು ಎರಡು ಮೀಟರ್‌ ಎತ್ತರಕ್ಕೆ ಬೆಳೆಯುವ ಇಂಗದ ಗಿಡದ ಕಾಂಡ ಟೊಳ್ಳಾಗಿರುತ್ತದೆ. ಇದು ತಳದಲ್ಲಿ ಏಳೆಂಟು ಸೆಂ.ಮೀ. ಸುತ್ತಳತೆ ಹೊಂದಿರುತ್ತದೆ. ಇದರ ಎಲೆಗಳು 30ರಿಂದ 40 ಸೆಂ.ಮೀ. ಉದ್ದವಾಗಿರುತ್ತವೆ. ಇದರ ಹೂಗಳು ಹಳದಿ.
ಇದಕ್ಕೆ ಔಷಧೀಯ ಗುಣವಿದೆ. ಹೊಟ್ಟೆ ಉಬ್ಬರ, ಅಜೀರ್ಣ ಇತ್ಯಾದಿ ರೋಗ ಶಮನಕ್ಕೆ ಇದನ್ನು ಬಳಸುತ್ತಾರೆ. ಅಡುಗೆಯಲ್ಲಿ ಪರಿಮಳಕ್ಕಾಗಿ ಮತ್ತು ಔಷಧೀಯ ಗುಣ ಹೊಂದಿರುವುದಕ್ಕಾಗಿ ಇಂಗನ್ನು ಬಳಸುತ್ತಾರೆ. ಇನ್ನೊಂದು ಸ್ವಾರಸ್ಯಕರ ಅಂಶವೆಂದರೆ, ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಬಳಸದ ಜೈನ ಮತ್ತು ವೈಷ್ಣವ ಧರ್ಮದವರು ಅದಕ್ಕೆ ಪರ್ಯಾಯವಾಗಿ ಇಂಗನ್ನು ಬಳಸುತ್ತಾರಂತೆ.
ಇಂಗನ್ನು ಹಸಿಯಾಗಿ ತಿನ್ನಬಾರದು. ಇಂಗಿನ ಕಾಂಡವನ್ನು ಹಸಿಯಾಗಿ ತಿಂದರೆ ವಾಂತಿ ಮತ್ತು ಭೇದಿ ಎರಡೂ ಒಟ್ಟಿಗೆ ಶುರುವಾಗುತ್ತದೆ. ಮಂಗ ಕೂಡ ಇಂಗನ್ನು ಈ ರೀತಿ ತಿಂದು ಫಜೀತಿಗೆ ಒಳಗಾಗಿರಬಹುದು. ಅದಕ್ಕಾಗಿಯೇ `ಇಂಗು ತಿಂದ ಮಂಗ’ ಆಗಿರಬಹುದು. ಇನ್ನೊಂದು ಸ್ವಾರಸ್ಯಕರ ವಿಷಯವೆಂದರೆ ಮೆಕ್ಸಿಕೋದ ಗಡಿಯಲ್ಲಿ ತೋಳಗಳೂ ಇಂಗಿನ ವಾಸನೆಗೆ ಮರುಳಾಗುತ್ತವಂತೆ.